ನಮಗೆ ಮಠಗಳು, ಧರ್ಮಕ್ಷೇತ್ರಗಳು, ಮಠಾಧೀಶರು, ಧರ್ಮಾಧಿಕಾರಿಗಳು ಬೇಕೇ? – ಜಿಪಿ ಬಸವರಾಜು

‘ಪ್ರಗತಿಪರ’ ಎಂಬ ಮಾಯಾ ರಾಕ್ಷಸ

gp-411

ಜಿ ಪಿ ಬಸವರಾಜು

ಜಾತಿ ಎನ್ನುವುದು ಭಾರತದಲ್ಲಿ ಬಹುದೊಡ್ಡ ಪಿಡುಗು. ಸಾವಿರಾರು ವರ್ಷಗಳಿಂದ ಉಳಿದುಕೊಂಡು ಬಂದಿರುವ ಈ ಪಿಡುಗು ಇವತ್ತಿಗೂ ಮನುಷ್ಯರನ್ನು ಮನುಷ್ಯರಾಗಿ ನೋಡದ, ಗೌರವಿಸಿದ, ಸಮಾನವಾಗಿ ಕಾಣದ ಅತ್ಯಂತ ಹೇಯ ಪದ್ಧತಿಗೆ ಕಾರಣವಾಗಿದೆ. ಈ ಜಾತಿ ಪದ್ಧತಿಯನ್ನು ಧರ್ಮದ ಮುಸುಕಿನಲ್ಲಿ ಪೊರೆಯುತ್ತ, ಗಟ್ಟಿಗೊಳಿಸುತ್ತ, ಸಮಾಜವನ್ನು ಒಡೆಯುವ ಕೆಲಸವನ್ನು ನಿರಂತರವಾಗಿ ಮಾಡಿಕೊಂಡು ಬಂದಿರುವ ಮಠಗಳೆಂಬ ಕೋಟೆಗಳು ಭದ್ರವಾಗಿಯೇ ಉಳಿದುಕೊಂಡು ಬಂದಿವೆ. ಸ್ವಾತಂತ್ರ್ಯಗಳಿಸಿಕೊಂಡ ಮೇಲಾದರೂ ಈ ಕೋಟೆಗಳನ್ನು ಒಡೆದು ಹಾಕಿ ಮನುಷ್ಯರನ್ನು ಒಂದುಗೂಡಿಸುವ ಕೆಲಸವನ್ನು ನಮ್ಮ ಪ್ರಜಾಪ್ರಭುತ್ವ ಮಾಡಬೇಕಾಗಿತ್ತು. ಆದರೆ ಓಟಿನ ರಾಜಕಾರಣವೇ ಪ್ರಮುಖ ಕಾರಣವಾಗಿ ಈ ಜಾತಿಗಳನ್ನು, ಜಾತಿವ್ಯವಸ್ಥೆಯನ್ನು, ಮಠಗಳನ್ನು ಉಳಿಸಿಕೊಂಡು ಬರಲಾಗಿದೆ. ಇದಕ್ಕೆ ಯಾರು ಕಾರಣರು ಎಂದು ಪ್ರಶ್ನಿಸಿದರೆ ಸಿಕ್ಕುವ ಉತ್ತರದಲ್ಲಿ ಮತದಾರರು, ಜನಪ್ರತಿನಿಧಿಗಳು, ಮಠಗಳು, ಜಾತಿಗಳು ಎಲ್ಲರೂ ಎಲ್ಲವೂ ಸಿಕ್ಕುತ್ತಾರೆ. ಇದೊಂದು ಕ್ರೂರ ವ್ಯವಸ್ಥೆ ಎಂದು ಸಾವ್ರತರ್ಿಕವಾಗಿ ಒಪ್ಪಿಕೊಂಡರೂ ಈ ಮಠಗಳನ್ನು ನಿವಾರಿಸುವ ಕ್ರಮಗಳಿಗೆ ಯಾರೂ ಮುಂದಾಗುವುದಿಲ್ಲ. ಜಾತಿಗಳನ್ನು ಬಲಿಷ್ಠಗೊಳಿಸುವ ಮಠಗಳ ಕೃಪೆ ನಮ್ಮ ಜನಪ್ರತಿನಿಧಿಗಳಿಗೆ ಬೇಕು; ಹಾಗೆಯೇ ಮತಬ್ಯಾಂಕ್ಗಳೆಂದು ಪರಿಗಣಿಸಿರುವ ಮಠಗಳು ರಾಜಕಾರಣಿಗಳಿಗೆ ಬೇಕು. ಹೀಗೆ ಪರಸ್ಪರ ಸಹಕಾರ ತತ್ವದ ಮೇಲೆ ಈ ಅನಿಷ್ಠ ಪದ್ಧತಿ ಉಳಿದುಕೊಂಡು ಬಂದಿದೆ.

ಅಷ್ಟೇ ಅಲ್ಲ ಮಠಗಳಿಲ್ಲದ, ಮಠಾಧೀಶರಿಲ್ಲದ, ಜಾತಿ ವ್ಯವಸ್ಥೆಯಲ್ಲಿ ಪಡಬಾರದ ಯಾತನೆಯನ್ನು ಪಟ್ಟ ಕೆಳವರ್ಗದ ಜಾತಿಗಳು ಕೂಡಾ ಈ ಮಠಗಳಿಗೆ ಅಂಟಿಕೊಳ್ಳಲು ನೋಡುತ್ತಿವೆ. ಈ ಮಠಗಳು ಶಕ್ತಿಕೇಂದ್ರಗಳಾಗುತ್ತಿರುವುದನ್ನು ನೋಡುತ್ತಿರುವ ಸಣ್ಣಪುಟ್ಟ ಜಾತಿಗಳು ತಾವೂ ಒಂದು ಶಕ್ತಿಕೇಂದ್ರವನ್ನು ರೂಪಿಸಿಕೊಳ್ಳಲು ನೋಡುತ್ತಿವೆ. ಇದು ನಮ್ಮನ್ನು ಪ್ರಪಾತದ ಅಂಚಿಗೆ ತೆಗೆದುಕೊಂಡು ಹೋಗುತ್ತದೆ ಎಂಬ ಪ್ರಜ್ಞೆ ವಿಚಾರವಂತರಿಗೆ, ವಿದ್ಯಾವಂತರಿಗೆ, ಆಧುನಿಕ ಜ್ಞಾನವನ್ನು ಪಡೆದುಕೊಂಡವರಿಗೆ ಇದ್ದರೂ, ಅವರು ಮಠಗಳನ್ನು ತೊಡೆದುಹಾಕುವ ಪ್ರಯತ್ನಕ್ಕೆ ಮುಂದಾಗುತ್ತಿಲ್ಲ. ಅಥವಾ ಅಂಥ ಪ್ರಯತ್ನ ಫಲಿತಾಂಶಗಳನ್ನು ನೀಡುವುದಿಲ್ಲ ಎಂಬ ನಿರಾಶೆಯಲ್ಲಿ ಮೌನವಾಗಿದ್ದಾರೆ. ಇದು ಪ್ರಜಾಪ್ರಭುತ್ವಕ್ಕೆ ಬಹುದೊಡ್ಡ ಅಪಾಯವನ್ನು ತಂದೊಡ್ಡುತ್ತದೆ ಎಂಬುದರಲ್ಲಿ ಅನುಮಾನವಿಲ್ಲ.
ಈ ಮಧ್ಯೆ ಮಠಗಳು ಕೂಡಾ ಬದಲಾಗುತ್ತಿರುವ ಪರಿಸರಕ್ಕೆ ಹೊಂದಿಕೊಳ್ಳಲು ಬಗೆಬಗೆಯ ಪ್ರಯತ್ನಗಳನ್ನು ಮಾಡುತ್ತಿವೆ. ‘ಪ್ರಗತಿ’ ಅಥವಾ ‘ಪ್ರಗತಿಪರ’ ಎನ್ನುವುದು ಈ ಕಾಲದ ಬಹುದೊಡ್ಡ ಅಸ್ತ್ರ ಎಂಬುದನ್ನು ಅರಿತಿರುವ ಮಠಗಳು ತಮ್ಮನ್ನು ಈ ಕೊಂಡಿಗೆ ಸಿಕ್ಕಿಸಿಕೊಳ್ಳಲು ನೋಡುತ್ತಿವೆ. ಪ್ರಗತಿಪರ ಮಠಗಳು ಎಂಬ ಲೇಬಲ್ ಸಿಕ್ಕ ಕೂಡಲೇ ವಿಚಾರವಂತರಲ್ಲೂ ಮಠಗಳ ಬಗೆಗಿನ ವಿರೋಧ ಕಡಿಮೆಯಾಗುತ್ತಿರುವುದು ಈ ಹಾದಿಯಲ್ಲಿ ಮಠಗಳು ಮುಂದುವರಿಯಲು ಉತ್ತೇಜನ ನೀಡುತ್ತಿದೆ. ಹೀಗಾಗಿ ಪ್ರತಿಯೊಂದು ಮಠವೂ ತಾನು ಪ್ರಗತಿಪರ ಎಂದು ಸಾರಲು ನೋಡುತ್ತಿದೆ.

2

ದಲಿತರ ಕೇರಿಗೆ ಪ್ರವೇಶ, ಸಹಪಂಕ್ತಿ ಭೋಜನ, ಸಾಮೂಹಿಕ ವಿವಾಹ, ದಲಿತರಿಗೆ ದೀಕ್ಷೆ, ದಲಿತ ಯುವಕರಿಗೆ ಮಠಾಧೀಶರ ಪಟ್ಟ ಇತ್ಯಾದಿ ಇತ್ತೀಚಿನ ಅನೇಕ ಸರ್ಕಸ್ಗಳ ಹಿಂದೆ ಮಠಗಳ ‘ಪ್ರಗತಿಪರ’ ಹುನ್ನಾರವೇ ಇದೆ. ನಿಜವಾದ ಕಾಳಜಿ ಇರುವ ಮಠಾಧಿಪತಿಗೆ ಇಂಥ ದೊಂಬರಾಟಗಳು ಬೇಕಿಲ್ಲ. ನಿಜ ಕಾಳಜಿಯ ಮಠಗಳು ಜಾತಿಯನ್ನು ಹೋಗಲಾಡಿಸಲು ಸೆಣಸಬಹುದು; ತನ್ನ ಮಠದಲ್ಲಿ ಜಾತಿಯ ಸೋಂಕಿಲ್ಲದಂತೆ ನೋಡಿಕೊಳ್ಳಬಹುದು. ತಾನು ನಡೆಸುವ ವಿದ್ಯಾಸಂಸ್ಥೆಗಳಲ್ಲಿ, ಆಸ್ಪತ್ರೆಗಳಲ್ಲಿ, ಇತರ ವಾಣಿಜ್ಯ ಸಂಸ್ಥೆಗಳಲ್ಲಿ ಜಾತಿ ಭೇದವನ್ನು ಎಣಿಸದೆ ಎಲ್ಲರಿಗೂ ಸಮಾನ ಅವಕಾಶವನ್ನು ನೀಡಬಹುದು. ದೇಗುಲ ಪ್ರವೇಶ ಎನ್ನುವುದು ಎಲ್ಲರಿಗೂ ಮುಕ್ತ ಪ್ರವೇಶ ಎಂಬುದನ್ನು ಸಾಬೀತು ಪಡಿಸಲು ನೋಡಬಹುದು. ಮಠದ ವಿದ್ಯಾಥರ್ಿನಿಲಯಗಳಲ್ಲಿ ಜಾತಿಯನ್ನು ಪರಿಗಣಿಸದೆ ಎಲ್ಲ ಬಡವರಿಗೂ ಅವಕಾಶ ನೀಡಬಹುದು. ಆದರೆ ಇವತ್ತಿನ ಪರಿಸ್ಥಿತಿ ಏನು ನೋಡಿ: ನಾವು ಜಾತಿಯನ್ನು ಮಾನ್ಯ ಮಾಡುವುದಿಲ್ಲ ಎಂದು ಹೇಳುವ ಮಠಗಳು, ತಮ್ಮ ಆಡಳಿತ ವ್ಯವಸ್ಥೆಯ ಚುಕ್ಕಾಣಿ ಹಿಡಿಯಬಲ್ಲ ಆಯಕಟ್ಟಿನ ಜಾಗಗಳಲ್ಲಿ ತಮ್ಮ ಜಾತಿಯವರನ್ನೇ ಆಯ್ಕೆಮಾಡಿ ಕೂರಿಸುತ್ತವೆ. ಜಾತಿ ಇಲ್ಲ ಎಂದು ಹೇಳಿದರೂ, ಎಷ್ಟು ಜನ ದಲಿತರಿಗೆ ಇಲ್ಲಿ ಜಾಗವಿರುತ್ತದೆ ಎಂಬುದನ್ನು ಪರಿಶೀಲಿಸಬಹುದು. ಒಂದೋ ಎರಡೋ ಮಠಗಳು ಇದಕ್ಕೆ ಅಪವಾದವಾಗಿ ಕಾಣಿಸಬಹುದು. ಆದರೆ ಅಲ್ಲಿಯೂ ಮಠವನ್ನು ನಿಯಂತ್ರಿಸಲು ಇರುವ ಭಕ್ತರ ಸಮೂಹದಲ್ಲಿ ಜಾತಿಯ ಪ್ರಾಬಲ್ಯವೇ ಪ್ರಧಾನವಾಗಿ ಕಾಣಿಸುತ್ತದೆ. ಆದರ್ಶ ಬೇರೆ, ಅನುಷ್ಠಾನ ಬೇರೆ. ಸಿದ್ಧಾಂತ ಬೇರೆ, ವಾಸ್ತವ ಬೇರೆ. ಇದನ್ನು ದಾಟಿ ಜಾತ್ಯತೀತ, ಮತಧರ್ಮ ನಿರಪೇಕ್ಷ ಸಮಾಜ ಕಟ್ಟುವುದು ಹೇಗೆ?

ಇನ್ನೂ ಒಂದು ಅಪಾಯವನ್ನು ನಾವಿಂದು ನೋಡುತ್ತಿದ್ದೇವೆ. ಜಾತಿ ವ್ಯವಸ್ಥೆಯಿಂದ ಅವಮಾನಕ್ಕೆ, ಕ್ರೂರ ನಡವಳಿಕೆಗಳಿಗೆ ಬಲಿಯಾದ ಕೆಳವರ್ಗದ ಜಾತಿಗಳು, ಅಸ್ಪೃಶ್ಯತೆ ಎಂಬ ಮನುಕುಲವೇ ನಾಚಿಕೆಪಟ್ಟುಕೊಳ್ಳಬೇಕಾದ ಪದ್ಧತಿಗೆ ಬಲಿಯಾದ ಜನ ಸಮೂಹವೇ ಇವತ್ತು ಈ ಮಠಾಧಿಪತಿಗಳ ‘ಪ್ರಗತಿಪರತೆ’ಗೆ ಮರುಳಾಗಿ ದಾರಿತಪ್ಪುತ್ತಿರುವುದು ದೊಡ್ಡ ವ್ಯಂಗ್ಯವಾಗಿ ಕಾಣಿಸುತ್ತಿದೆ. ಮಠಗಳು ಎಂದೂ ಜಾತಿಯನ್ನು ಒಡೆಯುವ ಶಕ್ತಿಗಳಾಗುವುದಿಲ್ಲ. ಜಾತಿಪದ್ಧತಿಯನ್ನು ನಾಶಮಾಡುವ ಕೇಂದ್ರಗಳಾಗುವುದಿಲ್ಲ. ಇದು ಸಾಮಾನ್ಯ ಅರಿವಿಗೆ ನಿಲುಕುವ ಸಂಗತಿ. ಇದನ್ನು ಅರಿಯದೇ ಮಠಗಳು ಒಡ್ಡುತ್ತಿರುವ ಬಲೆಗೆ ಶತಶತಮಾನಗಳ ಅವಮಾನಿತರು ಬಲಿಯಾಗುತ್ತಿರುವುದರ ಹಿಂದಿನ ಕಾರಣಗಳು ಏನಿರಬಹುದು?- ಮಠಗಳು ಶಕ್ತಿಕೇಂದ್ರಗಳಾಗಿವೆ ಎಂಬ ಕಟು ವಾಸ್ತವವೊಂದೇ ಇದಕ್ಕೆ ಕಾರಣವಿರಬಹುದೇ?

ಪ್ರಗತಿಪರ ಮಠಾಧೀಶರ ವೇದಿಕೆಯೊಂದು ಇತ್ತೀಚೆಗೆ ಅಸ್ತಿತ್ವಕ್ಕೆ ಬಂದಿದೆ. ಇಂಥ ವೇದಿಕೆಗಳು ಎಷ್ಟು ದೂರ ಸಾಗಲು ಸಾಧ್ಯ. ನಿಜವಾದ ಕಾಳಜಿಯಿಂದ ಎಷ್ಟು ಕ್ರಿಯಾಶೀಲವಾಗಿ ವರ್ತಿಸಲು ಸಾಧ್ಯ?- ಈ ಪ್ರಶ್ನೆಗಳ ವಿವೇಚನೆಯೂ ಇಂದು ನಡೆಯಬೇಕಾಗಿದೆ.

ಬ್ರಾಹ್ಮಣೀಕರಣ ಎನ್ನುವ ರೋಗ ಎಲ್ಲ ಜಾತಿಗಳನ್ನು ಆವರಿಸಿರುವುದೂ ಇನ್ನೊಂದು ಕಾರಣವಾಗಿರಬಹುದು. ಈ ಬ್ರಾಹ್ಮಣೀಕರದ ಅನಿಷ್ಠ ಗುಣಗಳನ್ನು ತೊಡೆದುಹಾಕಬೇಕಾದ ಸಮಾಜ, ಅದನ್ನು ದೂರೀಕರಿಸದೆ ಮತ್ತೆ ಮತ್ತೆ ಅದು ಸುತ್ತಿಕೊಳ್ಳುವಂತೆ ಮಾಡುತ್ತಿರುವುದು ಗುಪ್ತವಾಗಿ ಬ್ರಾಹ್ಮಣ್ಯದ ಬಗ್ಗೆ ಈ ಸಮಾಜ ಇಟ್ಟುಕೊಂಡಿರುವ ಪ್ರೀತಿಯೂ ಕಾರಣವಾಗಿರಬಹುದು. ಜಾತಿ ಮತ್ತು ಧರ್ಮಗಳ ಬಗೆಗಿನ ಮೌಢ್ಯವೂ ಇನ್ನೊಂದು ಕಾರಣವಾಗಿರಬಹುದು. ಸಣ್ಣಪುಟ್ಟ ಜಾತಿಗಳಿಗೆ ಮಠ ಎನ್ನುವುದು ಒಂದು ರಕ್ಷಣೆಯ ಕೋಟೆ ಎನ್ನುವ ಭಾವನೆಯೂ ಇದರ ಹಿಂದೆ ಇರಬಹುದು.

ಜಾತಿಯ ಚೌಕಟ್ಟನ್ನು ಮೀರಿ ಎಲ್ಲ ಜಾತಿಯ ಜನರೂ ಒಂದು ಕಡೆ ಕುಳಿತು ಊಟಮಾಡುವ ಅಂದರೆ ‘ಸಹಪಂಕ್ತಿ ಭೂಜನ’ದ ಕೇಂದ್ರಗಳೂ ನಮ್ಮಲ್ಲಿ ಇವೆ. ಧರ್ಮ, ದೇವರು, ಮೌಢ್ಯ ಇವುಗಳನ್ನು ಬಂಡವಾಳ ಮಾಡಿಕೊಂಡು ಬೆಳೆದ ಕೇಂದ್ರಗಳು ಅನಿವಾರ್ಯವಾಗಿ ಇಂಥ ಸಹಭೋಜನಕ್ಕೆ ಅವಕಾಶ ಕಲ್ಪಿಸುತ್ತವೆ. ಇಲ್ಲಿ ಊಟ ಮಾಡುವವರೆಲ್ಲ ಜಾತಿಯನ್ನು ಮೀರಿ ವರ್ತಿಸುತ್ತಾರೆಂದು ಹೇಳಲು ಬರುವುದಿಲ್ಲ. ಆ ಹೊತ್ತಿಗೆ ಜಾತಿಯನ್ನು ಮರೆತು ಊಟಮಾಡಿ ಹೋಗುವವರೇ ಹೆಚ್ಚು. ಧಾರ್ಮಿಕ ಕ್ಷೇತ್ರಗಳಾಗಿ, ‘ಪುಣ್ಯ’ ಕ್ಷೇತ್ರಗಳಾಗಿ ಪ್ರಸಿದ್ಧಿ ಪಡೆದ ಇಂಥ ಕ್ಷೇತ್ರಗಳಲ್ಲಿ ನಡೆಯುವ ಭೋಜನ, ಸರಳ ವಿವಾಹ, ಧಾರ್ಮಿಕ ಆಚರಣೆಗಳು ಎಲ್ಲ ಜನರನ್ನೂ ಒಳಗೊಂಡಂತೆ ಕಾಣಿಸಿಕೊಳ್ಳುತ್ತವೆ. ಆದರೆ ಸ್ವಲ್ಪ ಪರದೆಯನ್ನು ಸರಿಸಿನೋಡಿದರೆ, ಅಲ್ಲಿ ಬೇರೊಂದು ಬಗೆಯ ಸಮಾಜದ್ರೋಹಿ ಶಕ್ತಿಗಳು ಕ್ರಿಯಾಶೀಲವಾಗಿರುತ್ತವೆ. ದೊಡ್ಡ ದೊಡ್ಡ ಶ್ರೀಮಂತರು, ಭ್ರಷ್ಟ ರಾಜಕಾರಣಿಗಳು, ಅಕ್ರಮವಾಗಿ ಆಸ್ತಿ ಸಂಪತ್ತನ್ನು ಗಳಿಸಿದವರು ತಮ್ಮ ಹಣ, ಸಂಪತ್ತನ್ನು ಸುಭದ್ರವಾಗಿ ಇಡಲು ಇಂಥ ಕೇಂದ್ರಗಳನ್ನು, ಕ್ಷೇತ್ರಗಳನ್ನು ‘ಸ್ವಿಸ್ ಬ್ಯಾಂಕ್’ಗಳಾಗಿ ಬಳಸಿಕೊಳ್ಳುತ್ತಾರೆ. ಮೌಢ್ಯವನ್ನು ಬಿತ್ತುವ, ಭ್ರಷ್ಟರಿಗೆ ಜಾಗ ಕೊಡುವ ಮೂರ್ಖನೊಬ್ಬ ಈ ಕ್ಷೇತ್ರದ ಅಧಿಕಾರಿಯಾಗಿ, ಸ್ವಾಮಿಯಾಗಿ, ಅಧಿಪತಿಯಾಗಿ ಅಧಿಕಾರ ಚಲಾಯಿಸುತ್ತ ಇರುತ್ತಾನೆ. ಇವನು ಎಲ್ಲ ರಾಜಕಾರಣಿಗಳಿಗೂ ಚುನಾವಣೆಯ ಸಂದರ್ಭದಲ್ಲಿ ಗುಟ್ಟಾಗಿ ನಿಧಿಯನ್ನು ಕೊಡುವವನಾಗಿರುತ್ತಾನೆ. ಮತ್ತೆ ಆರಿಸಿಬಂದವರಿಂದ ಎಲ್ಲ ಲಾಭಗಳನ್ನೂ ಈ ಕ್ಷೇತ್ರಕ್ಕೆ ಪಡೆಯುವುದು ಅವನ ಹುನ್ನಾರವಾಗಿರುತ್ತದೆ. ಬಡವರ ಬಿಡಿಕಾಸು ಧರ್ಮದ ದೇವರ ಹೆಸರಿನಲ್ಲಿ ಇಲ್ಲಿಗೆ ಬಂದು ಬೀಳುತ್ತಲಿರುತ್ತದೆ. ಎಲ್ಲ ದುಷ್ಟಕೃತ್ಯಗಳೂ ಇಲ್ಲಿ ಧರ್ಮದ ಮುಸುಕು ಹೊದ್ದುಕೊಂಡು ಅಡೆತಡೆ ಇಲ್ಲದೆ ನಡೆಯುತ್ತಿರುತ್ತವೆ.

ಈಗ ಹೇಳಿ, ನಮಗೆ ಮಠಗಳು, ಧರ್ಮಕ್ಷೇತ್ರಗಳು, ಮಠಾಧೀಶರು, ಧರ್ಮಾಧಿಕಾರಿಗಳು ಬೇಕೇ?

‍ಲೇಖಕರು G

August 10, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

3 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: