ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

“ನನ್ನ ಮಕ್ಕಳಿದ್ದ ಮನೆನಾ ತೆಗೆದ್ಬಿಟ್ಟ್ರಲ್ಲ ಡಾಕ್ಟ್ರೇ……”

– ಅ೦ಜಲಿ ರಾಮಣ್ಣ

ನನ್ನ ಮಕ್ಕಳಿದ್ದ ಮನೆನಾ ತೆಗೆದ್ಬಿಟ್ಟ್ರಲ್ಲ ಡಾಕ್ಟ್ರೇ……

ಹದಿನಾರು ವರ್ಷಗಳ ಹಿಂದೆ ಅಮ್ಮನ ಹರೆಯ ಹದಿನಾರಂತೂ ಇರಲಿಲ್ಲ ಆದರೆ ದೇಹಕ್ಕಿತ್ತು ಮಿತಿ. ಹಾಗಾಗಿ ಗರ್ಭಕೋಶದ ಶಸ್ತ್ರ ಚಿಕಿತ್ಸೆ. ಚಾಕು ಕತ್ತರಿಗಳ ಒಡಾಟ ಅವಳ ದೇಹದ ಮೇಲೆ ಯಶಸ್ವಿಯಾಯ್ತು. ಆ ಹೊತ್ತು ಅಮ್ಮ ಅರಿವಳಿಕೆಯಿಂದ ಅರಿವಿನೆಡೆಗೆ ಸಾಗ್ತಿದ್ದ್ಳು. ಅರೆ ಬರೆ ಜ್ಞಾನದ ಅವಸ್ಥೆಯಲ್ಲಿ ಅಮ್ಮನದ್ದು ಒಂದೇ ಕನವರಿಕೆ “ನನ್ನ ಮಕ್ಕಳಿದ್ದ ಮನೆನಾ ತೆಗೆದ್ಬಿಟ್ಟ್ರಲ್ಲ ಡಾಕ್ಟ್ರೇ……”…………ಆಗ ಅವಳು ಒಬ್ಬ Patient ನಾನು care taker ಅಷ್ಟೇ!

ಪ್ರೀತಿಯ ಅಮ್ಮ

ಇವತ್ತು ನಾ ಮತ್ತೊಮ್ಮೆ ಮಗಳಾಗಿ ಬರ್ಬೇಕು. ಕಣ್ಣು ನೀರಾಗ್ತಿದೆ ಕಣೇ ಅಮ್ಮ. ನೀ ಕರೆದು , ಇವರೊಪ್ಪಿ, ನಾ ಬುತ್ತಿ ಕಟ್ಟ್ಕೊಂಡು ಹೊರಟು ನಿಂತ್ರೂ …..

ಸೂರಿಲ್ಲದ ಮನೆ ನನಗೆ ಮಾತ್ರ ಏಕಾಯ್ತು ಅಮ್ಮ……..

ನೀನು ಬಾರಿ ಬಾರಿಗೂ ಬಾರೇ ಅಂದಾಗ ನಾ ಇಲ್ಲಿ ಮರಿಗಳಿಗೆ ಗುಟುಕು ನೀಡ್ತಾ ಬದುಕಾಗಿದ್ದೆ. ಆಗೇಕೆ ನೀ ಬೇಡವಾಗಿದ್ದೆ? ಸೊಂಟಕ್ಕೆ ಚುಚ್ಚಿ ನಾನೇ ಸಿಕ್ಕಿಸಿದ ರೆಕ್ಕೆ ಹೊತ್ತು ಎಲ್ಲರೂ ಅವರವರ ಮರ ಹುಡುಕ್ಕೊಂಡು ಹಾರೋಕ್ಕೆ ತಯಾರಾಗಿ ನಿಂತ್ತಿದ್ದಾರೆ ನೋಡು , ನಾ ಮಾತ್ರ ಇಲ್ಲೇ ನಿಂತು ಬಾಗಲವಾಡ ಮುರಿದು ಬಿದ್ದ ಮನೆ ಕಡೆ ನೋಡ್ತಿದ್ದೀನಿ ಒಂದ್ಸಲಿ ನನ್ನ ನೋಡೇ ಅಮ್ಮ…….

ತೀನ್‍ತಾಲ್‍ನಲ್ಲೂ ಉಸಿರಿನ ಲಯ ತಪ್ಪಿಸದೆ ನೀ ಹೇಳಿಕೊಟ್ಟಂತೆ ಹೆಜ್ಜೆಹಾಕಿದ್ದೀನಿ. ತೋಡಿ ರಾಗವನ್ನೂ ಕೊಳದಲ್ಲಿ ಮುಳುಗಿಸಿ ಸರಿ ಝಾವಕ್ಕೆ ನೀ ಕಲಿಸಿಕೊಟ್ಟಂತೇ ಆಲಾಪಿಸಿ ಗೆದ್ದಿದ್ದೀನಿ. ಸೋತು ಗೆಲ್ಲೋ ನೀತಿಯ ಸೋಗಲಕ್ಕಿ ಇಟ್ಟಿದ್ದು ನೀ ತಾನೆ? “ಈಗ ಬರ್ತೀನಿ ಇನ್ನೊಮ್ಮೆ ಅಕ್ಕಿ ಬೆಲ್ಲ ಕೊಟ್ಟು ಹರಸಿಬಿಡೆ” ಅನ್ನೋಣ ಅಂದ್ರೆ ತಪ್ಪಿದ ಮನೆಯ ದಾರೀನೂ ತಪ್ಪಾಯ್ತಲ್ಲೆ ಅಮ್ಮ…….

ಈಚೀಚೆಗೆ ಚೈತ್ರದಲ್ಲೂ ಯಾಕೋ ಮಾಗೀ ಛಳಿಯಾಡಿಸುತ್ತೆ, ಹೊದಿಕೆ ಚಿಕ್ಕದನಿಸುತ್ತೆ. ಇಬ್ಬನಿಯಲ್ಲಿ ಮಗ್ಗುಲು ಬದಲಿಸೋ ಮನಸ್ಸಿಗೆ ನಿನ್ನ ಚೀಲದಲ್ಲಿ ಗುಬ್ಬಚ್ಚಿಯಾಗಿಬಿಡಬೇಕು ಅನ್ನಿಸಿಬಿಡತ್ತೆ. ಯಾವ ಒಗಿಯೋ ಕಲ್ಲ್ಮೇಲೆ ಮೈಕಾಯಿಸ್ಕೊಳ್ಳಕ್ಕೆ ಹೋಯ್ತೇ ನಿನ್ನ ಗರ್ಭ ಅಮ್ಮ…….

ಹೂಂ, ಎರಡು ಹನಿ ದಿಗಂತ ನೋಡ್ತಾ ಕೆನ್ನೆಗುರುಳ್ಬಿಡತ್ತೆ ನನಗೆ. ಮತ್ತೆ ಮತ್ತೆ ಮನಸ್ಸು ನಿರುಮ್ಮಳವಾಗಿಬಿಡುತ್ತೆ ……….ಪಾಪ, ಉದ್ದಿನ ಮೂಟೆ ಉರುಳಿಸಿ ನಿನ್ನ ಮುದ್ದಿನ ಹಕ್ಕಿಯ ಹಾರಿಬಿಡೋ ಆಟದಲ್ಲಿ ನೀ ಏನೆಲ್ಲಾ ಕಳ್ಕೊಂಡೆ? ಮಕ್ಕಳು, ಮಕ್ಕಳ ಮನೆ ಅಂತೆಲ್ಲಾ ಅರಿವಳಿಕೆಯ ಬಡಬಡಿಕೆಗಳಾದ್ರೂ, ಈಗ ನಿನ್ನ ಎಚ್ಚರದಲ್ಲೇ ದೂರ ಹೋಗ್ತಿರೋ ಸೊಂಟ, ಕಾಲು, ಕೈ…ಅಬ್ಬ, ಇನ್ನೂ ಏನೇನೆ ಅಮ್ಮ…..

ನಿನ್ನ ಕಳೆಯೋ ಲೆಕ್ಕದಲ್ಲಿ ನನ್ನ ಬದುಕಿನ ಸಂಕಲನಕ್ಕೆ ಬಯಸೊದು ಮಾತ್ರ ನೀ ಮರೀಲಿಲ್ಲ ನೊಡು. ಅದಕ್ಕೆ, “ಅಮ್ಮ, ನಾ ಮತ್ತೊಮ್ಮೆ ಮಗಳಾಗಿ ಬರ್ಬೇಕು” ಅಂತ ಮನಸ್ಸು ಒರಾತ ತೆಗೆದಾಗ್ಲೆಲ್ಲ ಅವ ಅಂಗೈ ಮುಂಚಾಚ್ತಾನೆ. ನೋಡು ಅಮ್ಮ, ನೀ ಕೊಟ್ಟ ಈ ದೇಹ ಅದರೊಳಗಿನ ನಿನ್ನ ಮನಸ್ಸು ಎಲ್ಲವನ್ನೂ ಅವನ ಅಂಗೈಯಲ್ಲಿಟ್ಟು ಮೈಮುರಿದು ಏಳ್ತೀನಿ……ಪುನರಪಿ ಜನನೀ ಜಠರೇ ಶಯನಂ ಅಂತ ಹಾಡಾಗ್ತೀನಿ.

ಹೇಳಿಬಿಡು ಈಗಲಾದ್ರೂ ನಿಜ ನಿನಗೂ ಅದೇ ಬೇಕಿತ್ತಲ್ಲ್ವೇನೆ ಅಮ್ಮ…….?

ನಾನೀಗ ನೋಡು ನಿಜಾರ್ಥದಲ್ಲಿ ನಿನ್ನ ಪ್ರತಿಫಲನ!

‍ಲೇಖಕರು G

26 January, 2012

2 Comments

  1. bharathi

    endina haage nin baraha chenda

  2. sandhya

    ಮತ್ತೆ ಓದಿದೆ, ಮತ್ತೆ ಕಣ್ಣ್ತು೦ಬಿ ಬ೦ತು….

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading