ನಮ್ಮೂರಿನ ಇಬ್ಬರು ಮಮ್ಮದರು!

ಚಂದ್ರಕಾಂತ ವಡ್ಡು

ಬದುಕಿನ ತೋರುಬೆರಳನ್ನು ಗಟ್ಟಿಯಾಗಿ ಹಿಡಿದು ಅದು ಕರೆದೊಯ್ದ ದಿಕ್ಕಿನಲ್ಲಿ, ಅದರ ವೇಗಕ್ಕೆ ತಕ್ಕಂತೆ ಹೆಜ್ಜೆ ಹಾಕಿದವನು ನಾನು. ಜೊತೆಗೆ ಉಳಿಸಿಕೊಂಡಿದ್ದು ಊರ ಹೆಸರು. ಅಕ್ಷರ ರೂಪದ ಉಸಿರೇ ಆದ ಅದನ್ನು ಬರೀ ಹೆಸರೆನ್ನಲಾಗದು. ಅದೊಂದು ಹೆಡೆ ಅಡಗಿಸಿಕೊಂಡ ಹುತ್ತ, ಒಡಲಲ್ಲಿ ಬಾಲ್ಯದ ಮೊತ್ತ. ಅಷ್ಟಕ್ಕೂ ಹುಟ್ಟಿದೂರು ಬಿಟ್ಟಮೇಲೆ ಎಲ್ಲಾ ಊರೂ ನಮ್ಮವೇ, ಅಲ್ಲವೇ?

ನಮ್ಮೂರಲ್ಲಿ ಪರವೂರಿನವರನ್ನು ‘ಬೇವೂರಿನವರು’ ಅಂತ ಕರೆಯುತ್ತಾರೆ. ಈಗ ಊರ ಎದುರಿಗೆ ಬಂದು ಕೂತಿರುವ ಕಾರ್ಖಾನಾಸುರನ ಕಾರಣದಿಂದ ಊರಿನ ತುಂಬ ಬೇವೂರಿನ ಜನರೇ ತುಂಬಿ ತುಳುಕುತ್ತಿದ್ದಾರೆ. ಹಾಗಾಗಿ ಇಲ್ಲಿ ಮೂಲ ಹಳ್ಳಿಗರೇ ಅಲ್ಪಸಂಖ್ಯಾತರು. ನಮ್ಮೂರಲ್ಲಿ ನಾವೇ ಅಪರಿಚತರಾಗುವ ವೈರುಧ್ಯವನ್ನು ಅರಗಿಸಿಕೊಳ್ಳುವುದು ಅಷ್ಟು ಸುಲಭವಲ್ಲ. ಈ ಕಾರ್ಖಾನಾಸುರ ಹಿಂದಿನ ಪುರಾಣಕತೆಗಳಲ್ಲಿ ಬರುವ ನರಕಾಸುರ, ಬಕಾಸುರ, ರಕ್ತಬೀಜಾಸುರ ಮುಂತಾದವರಂತೆ ಅವತಾರ ಪುರುಷರ ವಧೆಗೆ ಈಡಾಗುವ ಪೈಕಿ ಅಲ್ಲವೇ ಅಲ್ಲ. ಈತ ಒಂದು ಬಗೆಯಲ್ಲಿ ರೂಪಾಂತರಿ ಅಸುರ, ಆಧುನಿಕ ವೈರಸ್ ಪ್ರತಿರೂಪ. ಬಕಾಸುರನಂತೆ ದಿನಕ್ಕೆ ಒಂದು ಬಂಡಿ ಅನ್ನ ತಿಂದು ತೇಗಿ ಸುಮ್ಮನಾಗಲಾರ; ಹಗಲೂ ರಾತ್ರಿ ಎನ್ನದೇ ಲಾರಿಗಳಲ್ಲಿ, ರೈಲುಬೋಗಿಗಳಲ್ಲಿ ಲೋಡುಗಟ್ಟಲೇ ಅದಿರಾಹಾರ ನಿರಂತರ ಬಂದು ಬೀಳಲೇಬೇಕು. ಆತ ಡೇಗಿದಾಗ ಹರಡುವ ಹೊಗೆಯಲ್ಲಿ ಊರವರ ಪುಪ್ಪುಸಗಳು ಕಪ್ಪುಕಪ್ಪು, ಕಾಲಿಗೆ ಸಿಕ್ಕವರು ಅಪ್ಪಚ್ಚಿ, ಕೋರೆಗೆ ನಿಲುಕಿದವರು ಛಿದ್ರ ಛಿದ್ರ. ಆದಾಗ್ಯೂ ಆಯ್ಕೆ ಇಲ್ಲದ ಜನ ಅಸುರನನ್ನೇ ಆಶ್ರಯಿಸಿ ಸಹಜೀವನ ನಡೆಸುತ್ತಿದ್ದಾರೆ.

ಊರು ತೊರೆದು ಎಷ್ಟೋ ವರ್ಷಗಳಾದರೂ ನಮ್ಮ ಊರಿನ ಆಗುಹೋಗುಗಳಿಗೆ ಸದಾ ಕಣ್ಣು-ಕಿವಿ-ಮೂಗು ತರೆದಿಟ್ಟುಗೊಂಡಿರುವ ನನ್ನಂತಹವರಿಗೆ ಜಗಣ್ಣ ಅಂದರೆ ಬಿಬಿಸಿ ಇದ್ದಂತೆ. ಅವರ ಕುಟುಂಬದಲ್ಲಿ ಅರ್ಧದಷ್ಟು ಜನ ಮೇಷ್ಟ್ರು. ಮಾಸ್ತರಿಕೆ ಮಾಡಲು ಜಗಣ್ಣ ಕೂಡ ಊರು ಬಿಟ್ಟು ಬಹಳ ದಶಕಗಳಾಗಿವೆ. ಆದರೆ ಊರ ಜೊತೆಗಿನ ಸೇತುವೆ ಮಾತ್ರ ಅದ್ರ ಆಗಿಲ್ಲ. ಬಳ್ಳಾರಿ ಮಮ್ಮದ್ ಗಂಭೀರ ಅನಾರೋಗ್ಯದಿಂದ ಬಳಲುತ್ತಿದ್ದಾನೆ ಎಂದು ಜಗಣ್ಣ ತಿಳಿಸಿದಾಗಿನಿಂದ ನನ್ನ ಮನಸ್ಸು ನಿಂತಲ್ಲಿ ನಿಲ್ಲುತ್ತಿಲ್ಲ. ಈತನನ್ನು ಆವರಿಸಿರುವ ಅನಾರೋಗ್ಯ ಮತ್ತು ನಮ್ಮ ನಾಡಿನ ಸೌಹಾರ್ದದ ಬಾಳುವೆಗೆ ಬಡೆದಿರುವ ಜಾಡ್ಯ ಪರಸ್ಪರ ಸಂಕೇತಗಳಾಗಿ, ಕಟು ವಾಸ್ತವಗಳಾಗಿ, ಅದ್ವೈತವೆಂಬಂತೆ ಒಳಗೂ ಹೊರಗೂ ಕಾಡುತ್ತಿವೆ.

ಈತನ ಪೂರ್ತಿ ಹೆಸರು ಮುಲ್ಲಾ ಮುಹಮ್ಮದ್ ಸಾಹೇಬ್; ಊರವರ ನಾಲಗೆಗಳಲ್ಲಿ ಹೊರಳಾಡಿ, ಹೋರಾಡಿ, ಕೊಸರಾಡಿ ಅಂತಿಮ ರೂಪು ಪಡೆದದ್ದು ಬಳ್ಳಾರಿ ಮಮ್ಮದ್ ಎಂದು. ಮುಹಮ್ಮದ್ ಷರೀಫ್ ‘ಮಮ್ಮಷರಿ’, ಫಕ್ರುದ್ದೀನ್ ‘ಪೊಕ್ರು’ ಅಹ್ಮದ್ ಸಾಬ್ ‘ಅಮ್ಮಾಸಾಬ್’ ಎಂದು ಕರೆಸಿಕೊಳ್ಳುತ್ತಾರೆ ನಮ್ಮ ಹಳ್ಳಿಯಲ್ಲಿ. ಈ ಬಳಕೆಗೆ ಜನ ಎಷ್ಟು ಒಗ್ಗಿಕೊಂಡಿರುತ್ತಾರೆಂದರೆ ಒಬ್ಬ ವ್ಯಕ್ತಿಯನ್ನು ಮೂಲ ಹೆಸರಿನಿಂದ ಕೂಗಿದರೆ ಆತ ಹೊರಳಿಕೂಡ ನೋಡಲಾರ. ಬ್ಯಾಂಕು, ಕಚೇರಿಗಳಲ್ಲಿ ಇಂತಹ ಅಡ್ಡ ಅಥವಾ ಅಪಭ್ರಂಶ ಹೆಸರಿನ ವ್ಯಕ್ತಿಗಳ ಬಾಯಿಯಿಂದ ಅವರ ಮೂಲ ಹೆಸರು ಹೊರಡಿಸಲು ಅಧಿಕಾರಿಗಳು ಪರದಾಡಬೇಕಾಗುತ್ತದೆ. ಹಳ್ಳಿಗಳಲ್ಲಿ ಒಂದೇ ಹೆಸರಿನ ಹಲವರಿದ್ದಾಗ ಮೂಲ ಹೆಸರಿಗೊಂದು ಬಾಲವನ್ನೋ ತಲೆಯನ್ನೋ ಸೇರಿಸುವುದು ಸಾಮಾನ್ಯ. ಈ ಮಮ್ಮದ್ ಬಹಳ ಹಿಂದೆಯೇ ಬಳ್ಳಾರಿಗೆ ವಲಸೆ ಹೋಗಿದ್ದರಿಂದ ಬಳ್ಳಾರಿ ಮಮ್ಮದ್ ಆದ. ಕಾಳಿ ನದಿಗೆ ಅಣೆಕಟ್ಟು ನಿರ್ಮಾಣ ಆಗುವಾಗ ಅಲ್ಲಿ ಇಂಜಿನಿಯರ್ ಆಗಿದ್ದ ನೀಲಕಂಠ ಕಕ್ಕನ ನೆರವಿನಿಂದ ಇನ್ನೊಬ್ಬ ಮಮ್ಮದ್ ಸೂಪಾ ಸೇರಿ ರಾಕ್ಷಸಾಕಾರದ ಯಂತ್ರವೊಂದರ ಸಹಾಯಕನಾದ. ಹಾಗಾಗಿ ಆತ ಸೂಪಾ ಮಮ್ಮದ್.

ಇವರೆಲ್ಲಾ ವಯಸ್ಸಿನಲ್ಲಿ ದೊಡ್ಡವರಾದರೂ ನಾವು ಏಕವಚನದಲ್ಲೇ ಮಾತನಾಡುವುದು. ಏಕವಚನದ ಸಂಬೋಧನೆ ನಮ್ಮ ಬಳ್ಳಾರಿ ಭಾಗದ ಸಾಂಸ್ಕೃತಿಕ ಚಿಹ್ನೆ. ಬಹುಶಃ ಇದು ಪಕ್ಕದ ಆಂಧ್ರದ ಪ್ರಭಾವ. ಜಿಲ್ಲಾಧಿಕಾರಿ ಜೊತೆಗೆ ಜವಾನ ಕೂಡ, “ಅಲ್ಲಪ್ಪ ಸಾರು, ನೀನು ಹೇಳ್ತಿ ಅಂದ್ರಗಿನ ನಾನು ಮಾಡಂಗಿಲ್ಲೇನು…?” ಎಂದು ಮಾತಾಡುತ್ತಾನೆ. ಕೂಲಿಕಾರ, “ಧಣಿ, ಹಬ್ಬದ ಖುಷಿಗೆ ಏನನ ಕೊಡು…” ಎಂದು ಮಾಲೀಕನನ್ನು ಕೇಳಿದರೆ ಅದೊಂಥರ ಅನ್ಯೋನ್ಯತೆ. ಯಾರಾದರೂ ಬಹುವಚನ ಬಳಸಿದರೆ ಅಪರಿಚತರಂತೆ, ದೂರದವರಂತೆ ಕಾಣಿಸುತ್ತಾರೆ. ಇದಕ್ಕೆ ವ್ಯತಿರಿಕ್ತವಾಗಿ ದಕ್ಷಿಣ ಕರ್ನಾಟಕದಲ್ಲಿ ಏಕವಚನದ ‘ನೀನು’ ಬಹುವಚನದ ‘ನೀವು’ ಆಗಿದ್ದು ಸಾಲದೆಂಬಂತೆ ‘ನೀವುಗಳು’ ಎಂಬ ಅತಿಬಹುವಚನ ಪ್ರಯೋಗ ಬಳಕೆಯಲ್ಲಿದೆ.

ಈ ಇಬ್ಬರೂ ಮಮ್ಮದ್ ವೃತ್ತಿನಿರತ ದರ್ಜಿಗಳ ವಂಶಕ್ಕೆ ಸೇರಿದವರು. ಇವರು ನಮ್ಮ ಕುಟುಂಬ ಸ್ನೇಹಿತರು ಎಂದಷ್ಟೇ ಹೇಳಿದರೆ ಏನೇನೂ ಸಾಲದು; ನಮ್ಮೆರಡು ಕುಟುಂಬಗಳು ಮುತ್ತಾತಂದಿರ ಕಾಲದಿಂದಲೂ ಒಡನಾಡಿಗಳು. ಅವರ ಮನೆಯ ಚ್ಯೋಂಗ್ಯಾ, ನಮ್ಮ ಮನೆಯ ಕರ್ಜಿಕಾಯಿ ಪರಸ್ಪರ ವಿನಿಮಯವಾಗದೇ ಹಬ್ಬಗಳು ಮುಗಿಯುವುದಿಲ್ಲ. ನಮ್ಮ ಮತ್ತು ಅವರ ಕುಟುಂಬದ ವಿವಿಧ ವಯಸ್ಸಿನ ಬಹುಪಾಲು ವಾರಿಗೆಯ ಸದಸ್ಯರು ಗೆಳೆಯರಾಗಿ ಇರುತ್ತಿದ್ದೆವು.  ನಮ್ಮ ಹಳೆಯ ಮನೆಯ ಆವರಣದಲ್ಲೇ ಅವರ ಟೈಲರ್ ದುಕಾನ್ ಇತ್ತು. ಅದು ಕೇವಲ ಬಟ್ಟೆ ಹೊಲಿಯುವ ಕೇಂದ್ರವಾಗಿರದೇ ನಮ್ಮೂರಿನ ಹಲವು ಚಟುವಟಿಕೆಗಳ ತಾಣವಾಗಿರುತ್ತಿತ್ತು. ಅಲ್ಲಿ ಗಿರಾಕಿಗಳಿಗಿಂತ ಸಮಯ ಕಳೆಯಲು ಬರುವವರೇ ಜಾಸ್ತಿ.

ಉಗಾದಿ, ಹಳ್ಳದರಾಯನ ಜಾತ್ರೆ, ಪೀರಲಹಬ್ಬ, ರಂಜಾನ್ ಹೊರತು ಪಡಿಸಿದರೆ ಊರವರು ಮದುವೆ ಸಂದರ್ಭದಲ್ಲಿ ಮಾತ್ರ ಹೊಸಬಟ್ಟೆ ಹೊಲಿಸುತ್ತಿದ್ದರು. ತೀರಾ ಸಂಕಷ್ಟದಲ್ಲಿದ್ದರೆ ಒಂದು ಸಾಮಾನ್ಯ ಹೊಸ ಟವೆಲ್ ಹೆಗಲಿಗೆ ಹಾಕಿಕೊಂಡು ಹಬ್ಬದ ಖುಷಿಯನ್ನು ಸಂಕೇತಿಕವಾಗಿ ಅನುಭವಿಸಬೇಕಾಗುತ್ತಿತ್ತು. ಆ ದಿನಗಳಲ್ಲಿ ಈ ಕುಟುಂಬದ ಸದಸ್ಯರೆಲ್ಲಾ ಸೇರಿ ಹಗಲಿರುಳೆನ್ನದೇ ಬಟ್ಟೆಗಳನ್ನು ಅಳತೆಗೆ ತಕ್ಕಂತೆ ಕತ್ತರಿಸಿ, ಭರ್ರೆಂದು ಹೊಲೆದು, ಕಾಜ ಹಾಕಿ, ಗುಂಡಿ ಹಚ್ಚಿ ದಿರಿಸುಗಳಾಗಿ ಪರಿವರ್ತಿಸುವ ಕ್ರಿಯೆ ಮುಂಬರುವ ಹಬ್ಬದ ಸಡಗರದ ತಾಲೀಮಿನಂತೆ ಇರುತ್ತಿತ್ತು.  ಗಿರಾಕಿಗಳು ಆ ದಾರಿಯಲ್ಲಿ ಹೋಗುವಾಗ ಅಂಗಡಿಯಲ್ಲಿ ಇಣುಕಿಹಾಕಿ ಹಬ್ಬದ ದುಡಿಮೆ ಹೆಚ್ಚಾಗಿರುವ ಬಗ್ಗೆ ಮೆಚ್ಚುಗೆ ಸೂಚಿಸುವ ನೆಪದಲ್ಲಿ ಹೊಲಿಯಲು ಹಾಕಿದ ತಮ್ಮ ಬಟ್ಟೆಗಳು ಯಾವ ಹಂತದಲ್ಲಿವೆ ಎಂಬುದರ ಬಗ್ಗೆ ಸಂಶೋಧನೆ ಮಾಡುತ್ತಿದ್ದರು. ಅಂಗಡಿಯ ಅನುಭವೀ ಹುಡುಗರಾದ ಸತ್ತಾರ, ಜಿಲಾನಿ, ಅತಾವುಲ್ಲಾ ಅಂತಹ ಗಿರಾಕಿಗಳು ದೂರದಲ್ಲಿ ಬರುತ್ತಿರುವ ಸುಳಿವನ್ನು ಅವರ ದನಿಯಿಂದಲೇ ಗುರುತಿಸಿ ಅವರ ಬಟ್ಟೆಯನ್ನೇ ಹೊಲಿಯುತ್ತಿರುವವರಂತೆ ರಾಟಿಯ ಮೇಲಿಟ್ಟುಕೊಂಡು ನಟಿಸುವಷ್ಟು ನಿಪುಣರಾಗಿದ್ದರು. 

ಬಟ್ಟೆ ಹೊಲಿಯುವ ಯಂತ್ರವನ್ನು ಮಿಶ್ನಿ (ಮಿಷನ್ ಪದದ ಹಳ್ಳಿ ಆವೃತ್ತಿ) ಎಂದು ಕರೆಯುತ್ತಿದ್ದರಿಂದ ಟೈಲರ್ ಅಂಗಡಿ ಇರುವ ಮನೆಗೆ ಮಿಶ್ನಿಮನೆ ಎಂಬ ಹೆಸರೇ ಬಿದ್ದಿತ್ತು. ಮೇಜಿನಾಕಾರದ ಮಿಶ್ನಿಯ ಕೆಳಭಾಗದಲ್ಲಿರುವ ಪೆಡಲ್ ತುಳಿದಾಗ ಅದಕ್ಕೆ ಹೊಂದಿಸಿರುವ ಸುಮಾರು ಒಂದೂವರೆ ಅಡಿ ವ್ಯಾಸದ ಕಬ್ಬಿಣ ಚಕ್ರ ತಿರುಗಿ, ಚರ್ಮದ ಪಟ್ಟಾ ಮೂಲಕ ಮೇಲ್ಭಾಗದ ಚಿಕ್ಕ ಚಕ್ರಕ್ಕೆ ಚಾಲನೆ ಸಿಕ್ಕು, ಅದರ ಗತಿಗನುಗುಣವಾಗಿ ಇನ್ನೊಂದು ಬದಿಯಲ್ಲಿನ ಸೂಜಿ ಕೆಳಗೆ ಮೇಲೆ ಕುಣಿಯುತ್ತಾ ಹೊಲಿಗೆ ಹಾಕುವ ತಂತ್ರಜ್ಞಾನ ಸೋಜಿಗಕ್ಕೆ ಕಾರಣವಾಗಿತ್ತು. ಮಿಶ್ನಿಯ ಕಿರೀಟ ಭಾಗದಲ್ಲಿ ಇರಿಸಿದ ರೀಲಿನ ದಾರದ ತುದಿಯನ್ನು ಸೂಜಿಯ ಮೂಗಿನಲ್ಲಿ ಪೋಣಿಸುವುದು ಮಿಶ್ನಿ ಚಲಾಯಿಸುವುದರ ಆರಂಭ ಘಟ್ಟ. ಅದರಲ್ಲಿ ಪರಿಣತಿ ಪಡೆದರೆ ಕಲಿಕೆಯ ಮೊದಲ ಹಂತ ಪಾಸಾದಂತೆ. 

ಅಂಗಡಿಯವರು ಮಧ್ಯಾಹ್ನ ಊಟಕ್ಕೆಂದು ಮನೆಗೆ ಹೋದಾಗ ಪ್ರಾಥಮಿಕ ಶಾಲಾವಿದ್ಯಾರ್ಥಿಯಾಗಿದ್ದ ನಾನು ಸಮಯಸಾಧಿಸಿ ಮಿಶ್ನಿಯ ಪೆಡಲನ್ನು ಅತಿಯಾದ ವೇಗದಲ್ಲಿ ಸೊಟ್ಟಾಪಟ್ಟಾ ತುಳಿಯುವ ಆಟ ಆಡುತ್ತಿದ್ದೆ. ನನ್ನ ಇಂತಹ ಚಿದುಗುತನದಿಂದ ಎಷ್ಟೋ ಸಲ ಎಲ್ಲೋ ಏನೋ ಎಡವಟ್ಟಾಗಿ ದಾರವಿಲ್ಲದ ಸೂಜಿಯ ಮೊನೆ ಪಟ್ ಎಂದು ಕತ್ತರಿಸಿಬೀಳುತ್ತಿತ್ತು. ಮರು ಕ್ಷಣವೇ ನಾನು ಎದೆಯ ಗಾಬರಿಯನ್ನು ಕಾಲಿಗೆ ವರ್ಗಾಯಿಸಿ ಓಟ ಕೀಳುತ್ತಿದ್ದೆ. ಬರುಬರುತ್ತ ಇಂತಹ ಅವಘಡಗಳಿಂದ ಪಾಠ ಕಲಿತ ಅಂಗಡಿಯವರು ಊಟದ ವಿರಾಮದಲ್ಲಿ ಮಿಶ್ನಿಯ ತಳಭಾಗದ ಪೆಡಲ್ ಮತ್ತು ಮೇಲಿನ ಘಟಕದ ಸಂಪರ್ಕ ಕಡಿತಗೊಳಿಸುವುದನ್ನು ರೂಢಿಸಿಕೊಂಡರು.

ನಾನು ಏಳನೆಯ ತರಗತಿಗೆ ಬರುವಷ್ಟರಲ್ಲಿ ಮಿಶ್ನಿ ಹಿಂದಿನ ಸ್ಟೂಲ್ ಮೇಲೆ ಕುಳಿತರೂ ಪೆಡಲುಗಳು ಕಾಲಿಗೆ ಸಿಗುತ್ತಿದ್ದವು. ಸೂಜಿಗೆ ದಾರ ಪೋಣಿಸುವ ಕುಶಲತೆ ಸಿದ್ಧಿಸಿತ್ತು. ತುಂಡು ಬಟ್ಟೆಯನ್ನು ಚೌಕಾಕಾರ ಕತ್ತರಿಸಿ ನಾಲ್ಕೂ ಅಂಚುಗಳನ್ನು ಒಂದಿಷ್ಟು ಮಡಿಚಿ ಹೊಲಿಗೆ ಹಾಕಿ ಕರವಸ್ತ್ರ ತಯಾರು ಮಾಡಿಕೊಳ್ಳುವುದನ್ನು ಕಲಿತಾಗ ಮುಲ್ಕಿ ಪರೀಕ್ಷೆ ಪಾಸಾದಷ್ಟೇ ಖುಷಿ. ದೊಡ್ಡ ಪೀರಲಹಬ್ಬ ಮುಗಿದಾದ ಮೇಲೆ ಸಣ್ಣ ಹುಡುಗರೆಲ್ಲಾ ಸೇರಿ ನಮ್ಮದೇ ಆದ ರೀತಿಯಲ್ಲಿ ಮಿನಿ ಪೀರಲು ದೇವರುಗಳನ್ನು ಕೂಡಿಸಿ ದೊಡ್ಡವರನ್ನು ಅನುಕರಿಸುತ್ತಿದ್ದೆವು. ಸಹಪಾಠಿ ಜೋಗೇರ ಮಾಯಪ್ಪನ ಸಹಾಯದಿಂದ ಮಾಕೆಸ್ವಾಮಿ, ಹಿರೇದೇವರು, ಗಂಧದ ದೇವರು ಮುಂತಾದ ಹೆಸರಿನ ಮೂಲ ದೇವರುಗಳ ಆಕಾರಗಳನ್ನೇ ಹೋಲುವಂತೆ ತಗಡುಗಳನ್ನು ಕತ್ತರಿಸಿದರೆ ದೇವರ ಅರ್ಧ ದೇಹ ಸಿದ್ಧವಾದಂತೆ. ನಂತರ ದೇವರ ಕತ್ತಿನಿಂದ ಇಳಿಬಿಡಲು ಮುಂಡಾಸುಗಳ ಅಗತ್ಯ ಬೀಳುತ್ತಿತ್ತು. ಅದಕ್ಕೆ ಮತ್ತೆ ನಮ್ಮ ನೆರವಿಗೆ ಬರುತ್ತಿದ್ದದ್ದು ಮಿಶ್ನಿ ಅಂಗಡಿಯವರೇ. 

ಅಂಗಡಿಯವರು ಮೂಲೆಯಲ್ಲಿ ಕಸವೆಂದು ಸುರಿದ ಬಟ್ಟೆಯ ತುಂಡುಗಳ ರಾಶಿಯಲ್ಲಿ ಒಂಚೂರು ಅಗಲ-ಉದ್ದ ಇರುವ ಬಣ್ಣಬಣ್ಣದ ಮುಂಡಾಸುಗಳನ್ನು ಆರಿಸಿಕೊಳ್ಳುತ್ತಿದ್ದೆವು. ಕೆಲವೊಮ್ಮೆ ನಮ್ಮ ಉತ್ಸಾಹ ನೋಡಿದ ಅಂಗಡಿಯವರು ತಮ್ಮ ಬಳಿಯ ಹೆಚ್ಚುವರಿ ಬಟ್ಟೆಯನ್ನು ಮುಂಡಾಸುಗಳ ಆಕಾರಕ್ಕೆ ಕತ್ತರಿಸಿ ಉದಾರವಾಗಿ ನೀಡುವ ಮೂಲಕ ಪರೋಕ್ಷವಾಗಿ ದೈವಕೃಪೆಗೆ ಪಾತ್ರರಾಗುತ್ತಿದ್ದರು. ಹೀಗೆ ಸಿದ್ಧಪಡಿಸಿಕೊಳ್ಳುತ್ತಿದ್ದ ಪೀರಲು ದೇವರುಗಳನ್ನು ಪಾಳುಮನೆಗಳಲ್ಲಿ, ಲಭ್ಯವಿರುವ ಕಟ್ಟೆಕೆಳಗಿನ ಪೊಟರೆಗಳಲ್ಲಿ ಹೀಗೆ ಎಲ್ಲೋ ಒಂದು ಕಡೆ ಜಾಗ ಹುಡುಕಿ ಕೂಡಿಸುತ್ತಿದ್ದೆವು. ಒಮ್ಮೆ ಒಂದು ದೇವರಿಗೆ ಸೂಕ್ತ ಜಾಗ ದೊರೆಯದಿದ್ದಾಗ ಹಳ್ಳದರಾಯನ ಗುಡಿಯಲ್ಲೇ ಪೀರಲು ದೇವರನ್ನು ಕೂಡಿಸಿದ್ದೆ. ಆಗ ಅದು ಯಾರಿಗೂ ಆಭಾಸದ ವರ್ತನೆಯಾಗಿ ತೋರಲಿಲ್ಲ; ಬೇಸರ, ಉದ್ವೇಗಕ್ಕೆ ಕಾರಣವಾಗದೇ ಎಲ್ಲರೂ ಸಹಜ ಸೌಹಾರ್ದದಿಂದಲೇ ಸ್ವೀಕರಿಸಿದ್ದರು.

ಟೈಲರ್ ಕುಟುಂಬದ ಹಿರಿಯ ಮಮ್ಮಷರಿ ಪ್ರತಿದಿನ ನಾರಿಹಳ್ಳಕ್ಕೆ, ಮಸೀದಿಗೆ, ತಿಮ್ಮಣ್ಣನ ಹೋಟೆಲಿಗೆ ಹೋಗುವಾಗ ಬರುವಾಗ ಕನ್ನಡ ಮಿಶ್ರಿತ ಉರ್ದು ಭಾಷೆಯಲ್ಲಿ, ಜೋರು ದನಿಯಲ್ಲಿ ತನ್ನ ಕುಟುಂಬದ ಕಿರಿಯರಿಗೆ ನೀಡುತ್ತಿದ್ದ ಸೂಚನೆಗಳು, ಎಚ್ಚರಿಕೆಗಳು, ನಿರ್ದೇಶನಗಳು ಓಣಿಯವರಿಗೆಲ್ಲಾ ಬಾಯಿಪಾಠವಾಗಿದ್ದವು. ಮಾತುಗಳಲ್ಲಿ ಮುಚ್ಚುಮರೆ ಎಂಬುದೇ ಇಲ್ಲದ ಬಯಲ ಬದುಕು. ಮೊದಮೊದಲು ಬಟ್ಟೆ ಅಳೆಯಲು ಕಟ್ಟಿಗೆ ತುಂಡೊಂದನ್ನು ಇಟ್ಟುಕೊಂಡಿರುತ್ತಿದ್ದರು. ಅದು ಸರಿಯಾಗಿ ಒಂದು ಗಜ ಅಳತೆಯದ್ದು. ಹಾಗಾಗಿ ಅದಕ್ಕೆ ಗಜದಕಟ್ಟಿಗೆ ಎಂದು ಹೆಸರು. ಮುಂದೆ ಕಟ್ಟಿಗೆ ಹೋಗಿ ಸ್ಟೀಲಿನ ಅಳತೆಕೋಲು ಬಂದರೂ ಅದೇಕೋ ಗಜದಕಟ್ಟಿಗೆ ನಾಮವೇ ಖಾಯಮ್ಮಾಗಿ ಉಳಿಯಿತು. 

ನಾನು ಕಂಡಂತೆ ಗಜದಕಟ್ಟಿಗೆ ಬಟ್ಟೆಯನ್ನು ಅಳೆಯುವುದಕ್ಕಿಂತ ತಪ್ಪು ಮಾಡಿದ ಕಿರಿಯರಿಗೆ ಹಣೆಯಲು ಬಳಕೆಯಾದದ್ದೇ ಹೆಚ್ಚು. ಹಿರಿಯರ ಸಿಟ್ಟಿನ ಭರದಲ್ಲಿ ಅದರ ಏಟು ತಿಂದವರು ಥರಗುಟ್ಟುತ್ತಿದ್ದರು. ನಮ್ಮೂರಿನ ಕೆಲವು ಟೈಲರ್ ಹುಡುಗರು ಮನೆಯಲ್ಲಿ ಹೇಳದೇ ಕೇಳದೇ ಮುಂಬಯಿಗೆ ಓಡಿಹೋದ ಪ್ರಸಂಗಗಳಿಗೆ ಬಡತನ, ಅವಮಾನ, ಸಿನಿಮಾ ಹುಚ್ಚು, ಹಣಗಳಿಕೆ ಕನಸು ಇತ್ಯಾದಿ ಪ್ರೇರಣೆಗಳು ಕಾರಣ ಎಂಬುದೇನೋ ನಿಜ. ಜೊತೆಗೆ ಅವರ ವಲಸೆಯಲ್ಲಿ ಈ ಗಜದಕಟ್ಟಿಗೆಯ ಹೊಡೆತದ ಪಾತ್ರ ಬಹಳ ದೊಡ್ಡದೆಂಬ ನನ್ನ ಗುಮಾನಿ ಆಧಾರರಹಿತವೇನಲ್ಲ.

ಹೀಗೆ ಓಡಿಹೋದ ಹುಡುಗರನ್ನು ಪತ್ತೆದಾರಿಕೆ ಮಾಡಿ ಹುಡುಕಿ ತರುವ ಜವಾಬ್ದಾರಿಯನ್ನು ಊರಿನ ಕೆಲವು ತಜ್ಞರು ಹೊರುತ್ತಿದ್ದರು. ಓಡಿ ಹೋದವನ ಒಂದು ತಿಂಗಳ ಹಿಂದಿನ ಚಲನವಲನ, ಗೆಳೆಯರೊಂದಿಗಿನ ಮಾತುಕತೆ, ಮನೆಯವರೊಂದಿಗಿನ ಜಗಳ ಮುಂತಾದ ಸಕಲ ದಿಕ್ಕಿನಲ್ಲಿ ಪೊಲೀಸರಿಗಿಂತ ಮಿಗಿಲಾಗಿ ತನಿಖೆ ನಡೆಸಿದಾಗ ಸುಳಿವುಗಳು ಹೊಳೆಯುತ್ತಿದ್ದವು. ಅಪಾರ ಕನಸು ಹೊತ್ತು ವಲಸೆ ಹೋದ ಹುಡುಗರು ಕೆಲವೇ ದಿನಗಲ್ಲಿ ಮೃಗಾಲಯ ಸೇರಿದ ಹುಲಿಯಂತೆ ದೈಹಿಕವಾಗಿ, ಮಾನಸಿಕವಾಗಿ ನಿತ್ರಾಣಗೊಂಡು ಊರಿಗೆ ಹಿಂದಿರುಗಲು ಹಾತೊರೆಯುತ್ತಿದ್ದರು. ಆಗ ಮನೆಯವರನ್ನು ಸಂಪರ್ಕಿಸಲು ಧೈರ್ಯವಿಲ್ಲದೇ ಗೆಳೆಯನಿಗೆ ಪತ್ರ ಬರೆದು ಬಸ್ಚಾರ್ಜಿಗೆ ಹಣ ಕಳಿಸಲು ಅಂಗಲಾಚಿದ ನಿದರ್ಶನಗಳೂ ಇವೆ. ಹೀಗೆ ಓಡಿಹೋದ ಒಬ್ಬ ಅಣ್ಣನ ಮಗನನ್ನು ಹುಡುಕಿತಂದ ರೋಚಕ ಪ್ರಸಂಗದ ‘ಪಿನ್ ಟು ಪಿನ್ ಡೀಟೇಲ್ಸ್’ನ್ನು ಬಳ್ಳಾರಿ ಮಮ್ಮದ್ ಸೊಗಸಾಗಿ ನಿರೂಪಿಸುತ್ತಿದ್ದ.

ದೀಪಾವಳಿ ಹಬ್ಬಕ್ಕೆ ಆಗದಿದ್ದರೂ ಹಳ್ಳದರಾಯನ ಜಾತ್ರೆಗೆ ನಮ್ಮ ಮನೆಯವರು ಹೊಸ ಬಟ್ಟೆ ಹೊಲಿಸುವುದನ್ನು ತಪ್ಪಿಸುತ್ತಿರಲಿಲ್ಲ. ಬಳ್ಳಾರಿಯಲ್ಲಿ ‘ನವೀನ್ ಟೈಲರ್’ ಹೆಸರಿನಲ್ಲಿ ಮಮ್ಮದ್ ಅಂಗಡಿ ತೆರೆದಮೇಲೆ ನಮ್ಮ ಬಟ್ಟೆಗಳನ್ನು ಅಲ್ಲಿಯೇ ಹೊಲಿಸತೊಡಗಿದೆವು. ಪೊರಯ್ಯ ತಾತನ ಮೂವರು ಹೆಂಡತಿಯರ ಆರು ಮಕ್ಕಳ ಮುಂದುವರಿದ ಸಂತತಿಗೆ ಸೇರಿದ ಕೂಡು ಕುಟುಂಬ ನಮ್ಮದಾಗಿತ್ತು. ಹಾಗಾಗಿ ಜಾತ್ರೆಗಿಂತ ತಿಂಗಳು ಮುಂಚೆಯೇ ಬಳ್ಳಾರಿಗೆ ಹೋಗುತ್ತಿದ್ದ ಬಸವರಾಜಕಕ್ಕ ಥಾನುಗಟ್ಟಲೆ ಬಟ್ಟೆಯನ್ನು ಹೋಲ್ ಸೇಲ್ ದರದಲ್ಲಿ ಖರೀದಿಸಿ ಮಮ್ಮದನ ಅಂಗಡಿಗೆ ತಲುಪಿಸುತ್ತಿದ್ದ. 

ನಮ್ಮ ಮನೆಯ ಹುಡುಗರ ಹೆಸರನ್ನು ಹೇಳಿದರೆ ಸಾಕು, ಮಮ್ಮದ್ ಮನದಲ್ಲೇ ಮಕ್ಕಳ ಆಕಾರ, ಎತ್ತರ, ದಪ್ಪ ಊಹಿಸಿಕೊಂಡು ಅಂಗಿ ಮತ್ತು ನಿಕ್ಕರಿನ ಅಳತೆಯನ್ನು ಕಿವಿಗೆ ಸಿಕ್ಕಿಸಿಕೊಂಡ ಸೀಸಕಡ್ಡಿ ತೆಗೆದು ಒಂದು ಪುಸ್ತಕದಲ್ಲಿ ಗುರ್ತು ಹಾಕಿಕೊಳ್ಳುತ್ತಿದ್ದ. ಅನಕ್ಷರಸ್ಥನಾದ ಮಮ್ಮದ್ ಹಾಕಿಕೊಂಡ ಆ ಗುರ್ತುಗಳು ಅಕ್ಷರಶಃ ಗುರ್ತುಗಳೇ. ಅವುಗಳಿಗೆ ದೇಶ, ಭಾಷೆ, ಲಿಪಿಗಳ ಹಂಗು ಇಲ್ಲವೇ ಇಲ್ಲ. ಟೇಪಿನಿಂದ ನಮ್ಮ ದೇಹದ ನಿಖರ ಅಳತೆ ತೆಗೆದುಕೊಳ್ಳುವ ಸಂದರ್ಭ ಬಹಳ ಕಡಿಮೆ. ಮಮ್ಮದನ ಕಣ್ಣಳತೆಯ ಅಂದಾಜೇ ಅಂತಿಮ. ಬೆಳೆಯುವ ಹುಡುಗರು ಎಂಬ ಕಾರಣಕ್ಕೆ ಅಳತೆಗೆ ಒಂದಿಂಚು ಹೆಚ್ಚೇ ಇಟ್ಟು ಹೊಲಿಯುತ್ತಿದ್ದರಿಂದ ನಿಕ್ಕರಿಗೆ ಉಡುದಾರ ಸಿಕ್ಕಿಸಿಕೊಳ್ಳುವುದು, ಅಂಗಿಯ ಉದ್ದನೆಯ ತೋಳು ಮಡಚಿಕೊಳ್ಳುವುದು ಅನಿವಾರ್ಯವಾಗಿತ್ತು.

“ಹೋದ ವರ್ಷ ಮಾಡಿದಂಗ ತಡ ಮಾಡಬ್ಯಾಡಪಾ… ಜಾತ್ರೆಗಿನ್ನ ಒಂದ್ವಾರ ಮೊದ್ಲು ಬಟ್ಟೆ ಹೊಲ್ದು ಕೊಡಬೇಕು ನೋಡು. ಹುಡುಗ್ರು ಕಾಯ್ತಿರ್ತಾರ…” ಎಂದು ನಮ್ಮ ಕಕ್ಕ ಹೇಳುವುದು, ಮಮ್ಮದ್ ಹಿಂದಿನ ವರ್ಷದಂತೆಯೇ ಅಂದಿನ ವರ್ಷವೂ ವಿಳಂಬ ಮಾಡುವುದು ಪರಂಪರೆಯ ಭಾಗವಾಗದಂತೆ ಮುಂದುವರಿದಿತ್ತು. ಆಗ ನಮ್ಮೂರೊಳಗೆ ಬರುತ್ತಿದ್ದದ್ದು ಎರಡೇ ಬಸ್ಸುಗಳು. ಬೆಳಗಿನ ಒಂಬತ್ತರ ಬಸ್ಸು ತಪ್ಪಿದರೆ ಸಂಜೆ ನಾಲ್ಕರ ಬಸ್ಸೇ ಗತಿ. ಜಾತ್ರೆ ದಿನ ಬೆಳಿಗ್ಗೆ ನಾವು ಹುಡುಗರೆಲ್ಲಾ ಸಡಗರದಿಂದ ಜಳಕ ಮಾಡಿ ಬಸ್ಸು ನಿಲ್ಲುತ್ತಿದ್ದ ಚೆನ್ನಮ್ಮಜ್ಜಿ ಮನೆ ಹತ್ತಿರ ಮಮ್ಮದ್ ತರುವ ಹೊಸ ಅಂಗಿ ನಿಕ್ಕರುಗಳಿಗೆ ಆಶೆಯಿಂದ ಕಾಯುತ್ತಿದ್ದೆವು. ನಿರ್ದಯಿ ಬಸ್ಸು ಬೇಕಾದ ಮಮ್ಮದನನ್ನು ಬಿಟ್ಟು ಬೇಡದ ಬೇರೆಲ್ಲರನ್ನು ಇಳಿಸಿಹೋದಾಗ ನಮ್ಮ ಮುಖಗಳು ಬೇಸಿಗೆಯ ನಾರಿಹಳ್ಳದಂತೆ ಬತ್ತುವುದು ಮಾಮೂಲು.

ವಾರಿಗೆಯ ಹುಡುಗರೆಲ್ಲಾ ಹೊಸ ಉಡುಪು ಧರಿಸಿ ತೇರು ಬಜಾರಿನಲ್ಲಿ ಸುತ್ತುವುದನ್ನು ಸಪ್ಪಗೆ ನೋಡುತ್ತ ಮನೆಯೊಳಗೆ ಸೇರುತ್ತಿದ್ದ ನಾವು ಅಮ್ಮಂದಿರಿಗೆ ಕಾಟ ಕೊಡುತ್ತಿದ್ದೆವು. ಕೊನೆಗೆ ನಾಲ್ಕು ಗಂಟೆಯ ‘ಊರಳ ಬಸ್ಸು’ ಐದು ಗಂಟೆಗೆ ಬಂದಾಗ ಮತ್ತೆ ಹುರುಪು ಒಗ್ಗೂಡಿಸಿಕೊಂಡು ನಗ್ಗುತ್ತಿದ್ದೆವು. ನಮ್ಮ ಪಾಲಿಗೆ ಜಾತ್ರೆಯ ದಿನ ಮಮ್ಮದ್ ಥೇಟ್ ಸಂತಾಕ್ಲಾಸನಂತೆ ಬಸ್ಸಿನಿಂದ ಇಳಿದು ನಮ್ಮೆಡೆಗೆ ಕೈಬೀಸುವ ದೃಶ್ಯ ನೆನೆದರೆ ನನಗೀಗಲೂ ರೋಮಾಂಚನವಾಗುತ್ತದೆ. ಮುಂದಿನ ಕಾರ್ಯ ಚಕಾಚಕ್. ‘ಇದು ನಂದು ಅದು ನಿಂದು’ ಎಂದು ನಮ್ಮ ನಡುವೆ ಕಚ್ಚಾಟವಾಗಲು ಬಿಡದ ಮಮ್ಮದ್ ಅಂದಾಜಿನ ಮೇಲೆ ಬಟ್ಟೆಗಳನ್ನು ಹಂಚಿಕೊಡುತ್ತಿದ್ದ. ನಮಗೂ ‘ಬೆಳೆಯುವ ಹುಡುಗರು’ ಎಂಬ ಕೋಡು ಮೂಡಿರುತ್ತಿದ್ದರಿಂದ ಅಳತೆ ಮೀರಿದ ಬಟ್ಟೆಗಳು ಅತಿಯಾದ ಕಿರಿಕಿರಿ ಉಂಟು ಮಾಡುತ್ತಿರಲಿಲ್ಲ.

ಹಾಗೆಂದು ಮಮ್ಮದನ ಬಟ್ಟೆ ಹೊಲಿಯುವ ಕುಶಲತೆಯನ್ನು ಅನುಮಾನಿಸಲಾಗದು. ಆತ ಹಳ್ಳಿಗಾಡಿನವರ ಮಿತಿ ಮತ್ತು ಪೇಟೆಯವರ ಗತಿ ಎರಡನ್ನೂ ಸೂಕ್ಷ್ಮವಾಗಿ ಬಲ್ಲವನಾಗಿದ್ದ. ನಾನು ಕಾಲೇಜು ಹಂತದಲ್ಲಿ ಬಳ್ಳಾರಿಯಲ್ಲಿ ಇರುವವರೆಗೆ ‘ನವೀನ್ ಟೈಲರ್’ ಬಳಿಯೇ ಬಟ್ಟೆ ಹೊಲಿಸುತ್ತಿದ್ದೆ. ನಮ್ಮೂರಿನ ಕುರುಬ ಸಮಾಜದ ಕೆಲವು ಹಿರಿಯರು ಹತ್ತಿ ಬಟ್ಟೆಯಲ್ಲಿ ಹೊಲಿದ ವಿಶಿಷ್ಟ ಬಿಳಿ ಉಡುಪುಗಳನ್ನು ಧರಿಸುತ್ತಿದ್ದರು. ಹೊರಗೆ ಎಲ್ಲೂ ಹೊಲಿಗೆ ಕಾಣದಂತೆ ಕಲಾತ್ಮಕತೆಯಿಂದ ಹೊಲಿಯಲಾಗುತ್ತಿದ್ದ ಆ ಬಟ್ಟೆಗಳ ವಿಶೇಷತೆ ಬಗ್ಗೆ ಮಮ್ಮದ್ ಅನೇಕ ಬಾರಿ ನನ್ನಲ್ಲಿ ಪ್ರಸ್ತಾಪಿಸಿ ಕುತೂಹಲ ಹುಟ್ಟಿಸಿದ್ದ. ಅಂತಹ ಕೆಲವು ಮಾದರಿಗಳನ್ನು ಸಂಗ್ರಹಿಸಬೇಕು ಎಂಬ ನನ್ನ ಕನಸು ಕೆಲಸಗಳ ಒತ್ತಡದ ದೆಸೆಯಿಂದ ಹಾಗೇ ಉಳಿಯಿತು. ಆತ ವಡ್ಡು ಎಂಬ ಕುಗ್ರಾಮದಿಂದ ಬಳ್ಳಾರಿ ನಗರ ಸೇರಿ ವೃತ್ತಿ, ಕುಟುಂಬ ಮತ್ತು ಸಮಾಜವನ್ನು ಸರಿದೂಗಿಸಿದ ಪರಿಯ ಹಿಂದೆ ಅಗಾಧ ಪರಿಶ್ರಮವಿದೆ.

1969ರಲ್ಲಿ ನನ್ನ ಅಪ್ಪ ದೂರದ ಕರಜಗಿ ಗ್ರಾಮದಲ್ಲಿ ತೀರಿಕೊಂಡಾಗ ಇನ್ನೂ ಯುವಕನಾಗಿದ್ದ ಮಮ್ಮದ್ ತಾನು ಅನುಭವಿಸಿದ ಸಂಕಟ, ಸಂದಿಗ್ಧವನ್ನು ಕಣ್ಣಿಗೆ ಕಟ್ಟುವಂತೆ ಚಿತ್ರಿಸುತ್ತಿದ್ದ. 2015ರಲ್ಲಿ ಅದೇ ಊರಿನಲ್ಲಿ ನಡೆದ ಅಮ್ಮನ ಮಣ್ಣಿಗೆ ಧಾವಿಸಿದ್ದ. ನನ್ನ ಹೆಂಡತಿ ಮನೆದೇವರಿಗೆ ಹೋಗಬೇಕೆಂದಾಗ ಆಂಧ್ರದ ಗಡಿಯಲ್ಲಿರುವ ಎತ್ತಿನಬೂದಾಳು ಕಟ್ಟೆಬಸವೇಶ್ವರನ ಗುಡಿಗೆ ಕರೆದುಕೊಂಡು ಹೋಗಿದ್ದ. ಐವತ್ತೈದು ವರ್ಷಗಳ ಹಿಂದೆ ಅಲ್ಲಿಯೇ ನಡೆದಿದ್ದ ನನ್ನ ಜವುಳಕ್ಕೂ ಆತ ಸಾಕ್ಷಿ. ಕಳೆದ ವರ್ಷ ನನ್ನ ಮಗಳ ಮದುವೆಗೆ ಅನಾರೋಗ್ಯದಿಂದ ಬರಲಾಗದ್ದಕ್ಕೆ ಕರೆ ಮಾಡಿ ಕಣ್ಣೀರು ಹಾಕಿದ್ದ. ತಪ್ಪು ತಿಳಿವಳಿಕೆಯಿಂದ ಕಳಚಿದ್ದ ರಮೇಶಕಕ್ಕ ಮತ್ತು ಗಿರಿಜಮ್ಮತ್ತೆ ಕುಟುಂಬದೊಂದಿಗಿನ ನಮ್ಮ ಸಂಬಂಧ ಸರಿಹೋದಾಗ ಹೃತ್ಪೂರ್ವಕ ಮೆಚ್ಚಿದವರೆಂದರೆ ಮಮ್ಮದ್ ಮತ್ತು ಜಗಣ್ಣ. ನಾನು ಬಳ್ಳಾರಿಗೆ ಬಂದಾಗ ನನ್ನ ಮಗ ಅನಿಕೇತನಗಾಗಿ ಅವನ ನೆಚ್ಚಿನ ‘ಮಮ್ಮದ್ ತಾತ’ ಪಾಲುಕೋವಾ, ಬೆಂಗಳೂರು ಬೇಕರಿ ಬ್ರೆಡ್, ಅಂಜೂರ ಹಣ್ಣು ತಂದು ಕೈಗಿಡುತ್ತಿದ್ದ.

ಮಮ್ಮದ್ ಮಸೀದಿಗೆ ಹೋಗಿ ನಮಾಜು ಓದುವುದನ್ನು ಎಂದೂ ತಪ್ಪಿಸಿಕೊಂಡವನಲ್ಲ. ರಮಜಾನ್ ಉಪವಾಸ ಮಾಡುವಾಗ ದಿನದ ಹೆಚ್ಚು ಕಾಲ ಮಸೀದಿಯಲ್ಲೇ ಕಳೆಯುತ್ತಿದ್ದುದನ್ನು ಗಮನಿಸಿದ್ದೇನೆ. ಇತ್ತೀಚೆಗೆ ಆರೋಗ್ಯ ಸರಿಯಿರುವ ತನಕ ಸಮಾನ ಮನಸ್ಕ ಗೆಳೆಯರೊಂದಿಗೆ ಅಜ್ಮೀರ್, ಬಂದೆನವಾಜ್ ಮುಂತಾದ ಧಾರ್ಮಿಕ ಸ್ಥಳಗಳಿಗೆ ತೀರ್ಥಯಾತ್ರೆ ಕೈಗೊಳ್ಳುತ್ತಿದ್ದ. ಇಷ್ಟಾಗಿಯೂ ಗ್ರಾಮೀಣರ ಧಾರ್ಮಿಕ ಆಚರಣೆಗಳು ಹೆಚ್ಚುಕಡಿಮೆ ಯಾಂತ್ರಿಕವಾಗಿ ಪಾಲನೆಯಾಗುವುದನ್ನು ನಾವು ಗಮನಿಸಬೇಕು. ಇಂತಹ ಆಚರಣೆಗಳಲ್ಲಿ ಕಠೋರ ಧಾರ್ಮಿಕ ಸಿದ್ಧಾಂತಗಳಿಗಿಂತ ಸಾಂಸ್ಕೃತಿಕ ಶ್ರದ್ಧೆ ಗಾಢವಾಗಿ ಬೆರೆತು ಮೇಲುಗೈ ಸಾಧಿಸಿರುವುದು ಬಹಳ ಮುಖ್ಯ. ಅಂತೆಯೇ ಹಿಂದೂಗಳು ಪೀರಲು ಹಬ್ಬವನ್ನು ಅದ್ದೂರಿಯಾಗಿ ಆಚರಿಸುವುದು, ಆಲೆ ದೇವರಿಗೆ ಕೆಂಪುಸಕ್ಕರೆ ಓದಿಸುವುದು, ಮುಸಲ್ಮಾನ ಸಮುದಾಯದವರು ಹಿಂದೂ ದೇವರಿಗೆ ಕಾಯಿ ಒಡೆಸುವುದು ವಿಶೇಷವಾಗಿ ಕಾಣಿಸುವುದಿಲ್ಲ. ನಾವು ಹುಡುಗರಾಗಿದ್ದಾಗ ಹೊಟ್ಟೆನೋವು ಬಂದರೆ ಆಗಿನ ಕಾಲಕ್ಕೆ ನಮ್ಮೂರಲ್ಲಿ ಮಕ್ಕಾ ಯಾತ್ರೆ ಮಾಡಿಬಂದಿದ್ದ ಏಕೈಕ ವ್ಯಕ್ತಿ ಅಮ್ಮಾಸಾಬ್ ಮಂತ್ರಿಸಿಕೊಡುತ್ತಿದ್ದ ಹರಳುಪ್ಪೇ ಮದ್ದು.

ಸೂಪಾ ಮಮ್ಮದ್ ಕೂಡ ಬಳ್ಳಾರಿ ಮಮ್ಮದನ ಹತ್ತಿರದ ಸಂಬಂಧಿಕ. ಮೂಲ ಹೆಸರು ಮುಹಮ್ಮದ್ ನಬಿ. ಅವರಪ್ಪ ನಬಿಸಾಬ್ ಮಾಕೆಸ್ವಾಮಿ ಕುದುರೆ ಆಗಿದ್ದ. ಅಂದರೆ ಆ ದೇವರನ್ನು ಹೊರುವವ. ನಮ್ಮ ಊರಿನ ಎಲ್ಲಾ ಪೀರಲು ದೇವರುಗಳಿಗೂ ಒಂದೊಂದು ವಿಶಿಷ್ಟ ಸ್ವಭಾವ, ವ್ಯಕ್ತಿತ್ವ. ಹೀರೇದೇವರು ಅತ್ಯಂತ ಶಾಂತ, ಗಂಧದ ದೇವರು ಭಾರೀ ಭಾರ, ಮಾಕೆಸ್ವಾಮಿ ಬಹಳ ಉಗ್ರ ಸ್ವರೂಪದವನು. ಮಾಕೆಸ್ವಾಮಿ ಅಲಂಕಾರವೂ ವಿಶೇಷವಾಗಿರುತ್ತದೆ. ಆತನಿಗೆ ಹರಕೆ ಹೊತ್ತರೆ ತಪ್ಪಿಸುವಂತಿಲ್ಲ. ಆತ ತನ್ನ ಗುಡಿಯ ಕಟ್ಟೆಯಿಂದ ಹಾರಿ, ವೇಗವಾಗಿ ಓಡುವುದು, ಅಲ್ಲಲ್ಲಿ ಸವಾರಿ ಮಾಡುವುದು ನೋಡುವಂತಿರುತ್ತದೆ. ಮಾಕೆಸ್ವಾಮಿ ರಭಸದಿಂದ ವೃತ್ತಾಕಾರವಾಗಿ ಸವಾರಿ ಮಾಡುವಾಗ ಬಣ್ಣಬಣ್ಣದ ಮುಂಡಾಸಗಳು ಮೂಡಿಸುವ ಚಿತ್ತಾರ ಆಕರ್ಷಕ. ಹಾಗಾಗಿ ನನಗೆ ಬಾಲ್ಯದಲ್ಲಿ ಎಲ್ಲಾ ದೇವರುಗಳಿಗಿಂತ ಮಾಕೆಸ್ವಾಮಿ ತುಸು ಹೆಚ್ಚೇ ಅಚ್ಚುಮೆಚ್ಚು, ನನ್ನ ಸ್ವಭಾವಕ್ಕೂ ಹತ್ತಿರ.

ನಬಿಸಾಬ್ ನನ್ನ ಅಪ್ಪನ ಖಾಸಾ ಶಿಷ್ಯ ಆಗಿದ್ದರಿಂದ ನನ್ನ ಅವ್ವನ ಊರಿನಲ್ಲಿಯೂ ಎಲ್ಲರಿಗೆ ಪರಿಚಿತ. ಕರಜಗಿಯಲ್ಲಿ 1962ರಲ್ಲಿ ವರದಾನದಿಗೆ ಮಹಾಪೂರ ಬಂದಾಗ ನಬಿಸಾಬ ಧಾವಿಸಿ ನೆರವಾಗಿದ್ದನಂತೆ. ಹಾಗಾಗಿ ನಮ್ಮ ಅವ್ವನೂರಿಗೆ ಹೋದಾಗ ಆಕೆ ಕೇಳುತ್ತಿದ್ದ ಮೊದಲ ಪ್ರಶ್ನೆ, “ನಬಿಸಾಬ ಹೆಂಗದಾನ…?”. ನಂತರ ಉಳಿದ ಕೆಲಸಗಾರರು, ದನಕರು, ಹೈನದ ಬಗ್ಗೆ ವಿಚಾರಣೆ ನಡೆಸುತ್ತಿದ್ದಳು ಅಪ್ಪಟ ಜವಾರಿ ನೀಲಮ್ಮವ್ವ.

ಸೂಪಾ ಮಮ್ಮದನದು ಬದುಕಿನ ಇನ್ನೊಂದು ದಾರಿ, ಮಾದರಿ. ಆತ ಟೈಲರಿಂಗ್ ಬಿಟ್ಟು ಸೂಪಾ ಸೇರಿದಾಗ ಆತನ ಜೊತೆಗೆ ಬಂದಿದ್ದು ಬಡತನ ಮಾತ್ರ. ಹಲವು ದಶಕಗಳ ಕಾಲ ನಿರಂತರ ಬೆವರು ಸುರಿಸಿ, ಒಂದೊಂದೇ ಇಟ್ಟಿಗೆ ಇಟ್ಟು ಕಟ್ಟಿಕೊಂಡ ಬದುಕು ಈಗ ಭದ್ರವಾಗಿದೆ. ತನ್ನ ಕಡು ಬಡತನದ ಬದುಕನ್ನು ಕೇವಲ ಪರಿಶ್ರಮದಿಂದ ಯಶಸ್ಸಿನ ತೀರ ತಲುಪಿಸಿದ ಮಮ್ಮದ್ ಕೆಲವು ವರ್ಷಗಳ ಹಿಂದೆ ತನ್ನ ಮಗನ ಮದುವೆಯನ್ನು ಕಂಪ್ಲಿ ಪಟ್ಟಣದಲ್ಲಿ ಏರ್ಪಡಿಸಿದ್ದ. ಈ ಅನಕ್ಷರಸ್ಥ ವ್ಯಕ್ತಿ ತನ್ನ ಮೂರೂ ಮಕ್ಕಳನ್ನು ಉನ್ನತ ವಿದ್ಯಾವಂತರನ್ನಾಗಿಸಿದ್ದು ಒಂದು ತಪಸ್ಸೇ ಸರಿ. ಇಡೀ ಮದುವೆ ಒಂದು ಸರಳ ವೇದಿಕೆ ಕಾರ್ಯಕ್ರಮದಂತೆ ಕೆಲವೇ ನಿಮಿಷಗಳಲ್ಲಿ ಮುಗಿದದ್ದು ವಿಶೇಷವಾಗಿತ್ತು. ಶಾದಿಗೆ ಸಂಬಂಧಿಸಿದ ಅನೇಕ ಗಂಭೀರ ವಿಚಾರಗಳನ್ನು ಕುರಿತು ಮೌಲ್ವಿ ಒಬ್ಬರು ಮೈಕ್‌ ಹಿಡಿದು ಸರಳ ಉರ್ದು ಭಾಷೆಯಲ್ಲಿ ಉಪನ್ಯಾಸ ನೀಡಿದ್ದು ಪರಿಣಾಮಕಾರಿಯಾಗಿತ್ತು. 

ಹಿಂದೆ ವೈವಾಹಿಕ ಸಂಬಂಧ ಬೆಳೆಸುವಾಗ ಪ್ರಮುಖವಾಗುತ್ತಿದ್ದ ‘ಖಾಂದಾನ್‌’ ಬದಲು ಈಗ ವಧುವರರ ವಿದ್ಯಾಭ್ಯಾಸ ಪರಿಗಣನೆಗೆ ಬರುತ್ತಿರುವುದನ್ನು ಶ್ಲಾಘಿಸುತ್ತ ವರದಕ್ಷಿಣೆ ಇಸ್ಲಾಂಗೆ ಸಮ್ಮತವಲ್ಲ ಎಂಬುದನ್ನೂ ಒತ್ತಿಹೇಳಿದರು ಮೌಲ್ವಿ. ತನ್ನ ಇಬ್ಬರು ಮಕ್ಕಳ ಮದುವೆಯಲ್ಲೂ ವರದಕ್ಷಿಣೆ ಪಡೆದಿಲ್ಲವೆಂದು ಖಾತರಿಪಡಿಸಿದ ಮಮ್ಮದ್ ಮೆಚ್ಚುಗೆಗೆ ಪಾತ್ರನಾದ. ಅಲ್ಲಿ ಉಡುಗೊರೆಗಳ ಆರ್ಭಟವಿರಲಿಲ್ಲ. ನಗದು ರೂಪದಲ್ಲಿ ಮುಯ್ಯ (ಆಹೇರ) ಪಡೆಯುವುದನ್ನು ನಿಲ್ಲಿಸಿರುವುದಾಗಿ ಹೆಮ್ಮೆಯಿಂದ ಹೇಳಿದ ಬಷೀರ್‌. ಬಹಳ ವರ್ಷಗಳ ನಂತರ ಈ ಮದುವೆ ನೆಪದಲ್ಲಿ ನಮ್ಮೂರಿನ ಹಲವಾರು ಆತ್ಮೀಯ ಮುಖಗಳನ್ನು ಒಂದೆಡೆ ಕಾಣುವ ಅವಕಾಶ ನನ್ನದಾಗಿತ್ತು. ಮಹ್ಮದ್‌ ಷರೀಫ್‌, ಬಳ್ಳಾರಿ ಮಹ್ಮದ್‌, ಮಾಬುಸಾಬ್‌, ಮಿಲಿಟರಿ ಅಜೀಜ್‌, ಅನ್ವರ್‌, ನಜೀರ್‌, ಅಬ್ಬಾಸ್‌, ಇದ್ರೀಸ್‌, ನನ್ನ ಖಾಸಾ ದೋಸ್ತ್‌ ಖಾಜಾ… ಎಲ್ಲರೂ ಸೇರಿದ್ದರು. ಇವರೆಲ್ಲಾ ನನ್ನ ಬಾಲ್ಯದ ಬದುಕಿಗೆ ಬೆಸೆದುಕೊಂಡವರು. ಮಾತಿನಲ್ಲಿ ಹಳೆಯ ನೆನಪುಗಳು ತೇಲಿ ತೇಲಿ ಬಂದವು. ಇಂತಹ ಆಪ್ತ ಘಳಿಗೆಗಳು ಬದುಕಿಗೆ ಚೈತನ್ಯದಾಯಕ. 

ಇವರ ನಿಷ್ಕಳಂಕ ಪ್ರೀತಿ ಎದುರು ಬೇರೆಲ್ಲಾ ಸುಳ್ಳು!

‍ಲೇಖಕರು Admin

April 5, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: