ನನ್ನ ಪ್ರಶಸ್ತಿ ಈ ಎಲ್ಲರಿಗೂ ಋಣಿ..

ಪೂರ್ಣಿಮಾ ಮಾಳಗಿಮನಿ

ಸ್ನೇಹಿತರೇ, ಕಥಾ ಪ್ರಿಯರೇ
ನಿಮ್ಮೊಂದಿಗೆ ಈ ಸಂತೋಷವನ್ನು ನೆನ್ನೆಯೇ ಹಂಚಿಕೊಳ್ಳಬೇಕಿತ್ತು. ಆದರೆ ಇದು ಕನಸಲ್ಲ ನನಸು, ಎಂದು ನಂಬಲು ನನಗೇ ಒಂದು ರಾತ್ರಿ ಬೇಕಾಯಿತು!

ಬುಕ್ ಬ್ರಹ್ಮ ಸ್ವಾತಂತ್ರೋತ್ಸವ ಕಥಾ ಸ್ಪರ್ಧೆ -2022 ರಲ್ಲಿ ನನಗೆ ಮೊದಲ ಬಹುಮಾನ ಬಂದಿದೆ ಎಂದು ತಿಳಿಸಲು ಸಂತಸವಾಗ್ತಿದೆ.

ನನ್ನ ಮೊದಲ ಬಾಸ್ ಒಂದು ಮಾತು ಹೇಳ್ತಿದ್ರು. ಯಾವಾಗ್ಲೂ ಜೂನಿಯರ್ ಆಗಿರೋದ್ರಲ್ಲಿ ಲಾಭವಿದೆ, you can afford to do mistakes ಅಂತ; ಯಾವುದನ್ನೂ ಹೆಚ್ಚು ಸೀರಿಯಸ್ ಆಗಿ ತೆಗೆದು ಕೊಳ್ಳದ ನಾನು ನನ್ನನ್ನೂ ನಾನು ಸೀರಿಯಸ್ ಆಗಿ ತೆಗೆದು ಕೊಂಡೇ ಇಲ್ಲ. ಹೇಗೋ ಟಾಪ್ 20 ಒಳಗೆ ಬಂದು ಬಿಟ್ಟಿದ್ದೇನೆ, ಚೆನ್ನಾಗಿ ರೆಡಿ ಆಗಿ ಹೋಗೋದು, ಸೊಂಪಾಗಿ ಊಟ ತಿಂಡಿ ಮಾಡೋದು, ಹಿರಿಯರ ಮಾತುಗಳನ್ನು ಕೇಳಿಸಿಕೊಳ್ಳುವುದು, ಸೆಲೆಬ್ರಿಟಿ ಗಳ ಜೊತೆ ಸೆಲ್ಫಿ ತೆಗೆಸಿಕೊಳ್ಳೋದು, ಫೇಸ್ಬುಕ್ ನಲ್ಲಿ ಹಾಕಿಕೊಂಡು ಖುಷಿ ಪಡೋದು ಇಂಥ ಅಜೆಂಡಾ ಇಟ್ಟುಕೊಂಡು ನೆನ್ನೆ ಕಾರ್ಯಕ್ರಮಕ್ಕೆ ಹೋಗಿದ್ದೆ. ಅದು ನೋಡಿದ್ರೆ ನಂಗೇ ಮೊದಲ ಬಹುಮಾನ ಬರೋದೇ!

ಹೇಗೂ ಇಪ್ಪತ್ತು ಜನ ಮಾತನಾಡುವಷ್ಟು ಸಮಯವಿರುವುದಿಲ್ಲ, ಟಾಪ್ ಮೂರು ಜನ ಮಾತಾಡಬೇಕಾಗಬಹುದಷ್ಟೇ ಎಂದು ಧೈರ್ಯವಾಗಿ ಒಂದು ಪುಟ್ಟ ಭಾಷಣ ಕೂಡ ಸಿದ್ಧ ಪಡಿಸಿಕೊಂಡಿರಲಿಲ್ಲ.

ಲಿಯೋ ನಾರ್ಡೋ ಡಿ ಕ್ಯಾಪ್ರಿಯೋ ತನಗೆ ಆಸ್ಕರ್ ಬಂದಾಗ ಆರು ವರ್ಷಗಳಿಂದ ಈ ಸ್ಪೀಚ್ ರೆಡಿ ಮಾಡಿಕೊಂಡು ಬರ್ತಿದ್ದೆ ಎಂದಿದ್ದ! ನನ್ನದು ಉಲ್ಟಾ ಆಗಿತ್ತು. ಹೇಗೂ ಮಾತನಾಡುವ ಗೋಜಿಲ್ಲವೆಂದು ಆರಾಮಾಗಿ ಕೂತಿದ್ದೆ. ಅದೇನು ಮಾತನಾಡಿದೆನೋ ಗೊತ್ತಿಲ್ಲ. ಧನ್ಯವಾದ ಹೇಳುವಾಗ ಎಷ್ಟೊಂದು ಹೆಸರುಗಳನ್ನು ಹೇಳುವುದಿತ್ತು. ಆದರೆ ಸಮಯವಿರಲಿಲ್ಲ, ತಲೆಯೂ ಓಡಲಿಲ್ಲ!

ಕ್ಷಣ ಕ್ಷಣಕ್ಕೂ ರೋಚಕತೆ ಹೆಚ್ಚಿಸಿದ ಪ್ರಶಸ್ತಿ ಪ್ರಧಾನ ಸಮಾರಂಭ ಒಂದು ವಿಶಿಷ್ಟ ಅನುಭವವಾಗಿತ್ತು. ಬಹುಮಾನಿತರು ಯಾರೆಂದು ಕೊನೆವರೆಗೂ ಬಿಟ್ಟು ಕೊಡದ ಇಡೀ ಬುಕ್ ಬ್ರಹ್ಮ ತಂಡ ಒಂದು ಅದ್ಭುತವಾದ ಇಂಟಿಗ್ರಿಟಿ ತೋರಿಸಿದೆ. ಇಪ್ಪತ್ತೂ ಜನರನ್ನೂ ಅಷ್ಟೇ ಪ್ರೀತ್ಯಾದರಗಳಿಂದ ಕಂಡಿದ್ದು ಗೆಸ್ ಮಾಡಲು ಆಗಲೇ ಇಲ್ಲ. ಇಡೀ ಕಾರ್ಯಕ್ರಮವನ್ನು ಕಾರ್ಪೊರೇಟ್ ಸ್ಟೈಲ್ ನಲ್ಲಿ ನಡೆಸಿಕೊಟ್ಟು, ಬಹಳ ಅಚ್ಚು ಕಟ್ಟಾಗಿ, ಯಾವುದೇ ಗೊಂದಲವಿಲ್ಲದೆ ಮುಗಿಸಿದರು. ಪ್ರತಿಯೊಂದು ಗಿಫ್ಟ್ ಬ್ಯಾಗಿನ ಮೇಲೆ ಅವರವರ ಹೆಸರಿನ ಟ್ಯಾಗ್ ಇದ್ದುದು ಅವರ ಡಿಟೇಲಿಂಗ್ ಮತ್ತು ಡೆಡಿಕೇಷನ್ ಬಗ್ಗೆ ಗೌರವ ಮೂಡುವಂತೆ ಮಾಡಿದೆ. ಇನ್ನು ಫಳ ಫಳ ಹೊಳೆಯುವ ಪ್ರಶಸ್ತಿ ಫಲಕವಂತೂ ಅದ್ಭುತವಾಗಿದೆ. ಐವತ್ತು ಸಾವಿರ ನಗದು, ಫಲಕ ಜೊತೆಗೆ ಈ ನಾಲ್ಕು ಪುಸ್ತಕಗಳನ್ನೂ ಬಹುಮಾನವಾಗಿ ಕೊಟ್ಟಿದ್ದಾರೆ. ಬಹಳ ಖುಷಿಯಾಗಿದೆ.

ಪ್ರತಿಯೊಂದು ವಿಷಯದಲ್ಲೂ ಶ್ರೇಷ್ಠ ಗುಣಮಟ್ಟವನ್ನು ಕಾಯ್ದು ಕೊಂಡಿದ್ದು ಇಡೀ ತಂಡದ ಕೆಪೆಬಿಲಿಟಿ ಬಗ್ಗೆ ಬೆರಗು ಮೂಡಿಸಿದೆ. ಕಂಬತ್ತಳ್ಳಿ ಸರ್ ಹೇಳಿದಂತೆ ಇಂಥ ಒಂದು ಕಾರ್ಯಕ್ರಮ ಇದುವರೆಗೂ ಆಗಿರಲಿಲ್ಲ. ಒಂದು ಕಥಾ ಸ್ಪರ್ಧೆಯಲ್ಲಿ ಏನೆಲ್ಲಾ ಸಾಧ್ಯತೆಗಳಿವೆ ಎಂದು ತೋರಿಸಿದೆ ಬುಕ್ ಬ್ರಹ್ಮ! ಹ್ಯಾಟ್ಸ ಆಫ್ ಸತೀಶ್ ಚಪ್ಪರಿಕೆ, ದೇವು ಪತ್ತಾರ, ಭಾಗ್ಯ ದಿವಾಣ ಮತ್ತು ಟೀಮ್!

ಅತಿಥಿಗಳು
ಜ್ಞಾನ ಪೀಠ ಪ್ರಶಸ್ತಿ ಪುರಸ್ಕೃತ ದಾಮೋದರ ಮಾವೋಜಿ ಸರ್, ಜನಪ್ರಿಯ ನಿರ್ದೇಶಕ ಗಿರೀಶ್ ಕಾಸರವಳ್ಳಿ ಸರ್ ಮತ್ತು ಉದ್ಯಮಿ ಗುರುರಾಜ ದೇಶಪಾಂಡೆ ಸರ್ ಇವರ ಉಪಸ್ಥಿತಿ ಎಂಥಾ ಸೌಭಾಗ್ಯ!

ತೀರ್ಪುಗಾರರು
ನಾನು ಅತ್ಯಂತ ಇಷ್ಟ ಪಟ್ಟು ಓದುವ ಅದ್ಭುತ ಕತೆಗಾರ, ತಮ್ಮದೇ ಆದರ್ಶಗಳಿಂದ ಜನಪ್ರಿಯವಾದ ಕೇಶವ ಮಳಗಿ ಸರ್, ತಮ್ಮ ಅಪರಿಮಿತ ಓದು, ಬರಹ, ಜ್ಞಾನ, ಸರಳತೆಯಿಂದ ಮನಸೆಳೆಯುವ ಸದಾ ಸ್ಫೂರ್ತಿ ನೀಡುವ ಆಶಾ ದೇವಿ ಮೇಡಂ, ಉತ್ತಮ ವಿಚಾರಗಳನ್ನು ಹಂಚಿಕೊಂಡ ಶ್ರೀಧರ್ ಸರ್ ಮತ್ತು ರಂಗನಾಥ ಸರ್ ಈ ಸ್ಪರ್ಧೆಗೆ ತೀರ್ಪುಗಾರರಾಗಿದ್ದು ನನ್ನ ಖುಷಿಯನ್ನು ಹೆಚ್ಚಿಸಿ ಹೆಮ್ಮೆ ಕೊಟ್ಟಿದೆ. ಸಾಮಾನ್ಯವಾಗಿ ಸ್ಪರ್ಧೆಗಳಿಗೆ ಬರೆಯುವಾಗ ಒಳ್ಳೆಯ ಟಾಪಿಕ್ ಇರಬೇಕು, ಉತ್ತಮ ಸಂದೇಶ ಕೊಡಬೇಕು, ಭಾಷೆ ಶೈಲಿ ಟಾಪ್ ಕ್ಲಾಸ್ ಇರಬೇಕು ಎನ್ನುವ ಮಾತುಗಳನ್ನು ಕೇಳಿದ್ದ ನನಗೆ ಹಾಗೆಲ್ಲ ಕಂಡೀಷನ್ ಹಾಕಿಕೊಂಡು ಬರೆಯುವುದು ಸಾಧ್ಯವೇ ಇಲ್ಲ. ಹಳ್ಳಿಯಲ್ಲೇ ಹುಟ್ಟಿದರೂ ಹಳ್ಳಿಯ ಕಥೆಗಳು ನನ್ನಲ್ಲಿ ಹುಟ್ಟುವುದಿಲ್ಲ. ಇದರ ಬಗ್ಗೆ ನನಗೆ ಕೀಳರಿಮೆ ಇದೆ. ಆದರೂ ನನ್ನ ಕಂಫರ್ಟ್ ಝೋನ್ ನಿಂದ ಹೊರಬರದೆ ಅರ್ಬನ್ ಕಥೆಯನ್ನೇ ಬರೆದೆ. ಅದರ ಕಥಾವಸ್ತು ಕೂಡ ಇಷ್ಟವಾಗುತ್ತದೋ ಇಲ್ಲವೋ ಎನ್ನುವ ಅಂಜಿಕೆ ಇತ್ತು. ಈ ತೀರ್ಪುಗಾರರು ಇವೆಲ್ಲಾ ಪೂರ್ವಾಗ್ರಹಗಳನ್ನು ಬದಿಗಿಟ್ಟು ತೆರೆದ ಮನಸ್ಸಿನಿಂದ ಕಥೆಗಳನ್ನು ಓದಿರುವುದು ನನ್ನ ಭಾಗ್ಯವೇ ಸರಿ. ಅವರಿಗೆ ನನ್ನ ತುಂಬು ಹೃದಯದ ಧನ್ಯವಾದಗಳು.

ಕಥೆಕೂಟ
ಕಥೆಕೂಟವೆನ್ನುವ ಒಂದು ವಿಸ್ಮಯಲೋಕ ಕಳೆದ ಒಂದು ವರ್ಷದಿಂದ ಅದೆಷ್ಟು ಕಥೆಗಳನ್ನು ಓದಿಸಿದೆ, ಬರೆಸಿದೆ, ವಿಮರ್ಶೆ ಮಾಡುವುದನ್ನೂ ಕಲಿಸಿದೆ. ನನ್ನ ಕಥೆಗಳಲ್ಲಿ ಈಗ ಬಹಳ improvement ಇದೆಯೆಂದು ನನ್ನ ಮೊದಲ ಕಥೆಗಳನ್ನು ಓದಿದವರು ಹೇಳಿದ್ದಾರೆ. ಕಥೆಕೂಟಕ್ಕೆ, ಅಡ್ಮಿನ್ ಗೋಪಾಲ ಕೃಷ್ಣ ಕುಂಟಿನಿ ಸರ್, ಎಷ್ಟೆಲ್ಲಾ ಪುಸ್ತಕಗಳನ್ನು ಬರೆದು ಅಮೋಘ ಸಾಧನೆಗೈದರೂ ಈಗಲೂ ಎಲ್ಲವನ್ನೂ ಬಾಲಕನಂತೆ ಕುತೂಹಲದಿಂದಲೇ ನೋಡುವ ಜೋಗಿ ಸರ್, ಹಿರಿಯರಾದರೂ ಕಿರಿಯರ ಕಿರಿಕಿರಿ ಸಹಿಸಿಕೊಂಡು ಪ್ರತಿ ಕಥೆಯನ್ನೂ ಅಷ್ಟೇ ಆಸ್ಥೆಯಿಂದ ಓದಿ ಪ್ರಾಮಾಣಿಕ ಅಭಿಪ್ರಾಯ ನೀಡುವ ಕೂಟದ ಪ್ರೀತಿಯ ಸುಬ್ರಾಯ ಚೊಕ್ಕಾಡಿ ಸರ್, ಎಷ್ಟೇ ಬ್ಯುಸಿ ಇದ್ದರೂ ಕಳಿಸಿದ ಕೂಡಲೇ ಓದಿ ತಿದ್ದುವ ಅಜಿತ್ ಹರೀಶಿ ಮತ್ತು ಕೂಟದ ಎಲ್ಲಾ ಸದಸ್ಯರಿಗೂ ನನ್ನ ಪ್ರಣಾಮಗಳು. ಈ ಬಹುಮಾನ ಕಥೆಕೂಟಕ್ಕೆ ಅರ್ಪಣೆ!

ಟಿ ಎನ್ ಆರ್ ಸರ್, ಬಿ ಆರ್ ಎಲ್ ಸರ್, ಜಿ ಎನ್ ಮೋಹನ್ ಸರ್
ಹೊಸ ಕಥೆಗಳ ಬಗ್ಗೆ ಸದಾ ಒಂದು ಕುತೂಹಲದ ಕಣ್ಣಿಟ್ಟಿರುವ, ಎಲ್ಲಿಗಾದರೂ ಕರೆಯಿರಿ ಆದರೆ ಮಾತನಾಡಲು ಹೇಳಬೇಡಿ ನಾನು ಕಿರಿಯರ ಮಾತುಗಳನ್ನು ಕೇಳಬೇಕು ಎಂದು ಹೇಳುವ, ಬಂದು ಆಶೀರ್ವದಿಸುವ ಬಹುಮುಖ ಪ್ರತಿಭೆ ಜನಪ್ರಿಯ ಟಿಎನ್ ಸೀತಾರಾಮ್ ಸರ್, ಅವರಿಗೂ ನನ್ನ ನಮನಗಳು.

ನಗುಮುಖದ ತುಂಟ ಕವಿ ಗೋಪಿ ಮತ್ತು ಗಾಂಡಲೀನಾ ಖ್ಯಾತಿಯ ಬಿ ಆರ್ ಎಲ್ ಸರ್ ಮತ್ತು ಬಹುರೂಪಿ ಅವಧಿಯ ಹರಿಕಾರ ಜಿ ಎನ್ ಮೋಹನ್ ಸರ್ ಅವರಿಗೂ ಧನ್ಯವಾದಗಳು.

ನವೋದಯ_ವಿದ್ಯಾಲಯ
ಓದುವ ಹುಚ್ಚು ಹಿಡಿಸಿದ ನಮ್ಮ ನವೋದಯ ವಿದ್ಯಾಲಯದ ಶ್ರೀ ನಾಗರಾಜ್ ಸರ್ ಮತ್ತು ಅಪ್ಪ, ಅಮ್ಮನನ್ನೂ ಇಲ್ಲಿ ಪ್ರೀತಿಯಿಂದ ನೆನೆಯುವೆ.
ನನ್ನನ್ನ ಪುಸ್ತಕ ಪ್ರಕಟಣೆಗೆ ಪರಿಚಯ ಮಾಡಿಸಿದ ಅದ್ಭುತ ಕವಿ, ಪ್ರೀತಿಯ ವಾಸುದೇವ್ ನಾಡಿಗ್ ಸರ್ ಅವರನ್ನೂ ನೆನೆಯುವೆ. ನವೋದಯನ್ ಎಂದರೆ ಸಾಕು ಅವರು ನಮ್ಮವರು ಎಂದು ಅಭಿಮಾನದಿಂದ ಎಲ್ಲಿದ್ದರೂ ಬಂದು ಕಾಣುವ, ಈ ಕಾರ್ಯಕ್ರಮಕ್ಕೆ ಬಂದ ಕಿರಿಯ ಸ್ನೇಹಿತರಿಗೂ ಪ್ರೀತಿ.

BWW
ನಾನು ಇಂಗ್ಲೀಷ್ ನಲ್ಲಿ ಬರೆಯಲು ಶುರು ಮಾಡಿದಾಗ ನನ್ನ ಮೊದಲ ಮೆಂಟರ್ ಆದ ಉತ್ಸಾಹದ ಚಿಲುಮೆ, ವಿಶಿಷ್ಟ ಲೇಖಕಿ ಬ್ಯಾಂಗಲೋರ್ ರೈಟರ್ಸ್ ವರ್ಕ್ಷಾಪ್ BWW ನ ಫೌಂಡರ್ ಆದ ಭೂಮಿಕಾ ಆನಂದ್ ಗೂ ನನ್ನ ನಮನಗಳು.

ಕಥೆಗೆ ಪ್ರೇರಣೆ
ವಿನ್ನರ್ ವಿನ್ನರ್ ಚಿಕನ್ ಡಿನ್ನರ್ ಕಥೆಯ ಪ್ರೇರಣೆಯಾದ ನನ್ನ ಮಗಳಿಗೆ ಪ್ರೀತಿ!

ಫೇಸ್ಬುಕ್

ಬುಕ್ ಬ್ರಹ್ಮ ಸ್ಪರ್ಧೆಯನ್ನು ಅನೌನ್ಸ್ ಮಾಡಿದಾಗಿನಿಂದಲೂ, ಬೇಗ ಬರೆಯಿರಿ ಇನ್ನು ಹತ್ತೇ ದಿನ, ಐದೇ ದಿನ ಎಂದು ಹೆದರಿಸಿ ಕೊನೆಗೂ ಬರೆಸಿದ, ಪಾರ್ಟಿ ಕೊಡಿಸಿ ಎಂದು ತಮಾಷೆ ಮಾಡುತ್ತಲೇ ಈ ವಿಶಿಷ್ಟ ಅನುಭವಕ್ಕೆ ಜೊತೆಯಾದ ಸಹ ಲೇಖಕರಾದ ಮಧು ವೈ ಎನ್, ಅರ್ಪಣ ಎಚ್ ಎಸ್, ಸಂಧ್ಯಾ ರಾಣಿ, ನಂದಿನಿ ಹೆದ್ದುರ್ಗ, ಕುಸುಮ, ಇನ್ನೂ ಹಲವಾರು ಸ್ನೇಹಿತರಿಗೆ ಪ್ರೀತಿ!

ಒಟ್ಟಾರೆ ತುಂಬಾ ತುಂಬಾ ಖುಷಿಯಾಗಿದೆ. ನೆನ್ನೆಯಿಂದಲೂ ಅದೆಷ್ಟು ಜನ ಕರೆ ಮಾಡಿ, ಮೆಸೇಜ್ ಮಾಡಿ, ಟ್ಯಾಗ್ ಮಾಡಿ ಪೋಸ್ಟ್ ಹಾಕಿ ಶುಭ ಕೋರಿದ್ದೀರಿ. ನಿಮ್ಮೆಲ್ಲರ ಪ್ರೀತಿಗೆ ಮೂಕಳಾಗಿದ್ದೇನೆ.
ಈ ಸಾಹಿತ್ಯ ಪ್ರೀತಿ ಹೀಗೇ ಇರಲಿ!

ಮರೆಯಲಾಗದ ಈ ಅನುಭವವನ್ನು ಮಡಿಲಿಗೆ ಹಾಕಿದ ಬುಕ್ ಬ್ರಹ್ಮ ತಂಡಕ್ಕೆ ಮತ್ತೊಮ್ಮೆ ಧನ್ಯವಾದಗಳು.

‍ಲೇಖಕರು Admin

August 16, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. T S SHRAVANA KUMARI

    ಮತ್ತೊಮ್ಮೆ ಹೃತ್ಪೂರ್ವಕ ಅಭಿನಂದನೆಗಳು

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: