ವರ್ಣಭೇದ ನೀತಿ
– ಮಂಜುನಾಥ್
ಧಾರವಾಡ
ನಾನು ಬೆಂಗಳೂರಿಗೆ ಬಂದ ಹೊಸತರಲ್ಲಿ, ಇಲ್ಲಿಯ ವಾತಾವರಣ, ಇಲ್ಲಿಯ ಸಂಸ್ಕ್ರತಿ, ಜನರ ವಿಚಾರಶೈಲಿ ಹಾಗೂ ಜೀವನಶೈಲಿಯನ್ನು ನೋಡಿ ನಾನು ದಿಗ್ಬ್ರಾಂತನಾಗಿದ್ದೆ. ನಾನು ಕೂಡ ಕರ್ನಾಟಕದವನೇ ಆದರೂ, ಈ ಊರು ನಮ್ಮ ಊರಿಗಿಂತ ತುಂಬಾನೇ ಭಿನ್ನವಾಗಿ ಕಾಣಿಸುತ್ತಿತ್ತು. ಎಲ್ಲಿ ನೋಡಿದರೂ ಅಲ್ಲಿ ಆಗಸದೆತ್ತರಕ್ಕೆ ಬೆಳೆದು ನಿಂತಿರುವ ಗಗನಚುಂಬಿ ಕಟ್ಟಡಗಳು, ಸಾವಿರಾರು ಕಾಂಕ್ರೀಟ್ ಕಟ್ಟಡಗಳ ನಡುವೆ ನಿಂತಿರುವ ಸಣ್ಣ ಕ್ರಿಮಿಯಂತೆ ಭಾಸವಾಗುತ್ತಿತ್ತು ನನಗೆ.
ಇನ್ನು ಇಲ್ಲಿಯ ಜನಸಂಖ್ಯೆ? ಅಯ್ಯೋ ಎತ್ತ ನೋಡಿದರು ಅತ್ತ ಜನ, ಜಾತ್ರೆಗೆಂದು ಗುಂಪು ಗುಂಪಾಗಿ ಹೋಗುತ್ತಾರಲ್ಲಾ ಹಾಗೆ. ಆದರೆ ಇಷ್ಟೊಂದು ಜನ ಇಲ್ಲಿ ಏತಕ್ಕಾಗಿ ಬಂದರು? ಏನು ಮಾಡುತ್ತಿರುವರು? ಹೇಳುವರಾರು? ಒಟ್ಟಿನಲ್ಲಿ ಬೆಂಗಳೂರು ಒಂದು ಮಾಯಾನಗರಿ ಎಂಬುದಂತು ಸತ್ಯ.
ಹಾ ನಾನು ಹೇಳಹೊರಟಿದ್ದೇನೆಂದರೆ, ಬೆಂಗಳೂರಿಗೆ ಬಂದ ಹೊಸತರಲ್ಲಿ, ನಾನು ಉತ್ತರ ಕರ್ನಾಟಕದವರೇ ಆದ, ನನ್ನ ಕಾಲೇಜಿನ ಸಹಪಾಠಿಗಳೇ ಆದ ಮೂವರೊಂದಿಗೆ ಬಾಡಿಗೆ ರೂಮ ಮಾಡಿಕೊಂಡು ಇದ್ದೆ. ನಾವೆಲ್ಲರೂ ಒಂದೇ ಪರಿಸರದಿಂದ ಬಂದವರಾಗಿದ್ದರಿಂದ ನನಗೆ ಯಾವುದೇ ಅಂತರ ಕಾಣಿಸಿರಲಿಲ್ಲ. ಆಫೀಸಿನಲ್ಲಿ ಕೂಡ ಕನ್ನಡದಲ್ಲಿ ಮಾತನಾಡುವುದೆ ಕಡಿಮೆ, ಮಾತನಾಡಿದರೂ ಇಂಗ್ಲಿಷ್ ಪದಗಳ ಉಪಯೋಗವೇ ಹೆಚ್ಚಾಗಿರುತ್ತಿತ್ತು. ಹಾಗಾಗಿ ಭಾಷೆಯಲ್ಲಿ ವ್ಯತ್ಯಾಸವೇನಿಸುತ್ತಿರಲಿಲ್ಲ.
ನಾನು ಮಾತನಾಡುವುದರಲ್ಲಿ ಕೊಂಚ ಫಾಸ್ಟೇ, ಅದು ಕೆಲವರಿಗೆ ಅರ್ಥವಾಗುತ್ತಿರಲಿಲ್ಲ. ನಿಧಾನವಾಗಿ ಮಾತನಾಡುವ ವೇಗವನ್ನು ನಾನು ತಗ್ಗಿಸಿದೇನೋ? ಅಥವಾ ಅವರೇ ಹೊಂದಿಕೊಂಡರೋ ಗೊತ್ತಿಲ್ಲ. ಆದರೆ ಈಗ ನನ್ನ ಮಾತು ಅವರಿಗೆ ಸರಿಯಾಗಿ ಅರ್ಥವಾಗುತ್ತದೆ.
ಒಂದು ಸಲ ಊರಿಂದ ಬಂದ ಮೇಲೆ ನನ್ನ ಸಹುದ್ಯೋಗಿಯೊಬ್ಬಳು ಕೇಳಿದಳು “ಏನು ಮಾಡಿದೆ ಊರಲ್ಲಿ” ಎಂದು, ನಾನು ನಮ್ಮ ಶೈಲಿಯಲ್ಲಿ ಸಲೀಸಾಗಿ ಜವಾಬು ನೀಡಿದೆ “ಏನು ಇಲ್ಲಾ ಖಾಲಿ ಮನೇಲಿ ಇದ್ದೆ” ಎಂದು. ಅದಕ್ಕವಳೆಂದಳು, “ಯಾಕೆ? ಖಾಲಿ ಮನೇಲಿ ಇದ್ದೆ? ಉಳಿದವರೆಲ್ಲಾ ಎಲ್ಲಿ ಹೋಗಿದ್ದರು?” ಎಂದು. ಆ ಮಾತಿಗೆ ಏನು ಹೇಳಬೇಕೋ ತಿಳಿಯದಾಯಿತು. ನಾನೆಂದೆ ಮನೇಲಿ ಎಲ್ಲರೂ ಇದ್ದರೂ, ನಾನು ಖಾಲಿ ಇದ್ದೆ ಎಂದು. ನಮ್ಮ ಹೇಳುವ ಶೈಲಿಯು ಸರಿಯಾಗಿದ್ದರೂ, ಅವರು ಅರ್ಥಮಾಡಿಕೊಂಡಿದ್ದು ಬೇರೆಯಾಗಿತ್ತು. ಹಾಗಂತ ಅವರು ಅರ್ಥಮಾಡಿಕೊಂಡ ರೀತಿ ತಪ್ಪಾಗಿತ್ತು ಅಂತಲ್ಲ. ಭಾಷೆ ಪ್ರಾಂತ್ಯಕ್ಕನ್ನುಸಾರವಾಗಿ ಬದಲಾಗುತ್ತದೆ ಎಂಬ ಮಾತಿನರ್ಥ ಮೊದಲಬಾರಿಗೆ ನನಗಾಗಿತ್ತು. ಈ ಸನ್ನಿವೇಶವನ್ನು ಆಗಾಗ ಸ್ನೇಹಿತರ ಹತ್ತಿರ ಹೇಳಿ ನಗುತ್ತಿರುತ್ತೇನೆ.
ಇನ್ನು ಭಾಷೆಯಲ್ಲಿ ನಾವು ಉಪಯೋಗಿಸುವ ಪದಗಳ ಬಗ್ಗೆ ಹೇಳುವುದಾದರೆ, ನಮಗೆ ಗೊತ್ತಿಲ್ಲದೆ ನಾವು ಬೇರೆ ಭಾಷೆಯ ಪದಗಳನ್ನು ಹೆಚ್ಚಾಗಿ ಉಪಯೋಗಿಸುತ್ತೇವೆ. ಯಾರಾದರೂ ನಮಗೆ ತಿಳಿಸಿಕೊಟ್ಟಾಗ ಮಾತ್ರ ನಮಗೆ ಅದು ತಿಳಿಯಿತ್ತದೆ.
ಬೆಂಗಳೂರಿಗೆ ಬಂದು ವರುಷಗಳ ನಂತರ ಕಾರಣಾಂತರಗಳಿಂದ ನನ್ನೊಂದಿಗಿದ್ದ ಸಹಪಾಠಿಗಳಲ್ಲಿ ಇಬ್ಬರು ಬೇರೆಕಡೆ ಶಿಪ್ಟಾದರು. ಮೊದಮೊದಲು ಬೇಸರವಾದರೂ, ಕಾಲಕ್ಕೆ ತಕ್ಕಂತೆ ಬದಲಾಗಬೇಕೆಂದು ಸಮಾಧಾನ ಮಾಡಿಕೊಂಡೆ.
ಆಮೇಲೇ ನಾನಿದ್ದ ರೂಮಿಗೆ ಕೋಲಾರದ ಒಬ್ಬ ಬಾಡಿಗೆಗೆ ಬಂದ. ಹೆಚ್ಚು ಕಡಿಮೆ ನಮ್ಮ ವಯಸ್ಸಿನವನೇ ಆದರೆ, ಅವನದು ಮೆಕ್ಯಾನಿಕಲ್ (ಹಾರ್ಡ್ ವೇರ್), ನಮ್ಮದು ಕಂಪ್ಯೂಟರ್ (ಸಾಫ್ಟ್ ವೇರ್). ಅವನು ನಮ್ಮ ಜೀವನಶೈಲಿಗೆ ತುಂಬಾ ಆಕರ್ಷಿತನಾಗಿದ್ದ. ನಮಗೆ ಅವನ ಜೀವನಶೈಲಿ ತುಂಬಾ ಬೇಸರತರಿಸುತ್ತಿತ್ತು. ಪಾಪ ಹಗಲು, ರಾತ್ರಿ ಎಂದು ಶಿಪ್ಟ್ ಗಳಲ್ಲಿ ಕೆಲಸಮಾಡುತ್ತಿದ್ದ.
ಹೀಗೆ ಒಂದು ದಿನ ಮಾತನಾಡುವಾಗ ನಾನು ದವಾಖಾನೆ ಎಂಬ ಶಬ್ದ ಬಳಸಿದೆ. ಅದಕ್ಕೆ ಅವನು ಆಶ್ಚರ್ಯಚಕಿತನಾಗಿ ಹಾಗೆಂದರೇನು ಎಂದು ಕೇಳಿದ, ಈಗ ಚಕಿತನಾಗುವ ಸರದಿ ನನ್ನದಾಗಿತ್ತು. ದವಾಖಾನೆ ಎಂದರೆ ಗೊತ್ತಿರದ ವ್ಯಕ್ತಿ ಕರ್ನಾಟಕದಲ್ಲುಂಟೇ ಎಂದೆನಿಸಿತು. ಆಮೇಲೆ ಅವನಿಗೆ ಹೇಳಿದೆ ಆಸ್ಪತ್ರೆ (Hospital) ಅಂತಾ. ಆಗ್ ಅವನೇಂದ ಓ! ನೀವು ಆಸ್ಪತ್ರೆಗೆ ದವಾಖಾನೆ ಎನ್ನುತ್ತೀರಾ, ಬಹುಶಃ ಅದು ಮರಾಠಿ ಪದವಾಗಿರಬೇಕು, ನಿಮಗೆ ಮಹಾರಾಷ್ಟ್ರ ಹತ್ತಿರ ಅಲ್ವಾ ಅದಕ್ಕೆ ಅಲ್ಲಿಯ ಪದಗಳನ್ನು ಉಪಯೋಗಿಸುತ್ತಿರಾ ಅಂದ. ನಾನು ಅಲ್ಲಿಯವರೆಗೆ ದವಾಖಾನೆಯೇಂದರೆ ಕನ್ನಡಪದವೇಂದು ತಿಳಿದಿದ್ದೆ, ಆದರೆ ಅಂದು ತಿಳಿಯಿತು, ಅದು ಕನ್ನಡವಲ್ಲಾ ಬಹುಶಃ ಮರಾಠಿ ಪದವೇ ಆಗಿರಬೇಕೆಂದು, ನಾವು ಮಾತನಾಡುವಾಗ ನಮಗೆ ಗೊತ್ತಿಲ್ಲದೆ ಬೇರೆ ಭಾಷೆಯ ಪದಗಳನ್ನೆ ಜಾಸ್ತಿಯಾಗಿ ಬಳಸಿರುತ್ತೆವೆ, ನೋಡಿ ಜಾಸ್ತಿ ಅನ್ನುವುದು ಕೂಡ ಕನ್ನಡ ಪದವೇ ಅಲ್ಲಾ.
ಹೀಗೆ ನನಗೆ ದಿನೇ ದಿನೇ ಎಷ್ಟೋ ವ್ಯತ್ಯಾಸಗಳು ಕಾಣಿಸತೊಡಗಿದವು, ಈರುಳ್ಳಿ ಅಂತಾ ಇಲ್ಲಿಯ ಜನ ಕರೆದರೆ ನಾವು ಉಳ್ಳಾಗಡ್ಡಿಯೇನ್ನುತ್ತೇವೆ. ಬದನೆಕಾಯಿಗೆ ನಾವು ಮುಳಗಾಯಿ ಎನ್ನುತ್ತೇವೆ. ಇನ್ನೂ ಕೆಲವಂತೂ ತುಂಬಾ ವಿಚಿತ್ರ, ಮಂಡಕ್ಕಿ ಅಂತಾ ನಾವೆಂದರೆ ಇಲ್ಲಿಯ ಜನ ಬಾಯಿ ತೆಗೆಯುತ್ತಾರೆ. ಕಡಲೆಪುರಿ ಅಂತಾ ಇವರು ಕರೆಯುತ್ತಾರೆ. ಶೇಂಗಾಗೆ ಕಡಲೆಬೀಜ ಅಂತಾರೆ. ಹೀಗೆ ಎಷ್ಟೊಂದು ವ್ಯತ್ಯಾಸ.
ಇನ್ನು ಕೊನೆಯದಾಗಿ ಮೊನ್ನೆ ನಡೆದ ಸಂದರ್ಭವೊಂದನ್ನು ಹೇಳಲೇಬೇಕು. ಹೀಗೆ ಸಂಜೆ ಸಮಯದಲ್ಲಿ, cafetariaದಲ್ಲಿ ನಾನು ಮತ್ತು ನನ್ನ ಸಹುದ್ಯೋಗಿ ಮಂಡ್ಯದವರು ಕುಳಿತಿದ್ದಾಗ, ಮಾತಾಡುತ್ತಾ ಮಾತಾಡುತ್ತಾ ಅವರೇಂದರು ‘ತರಕಾರಿಗೆ ನೀವು ಕಾಯಿಪಲ್ಲೆ ಅಂತಾ ಯಾಕೆ ಕರಿತಿರಾ?’ ಅಂತಾ. ಆಗ ಏನು ಉತ್ತರಿಸಬೇಕೋ ನನಗೆ ತಿಳಿಯಲಿಲ್ಲ. ನಾನೆಂದೆ ನಾವು ತರುವ ತರಕಾರಿಗಳೆಲ್ಲ ಕಾಯಿ ಅನ್ನೋ ಪದದಿಂದ ಕೊನೆಗೊಳ್ಳುತ್ತವೆ (ಉದಾಹರಣೆಗೆ ಸೌತೆಕಾಯಿ, ಬದನೇಕಾಯಿ, ಹಾಗಲಕಾಯಿ) ಮತ್ತು ನಾವು ಅವುಗಳನ್ನು ಪಲ್ಲೆ ಮಾಡಿ ತಿನ್ನುತ್ತೇವಾದ್ದರಿಂದ ಅವನ್ನು ಕಾಯಿಪಲ್ಲೆ ಎನ್ನುತ್ತೇವೆ ಅಂದೆ.
ಅದಕ್ಕೆ ನನ್ನ ಸಹುದ್ಯೋಗಿ ತಲೆಯಾಡಿಸಿ ಸುಮ್ಮನಾದರು. ನಾನು ನನ್ನ ಸಮಯಪ್ರಜ್ನೆಗೆ ಮನಸ್ಸಿನಲ್ಲೇ ಬೆನ್ನುತಟ್ಟಿಕೊಂಡೆ. ಆದರೆ ಒಂದು ವೇಳೆ ಅವರು ಮತ್ತೆ ಕೇಳಿದ್ದರೆ?, ‘ಕಾಯಿಗಳ ಜೊತೆಗೆ ಈರುಳ್ಳಿ, ಬೆಳ್ಳುಳ್ಳಿ, ಕೊತಂಬರಿ ಎಲ್ಲಾ ತರುತ್ತೇವೆ, ಅದರಲ್ಲಿ ಕಾಯಿ ಇರಲ್ಲವಲ್ಲಾ ಅಂತಾ?’ ನನ್ನ ಪುಣ್ಯ ಅವರು ಹಾಗೆ ಕೇಳಲಿಲ್ಲ.ಆದರೂ ಸಹ ನನಗೆ ಈ ಪ್ರಶ್ನೆ ಹೊಳೆಯಿತು, ನಾವು ನಿಜವಾಗಲೂ ತರಕಾರಿಗೆ ಕಾಯಿಪಲ್ಲೆ ಎಂದು ಯಾಕೆ ಕರೆಯುತ್ತೇವೆ? ಈ ಪ್ರಶ್ನೆಗೆ ಉತ್ತರ ಏನು ಎಂದು ಯಾರಿಗೆ ಗೊತ್ತು? ನಾನು ಹೋಗಿ ಯಾರನ್ನ ಕೇಳಲಿ?
ಒಟ್ಟಿನಲ್ಲಿ ಕನ್ನಡದಲ್ಲಿಯೇ ಅದೆಷ್ಟೊಂದು ವಿದವಾದ ಭಾಷೆಗಳಿವೇ, ಇದನ್ನೇ ನಾವು ವರ್ಣ(ಪದ) ಭೇದ ನೀತಿ ಎನ್ನಬಹುದೆ?






Idu pada(varna) bheda neeti. Heege sumaru ive. Itteechegantoo swara bheda neetiyoo kannadadalli dhumukide, adoo bengaluru-mysooru kannadadalli. Vichaar madi.
ತಾಜಾ ಆಗಿದೆ ಭೇದ ನೀತಿ . ಓದಿ ಸನ್ತಸವಾಯ್ತು .
ಬರಹ ಚನ್ನಾಗಿದೆ,