ನಮ್ಮನೆಯಲ್ಲಿ ‘ನಮ್ಮನೆ ಹಬ್ಬ’

ವೀರಕಪುತ್ರ ಶ್ರೀನಿವಾಸ

—–

ಮಧ್ಯಮ ವರ್ಗದ ಪ್ರತಿಯೊಬ್ಬರಲ್ಲೂ ಒಂದು ಸ್ವಭಾವ ಕಾಮನ್‌ ಆಗಿರುತ್ತೆ. ನಮಗೆ ಇಷ್ಟವಾಗೋ ಪ್ರತಿ ವಿಷಯವನ್ನೂ ನಾವೂ ಮಾಡೋಣವಾ ಅಥವಾ ನಾವೂ ಮಾಡಬಹುದಿತ್ತು ಅಂತನ್ನಿಸುತ್ತಿರುತ್ತೆ. ಕ್ರಿಕೆಟಿನಲ್ಲಿ ಭಾರತ ಸೋಲ್ತಿದೆ ಅಂದ್ರೆ ನಾವೇ ಹೋಗಿ ಬ್ಯಾಟ್‌ ಮಾಡಿ ಬಾಲ್‌ ಬಾಲಿಗೆ ಸಿಕ್ಸರ್‌ ಹೊಡೆದು ಗೆಲ್ಲಿಸಿಬಿಡೋಣ ಅನ್ಸುತ್ತೆ ನೋಡಿ ಆ ತರ!

ಶಿರಸಿಯ ನಮ್ಮನೆ ಹಬ್ಬ ನೋಡಿದಾಗ ನನಗೂ ಹಾಗನ್ನಿಸಿತು…

ಇದು ನಮ್ಮನೆ ಹಬ್ಬ, ನಮ್ಮನದ ಹಬ್ಬ, ನಮ್ಮರಿವಿನ ಹಬ್ಬ, ನಮ್ಮುಳಿವಿನ ಹಬ್ಬ, ನಮ್ತನದ ಹಬ್ಬ, ತಾಯ್ತನದ ಹಬ್ಬ, ಸಂಸ್ಕೃತಿಯ ಹಬ್ಬ, ಸಂಭ್ರಮದ ಹಬ್ಬ, ಮಾದರಿ ಹಬ್ಬ, ಆಗಬೇಕಾದ ಹಬ್ಬ, ಆಗುತ್ತಿರುವ ಹಬ್ಬ! ಇದು ಯಾಕೋ ಜಾಸ್ತಿಯಾಯಿತು ಅಂತ ನಿಮಗನ್ನಿಸಬಹುದು. ಇಲ್ಲ ಇಲ್ಲ… ನೀವೊಮ್ಮೆ ಅಲ್ಲಿ ಹೋಗಿ ಬಂದರೆ ನಾನು ಹೇಳಿದ್ದು ಕಮ್ಮಿಯಾಯಿತು ಅಂತ ನಿಮಗನ್ನಿಸೋಕೆ ಶುರುವಾಗುತ್ತೆ. ಅಷ್ಟಕ್ಕೂ ನಮ್ಮನೆ ಹಬ್ಬ ಅಂದರೆ…

ಅದೊಂದು ಹತ್ತಾರು ಮನೆಗಳಿರುವ ಶಿರಸಿಯ ಪುಟ್ಟ ಹಳ್ಳಿ. ಹೆಸರು ಬೆಟ್ಟಕೊಪ್ಪ. ಈಗ್ಗೆ ಹನ್ನೆರಡು ವರ್ಷಗಳ ಹಿಂದೆ, ಸ್ನೇಹಿತರು, ಸಂಬಂಧಿಕರು, ಊರಿನವರೆಲ್ಲರೂ ವರ್ಷಕ್ಕೊಮ್ಮೆ ಒಂದು ಕಡೆ ಸೇರಿ ಸಂಭ್ರಮಿಸಲು ಕಂಡುಕೊಂಡ ಮಾರ್ಗವೇ ಈ ನಮ್ಮನೆ ಹಬ್ಬ. ಆಗ ಆ ಯೋಚನೆ ಎಷ್ಟಿತ್ತೆಂದರೆ, ನಾವೆಲ್ಲಾ ಗೆಳೆಯರು ಒಟ್ಟಿಗೊಂದು ಪ್ರವಾಸವೋ, ಗೆಟ್‌ ಟುಗೆದರ್ರೋ ಪ್ಲಾನ್‌ ಮಾಡಿ ಮುಂದಿನ ವರ್ಷ ಮರೆತು ಹೋಗ್ತೀವಲ್ಲವಾ… ಅಷ್ಟೇ ಇತ್ತು. ಅದನ್ನು ಆರಂಭಿಸಿದ ರಾಘವೇಂದ್ರ ಬೆಟ್ಟಕೊಪ್ಪ ಅವರನ್ನು ಬಿಟ್ಟು ಉಳಿದೆಲ್ಲರಿಗೂ ಅದೊಂದು ಸಾಧಾರಣ ಸಂಗತಿಯೇ ಆಗಿತ್ತು. ಆದರೆ ರಾಘವೇಂದ್ರರ ಸಂಕಲ್ಪ ಎಷ್ಟು ದೃಢವಾಗಿತ್ತೆಂದರೆ ಅದನ್ನು ಒಂದಲ್ಲ ಎರಡಲ್ಲ ಬರೋಬ್ಬರಿ ಹನ್ನೆರಡು ವರ್ಷಗಳ ಕಾಲ ನಡೆಸುವಷ್ಟು. ಇಂದು ಈ ಹಬ್ಬ ಶಿರಸಿ ಸಂಸ್ಕೃತಿಯ ಅವಿಭಾಜ್ಯ ಅಂಗವಾಗಿಬಿಟ್ಟಿದೆ. ಕೆಲವರಿಂದ ಶುರುವಾದ ನಮ್ಮನೆ ಹಬ್ಬ ಇಂದು ಸಾವಿರ ಜನ ಸೇರುವಷ್ಟು ದೊಡ್ಡದಾಗಿಬಿಟ್ಟಿದೆ. ಪ್ರತಿ ವರ್ಷವೂ ತನ್ನ ಮುಡಿಗೆ ಒಂದೊಂದು ಗರಿಯನ್ನು ಸೇರಿಸಿಕೊಳ್ತಾ, ಒಂದು ಗೆರೆಯನ್ನು ದಾಟುತ್ತಾ ಅದು ಅಲ್ಲಿನವರನ್ನು ಮತ್ತು ನಮ್ಮಂತಹವರನ್ನು ಆವರಿಸಿಕೊಳ್ಳುತ್ತಿರುವ ಪರಿಯೇ ಅದ್ಭುತ.

ನಮ್ಮನೆ ಹಬ್ಬದಲ್ಲಿ ಪ್ರತಿವರ್ಷವೂ ಮೂವರ ಸಾಧಕರನ್ನು ಗೌರವಿಸುತ್ತಾರೆ. ಅದೆಷ್ಟು ಚಂದದ ಗೌರವವೆಂದರೆ ಒಮ್ಮೆ ನಾವೂ ಇಂತಹ ಗೌರವ ಸ್ವೀಕರಿಸಿ ಬರಬೇಕು ಎನ್ನುವ ಆಸೆ ಹುಟ್ಟಿಬಿಡುತ್ತೆ. ಅಳೆದು ತೂಗಿ ಅತಿಥಿಗಳನ್ನು ಆಹ್ವಾನಿಸುತ್ತಾರೆ. ಆಗಮಿಸಿದ ಅತಿಥಿಗಳನ್ನು ಅರಸರಂತೆ ನೋಡಿಕೊಳ್ಳುತ್ತಾರೆ. ನಮ್ಮ ಕನ್ನಡ ಸಾಹಿತ್ಯಪರಿಷತ್ತಿಗೂ ಮುಂದಿನ ಸಮ್ಮೇಳನ ಯಾವಾಗ ಅಂತ ಹೇಳುವುದು ಕಷ್ಟವಾಗುತ್ತಿದೆ ಆದರೆ ಇವರು ೨೦೨೪ ರ ನಮ್ಮನೆ ಹಬ್ಬವನ್ನು ಈ ವರ್ಷದ ಕಾರ್ಯಕ್ರಮದಲ್ಲಿಯೇ ಘೋಷಿಸಿಬಿಡುತ್ತಾರೆ.

ಊರಿನಿಂದ ಹೊರಗೆ ಹೋಗಿ ಸಾಧಕರಾಗುವುದು ಸಾಮಾನ್ಯ ಸಂಗತಿ, ಆದರೆ ತಾವಿರುವ ಪುಟ್ಟ ಊರಿಗೆ ನಾಡಿನ ಸಾಧಕರನ್ನೆಲ್ಲಾ ಕರೆಸಿಕೊಳ್ಳುವುದು ಈ ನಮ್ಮನೆ ಹಬ್ಬದ ಸಾಧನೆ. ಅಲ್ಲಿ ಯಾರೂ ಮುಖ್ಯರಲ್ಲ, ಅಮುಖ್ಯರೂ ಅಲ್ಲ! ರಾಘವೇಂದ್ರರ ಶ್ರೀಮತಿ ಗಾಯತ್ರಿ, ಮಗಳು ತುಳಸಿಯವರ ನಾಜೂಕುತನ, ಊರಿನವರ ಸಹಭಾಗಿತ್ವ, ಸ್ನೇಹಿತರ ಸಾಂಗತ್ಯದ ಕಾರಣಕ್ಕೆ ಕುರ್ಚಿಗಳು ಸಾಲದಾಗಿ, ನೆಲದ ಮೇಲೆ ಕೂತು ಕೇಳುವಷ್ಟು ಜನರು ತುಂಬಿರುತ್ತಾರೆ. ವೇದಿಕೆ ಕಾರ್ಯಕ್ರಮ ಶುರುವಾಯಿತೆಂದರೆ, ಅದು ಎಷ್ಟೊತ್ತಿಗೇ ಮುಗಿಯಲಿ ಒಬ್ಬರೂ ಎದ್ದು ಆಚೆ ಹೋಗುವುದಿಲ್ಲ. ಅತ್ತಿತ್ತ ಓಡಾಡ್ತಾ ಅತಿಥಿಗಳಿಗೆ ಬೇಸರ ತರಿಸುವುದಿಲ್ಲ. ಅತಿಥಿಗಳು ಚಂದ ಮಾತನಾಡಲಿ, ಅರೆಬೆಂದ ಮಾತನಾಡಲಿ ಎಲ್ಲರನ್ನೂ ಪ್ರೋತ್ಸಾಹಿಸುತ್ತಾರೆ. ಅವರೆಷ್ಟು ಶ್ರದ್ಧೆಯಿಂದ ಮಾತುಗಳನ್ನು ಆಲಿಸುತ್ತಿರುತ್ತಾರೆಂದರೆ ಎರಡು ನಿಮಿಷದ ಮಾತುಗಾರನೂ ಇಪ್ಪತ್ತು ನಿಮಿಷ ಮಾತನಾಡಿಬಿಡುತ್ತಾನೆ.

ಕಾರ್ಯಕ್ರಮದ ಕೊನೆಗೆ ಶಿರಸಿ ಶೈಲಿಯ ಊಟವನ್ನು ಅಮ್ಮನಂತೆ ಉಣಬಡಿಸುತ್ತಾರೆ. ಬಗೆ ಬಗೆ ಭಕ್ಷ್ಯಗಳ ರುಚಿಗಿಂತ ಅವರದನ್ನು ಬಡಿಸಿ, ತಿನ್ನಲು ಉತ್ತೇಜಿಸುವ ರುಚಿಯೇ ಹೆಚ್ಚು. ಆ ಭಾಗದಲ್ಲಿ ಈ ನಮ್ಮನೆ ಹಬ್ಬದ ಪರಿಣಾಮ ಎಷ್ಟಿದೆಯೆಂದರೆ, ಕೆಲವೊಂದು ಕಡೆ ನಮ್ಮನೆ ಊಟ, ನಮ್ಮನೆ ಬಟ್ಟೆ ಅಂಗಡಿ ಎಂದು ಹೆಸರಿಟ್ಟುಕೊಂಡಿರುವ ವ್ಯಾಪಾರಿ ಕೇಂದ್ರಗಳೂ ಇವೆ.

ಎಲ್ಲಕ್ಕಿಂತ ಮುಖ್ಯವಾಗಿ, ಅವರು ಈ ಹನ್ನೆರಡು ವರ್ಷದಲ್ಲಿ ಒಂದೇ ಒಂದು ಸಲಕ್ಕೂ ಒಬ್ಬೇ ಒಬ್ಬ ರಾಜಕಾರಣಿಯನ್ನು ವೇದಿಕೆ ಹತ್ತಲು ಬಿಟ್ಟಿಲ್ಲ. ಅಲ್ಲಿಗೆ ಈ ಕಾರ್ಯಕ್ರಮದ ಯಶಸ್ಸಿನ ಗುಟ್ಟು ನಿಮಗೆ ಅರ್ಥವಾಗಿರುತ್ತದೆ! ಜಾತಿ, ಧರ್ಮಗಳನ್ನು ತಂದು, ಮೇಲು ಕೀಳು ಭಾವಗಳನ್ನು ಸೃಷ್ಟಿಸಿ ಹಳ್ಳಿಗಳನ್ನು ಹಾಳುಮಾಡಿದ ಈ ರಾಜಕಾರಣವನ್ನು ದೂರವಿಡುವುದೇ ಹಳ್ಳಿಗಳ ಸ್ವಾಸ್ಥ್ಯದ ಗುಟ್ಟು ಎಂಬದನ್ನು ಈ ನಮ್ಮನೆ ಹಬ್ಬ ಮಾತಿನಲ್ಲಲ್ಲದೆ, ಕೃತಿಯಲ್ಲಿ ಸಾಧಿಸಿ ತೋರಿಸುತ್ತಿದೆ. ಹಾಗಂತ ರಾಜಕಾರಣಿಗಳು ಇವರ ಕಾರ್ಯಕ್ರಮಕ್ಕೆ ಬರಲ್ಲ ಅಂತಲ್ಲ. ಅವರೂ ಬರ್ತಾರೆ. ಆದರೆ ಅವರು ಸಭಿಕರಷ್ಟೇ. ವೇದಿಕೆ ಇರುವುದಿಲ್ಲ!

ನಾನು ಪುಸ್ತಕ ಸಂಸ್ಕೃತಿ ಬಗ್ಗೆ ಏನೇನೋ ಮಾತನಾಡ್ತಿರ್ತೀನಿ ಮತ್ತು ಮಾಡ್ತಿರ್ತೀನಿ ಆದರೆ ಅದಕ್ಕಿಂತ ನೂರುಪಟ್ಟು ಉತ್ತಮ ಕೆಲಸವನ್ನು ಈ ನಮ್ಮನೆಹಬ್ಬ ಮಾಡುತ್ತಿದೆ. ಪ್ರೀತಿಯ ಮೇಷ್ಟ್ರು ನಾಗತಿಹಳ್ಳಿ ಚಂದ್ರಶೇಖರ್‌ ಅವರೂ ತಮ್ಮೂರಿನಲ್ಲಿ ಇದನ್ನೆಲ್ಲಾ ಮಾಡುವುದನ್ನು ಕೇಳಿದ್ದೇನೆ. ಆದರೆ ಸ್ವತಃ ನೋಡಿದ್ದು ಇದೇ ಮೊದಲು. ಈ ನಮ್ಮನೆ ಹಬ್ಬವನ್ನು ನೋಡಿದ ಕ್ಷಣದಿಂದ ʼಮಾಡುವುದಾದರೆ ಇಂತಹುದ್ದನ್ನು ಮಾಡಬೇಕುʼ ಎಂಬ ಆಸೆ ನನಗೆ. ಮೊದಲೇ ಹೇಳಿದ್ನಲ್ವಾ… ಮಧ್ಯಮ ವರ್ಗದವರ ಮನಸ್ಥಿತಿಯೇ ಅಷ್ಟು!

ಹಳ್ಳಿಗಳಿಂದಾದ ದೇಶ ಭಾರತ. ಅಂತಹ ಹಳ್ಳಿಗಳ ಮೂಲಸ್ವರೂಪವನ್ನು ಉಳಿಸಿಕೊಳ್ಳಲು ಬೆಟ್ಟಕೊಪ್ಪ ಎಂಬ ಹಳ್ಳಿಯಿಂದಲೇ ಒಂದು ಮಾದರಿ ದೊರಕಿದೆ. ಅದು ಇಡೀ ನಾಡಿಗೆ ಮಾದರಿಯಾಗಲಿ. ಹಳ್ಳಿಯ ಯುವ ಸಮೂಹ ಮುಖ್ಯವಾಗಿ ಮಹಿಳೆಯರು ಇಂತಹದ್ದೊಂದು ಹಬ್ಬವನ್ನು ತಮ್ಮ ತಮ್ಮ ಊರುಗಳಲ್ಲಿ ರಾಜಕಾರಣವನ್ನು ಹೊರಗಿಟ್ಟು ಮಾಡುವುದಾದರೆ ಹಳ್ಳಿಗಳ ಸ್ವಾಸ್ಥ್ಯವನ್ನು ಕಾಪಾಡುವ ನಿಟ್ಟಿನಲ್ಲಿ ಅದೊಂದು ಕ್ರಾಂತಿಯೇ ಆಗಿಬಿಡುತ್ತದೆ ಎಂದು ಭಾವಿಸಿದ್ದೇನೆ. ಅಂದ ಹಾಗೆ, ಮುಂದಿನ ನಮ್ಮನೆ ಹಬ್ಬ ಡಿಸೆಂಬರ್‌ ಏಳಕ್ಕೆ. ನಾನು ಮತ್ತೆ ಹೋಗುತ್ತಿದ್ದೇನೆ, ನೀವೂ ಬನ್ನಿ. ಇದೊಂದು ನೋಡಲೇಬೇಕಾದ ಹಬ್ಬ.

ಕೊನೆಮಾತು..
ಕಳೆದ ಸಲ ಶಿರಸಿಗೆ ʼಪ್ರಕೃತಿ ಚಿಕಿತ್ಸೆʼಗೆ ಹೋಗಿದ್ದೆ,
ಈ ಸಲ ʼಸಂಸ್ಕೃತಿ ಚಿಕಿತ್ಸೆʼ ಗೆ ಹೋಗಿ ಬಂದೆ.


‍ಲೇಖಕರು avadhi

December 4, 2023

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: