ನಮ್ಮೂರ ಚಿಕ್ಕಯ್ಯ ಉರುಫ್ ಸುಳ್ಳಕ್ಕಿ..

ಅವನೊಂದು ನಡೆದಾಡೋ ಕಥಾಕೋಶ..

h r sujatha

ಎಚ್ ಆರ್ ಸುಜಾತ 

ನಮ್ಮೂರ ಚಿಕ್ಕಯ್ಯ ಉರುಫ್ ಸುಳ್ಳಕ್ಕಿ. ಅಡ್ಡನಾಮದಲ್ಲಿ ಕರದ್ರೆ ಓ ಅನ್ನೋನು. ಅಂಗೇ “ನೀನ್ ಹೆಸರಿಟಿದ್ಯ?” ಅಂತ ಸುಳ್ಳು ಸುಳ್ಳೇ ಮುಖ ಸಿಂಡರಸೋನು. ಅಂಥ ನಟಭಯಂಕರ ಅವನು.

ಅವನ ಲೀಲೆಗಳು ಒಂದಾ? ಎರಡಾ? ನೀಳವಾಗಿದ್ದ ದುಂಡುಮೊಗದ ಅವನು ಲಕ್ಷಣವಾಗಿದ್ದ. ಗೆಯ್ಮೆ ಗೇದ ಕಾಯ ಅವನದು. ಅವನು ಸಾಯೋ ಮುಂಚೆ ಒಂದು ವರ್ಷ ಅನ್ನೋ ಹಂಗೆ ಸ್ವಲ್ಪ ಕುಗ್ಗಿದ್ದ ಅನ್ನೋದು ಬಿಟ್ರೆ ಕಡೇತಂಕ ಅಂಗೇ ಮರದ ಚೇಗು ಇದ್ದಂಗಿದ. ಸತ್ಯದ ತಲೇ ಮೇಲೆ ಹೊಡದಂಗೆ, ಅವನಂಗೆ, ಸುಳ್ ಹೇಳೋರು ನಮ್ಮೂರಲ್ಲಿ ಯಾರು ಇರಲಿಲ್ಲ. ಅದಕ್ಕಂತನೆ ಇಂತಾ ಚೆಂದೊಳ್ಳಿ ಅಡ್ಡ ಹೆಸರು “ಸುಳ್ಳಕ್ಕಿ”. ಹಕ್ಕಿ ಶಕುನ ನುಡದಂಗೆ ಅವನು ನೀಟಾಗಿ ಸುಳ್ಳನ್ನ ಕಥೆ ಕಟ್ಟಿ ಹೇಳೋನು.

snake folk1ಅವನೊಂದು ನಡೆದಾಡೋ ಕಥಾಕೋಶ. ಕೋಲಾಟದ ಚತುರ, ಕುಶಾಲುಗಾರ ಅಂತೆ ಹೊಟ್ಟೆಬಾಕ, ಅಷ್ಟೇ ಒಳ್ಳೆ ಬೇಸಾಯಗಾರ. ಹೀಗೆ 64 ವಿದ್ಯೇನು ಅರೆದು ಕುಡಿದಿದ್ದ. ಅದಿಕೆ ಅಂತಾನೆ ಎಲ್ರೂ ಮನೆ ಹೆಂಗಸ್ರು ಗಂಡಸರುಗೆ, ಅವನ ಕಂಡ್ರೆ ಪ್ರಾಣ. ಮಕ್ಕಳಂತೂ ಅವನ ಕೈಲಿ ಚಡ್ಡಿ ಬಿಚಿಸ್ಕೊಂಡು ಗೊಳೋ ಅಂಥ ಅಳ್ತಾ ಓಗಾವು.

‘ಸಣಮೆನ್ಚಿನಕಾಯಿ, ದೊಣ್ಣೆಮೆನ್ಚಿನಕಾಯಿ, ಬಾಳೆಕಾಯಿ’ ಅಂಥ ಗಂಡು ಮಕ್ಕಳ ಚಡ್ಡಿ ಒಳಗಿನ ರಹಸ್ಯ ಬಿಚ್ಚಿ ಗೋಳು ಹುಯ್ಕೊಳೋವ್ನು. ಮಕ್ಕಳ ತಾಯೇರ ಕೈಯಲ್ಲಿ ಉಗುಸ್ಕೊಳೋನು. ಲೇವಡಿ ಮಾಡೋನು ಅನ್ನೋದನ್ನ ಬಿಟ್ರೆ ಯಾರಿಗೂ ಹಾನಿ ಮಾಡ್ತಾ ಇರಲಿಲ್ಲ.

ಒಮ್ಮೆ ಒಂದು ದಿನ ನಮ್ಮ ಚಿಗವ್ವ ಬೆಳೆಗಿನ ಕೆಲ್ಸಕಂತ ಹೋಗಿ, ಯಾರು ಕಾಣಸೋಲ್ಲರು ಅನ್ಕೊಂಡು ಅವನ ತೊಗರಿ ಹೊಲದಲ್ಲಿ ಕುಂತವ್ರೆ. ಇವನು ತೆಂಗಿನ ಮರಕೆ ನೀರು ಉಯ್ಯಕೆ ಅಂತ ಎರಡು ಅರಬೀನಾ ಅಡ್ಡೆ ಮೇಲೆ ಹೊತ್ಕೊಂಡು ಬಂದವನೇ. ಚಿಗವ್ವ ಬೆನ್ ಹಾಕಿ ಕಕ್ಕಸ್ಸಿಗೆ ಕುಂತವ್ರೆ. ಇವ್ನು ದೂರದಿಂದಾನೆ ನೋಡಿ “ಏನಮ್ಮ ಏನಮ್ಮ ತಿರುಪತಿ ತಿಮ್ಮಪ್ಪನ ದರ್ಶನ ಬೆಳೆಬೇಳೆಗನೆ ಕೊಟ್ಟುಬುಟ್ರಲ್ಲ” ಅಂದತಕ್ಷಣ ಎದ್ದುಬಿದ್ದು ಓಡಿಬಂದ ನಮ್ಮ ಚಿಗವ್ವ, ನಮ್ಮ ಹಿತ್ಲಿಂದಾ “ಈರಪುರದಕ್ಕ” ಅಂತ ಕುಕ್ಕೊಂಡ್ರು. ಅವ್ವಾ ‘ಏನಾಯಿತು ಇವಳಿಗೆ’ ಅಂತ ಆಚೆಗೆ ನೀರ್ ಇಡ್ಕೊಂಡು ಓದ್ರು.

ನೀರು ಮುಟ್ಕೋತಾನೇ ನಡೆದಿದ್ದೆಲ್ಲ ಅವ್ವನಗೆ ಹೇಳಿ,

“ಅಲ್ಲ ಕಣಕ್ಕ, ಈ  ಸುಳ್ಳಕ್ಕಿಗೆ ಇವತ್ತು.. ಥೂ.. ಎಂತಾ ಕೆಲ್ಸಾಯಿತು ಅಂತೀಯ. ಮುಖ ತೋರ್ಸೋದು ಹೆಂಗಕ್ಕ ಆ ನನ್ಮಗಂಗೆ ಇನ್ಮೇಲೆ” ಅಂತ ಅನ್ಕಂದು ನಡೆದಿದ್ದ ಹೇಳ್ತು. ಅದು ನಾಚ್ಕೊಂಡ್ರೆ, ಅವ್ವ ಬಿದ್ದುಬಿದ್ದು ನಗ್ತಾ  “ಅವ್ನ ಹೊಲ ಬೇಕಾಗಿತ್ತ ನಿಂಗೆ” ಅಂತು. ಚಿಗವ್ವ ” ಥೋ, ನಮ್ಮ ಹಲಸಿನ ಮರದಲ್ಲಿ ನಮ್ಮುಡ್ಲು ಅರೆ ಹೊಡಿತಿದ್ವಾ, ಇವ್ನ ಹೊಲದಲ್ಲಿ ತೊಗರಿಕಡ್ಡಿ ಮರೆ ಅಲ್ಲ್ವಾ? ಅನ್ಕಂದು ಅತ್ಲಾಗೆ ಹೋದೆ. ಈ ಪಾಪ್ರು ನನ್ಮಗ, ಅಗ್ಲೆ ಬರದಾ” ಅನ್ಕಂತಲೆ ಅದ್ರ ಮನಿಗೋಯ್ತು.  ಆದ್ರೆ ಸುಳ್ಳಕ್ಕಿ ಸುಮ್ನೆ ಏನೂ ಆಗ್ದಿರಂಗೆ ನಾಲ್ಕಾರು ಸಲ ಓಡಾಡಿದ ಮೇಲೆ ಇವ್ರು ನಿರಾಳ ಆದ್ರು.

ಸುಳ್ಳಕ್ಕಿ ಅವ್ವ ದೇವೀರಿ, ಹಾಡುಹಸೆ ಹೆಳೂದ್ರಲ್ಲಿ, ಸೋಬಾನೆ ಪದ ಹಾಡೊದ್ರಲ್ಲಿ ನಮ್ಮೂರಲ್ಲೇ ಚತುರೆ. ಅವಳಿಗೆ ಮೆಣಸಾಳೆ (ಮಜ್ಜಿಗೆ ಹುಳಿ) ಅಂದ್ರೆ ಪಂಚಪ್ರಾಣ. ಮೆಣಸಾಳೆ ಉಂಡು ನಮ್ಮ ಕೋರಿಕೆ ಮೇರೆಗೆ ಕೊಟ್ಟಿಗೆ ಕಡೇ ಇರೋ ಅರೀಲಿ, ನಂಗಾ ಡಾನ್ಸ್ ಮಾಡೋಳು. ಅವಳ ಅದ್ಭುತ ಎದೆಯನ್ನ ತೋರಿಸುತ್ತಾ ಬಿಪಾಶಾಬಸು ನಾಚೋ ಹಂಗೇ ಹೆಜ್ಜೆಹಾಕೊಳು.

ಅವ್ನಹೆಂಡ್ತಿ ಅಂತೂ ಮಕ್ಕಳನ್ನ ಹೆತ್ತು, ಹೆತ್ತು ಹಾಕಿದ್ಲು. ಕಲೆಗಾರನ ಹೆಂಡ್ತಿ ಆಲ್ವಾ? ರಸಿಕ ಬೇರೆ. ಅವಳು ಬೆಳ್ಳಗೆ ಧುಂಡಗೆ ಇವನ ತದ್ವಿರುದ್ಧ ಕಾಯದವಳು. ಆದ್ರೂ ಎಂಥ ಜೋಡಿ ನಮ್ಮ ಚಿಕಯ್ಯಂದು ಮಾಳೀದು. ಮನೆ ತುಂಬ ಹನ್ನೊಂದು ಮಕ್ಕಳು. ಎರಡು ಸತ್ವು. ಒಂಬತ್ತು ನೆಲೆ ಆದವು. ತಿನ್ನೋ ಬಾಯಿ ಮನೇಲಿ, ಹೆಚ್ಚಾಗಿ ಇದಿದ್ರಿಂದಾ, ಅವನಿಗೆ ಒಳ್ಳೆ ಹೊಲಗದ್ದೆ ಇದ್ರುವೆ ಹೊರಗಡೆ ಕೂಲಿಗು ಬರೋನು. ಹೆಂಡ್ತಿನೂ ಜೋತೆಲ್ಲಿ ದುಡಿಮೆ ಮಾಡೋಳು.

ಕೆಲ್ಸಕ್ಕ್ ಬಂದ್ರೆ ಅವನಿಗೆ ಎಷ್ಟು ಇಕ್ಕಿದ್ರು ಸಾಲ್ತಿರಲಿಲ್ಲ. ಹೆಂಗಸ್ರು ಮಕ್ಕಳ ಹತ್ರ ಅವನಿಗೆ ಸಲಿಗೆ. ಒಂದು ದಿನ ನನ್ನಕ್ಕ “ಒಗ್ಲಾ ಸುಳ್ಳಕ್ಕಿ, ನೀನು ನಿನ್ನ ಎರಡು ಮಕ್ಕಳು ಊಟಕ್ಕೆ ಕುಂತ್ರಿ ಅಂದ್ರೆ ಒಳಗೆ ಇರೋದೆಲ್ಲಾ ಖಾಲಿ ಆಗತ್ತೆ. ಅನ್ನದ ಹೆಂಟೆನ ಅಗ್ಲಿಗೆ ಇಕ್ಕಿ ಒಂದು ತಪ್ಲೆ ಸಾರು ಸುರಿಬೇಕೋ. ಗುದ್ಲೀಲೀ ಕಾವಲೆ ನೀರಿಗೆ ಮಣ್ಣ ತುಮ್ಬ್ದಂಗೆ ತುಂಬಿಸ್ತಿಯ” ಅಂತ ಅಂದ್ರು.

“ಹಾಕ್ಕಮ್ಮ. ನಮ್ಮಪ್ಪನ ಮನೆ ಇದು. ಗೆಯ್ತಿವಿ, ಉಂತಿವಿ ನಿನಗೆ ಇರೋದಾ ಮಾಡಹಾಕೋಕೆ ಕೈನೋವಾ. ಇಷ್ಟೇ ಏನು? ಏಳ್ಳು ಮುದ್ದೆ ಒಂದು ಬೋಸಿ ಅನ್ನ ಉಂತೀನಿ” ಅಂದ. ಅವತ್ತು ಅಲ್ಲಿರೋರು ಎಲ್ಲಾ ಸೇರಿ ಚಾಲೆಂಜ್ ಹಾಕುದ್ರು.

train15 ದಿವಸಕೆ ದೊಡ್ಡಜ್ಜನ ಮನೇಲಿ ಮದುವೆ. ಅವತ್ತು ಊಟಕ್ಕೆ ಕೂರಿಸಿದ್ರು. ಏಳ್ಳು ಮುದ್ದೆ ಒಂದು ಬೋಸಿ ಅನ್ನ ಒಂದು ಕೆ.ಜಿ ಬಾಡೆಸ್ರು ಉಂಡು ಡರ್ರ್ ಅಂತ ಮೇಲೆದ್ದ. ಆಸಾಮಿ ಅಲ್ಲಡದಂಗೆ ಮನಿಗೊದಾ. ಎಲ್ಲ್ರೂ ಬಾಯಿ ಮೇಲೆ ಬೆರಳು ಇಟ್ಕೊಂಡು ಒಸಿದಿಸ ಅದ್ನೆ ಮಾತಾಡ್ಕೊಳ್ಳವ್ರು. ಅವನಿಗೆ ಒಂದು ಇಂಚು ಹೊಟ್ಟೆ ಇರಲಿಲ್ಲ. ಗಟ್ಟಿ ದುಡಿಮೆಯ ಕಾಲದವರು ಆಲ್ವಾ? “ಇವತ್ತು ನಿಮ್ಮನೆಲ್ಲಿ ಉಂಡ್ರೆ ನಾಳೆ ನಿಮ್ಮ ಮನೆಗೆ ಕೆಲ್ಸಕ್ಕೆ ಬರೋವರಗು ಹಸಿಬಾರದು” ಅಂಗನ್ನೋನು. ಅವ್ನು ಎಳ್ಳಷ್ಟು ನಾಚ್ಕೊಂತಿರಲಿಲ್ಲ. “ನಂದು ಈ ಮನೆ. ನಮ್ಮಪ್ಪಂದು. ನೀನು ಕಂಡರ ಮನೆಗೊಗ್ ಹೆಣ್ ಹುಡಿಗಿ” ಅಂತ ರೇಗಿಸಿ ನಮ್ಮ ಕಣ್ಣಲ್ಲಿ ನೀರು ತರಸೋನು.

ಪದ ಹೇಳೋ ಅಂದ್ರೆ ಸಾಕು

“ಬಂತಪ್ಪ ಗಾಡಿ ತಂತಿಮೇಲಾಡಿ

ತೋಪಿ ಪಿರಂಗೆರು ಮಾಡಿದ ಗಾಡಿ”

ಅಂತ ರೈಲಿನ ಮೇಲೆ ಕಲಿತ ಪದಾನ ನಮುಗೂ ಕಲಿಸೋನು.

ಎಲ್ಲದಕಿಂತ ಒಂದು ಮಜಾ ಅಂದ್ರೆ ಅವನ ದೊಡ್ಡ ಮಗನ ಮದುವೆ ಆಯಿತು ಮಕ್ಕಳು ಆದ್ರು. ತಿರುಗಿ ಅದೇ ಮಗಂಗೆ ಮದುವೆ ಅಂತ ಗೊತಾಯ್ತು. ನಾವೆಲ್ಲಾ ಸೇರ್ಕೊಂಡು ರೇಗಿಸಿದ್ವಿ. “ಅಲ್ಲ ಚಿಕ್ಕ, ನಿನ್ ಮಗ ಇಸ್ಕ್ಕೊಲ್ ಮೇಸ್ಟ್ರು. ಪ್ಯಾಟೆಲ್ಲಿ ಮನೆ ಮಾಡವ್ನೆ. ನಿನ್ನ ಮನೆ ನೋಡ್ಕೊಂಡು ತಮ್ಮದಿರಿಗೆ ಬುದ್ದಿ ಹೇಳ್ಕೊಂಡು, ಅವ್ರಿಗೆ ಮದಿವೆ ಮಾಡೋದು ಬಿಟ್ಟು, ಅವನೇ ಇನ್ನೊಂದು ಮದಿವೆಗೆ ನಿಂತವನೆ ಅಲ್ಲಾ!” ಅವನ ಮುಖದಲ್ಲಿ ನಗೆಚಾಟಿಕೆ ಮರೆಯಾಗಿತ್ತು. ಮಗ ಮಾಡಿದ ತಪ್ಪು ಅಪ್ಪನ ಮುಖದಲ್ಲಿ ಕಾಣಿಸ್ತಿತ್ತು. ಆದ್ರು ಕಳ್ಳಂಗೆ ಒಂದು ಪಿಳ್ಳೆನೆವ ಕೊಟ್ಟ. “ಉಂ ಕನ್ನಿ, ನೀವೆಳೋದು ಸರಿ. ನನ್ನ ಸೊಸೆ ಅವಳಿ ಜವಳಿ ಹುಟ್ಟಾಣಿಕೆ ನೋಡಿ ಗಂಗೆ-ಗೌರಿರು ಒಬ್ಬನ್ನೇ ಮದಿವೆ ಆಗಬೇಕು, ಬೇರೆವ್ರನ್ನ ಆಗಂಗಿಲ್ಲ. ಅಲ್ವೆನಿ ರಂಗವ್ವರೆ” ಅಂತೇಳಿ ಅವ್ವನ್ನ ಸಾಕ್ಷಿಗೆ ನಿಲ್ಲಿಸಿದ. ಅವ್ವ “ಅಯಿತ್ತು ಬಿಡೋ, ನಿಮ್ಮನ್ನು ನೋಡ್ಕೊಂಡ್ತಾನೆ. ಮನೆ ಮಗ ಆಲ್ವಾ ಕೈ ಬುಟುಬುಡುತಾನ” ಅಂತ ಅಲ್ಲಿಗೆ ಪ್ರಸಂಗ ಮುಗಿಸ್ತು.

ನಾನು ಒಮ್ಮೆ ಊರಿಗೆ ಹೋದಾಗ  “ನೀವು ಹಿಂದೆ, ಹಬ್ಬದಲ್ಲಿ ಬೆಳೆದಿಂಗಳಲ್ಲಿ ಕೋಲು ಹುಯಿತಿದ್ರಲ್ಲ. ಒಂದು ಟೀಂ ಮಾಡಿ ಕೋಲಾಡ್ಸು. ಜನಪದ ಜಾತ್ರೆಗೆ ಬಾ” ಅಂತ ಹೇಳಿ ಬಂದೆ. ಬಂದ್ರು, ರಂಗಣಿ, ಚಂದ್ರ ಎಲ್ಲಾ ಚಿಕ್ಕೊರು. ಚೆನ್ನಾಗಿ ಕೋಲು ಹೂದು ದುಡ್ಡು ತೊಗೊಂಡು ಹೋದ್ರು. ಇವನು ಕೋಲಾಟದ ಪದ ಹೇಳಿದ. ಇವನಿಗೆ ಅವರು ದುಡ್ಡು ಯಾಮಾರಿಸಿಬುಟ್ರು. ಅವನು ನಮ್ಮ ಮನೆಗೆ ಬಂದು ನಮ್ಮ ಅಣ್ಣಂಗೆ ಫೋನ್ ಮಾಡ್ಕೊಡು ನನಗೆ, ಅಂತ ಕಾಟ ಕೊಡೊನಂತೆ.

ನಾನು ಮತ್ತೆ ಊರಿಗೆ ಹೋಗಿದ್ದೆ. ಅವನು ಬಂದ. ಹುಡುಗುರು ಮೇಲೆ ದೂರು ಹೇಳಿದ. ಅಣ್ಣಂಗೆ ಸಾಕಾಗಿತ್ತೇನೋ, ರೇಗಿದ್ರು. “ಇವೆಲ್ಲಾ ಮೊದಲಂಗೆ ಇದವಾ? ಊರು ಮನೆನ ನೀನು ಏನು, ಏನನುಕೊಂಡಿದಿಯ? ನೀನು ಸುಮ್ನೆ ಬೆಂಗಳೂರುಗೆ ಹೋಗು. ಸಾಲ ಕೊಟ್ಟಿರೋನಂಗೆ ಇವುನು ದಿನಾ ಬಂದು ಕುಂತ್ಕಂತನೆ” ನನಗೆ ಬಯದಿದ್ದು ನೋಡಿ ಅವನು ಎದ್ದು ಹೊರಟು ಹೋದ.

ಬದಲಾದ ಕಾಲಮಾನಗಳು, ಸೋತ ವಯಸ್ಸು, ಎಷ್ಟೊಂದು ಬದಲಾವಣೆಯನ್ನು ತರಬಲ್ಲದು. ನಗೆಬುಗ್ಗೆಯಂತೆ ಓಡಾಡ್ತಿದ್ದವನು ಎಷ್ಟು ಅಸಹಾಯಕತೆಯಿಂದ ಎದ್ದು ಹೋದಾ. ನೋಡುತ್ತ ಕೂತೆ.

ಇದನ್ನು ಸರಿಪಡಿಸಲು ಬೆಂಗಳೂರಿನಲ್ಲಿ ಇದ್ದ ನನ್ನ ದೊಡ್ಡಣ್ಣ, ಇನ್ನೊಮ್ಮೆ, ಜನಪದ ಜಾತ್ರೆಗೆ ನಿನ್ನ ಕಹಳೆ ತೊಗೊಂಡು ಬಾ ಅಂದ್ರು. ಅವನ ಅಣ್ಣನ ಮಗ ರಂಗಣಿ ಜೊತೆ ಅವನೇ ಊದುತ್ತಿದ್ದ, ಎರಡು ಕಹಳೆ ತೊಗೊಂಡು ಬಂದ. ರಂಗಣಿ ಜೋರಾಗಿ ಆಕಾಶಕ್ಕೆ ಕಹಳೆ ಮೊಳಗಿಸಿದ. ಪಾಪ! ಇವನ ಸ್ವರ ಸರಿಯಾಗಿ ಹೊರಡಲಿಲ್ಲ.

fatherನನ್ನಕ್ಕನ ಮದಿವೆಯಲ್ಲಿ ಕೋಡುಗಲ್ಲ ಮೇಲೆ ನಿಂತು, ಎಘರುತ್ತಾ, ಆಕಾಶಕ್ಕೆ ಕಹಳೆ ಮೊಳಗಿಸುತ್ತಾ, ಭಾವನ ಮನೆಯ ದಿಬ್ಬಣನ, ಬರಮಾಡಿಕೊಂಡಿದ್ದು ನೆನ್ಪಾಯಿತು. ಮದಿವೆ ವಾದ್ಯದಲ್ಲಿ ಸಣ್ಣ ತಾಳನ ಹಿಡ್ಕೊಂಡು ಕಾಲು ಸೋಲೋವರಗು ಕುಣಿತಿದ್ದ. ವಾಲಗಾ ಉದುತಿದ್ದಾ. ಕತ್ತಿಗೆ ಕುಣುಮಿಣಿ ಜೋಡಿ ತಮಟೆ ನೇತುಹಾಕೊಂಡು, ಕುಣಿತಾ ಕುಣಿತಾ, ತನ್ಮಯನಾಗಿ ನುಡಿನ ನುಡಿಸ್ತಿದ್ದ. ಅವನ ಸೋಲದ ಕೈಕಾಲುಗಳು, ಬೆಂಕಿ ಮುಂದೆ ಹದಮಾಡಿಕೊಳತಿದ್ದ ಅವನ ತಮಟೆಗಳು ದಿಗ್ಗನೆ ನೆನಪಾದವು.

ದಮ್ಮುಕಟ್ಟಿ ಹೇಳುತಿದ್ದ ಕೋಲಾಟದ ಪದಗಳು, ಮಧ್ಯ ಮಧ್ಯೆ ನೋಡೋರುಗೆ ಉಬ್ಬಸ ಏಳುವಂತೆ ಓಯ್, ಅಕ್ಕಳೋ, ಅಗ್ಗಳೋ ಅನ್ನುವ ಮಟ್ಟು ಬದಲಾಯಿಸುವ ಸ್ವರಗಳು, ಪದಗಳು , ಮಧ್ಯೆ ನಿಂತು ಸುತ್ತ ಬರೋರ್ಗೆಲ್ಲ ಕೊಡುವ ಅವನ ತಪ್ಪದ ಕೋಲಿನ ಲಯಗಾರಿಕೆ, ಅವನಿಂದ ತಪ್ಪಿಸಿಕೊಂಡಂತೆ ಕಂಡವು.

ಜನಪದ ಜಾತ್ರೆ ಮುಗಿತು. ಅಣ್ಣ ನಾನು ಅವನನ್ನು ಮನೆಗೆ ಕರ್ಕೊಂಡು ಹೊರಟ್ವಿ. ಟ್ರಾಫಿಕ್ನಲ್ಲಿ ಕಾರ್ ನಿಲ್ತು. ಹಿಂದೆಮುಂದೆ ಚಲಿಸುವ ಕಾರಿನ ಸಾಗರವೇ ಇತ್ತು. ಸಿಗ್ನಲ್ ಬಿದ್ದಕೂಡಲೇ ಚಾಲನೆ ಆಯಿತು. ರಾತ್ರಿ ಕತ್ತಲಲ್ಲಿ ಮಿಣಿಗುಡುವ ಕೆಂಪು ದೀಪಗಳನ್ನ ನೋಡಿ ಮೌನವಾಗಿ ಕುಳಿತ್ತಿದ್ದ ಸುಳ್ಳಕ್ಕಿ ಒಮ್ಮೆಲೇ ತಟ್ಟನೆ ಹೇಳಿದ “ಇದೇನಿ ಗೌಡ, ಅಂಡೊಳಗೆ ಮಿಣಕುಹುಳ ಇಟ್ಕೊಂಡು, ಪುಳಪುಳಾಂತ, ಮಳ್ಳೀಮೀನು ಕೋಡಿಬಿದ್ದ ಮಳೆ ನೀರಲ್ಲಿ, ಮಿಣಮಿಣಾಂತ ಕೆರೆ ಒಳಗಿಂದ, ಒಟ್ಟಿಗೆ ಏರುಹೋಯ್ತವಲ್ಲ, ಹಂಗೇ ಹೋಯಿತಾವೆ” ಅಂದ.

ಕಾರುಗಳು ತಗ್ಗಿನ ದಾರಿಯಿಂದ ಬ್ರಿಜ್ ಏರಿ ಹೊಗ್ತಿದ್ವು. ಅವನು ಬಿಟ್ಟಕಣ್ಣು ಬಿಟ್ಟಂಗೆ ನೋಡ್ತಿದ್ದ. ಅಂದು ಅವನ ಕಲ್ಪನೆ ಮತ್ತು ಮುಗ್ದತೆ ಎರಡು ವಿಶೇಷವಾಗಿ ತೋರಿದವು. ಹಾಗೆಯೆ, ಅವನಿಗೆ ಗೊತ್ತಿರೋ ಮೀನಿನ ಚಲನೆ, ಇಂದು ಕಾರಿನ ಚಲನೆ ಆಗಿ, ಜೀವ ಸತ್ವಗಳು ಒಂದರಿಂದ ಯಾಂತ್ರಿಕವಾಗಿ, ಹೇಗೆ, ಇನೊಂದಕ್ಕೆ ವರ್ಗಾವಣೆ ಆಗಿವೆ ಅನ್ನೋದರ ಚಿತ್ರಣವನ್ನು ಅವನು ಸರಳವಾಗಿ ಹೇಳಿದ. ಮರೆತಿದ್ದ ನಮ್ಮ ಕೆರೆಗಳಲ್ಲಿ ಆಡುವ ಮಳ್ಳಿಮೀನಿನ ಚಲನೆಯನ್ನು ನಮ್ಮ ಒಳಗೆ ಹುಟ್ಟು ಹಾಕಿದ.

‍ಲೇಖಕರು admin

July 31, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

4 ಪ್ರತಿಕ್ರಿಯೆಗಳು

  1. Anonymous

    ತುಂಬಾ ಚೆನ್ನಾಗಿದೆ. ನಿಮ್ಮ ಲೇಖನ ನಾನು ಇದೇ ಮೊದಲು ಓದಿದ್ದು. ಓದಿ ಖುಷಿಯಾಯಿತು.

    ಪ್ರತಿಕ್ರಿಯೆ
  2. Anonymous

    ಬಹಳ ಸೊಗಸಾದ ನಿರೂಪಣೆ. ಸುಜಾತಕ್ಕ ಗದ್ಯಕ್ಕೆ ಬಂದದ್ದು ಬಹಳ ಒಳ್ಳೆಯ ಬೆಳವಣಿಗೆ. ಅಪರೂಪದ ಅನುಭವಗಳನ್ನು ದಾಖಲಿಸುತ್ತಿರುವ ನಿಮ್ಮ ಬರವಣಿಗೆ ಮುಂದುವರಿಯಲಿ. ಮರೆಯಾಗುತ್ತಿರುವ ಸರಳ ಸುಂದರ ಮನಸ್ಸಿನ ಗ್ರಾಮೀನ ವ್ಯಕ್ತಿಗಳ ಸುತ್ತ ಬದುಕಿನ ಸಂಸ್ಕೃತಿಯನ್ನು ಹೆಣೆಯುತ್ತಿರುವ ನಿಮ್ಮ ಕೌಶಲ್ಯ ಚೇತೋಹಾರಿಯಾಗಿದೆ.
    -ಕೆ.ಪುಟ್ಟಸ್ವಾಮಿ

    ಪ್ರತಿಕ್ರಿಯೆ
  3. Anonymous

    Thumba chennagii mudii bandidde…hindhenduu keladha mundenduu kelalagadhaa e nim article manasige thira hathirvagiduu ..hege mundhenuu thumba janapriyathayanuu hondaliii enduu ashisuthene…

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: