ನನ್ನ ಪ್ರಿಯ ಗದ್ಯ ಲೇಖಕರಲ್ಲಿ ಉಮಾರಾವ್ ಒಬ್ಬರು

ಇದೇ 17 ರಂದು  ಅಂಗಳದಲ್ಲಿ ನಮ್ಮ ನಡುವಿನ ಒಳ್ಳೆಯ ಲೇಖಕಿ ಉಮಾರಾವ್ ಅವರ ಹೊಸ ಹಾಗೂ ಹೊಸ ರೀತಿಯ ಪ್ರವಾಸ ಕಥನ ‘ಇನ್ನು ಎಲ್ಲಿಗೋಟ’ ಬಿಡುಗಡೆಯಾಗುತ್ತಿದೆ

ಈ ಕೃತಿಗೆ ರಹಮತ್ ತರೀಕೆರೆ ಬರೆದ ಮುನ್ನುಡಿ ಇಲ್ಲಿದೆ 

13659185_10207181672845053_410900284168720483_n

rahamath tarikere

ರಹಮತ್ ತರೀಕೆರೆ 

ನನ್ನ ಪ್ರಿಯ ಗದ್ಯ ಲೇಖಕರಲ್ಲಿ ಉಮಾರಾವ್ ಒಬ್ಬರು. ಲಂಕೇಶ್ ಪತ್ರಿಕೆಯಲ್ಲಿ ಅವರು ಮುಂಬೈನಿಂದ ಅಂಕಣ ಬರೆಯುತ್ತಿದ್ದ ಕಾಲದಿಂದ ನಾನು ಅವರ ಬರೆಹಗಳನ್ನು ಓದಿಕೊಂಡು ಬಂದವನು. ಕನ್ನಡದಲ್ಲಿ ಬಹುಶಃ ನೇಮಿಚಂದ್ರ ಮುಂತಾದವರಂತೆ ತಿರುಗಾಟ ಮಾಡಿದ ಲೇಖಕಿಯರಲ್ಲಿ ಉಮಾ ಮುಖ್ಯರು. ಸ್ವತಃ ತಿರುಗಾಡಿದ ನಾನು ಅವರ ಪ್ರವಾಸಗಳನ್ನು ಕಂಡು ಅಸೂಹೆ ಪಡುತ್ತಿದ್ದೆ. ಈಗ ಅವೇ ಪ್ರವಾಸ ಬರೆಹಗಳನ್ನು ಓದಿ ಎರಡು ಮಾತು ಬರೆಯುವ ಅವಕಾಶ ಸಿಕ್ಕಿದೆ. ಅದನ್ನು ಸಂತೋಷದಿಂದ ಮಾಡುತ್ತಿದ್ದೇನೆ.

umaraoಮೊದಲಿಗೇ ಪ್ರಿಯವಾಗುವುದು ಇಲ್ಲಿನ ಬರೆಹದಲ್ಲಿರುವ ನಿಷ್ಠುರತೆ. ಉತ್ಪೇಕ್ಷೆ ಮತ್ತು ಭಾವುಕ ಅಳಲು ಇಲ್ಲದೇ, ಓದುಗರನ್ನು ಇಂಪ್ರೇಸ್ ಮಾಡುವ ವಾಂಛೆಗೆ ಬೀಳದೆ ತಮ್ಮ ಅನುಭವವನ್ನು ಉಮಾ ಬರೆಯುತ್ತಾರೆ. ಪಾತ್ರವನ್ನು ಅಥವಾ ಘಟನೆಯನ್ನು ಪೂರ್ವಕಲ್ಪಿತ ಆದರ್ಶಗಳಿಂದ ಸಾಫುಗೊಳಿಸದೆ ಅದರೆಲ್ಲ ವಕ್ರತೆಯೊಂದಿಗೆ ಕಾಣಿಸುತ್ತಾರೆ.

ಮುಜುಗರ ಕಸಿವಿಸಿ ಕಿರಿಕಿರಿ ನಿರಾಶೆಗಳನ್ನು ಅಡಗಿಸದೆ ಬರೆಯುತ್ತಾರೆ. ಅನುಭವದೊಳಗೆ ಪೂರ್ಣವಾಗಿ ಬಾರದ ಅಥವಾ ಚಿಂತನೆಗೆ ನಿಲುಕದ ಒತ್ತಾಯದಿಂದ ತುರುಕದ ಸಂಯಮವೇ ಅವರ ಬರೆಹವನ್ನು ಪ್ರಾಮಾಣಿಕವಾಗಿಸುತ್ತದೆ. ಹೀಗಾಗಿ ಇಲ್ಲಿನ ಬರೆಹದಲ್ಲಿ ಪಾತ್ರಗಳಾಗಲಿ ಘಟನೆಗಳಾಗಲಿ ಹುಸಿಯೆನಿಸುವುದಿಲ್ಲ.

ಈ ಸಾಮಾನ್ಯ ಬರೆಹಗಳಲ್ಲಿ ಲವಲವಿಕೆ ಮತ್ತು ಚಿಂತನಶೀಲತೆಯಿದೆ. ಇದಕ್ಕೆ ಕಾರಣ ಇವು ಕನ್ನಡದ ಪ್ರವಾಸ ಕಥನಗಳಲ್ಲಿ ಸಾಮಾನ್ಯವಾಗಿರುವ ಮಧ್ಯಮ ವರ್ಗದ ಸೀಮಿತ ಟೂರಿಸ್ಟ್ ದೃಷ್ಠಿಕೋನದಿಂದ ಪಾರಾಗಿರುವುದರಲ್ಲಿ, ಸ್ವದೇಶವನ್ನು ಹಳಿಯುತ್ತಲೋ ವೈಭವಿಸುತ್ತಲೊ ಪರದೇಶವನ್ನು ಕಾಣುವ ಹುಸಿ ಆದರ್ಶಗಳಿಂದ ತಪ್ಪಿಸಿಕೊಂಡಿರುವುದರಲ್ಲಿ.

ಉಮಾ ಮೊದಲಿಂದಲೂ ತಮ್ಮ ಕಥನಗಳಿಗೆ ದೊಡ್ಡ ವಸ್ತುಗಳಿಗೆ ತುಡುಕಿದವರಲ್ಲ. ಸಣ್ಣಪುಟ್ಟ ಎನ್ನುವ ವಸ್ತುವಿನಲ್ಲಿಯೇ ಬಾಳಿನ ಪರಿಯನ್ನು ಸೂಕ್ಷ್ಮವಾಗಿ ಕಾಣಿಸುತ್ತ ಬಂದವರು. ಈ ಸೂಕ್ಷ್ಮ ಗಮನಿಸುವಿಕೆಯಿಂದ ಹುಟ್ಟಿದ ವಿವರಪೂರ್ಣ ಶೈಲಿಯೇ ಅವರ ಪರಿಯನ್ನು ಸೂಕ್ಷ್ಮವಾಗಿ ಕಾಣಿಸುತ್ತ ಬಂದವರು. ಈ ಸೂಕ್ಷ್ಮ ಗಮನಿಸುವಿಕೆಯಿಂದ ಹುಟ್ಟಿದ ವಿವರಪೂರ್ಣ ಶೈಲಿಯೇ ಅವರ ವ್ಯಕ್ತಿಚಿತ್ರಗಳನ್ನು ಜೀವಂತವಾಗಿಸುತ್ತದೆ. ಅವರ ಸಣ್ಣಕತೆ-ಕಿರುಕಾದಂಬರಿಯಲ್ಲಿರುವ ಈ ಕಥನಕ್ರಮ ಇಲ್ಲೂ ಕೆಲಸ ಮಾಡಿದೆ.

ಬಹುಶಃ ಕನ್ನಡದಲ್ಲಿ ಚಿತ್ತಾಲ, ಜಯಂತ್ ಹಾಗೂ ಉಮಾ ಕನ್ನಡದ ಅತ್ಯುತ್ತಮ ನಗರಪ್ರಜ್ಞೆಯ ಲೇಖಕರು. ವೈಚಾರಿಕತೆ ಮತ್ತು ಮಾನವೀಯತೆಗಳಿಂದ ಕೂಡಿದ ಅವರ ನಗರಪ್ರಜ್ಞೆಯಲ್ಲಿ ಮಧ್ಯಮ ವರ್ಗದ ಹುಸಿಪ್ರತಿಷ್ಠೆ, ಬಡಿವಾರಗಳ ಬಗ್ಗೆ ಅಪಾರ ವ್ಯಂಗ್ಯವಿರುತ್ತದೆ. ತಮ್ಮ ಇಕ್ಕಟ್ಟುಗಳಲ್ಲೇ ಘನತೆಯ ಬದುಕನ್ನು ಸಾಗಿಸಲು ಸೆಣಸಾಡುವ ಮನುಷ್ಯರ ಕಿರುಹೋರಾಟಗಳ ಬಗ್ಗೆ ಅಪಾರ ಶೃದ್ಧೆಯಿರುತ್ತದೆ. ಜಯಂತ್ ಅವರಲ್ಲಿ ಈ ಚಿತ್ರಗಳು ತುಸು ರಮ್ಯತೆಯ ಅಂಚಿನಲ್ಲಿ ಕಾಣಿಸಿಕೊಂಡರೆ, ಉಮಾ ಅವರಲ್ಲಿ ವಾಸ್ತವತೆಯ ಹರತತೆಯಲ್ಲಿ ಕಾಣಿಸಿಕೊಳ್ಳತ್ತವೆ.

ಇಲ್ಲಿರುವ ಕಥನಗಳು ಒಂದು ದೇಶಕ್ಕೆ ಅಥವಾ ಸ್ಥಳಕ್ಕೆ ಕೇಂದ್ರಿಕರಿಸಿ ಹುಟ್ಟಿದವಲ್ಲ. ಭೂಗೋಳದ ಬೇರೆ ಬೇರೆ ಸ್ಥಳಗಳ ಮೇಲೆ ಹುಟ್ಟಿದಂತವು. ಕೆಲವಂತೂ ಶುರುವಾಗುತ್ತಿದ್ದಂತೆಯೇ ಮುಗಿದು ಬಿಡುವ ಟಿಪ್ಪಣಿಗಳಾಗಿದ್ದು ತುಸು ನಿರಾಶೆಯನ್ನೂ ತರುತ್ತವೆ. ಹಾರುಭೇಟಿಯ ಪ್ರವಾಸವೇ ಇದಕ್ಕೆ ಕಾರಣ. ಇಡಿಯಾಗಿ ಆವರಿಸಿಕೊಳ್ಳದ ತುಂಡುತನ ಇಲ್ಲಿನ ಬರೆಹಗಳಲ್ಲಿದೆ. ಆದರೆ ಕಿರಿದರಲ್ಲಿ ಹಿರಿದರ್ಥವನ್ನು ಅಡಗಿಸುವ ಶೈಲಿಯಲ್ಲಿರುವ ವಿಷಾದಪ್ರಜ್ಞೆಯು ಕಥನಗಳಿಗೆ ಒಂದು ಚಿಂತನಶೀಲತೆಯನ್ನೂ ತಂದಿಕ್ಕಿದೆ.

ಹಿಮಾಲಯದ ತಪ್ಪಲಿನಲ್ಲಿರುವ ಕಾರ್ಗಿಲ್-ದ್ರಾಸ್ ಪ್ರದೇಶದ ಚಿತ್ರಗಳನ್ನು ಗಮನಿಸಬೇಕು. ಅಲ್ಲಿ ‘ನಮ್ಮ ಸೈನಿಕರು ಗೆದ್ದ innu elligota uma raoಬಗ್ಗೆ ಯುದ್ಧವಾದಿ ದೇಶಪ್ರೇಮವನ್ನು ಆವಾಹಿಸಿಕೊಂಡ ಹಮ್ಮಿಲ್ಲ.; “ಅವರ” ಸೈನಿಕರು ಸೋತ ಹೆಮ್ಮೆಯೂ ಇಲ್ಲ. ಬದಲಿಗೆ ಯಾವುದೇ ಯುದ್ಧಗಳು ಮಾಡುವ ಬದುಕಿನ ಅಥವಾ ಪರಿಸರದ ನಾಶದ ಕುರಿತು ಗಾಢವಿಷಾದವಿದೆ. ಎಂತಲೇ ಬರೆಹ ಹಿಮಾಲಯ ತಪ್ಪಲಿನ ಊರುಗಳಲ್ಲಿ ಸುಟ್ಟು ಕರಕಲಾದ ಮರದ ಬೊಡ್ಡೆ, ಗಾಲಿ ತಿರುಚಿದ ಸೈಕಲ್ ನಿರ್ಜನವಾದ ಬೀದಿ ಹಾಗೂ ನೀರವ ಮೌನಗಳನ್ನು ಅವರ ಬರೆಹ ದಾಖಲಿಸುತ್ತ ಹೋಗುತ್ತದೆ.

ಈ ವಿಷಾದ ಭಾವವು ಥಾಯ್ಲೆಂಡಿನ ಪಾಳುಗುಡಿಗಳನ್ನು ನೋಡುವಾಗಲೂ ವ್ಯಕ್ತವಾಗಿದೆ. ಸಹಜ ಬಾಳುವೆಯ ಊರೊಂದು ಹೋಗುತ್ತದೆ.  ಸಹಜ ಬಾಳುವೆಯ ಊರೊಂದು ಯುದ್ಧದ ಕಣವಾಗಿ ಬದಲಾಗುವುದು ಮಾತ್ರವಲ್ಲ, ತನ್ನತನ ಕಳೆದುಕೊಂಡು ಪ್ರವಾಸಿಗರಿಗಾಗಿ ಬದಲಾಗುವುದರ ವಿಷಾದವೂ ಇಲ್ಲಿದೆ. ಡಾರ್ಜಿಲಿಂಗಿನ ನೋಟದಲ್ಲಿ ಇದನ್ನು ನೋಡಬಹುದು. ಇಂತಹ ಕಡೆ ಬರೆಹ ದಾರ್ಶನಿಕ ಅಂಚನ್ನು ಪಡೆದುಕೊಳ್ಳತ್ತದೆ, ಕಾವ್ಯವಾಗುತ್ತದೆ.

ಕನ್ನಡದಲ್ಲಿ ಯುರೋಪು ಅಮೆರಿಕಾ ಪ್ರವಾಸ ಕಥನಗಳು ಕಿಕ್ಕಿರಿದಿವೆ. ಆದರೆ ಪ್ರವಾಸ ಕಥನಗಳಲ್ಲಿ ನಮ್ಮ ಆಸುಪಾಸಿನ ದೇಶಗಳೇ ಇಲ್ಲ. ಭೂತಾನ, ಬಾಂಗ್ಲಾ, ಶ್ರೀಲಂಕಾ, ಪಾಕಿಸ್ತಾನ, ಚೀನಾ, ಅಫಘಾನಿಸ್ತಾನ, ಇರಾನ್ ಕುರಿತು ಪ್ರವಾಸಿ ಕಥನಗಳು ಬಹಳ ಕಡಿಮೆ. ಆಫ್ರಿಕಾ ಕುರಿತು ಕೂಡ. ಹೀಗಾಗಿಯೇ ಇಲ್ಲಿನ ಥಾಯ್ ಲ್ಯಾಂಡ್, ಭೂತಾನ, ಈಜಿಪ್ಟ್ ದೇಶಗಳ ಚಿತ್ರಗಳು ಹೊಸತೆನಿಸುತ್ತವೆ.

ವಿಮರ್ಶಕ ಪ್ರಜ್ಞೆಯಿಂದ ನೋಡುವ ಎಚ್ಚರ, ನಾಗರಿಕ ಪ್ರಜ್ಞೆಯಿಂದ ಬರಲಿದೆ. ಮುಕ್ತ ಮನಸ್ಸು, ಗತಕಾಲದ ವಿವರಗಳ ಭಾರವಿಲ್ಲದ ಚಾರಿತ್ರಿಕ ಪ್ರಜ್ಞೆ, ಕಂಡ ಕೆಲವು ಜನರಿಂದಲೇ ತಾನಿದ್ದ ಕೆಲವು ದಿನಗಳಿಂದಲೇ ಒಂದು ದೇಶದ ಅಥವಾ ಅದರ ನಾಗರಿಕತೆಯ ಬಗ್ಗೆ ತೀರ್ಪು ಕೊಡದ ನಮ್ರತೆಗಳು ಇಲ್ಲಿನ ಬರೆಹಗಳಲ್ಲಿವೆ. ಕೆಲವು ಬರೆಹಗಳಲ್ಲಿ ರಾಜಕೀಯ ಪ್ರಶ್ನೆಗಳನ್ನು ಎತ್ತಲಾಗಿದೆ.

ಉದಾಹರಣೆಗೆ, ತಮ್ಮ ದೇಶದ ಮಕ್ಕಳ ಬಗ್ಗೆ ಅತಿಯಾದ ಕಾಳಜಿ ತೋರುವ ದೊಡ್ಡ ದೇಶಗಳು ಬೆರೆ ದೇಶದ ಮಕ್ಕಳನ್ನು ಲೈಂಗಿಕದಾಸಿಯರನ್ನಾಗಿ ಮಾಡಿಕೊಳ್ಳುವುದು ಸಾಧ್ಯವಾಗುವುದು ಅಥವಾ ಮೊಮ್ಮಗನು ಅಮೇರಿಕದ ಧ್ವಜನಿಷ್ಠೆಯ ಸ್ಪರ್ಧೆಯಲ್ಲಿ ಗೆದ್ದು ಬಂದಾಗ ಸಂತೋಷದ ಒಳಗಿಂದಲೇ “ವಿಚಿತ್ರ ನೋವು’ ಹಾದು ಹೋಗುವುದು. ಆದರೆ ಈ ಚಿಂತನೆಯ ಎಳೆಗಳು ಮಿಂಚಿ ಮಾಯವಾಗುತ್ತವೆ, ಬೆಳೆಯುವುದಿಲ್ಲ.

ಈ ಪ್ರವಾಸ ಲೇಖನಗಳನ್ನು ಒಳಗೊಂಡತೆ ಉಮಾ ಅವರು ಸಣ್ಣಕತೆ  ಮತ್ತು ಕಿರುಕಾದಂಬರಿಗಳನ್ನು ಓದುವಾಗೆಲ್ಲ ನನ್ನ ಅನುಭವಕ್ಕೆ ಬಂದಿರುವುದು ಅವರ ಬರೆಹದಲ್ಲಿ ಸದಾ ತುಡಿಯುವ ಸ್ತ್ರೀಚೈತನ್ಯದ ಹುಡುಕಾಟ. ಎಷ್ಟೊಂದು ಇಕ್ಕಟ್ಟುಗಳಲ್ಲಿಯೂ ಮಹಿಳೆಯರು ತಮ್ಮ ಜೀವಂತಿಕೆಯನ್ನು ರುಜುವಾತಗೊಳಿಸುವಂತೆ ಬದುಕನ್ನು ಕಟ್ಟಿಕೊಳ್ಳುವ ಹೋರಾಟಗಳನ್ನು ಅವರ ಬರೆಹ ಶೃದ್ಧೆಯಿಂದ ಚಿತ್ರಿಸುತ್ತಲೇ ಬಂದಿದೆ.

ಇಲ್ಲಿನ ಬರೆಹಗಳಲ್ಲೂ ಎಷ್ಟೊಂದು ಜೀವಂತ ಮಹಿಳೆಯರು ಮೈದೆಳದಿದ್ದಾರೆ.  ಹೋಟೆಲಿಟ್ಟವರು, ಪ್ರವಾಸಿ ಗೈಡುಗಳು, ಗೃಹಿಣಿಯರು, ಲೇಖಕಿಯರು, ಸನ್ಯಾಸಿಯರು. ಫೆಮಿನಿಸ್ಟ್ ಸೈದ್ಧಾಂತಿಕ ಚೌಕಟ್ಟುಗಳ ಹೇರಿಕೆಯಿಲ್ಲದೆ ಸಹಜವಾಗಿಯೇ ಹುಟ್ಟಿದ ಸ್ತ್ರೀಸಂವೇದನೆಯ ಬರೆಹಗಳಿವು. ಇವು ಪ್ರವಾಸಿ ತಾಣಗಳ ಪರಿಚಯಾತ್ಮಕ ಬರೆಹಗಳಲ್ಲ. ಭೂಮಂಡಲದ ಎಲ್ಲ ಕಡೆ ತಮ್ಮ ದುಡಿಮೆ, ಸಣ್ಣತನ, ಔದಾರ್ಯ, ದಿಟ್ಟತನ, ಸೆಣಸಾಡುವಿಕೆ, ಜಿಗುಡತನ ತೋರುವ ಮನುಷ್ಯರ ಕಥನಗಳು.

ಇಂತಹ ಸ್ಪಂದನಶೀಲ ಮತ್ತು ಚೆಂದದ ಬರೆಹಗಳನ್ನು ಕೊಟ್ಟ ಉಮಾ ಅವರಿಗೆ ಮನಸಾರೆ ಅಭಿನಂದಿಸುತ್ತೇನೆ.

 

‍ಲೇಖಕರು admin

July 14, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: