'ನಮ್ಮ ಮನೆಯವರದ ಇನ್ನು ಬೆಳವಣಗಿ ನಿಂತಿಲ್ಲಾ…' – ಪ್ರಶಾಂತ್ ಆಡೂರ್

ಪ್ರಶಾಂತ್ ಅಡೂರ್

ಹೋದ ಸಂಡೆ ನಾ ಯಾಕೊ ಭಾಳ ಸಾಕಾಗೇದ ಮಲ್ಕೊಂಡರಾತು ಅಂತ ಮಧ್ಯಾಹ್ನ ಮನ್ಯಾಗ ಹಿಂಗ ಅಡ್ಡಾಗಿದ್ದೆ. ಇನ್ನ ನನ್ನ ಹೆಂಡತಿಗಂತೂ ಮಧ್ಯಾಹ್ನ ಮಲ್ಕೋಳೊ ಚಟಾ ಇಲ್ಲಾ. ಚಟಾ ಇಲ್ಲಾ ಅನ್ನೊದಕಿಂತ ಅಕಿಗೆ ದಿವಸಾ ಟಿ.ವಿ ಒಳಗಿನ ಧಾರಾವಾಹಿ ನೋಡೊ ಚಟಾ ಹಿಂಗಾಗಿ ಎಷ್ಟ ತ್ರಾಸಾಗಿದ್ರು ಆ ಸುಡಗಾಡ ಧಾರಾವಾಹಿ ಸಂಬಂಧ ಮಧ್ಯಾಹ್ನ ಒಂದ ಚೂರು ರೆಸ್ಟ ತೊಗೊಳಂಗಿಲ್ಲಾ, ರಾತ್ರಿ ಗಂಡ ಬಾಜು ಬಂದಕೂಡಲೇ ’ರ್ರಿ ನಂಗ ಇವತ್ತ ಭಾಳ ಸಾಕಾಗೇದ’ ಅನ್ಕೋತ ಆಕಳಸಿ ಮಲ್ಕೊಂಡ ಬಿಡೋದ. ಅಲ್ಲಾ ಲಗ್ನ ಆಗಿ ಹದಿನಾಲ್ಕ ವರ್ಷಾ ಆಗಲಿಕ್ಕೆ ಬಂತ ಬಿಡ್ರಿ, ಗಂಡನ್ನ ನೋಡಿದರ ಆಕಳಿಕೆ ಬರಲಾರದ ಏನ.
ಅದರಾಗ ಅವತ್ತ ಸಂಡೆ ಬ್ಯಾರೆ, ಯಾ ಧಾರಾವಾಹಿನೂ ಇದ್ದಿದ್ದಿಲ್ಲಾ, ನಮ್ಮವ್ವ ಟಿ.ವಿ ಮುಂದ ಚಾಪಿ ಹಾಸಿಗೊಂಡ ಅಡ್ಡಾಗಿದ್ಲು, ನಾ ನನ್ನ ಹೆಂಡತಿಗೆ ಒಂದ ಹತ್ತ ಸರತೆ ನನ್ನ ಜೊತಿ ಬಂದ ಹಂಗ ಸುಮ್ಮನ ಬಾಜುಕ ಮೊಲ್ಕೊ ಬಾ, ನೀ ಏನ ನಿದ್ದಿ ಹಚ್ಚ ಬ್ಯಾಡ ಅಂದರು ಅಕಿ ಏನ ಬರಲಿಲ್ಲಾ. ಅಲ್ಲಾ ಹಂಗ ಅಕಿ ಬಾಜು ಬಂದ ಮಲ್ಕೊಂಡಿದ್ದರ ಅಕಿಗೇನ್,  ನಂಗೂ ನಿದ್ದಿ ಹತ್ತತಿದ್ದಿಲ್ಲಾ ಆ ಮಾತ ಬ್ಯಾರೆ.
ನಂಗ ಹಿಂಗ ಇನ್ನೇನ ನಿದ್ದಿ ಹತ್ತಬೇಕು ಅನ್ನೋದರಾಗ ಎದರಗಿನ ಮನಿ ಭಾಮಾ,
