ಅಲೈ ಹಬ್ಬದ ರಸಮಯ ನೆನಪುಗಳು
ಟಿ ಎಸ್ ಗೊರವರ
ನನ್ನ ಬಾಲ್ಯ ಕಾಲದ ನೆನಪುಗಳಲ್ಲಿ ಯಾವತ್ತೂ ಬಾಡದ ಹೂವಿನಂತಿರುವ, ಪರಿಮಳದ ಘಮ ಸೂಸುತ್ತಲೇ ಇರುವ ನೆನಪೆಂದರೆ ಅಲೈ ಹಬ್ಬ. ಮೊಹರಂ ಹಬ್ಬಕ್ಕೆ ನಮ್ಮೂರಲ್ಲಿ ಅಲೈ ಹಬ್ಬ ಅಂತೀವಿ. ಈ ಹಬ್ಬ ಬಂದ್ರೆ ನಮ್ಮೂರು ರಾಜೂರು ಇನ್ನಿಲ್ಲದಂತೆ ರಂಗುಗೊಳ್ಳುತ್ತದೆ. ಶ್ಯಾಣಬಸಪ್ಪ, ದುರ್ಗಮ್ಮನ ಜಾತ್ರೆಗಳಿಗಿಂತ ಸಂಭ್ರಮ ನೂರ್ಮಡಿಗೊಳ್ಳುತ್ತದೆ. ಊರ ಶ್ರೀಮಂತರ ಹೊಲಗಳಲ್ಲಿ ಕೂಲಿ ದುಡಿದ ಪಗಾರದಲ್ಲಿ ಇದ್ದ ಸಾಲ ತೀರಿಸಲಾಗಿದೆ ಬೇಸತ್ತು ಸಾಲ ತೀರಿಸಲೆಂದೇ ಗೋವಾ, ಮಂಗಳೂರು ಮತ್ತಿತರ ಕಡೆ ವರ್ಷಂಪೂತರ್ಿ ದುಡಿಯಲು ಹೋದವರು, ಇನ್ನೆಲ್ಲೆಲ್ಲೋ ಲಾರಿ ಹೊಡೆಯುವ ಡ್ರೈವರ್ಗಳು, ಬ್ಯಾರೆ ಊರುಗಳಲ್ಲಿ ನೌಕರಿ ಮಾಡುವವರು ಅಲೈ ಹಬ್ಬಕ್ಕೆಂದು ಊರಿಗೆ ಹಾಜರಿ ಹಾಕುತ್ತಾರೆ. ಅಲೈ ಹಬ್ಬದ ನೆಪದಲ್ಲಿ ತಮ್ಮ ಕರುಳ ಬಳ್ಳಿಗಳ ಜೊತೆ ಬೆರೆಯುತ್ತಾರೆ. ಚಡ್ಡಿ ದೋಸ್ತರೊಂದಿಗೆ ಬಾಲ್ಯ ತಡವಿಕೊಂಡು ಉಲ್ಲಸಿತಗೊಳ್ಳುತ್ತಾರೆ. ಬದುಕಿನ ಕೊನೆಯ ಕ್ಷಣದವರೆಗೂ ಬೆಂಬಿಡದೆ ಆತುಕೊಳ್ಳುವ ಸಂಕಷ್ಟಗಳನ್ನು ಮರೆತು ನಲಿಯುತ್ತಾ ಹಬ್ಬ ಆಚರಿಸುತ್ತಾರೆ.
ಅಲೈ ಹಬ್ಬ ಇನ್ನೂ ಮೆಲ್ಲಗೆ ಅಂಬೆಗಾಲಿಡುತ್ತಾ ತಿಂಗಳು ದೂರ ಇರುವಾಗಲೇ ಊರು ಹಬ್ಬಕ್ಕೆ ತಯಾರುಗೊಳ್ಳುತ್ತಿತ್ತು. ಸಂಜೆಯಾದರೆ ಸಾಕು. ಊರಿನ ಎಲ್ಲಾ ಓಣಿಗಳಲ್ಲೂ ಜಡ್ಡಿ ನಕ ಜಡ್ಡಿ ನಕ ಹಲಗೆಯ ಸದ್ದು. ಆಗಲೇ ಹೆಜ್ಜಿ ಆಡಲು ಸುರು. ನನ್ನ ವಾರಿಗೆಯ ಹುಡುಗರೆಲ್ಲಾ ಮಸಾರಿ ಹೊಲಗಳ ಬದುವಿನಲ್ಲಿ ಬೆಳೆಯುವ ಮಸವಾಳ ಗಿಡದ ಸಬೂಳು ಕ್ವಾಲಿ ಕಡಕೊಂಡು ತಂದು ಅದಕ್ಕೆ ಜಾಲಿ ತೊಗಟಿ ಸುತ್ತಿ ಸುಟ್ಟು, ಸುತ್ತಿದ ಜಾಲಿ ತೊಗಟಿ ಹೆಜ್ಜಿ ಗುಣಿಗೆ ಅಚ್ಚೊತ್ತುವಂತೆ ಚೆಂದಗೊಳಿಸುತ್ತಿದ್ದೆವು.
ರಾತ್ರಿ ನಾವು ಹಲಗೆಯ ಲಯಕ್ಕೆ ತಕ್ಕಂತೆ ಹೆಜ್ಜಿ ಆಡುವುದನ್ನು ಅಂಗಳದಲ್ಲಿ ಕುಳಿತ ಓಣಿ ಮಂದಿ ಕಣ್ತುಂಬಿಕೊಳ್ಳುತ್ತಿದ್ದರು. ಆಸ್ಯಾಡುವ ಮುದಿಕ್ಯಾರು ‘ಲೋ ಗೆಣಿಯ. ಹೀಂಗ ಹೆಂಗ್ಸ ಆಡಿದ್ಯಂಗ ಆಡ್ತಿಯಲ. ನಾಳೆ ನಿನ್ನ ಕೂಡ ಹ್ಯಾಂಗ ಬಾಳೆ ಮಾಡೋದು…’ಎಂದು ನಕಲಿ ಮಾಡುತ್ತಿದ್ದರು. ಚಂದ ಕಡ್ತ ಕೊಟ್ಟು ಕುಣಿತ ಹಾಕಿದರೂ ಅವರು ಆಸ್ಯಾಡುತ್ತಿದ್ದರು. ಕೆಲವು ಬೆರಕಿ ಹುಡುಗರು ಮುದುಕಿಯರಿಗೆ, ಆಸ್ಯಾಡುವ ಅತ್ತಿಯರಿಗೆ ‘ಏ ಹುಡುಗಿ ನೋಡಿಲ್ಲೆ ಹ್ಯಾಂಗ ಆಡ್ತೀನಿ. ನಿಮ್ಮ ಹಿರಿಯ ಅಂದ್ರ ಏನಂತ ತಿಳ್ಕೊಂಡಿ…’ ಅಂತ ಹುಬ್ಬೇರಿಸಿ ತಿರುಗುಬಾಣ ಬಿಡುತ್ತಿದ್ದರು. ಹೀಂಗ ಅವರೊಂದಿಗೆ ಆಸ್ಯಾಡುತ್ತ ಹೆಜ್ಜಿ ಮತ್ತಷ್ಟು ಕಳೆಗಟ್ಟುತ್ತಿತ್ತು.
ಹೆಜ್ಜಿ ಆಡುವುದರೊಳಗೆ ದಿನಗಳು ಒಂದೊಂದೆ ಜಾರಿ ಹೋದದ್ದೇ ಗೊತ್ತಾಗುತ್ತಿರಲಿಲ್ಲ. ಅಮವಾಸೆ ಹೋದ ಮೂರನೇ ದಿನಕ್ಕೆ ಆಕಾಶದಲ್ಲಿ ಚಂದಪ್ಪ ಬೆಳ್ಳಗೆ ನಗುತ್ತಿದ್ದ. ಈ ಚಂದಪ್ಪ ಕಂಡ ದಿನವೇ ಗುದ್ದಲಿ ಬೀಳುತ್ತದೆ. ಗುದ್ದಲಿ ಬೀಳುವುದೆಂದರೆ ಮಸೂತಿ ಎದುರಿಗೆ ಅಲಾಯಿ ಕುಣಿ ತೆಗೆಯುವುದು. ಅಲಾಯಿ ಕುಣಿ ತೆಗೆದ ಐದನೇ ದಿನದ ರಾತ್ರಿ ಅಕ್ಕಸಾಲಿಗರ ಮನೆಯಲ್ಲಿ ಇಟ್ಟಿರುತ್ತಿದ್ದ ಪಂಜರದ ದೇವ್ರನ್ನು ತಂದು ಆಯಾ ದೇವರ ಕೋಲಿಗೆ ಪಂಜರ ಜೋಡಿಸಿ ಹರೆಯದ ಹುಡುಗರು, ಹಿರಿಯರು ಕೂಡಿ ಉಡುಗೊರೆ ಉಡಿಸುತ್ತಾರೆ. ಮೊದ ಮೊದಲು ಎಲ್ಲ ದೇವ್ರು ಮಕ್ಕಳ ದೇವ್ರು. ಈ ದೇವ್ರು ಕುಂತ ಎರಡನೇ ದಿನಕ್ಕೆ ಮತ್ತೆ ಉಡುಗೊರೆ ಉಡಿಸುತ್ತಾರೆ. ಆಗ ಎರಡು ಮಕ್ಕಳ ದೇವ್ರನ್ನು ಹೊರತುಪಡಿಸಿ ಉಳಿದವೆಲ್ಲ ದೊಡ್ಡ ದೇವರಾಗುತ್ತವೆ.
ನಮ್ಮೂರಲ್ಲಿ ಎರಡು ಮಸೂತಿಗಳಿವೆ. ದೊಡ್ಡ ಮಸೂತಿ ಮತ್ತು ಸಣ್ಣ ಮಸೂತಿ. ಎರಡೂ ಮಸೂತಿಗಳಲ್ಲಿ ಅಲೈ ದೇವರು ಕೂಡುತ್ತವೆ. ದೊಡ್ಡ ಮಸೂತಿಯಲ್ಲಿ ಹಿರೇ ದೇವ್ರು, ಗಂಗಾ ದೇವ್ರು, ಬೀಬಿ ಫಾತೀಮಾ, ಹಾರ್ಕಿ ದೇವ್ರು, ಮುರ್ಗಿ ದೇವ್ರು ಮತ್ತು ಹಸೇನಿ-ಹುಸೇನಿ ಎಂಬ ಎರಡು ಮಕ್ಕಳ ದೇವ್ರು ಹೀಗೆ ಎಂಟತ್ತು ದೇವ್ರನ್ನು ಕುಂದರಿಸುತ್ತಾರೆ. ಸಣ್ಣ ಮಸೂತಿಯಲ್ಲೂ ಚೆಂದಪ್ಪ ದೇವ್ರು, ವಾರಿಕಲ್ಲ ದೇವ್ರು, ಈಳಗೇರ ದೇವ್ರು ಹೀಗೆ ಐದಾರು ದೇವ್ರನ್ನು ಕುಂದರಿಸುತ್ತಾರೆ.
ಮಜಕೂರ ಅಂದ್ರೆ ಈ ಎಲ್ಲಾ ದೇವರುಗಳ ಕುದುರೆ ಮುಸುಡ್ರಿಗಿಂತ ಹೆಚ್ಚಾಗಿ ಹಿಂದೂಗಳ ಮೈಮ್ಯಾಲೆ ಬರ್ತಾವೆ. ಹಿಂದೂಗಳೇ ಈ ದೇವ್ರನ್ನು ಹೊರೋದು. ಅಲೈ ಹಬ್ಬದಲ್ಲಿ ಮುಸುಡ್ರು ನೆಪ ಮಾತ್ರ. ಈ ಹಬ್ಬವನ್ನು ನಮ್ಮೂರಲ್ಲಿ ಊರಂತ ಊರ ಎಲ್ಲ ಜನ ಸೇರಿ ಆಚರಿಸ್ತಾರೆ. ಊರ ನಾಲಗೆಯಲ್ಲಿ ಎಲ್ಲ ದೇವರುಗಳ ಬಗ್ಗೆ ಕೆಲ ದಂತಕತೆಗಳು, ಲೀಲೆಗಳು ಚಾಲ್ತಿಯಲ್ಲಿವೆ. ಇವು ನಮ್ಮಲ್ಲಿ ಆ ದೇವರುಗಳ ಬಗ್ಗೆ ಇನ್ನಿಲ್ಲದ ಭಯ-ಭಕ್ತಿ ಮೂಡಿಸುತ್ತಿದ್ದವು.
***
ಅಲೈ ಹಬ್ಬ ಅಂದ್ರೆ ಹುಲಿಸೋಗುಗಳ ಚಿತ್ರಣ ತನ್ನಿಂದ ತಾನೇ ಕಣ್ಮುಂದೆ ಸುಳಿದು ಹೋಗುತ್ತದೆ. ಹುಲಿಯಂತೆ ಮೈತುಂಬಾ ಪಟ್ಟೆ ಪಟ್ಟೆ ಬಣ್ಣ ಹಚ್ಚಿಕೊಂಡ ಹುಲಿಸೋಗುಗಳು ಹಲಗೆಯ ಜಡಿ ಜಡಿನಕ ಜಡ್ಡ್ಯಕ… ತಾಳಕ್ಕೆ ತಕ್ಕಂತೆ ಕುಣಿಯುವುದನ್ನು ನೋಡುವುದೇ ಒಂದು ಪರಮ ಭಾಗ್ಯ. ನೋಡಿದವರಿಗೆ ತಾವೂ ಹಾಗೆ ಕುಣಿಯಬೇಕು ಎನಿಸುವಂತೆ ಬಾಳ ಹುರುಪಿನಿಂದ ಕುಣಿಯೋರು. ಊರಿನ ಎಲ್ಲ ಮನೆಗಳ ಅಂಗಳದಲ್ಲಿ ಕುಣಿದು ಆಯಾ ಮನೆಯವರು ನೀಡಿದ ಜ್ವಾಳ, ರೊಕ್ಕ ತಗೊಂಡು ಸಂತೃಪ್ತಗೊಳ್ಳುತ್ತಿದ್ದರು. ಕೆಲವರು ತಮ್ಮ ಕೂಸನ್ನು ಹುಲಿಸೋಗಿನ ಕೈಯಲ್ಲಿ ಕೊಡುತ್ತಿದ್ದರು. ಆಗ ಹುಲಿಸೋಗು ಕೂಸನ್ನು ಗಾಸಿಬಿಸಿ ಮಾಡದೆ ಹಗೂರಾಗಿ ಹಿಡ್ಕೊಂಡು ಯಾಡು ಮೂರು ಸುತ್ತು ಕುಣಿಯುತ್ತಿತ್ತು. ಹೀಗೆ ಹುಲಿ ಕೂಸು ಎತ್ತಿಕೊಂಡು ಆಡಿಸಿದರೆ ಕೂಸಿಗೆ ಆಯುರಾರೋಗ್ಯ ವೃದ್ಧಿಸುತ್ತದೆ ಎನ್ನುವ ಬಲವಾದ ನಂಬಿಕೆ ಚಾಲ್ತಿಯಲ್ಲಿದೆ.
ನಮ್ಮೂರಲ್ಲಿ ಈ ಹುಲಿಸೋಗು ಹಾಕುವವರು ಮಾದರು, ಲಂಬಾಣಿಗರು ಮಾತ್ರ. ಉಳಿದ ಯಾವ ಕೋಮಿನವರೂ ಹುಲಿಯಾಗುತ್ತಿರಲಿಲ್ಲ. ಮಾದಿಗರು ಅಥವಾ ಲಂಬಾಣಿಯ ನಮ್ಮ ವಾರಿಗೆಯ ಹುಡುಗರು ಹುಲಿಸೋಗು ಹಾಕಿ ಕುಣಿಯುವುದನ್ನು ನೋಡಿ, ನಾನು ಕುರುಬರ ಹುಡುಗನಾಗದೇ ಮಾದರ, ಲಂಬಾಣಿಗರ ಹುಡುಗನಾಗಿ ಹುಟ್ಟಬೇಕಿತ್ತು ಅಂತ ಅನಿಸುತ್ತಿತ್ತು. ಅಳ್ಳೊಳ್ಳಿ ಬಳ್ಳೊಳ್ಳಿ ಆಗುವವರೂ ಇವರೇ. ಈ ಅಳ್ಳೊಳ್ಳಿ ಬಳ್ಳೊಳ್ಳಿ ಥೇಟು ಜೋಕರ್ನಂತೆ ಕಾಣುತ್ತಾನೆ. ಮುಖ, ಮೈಗೆಲ್ಲಾ ಮಸಿ ಬಡ್ಕೊಂಡು, ನಡುವಿಗೆ ಎತ್ತಿನ ಕೊಳ್ಳಿಗೆ ಕಟ್ಟುವ ಗೆಜ್ಜಿ ಸರದ ಗಂಟೆ ಕಟ್ಟಿಕೊಂಡು, ಮಡಿಚಿದ ರಟ್ಟನ್ನು ರೂಲು ಕಟಿಗೆಯಂತೆ ಹಿಡಿದು ನಿಂತಲ್ಲಿ ನಿಲ್ಲದೆ ಆ ಕಡೆ ಈ ಕಡೆ ಓಡಾಡುತ್ತ, ಅವರಿವರ ಮನೆಯಲ್ಲಿ ನೀಡಿಸಿಕೊಳ್ಳುತ್ತಾ ಹೊರಟರೆ ಆ ಗಂಟೆ ಗಳ್ಳಂಗಳ್ಳ ಗಳಂಗಳ್ಳ ದನಿ ಮಾಡೋದು. ನಾವೆಲ್ಲಾ ಹುಡುಗರು ಗುಂಪಾಗಿ ಈ ಅಳ್ಳೊಳ್ಳಿ ಬಳ್ಳೊಳ್ಳಿ ಬೆನ್ನು ಬಿದ್ದು ಸಿಕ್ಕಾಪಟ್ಟೆ ಕಾಡಿಸ್ತಾ ಇದ್ವಿ. ನಮ್ಮ ಕಾಟಕ್ಕೆ ಬೇಸತ್ತ ಅಳ್ಳೊಳ್ಳಿ ನಮ್ಮೆನ್ನೆಲ್ಲಾ ಒಂದಿಷ್ಟು ದೂರ ಅಟ್ಟಿಸಿಕೊಂಡು ಬರುತ್ತಿದ್ದ. ಹಾಗೆ ಅಟ್ಟಿಸಿಕೊಂಡು ಬಂದಾಗ ಸಿಕ್ಕವನ ತಲೆಗೆ ಕೋಲಿನಂತ ರಟ್ಟಿನಿಂದ ಮೆಲ್ಲಗೆ ತಟ್ಟುತ್ತಿದ್ದ. ಹೀಗೆಲ್ಲಾ ಆದರೂ ಕಾಡಿಸುವುದು ಮತ್ತೆ ಮತ್ತೆ ನಡದೇ ಇರುತ್ತಿತ್ತು.
ಮಧ್ಯಾಹ್ನ ಜಲ ಜಲ ಸುರಿಯುವ ಬಿಸಿಲೊತ್ತಿನಲ್ಲಿ ಓಣಿಯೊಳಗೆ ಮುದುಕ-ಮುದುಕಿಯರು, ನಮ್ಮಂತ ಸಣ್ಣ ಹುಡುಗರನ್ನು ಹೊರತುಪಡಿಸಿ ಬೇರ್ಯಾರೂ ಇರುತ್ತಿರಲಿಲ್ಲ. ಅವರೆಲ್ಲ ದುಡಿಯಲು ಹೊಲಕ್ಕೆ ಹೋಗಿರುತ್ತಿದ್ದರು. ಯಾರಾದರೂ ಒಬ್ಬ ದೋಸ್ತ ತಗಡಿನ ಡಬ್ಬಿಯನ್ನು ಹಲಗೆಯಂತೆ ಕಟಿಗೆಯಿಂದ ಬಾರಿಸುತ್ತಿದ್ದ. ಆ ಡಬ್ಬಿಯ ತಾಳಕ್ಕೆ ತಕ್ಕಂತೆ ಹುಡುಗರೆಲ್ಲ ಹುಲಿಯಂತೆ ಕುಣಿದು, ಹುಲಿಯಾಗಬೇಕೆನ್ನುವ ನಮ್ಮೆದೆಯಾಳದ ಹೆಬ್ಬಯಕೆಯನ್ನು ಈಡೇರಿಸಿಕೊಳ್ಳುತ್ತಿದ್ದೆವು. ಸಂಜೆಯಾದರೆ ದೊಡ್ಡ ಮಸೂತಿ ಮುಂದೆ ಹಾಜರಾಗುತ್ತಿದ್ದೆವು. ಹುಡುಗರು, ಹುಡುಗಿಯರ ಭೇದವಿಲ್ಲದೆ ‘ಗಂಡ ಹೇಂತಿ ಸಪ್ಪಳ, ಮ್ಯಾಳಗಿ ಮ್ಯಾಗ ಹಪ್ಪಳ…, ಗಂಗಾವತಿ ತೇರು ಬಿಂದಿಗ್ಯಾಗ ಬೇರು…, ಗ್ವಾಡಿ ಮ್ಯಾಗ ಮಸಿ ಮಾಸ್ತರ ಸೊಸಿ…, ಹಗೇದಾಗ ಹಾವು ಬಡಿಬ್ಯಾಡ ಮಾವ…, ಅಲೈ ಬುಲೈ ಆಡೋನು ಬಾ ಅಮ್ಮನ ಕುಲೈ ಜಗ್ಗೋನು ಬಾ…’ ಎಂದು ಒಗಟಿನಂತ ಹಾಡುಗಳನ್ನು ಊರಿನ ಕಿವಿಗೆಲ್ಲಾ ಕೇಳುವಂತೆ ಜೋರಾಗಿ ಹೇಳುತ್ತಾ ಅಲಾಯಿ ಬುಲಾಯಿ ಆಡುತ್ತಿದ್ದೆವು.
ದೇವರು ಕುಂತ ಎರಡನೇ ದಿನ ಗಂದದ ರಾತ್ರಿ. ಈ ದಿನ ಸಣ್ಣ ಮಸೂತಿಯಲ್ಲಿ ವಾರಿಕಲ್ಲ ದೇವ್ರು, ದೊಡ್ಡ ಮಸೂತಿಯಲ್ಲಿ ಗಂಗಾ ದೇವ್ರು ಏಳುತ್ತಿದ್ದವು. ಮೂರನೇ ದಿನ ಸಂದಲರಾತ್ರಿ. ಎರಡೂ ಮಸೂತಿಯಲ್ಲಿ ಎರಡು ದೇವ್ರು ಏಳುತ್ತಿದ್ದವು. ನಾಲ್ಕನೇ ದಿನ ಕತ್ತಲರಾತ್ರಿ. ಅದು ದೇವರು ಕೂಡುವ ಕೊನೆಯ ರಾತ್ರಿ. ಅವತ್ತು ರಾತ್ರಿ ಹೆಚ್ಚೂ ಕಡಿಮೆ ಊರಿನ ಎಲ್ಲರೂ ಸಕ್ಕರೆ ಹೋಸುತ್ತಿದ್ದರು. ಮಸೂತಿಯೊಳಗೆ ಸಕ್ಕರೆ ಹೋಸಿ ಹೊರಗೆ ಬಂದಾಗ ಹೊರಗಿರುವ ನಮ್ಮಂತ ಹುಡುಗರಾದಿಯಾಗಿ ಎದುರಿಗೆ ಬಂದವರಿಗೆ, ಕೇಳಿದವರಿಗೆ ಬೆಲ್ಲ, ಸಕ್ಕರೆ ಕೊಡುತ್ತಿದ್ದರು. ನಮಗೆ ಬೆಲ್ಲ ತಿಂದೂ ತಿಂದು ಸಾಕಾಗೋದು.
ಅವತ್ತು ಸಂಜೆಯಿಂದಲೇ ದೇವರು ಮೈಮ್ಯಾಲೆ ಬರುವುದು ಸುರುವಾಗುತ್ತಿತ್ತು. ಅಲೈ ಕುಣಿಯಲ್ಲಿ ಆಳೆತ್ತರ ಒಟ್ಟಿದ ಕಟ್ಟಿಗೆಗೆ ಹಚ್ಚಿದ ಬೆಂಕಿ ದಿಂಗು ದಿಂಗು ಉರಿಯುತ್ತಿತ್ತು. ಮೊದಲು ಮಕ್ಕಳ ದೇವ್ರ ಕುದರೆ ಬರ್ತಾ ಇತ್ತು. ಅವತ್ತು ಕತ್ತಲು ರಾತ್ರಿಯ ಸಂಜೆ ಹೊತ್ತು. ಅಲೈ ಕುಣಿಯಲ್ಲಿ ಇಷ್ಟೆತ್ತರ ಹಾಕಿದ್ದ ದಪ್ಪ ಕಟಗಿ ಉರಿಯತೊಡಗಿದ್ದವು. ಅದರ ಉರಿಯ ಬೆಳಕು ಸುತ್ತೆಲ್ಲ ಮಾರು ಎರಡು ಮಾರು ದೂರದಷ್ಟು ಚೆಲ್ಲಿಕೊಂಡಿತ್ತು. ವಾರಿಗೆಯ ಹುಡುಗರು, ಊರ ಜನ ಮಕ್ಕಳ ದೇವ್ರು ಬರುವ ದಾರಿಯನ್ನು ಕುತೂಹಲದ ಕಣ್ಣಿಂದ ನಿರೀಕ್ಷಿಸುತ್ತಾ, ಅಲೈ ಕುಣಿಯ ಸುತ್ತ ಜಮೆಗೊಂಡಿದ್ದೆವು. ನೋಡ ನೋಡುತ್ತಲೇ ಮಕ್ಕಳ ದೇವ್ರು ತೂರಾಡುತ್ತಾ ಬಂದು ಉರಿಯುವ ಅಲೈ ಕುಣಿಯೊಳಗೆ ಹಾರಿತು. ನಮಗೆಲ್ಲ ಸೋಜಿಗ. ಉರಿಯಲ್ಲಿ ಜಿಗಿದಾಡಿದ್ದರೂ ಮಕ್ಕಳ ದೇವ್ರು ಹೊರುವ ವ್ಯಕ್ತಿಯ ಧೋತರ, ಅಂಗಿ ಯಾವುದಕ್ಕೂ ಇಷ್ಟೇ ಇಷ್ಟೂ ಬೆಂಕಿಯ ಕಿಡಿಯೂ ತಾಗಿರಲಿಲ್ಲ.
ಅವತ್ತು ರಾತ್ರಿಯೂ ಇಂತಹುದೇ ಇನ್ನೊಂದು ಘಟನೆ. ಹಿರೇ ದೇವ್ರು ಹೊರುವವನಿಗೆ ಯಾರೋ ಆತನಿಗೆ ದೇವ್ರು ಬರುವುದಿಲ್ಲ ಎಂದು ಪುಕಾರು ಹಬ್ಬಿಸಿದರು. ಸರಿ, ರಾತ್ರಿ ಅಲೈ ಕುಣಿಯ ತುಂಬಾ ಬೆಂಕಿ ಮಾಡಿ ಅದರಲ್ಲಿ ಕೆಂಪಗೆ ಕಬ್ಬಿಣದ ಇರಸು ಕಾಯಿಸಿ ಅದನ್ನು ಹಿರೇ ದೇವ್ರು ಹೊರುವ ವ್ಯಕ್ತಿ ಎತ್ತಬೇಕು. ಬೆಂಕಿ ಕಾದ ಇರಸನ್ನು ಎತ್ತದಿದ್ದರೆ ಹಿರೇ ದೇವ್ರನ್ನು ಈ ಸಲದಿಂದ ಕೊಡೋದು ಬ್ಯಾಡವೆಂದು ಹಿರಿಯರು ತೀಮರ್ಾನ ಕೈಗೊಂಡರು. ಊರೆಲ್ಲ ಹಿರೇ ದೇವ್ರು ಹೊರುವ ವ್ಯಕ್ತಿ ಇರಸು ಎತ್ತುವುದನ್ನು ಕಣ್ತುಂಬಿಕೊಳ್ಳಲು ದೊಡ್ಡ ಮಸೂತಿ ಮುಂದೆ ನೆರೆದಿತ್ತು. ಸಣ್ಣ ಹುಡುಗರಾದ ನಾವು ಭಯ-ಭಕ್ತಿಯಿಂದ ಅಲೈ ಕುಣಿಯ ಹತ್ತಿರ ನಿಂತಿದ್ದೆವು. ಅಲೈ ಕುಣಿ ತುಂಬಾ ಬೆಂಕಿ. ಅದರಲ್ಲಿ ಇರಸು ಕಾದು ಕೆಂಡವಾಗಿ ಬೆಂಕಿಯ ಜೊತೆ ಒಂದಾಗಿತ್ತು. ಹೀಂಗ ಕಾದ ಇರಸನ್ನು ಹಿರೇ ದೇವ್ರು ಅದ್ಹ್ಯಾಂಗೆ ಎತ್ತುವುದೋ ಎಂಬ ಕಳವಳ ಎಲ್ಲರೊಳಗೆ. ರಾತ್ರಿ ಹನ್ನೆರಡರ ಹೊತ್ತು. ಎಲ್ಲರೂ ಕಾತುರದಿಂದ ಹಿರೇದೇವ್ರ ಕುದರೆ ಬರುವುದನ್ನು ಕಾಯುತ್ತಿರುವಾಗಲೇ ಹಿರೇದೇವ್ರು ಹಾರಾಡುತ್ತಾ ಬಂದು ಅಲೈ ಕುಣಿಯ ಬೆಂಕಿಯಲ್ಲಿ ಒಂದೆರಡು ಸಲ ಹಾರಾಡಿ ಲಿಂಬಿಹಣ್ಣು ಕೇಳಿತು. ಯಾರೋ ಮಸೂತಿಯೊಳಗಿಂದ ತಂದು ಕೊಟ್ಟರು. ಲಿಂಬೆಹಣ್ಣು ಕಡಿದು ಆ ಕಡೆ ಬೀಸಾಕಿ ಇನ್ನೇನು ಮಸೂತಿ ಕಟ್ಟಿ ಹತ್ತಿ ಹಿರೇದೇವ್ರ ಕೋಲು ಹಿಡಿಯಬೇಕೆನ್ನುವಾಗ ಹಿರಿಯರು ತಡೆದು ‘ನಿನ್ಗ ಮೈಯಾಗ ಹಿರೇ ದೇವ್ರ ಕುದುರಿ ಬರುತ್ತ ಅನ್ನೋದು ನಮಗ ಖಬುಲಾಗಬೇಕಾದ್ರ ಅಲೈ ಕುಣಿಯಾಗಿನ ಇರಸು ಎತ್ತಿ ಹೊರಗಡೆ ಒಗೀಬೇಕು. ಅವಾಗ ನಾವು ಕೋಲು ಹಿಡಿಸಿಕೊಡ್ತಿವಿ…’ ಅಂದರು.
ಹಿರೇದೇವ್ರ ಮೈಯಲ್ಲಿ ಮತ್ತಷ್ಟು ರೋಷ ಉಕ್ಕಿತು. ಸೀದಾ ನಿಗಿ ನಿಗಿ ಬೆಂಕಿ ಕೆಂಡ ತುಂಬಿರುವ ಅಲೈ ಕುಣಿಯಲ್ಲಿ ಇಳಿದ. ನಾವೆಲ್ಲ ಉಸಿರು ಬಿಗಿ ಹಿಡಿದುಕೊಂಡು, ಬಿಟ್ಟ ಕಣ್ಣು ಬಿಟ್ಟಂತೆ ನೋಡತೊಡಗಿದ್ದ್ದೆವು. ಹಿರೇದೇವ್ರು ನೀರೊಳಗೆ ನಿಂತಂತೆ ಆರಾಮಾಗಿ ನಿಂತು ತನ್ನೆರಡೂ ತೋಳನ್ನು ಏರಿಸಿ ಇರಸನ್ನು ಒಣ ಕಟಗಿ ಹಿಡಿದಂತೆ ಹಿಡಿದು ಆ ಕಡೆ ಬೀಸಾಕಿತು. ನಮಗೋ ಹಿರೇದೇವ್ರ ಮ್ಯಾಲಿನ ಭಕ್ತಿ ಮತ್ತಷ್ಟು ಇಮ್ಮಡಿಗೊಂಡಿತು. ಎಲ್ಲರೂ ದೂಲ್ಲ… ದೂಲ್ಲ… ಎನ್ನತೊಡಗಿದರು. ಈ ಚಿತ್ರಣ ನನ್ನ ಕಣ್ಣ ಕ್ಯಾಮರಾದಲ್ಲಿ ಇನ್ನೂ ಸೆರೆಯಾಗಿದೆ.
****
ಅಲೈ ಹಬ್ಬ ಮುಗಿಯುವವರೆಗೂ ದೊಡ್ಡ ಮಸೂತಿ ಮುಂದೆ ಜನ ಜಂಗುಳಿ ಇದ್ದೇ ಇರುತ್ತಿತ್ತು. ಹುಲಿಸೋಗು, ಹೆಜ್ಜಿ, ದೇವರ ಕುದರಿ ಬರುವುದು ಹೀಗೆ ಒಂದಿಲ್ಲೊಂದು ನಡದೇ ಇರುತ್ತಿತ್ತು. ಈ ಹಬ್ಬದಲ್ಲಿ ಕುಡುಕರ ಹಾವಳಿ ಜಾಸ್ತಿ. ತಾಂಡಾದಲ್ಲಿ ಕಂಟಮಟ ಕಂಟ್ರಿ ಸಾರಾಯಿ ಕುಡಿದು ಜೋಲಿ ಹೊಡೆಯುತ್ತಾ, ಒಬ್ಬೊಬ್ಬರೇ ಹೆಜ್ಜೆ ಆಡುತ್ತಾ, ಇಲ್ಲಂದ್ರೆ ಹುಲಿಸೋಗಿನ ತರಹ ಕುಣಿಯುತ್ತಾ ಮಸೂತಿ ಹತ್ತಿರ ನೆರೆದಿರುವ ಮಂದಿಗೆ ಪುಕ್ಕಟೆ ಮನರಂಜನೆ ಒದಗಿಸುತ್ತಿದ್ದರು. ಒಮ್ಮೆ ಹೀಗೇ ಆತು. ನಾವೆಲ್ಲ ವಾರಿಗೆಯ ಹುಡುಗರು ತಳಕಲ್ಲ ಜಗ್ಗ್ಯಾನ ಹಾಸ್ಯ ಚಟಾಕಿಗೆ ಕಿಲ್ಲೆಂದು ನಗುತ್ತಾ ಹರಟುತ್ತಾ ನಿಂತಿದ್ದೆವು. ಅದೇ ಹೊತ್ತಿಗೆ ಹಣಮಂತ ದೇವ್ರ ಪೂಜಾರಿ ಜೋಲಿ ಹೊಡೆಯುತ್ತಾ ತೊದಲು ತೊದಲಾಗಿ ಅದ್ಯಾವುದೋ ಪದ ಹೇಳುತ್ತಾ ಅಲೈ ಕುಣಿ ಸುತ್ತತೊಡಗಿದ. ಈ ಪೂಜಾರಿ ಸುಮಾರು ಐವತ್ತು ವರ್ಷದವನಿರಬಹುದು. ಕ್ವಾರಿ ಮೀಸೆ ಬಿಟ್ಟಿದ್ದ. ಹಗಲೊತ್ತು ತುಂಬಾ ಒಳ್ಳೆಯ ಮನುಷ್ಯ. ರಾತ್ರಿಯಾದರೆ ಸಾರಾಯಿ ಅವನನ್ನು ಇಬ್ಬದ್ದಗಿ ಮಾಡುತ್ತಿತ್ತು. ಈ ಪೂಜಾರಿಯನ್ನು ನೋಡಿ ಜಗ್ಗ್ಯಾ ಸುಮ್ಮನಿರಲಿಲ್ಲ. ‘ಕುದರಿ ಬಂತು… ಕುದರಿ ಬಂತು ಸರೀರಿ…’ ಅಂತ ಮಂದಿಯನ್ನು ಸರಿಸಿದ. ನಶೆ ಮಸ್ತಕಕ್ಕೇರಿದ್ದ ಪೂಜಾರಿ ಹುರುಪುಗೊಂಡು ಜಗ್ಗ್ಯಾನ ಮಾತು ಖರೆ ಮಾಡುವವನಂತೆ ದೇವ್ರು ಬಂದಂತೆ ಅತ್ತಿತ್ತ ಹೊಯ್ದಾಡತೊಡಗಿದ. ನಮಗೆ ನಗು ತಡೆಯಲಿಲ್ಲ. ಗೊಳ್ಳೆಂದು ನಗತೊಡಗಿದ್ದೆವು. ಜಗ್ಗ್ಯಾ ಒಂದಿಷ್ಟು ಹೊತ್ತು ತಡೆದು ‘ದೇವ್ರು ಈ ಸದ್ಯ ಬೆಂಕ್ಯಾಗ ಹಾರುತ್ತ…’ ಅಂತ ಒಂದೆರಡು ಸಲ ಅನ್ನುವುದರೊಳಗೆ ಪೂಜಾರಿ ಅಲೈ ಕುಣಿಯ ಬೆಂಕಿಯಲ್ಲಿ ಹಾರಿ ಬಿಟ್ಟ. ಅವನ ಪುಣ್ಯ. ಬಾಳ ಬೆಂಕಿಯಿರಲಿಲ್ಲ. ಆದರೂ ಬೆಂಕಿ ಕಾಲಿಗೆ ಬಿಸಿ ಮುಟ್ಟಿಸಿತ್ತು. ಪಟ್ಟಂತ ಅಲೈ ಕುಣಿಯಿಂದ ಮ್ಯಾಲೆ ಬಂದ. ನಿಶೆೆಯಲ್ಲಾ ಇಳಿದು ಹೋಗಿತ್ತು. ‘ಯಾಂವನ್ಲೇ ಅಂವ ಕುದರಿ ಬಂದೈತಿ ಅಂದಂವ…’ ಅಂತ ಸಿಟ್ಟಿಗೆದ್ದು ಒದರಾಡತೊಡಗಿದ. ನಾವು ಅಲ್ಲಿಂದ ಮೆಲ್ಲಗೆ ಜಾಗ ಖಾಲಿ ಮಾಡಿದೆವು.
ಅಲೈ ಹಬ್ಬವನ್ನು ನಿಜಕ್ಕೂ ಎಂಜಾಯ್ ಮಾಡುವವರೆಂದರೆ ಕುಡುಕರೇ. ಇವರಲ್ಲಿ ಕೆಲವರು ಹೆಜ್ಜಿ ಆಡಲು ಎತ್ತಿನ ಬಂಡಿಯ ನಗವನ್ನೋ, ದೊಡ್ಡ ಒಡಗಟಗಿಯನ್ನೋ ತಂದು ಒಬ್ಬೊಬ್ಬರೇ ಆಡುತ್ತಿದ್ದರು. ಮತ್ತೊಂದಿಬ್ಬರು ಕುಡುಕರು ಜತೆಯಾಗಿ ಹೆಜ್ಜಿಗುಣಿಯಿಲ್ಲದೇ ಹಲಗೆಯ ಲಯಕ್ಕೆ ತಕ್ಕಂತೆ ಬೆರಳಿಂದ ಕಡತ ಕೊಡುತ್ತಿದ್ದರು. ಇಲ್ಲವೇ ಮೈಮ್ಯಾಲಿನ ಅಂಗಿ ಉಚ್ಚಿಕೊಂಡು ಅದನ್ನೇ ಹೆಜ್ಜಿಗುಣಿ ತರ ಭಾವಿಸಿಕೊಂಡು ಆಡುತ್ತಿದ್ದರು. ಮೂರಾರಿ ಕಳಕಪ್ಪ, ಕಳಕಾಪೂರ ಹುಸೇನಿಯಂತವರು ಮಜ ಮಜ ಡ್ಯಾನ್ಸ್ ಮಾಡೋರು. ಅದರಲ್ಲೂ ಮೂರಾರಿ ಕಳಕಪ್ಪನ ಡ್ಯಾನ್ಸ್ ನೋಡಲು ಜನ ಸುತ್ತುಗಟ್ಟುತ್ತಿದ್ದರು. ಅದು ಡ್ಯಾನ್ಸಲ್ಲದ ಡ್ಯಾನ್ಸ್. ಇದನ್ನೆಲ್ಲವನ್ನು ಕಣ್ತುಂಬಿಕೊಳ್ಳುವುದೇ ಒಂದು ಸಂಭ್ರಮ.
***
ಹೊಳಿಗೆ ಹೋಗುವ ದಿನದ ಬೆಳಗ್ಗೆ ನಾಲ್ಕೈದು ಘಂಟೆ ಹೊತ್ತಿಗೆ ದೇವ್ರು ಏಳುತ್ತಿದ್ದವು. ಇನ್ನೂ ಕತ್ತಲು ಕದಲಿರುತ್ತಿರಲಿಲ್ಲ. ಮಾದಿಗರು ಅಲ್ಲಲ್ಲಿ ಇಲಾಲು ಹಿಡಿದು ಬೆಳಕು ಮಾಡುತ್ತಿದ್ದರು. ಹುಡುಗರಾದ ನಮ್ಮ ಕಣ್ಣೊಳಗೆ ನಿದ್ದೆ ಇನ್ನೂ ಅಂಡಲೆಯುತ್ತಿರುತ್ತಿತ್ತು. ಆದರೂ ಅಷ್ಟೊತ್ತಲ್ಲೇ ಏಳುತ್ತಿದ್ದೆವು. ಸಣ್ಣ ಮಸೂತಿ ದೇವ್ರು ಆ ಹೊತ್ತಿಗೆ ದೊಡ್ಡ ಮಸೂತಿ ಹತ್ತಿರ ಬರುತ್ತವೆ. ಆಗ ಅದು ದೇವರ ಸಾಮ್ರಾಜ್ಯವಾಗುತ್ತಿತ್ತು. ಭಕ್ತರ ದೂಲ್ಲ… ದೂಲ್ಲ… ಅನುರಣಿಸುತಿತ್ತು. ದೇವರೆಲ್ಲ ಅಲೈ ಕುಣಿ ಸುತ್ತು ಹೊಡೆದು ಹಣಮಂತನ ಗುಡಿ ಮುಂದೆ ಹಾದು ದ್ಯಾಮವ್ವನ ಗುಡಿಗೆ ಬಂದಾಗ ಅಲ್ಲಿ ದೇವರ ಹೇಳಿಕೆಯಾಗುತ್ತಿತ್ತು. ನಂತರ ದುರ್ಗಮ್ಮನ ಗುಡಿಗೆ ಬಂದಾಗ ಅಲ್ಲಿ ಹಿರೇ ದೇವ್ರ ಹೇಳಿಕೆಯಾಗುತ್ತಿತ್ತು. ಇದೆಲ್ಲ ಮುಗಿದ ಮ್ಯಾಲೆ ಗೋರಿ ಹತ್ತಿರ ಬಂದು ಫಾತೇ ಮಾಡಿ ಊರ ಅಗಸಿಯಲ್ಲಿ ಹಿರೇ ದೇವ್ರು ಒಂದಿಷ್ಟು ಮಣ್ಣು ಗುಂಪಿ ಮಾಡಿ ಅದರ ಮ್ಯಾಲೆ ನೀರು ತುಂಬಿದ ಕುಡಿಕೆಯನ್ನು ಮೇಲೆಸೆಯುತ್ತದೆ. ಅದು ಮಣ್ಣ ರಾಶಿಯ ಮ್ಯಾಲೆ ಬಿದ್ದರೆ ಮಳೆ ಬೆಳೆ ಚೊಲೋ ಆಗುತ್ತದೆ ಎನ್ನುವ ನಂಬಿಕೆ. ನಂತರ ನಮ್ಮೂರಿನ ದೇವರುಗಳು ದಿಂಡೂರಿನ ಕಡೆ ಮುಖ ಮಾಡುತ್ತಿದ್ದವು.
ದಿಂಡೂರು ನಮ್ಮೂರಿಂದ ಒಂದೆರಡು ಕಿಲೋ ಮೀಟರ್ ದೂರವಿದೆ. ಒಂದು ವರ್ಷ ನಮ್ಮೂರ ದೇವ್ರು ದಿಂಡೂರಿಗೆ ಹೋದರೆ ಮಾರನೇ ವರ್ಷ ದಿಂಡೂರ ದೇವ್ರು ನಮ್ಮೂರಿಗೆ ಬರುವ ಪದ್ಧತಿ ಇದೆ. ದಿಂಡೂರಿಗೆ ದೇವ್ರು ಹೋಗುವ ದಿನ ಅರ್ಧಕ್ಕರ್ಧ ಊರಿನ ಜನ ದೇವ್ರ ಜೊತೆ ದಿಂಡೂರಿಗೆ ಹೋಗುತ್ತಿದ್ದರು. ನಾವೆಲ್ಲ ಎಳೆಯರು ತಪ್ಪಿಸದೇ ಹೋಗುತ್ತಿದ್ದೆವು. ದಿಂಡೂರು ತಲುಪಿದ ನಂತರ ನಮ್ಮೂರಿನ ದೇವ್ರು ಮತ್ತು ದಿಂಡೂರ ದೇವ್ರು ಒಂದೊಂದಾಗಿ ಭೆಟ್ಟಿ ಕೊಡುತ್ತಿದ್ದವು. ನಂತರ ದೇವ್ರು ಅಲ್ಲೇ ಕೆಳಗಿಳಿಸುತ್ತಿದ್ದರು. ಆಗ ಅಲೈ ಪದ ಸುರುವಾಗುತ್ತಿದ್ದವು. ನಮ್ಮೂರಿನ ತಂಡ ಹಾಡಿದ ನಂತರ ದಿಂಡೂರಿನ ತಂಡ ದಿಂಡೂರಿನ ತಂಡ ಹಾಡಿದ ನಂತರ ನಮ್ಮೂರಿನ ತಂಡ ಹೀಗೆ ಹ್ಯಾವದಿಂದ ಅಲೈ ಪದವನ್ನು ಒಬ್ಬರಿಗಿಂತ ಒಬ್ಬರು ಚೆಂದ ಹಾಡುತ್ತಾ, ಪದಕ್ಕೆ ತಕ್ಕಂತೆ ಹೆಜ್ಜೆ ಹಾಕುತ್ತಿದ್ದರು. ನಾವೆಲ್ಲ ಅದನ್ನು ಕಣ್ಮನ ತುಂಬಿಕೊಳ್ಳುತ್ತಿದ್ದೆವು. ಇದೆಲ್ಲ ಮುಗಿದ ನಂತರ ದೇವರು ಮತ್ತೆ ನಮ್ಮೂರಿಗೆ ವಾಪಾಸಾಗುತ್ತಿದ್ದವು.
ಊರಿಗೆ ಬಂದ ನಂತರ ಸಣ್ಣ ಮತ್ತು ದೊಡ್ಡ ಮಸೂತಿ ದೇವರು ಭೆಟ್ಟಿ ಕೊಡುತ್ತಿದ್ದವು. ನಂತರ ಮಸೂತಿಯಲ್ಲಿ ಅಲೈ ದೇವರನ್ನು ಕೂಡ್ರಿಸಿ ಮುಖ ಮುಚ್ಚುತ್ತಿದ್ದರು. ಮತ್ತೆ ಆ ದಿನ ಸಂಜೆಯೇ ದೇವರು ಹೊಳಿಗೆ ಹೋಗುವ ಹೊತ್ತು. ಆ ಸಂಜೆ ನಿಜಕ್ಕೂ ರಸಸಂಜೆ. ಊರಿನ ಎಲ್ಲ ಜನ ದೇವರಿಗೆ ಉತ್ತತ್ತಿ ಒಗೆಯಲು ಸೇರುತ್ತಿದ್ದರು. ಎಲ್ಲ ಹುಲಿಸೋಗುಗಳೂ ಅಲ್ಲಿ ಸಾಮೂಹಿಕವಾಗಿ ಕುಣಿಯುತ್ತಿದ್ದವು. ಒಬ್ಬಬ್ಬರ ಕುಣಿತವೂ ನಿಂತು ನೋಡುವಂತಹುದೇ. ದೊಡ್ಡವರು, ಸಣ್ಣವರು ಎಲ್ಲ ಹೆಜ್ಜೆ ಆಡುತ್ತಿದ್ದರು. ನಾನೂ ಅಪ್ಪ ಕೊಡಿಸಿದ ಹೂವಿನಚಡಿ ಹಿಡಿದು ಹೆಜ್ಜಿ ಆಡುತ್ತಿದ್ದೆ. ಆ ಕಡೆ ವಾರಪಡಿಗೆ ನಿಂತು ಹೆಜ್ಜಿ, ಹುಲಿಸೋಗು ಕುಣಿತ ಎಲ್ಲವೆಲ್ಲವನ್ನೂ ಕಣ್ತುಂಬಿಕೊಳ್ಳುತ್ತಿರುವ ಮೈತುಂಬಾ ಹರೆಯ ಹೊಕ್ಕ ಹುಡುಗಿಯರ ಎದುರಿಗೆ ಹರೆಯದ ಹುಡುಗರು ಹುರುಪು, ಹುಮ್ಮಸ್ಸಿನಿಂದ ಹೆಜ್ಜಿ ಆಡುತ್ತಿದ್ದರು. ಅವರೋ ತಮ್ಮ ತಮ್ಮ ಪ್ರಿಯಕರನ ಹೆಜ್ಜಿ ನೋಡಿ ಮುಗುಳ್ನಗೆಯಾಗುತ್ತಿದ್ದರು. ಪ್ರಿಯತಮೆಯ ಮುಗುಳ್ನಗೆಗೆ ಹುರುಪುಗೊಂಡ ಹುಡುಗ ಮತ್ತಷ್ಟು ಚೆಂದಾಗಿ ಕುಣಿತ ಹಾಕುತ್ತಿದ್ದ. ಕಡತ ಕೊಡುತ್ತಿದ್ದ.
ಮುಂದೆ ಮುಂದೆ ಹೆಜ್ಜೆ, ಹುಲಿಸೋಗು. ಹಿಂದಿಂದೆ ಹೊಳಿಗೆ ಹೋಗಲು ದೇವರು ಹೊಂಡ್ತಾ ಇದ್ವು. ಮಾದರ ಕೇರಿಯ ದುರ್ಗಮ್ಮನ ಗುಡಿ ಹತ್ತಿರ ಹೇಳಿಕೆಯಾಗುತ್ತಿತ್ತು. ನಂತರ ಕಲ್ಲಗುಡಿಯ ಹಿಂದಿರುವ ವಾಲಿಯವರ ಹೊಲದಲ್ಲಿ ಎಲ್ಲ ದೇವರನ್ನು ಕೆಳಗಿಳಿಸುತ್ತಿದ್ದರು. ಹೊಳಿಗೆ ಹೋಗೊದು ಇಲ್ಲಿಯೇ. ಎಲ್ಲ ದೇವರುಗಳು ಮೈ ಮ್ಯಾಲೆ ಹಾಕಿದ ಉತ್ತತ್ತಿ, ಕೊಬರಿ ಗಿಟಗ, ನೋಟುಗಳನ್ನು ಬಿಚ್ಚಿ ಒಂದು ಗಂಟು ಮಾಡಿ ಆಯಾ ದೇವರು ಹೊರುವವರ ಕೈಯಲ್ಲಿ ಕೊಟ್ಟು ನಂತರ ದೇವರಿಗೆ ಉಡುಸಿದ ಉಡುಗೊರೆ ಬಿಚ್ಚಿ ನೀಟಾಗಿ ಮಡಚಿ ಗಂಟುಕಟ್ಟುತ್ತಿದ್ದರು. ಆ ದೇವರ ಬಟ್ಟೆಯ ಗಂಟನ್ನು ಹೊತ್ತುಕೊಂಡು ಎಲ್ಲರೂ ಸಾಮೂಹಿಕವಾಗಿ ‘ಏ ಹುಸೇನಿ ಹಲ್ಬೀಜಾಂ ಹಲ್ಬಿಜಾಸ… ‘ ಅಂತನ್ನುವ ಶೋಕಗೀತೆ ಹಾಡುತ್ತಾ ಮಸೂತಿ ಕಡೆ ಮುಖ ಮಾಡುತ್ತಿದ್ದರು. ಮಸೂತಿಯಲ್ಲಿ ದೇವರ ಉಡುಗೊರೆ ಗಂಟು ಇಳಿಸಿದ ನಂತರ ಸಣ್ಣ ಹುಡುಗರಾದ ನಾವು ಮುಂದಿನ ವರ್ಷದ ಅಲೈ ಹಬ್ಬದ ಕನಸು ಕಾಣುತ್ತಾ ಮನೆ ದಾರಿ ಹಿಡಿಯುತ್ತಿದ್ದೆವು.







tumba khushiyaytu. nanage nanna allihabbada sadagara nenapaytu, chonge tinnabeku anisitu….
ನಮ್ಮೂರ ‘ಅಲೆ ಹಬ್ಬ’ ನೆಪ್ಪಾತ್ ನೋಡ್ರಿ… ಮಸ್ತ್ ಬರದೀರಿ ಬಿಡ್ರಿ. ಅಂದಂಗ, ನಮ್ಮ ಗೆಳ್ಯಾರೊಬ್ರು ಇದ್ರು ಗೊರವರ ಯಲ್ಲಪ್ಪ ಅಂತ… ಕಾರ್ಟೂನು ಬರೀತಿದ್ರು. ಅವರೇನಾಗಬೇಕು ನಿಮಗ?
ಸರ್, ಥ್ಯಾಂಕ್ಸ್. ಗೊರವರ ಯಲ್ಲಪ್ಪ ಅವರ ಕಾಟೂಱನ್ ಗಳನ್ನು ನಾನೂ ನೋಡಿದೆನೆ. ವೈಯಕ್ತಿಕವಾಗಿ ನನಗೆ ಪರಿಚಯ ಇಲ್ಲ.
ಬಾಲ್ಯದ ಹಬ್ಬದ ಸವಿ ನೆನಪುಗಳನು ಹಂಚಿ ಕೊಂಡು ನಮ್ಮ ಬಾಲ್ಯದ ನೆನಪುಗಳನು ನೆನಪಿಸಿದಕ್ಕೆ ಧನ್ಯವಾದಗಳು ಟಿ ಎಸ್ ಗೊರವರವರಿಗೆ
ಉತ್ತರ ಕರ್ನಾಟಕದ ಬಹು ಸಂಸ್ಕೃತಿಯ ಪ್ರತೀಕವಾಗಿರುವ ‘ಮೊಹರಂ’ ಆಚರಣೆಯನ್ನು ರಸವತ್ತಾಗಿ ಉಣಬಡಿಸಿದ್ದೀರಾ……
Olle lekhana nammurallina alaavi nenapaayitu..