ಸಂಗೀತ ರವಿರಾಜ್
” ಯಾರು ಒಂದು ಶಾಲೆಯನ್ನು ತೆರೆಯುತ್ತಾನೋ, ಅವನು ನಿಜವಾಗಿಯು ಒಂದು ಸೆರೆಮನೆಯನ್ನು ಮುಚ್ಚುತ್ತಾನೆ”- ಖ್ಯಾತ ಇಂಗ್ಲೀಷ್ ಲೇಖಕ “ವಿಕ್ಟರ್ ಹ್ಯೂಗ್’ ನ ಕನ್ನಡಕ್ಕೆ ಅನುವಾದಿತ ಈ ಮೇಲಿನ ಯುಕ್ತಿ ಶಾಲೆಗೆ ಅರ್ಥಾತ್ ಶಿಕ್ಷಣಕ್ಕೆ ಹಿಡಿದ ಕೈಗನ್ನಡಿ. ಶಿಕ್ಷಕ ಮತ್ತು ಶಿಕ್ಷಣ ಸರ್ವಶ್ರೇಷ್ಠ. ಆದರೆ ಪ್ರತಿಯೊಬ್ಬರು ಆಲೋಚಿಸಬೇಕಾದುದು ಈ ಸರ್ವಶ್ರೇಷ್ಠ ಶಿಕ್ಷಣ ಮತ್ತು ಶಿಕ್ಷಕರ ಲಕ್ಷಣಗಳು ಹೇಗಿರಬೇಕು? ಶಿಕ್ಷಣವೆಂದರೆ ತರಗತಿಯ ಗೋಡೆಗಳ ಮಧ್ಯೆ ಕುಳಿತು ಕಲಿಯುವಂತಹ ಪ್ರಕ್ರಿಯೆ ಖಂಡಿತ ಅಲ್ಲ ಎಂಬುದು ಬಲ್ಲವರ ಅಂಬೋಣ. ಇದು ಸತ್ಯ. ಶಿಕ್ಷಣವೆಂದರೆ ಮನುಷ್ಯತ್ವದ ಪರಿಪಕ್ವತೆಯಿಂದ ರೂಪಿತವಾದ ಉತ್ತಮ ನೈತಿಕತೆಯ ಬದುಕು. ಇದಕ್ಕೆ ಭದ್ರ ಬುನಾದಿ ಗುರು.
ಇದಕ್ಕೆ ಅನುರೂಪವಾದ ಉದಾಹರಣೆಯಾಗಿ ಸತ್ಯಘಟನೆಯ ಸುತ್ತ ಹೆಣೆದ ಜಪಾನ್ ಮೂಲದ ಸಾಹಿತ್ಯ ಕೃತಿ ತೊತ್ತೋಚಾನ್ ಎಂಬ ಪುಸ್ತಕ. ನಮ್ಮ ರಾಜ್ಯ ಸರಕಾರ ಕೆಲವು ವರ್ಷಗಳ ಹಿಂದೆ ಪ್ರಾಥಮಿಕ ಶಾಲಾ ಶಿಕ್ಷಕ ಶಿಕ್ಷಕಿಯರಿಗಾಗಿ ಈ ಸಾಹಿತ್ಯ ಕೃತಿಯನ್ನು ಉಚಿತವಾಗಿ ವಿತರಿಸಿದೆ. ಪ್ರತಿಯೊಬ್ಬ ಅಧ್ಯಾಪಕನು ತೊತ್ತೋಚಾನ್ ಪುಸ್ತಕವನ್ನು ಓದಬೇಕೆಂದು ಇದರ ಮೂಲ ಉದ್ದೇಶ. ಪ್ರತಿಯೊಂದು ರಂಗದಲ್ಲು ತನ್ನದೆ ಛಾಪು ಮೂಡಿಸಿದಂತಹ ರಾಷ್ಟ್ರ ಜಪಾನ್, ಶೈಕ್ಷಣಿಕ ಮತ್ತು ಸಾಹಿತ್ಯ ಕ್ಷೇತ್ರದಲ್ಲು ಜಗತ್ತಿಗೆ ಸ್ಫೂರ್ತಿಯಾಗಿದೆ. ತೊತ್ತೋಚಾನ್ ಕೃತಿಯಲ್ಲಿರುವ ಶಿಕ್ಷಣದ ಮಾದರಿ ಜಗತ್ತಿಗೆ ಮಾದರಿಯಾಗಲಿ ಎಂಬುದು ಪುಸ್ತಕದ ಆಶಯ.

ಪುಸ್ತಕದ ಕುರಿತು ಹೇಳುವುದಾದರೆ, ಜಪಾನ್ ಪ್ರಕಾಶನದ ಇತಿಹಾಸದಲ್ಲೇ ದಾಖಲೆಯಾಗಿರುವ ತೊತ್ತೋಚಾನ್ ಮೊದಲ ವರ್ಷದಲ್ಲೇ 45 ಲಕ್ಷ ಪ್ರತಿಗಳು ಮಾರಾಟಗೊಂಡವು.ಈಗ 60 ಲಕ್ಷ ಮಾರಾಟವಾದ ಸುದ್ದಿಯಿದೆ. ತೊತ್ತೋಚಾನ್ ಇಷ್ಟೊಂದು ಜನಪ್ರಿಯ ಪುಸ್ತಕ ಹೇಗಾಯಿತು? ಎಂಬುದರ ಬಗ್ಗೆ ಸಮೂಹ ಮಾಧ್ಯಮದಲ್ಲೆಲ್ಲಾ ಚಚರ್ೆ ನಡೆಯಿತು. ” ಅಸಾಹಿ” ಎಂಬ ದಿನಪತ್ರಿಕೆಯಲ್ಲಿ ಇದರ ವಿವಿಧ ಆಯಾಮಗಳನ್ನು ಚರ್ಚಿಸುವಂತಹ ಲೇಖನ ಸರಣಿಯೆ ಪ್ರಕಟಗೊಂಡಿತು. ಇನ್ನೂ ಒಂದು ಅಚ್ಚರಿಯೆಂದರೆ ಈ ವಿಷಯವನ್ನಾಧರಿಸಿದ ಒಂದು ಪ್ರತ್ಯೇಕ ಪುಸ್ತಕವೆ ಪ್ರಕಟಗೊಂಡಿತು. ತೊತ್ತೋಚಾನ್ ಎಂಬ ಹುಡುಗಿ ಪ್ರಾಥಮಿಕ ಶಾಲೆಯಲ್ಲಿದ್ದಾಗ ಅಲ್ಲಿಯ ರೀತಿ-ನೀತಿ ನಿಯಮ, ಗುರುಗಳಾದ ಸೊಸಾಕು ಕೊಬಯಾಶಿ ಆಕೆಯೊಂದಿಗೆ ವರ್ತಿಸುವ ವಿಧಾನದಿಂದ ಆಕೆಯ ವ್ಯಕ್ತಿತ್ವ ಮೇರು ವ್ಯಕ್ತಿತ್ವವಾದ ಸತ್ಯಕಥೆ ಈ ಪುಸ್ತಕದಲ್ಲಿದೆ. ಈಕೆ ಮಾತ್ರವಲ್ಲ ಈ ಶಾಲೆಯಲ್ಲಿ ಓದಿದ ಎಲ್ಲಾ ವಿದ್ಯಾಥರ್ಿಗಳು ಆದರ್ಶ ವ್ಯಕ್ತಿಗಳಾಗಿದ್ದಾರೆ. ಪುಸ್ತಕದ ಉಪಸಂಹಾರದಲ್ಲಿ ಲೇಖಕಿಯು ( ತೊತ್ತೋಚಾನ್)ಹೆಚ್ಚಿನ ಎಲ್ಲಾ ವಿದ್ಯಾರ್ಥಿಗಳ ಕೀರ್ತಿಯನ್ನು ಮತ್ತು ಉದ್ಯೋಗವನ್ನು ತೆರೆದಿಟ್ಟದ್ದು ಪುಸ್ತಕದ ಹೆಚ್ಚುಗಾರಿಕೆ. ಏಕೆಂದರೆ ಈಕೆಯ ಪ್ರಾಥಮಿಕ ಶಿಕ್ಷಣ ಮುಗಿದ ಅದೆಷ್ಟೋ ವರ್ಷಗಳ ನಂತರ ಬರೆದ ಪುಸ್ತಕವಿದು.
ತೊತ್ತೋಚಾನ್ಳನ್ನು ಮೊದಲ ಪ್ರಾಥಮಿಕ ಶಾಲೆಯಿಂದ ಹೊರಹಾಕಿದರೆಂಬುದು ಆಕೆಗೆ ತಿಳಿದದ್ದು ಅವಳ 20ನೇ ವಯಸ್ಸಿನಲ್ಲಿ. ಒಂದು ದಿನ ಅವಳಮ್ಮ ನಿನ್ನ ಪ್ರಾಥಮಿಕ ಶಾಲೆಯನ್ನು ಏಕೆ ಬದಲಾಯಿಸಿದರೆಂದು ನಿನಗೆ ಗೊತ್ತಾ? ಎಂದು ಕೇಳಿದಳು. ಗೊತ್ತಿಲ್ಲವೆಂದ ಮೇಲೆ ನಿನ್ನನ್ನು ಹೊರಹಾಕಿದ್ದರು ಎಂದು ಶಾಂತವಾಗಿ ಹೇಳಿದಳು.ಒಂದು ವೇಳೆ ಹೊರಹಾಕಿದ ಸಮಯದಲ್ಲಿ ಅಮ್ಮನಾದವಳು, ನಿನ್ನನ್ನು ಈಗಾಗಲೆ ಒಂದು ಶಾಲೆಯಿಂದ ಹೊರಹಾಕಿದ್ದಾರೆ. ಈ ಶಾಲೆಯಿಂದಲು ಹೊರಹಾಕಿದರೆ ಏನು ಮಾಡುತ್ತಿಯಾ? ಹೀಗೆನಾದರು ಕೇಳಿದ್ದರೆ ಆಕೆ ಆದರ್ಶ ಶಾಲೆಯಾದ ” ತೊಮೊಯೆ ಗಾಕುಯೆನ್” ಗೇಟನ್ನು ಯಾವ ರೀತಿಯಿಂದ ಪ್ರವೇಶಿಸುತ್ತಿದ್ದಳು? ನಾನೊಬ್ಬಳು ಕೆಲಸಕ್ಕೆ ಬಾರದವಳು ಎಂಬ ಭಾವನೆ ಬರುತ್ತಿತ್ತು. ಹಾಗಾದರೆ ಮಕ್ಕಳ ತುಂಟತನವೆಂಬುದು ಆಕೆಯಲ್ಲಿ ಯಾವ ಮಟ್ಟದಲ್ಲಿ ಮನೆಮಾಡಿತು ಎಂಬುದನ್ನು ನೀವೆ ಯೋಚನೆ ಮಾಡಿ. ಇದನ್ನು ಮೊದಲೇ ಅರ್ಥೈಸಿಕೊಂಡ ಗುರು ಕೊಬಯಾಶಿ ಪದೇ ಪದೇ ನೀನು ತುಂಬಾ ಒಳ್ಳೆಯ ಹುಡುಗಿ ಎಂದು ಹೇಳುತ್ತಿದ್ದರು. ಆಕೆ ತೊಮೊಯೆ ಗಾಕುಯೆನ್ ಸೇರಿಕೊಳ್ಳದಿದ್ದರೆ, ಕೊಬಯಾಶಿಯವರನ್ನು ಭೇಟಿಯಾಗದೆ ಇದ್ದಿದ್ದರೆ ಅವಳಿಗೆ ಕೆಟ್ಟ ಹುಡುಗಿ ಎಂಬ ಹಣೆಪಟ್ಟಿ ದೊರೆತು, ಮುಂದೆಯೂ ಅದೇ ಕೀಳರಿಮೆ ಮುಂದುವರೆಯುತ್ತಿತ್ತು .
ತೊತ್ತೋಚಾನ್ ಪುಸ್ತಕದಲ್ಲಿ ಲೇಖಕಿ ಕೊಬಯಾಶಿಯವರ ಶಿಕ್ಷಣ ವಿಧಾನಗಳನ್ನು ವಿವರಿಸಿದ್ದಾರೆ. ಎಲ್ಲಾ ಮಕ್ಕಳಲ್ಲು ಜನ್ಮತ: ಒಳ್ಳೆಯ ಸ್ವಭಾವವಿರುತ್ತದೆ. ಆದರೆ ಅವರ ಪರಿಸರ ಮತ್ತು ಸಲ್ಲದ ಪ್ರಭಾವದಿಂದ ಅದು ಬಹುಬೇಗ ನಾಶವಾಗುತ್ತದೆ. ಮಕ್ಕಳ ಇಂತಹ ಉತ್ತಮ ಸ್ವಭಾವವನ್ನು ಅನಾವರಣಗೊಳಿಸಿ ಬೆಳೆಯಿಸುವುದರ ಮೂಲಕ ಅವರನ್ನು ಸ್ವಂತಿಕೆಯುಳ್ಳ ವಯಸ್ಕರನ್ನಾಗಿ ರೂಪಿಸುವುದು ತೊಮೊಯೆ ಗಾಕುಯೆನ್ ಶಾಲೆಯ ಧ್ಯೇಯವಾಗಿತ್ತು.

ಗಾಂಧೀಜಿಯವರ ಮೂಲ ಶಿಕ್ಷಣದ ಪರಿಕಲ್ಪನೆ, ಕಿಂಡರ್ ಗಾರ್ಡನ್ ಶೈಲಿ ಹಲವಾರು ಶಿಕ್ಷಣ ತಜ್ಙರ ಅಭಿಮತಗಳೆಲ್ಲವು ಸೇರಿ, ಇದರ ಹೊರತಾಗಿಯು ಇರುವ ವಿಶಿಷ್ಟ ಶಿಕ್ಷಣ ಪ್ರಕಾರದ ಶಾಲೆ ತೊಮೊಯೆ ಗಾಕುಯೆನ್. ಇದನ್ನು ಕನ್ನಡಕ್ಕೆ ಅನುವಾದಿಸಿದ ಲೇಖಕಿ ವಿ. ಗಾಯತ್ರಿಯವರ ಶ್ರಮ ಸಾರ್ಥಕ, ಶ್ಲಾಘನೀಯ.






ಓದಿದೆ ತುಂಬಾ ಇಷ್ಟ ಆಯ್ತು.
Wonderful book. Everybody should read it.
oh nice parichaya..inthaddonndhu odhige prerepsida sangeeta avarige thanks..odhuttene..
ಒಂದು ಒಳ್ಳೆಯ ಪುಸ್ತಕವನ್ನು ಪರಿಚಯಿಸಿದ್ದಾರೆ, ಲೇಖಕಿಗೆ ಅಭಿನಂದನೆಗಳು.
ಸಂಗೀತಾರವರು ಒಂದು ಒಳ್ಳೆಯ ಪುಸ್ತಕವನ್ನು ಪರಿಚಯಿಸಿದ್ದಾರೆ , ಲೇಖಕಿಗೆ ಅಭಿನಂದನೆಗಳು.
ನಾನೇಕೋ ಜಡವಾಗುತ್ತಿದ್ದೇನೆ ಎಂದೆನಿಸಿದಾಗಲೆಲ್ಲ ಓದುವ ಮೆಚ್ಚಿನ ಕೃತಿ ಅದು. ತೆತ್ಸುಕೋ ಕುರುಯೋನಾಗಿ ಯವರು ಬರೆದಿರುವ ಈ ಪುಸ್ತಕದ ಪ್ರತಿ ಘಟನೆ ಕೂಡ ನೆನಪಿಡುವಂಥದ್ದು ಮತ್ತು ಶಿಕ್ಷಕರಾದವರಿಗೆ ಕಲಿಕೆಯ ಒಳನೋಟ ನೀಡುವಂಥದ್ದು.ಎಲ್ಲರೂ ಓದುವಂತಾದರೆ ತುಂಬಾ ಸಂತೋಷವಾಗುತ್ತದೆ.ಒಳ್ಳೆಯ ಲೇಖನ.ಧನ್ಯವಾದಗಳು
manavanalliruva uttamavaadudannu hora haakuvude nijavaada shikhsNa krama..uttama lekhana..