“ಏನ ನಡಿಸಿರಿ, ಊಟಾ ಆತೊ.. ನಿದ್ದಿ ಆತೋ, ಕೆಲಸೇಲ್ಲಾ ಮುಗದ್ವಿಲ್ಲೊ” ಅಂತ ಅಗದಿ ಜೋರ ಧ್ವನಿಲೇ ಒದರಕೋತ ನಮ್ಮ ಮನಿ ಅಂಗಳ ಹೊಕ್ಕಳು. ಅದರಾಗ ನಮ್ಮ ಬೆಡರೂಮಿನ ಖಿಡಕಿ ಅಗದಿ ರಸ್ತೆದ ಕಡೆ ಇರೋದರಿಂದ ಅಕಿ ಮಾತಾಡಿದ್ದ ನನ್ನ ಬೆಡರೂಮಿನಾಗ ಮಾತಾಡಿದಂಗ ಆತ. ಆತ ತೊಗೊ ಇನ್ನ ನನಗ ನಿದ್ದಿ ಹತ್ತಿದಂಗ ಅಂತ ಗ್ಯಾರಂಟಿ ಆತ. ಇನ್ನ ನನ್ನ ಹೆಂಡತಿಗೂ ಕೆಲಸ ಇದ್ದಿದ್ದಿಲ್ಲಾ, ಅಕಿನ್ನ ಕರಕೊಂಡ ಕಟ್ಟಿ ಮ್ಯಾಲೆ ಕೂತ ಹರಟಿ ಹೊಡಿಲಿಕ್ಕೆ ಶುರು ಮಾಡಿದ್ಲು.
ಮುಂಜಾನೆ ಏನ ಟಿಫಿನ ಆಗಿತ್ತು ದಿಂದ ಶುರು ಆಗಿದ್ದ ಹರಟಿ ಮಧ್ಯಾಹ್ನ ಊಟಕ್ಕ ಏನ ಮಾಡಿದ್ದರಿ ತನಕಾ ಬಂದ ಕಡಿಕೆ ಸಂಜಿಗೆ ಗಂಡ ಎಲ್ಲೆ ಕರಕೊಂಡ ಹೊಂಟಾನ ಇವತ್ತ ಅನ್ನೋತನಕ ಹೊಂಡತ. ಸಂಡೆ ಅಲಾ, ಸಂಡೆ ಬಂದರ ಒಟ್ಟ ಗಂಡಾ ಒಂದ ರೌಂಡ ಹೆಂಡ್ತಿನ್ನ ಹೊರಗ ಕರಕೊಂಡ ತಿರಗಬೇಕ, ಹೊರಗ ಕೆಲಸ ಇರಲಿ ಬಿಡಲಿ….ಮುಂದ ಹಂಗ ಮಾತಡ್ತ ಮಾತಾಡ್ತ ನನ್ನ ಹೆಂಡತಿ
“ನಮ್ಮ ಮನೆಯವರ ಮಲ್ಕೊಂಡಾರ, ಅವರ ಎದ್ದ ಮ್ಯಾಲೆ ಬಿಗ್ ಬಜಾರಕ್ಕ ಹೋಗಿ ನಮ್ಮ ಪ್ರಥಮಗ ಒಂದ್ಯಾರಡ ಜೋಡಿ ಬರ್ಮೋಡಾ ತೊಗೊಂಡ ಬರಬೇಕು, ಆರ ತಿಂಗಳ ಹಿಂದ ತಂದಿದ್ವ ಎಲ್ಲಾ ಭಾಳ ಗಿಡ್ಡ ಆಗಲಿಕತ್ತಾವ” ಅಂತ ಅಂದ್ಲು.
“ಹೌದರಿ, ಬೆಳೆಯೋ ಹುಡುಗುರು, ಅದರಾಗ ಈ ಕಿಮತ್ತಿನ ಅರಬಿ ತಂದ ಆರ ತಿಂಗಳಿಗೆ ಗಿಡ್ಡ ಆದರ ರೊಕ್ಕ ವೇಸ್ಟ ಅದಕ್ಕ ನಮ್ಮ ಮನೆಯವರ ಸಸ್ತಾದಾಗ ಅಂತ ಶಾ ಬಜಾರದಿಂದ ತಂದಿರ್ತಾರ” ಅಂತ ಅಕಿ ಅಂದ್ಲು.

“ಅದು ಖರೇನರಿ, ಹಿಂಗ ಬೆಳೆಯೊ ಹುಡುಗರಿಗೆ ತುಟ್ಟಿ ಅರಬಿ ತರೋದರಾಗ ಅರ್ಥ ಇಲ್ಲ ಬಿಡ್ರಿ, ಆದರ ನಮ್ಮ ಮನೆಯವರ ಮಾತ ಕೇಳಂಗೇಲಾ, ಎಲ್ಲಾದಕ್ಕೂ ಬ್ರ್ಯಾಂಡೆಡ್, ಬ್ರ್ಯಾಂಡೆಡ್ ಅಂತಾರ, ಅವರ ಅರಬಿ ಆದರ ಸಾವಿರ ಗಟ್ಟಲೇ ಕೊಟ್ಟರು ನಡಿತದ, ಅವರದೇನ ಬೆಳಗಣಗಿ ನಿಂತಿರ್ತದ. ಆದರ ಹುಡುಗರಿಗೆ ತಂದರ ವೇಸ್ಟ ಬಿಡ್ರಿ” ಅಂತ ನನ್ನ ಹೆಂಡತಿ ಅನ್ನೋದಕ್ಕ
“ಅಯ್ಯ ನಮ್ಮ ಮನೆಯವರದಂತೂ ಇನ್ನೂ ಬೆಳಣಗಿನ ನಿಂತಿಲ್ಲರಿ, ಮೊನ್ನೆ ರಮಜಾನ ಮಾರ್ಕೇಟನಾಗ ತಂದಿದ್ದ ಟಿ-ಶರ್ಟ ಈಗಾಗಲೇ ಫಿಟ್ ಆಗಿ ಲಂಡ ಆಗೇದ” ಅಂತ ಅಂದ ಬಿಟ್ಳು.
ನಾ ಅಕಿ ಗಂಡಂದ ಇನ್ನೂ ಬೆಳವಣಗಿ ನಿಂತಿಲ್ಲಾ ಅಂದ ಕೂಡಲೇ ಗಾಬರಿ ಆಗಿ ಹಾಸಾಗ್ಯಾಗಿಂದ ಎದ್ದ ಕೂತೆ. ಅತ್ತಲಾಗ ಇವರದ ಹೊರಗ ಹಂಗ ಹರಟಿ ಮುಂದವರದಿತ್ತ.
“ಏ, ಹೋಗರಿ, ನಿಮ್ಮ ಮನೆಯವರದ ಬೆಳವಣಗಿ ನಿಂತಿಲ್ಲಾ ಅಂದರ ಏನ ಅರ್ಥ, ನೀವು ಆ ರಮಜಾನ ಮಾರ್ಕೇಟನಾಗಿನ ಅರಬಿ ತಂದಿರ್ತಿರಲಾ, ಅವು ಎರಡ ಸರತೆ ನೀರಾಗಿ ಹಾಕಿದರ ಸಾಕ ಉಡಗಿ ಲಂಡ ಆಗ್ತಾವ” ಅಂತ ನನ್ನ ಹೆಂಡತಿ ಅಂದರ.
“ಅಯ್ಯ, ಇಲ್ಲರಿ ಖರೇನ, ದೀಪಾವಳಿಗೆ ಹೊಲಸಿದ್ದ ಅರಬಿ ಸಹಿತ ಈಗ ಫಿಟ್ ಆಗಲಿಕತ್ತಾವ, ಗಣೇಶ ಚವತಿಗೆ ೩೫ ಇದ್ದದ್ದ ನಡಾ ಈಗ ೩೮ ಆಗೇದ, ಏನ್ಮಾಡ್ತೀರಿ, ಇದ ಬೆಳವಣಗಿ ಹೌದೊ ಅಲ್ಲೊ” ಅಂತ ಅಕಿ ತನ್ನ ರಾಗಾ ಶುರು ಮಾಡಿದ್ಲು.
ಪಾಪಾ ಅಕಿ ಬೆಂಗಳೂರಾಗ ಹುಟ್ಟಿದೋಕಿ ಅಕಿಗೆ ’ಬೆಳವಣಗಿ ನಿಲ್ಲೋದ’ ಅಂದರ ಏನ ಅಂಬೋದ ಕನಫ್ಯುಸ್ ಇತ್ತ ಕಾಣ್ತದ, ಅಕಿ ಮುಂದ ಹಂಗ
“ನಮ್ಮ ಮನೆಯವರ ನೋಡ್ರಿ ಮುಂಜಾನೆ ದಾಡಿ ಮಾಡ್ಕೊಂಡಿರತಾರ ಸಂಜಿ ಅನ್ನೋದರಾಗ ಮತ್ತ ಬೆಳದಿರ್ತಾವ, ಉಗರಂತು ಹಿಂಗ ಬೆಳಿತಾವಲಾ ತಿಂಗಳಿಗೆ ಮೂರ ಸರತೆ ಉಗರ ತಕ್ಕೋತಾರ. ಏನ್ಮಾಡ್ತೀರಿ? ಅದಕ್ಕ ಬೆಳವಣಗಿ ಅಂತೀರೊ ಇಲ್ಲೊ?” ಅಂತ ನನ್ನ ಹೆಂಡತಿಗೆ ಕೇಳಿದ್ಲು.
ಪುಣ್ಯಾ ನಾ ಏನರ ಅಲ್ಲೆ ಇದ್ದರ ನಿಮ್ಮ ಮನೆಯವರ ಮತ್ತ ಏನೇನ ಬೆಳವಣಗಿ ನಿಂತಿಲ್ಲಾ ಅಂತ ಕೇಳೆ ಬಿಡ್ತಿದ್ದೆ. ನನ್ನ ಹೆಂಡತಿಗೆ ಏನ ಹೇಳಬೇಕ ತಿಳಿಲಿಲ್ಲಾ.
ಹಂಗ ಭಾಮನ ಗಂಡ ಬರ್ತ ಬರ್ತ ದಪ್ಪ ಆಗಲಿಕತ್ತಿದ್ದಾ, ಹೊಟ್ಟಿ ಅಂಬೋದ full screen ಕುಂಬಳಕಾಯಿ ಆಗಲಿಕತ್ತಿತ್ತ ಹಿಂಗಾಗಿ ಇವತ್ತ ತೊಗೊಂಡಿದ್ದ ಅರಬಿ ತಿಂಗಳ ಒಪ್ಪತ್ತ ಬಿಟ್ಟರ ಅವಂಗ ಸಾಲದಂಗ ಆಗ್ತಿದ್ವು, ಇಕಿ ಅದನ್ನ ತನ್ನ ಗಂಡನ್ನ ಬೆಳವಣಗಿ ಅಂತ ತಿಳ್ಕೊಂಡಿದ್ಲು, ಅಲ್ಲಾ ಅಂವಾ ವಾರದಾಗ ಮೂರ ಸರತೆ ಡಾಬಾಕ್ಕ ಹೋಗಿ ಕೇಸ ಗಟ್ಟಲೇ ಹೊಡದ ಕಿಲೋ ಗಟ್ಟಲೇ ತಿಂದರ ಬೆಳವಣಗಿನರ ಹೆಂಗ ನಿಲ್ಲಬೇಕ ಬಿಡ್ರಿ.
ಅಲ್ಲಾ, ಹಂಗ ಇದು ಬೆಳವಣಗಿನ ಖರೆ ಆದರು ನಾವು ಸಣ್ಣ ಹುಡಗರಿಗೆ ೧೮-೧೯ ವರ್ಷದ ತನಕ ಏನ ಬೆಳದ ಒಮ್ಮೆ ಬೆಳವಣಗಿ ನಿಂತು ಇನ್ನ ಅಂವಾ ಏನ ಎತ್ತರ ಆಗಂಗಿಲ್ಲಾ ಅಂತೇವಿ ಅದಕ್ಕ ಬೆಳವಣಗಿ ಅಂತಾರ. ಯಾವಾಗ height becomes constant ಆವಾಗ ಆ ಮನಷ್ಯಾಂದ ಬೆಳವಣಗಿ ನಿಂತಂಗ. ನಾ ಹೇಳಲಿಕತ್ತಿದ್ದ physical development ಮತ್ತ mental development ಅಲ್ಲಾ, ಹಂಗ ಬುದ್ಧಿ ಬೆಳೆಯೊದಕ್ಕ ವಯಸ್ಸಿಗೆ ಸಂಬಂಧ ಇಲ್ಲಾ ಅದ ನಿರಂತರ ಬೆಳ್ಕೋತ ಇರಬೇಕ.
ಇನ್ನ ಹಂಗ ದಪ್ಪ ತೆಳ್ಳಗ ಆಗೋದಕ್ಕ ಬೆಳವಣಗಿ ಅಂತನೂ ಅನ್ನಂಗಿಲ್ಲಾ. ಹಂಗ ದಪ್ಪ ಆಗೋದ ಬೆಳವಣಗಿ ಅಂದ್ರ ನಂದ ಇನ್ನು ಬೆಳವಣಗಿ ಶುರುನ ಆಗೇಲಾ ಅಂತ ಅರ್ಥ.
ಆದರ ಪಾಪ, ಅಕಿಗೆ ಅದ ಗೊತ್ತ ಇದ್ದಿದ್ದಿಲ್ಲಾ, ಹಿಂಗಾಗಿ ’ನಮ್ಮ ಮನೇಯವರದ ಇನ್ನೂ ಬೆಳವಣಗಿ ನಿಂತಿಲ್ಲಾ’ ಅಂತ ಅಂದಿದ್ಲು. ಮುಂದ ನನ್ನ ಹೆಂಡತಿ ಅಕಿಗೆ ಬೆಳವಣಗಿ ಅಂದರ ಏನು ಅಂತ ಎಲ್ಲಾ ತಿಳಿಸಿ ಹೇಳೋದರಾಗ ಸಂಜಿ ಚಹಾದ್ದ ಹೊತ್ತ ಆಗಿತ್ತ. ಮುಂದ ಅಕಿ ನಮ್ಮ ಮನ್ಯಾಗ ಅರ್ಧಾ ವಾಟಗಾ ಚಹಾ ಕುಡದ
“ನಮ್ಮ ಮನೆಯವರ ಮಲ್ಕೊಂಡಿದ್ದರು, ಇನ್ನ ನಾ ಮನ್ಯಾಗ ಇದ್ದರ ಅವರಿಗೆ ಡಿಸ್ಟರ್ಬ್ ಆಗ್ತದ ಅಂತ ನಿಮ್ಮ ಮನಿ ಕಡೆ ಬಂದಿದ್ದೆ” ಅಂತ ತನ್ನ ಮನಿ ಹಾದಿ ಹಿಡದ್ಲು, ಇಲ್ಲೆ ನೋಡಿದರ ನನ್ನ ಹೆಂಡತಿ ಒಳಗ ಬೆಡರೂಮಿನಾಗ ಗಂಡ ಮಲ್ಕೊಂಡಿದ್ದ ಖಬರ ಇಲ್ಲದ ಅಕಿ ಜೊತಿ ಹರಟಿ ಹೊಡದ ನನ್ನ ನಿದ್ದಿ ಹಾಳ ಮಾಡಿದ್ಲು. ಅದಕ್ಕ ನಾ ಹಗಲಗಲಾ ಹೇಳೋದ ನನ್ನ ಹೆಂಡತಿದು ಇನ್ನೂ ಬೆಳವಣಗಿ ಆಗಿಲ್ಲಾ ಅಂತ. ನಾ ಹೇಳಲಿಕತ್ತಿದ್ದು mental growth ಮತ್ತ.
ಅಲ್ಲಾ, ಹಂಗ ಖರೇ ಹೇಳ್ಬೇಕಂದರ ನನ್ನ ಹೆಂಡತಿದ physical ಬೆಳವಣಗಿನೂ ನಿಂತಿಲ್ಲಾ, ಮೂರ ತಿಂಗಳಿಗೊಮ್ಮೆ, ಚೂಡಿ ಟಾಪ್ ಟೈಟ ಆತ ಅಂತ ಹೊಲಿಗಿ ಬಿಚ್ಚಿಸಿಕೊಂಡ ಬರತಾಳ, ಲೆಗ್ಗಿಂಗ್ಸ ಹಿಗ್ಗಿ ಹೋಗ್ಯಾವ ಅಂತಾ ಹೊಸಾ ಲೆಗ್ಗಿಂಗ್ಸ್ ತೊಗಂಡ ಬರ್ತಾಳ.. ಎಲ್ಲಾ ಅವರವರ ಬೆಳವಣಗಿ ಮ್ಯಾಲೆ ಡಿಪೆಂಡ್. ನಮ್ಮಂತಾ ೩೧ ನಡದೋರಿಗೆ ಏನ ತಲಿ ಗೊತ್ತಾಗಬೇಕ ಬೆಳವಣಗಿ ಅಂದರ?

‍ಲೇಖಕರು avadhi

April 7, 2014

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

8 ಪ್ರತಿಕ್ರಿಯೆಗಳು

  1. pavan

    ha..ha.. namma maneyavarad innu belavanagai nintilla…what a title sir,very catchy.
    your articles make us very nostalgic and we miss all this type fun in metro’s .
    thanks for reminding typical middle class stories. we are really missing this world.
    Pavan.

    ಪ್ರತಿಕ್ರಿಯೆ
  2. girija

    ಏನ ಬರೀತಿರಿ ಸರ್.. ತುಂಬಾ ಚೆನ್ನಾಗಿದೆ, ಎಲ್ಲೇಲ್ಲಿ ವಿಷಯ ಹಿಡ್ಕೊಂಡ ಬರತಿರೋ ಏನೋ.
    ಅನ್ನಂಗ ನಮ್ಮ ಮನೆಯವರದ ಬೆಳವಣಗಿ ನಿಂತದರಿಪಾ ಮತ್ತ. ಬೆಳವಣಗಿ ನಿಂದ ಬರೋಬ್ಬರಿ ೨೫ ವರ್ಷ ಆತ..ಹಾ.ಹಾ.

    ಪ್ರತಿಕ್ರಿಯೆ
  3. ಕುಸುಮಬಾಲೆ

    ನೀವು ಬರೆದದ್ದ ನಾನು ಮಿಸ್ ಮಾಡದೇ ಓದ್ತೀನಿ ಸರ್ರ, ದಾರಾವಾಹಿ ಬರಿಯೂವಾಕಿಗ ಸ್ವಲ್ಪಾರ ನಗು ಬೇಕಲ್ಲ?

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: