ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನ ಕಿಟಕಿಯ ಹೊರಗೆ..

ವೀಣಾ ಭಟ್

ನನ್ನ ರೂಮಿನ ಕಿಟಕಿಯಿಂದ ಕಾಣುವ ದೃಶ್ಯ ನನಗೆ ತುಂಬಾ ಇಷ್ಟವಾದುದು .ಅಪಾರ್ಟ್ ಮೆಂಟಿನ ಮೂರನೇ ಮಹಡಿ,ಎದುರಿಗೆ ಉದ್ಯಾನವಿದೆ .ಅದರಿಂದ ಬೇರೆ ಬಹುಮಹಡಿ ಕಟ್ಟಡಗಳು ಬರುವ ಭಯವಿಲ್ಲ .ಮರಗಳ ತುದಿ ಭಾಗ ಸುಂದರವಾಗಿ ಕಾಣುತ್ತದೆ. ಶುಭ್ರ ನೀಲ ಆಕಾಶ ,ಒಮ್ಮೊಮ್ಮೆ ಬಿಳಿ ಮೋಡ..ಒಮ್ಮೊಮ್ಮೆ ಕರಿ ಮೋಡಗಳ ಸುಂದರ ವಿನ್ಯಾಸ ನೋಡಲು ಸಿಗುತ್ತದೆ .ಎಷ್ಟೊಂದು ತರಹದ ಮರಗಳು …ಒಂದು ಮರ ಬೋಳಾಗಿ ನಿಂತಿದ್ದರೆ ಇನ್ನೊಂದು ಮರ ಚಿಗುರುತ್ತಿರುತ್ತದೆ .ಒಂದಲ್ಲ ಒಂದು ಮರ ಹೂ ಬಿಡುತ್ತಿರುತ್ತದೆ.ನನ್ನ ಕಿಟಕಿಯ ಹೊರಗೆ ಸರ್ವ ಋತುಗಳಲ್ಲಿ ಹೂ ಬಿಡುವ ಮರಗಳಿವೆ .ಈ ಮರಗಳು ಎಷ್ಟು ಸುಂದರ ಜೀವಿಗಳು …!ಮನುಷ್ಯನಿಗೆ ಪ್ರಕೃತಿಯ ಕೊಡುಗೆ ..ದೇವರ ಕೊಡುಗೆ .ಹೀಗೆ ನನ್ನ ಯೋಚನಾ ಲಹರಿ ಸಾಗುತ್ತಿದ್ದಂತೆ ಮತ್ತೆ ವಾಸ್ತವಕ್ಕೆ ಬರುತ್ತೇನೆ .ಕೆಳಗೆ ಕಾಣುವ ರಸ್ತೆಯಲ್ಲಿ ವಾಹನಗಳ ಸಾಲು.ಯಾವಾಗಲೂ ಟ್ರಾಫಿಕ್ ಜಾಮ್ .ಮೇಲೆ ನೋಡಿದರೆ ಕಾಡು.ನಗರದ ಮಧ್ಯೆ ಇದ್ದೇವೆ ಅನ್ನಿಸೋದೇ ಇಲ್ಲ .ಆಗೊಮ್ಮೆ ಈಗೊಮ್ಮೆ ಸಣ್ಣ ಪುಟ್ಟ ಅಪಘಾತಗಳಾಗಿ ಜಗಳವಾಡುತ್ತ ,ಕಿರಿಚಾಡುವ ವಾಹನ ಚಾಲಕರು ಕಾಣುತ್ತಾರೆ . ಕುಣಿಯುತ್ತ ಶಾಲೆಗೆ ಹೋಗುವ ಮಕ್ಕಳು,ಜಗಳವಾಡುತ್ತಾ ಶಾಲೆಗೆ ಹೋಗುವ ಅಣ್ಣ ತಂಗಿ …ಗರ್ಲ್ ಫ್ರೆಂಡ್ ಜೊತೆ ಸ್ಟೈಲ್ ಹೊಡೆಯೋ ಹುಡುಗ …ದೊಡ್ಡದಾಗಿ ಕಿರುಚಿಕೊಂಡು ಗಂಡನ ಜೊತೆ ಜಗಳವಾಡುವ ರಸ್ತೆ ಗುಡಿಸುವ ಹೆಂಗಸು…ಹೀಗೇ …ವಿವಿಧ ರೀತಿಯ ಮನರಂಜನೆ …

ನನಗೆ ಕಿಟಕಿಯ ಬಳಿ ಬಂದು ನಿಲ್ಲಲು ಯಾವುದೇ ನಿಗದಿತ ಸಮಯವಿಲ್ಲ .ಯಾವಾಗೆಂದರೆ ಆವಾಗ ಬಂದು ನಿಲ್ಲುತ್ತೇನೆ .ಒಂದೊಂದು ಸಲ ಸುಮ್ಮನೆ ಚಹಾ ಕುಡಿಯುತ್ತ ,ಇನ್ನೊಮ್ಮೆ ಮಕ್ಕಳು ಶಾಲೆಯಿಂದ ಬಂದರೇ ಎಂದು ನೋಡುತ್ತಾ ….ಹೀಗೇ .. ಆಗಾಗ ಹೊರಗೆ ನೋಡುತ್ತಿರುತ್ತೇನೆ .ಒಂದೇ ದಿನದಲ್ಲಿ ಎಷ್ಟೊಂದು ಬದಲಾವಣೆಗಳು ,ಆಸಕ್ತಿ ಮೂಡಿಸುವ ವಿಷಯಗಳನ್ನು ಗಮನಿಸುತ್ತೇನೆ .ಇದು ನನಗೆ ಆಸಕ್ತಿ ಮೂಡಿಸುವ ವಿಷಯವಾಗಿರಬಹುದು .ಎಲ್ಲರಿಗೂ ಇದನ್ನು ಗಮನಿಸುವ ವ್ಯವಧಾನವಿರುವುದಿಲ್ಲ .’ಇವಳೊಬ್ಬಳು ಹುಚ್ಚಿ ..ಬೇರೆ ಕೆಲಸವಿಲ್ಲ ‘ಎಂದುಬಿಡಬಹುದು .

ಒಂದು ದಿನ ಗೇಟಿನ ಬಳಿ ಕಾಗೆಯೊಂದು ಸತ್ತು ಬಿದ್ದಿತ್ತು ..ಕಾಗೆಯನ್ನು ಮುಟ್ಟಲು ಯಾರೂ ತಯಾರಿಲ್ಲ .ಕಾಗೆ ಮುಟ್ಟಿದರೆ ಸ್ನಾನ ಮಾಡಬೇಕಲ್ಲ ..!!ಶವ ೨–೩ ದಿನ ಅಲ್ಲೇ ಬಿದ್ದಿತ್ತು.ತುಂಬಾ ಕಾಗೆಗಳು ಬಂದು ಕಾ ..ಕಾ..ಕೂಗಿ ಸಂತಾಪ ಸೂಚಿಸಿದವು .ಶವವನ್ನು ಕೊಕ್ಕಿನಲ್ಲಿ ಎಳೆದೆಳೆದು ಆಕಡೆ ಈಕಡೆ ಸರಿಸಿದವು .೨–೩ ದಿನಗಳ ನಂತರ ಪಕ್ಕದ ಅಪಾರ್ಟ್ ಮೆಂಟ್ ಕೆಲಸಕ್ಕೆ ಮಣ್ಣು ತಂದು ಸುರಿದರು .ಕಾಗೆಯೂ ಆ ಮಣ್ಣಿನೊಂದಿಗೆ ಮಣ್ಣಾಯಿತು . ಸದ್ಯ …ಅಂದುಕೊಂಡೆ .ಹಾಗೇ ಸುಮ್ಮನೆ ಇನ್ನೊಂದು ದಿನ ಕಿಟಕಿಯ ಬಳಿ ನಿಂತಿದ್ದೆ .ಕಂದು ಬಣ್ಣದ ಕುದುರೆಯ ಟಾಂಗ ಬಂತು .ಕುತೂಹಲದಿಂದ ಗಮನಿಸತೊಡಗಿದೆ .ಗಾಡಿಯಲ್ಲಿ ೧೦ ಜನರೂ ಕೂಡಾ ಹೊರಲಾರದಷ್ಟು ಸಾಮಾನು .ಒಂದು ಬಡಕಲು ಕುದುರೆ . ಟಾಂಗವಾಲ ಒಂದೊಂದೇ ಇಳಿಸಿದ .ಕುದುರೆಗೆ ನಿರಾಳವಾಯಿತು .ನನಗೂ ಅಷ್ಟೆ ….ಗೋಣಿಚೀಲವನ್ನು ಅದರ ಮುಖಕ್ಕೆ ತಳ್ಳಿ ಕಟ್ಟಿದ .ಅದು ಖುಷಿಯಿಂದ ತಿನ್ನಲು ತೊಡಗಿತು .ನನಗೇ ಊಟ ಮಾಡಿದಷ್ಟು ಖುಷಿಯಾಯಿತು .ಅದನ್ನು ನೋಡಲು ನನ್ನ ಕೆಲಸದವಳೂ ಬಂದಳು .ಅವಳೊಂದು ಅಪ್ರಿಯ ಸತ್ಯವನ್ನು ತಿಳಿಸಿದಳು .ಏನೆಂದರೆ ಈ ಟಾಂಗ ಕುದುರೆಗಳನ್ನು ಅದರ ಒಡೆಯ ಚೆನ್ನಾಗಿ ದುಡಿಸಿ ಮುದಿಯಾದ ಮೇಲೆ ಹಾಗೇ ರಸ್ತೆಯಲ್ಲಿ ಅನಾಥವಾಗಿ ಬಿಟ್ಟು ಬಿಡುತ್ತಾನೆ .ಅದು ಹೊಟ್ಟೆಗೆ ಹಿಟ್ಟು ಹುಡುಕುತ್ತ ಅಲ್ಲಿ ಇಲ್ಲಿ ಅಲೆದು ಬಸವಳಿದು ಒಂದು ದಿನ ಸತ್ತು ಹೋಗುತ್ತದೆ .ಒಂದು ಕ್ಷಣ ನಾನೇನು ಮಾಡಲಿ…? ಎಂದು ಮನಸ್ಸು ಅದಕ್ಕಾಗಿ ರೋದಿಸಿತು.

ಇನ್ನೊಂದು ಸಲ ೩ ದಿನಗಳಿಗಾಗಿ ನನ್ನೂರಿಗೆ ಹೋಗಿದ್ದೆವು .ಬಂದ ಕೂಡಲೇ ಕಿಟಕಿಯ ಬಳಿ ನಿಂತೆ .’ವಾಹ್.’..ಎಂಬ ಉದ್ಗಾರ ನನಗರಿವಿಲ್ಲದಂತೆ ಬಂತು .ಗೇಟಿನ ಬಳಿಯಿರುವ ಜಕರಾಂದ ಹೂವಿನ ಮರದ ತುಂಬ ಹೂವು …ಹೋಗುವಾಗ ಬೋಳಾಗಿದ್ದ ಮರ ಗುಲಾಬಿ ಮಿಶ್ರಿತ ನೇರಳೆ ಹೂಗಳಿಂದ ಕಂಗೊಳಿಸುತ್ತಿದೆ ..ಮರದಲ್ಲಿ ಮೊಗ್ಗುಗಳು ಕೂಡಾ ಕಾಣುತ್ತಿರಲಿಲ್ಲ.ಅಷ್ಟರಲ್ಲಿ ಇನ್ನೊಂದು ಮರ ಎಲೆ ಉದುರಿಸಲಾರಂಭಿಸಿತ್ತು .ಅದುವೇ ರೈನ್ ಟ್ರೀ. ನನ್ನ ಕಿಟಕಿಯ ಹೊರಗೆ ಕಾಣುವ ಹೂ ಬಿಡುವ ಮರಗಳಲ್ಲಿ ಇದೂ ಒಂದು.ಇಡೀ ಮರ ಬೋಳಾಗಿ ನಿಂತರೂ ಅದರದೇ ಸೌಂದರ್ಯವಿದೆ .ಕಿಟಕಿಯ ಹೊರಗೆ ಕಾಣುವ ನೀರುಕಾಯಿ ಮರ,ವಸಂತ ಋತುವಿನಲ್ಲಿ ಹೂ ಬಿಡುವ ಪೆಲ್ ಟಾ ಫೋರಮ್ ,ಹೊಳೆ ದಾಸವಾಳ ,ಮೇ ಫ್ಲವರ್ ಮರ ಎಲ್ಲ ನನಗೆ ಪರಿಚಿತ .ಈ ಮರಗಳಲ್ಲದೆ ದೊಣ್ಣೆಕಾಯಿ ಮರ ಮತ್ತು ಮುಗಿಲ ಮಲ್ಲಿಗೆ ಮರಗಳಿವೆ .ಕಿಟಕಿಯ ಬಳಿ ಅಳಿಲು ಕಚಗುಳಿಯಿಡುತ್ತ ಓಡುತ್ತಿರುತ್ತದೆ .ಕೇಬಲ್ ಮೇಲೆ ಕೋತಿಗಳ ಜೋಕಾಲಿಯಾಟದ ದೃಶ್ಯ ಕೂಡಾ ಒಮ್ಮೊಮ್ಮೆ ಸಿಗುವುದುಂಟು …ಕೋತಿಯ ಹಿಂದೆ ಕಾಗೆ ಕಾ …ಕಾ …ಕೂಗುತ್ತ ಮೆರವಣಿಗೆ ……!!ಕಾಗೆ ಕೋತಿಗೆ ಏನೋ ಹೇಳಿದಂತೆ …ಕೋತಿಗೆ ಅದು ಅರ್ಥವಾದೀತೆ …??ತುಂಬಾ ಸುಂದರ ದೃಶ್ಯ ….!!! ಪಾರಿವಾಳದ ದೊಡ್ಡ ಕುಟುಂಬವೇ ಇದೆ.ಇದರ ಗುಟುರು ನನ್ನನ್ನು ಎಷ್ಟೊಂದು ಸಲ ನಿದ್ದೆಯಿಂದ ಎಬ್ಬಿಸಿದೆ ..!

ಬೆಳಗ್ಗೆ ೭–೩೦ ಅಂದರೆ…. ಕಸದ ಗಾಡಿ ಬರುವ ಹೊತ್ತು .ಅವರ ಗಲಾಟೆ ನನಗೆ ಮೇಲಿನವರೆಗೆ ಕೇಳಿಸುತ್ತಿರುತ್ತದೆ .ಇಲ್ಲಿ ಬರುವಾಗಲೇ ತುಂಬಿ ತುಳುಕುವ ಗಾಡಿ ..ಅದರ ಮೇಲೆ ಇನ್ನೂ ಸುರಿಯುತ್ತಿರುತ್ತಾರೆ .ಅರ್ಧದಷ್ಟು ರಸ್ತೆಯ ಮೇಲೆ ಚೆಲ್ಲುತ್ತಿರುತ್ತದೆ .ಎಷ್ಟೊಂದು ಅವ್ಯವಸ್ಥೆ …??ಇವರನ್ನು ಕಂಡಾಗ ಕನಿಕರವೂ ಉಂಟಾಗುತ್ತದೆ …ಕೈಗಳಲ್ಲೇ ಕಸ ಎತ್ತಿ ಹಾಕುತ್ತಾರೆ . ಬರಿ ಕೈಯಿಂದ ಹಾಲಿನ ಕವರ್ ,ಪೇಪರ್ ಎತ್ತಿ ಬೇರೆ ಚೀಲಕ್ಕೆ ಹಾಕಿಕೊಡು ಅದನ್ನು ಮಾರುತ್ತಾರೆ .ಕಸ ಎತ್ತುವಾಗ ಕೈಚೀಲ ಹಾಕಿಕೊಳ್ಳಬೇಕೆಂಬ ಜ್ಞಾನವೂ ಇರದು.ಇವರಿಗೆ ಮಹಾನಗರ ಪಾಲಿಕೆಯಿಂದ ಕೈಚೀಲ ಸಿಕ್ಕರೂ ಅದನ್ನು ಸರಿಯಾಗಿ ಬಳಸಲು ಇವರಿಗೆ ಬರದು… ..ಇಂತಹ ಸಮಸ್ಸೆಗಳಿಗೆ ಕೊನೆಯಿದೆಯೇ ..?ಕೊನೆ ಇಲ್ಲ ಎಂಬ ನಿರ್ಲಿಪ್ತ ಭಾವ ಒಮ್ಮೊಮ್ಮೆ ಮನದಲ್ಲಿ ಬಂದುಬಿಡುತ್ತದೆ .

ಮರಗಳ ಮೇಲೆ ಗರುಡ ಪಕ್ಷಿಯ ನರ್ತನ …ಪಾರಿವಾಳಗಳಿಗೆ ಇವು ದುಃ ಸ್ವಪ್ನ …ಚೀ …ಚೀ ..ಎಂದು ಉಲಿಯುತ್ತ ಹಾರುವ ಗಾಂಭೀರ್ಯ .. ನೋಡುತ್ತಿರುತ್ತೇನೆ .ಮದ್ಯಾಹ್ನ ೩ ಗಂಟೆಯ ಹೊತ್ತಿಗೆ ಸೈಕಲ್ ನಲ್ಲಿ ಟೀವಾಲ ಬರುತ್ತಾನೆ . ನಮ್ಮ ಅಪಾರ್ಟ್ ಮೆಂಟಿನ ವಾಚ್ ಮೆನ್ ಗಳು ಇವನ ಬಳಿ ಚಹಾ ಕೊಂಡು ಕುಡಿಯುತ್ತಾರೆ .ಒಂದು ಲೋಟ ಚಹಾದ ಬೆಲೆ ೨ ರೂಪಾಯಿಗಳು .ಇಡೀ ದಿನ ಕುಳಿತಿರುವ ಇವರಿಗೆ ಈ ಚಹಾ ನವಚೇತನ ನೀಡುತ್ತದೆ .ದೊಡ್ಡ ಸಂತಸ ಚಿಕ್ಕ ಬೆಲೆಗೆ …!!ನನ್ನ ಕಿಟಕಿಯ ಒಂದು ಕಡೆ ಸೂರ್ಯೋದಯ ..ಇನ್ನೊಂದು ಕಡೆ ಸೂರ್ಯಾಸ್ತ ..ಹೀಗೇ ಎರಡನ್ನೂ ನೋಡಬಹುದು . ಕಿಟಕಿಯಿಂದ ನೋಡಿ ತೆಗೆದ ಫೋಟೋಗಳು ಲೆಕ್ಕವಿಲ್ಲದಷ್ಟು .

ಕಿಟಕಿಯ ಬಳಿ ನಿಂತು ತುಂಬಾ ಸಮಯ ವ್ಯರ್ಥ ಮಾಡುತ್ತೇನೆ ಎಂದು ಮನೆಯವರು ಹೇಳುತ್ತಿರುತ್ತಾರೆ .ಆದರೆ ನಾನು ಬೇರೇನೋ ಯೋಚನೆ ಮಾಡುತ್ತಿರುತ್ತೇನೆ .ಮರಗಳು ಒಂದು ರೀತಿಯಲ್ಲಿ ಜೀವನದ ಸತ್ಯಗಳನ್ನು ಬಿಂಬಿಸುತ್ತವೆ ಎನ್ನಬಹುದು .ಜೀವನದ ಕಷ್ಟಗಳನ್ನು ಬೋಳು ಮರಕ್ಕೆ ಹೋಲಿಸಲಾಗುತ್ತದೆ .ಸುಖದ ಸಮಯವನ್ನು ತುಂಬಿದ ಮರಕ್ಕೆ ಹೋಲಿಸಲಾಗುತ್ತದೆ .ಮರದ ಜೀವನದಲ್ಲೂ ವಿವಿಧ ಹಂತಗಳಿವೆ .ಅದೇ ತರಹ ಮನುಷ್ಯನ ಜೀವನದಲ್ಲೂ …ಆದರೆ ಮನುಷ್ಯನಿಗೂ ಮರಕ್ಕೂ ದೊಡ್ಡ ವ್ಯತ್ಯಾಸವಿದೆ .ಮರಗಳು ಯಾರಿಂದಲೂ ಏನನ್ನೋ ಅಪೇಕ್ಷಿಸುವುದಿಲ್ಲ .ಮನುಷ್ಯ ಎಲ್ಲರಿಂದಲೂ ಏನನ್ನಾದರೂ ಅಪೇಕ್ಷಿಸುತ್ತಲೇ ಇರುತ್ತಾನೆ .ಮನದಲ್ಲಿ ಬರೀ ಪ್ರಶ್ನೆಗಳೇ ತುಂಬುವ ಮೊದಲು ಈ ಸ್ವಗತ ವನ್ನು ಮುಗಿಸಲೇ …??

 

 

‍ಲೇಖಕರು avadhi

1 August, 2011

8 Comments

  1. Ashoka Bhat

    Aapta bhavanegalondige bareda nimma baraha chennagi odisikondu hoyitu! Dhanyavadagalu!

  2. Sukhesh M.G.

    kudure kate keli bejaraytu. aadre en madokagutte? sympathy is all we can give 🙁

  3. Anitha Naresh Manchi

    ಸುಂದರ ಲೇಖನ.. ವಿರಾಮದ ಸದುಪಯೋಗ ..:)

  4. Ramakrishna Nidagundi

    I really happy by knowing that you are writting articles. congrts. keep writthing & send link to my id ie rknidagundi@gmail.com
    Ramakrishna Nidagundi (9845460580)
    wishing you all the best.

  5. Ramakrishna Nidagundi

    really a good article.
    ramakrishna nidagundi

  6. D.RAVIVARMA

    ree madam i dont have any words to say about your article,simply superb,kitakigalu bari kitakigalalla, manada kitakigalu open adaga jagattina satya brame ellavu kaduttave nanna maneya kitikiyanda nanu nodida satya helidare adu ondu mahabharatave aguttade agagi kitikigalu jagattina satyagalige dariyadaru halavu karanagalindagi kitakigala satyagalannu nodi mareyabekaste..d,ravi varma hospet

  7. veena bhat

    Thanks everybody…:)

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading