“ನಮ್ಮನ್ನು ಮದುವೆಗೆ ಕರೆದಿಲ್ಲವಲ್ಲ ಯಾಕೆ ..?”

ಕನ್ನಡ ಮುದ್ರಣ ಲೋಕದಲ್ಲಿ ಸ್ವ್ಯಾನ್ ಕೃಷ್ಣಮೂರ್ತಿ ಅವರದ್ದು ಮಹತ್ವದ ಹೆಸರು.

ಸ್ವ್ಯಾನ್ ಪ್ರಿಂಟರ್ಸ್’ ಮೂಲಕ ಮುದ್ರಣ ವಿನ್ಯಾಸದಲ್ಲಿ ಬದಲಾವಣೆ ತಂದ ಕೃಷ್ಣಮೂರ್ತಿ ಅವರ ಹೆಜ್ಜೆ ಗುರುತುಗಳು ಇಲ್ಲಿವೆ.

ಮದುವೆ ಮುಗಿದ ಮೇಲೆ ಮದುವೆಯ ಕರೆಯೋಲೆಯ ಮರುಮುದ್ರಣದ ಪ್ರಸಂಗ

ಇದು ಎಲ್ಲರಿಗೂ ಅಚ್ಚರಿ ಎನಿಸಬಹುದು. ಇದೇನಿದು ಮದುವೆ ಮುಗಿದ ಮೇಲೆ ಕರೆಯೋಲೆಯ ಮರುಮುದ್ರಣ ಎಂದು…!  ಹೌದು, ೨೦೧೧ರಲ್ಲಿ ನನ್ನ ತಂಗಿ ದಿವ್ಯಳ ಮದುವೆ ನಿಶ್ಚಯವಾಗಿತ್ತು. ನಮ್ಮ ಬಂಧು ಮಿತ್ರರೆಲ್ಲರು “ನೀನೇ ಮುದ್ರಕನಾಗಿ ದೊಡ್ಡ ತಂಗಿ ಮದುವೆ ಹಾಗೂ ನಿನ್ನ ಮದುವೆಯ ಆಹ್ವಾನ ಪತ್ರಿಕೆಯನ್ನು ವಿಶಿಷ್ಟವಾಗಿ ಮುದ್ರಣ ಮಾಡಿ ಹಂಚಿ ಎಲ್ಲರ ಗಮನ ಸೆಳೆದಿದ್ದೆ.

ಈ ಮದುವೆಗೆ ಯಾವ ತರಹ ಆಹ್ವಾನ ಪತ್ರಿಕೆ ಮಾಡ್ತೀಯಪ್ಪ” ಎಂದು ಮುಂಚಿತವಾಗಿಯೇ  ಬಹು ನಿರೀಕ್ಷೆಯನ್ನು ವ್ಯಕ್ತಪಡಿಸತೊಡಗಿದರು.

ನಮ್ಮ ಮುದ್ರಣಾಲಯದಲ್ಲಿ ಆ ದಿನಗಳಲ್ಲಿ ಕೆಲಸದ ಒತ್ತಡ ಜಾಸ್ತಿ ಇತ್ತು.  ವಿಭಿನ್ನ ಬಗೆಯ, ವಿಶೇಷ ವಿನ್ಯಾಸದ ಬಗ್ಗೆ ಯೋಚನೆ ಮಾಡಲು ಸಾಧ್ಯವಾಗದ ಪರಿಸ್ಥಿತಿ. ಯೋಚನೆ ಮಾಡುವುದರಲ್ಲೇ ಕಾಲ ದೂಡಿ ಬಿಟ್ಟೆ…! ಮದುವೆ ದಿನಾಂಕ ಸಮೀಪಿಸುತ್ತಿರುವಂತೆ ಮನೆಯಲ್ಲಿ ದಿನವೂ ಅಮ್ಮನ ಒತ್ತಡ ಹೆಚ್ಚಾಯಿತು, “ಯಾವತ್ತು ನೀನು ಇನ್ವಿಟೇಶನ್ ಕಾರ್ಡ್ ಪ್ರಿಂಟ್ ಮಾಡಿ ತರ್ತೀಯಾ” ಅಂತ.

ಕೇಳಿ ಕೇಳಿ ಸಾಕಾಗಿ, ಕೊನೆಕೊನೆಗೆ ನನ್ನ ತಂಗಿಗೆ “ನಡಿಯೇ… ನಾವೇ ಮಾರ್ಕೆಟ್‌ನಲ್ಲಿ ಯಾವುದಾದರೂ ಒಂದು ಆಹ್ವಾನ ಪತ್ರಿಕೆಯನ್ನು ಮಾಡಿಸಿಕೊಂಡು ಬರೋಣ” ಅನ್ನುವವರೆಗೆ ಹೋಗಿಬಿಟ್ಟಿತ್ತು ವಿಷಯ.

ಕೊನೆಗೆ ಒತ್ತಡ ಜಾಸ್ತಿಯಾಗಿ ಮಾರ್ಕೆಟ್‌ಗೆ ಹೋಗಿ, ಯಾವುದಾದರೂ ಚೆನ್ನಾಗಿರೋ ಕಾರ್ಡ್ ತಂದುಬಿಡುವುದು ಅಂತ ಸಿದ್ಧ ಆಹ್ವಾನಪತ್ರಿಕೆಗಳ ಅಂಗಡಿಗೆ ಹೋದೆ. ಅಲ್ಲಿ ಯಾವ ಆಹ್ವಾನ ಪತ್ರಿಕೆಯೂ ಮನಸ್ಸಿಗೆ ಒಪ್ಪಿಗೆ ಆಗಲೇ ಇಲ್ಲ. ನಾವೇ ಮುದ್ರಕರಾಗಿ ಈ ರೀತಿ ದುಬಾರಿ ಬೆಲೆ ಕೊಟ್ಟು, ಸಿದ್ಧ ಮಾದರಿ ಆಹ್ವಾನ ಪತ್ರಿಕೆ ಕೊಂಡು, ಅದರ ಮೇಲೆ ಮುದ್ರಿಸಿ ಹಂಚಿದರೆ, ಮದುವೆಯಾದ ತಕ್ಷಣ ಅದು ಎಷ್ಟೇ ದುಬಾರಿ ಆಹ್ವಾನ ಪತ್ರಿಕೆಯಾಗಿದ್ದರೂ ಬಿಸಾಕಿ ಬಿಡುತ್ತಾರೆ…

ಇಷ್ಟೇ ಸಮಯ ಆಗಿ ಬಿಟ್ಟಿದೆ, ಹೇಗಾದರೂ ಮಾಡಿ ಹೊಸ ತರಹ ವಿನ್ಯಾಸದ ಆಹ್ವಾನ ಪತ್ರಿಕೆ ಮಾಡಲೇಬೇಕು ಎಂದು ನಿಶ್ಚಯಿಸಿದೆ ಅಂಗಡಿಯವನ ಬಳಿ ಯಾಕೋ ಯಾವುದೂ ಇಷ್ಟ ಆಗ್ತಾ ಇಲ್ಲ ಎನ್ನುವಾಗಲೇ ಅವರ ಟೇಬಲ್ ಮೇಲಿದ್ದ ಟೇಬಲ್ ಕ್ಯಾಲೆಂಡರ್ ಕಣ್ಣಿಗೆ ಬಿತ್ತು….. ಅದನ್ನು ನೋಡುತ್ತಲೇ, ಈ ಮಾದರಿಯಲ್ಲಿ ಮಾಡಿಕೊಟ್ಟರೆ ಯಾರೂ ಎಸೆಯುವುದಿಲ್ಲ, ಇದೇ ರೀತಿ ಮಾಡುವುದು ಎಂದು ಅಲ್ಲಿಯೇ ತಕ್ಷಣ ತೀರ್ಮಾನಿಸಿ, ಅಂಗಡಿಯವನಿಗೆ ಮತ್ತೆ ಬರುವುದಾಗಿ ಹೇಳಿ ಮುದ್ರಣಾಲಯಕ್ಕೆ ಹಿಂತಿರುಗಿ ಬಂದೆ. 

ಮದುವೆ ಇದ್ದದ್ದು ಜೂನ್ ತಿಂಗಳಲ್ಲಿ… ಅಲ್ಲಿಗೆ ಅರ್ಧ ವರ್ಷ ಕಳೆದುಹೋಗಿತ್ತು. ಈಗ ಟೇಬಲ್ ಕ್ಯಾಲೆಂಡರ್ ಕೊಟ್ಟರೆ ಸರಿ ಇರಲ್ಲ ಎಂದು, ೧೨ ಜನ ಖ್ಯಾತನಾಮರ ಫೋಟೋದೊಂದಿಗೆ ಅವರ ಎರಡೆರಡು ನುಡಿಮುತ್ತುಗಳನ್ನು ಹಾಕಿ ಟೇಬಲ್ ಕ್ಯಾಲೆಂಡರ್ ರೀತಿಯಲ್ಲಿ ಸ್ಪೈರಲ್‌ ಬೈಂಡಿಂಗ್‌ ಮಾಡಿದರೆ, ಅವರಿಗೆ ಯಾರು ಇಷ್ಟವೋ ಅವರ  ಸೂಕ್ತಿಗಳ ಪುಟಗಳನ್ನು ತೆರೆದು ಮನೆಯಲ್ಲಿ ಟಿವಿ ಮೇಲೋ, ಟೇಬಲ್ ಮೇಲೋ, ಶೋಕೇಸ್‌ನಲ್ಲಿಯೋ ಜೋಪಾನವಾಗಿ ಕೆಲವರಾದರೂ ಇಟ್ಟುಕೊಳ್ಳುತ್ತಾರೆ ಎನಿಸಿತು.

ಅದರಂತೆ ವಿನ್ಯಾಸಗೊಳಿಸಿ, ಫೋಟೋ ಮತ್ತು ಸೂಕ್ತಿಗಳನ್ನು ದಪ್ಪನೆ ಬೋರ್ಡ್ ಮೇಲೆ ಮದುವೆ ವಿಷಯವನ್ನು ತೆಳು ಕಾಗದದ ಮೇಲೆ ಮುದ್ರಿಸಿ, ಎಲ್ಲವನ್ನೂ ಸೇರಿಸಿ ಸ್ಪೈರಲ್‌ ಬೈಂಡಿಂಗ್‌  ಮಾಡಿಕೊಡುವುದು, ಆಹ್ವಾನ ಪತ್ರಿಕೆಯಲ್ಲಿ ಮದುವೆ ವಿಷಯದ ತೆಳು ಹಾಳೆಯನ್ನು ಹರಿದುಹಾಕಿ ಸೂಕ್ತಿಗಳನ್ನು ಹಾಗೇ ಜೋಪಾನವಾಗಿ ಇಟ್ಟುಕೊಳ್ಳುತ್ತಾರೆ ಎಂದು ಅಂದಾಜಿಸಿ ಹಾಗೆಯೇ ಮುದ್ರಿಸಿ ಹಂಚಲು ಶುರು ಮಾಡಿದೆವು.

ನೋಡಿದವರೆಲ್ಲರ ಬಾಯಲ್ಲೂ ಆಹ್ವಾನಪತ್ರಿಕೆಯ ಗುಣಗಾನ…! ಕೆಲವರಂತೂ “ಬೇಜಾರ್ ಮಾಡ್ಕೋಬೇಡಿ, ಇನ್ನೊಂದು ಆಹ್ವಾನ ಪತ್ರಿಕೆ ಕೊಡಿ” ಎಂದು ಕೇಳಿ ಪಡೆಯಲು ಶುರು ಮಾಡಿದ್ದರು. ನಾವು ಒಂದು ಸಾವಿರ ಸಾಕೆಂದು ಮುದ್ರಿಸಿದವರು, ಕೊನೆಯಲ್ಲಿ ಮತ್ತೆ ಆಹ್ವಾನ ಪತ್ರಿಕೆಯನ್ನು ಮರುಮುದ್ರಣ ಮಾಡಬೇಕಾಯಿತು.

ಮದುವೆಗೆ ಬಂದಿದ್ದ `ಕ್ಷಣಹೊತ್ತು ಆಣಿಮುತ್ತು’ ಖ್ಯಾತಿಯ ಷಡಕ್ಷರಿಯವರು, “ಮದುವೆಗೆ ಬರಲು ರೂಟ್ ಮ್ಯಾಪ್‌ಗಾಗಿ ಆಹ್ವಾನ ಪತ್ರಿಕೆ ಎತ್ತಿಕೊಂಡರೆ, ನನ್ನ ಹೆಂಡತಿ `ಎಲ್ಲೂ ಆಹ್ವಾನ ಪತ್ರಿಕೆಯನ್ನು ಮರೆತುಬಿಟ್ಟು ಬರಬೇಡಿ, ಮತ್ತೆ ವಾಪಸ್ ತರಲೇಬೇಕು’ ಎಂದು ಹೇಳಿದ್ದಾರೆ” ಎಂದು ಮದುವೆ ಮನೆಯಲ್ಲಿ ಎಲ್ಲರೆದುರಿಗೆ ಹೇಳಿ ಆಹ್ವಾನ ಪತ್ರಿಕೆ ಬಗ್ಗೆ ಮೆಚ್ಚುಗೆ ಸೂಚಿಸಿದ್ದರು.

ಮದುವೆ ಕಾರ್ಯ ಎಲ್ಲಾ ಮುಗಿದು  ಎರಡು ಮೂರು ದಿನಗಳಾದ ನಂತರ ಚಿತ್ರದುರ್ಗದ ನನ್ನ ಗೆಳೆಯನಿಂದ ಮೊಬೈಲ್‌ಗೆ ಕರೆ ಬಂತು – “ಏನೋ, ನಿನ್ ತಂಗಿ ಮದುವೆ ಆಹ್ವಾನ ಪತ್ರಿಕೆ ಬಗ್ಗೆ ವಿಶೇಷವಾಗಿ ವಿಜಯ ಕರ್ನಾಟಕ ಪತ್ರಿಕೆಯಲ್ಲಿ ಬಂದಿದೆ ನೋಡು” ಎಂದು.

ಆಶ್ಚರ್ಯದಿಂದ ತಕ್ಷಣ ಪತ್ರಿಕೆ ತೆಗೆದು ನೋಡಿದರೆ, ನನ್ನ ಆತ್ಮೀಯ ಗೆಳೆಯರು ಮತ್ತು ಒಂದು ಕಾಲದ ಸಹೋದ್ಯೋಗಿಯಾಗಿದ್ದ ಧರಣೇಶ್ ಕರ್ಜಗಿ ನಮ್ಮ ಆಹ್ವಾನ ಪತ್ರಿಕೆಯ ಒಂದು ಪುಟದ ಚಿತ್ರವನ್ನು ಹಾಕಿ, ಅದರ ವಿಶಿಷ್ಟತೆ ಬಗೆಗೆ ಒಂದು ಸಣ್ಣ ಟಿಪ್ಪಣಿ ಬರೆದು ಪತ್ರಿಕೆಯಲ್ಲಿ ಪ್ರಕಟಿಸಿದ್ದಾರೆ…. !!!

ನಾವು ಬಹಳ ಆತ್ಮೀಯರಿಗೆ ಮಾತ್ರ ಆಹ್ವಾನ ಪತ್ರಿಕೆ ಹಂಚಿದ್ದು, ಬೆಂಗಳೂರಿನಲ್ಲಿ ಮದುವೆ ಇದ್ದಿದ್ದರಿಂದ ಊರಿನ ಕಡೆ ಸರಿಯಾಗಿ ಎಲ್ಲರಿಗೂ ಹಂಚಿರಲಿಲ್ಲ. ಪತ್ರಿಕೆಯಲ್ಲಿ ಬಂದದ್ದೇ ತಡ, ಎಲ್ಲರಿಂದ ಕರೆ, “ನಮ್ಮನ್ನು ಮದುವೆಗೆ ಕರೆದಿಲ್ಲವಲ್ಲ ಯಾಕೆ ..?” ಎಂಬ ಆಕ್ಷೇಪಣೆ. ಕೊನೆಗೆ “ಹೋಗಲಿ,  ಆಹ್ವಾನ ಪತ್ರಿಕೆ ವಿಶೇಷವಾಗಿದೆಯಂತೆ, ಒಂದು ಪ್ರತಿ ಇದ್ದರೆ ಈಗಲಾದರೂ ಕೊಡು” ಎಂದು ಅನೇಕರು ಕೇಳಲು ಶುರುಮಾಡಿದರು.

ಅಯ್ಯೋ ಇದೇನಪ್ಪಾ..! ಎಂದು ಮತ್ತೆ ಆಹ್ವಾನ ಪತ್ರಿಕೆಯನ್ನು ಮರುಮುದ್ರಣ ಮಾಡಿ ಹಂಚಿದ್ದಾಯ್ತು. ಮದುವೆ ಮುಗಿದು ಒಂದು ತಿಂಗಳು ಕಳೆದರೂ ಆಹ್ವಾನ ಪತ್ರಿಕೆಗೆ ಬಹು ಬೇಡಿಕೆ ಇತ್ತು. ಇನ್ನು ಕೆಲವರಂತೂ ನಮ್ಮ ಮುದ್ರಣಾಲಯಕ್ಕೆ ಹುಡುಕಿಕೊಂಡು ಬಂದು, “ನಮಗೆ ಕೊಟ್ಟಿದ್ದು ಚೆನ್ನಾಗಿದೆ ಅಂತ ನನ್ನ ಸ್ನೇಹಿತ ತೆಗೆದುಕೊಂಡು ಹೋಗಿಬಿಟ್ಟರು, ಇನ್ನೊಂದು ಇದ್ದರೆ ಕೊಡು” ಎಂದು ಕೇಳಿ ತೆಗೆದುಕೊಂಡು ಹೋಗಿದ್ದೂ ಉಂಟು. 

ಹೀಗೆ ಅವಸರದಲ್ಲಿ ಏನೋ ಮಾಡಲು ಹೋಗಿ, ಮಧ್ಯದಲ್ಲಿ ಮತ್ತೇನೋ ಹೊಳೆದು, ಅದರಂತೆ ಮಾಡಿದ್ದು ಹೇಗೆ ಜನಮನ್ನಣೆಗೆ ಪಾತ್ರವಾಗಿಬಿಡುತ್ತದೆ ಅನ್ನುವುದಕ್ಕೆ ಈ ಅಚ್ಚರಿಯ ಪ್ರಸಂಗ ನಿದರ್ಶನ.

October 12, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: