-ಮಧು ಕಾರಗಿ
ಒಂದು ಊರಿನ ಕಥೆ
ಒಂದು
ದಿವಿನಾದ ದಿನ ನೀನು
ನನ್ನ ಬದುಕಿನೂರಿಗೆ ವಲಸೆ ಬಂದೆ
ಬಂದವನು ಸುಮ್ಮನೆ
ನಿಂತಲ್ಲೇ ನಿಲ್ಲಲಿಲ್ಲ
ಎದೆ ಮನೆಯ ಕದ ತಟ್ಟಿದಿ
ಪುಳಕಗೊಂಡು
ಓಡೋಡಿ ಬಂದು
ಬಾಗಿಲು ತೆರೆದು
ಒಳಗೆ ಕರೆದೆ ನಾನು
ನೀಳ ಕಾಯ
ಎಣ್ಣೆಗೆಂಪು ಮೈ ಬಣ್ಣ
ಕಣ್ಣುಗಳಲಿ ಅಡಗಿದ ಸಾಗರದ ಆಳ
ಮೌನದಲೂ ಹೊಮ್ಮುವ ಸಹನೆಯ ಹಾಡು
ಬೆಳಕಿನ ಕಣದಂತೆ ಮಿಂಚುವ ನಗು ಹೊತ್ತು
ಕತ್ತಲೆಯಲ್ಲೂ ಬೆಳಗುವ
ಆತ್ಮದ ಜ್ಯೋತಿ ನೀನು
ಒಲವನೆ ಉಡುಗೊರೆ ಕೊಟ್ಟು
ಮುಗುಳುನಗೆಯ ಸಿಹಿ ತಿನಿಸಿದೆ
ಏನು ರುಚಿಯಿತ್ತದು, ಆಹಾ!
ಕೈ ಕೈಯ ಹಿಡಿದು
ನಡೆದೆವು ಬಹುದೂರದವರೆಗೂ
ವಸಂತಗಳು ಉರುಳಿದವು
ಆದರೊಂದು ದಿನ
ಕಣ್ಣು ಕಣ್ಣು ಕಲೆತು
ಮುಗಿಯದ ಮಾತುಗಳ ನಡುವೆ
ಎದ್ದು ಹೋದದ್ದು ಯಾಕೆಂದು?
ನೀನು ಹೇಳಲೂ ಇಲ್ಲ!
ನಾನು ಕೇಳಲೂ ಇಲ್ಲ!
ಅಂದಿನಿಂದ
ನನ್ನ ಬದುಕಿನೂರು
ಖಾಲಿತನ ತುಂಬಿಕೊಂಡು
ಪಾಳು ಬಿದ್ದು ವೈಭವ ಕಳೆದುಕೊಂಡ
ಹಾಳು ಹಂಪೆಯಾಗಿದೆ
ಎದೆ ಮನೆಯ ಕದ ತಟ್ಟಿದ
ನಿನ್ನ ಕೈಗಳ ನೆನೆನೆನೆದು
ದುಃಖ ಉಮ್ಮಳಿಸಿದೆ !






0 Comments