ನಮ್ಮೊಲ್ಲೊಬ್ಬ ನಟನಿದ್ದಾನೆ..

ನಟರಾಜನಿಗೊಂದು ಪತ್ರ …

ಹುಲುಗಪ್ಪ ಕಟ್ಟೀಮನಿ

ಹುಲುಗಪ್ಪ ಕಟ್ಟೀಮನಿ ಹಾಗೂ ಏಣಗಿ ನಟರಾಜ್ ಜೀವದ ಗೆಳೆಯರು. ಒಂದು ರಂಗಭೂಮಿಯನ್ನೇ ಕಂಡು ಉಂಡವರು. ಜೊತೆಯಾಗಿ ಹಲವು ಕನಸು ಹಂಚಿಕೊಂಡವರು.

ಏಣಗಿ ನಟರಾಜ ಇನ್ನಿಲ್ಲ. ಆತನ ಒಡನಾಡಿ ಜೀವದ ಗೆಳೆಯನೊಳಗೆ ಉಕ್ಕಿದ ಭಾವ ಕವಿತೆಯಾಗಿ ಇಲ್ಲಿ ಹೊಮ್ಮಿದೆ..

ಛೇ..

ಏನು ಮಾಡಿಬಿಟ್ಟೆ ಗೆಳೆಯ!

ಸ್ವಚ್ಚ ಮನದಿಂದ, ಬಿತ್ತಿದ್ದು

ಬಿತ್ತಿದಾಂಗೆ ಬೆಳೆಯುವ

ಈ ಕಾಯಕವ ಬಿಟ್ಟು

ಏನನ್ಯಾಯ

ಮಣ್ಣಿಂದ -ಮಣ್ಣಿಗೆ-ಮರಳಿ ಮಣ್ಣಿಗೆ

 

ಉಸಿರೊಂದಿದ್ದರೆ..

ಈ ಉಸಿರೊಂದಿದ್ದರೆ ನೀ

ಕುಣಿಸಬಹುದಿತ್ತು ಆ ಮೂರ್ಖರು

ಸೃಷ್ಟಿಸಿದ ಗೊಂಬೆಗಳನ್ನು

ಅದೇ ಅವನೇ ಆ ಪರಂಗಿ

ನಾಡಿನ ಶೇಕ್ಸ್ಪಿಯರ,

ನಮ್ಮೆಲ್ಲರ ಕುರಿಗಳನ್ನು ಕಾಯ್ದ

ಆ ಕಾಳಿದಾಸ.. ಈ ಭವಭೂತಿ

ಈ ಅವರಿವರು

ಗೀಚಿ

ಬರೆದೊಗೆದ ಪಾತ್ರಗಳ

ಪಾತ್ರೆಯಲ್ಲಿ ಕೈಯಾಡಿಸಿ,

ಸಿಕ್ಕ ಪಾತ್ರಗಳನ್ನು

ಪೋಷಾಕು ತೊಟ್ಟಂತೆ ತೊಟ್ಟು,

ರಂಗದ ಮೇಲೆ ಅತ್ತಿಂದಿತ್ತ,

ಇತ್ತಿಂದತ್ತ, ಬಡಬಡಿಡಿ – ಬೀಗಿ,

ಹೂಂಕರಿಸುವುದ ಬಿಟ್ಟು

ಛೇ… ಛೇ…

ಏನು ಮಾಡಿದೆ ನೀನು?

 

ಈ ಉಸಿರೊಂದಿದ್ದರೆ, …

ಇಲ್ಲಿಕೇಳು ಕುಣಿದವನೂ ಮುಖ್ಯವಲ್ಲ,

ಕುಣಿಸಿದ ಪಾತ್ರಗಳೂ ಮುಖ್ಯವಲ್ಲ

ಈ ಉಸಿರು

ಈ ಕಾಯ ಇವುಗಳು

ಮುಖ್ಯವೆಂದೆನಿಸಬೇಕಿತ್ತು ನಿನಗೆ.

ಕಾಯ-ಕಾಯಕವ ನೀ

ಕಳಚಿಕೊಂಡ ಮೇಲೆ

ಪತ್ರಿಕೆಗಳು

ನಿನ್ನ ಹಾಡಿ

ಹೊಗಳಿದವು

ಆದರೆ …

ನನ್ನ ಸಂಕಟ ಅದಲ್ಲ

ನಾವು ಆಟದವರು ಗೆಳೆಯ

ಜನ…

ಆಟದವರ ಆಟ ನೋಡ್ಲಿಕ್ಕೆ

ದೇವರ

ರೂಪದಲ್ಲಿ ಬಂದಿರುತ್ತಾರೆ.

ಅವರಿಗೆ ನಿರಾಸೆ

ಮಾಡಬಾರದಿತ್ತು.

ಯಾಕೆಂದರೆ

ನೀನೊಬ್ಬ ನಟ.

 

ನಿನಗೆ ಮತ್ತು ನಿನ್ನ ಅಹಂಕಾರಕ್ಕೆ

ಈ ಇಬ್ಬರಿಗೂ

ತಿಳಿಯಬೇಕಿತ್ತು.

ನಮ್ಮೊಲ್ಲೊಬ್ಬ ನಟನಿದ್ದಾನೆ

ಅವನನ್ನಾಡಿಸಬೇಕು…

ಅವನು ಶ್ರೀರಾಮ್ ಲಾಗೂ,

ನಸೀರುದ್ಧೀನ್ಷಾ,

ಓಂಪುರಿ ಈ

ಎಲ್ಲರನ್ನು

ಒಳಗೊಂಡವನಾಗಿದ್ದಾನೆ

ಅವನನ್ನು ಕುಣಿಸಬೇಕೂ ಎಂದು.

ಆದರೆ

ನೀ ಬಿಡು

ನೀ ಮುಠ್ಠಾಳ …

ಆಹಾ ! ಎಂಥ ಕಾಲ ಅದಾಗಿತ್ತು.

80 ರಿಂದ 90 ರ ಕಾಲ.

ಗುರು ಕಾರಂತ, ಸುಬ್ಬಣ್ಣ

ಜಂಬೆ, ಅಕ್ಷರ, ರಘುನಂದನ, ಪ್ರಸನ್ನ

ಈ ಎಲ್ಲರೂ ಕೈ-ಕಾಲು

ತೊಳೆದುಕೊಂಡು

ಸ್ವಚ್ಛ ಮನದಿಂದ

ಮಡಕೆಯ ಮಣ್ಣನ್ನು ತುಳಿಯಲು

ನಿಂತರೆ,

ಮಣ್ಣಿನ

ಪರಿಮಳದೊಂದಿಗೆ ಎಂತೆಂಥ

ವೇಷಗಳು ರೂಪುಗೊಳ್ಳುತ್ತಿದ್ದವು ಅವರ

ತುಳಿತದಲ್ಲಿ…

ರಂಗದ ಮೇಲೆ

ಆ ವಿಕ್ರಮರಾಯನಾಗಿ,

ಷಕಾರನಾಗಿ,

ತದ್ರೂಪಿಯಂತೆ, ಮ್ಯಾಕ್ಬೆತ್ನಂತೆ…

ಜನ ಬೆರಗಾಗಿ ನೋಡಿದರಲ್ಲೋ

ನಿನ್ನ ಆಟವನ್ನು,

ತಿರುಗಾಟದ

ಆ ಗರಡಿಯಲ್ಲಿ ನಿತ್ಯವೂ ಆಟ.

ಹೊಸ ಪಟ್ಟು, ಹೊಸ ವೇಶ,

ಹೊಸ-ಹೊಸ ನೀರು

ನಿತ್ಯವೂ…

ಏಳೂರ ಕೆರೆಯ ನೀರನು

ಕುಡಿದೆವಲ್ಲೊ…!

ಒಬ್ಬ

ಬ್ಯಾಟ್ಸ್ಮನ್

ಆಟ ಆಡುತ್ತ ಆಡುತ್ತ

ಪಿಚ್ ಮನೋಧರ್ಮವನ್ನು

ಅರಿಯುತ್ತಾನೆ.

ಅಂತೆಯೇ

ನಾವು

ರಂಗದ ಮೇಲೆ ಬಂದನಂತರ

ಆ ಊರಿನ

ಮನೋಧರ್ಮವನ್ನರಿಯುತ್ತ

ಕೋಡೆಂಗಿಗಳಾಗುತ್ತಿದ್ದೆವು.

ಆದರೆ ದುರಂತ ನೋಡು

ಜೀವನದಲ್ಲಿ ಫéಿರಕಿ ಬಾಲ್ಗಳನ್ನು

ಎಸೆದಂತೆ ರಂಗದ ಮೇಲೂ

ಅವುಗಳನ್ನು ಎಸೆಯುತ್ತಲೇ ಬಂದೆ.

ಬಹಳ ದುರ್ಬಲನಾಗುತ್ತಿದ್ದಿ.

ಆ ಆಟ ನಿನ್ನದೇ ಆಗಿದ್ದರೂ ಕೂಡ…

ಬೆಳವಲದ ಸೀಮೆಯಲಿ

ಹಸುಗಳು ಮೇಯುವಾಗ

ತಮ್ಮ – ತಮ್ಮ

ಶಕ್ತಿಯಾನುಸಾರ ಮೇಯುತ್ತವೆ.

ಮೇದು, ಜೀಣರ್ಿಸಿಕೊಂಡು

ಮತ್ತೆ ನೊಗಕ್ಕೆ ಹೆಗಲುಗೊಡುತ್ತವೆ.

ಇದು ಅವುಗಳ ಧರ್ಮ -ಆಧ್ಯಾತ್ಮ ಕೂಡ.

ಹಾಗೇ…

ನಟನೆಯಲ್ಲೂ ಆಧ್ಯಾತ್ಮ

ಬೇಕಿತ್ತು.

ರಂಗದ ಮೇಲೆ ನಟ ತಾನಷ್ಟೇ

ನಟಿಸುವುದು ಅಲ್ಲ. ನಟಿಸುತ್ತ…

ಪಕ್ಕದವರಿಗೂ ವಿಶ್ವಾಸ ತುಂಬುತ್ತ…

ತಾಯಿ ಮೀನು

ಮರಿ ಮೀನುಗಳೊಂದಿಗೆ ನೀರಲ್ಲಿ

ಆಟವಾಡಿದಂತೆ ಆಡಬೇಕು

ಅವರ ನಟನೆಯ

ಕಂಪಿನಲ್ಲಿ

ನಮ್ಮ ಕಂಪೂ ಸೇರಬೇಕು.

ಆಗ ಜನಮೆಚ್ಚುವ ನಟರಾಗುತ್ತೇವೆ.

ಛೇ…

ಏನಾಗಿತ್ತು ನಿಮಗೆಲ್ಲ?

ಆ ಜಯತೀರ್ಥ, ಆ ಧೃವರಾಜ,

ಈ ಶರತ್ತ, ಆ ರಾಜು ಅನಂತಸ್ವಾಮಿ

ಇವರೆಲ್ಲ ಅರ್ಧ ಆಟಕ್ಕೇ ಕೈ ಚೆಲ್ಲಿದರಲ್ಲ?

ಅವರಂತೆಯೇ ನೀನೂ ಕೈ ಚೆಲ್ಲಿದೆ.

ಬಹುಷಃ

ಸುಬ್ಬಣ್ಣನಾದಿಯಾಗಿ

ಗುರು ಕಾರಂತರು

ನಾವಿಲ್ಲದೆ ನೀವುಗಳು

ಅಲ್ಲೇನು ಮಾಡುತ್ತೀರೋ? ಎಂದು

ಒಬ್ಬೊಬ್ಬರನ್ನೇ ಕಳ್ಳ

ಅಹವಾಲು ಕೊಟ್ಟು

ಕರೆಸಿಕೊಳ್ಳುತ್ತಿದ್ದಾರೇನು?

ಆ ಕೋಣದವನಿಗೆ ಕಿರಿಕಿರಿ ಕೊಟ್ಟು.

ಆಗಲಿ… ಆಗಲಿ…

ಎಲ್ಲರೂ ಸೇರಿ ಅಲ್ಲೊಂದು

ಆಖಇಂಒ ಖಿಇಂಒ ಕಟ್ಟಿ

ಮುಂದೊಂದು ದಿನ ನಾವೂ ಬಂದೇವು.

ಸುಬ್ಬಣ್ಣ ಮತ್ತೆ ನಾಟಕ ಬರೆದಾರು.

ಅಲ್ಲೂ ತಿರುಗಾಟಿ ಮಾಡಿಸಿಯಾರು

ಮೇಷ್ಟ್ರು ಕಾರಂತರು

ಸುರೆ ಪೀರುತ್ತ ಹಾಮರ್ೋನಿಯಂ

ಹಿಡಿದರೆ ಸಾಕಲ್ಲ…

ಮತ್ತೆ ಆಟ ಆಡೋಣ

ಆದರೆ ನಟರಾಜ

ಅಲ್ಲೂ ಫéಿರಕಿ ಬಾಲ್ ಎಸೆಯಬೇಡ.

ಅಲ್ಲಿ ಚಿತ್ರಗುಪ್ತ ಇರುತ್ತಾನೆ.

 

‍ಲೇಖಕರು G

October 5, 2012

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. D.RAVI VARMA

    ಹುಲುಗಪ್ಪ ಈ ನಟರಾಜ್ ನೆನಪಾದಾಗೆಲ್ಲ ನನಗೆ ಗೊತ್ತಿಲ್ಲದೇ ಕಣ್ಣೀರು ತುಂಬಿ ಬರ್ತದೆ… ಆಗ ಹೆಗ್ಗೋಡಿನಲ್ಲಿ ಪ್ರಸನ್ನ ತ್ರದ್ರುಪಿ ನಾಟಕ ಮಾಡಿಸುತ್ತಿದ್ದರು .. ತದ್ರುಪಿಯಲ್ಲಿ ಆತನ ನಟನೆ ನೋಡಿ ದಂಗಾಗಿ ಹೋಗಿದ್ದೆ. ಆ ದ್ವನಿ, ಆ ನಟನೆ, ಆ ಒಳಗೊಳ್ಳುವಿಕೆ.
    ಅಬ್ಬಾ , ಹಾಗೆ ನೋಡಿದ್ರೆ ಪ್ರಸನ್ನ ಕೂಡ ತುಂಬಾ ಥ್ರಿಲ್ ಆಗಿದ್ದರು .. ತಿರುಗಾಟ ಹೊಸಪೇಟೆಗೆ ಬಂದಾಗ ,ಮತ್ತೆ ನಾಟಕ ನೋಡಿ ಸಮಾದಾನವಾಗದೆ, ಅವರ ಹಿಂದೆಯೇ ಇಳಕಲ್ ಗು ಹೋಗಿ ನಾಟಕ ನೋಡಿ ಬಂದೆ….ಅದೊಂದು ಅದ್ಬುತ ನಾಟಕ….
    ನಟರಾಜ್ ಬಗ್ಗೆ ಆತನ ಕಕ್ಕುಲಾತಿ,ಜೀವನಪ್ರಿತಿ, ಹುಂಬತನ,ಅದೆಲ್ಲಕ್ಕೂ ಮಿಗಿಲಾಗಿ ನಿನ್ನ ಅಂತರಾಳದಲ್ಲಿ ಕಾಡುತ್ತಿರುವ ಆ ಮುಗ್ದ ಗೆಳೆಯನ ಪ್ರೀತಿ ಎಲ್ಲವನ್ನು ಕಾವ್ಯವಾಗಿಸಿದ್ದೀಯ …ಹುಟ್ಟು ಆಕಸ್ಮಿಕ, ಸಾವು ಶತಸಿದ್ದ , ಕೆಲವರ ಸಾವು ಈ ನೆಲದಲ್ಲಿ ಎಲ್ಲೂ ಹೇಳ ಹೆಸರಿಲ್ಲದೆ ಮಣ್ಣಿನೊಡನೆ ಮಣ್ಣಾಗಿ ಹೋಗಿಬಿಡುತ್ತಾರೆ …. ಆದರೆ ನಟರಾಜ್ ಅಂಥಾ ಕಕ್ಕುಲಾತಿ ಗೆಳೆಯರು,ನಟರು . ಅವರು ನಮ್ಮನ್ನು ಆಗಾಗ್ಗೆ ಕಾಡುತ್ತಾರೆ ,ಕಾಡುತ್ತಲೇ ಇರುತ್ತಾರೆ …..
    ರವಿ ವರ್ಮ ಹೊಸಪೇಟೆ …..

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: