ನನ್ನ ಅಮ್ಮ..

ಡಾ|| ಎಂ.ಎಸ್. ವಿದ್ಯಾ

ನನಗೆ ಅಮ್ಮ ಅಂದರೆ ‘ಸ್ತ್ರೀ ಎಂದರೆ ಅಷ್ಟೆ ಸಾಕೆ?’ ಎನ್ನುವ ರಾಷ್ಟ್ರಕವಿ ಜಿ.ಎಸ್.ಶಿವರುದ್ರಪ್ಪ ಅವರ ಕವನದ ಸಾಲುಗಳು ನೆನಪಿಗೆ ಬರುತ್ತವೆ. ಸುಮಾರು ಐವತ್ತು-ಅರವತ್ತರ ದಶಕದಲ್ಲೇ ವಿಭಿನ್ನ ಆಲೋಚನೆ ಉಳ್ಳ, ಕಾಲೇಜಿನ ಮೆಟ್ಟಿಲು ಹತ್ತಲಿಕ್ಕಾದರೂ ಛಲದಿಂದ ದೂರಶಿಕ್ಷಣದಲ್ಲಿ ಬನಾರಸ್ ಹಿಂದೂ ವಿಶ್ವವಿದ್ಯಾಲಯದಲ್ಲಿ ಹಿಂದಿಯಲ್ಲಿ ಸ್ನಾತಕೋತ್ತರ ಪದವಿ ಪಡೆದ, ಅಸಂಖ್ಯಾತ ಪುಸ್ತಕಗಳನ್ನು ಓದಿ, ಹಲವಾರು ಜ್ಞಾನಿಗಳ ಒಡನಾಟದಿಂದ ವಿಪರೀತ ಸೂಕ್ಷ್ಮಮತಿ, ವಿಶಾಲ ಹೃದಯಿ, ಬುದ್ದಿವಂತಳಾದವಳು ನನ್ನಮ್ಮ. ಅವರ ತಂದೆ-ತಾಯಿಯರ ಬೆಂಬಲ ಸದಾ ಅವರಿಗೆ ಬೆಂಗಾವಲು. ತಾತ ಆಗಿನ ಕಾಲದಲ್ಲೇ (1918ನೇ ಇಸವಿ) ಮದ್ರಾಸ್ ವಿಶ್ವವಿದ್ಯಾಲಯದಲ್ಲಿ ಇಂಗ್ಲೀಷ್ ಪದವಿ ಪಡೆದಿದ್ದವರು. ತಾಯಿ ಜಮೀನ್ದಾರರ ಮಗಳಾದರೂ ಶ್ರೀಮಂತಿಕೆಯ ಸೊಕ್ಕಿಲ್ಲದೆ, ಮಧ್ಯಮವರ್ಗದ ಮನೆ ಸೇರಿ ಯಾವ ಮೂಢನಂಬಿಕೆಗಳೂ ಕಾಡದಂತೆ ಅಷ್ಟೇ ವಿಶಾಲ ಹೃದಯದಿಂದ ಮಕ್ಕಳನ್ನು ಬೆಳೆಸಿದವರು. ಹೀಗಾಗಿ ಅಮ್ಮ ಆಗಿನ ಕಾಲದಲ್ಲೇ ವರಪರೀಕ್ಷೆ ಇಷ್ಟವಿಲ್ಲವೆಂದು, ಮದುವೆಯನ್ನು ಮುಂದೂಡಿದರೂ ಕಮಕ್ ಕಿಮಕ್ ಅನ್ನದೆ ಇದ್ದವರು.

ನಮ್ಮ ತಾಯಿಗೆ ಸ್ನೇಹಿತರು ವಿಪರೀತ. ಅಜ್ಜಿಯು ಯಾವುದೇ ರೀತಿಯ ಭೇದ ತೋರಿಸದೆ ಎಲ್ಲರೊಂದಿಗೂ ಬೆರೆತು ಆತಿಥ್ಯವನ್ನು ಮಾಡುತ್ತಿದ್ದರು. ಹೀಗಾಗಿ ಜಾತಿ ವಿಚಾರವಾಗಲೀ, ವರ್ಗವಾಗಲೀ, ಲಿಂಗವಾಗಲೀ ಯಾವುದೇ ಭೇದದ ಬೀಜ ತಲೆಯಲ್ಲಿ ಬಿತ್ತಿಸಿಕೊಳ್ಳದೆ ಕೊನೆಯ ತನಕ ಎಲ್ಲರನ್ನೂ ವಿಶ್ವಾಸದಿಂದ ಕಾಣುವಂತಾಯ್ತು ನಮ್ಮಮ್ಮ ತಮ್ಮ ಅಮ್ಮನಿಂದ. ಹೀಗೆ ಅಪಾರ ಸ್ನೇಹಿತರನ್ನು ಪಡೆದುಕೊಂಡರು. ಅವರ ನೇರ ದಿಟ್ಟ ನುಡಿಗೆ ಕೆಲವರು ಮುನಿಸಿಕೊಂಡರೂ, ಬೂಟಾಟಿಕೆ, ನಾಟಕೀಯತೆ ಇರದಿದ್ದರಿಂದ ಅವರ ಸ್ನೇಹ ಬಳಗಕ್ಕೆ ಕೊರತೆಯಂತೂ ಇರಲಿಲ್ಲ.

ನಿರಂಜನರ ಪ್ರೇರಣೆ

ನಮ್ಮ ಸೋದರಮಾವ ಸೂರಿ ಪ್ರಜಾವಾಣಿ ಪತ್ರಿಕೆಯಲ್ಲಿ ಕ್ರೀಡಾ ವಿಭಾಗವನ್ನು ಪ್ರಾರಂಭಿಸಿದವರು. ಅವರಿಗೂ ಸ್ನೇಹಿತರ ಗುಂಪು ಹೆಚ್ಚಿತ್ತು. ಅದಲ್ಲದೆ ಸ್ವಾತಂತ್ರ್ಯ ಹೋರಾಟದಲ್ಲೂ ಭಾಗಿಯಾಗಿದ್ದವರು. ಅವರ ಮೂಲಕವೋ ಅಥವಾ ಒಂದೇ ರಸ್ತೆಯಲ್ಲಿ ಇದ್ದುದರಿಂದಲೋ ಏನೋ ನಮ್ಮ ಅಜ್ಜಿಯ ಮನೆಗೆ ‘ಖ್ಯಾತ ಸಾಹಿತಿ ನಿರಂಜನ’ರು ಆಗಾಗ್ಗೆ ಭೇಟಿ ಕೊಡುತ್ತಿದ್ದರು. ಒಂದು ದಿನ ಅಮ್ಮ ಯಾವುದೋ ಹಿಂದಿಯ ಭಾಗವನ್ನು ಕನ್ನಡಕ್ಕೆ ಅನುವಾದಿಸಿದ್ದನ್ನು ನೋಡಿ, ನಿರಂಜನರು ಶ್ರೀಕೃಷ್ಣ ಚಂದರ್ (ಪ್ರಸಿದ್ಧ ಹಿಂದಿ ಸಾಹಿತಿ) ಅವರ ‘ಪರಾಜಯ’ ಪುಸ್ತಕವನ್ನು ಅನುವಾದ ಮಾಡಲು ಕೊಟ್ಟರಂತೆ. ಅದು ಸಾಕಷ್ಟು ಪ್ರಸಿದ್ಧಿ ಪಡೆದಿದ್ದ ಬಹಳ ಗಂಭೀರವಾದ ವಿಷಯವುಳ್ಳ ಪುಸ್ತಕ. ಆಗ ನಮ್ಮಮ್ಮನಿಗೆ ಇನ್ನೂ ಹದಿನೆಂಟು ಹತ್ತೊಂಬತ್ತರ ವರುಷ, ಬನಾರಸ್ ವಿಶ್ವವಿದ್ಯಾಲಯಕ್ಕೆ ಇನ್ನೂ ಹೋಗಿರಲಿಲ್ಲ, ಆದರೆ ಹಿಂದಿ ಪ್ರಚಾರ ಪರಿಷತ್‍ನಲ್ಲಿ ಹಿಂದಿ ಕಲಿತಿದ್ದ ಅನುಭವ ಅಷ್ಟೆ. ನಿರಂಜನರ ಒತ್ತಾಯದ ಮೇರೆಗೆ ಆತಂಕದಿಂದಲೇ ‘ಪರಾಜಯ’ದಂಥಾ ಕೃತಿಯನ್ನು ಕನ್ನಡಕ್ಕೆ ಅನುವಾದಿಸಿ ಎಲ್ಲರಿಂದಲೂ ಮೆಚ್ಚುಗೆ ಪಡೆದ ಪ್ರತಿಭಾವಂತೆ ‘ಅಮ್ಮ’. ಹೀಗೆ ನಿರಂಜನ ಅಂಥವರ ಪ್ರೇರಣೆಯಿಂದ ಅವರ ಬರಹದ ಪಯಣ ಆರಂಭವಾಯಿತು ಎನ್ನಬಹುದು.

ನಂತರ ಕೇವಲ ಅನುವಾದಕ್ಕಷ್ಟೇ ಸೀಮಿತವಾಗದೆ ಸಣ್ಣಕಥೆಗಳು, ಕಾದಂಬರಿಗಳು, ಲೇಖನಗಳು ಹೀಗೆ ರಂಗನಾಟಕವೊಂದನ್ನು ಬಿಟ್ಟು ಎಲ್ಲಾ ಪ್ರಕಾರಗಳಲ್ಲೂ ರಚನೆ ಮಾಡಿದರು. ಅವರ ಬರಹಗಳನ್ನು ಶ್ರೀ ನಾಡಿಗೇರ್ ಕೃಷ್ಣರಾಯರ ಜನಪ್ರಗತಿ, ಪ್ರಜಾವಾಣಿ ಇನ್ನೂ ಮೊದಲಾದ ಜನಪ್ರಿಯ ಪತ್ರಿಕೆಗಳು ಪ್ರಕಟಿಸಿದವು. ಹೀಗಾಗಿ ಆಕಾಶವಾಣಿ ಸೇರುವ ಸಮಯದಲ್ಲೇ ಅವರು ಬರವಣಿಗೆಯಲ್ಲಿ ಸಾಕಷ್ಟು ಅನುಭವಿಗಳಾಗಿದ್ದರು.

ಬಿ.ವಿ.ಕಾರಂತರ ಒಡನಾಟ

ಸುಮಾರು 1950ರ ದಶಕದಲ್ಲೇ ನಮ್ಮಮ್ಮನ ಆಪ್ತ ಸ್ನೇಹಿತರಾದ ಶ್ರೀ ಎನ್.ಡಿ.ಕೃಷ್ಣಮೂರ್ತಿ ಅವರಿಂದ ಪ್ರಸಿದ್ಧ ರಂಗನಿರ್ದೇಶಕ ಬಿ.ವಿ.ಕಾರಂತರ ಪರಿಚಯವಾಯಿತು. ಅವರು ಆಗ ಇನ್ನೂ ಅಷ್ಟಾಗಿ ಪ್ರಸಿದ್ಧರಾಗದಿದ್ದ ಕಾಲ. ಅಜ್ಜಿಯ ಮನೆಗೆ ಬಹಳ ಬರುತ್ತಿದ್ದರು. ಅಮ್ಮ ಎನ್.ಡಿ.ಕೆ ಅವರ ಹೆಂಡತಿ ಚಂಪಾಕೃಷ್ಣಮೂರ್ತಿ ಮತ್ತು ಬಿ.ವಿ.ಕಾರಂತರು ಮೊದಲಾದವರ ಜೊತೆಯಲ್ಲೇ ಬನಾರಸ್‍ಗೆ ಹೋಗಿ ಹಿಂದಿಯಲ್ಲಿ ಪದವಿಯನ್ನು ಪಡೆದದ್ದು. ಆ ಸಮಯದಲ್ಲೇ ಶ್ರೀ ಕಾರಂತರು ಒಂದು ರಂಗನಾಟಕವನ್ನು ಬರೆದಿದ್ದರಂತೆ. ಅದರಲ್ಲಿ ನಾಯಕಿಯ ಪಾತ್ರವನ್ನು ಅಮ್ಮನೇ ಮಾಡಲಿ ಎಂದು ಆಶಿಸಿದ್ದರಂತೆ. ಇದು ಬಹಳ ಜನಕ್ಕೆ ಗೊತ್ತಿಲ್ಲದ ವಿಚಾರ. ಆಗ ಅಮ್ಮನಿಗೆ ಸುಮಾರು – ಇಪ್ಪತ್ತರಿಂದ ಇಪ್ಪತ್ತೆರಡು ವಯಸ್ಸಿರಬಹುದು. ಎಲ್ಲದಕ್ಕೂ ಒಪ್ಪುತ್ತಿದ್ದ ನಮ್ಮ ಅಜ್ಜಿ ಅಮ್ಮನ ರಂಗಪ್ರವೇಶಕ್ಕೆ ಮಾತ್ರ ಒಪ್ಪಲಿಲ್ಲವಂತೆ. ನಮ್ಮ ಮಾವ ಸೂರಿಯವರು ರವಿಕಲಾವಿದರಲ್ಲಿ ಆಗಾಗ್ಗೆ ಅಭಿನಯಿಸುತ್ತಿದ್ದರು. ಆದರೆ ಅಮ್ಮ ಮಾತ್ರ ಸುತಾರಾಂ ರಂಗವನ್ನು ಹತ್ತುವುದು ಬೇಡ ಎಂದು ಅಜ್ಜಿಯ ಹಟ. ನಮ್ಮ ತಾಯಿಯೂ ಸುಮ್ಮನಾದರಂತೆ. ಕಡೆಗೆ ಕಾರಂತರು ನಾಯಕಿಯ ಪಾತ್ರವನ್ನು ಹತ್ತು ವರ್ಷ ಕಡಿಮೆ ಮಾಡಿ ನಮ್ಮ ದೊಡ್ಡಮ್ಮನ ಮಗಳನ್ನು ಹಾಕಿಕೊಂಡು ನಾಟಕ ಮಾಡಿದರಂತೆ. ಇದೊಂದು ಸೋಜಿಗದ ವಿಚಾರ! ಪ್ರಾಯಶಃ ಅಜ್ಜಿ ಆಗಲೇ ಅಮ್ಮನಿಗೆ ವೇದಿಕೆ ಹತ್ತಲು ಅನುಮತಿ ನೀಡಿದ್ದರೆ ಅಮ್ಮ ರಂಗನಟಿಯಾಗುವ ಸಾಧ್ಯತೆ ಇರುತ್ತಿತ್ತು. ಬಿ.ವಿ.ಕಾರಂತರು ರಚಿಸಿ ನಿರ್ದೇಶಿದ ಮೊದಲ ನಾಟಕವನ್ನು ಅಭಿನಯಿಸಿದ ಖ್ಯಾತಿಯೂ ಅವರಿಗೆ ಸಿಗುತ್ತಿತ್ತು. ಬಿಡಿ, ಕಾಲಚಕ್ರವನ್ನು ಹಿಂದಕ್ಕೆ ಓಡಿಸಲು ಆಗುವುದಿಲ್ಲ.

ಅಮ್ಮನ ಮನೆಯಲ್ಲಿ ಎಲ್ಲಾ ಸಮಯದಲ್ಲೂ ಹಬ್ಬಹರಿದಿನಗಳಲ್ಲಿ ಆಗಲೀ, ತಿಥಿಗಳಲ್ಲಾಗಲೀ ಗಮಕವಾಚನ ನಡೆಯುತ್ತಿದ್ದುದು ಸಾಮಾನ್ಯ. ಅಲ್ಲದೆ ಅವರಿಗೆ ರಾಮಾಯಣ, ಮಹಾಭಾರತಗಳ ಪರಿಚಯ ಬಹಳ ಚನ್ನಾಗೇ ಇತ್ತು. ಹೀಗಾಗಿ ಶಾಲೆಯಲ್ಲಿ ಅವರು ಸಣ್ಣಪುಟ್ಟ ನಾಟಕಗಳನ್ನು ಆಡಿಸಿ ಅದನ್ನು ನಿರ್ದೇಶಿಸಿ ಸ್ನೇಹಿತರ ಜೊತೆಗೆ ನಾಟಕವನ್ನು ಪ್ರದರ್ಶನ ಮಾಡುತಿದ್ದುದು ಹೌದು. ವೇದಿಕೆ ಹತ್ತಲಾಗದಿದ್ದರೂ ನಮ್ಮಮ್ಮ ಶಾಲೆಯಲ್ಲಿ ಸಾಕಷ್ಟು ರಂಗಚಟುವಟಿಕೆಯಲ್ಲಿ ತೊಡಗಿಕೊಂಡಿದ್ದನ್ನು ಭಾರ್ಗವಿನಾರಾಯಣ್ ಅವರು ಈಗಲೂ ನೆನಪಿಸಿಕೊಳ್ಳುತ್ತಾರೆ. ನಮ್ಮ ತಾಯಿಯ ಒಂದೇ ಕೊರಗು ಇದ್ದದ್ದು ಎಂದರೆ ಕಾಲೇಜು ಮೆಟ್ಟಿಲು ಹತ್ತಲಿಕ್ಕೆ ಆಗಲಿಲ್ಲವೆಂದು. ಅವರು ಪ್ರಾಯಶಃ ಕನ್ನಡದಲ್ಲಿ ಎಂ.ಎ ಮಾಡಿದ್ದಿದ್ದರೆ ಬಹುಶಃ ಅವರ ಜೀವನದ ಹಾದಿಯೇ ಬೇರೆಯಾಗುತ್ತಿತ್ತೋ ಏನೋ.

ಆಕಾಶವಾಣಿ

ಸುಮಾರು 1957-1958 ರ ಇಸವಿಯಲ್ಲಿ ಎಂದೆನಿಸುತ್ತದೆ ಅವರಿಗೆ ಆಕಾಶವಾಣಿಯಲ್ಲಿ ಸ್ಟ್ಯಾಫ್ ಆರ್ಟಿಸ್ಟ್ ಆಗಿ ಕೆಲಸ ಸಿಕ್ಕಿದ್ದು. ಆ ಸಮಯದಲ್ಲೇ ಆಕಾಶವಾಣಿಯಲ್ಲೇ ನಮ್ಮ ತಂದೆ (ಎಂ.ಎಸ್.ಶ್ರೀಹರಿ) ಯವರ ಪರಿಚಯವಾಯಿತು. ಆಮೇಲೆ ಪರಿಚಯ ಸ್ನೇಹಕ್ಕೆ ತಿರುಗಿ ನಂತರ ಮದುವೆಯಾದದ್ದು 1960ನೇ ಇಸವಿಯಲ್ಲಿ. ಇಷ್ಟರ ಮಧ್ಯೆ ದೂರಶಿಕ್ಷಣದಲ್ಲಿ ಅವರ ಹಿಂದಿ ವಿದ್ಯಾಭ್ಯಾಸ ಮುಂದುವರಿಯುತ್ತಿತ್ತು. ನಮ್ಮ ಅಣ್ಣ ಹುಟ್ಟಿದ ಮೇಲೂ, ಕಷ್ಟವಾಗುತ್ತಿದ್ದರೂ ಧೃತಿಗೆಡದೆ ಬೆಳಗ್ಗೆ ಆಫೀಸಿನ ಕೆಲಸ, ರಾತ್ರಿ ಮಗುವಿನ ಕೆಲಸ, ಮಧ್ಯರಾತ್ರಿ ಅಧ್ಯಯನ ಹೀಗೆ ಕಡೆಗೂ ಎಂ.ಎ ಪದವಿಯನ್ನು ಮುಗಿಸಿದರು. ಆಕಾಶವಾಣಿಯಲ್ಲಿ ಸಾಕಷ್ಟು ಒಳ್ಳೊಳ್ಳೆಯ ಕಾರ್ಯಕ್ರಮಗಳನ್ನು ಮಾಡಿದ ಕೀರ್ತಿ ನಮ್ಮಮ್ಮನಿಗೆ ಸಲ್ಲುತ್ತದೆ. ಅಲ್ಲಿ ಎ.ಎಸ್.ಮೂರ್ತಿ, ಎಸ್.ಕೃಷ್ಣಮೂರ್ತಿ, ಎ.ಸತ್ಯನಾರಾಯಣ, ವಸಂತಕವಲಿ, ಯಮುನಾಮೂರ್ತಿ ಹೀಗೆ ಮೊದಲಾದವರ ಪರಿಚಯವಾಗಿ ಇನ್ನೂ ಉತ್ತಮ ಕಾರ್ಯಕ್ರಮಗಳನ್ನು ನೀಡಲು ಸಾಧ್ಯವಾಯಿತು. ಅಲ್ಲಿ ಪ್ರಮುಖವಾಗಿ ಎ.ಎಸ್.ಮೂರ್ತಿಯವರ ಜೊತೆ ಸೇರಿ ಹಲವಾರು ಉತ್ತಮ ಕಾರ್ಯಕ್ರಮಗಳನ್ನು ನೀಡಿ ಮನೆ ಮಾತಾಗಿದ್ದಿದ್ದು ಐತಿಹಾಸಿಕ ವಿಚಾರ. ಅವರು ಎಷ್ಟು ಪ್ರಸಿದ್ಧರಾಗಿದ್ದರು ಎಂದರೆ ನಮ್ಮಮ್ಮ ಬಸ್ಸಿನಲ್ಲಿ ಪ್ರಯಾಣಿಸುವಾಗ ಏನಾದರೂ ಮಾತನಾಡುತ್ತಿದ್ದರೆ ಜನ ನೀವು ‘ಆಕಾಶವಾಣಿ ಪಾರ್ವತಿ ಅಲ್ಲವೆ?’ ಎಂದು ಕೇಳುತ್ತಿದ್ದರಂತೆ. ಒಟ್ಟಿನಲ್ಲಿ ಅಮ್ಮ ಬೆಳೆಯಲು ಆಕಾಶವಾಣಿ ನಾನಾ ರೀತಿಯ ಅವಕಾಶಗಳನ್ನು ಒದಗಿಸಿಕೊಟ್ಟಿತು. ಅಲ್ಲಿ ಕಥೆಗಳನ್ನು ಆಧರಿಸಿ ಕಥಾತರಂಗ ಮೊದಲಾದ ಕಾರ್ಯಕ್ರಮಗಳ ಅಡಿಯಲ್ಲಿ ನಾಟಕಗಳನ್ನು ರಚಿಸಿ, ನಿರ್ದೇಶಿಸಿದರು. ಇತರರಿಗೂ ತುಂಬಾ ಅವಕಾಶಗಳನ್ನು ಕೊಟ್ಟರು. ಅಂದರೆ ಬೇರೆ ಬೇರೆ ಕಥೆಗಳು ರೇಡಿಯೋ ಮೂಲಕ ಜನರಿಗೆ ಹೆಚ್ಚು ಪರಿಚಯವಾಯಿತು. ಮಕ್ಕಳ ಕಾರ್ಯಕ್ರಮಗಳೇ ಆಗಿರಬಹುದು, ಚರ್ಚೆಗಳು, ಚಿಂತನಗಳು, ರಾಷ್ಟ್ರೀಯ ನಾಟಕಗಳ ಅನುವಾದ, ನಿರ್ದೇಶನ, ಅಭಿನಯ ಹೀಗೆ ಎಲ್ಲಾ ರೀತಿಯಲ್ಲೂ ಆಕಾಶವಾಣಿಯಲ್ಲಿ ಕಾರ್ಯಪ್ರವೃತ್ತರಾದರು. ಆಕಾಶವಾಣಿ ಬರಹಗಳ ರಾಶಿಯೇ ಮನೆಯಲ್ಲಿದೆ ಆದರೆ ಅವರಿಗೆ ಕೆಲವೊಂದು ಮಾತ್ರ ಪ್ರಕಟಿಸಲು ಸಾಧ್ಯವಾಯಿತು. ಇಷ್ಟರ ಮಧ್ಯೆ ಜೊತೆಜೊತೆಗೇ ಸೃಜನಶೀಲ ಕೃತಿಗಳ ರಚನೆಯೂ ನಡೆಯುತ್ತಿತ್ತು.

ಆಕಾಶವಾಣಿಯಲ್ಲಿ ಕೆಲವೊಮ್ಮೆ ಬರುತ್ತಿದ್ದ ಪ್ರಸಿದ್ಧ ಸಾಹಿತಿಗಳು ಪಾರ್ವತಿ ಇದ್ದರೇನೇ ರೆಕಾರ್ಡ್ ಮಾಡುವುದು ಎಂದು ಹಟ ಮಾಡುತ್ತಿದ್ದರಂತೆ ಅದನ್ನು ಅಮ್ಮ ಆಗಾಗ್ಗೆ ನೆನಪಿಸಿಕೊಳ್ಳುತ್ತಿದ್ದರು. ಒಮ್ಮೆ ನನಗೆ ಡಾ|| ಹೆಚ್.ನರಸಿಂಹಯ್ಯ ಹೇಳಿದ್ದರು “ನಿಮ್ಮಮ್ಮ ತುಂಬಾ ಫಾರ್ವರ್ಡ್ ಅಮ್ಮ. ನಾನು ರೇಡಿಯೋ ಟಾಕ್ ಒಂದರಲ್ಲಿ ಮಾಂಗಲ್ಯದ ಬಗ್ಗೆ ಮಾತನಾಡಿದಾಗ ಎಡಿಟ್ ಮಾಡ್ತಾರೆ ಅಂತ ಅಂದುಕೊಂಡಿದ್ದೆ. ಆದರೆ ಮಾಡಲಿಲ್ಲ ತುಂಬಾ ಆಧುನಿಕ ಮನೋಭಾವ ಅವರದ್ದು, ಮತ್ತೆ ತುಂಬಾ ಧೈರ್ಯಾನೂ ಹೌದು” ಎಂದು ಹೇಳುತ್ತಿದ್ದರು.

ಅಮ್ಮ ಕಾರು ಕೊಂಡಿದ್ದು

ಸಾಮಾನ್ಯವಾಗಿ ಹೆಂಗಸರಿಗೆ ಅಲಂಕಾರ, ಸೀರೆ, ಒಡವೆ ಎಂದರೆ ಬಹಳ ಇಷ್ಟ ಆದರೆ ಅಮ್ಮ ಎಲ್ಲದಕ್ಕೂ ತದ್ವಿರುದ್ಧ. ಆಫೀಸಿಗೆ ಹೋಗಲು ತಡವಾಗುತ್ತದೆ ಎಂದು ಚಿನ್ನದ ಬಳೆಗಳನ್ನೇ ಮಾರಿ ಕಾರು ಕೊಂಡರು. ನಲವತ್ತನೇ ವರ್ಷಕ್ಕೆ ಕಾರನ್ನು ಕಲಿತು ಜಯನಗರದಿಂದ ರಾಜಭವನ ರಸ್ತೆಯಲ್ಲಿರುವ ಆಕಾಶವಾಣಿಗೆ ಕಾರನ್ನು ಡ್ರೈವ್ ಮಾಡಿಕೊಂಡು ಹೋಗುತ್ತಿದ್ದರು. ಅಷ್ಟೇ ಅಲ್ಲ ಅವರಿಗೆ ಎಷ್ಟು ಧೈರ್ಯ ಎಂದರೆ ಇಡೀ ಬೆಂಗಳೂರಿನ ಯಾವ ಭಾಗಕ್ಕೇ ಆಗಲಿ ಕಾರನ್ನು ಓಡಿಸುತ್ತಿದ್ದರು. ಅವರ ಜೊತೆ ಅನೇಕ ಖ್ಯಾತನಾಮರು ಕಾರಿನಲ್ಲಿ ಕುಳಿತಿದ್ದನ್ನು ನಾನು ನೋಡಿದ್ದೇನೆ. ಅವರ ಜೊತೆಯಲ್ಲಿ ಕುಳಿತುಕೊಳ್ಳುವ ಸೌಭಾಗ್ಯ ನನ್ನದೂ ಆಗಿದೆ. ಅವರು ಯಾರ ಮುಂದೆಯೂ ಕೈಚಾಚುತ್ತಿರಲಿಲ್ಲ, ಎಂಥಾ ಕಷ್ಟ ಬಂದರೂ ಅತ್ಯಂತ ಸ್ವಾಭಿಮಾನಿ. ತನಗೆ ಆದರೆ ಅದನ್ನು ತೆಗೆದುಕೊಳ್ಳುತ್ತಿದ್ದರು, ಕೊಡುತ್ತಿದ್ದರು, ಇನ್ನೊಬ್ಬರಿಗಂತೂ ಹಣ ಖರ್ಚು ಮಾಡಲು ಬಿಡುತ್ತಿರಲಿಲ್ಲ. ತನಗಿಂತ ಚಿಕ್ಕವರು ಯಾರೇ ಜೊತೆಯಲ್ಲಿ ಬಂದರೂ ಅವರ ಹತ್ತಿರ ಎಷ್ಟೇ ಹಣವಿರಲಿ ತಾನು ತಿಂಡಿಯನ್ನು ಕೊಡಿಸಬೇಕಾಗಿರುತ್ತಿತ್ತೇ ಹೊರತು ತಾನು ಆತಿಥ್ಯ ಮಾಡಬೇಕಾಗಿರುತ್ತಿತ್ತೇ ಹೊರತು ಅವರಿಂದ ಒಂದ ನಯಾಪೈಸ ತೆಗೆದುಕೊಳ್ಳುವ ಬುದ್ದಿ ಅವರಿಗೆ ಇರಲಿಲ್ಲ. ಬಂದದ್ದರಲ್ಲೇ ಹಾಸಿಗೆ ಇದ್ದಷ್ಟು ಕಾಲುಚಾಚು ಎಂಬಂತೆ ಅವರ ಜೀವನ ನಡೆಯುತ್ತಿತ್ತು. ಹೆಚ್ಚೂ ಕಡಿಮೆಯಾದರೆ ನಾನು ಆಗಲೇ ಹೇಳಿದಂತೆ ಇದ್ದ ಒಡವೆಯನ್ನು ಮಾರಿಕೊಂಡು ಸಾಕಷ್ಟು ಕಷ್ಟಪಟ್ಟು ತಮ್ಮ ಅಗತ್ಯಗಳು ಏನಿವೆಯೋ ಅದನ್ನು ಪೂರೈಸಿಕೊಳ್ಳುತ್ತಿದ್ದರು. ನನಗೂ ಆಗಾಗ್ಗೆ ಹೇಳುತ್ತಿದ್ದರು, “ನೀನು ಬಾಹ್ಯ ಅಲಂಕಾರಕ್ಕೆ ಹೆಚ್ಚು ಒಲವು ತೋರಬೇಡ, ಬಾಹ್ಯ ಅಲಂಕಾರ ಮುಖ್ಯವಲ್ಲ ಬುದ್ದಿ ಮತ್ತು ಚಿಂತನೆಯನ್ನ ಸುಧಾರಿಸಿಕೊಂಡು ಹೋಗು, ಅದನ್ನು imಠಿಡಿove ಮಾಡಿಕೊ, ಅದು ಯಾವತ್ತೂ ಒಳ್ಳೆಯದು” ಎಂದು.

ಕರ್ನಾಟಕ ಲೇಖಕಿಯರ ಸಂಘ

ಶ್ರೀ ಎ.ಎಸ್.ಮೂರ್ತಿ ಮುಖಾಂತರ ಲೇಖಕಿ ಹೆಚ್.ಆರ್.ಇಂದಿರಾ ಅವರ ಪರಿಚಯವಾಗಿ ಮೊದಲ ಲೇಖಕಿಯರ ಸಂಘದಲ್ಲಿ ಅಮ್ಮ ಸಕ್ರಿಯವಾಗಿ ಭಾಗಿಯಾಗಿದ್ದರು. ನಂತರ ಯಾವುದೋ ಕಾರಣಕ್ಕೆ ಅದು ನಿಂತಾಗ – ಲೇಖಕಿಯರಿಗೆ ಉತ್ತಮ ಸ್ಥಾನ ಸಿಗಬೇಕೆಂದು ‘ಅಡುಗೆಮನೆ ಸಾಹಿತ್ಯ’ ವಿಮರ್ಶೆಯಿಂದ ಲೇಖಕಿಯವರು ಹೊರಬರಬೇಕೆಂದು ಲೇಖಕಿಯರ ಸಂಘವನ್ನು ಮರುಸ್ಥಾಪಿಸಲೇ ಬೇಕೆಂದು ಮೇಯರ್, ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರೂ ಆಗಿದ್ದ ಶ್ರೀ ಜಿ.ನಾರಾಯಣ, ಲೇಖಕಿ ಟಿ.ಸುನಂದಮ್ಮ ಮತ್ತು ಇತರ ಲೇಖಕಿಯರ ಜೊತೆಗೂಡಿ ಕರ್ನಾಟಕ ಲೇಖಕಿಯರ ಸಂಘವನ್ನು ಪ್ರಾರಂಭಿಸಿ, ಸ್ಥಾಪಕ ಕಾರ್ಯದರ್ಶಿಯಾದರು. ಈ ಸಂಘದ ಮೂಲಕವೇ ಕರ್ನಾಟಕದಾದ್ಯಂತ ಹಲವಾರು ಪ್ರಸಿದ್ಧ ಲೇಖಕಿಯರ ಪರಿಚಯ ಅಮ್ಮನಿಗೆ ಆಯಿತು. ನಂತರ ಸಂಘದ ಅಧ್ಯಕ್ಷೆಯಾದ ಮೇಲೆ ಹೊಸ ರೂಪುರೇಷೆ ಉಳ್ಳ ಹಲವಾರು ಕಾರ್ಯಕ್ರಮಗಳನ್ನು ಮಾಡಿದರು. ಅವರ ಲೇಖಕಿಯರ ಬಳಗ ದೊಡ್ಡದು. ಪ್ರತಿ ತಿಂಗಳೂ ಒಬ್ಬೊಬ್ಬರ ಮನೆಯಲ್ಲಿ ಭೇಟಿ ಮಾಡಿ ಪುಸ್ತಕಗಳ ಬಗ್ಗೆ ಚರ್ಚೆ, ಹೊಸ ಕಾರ್ಯಕ್ರಮಗಳ ಯೋಜನೆ, ನವೀನ ರೀತಿಯ ಚಿಂತನೆಗಳನ್ನು ನಡೆಸುತ್ತಿದ್ದುದು ನನಗೂ ನೆನಪಿದೆ. ಡಾ|| ನಿರುಪಮಾ, ಡಾ|| ಅನುಪಮಾ ನಿರಂಜನ, ಡಾ|| ವಿಜಯಾ, ಎನ್.ಪಂಕಜಾ, ಎ.ಪಂಕಜಾ, ಶಾಂತಾನಾಗರಾಜ್, ಹೇಮಲತಾಮಹಿಷಿ, ಉಷಾಕುಲಶೇಖರಿ, ಸಾವಿತ್ರಿನಾಯ್ಡು ಹೀಗೆ ಪಟ್ಟಿ ಬೆಳೆಯುತ್ತಲೇ ಹೋಗುತ್ತದೆ. ಹಾಗೆಯೇ ಯುವ ಲೇಖಕ, ಲೇಖಕಿಯರನ್ನು ಮುಂದೆ ತರುವಲ್ಲಿ ಅಮ್ಮನ ಪಾಲು ಹೆಚ್ಚಿನದು. ಇದನ್ನು ಯಾವಾಗಲೂ ಈಗಿನ ಖ್ಯಾತ ಲೇಖಕ ನೇಮಿಚಂದ್ರ ನೆನಪಿಸಿಕೊಳ್ಳುತ್ತಿರುತ್ತಾರೆ. ಯುವಬರಹಗಾರರ ದೊಡ್ಡ ಬಳಗವನ್ನೇ ಅಮ್ಮ ಬೆಳೆಸಿದರು ಎನ್ನಬಹುದು. ಹಾಗೇ ನಮ್ಮಮ್ಮ ಯುವ ಲೇಖಕ, ಲೇಖಕಿಯರನ್ನು ಮುಂದೆ ತರಬೇಕೆಂದು ಅವರಿಗೆ ಸಾಕಷ್ಟು ಪ್ರೋತ್ಸಾಹ ನೀಡಿ ಬೆಳೆಸಲು ಪ್ರಯತ್ನಿಸಿದರು.

ಇತರ ಅನೇಕ ಬರವಣಿಗೆಗಾರರು ಸಾಮಾನ್ಯವಾಗಿ ಬರವಣಿಗೆಯ ಮೂಲಕ ಹೇಳುವುದು ಒಂದು ಜೀವನದಲ್ಲಿ ಮಾಡುವುದು ಮತ್ತೊಂದು. ಆದರೆ ನಮ್ಮಮ್ಮ ಹೇಳಿದಂತೆ ನಡೆದುಕೊಳ್ಳುತ್ತಿದ್ದರು. ಆಧುನಿಕ ದೃಷ್ಟಿಕೋನ ಬಿಂಬಿಸುವ ಅವರ ಕೃತಿಗಳನ್ನೇ ನೋಡಬಹುದು. ನನ್ನ ಮದುವೆಯ ವಿಚಾರದಲ್ಲೂ ಅಷ್ಟೇ, ಒತ್ತಾಯವಿರಲಿಲ್ಲ. ಮದುವೆಯಿಂದ ಒಳ್ಳೆಯದು ಎಂದು ಹೇಳುತ್ತಿದ್ದರೇ ಹೊರತು ಬಲವಂತ ಮಾಡುತ್ತಿರಲಿಲ್ಲ. ನನಗೆ ಕೆಲಸ ಖಾಯಂ ಆಗಿ, ಮದುವೆಯ ಆಲೋಚನೆಯನ್ನೇ ಮಾಡದೇ ಸ್ವಂತ ಮನೆ ಕಟ್ಟಿಸಿದೆ. ಆಗಲೂ ಆಕ್ಷೇಪಿಸಲಿಲ್ಲ. ಕಾಲೇಜಿನ ವಾತಾವರಣದಲ್ಲಿ ಇದ್ದಂತಹ ಸಂಪ್ರದಾಯ ಪುಣ್ಯಕ್ಕೆ ನನಗೆ ಮನೆಯಲ್ಲಿ ಇರಲಿಲ್ಲ. ಎಷ್ಟೋ ಸಲ ಈ ವಿಚಾರಕ್ಕೆ ನನಗೆ ಆಶ್ಚರ್ಯವೂ ಆಗುತ್ತಿತ್ತು! ಏಕೆಂದರೆ ನಮ್ಮಮ್ಮನಿಗಿಂತ ಚಿಕ್ಕವಯಸ್ಸಿನವರು ಯೋಚನೆ ಮಾಡುತ್ತಿದ್ದ ರೀತಿಯೇ ಬೇರೆ. ಅಜಗಜಾಂತರ ವ್ಯತ್ಯಾಸವಿರುತ್ತಿತ್ತು. ನನಗಿದ್ದ ಸ್ನೇಹಿತರೂ ಅಷ್ಟೇ, ಬರೇ ಹುಡುಗರ ಪಾಳ್ಯ, ಅವರು ಸದಾ ಮನೆಗೆ ಬರುತ್ತಿದ್ದರು. ಅವರನ್ನು ಅಚ್ಚುಕಟ್ಟಾಗಿ ಉಪಚರಿಸಿ ಹರಟೆ ಹೊಡೆಯುತ್ತಿದ್ದರು. ನಮ್ಮ ಅಜ್ಜಿಯಂತೆ ಇವರು. ಯಾವ ಕಟ್ಟುಪಾಡುಗಳೂ ಇರುತ್ತಿರಲಿಲ್ಲ. ಇಲ್ಲಿ ಜಾತಿಗೀತಿಯ ಬಗ್ಗೆ ಯಾವ ರೀತಿಯ ನಂಬಿಕೆಯೂ ಇರಲಿಲ್ಲ. ಅವರ ವಯೋಮಾನದವರು ಯೋಚಿಸುವುದಕ್ಕಿಂತ ಭಿನ್ನವಾಗಿ ಆಲೋಚಿಸುತ್ತಿದ್ದರು ಎನ್ನುವುದೇ ಅವರ ಠಿಟusಠಿoiಟಿಣ.

ನಾನು ಪಿಯುಸಿಯಾದ ನಂತರ ಬಿ.ಎ. (ನಾಟಕಕ್ಕೆ) ಸೇರುತ್ತೇನೆಂದು ಆಸೆ ಪಟ್ಟಾಗ ಅವರು ಒಂದು ಮಾತು ಹೇಳಿದ್ದರು. ‘ವಿಜ್ಞಾನಕ್ಷೇತ್ರದಲ್ಲಿ ಬೇಗ ಹೆಸರು ಮಾಡಲು ಆಗುವುದಿಲ್ಲವಾದ್ದರಿಂದ ಅಲ್ಲಿ ಸ್ಪರ್ಧೆ ಕಡಿಮೆ. ಆದರೆ ನಾಟಕ ರಂಗದಲ್ಲಿ ಹೆಸರು ಬೇಗ ಬರುತ್ತದೆ. ಹೊಟ್ಟೆಕಿಚ್ಚು ಪಡುವ ಜನರೂ ಅಷ್ಟೇ ಇರುತ್ತಾರೆ. ಆಯ್ಕೆ ನಿನ್ನದು’ ಎಂದು. ಒಟ್ಟಿನಲಿ ನಮ್ಮ ಅಭಿಪ್ರಾಯಗಳಿಗೆ ಬೆಲೆ ಕೊಡುವುದಲ್ಲದೆ ಯಾವಾಗಲೂ ನಮ್ಮದೇ ಅಂತಿಮ ನಿರ್ಧಾರವಾಗುತ್ತಿತ್ತು. ಯಾವ ಒತ್ತಾಯವನ್ನೂ ಹೇರುತ್ತಿರಲಿಲ್ಲ. ನಮ್ಮ ಜೀವನದಲ್ಲಿ ಮೂಗು ತೋರಿಸುತ್ತಿರಲಿಲ್ಲ. ಆಧುನಿಕ ಕಾಲದವರಂತೆ ಯೋಚಿಸುತ್ತಿದ್ದರಿಂದ ನಮಗೆ geಟಿeಡಿಚಿಣioಟಿ gಚಿಠಿ ಎನ್ನುವುದು ಆಗಲೇ ಇಲ್ಲ.

ನಾನು ಮದುವೆಯಲ್ಲಿ ತಾಳಿ ಕಟ್ಟಿಸಿಕೊಳ್ಳುವುದಿಲ್ಲ ಡಿegisಣeಡಿ ಮದುವೆ ಆಗುತ್ತೇನೆ ಎಂದಾಗಲೂ ವಿರೋಧ ವ್ಯಕ್ತಪಡಿಸಲಿಲ್ಲ. ಸರಳ ಮದುವೆಯೇ ಅವರ ಆಸೆಯಾಗಿತ್ತು. ಅಂತೆಯೇ ನಮ್ಮಣ್ಣನ ಮತ್ತು ನನ್ನ ಮದುವೆಯೂ ನಡೆಯಿತು.

ಅವರು ಯಾವಾಗಲೂ ಅಂದುಕೊಳ್ಳುವ ಹಾಗೆ ಅವರು ಕನ್ನಡ ಎಂ.ಎ ಮಾಡಿರುತ್ತಿದ್ದರೆ ಇನ್ನೂ ಹೆಚ್ಚು ಉಪಯೋಗವಾಗುತ್ತಿತ್ತೇನೋ, ಆಕಾಶವಾಣಿಯಲ್ಲಿ ಬರವಣಿಗೆಯ ಕೆಲಸ ಹೆಚ್ಚು ಮಾಡುತ್ತಿದ್ದರಿಂದ ಅವರ ಲೇಖನಗಳು ನಾಟಕಗಳು ಆಫೀಸಿಗೇ ಸೀಮಿತವಾಯಿತು. ಪ್ರಸಿದ್ಧಿಗೆ ಬಂದಿದ್ದು ಆಕಾಶವಾಣಿಯ ಮೂಲಕ ದನಿಯಿಂದ ಆದರೂ ಬರವಣಿಗೆಗೆ ಎರಡನೆಯ ಸ್ಥಾನ ದೊರೆಯಿತು ಎನಿಸುತ್ತಿತ್ತು. ಎರಡು ದೋಣಿಯಲ್ಲಿ ಕಾಲಿಟ್ಟಂತೆ ಆಯಿತು ಅವರ ಸ್ಥಿತಿ. ಬರವಣೆಗೆಗಾಗಿಯೇ ತಮ್ಮ ಜೀವನವನ್ನು ತೊಡಗಿಸಿಕೊಂಡಿದ್ದರೆ ಇನ್ನೂ ಹೆಚ್ಚು ಕೃತಿಗಳು ಹೊರಬರುತ್ತಿದ್ದವೇನೋ! ಆದರೆ ಯಾವ ವಶೀಲಿಯೂ ಇಲ್ಲದೆ ಅವರು ಪಡೆದುಕೊಂಡಿರುವ ಪ್ರಶಸ್ತಿಗಳೇ ಅವರು ಸಾಧಿಸಿರುವುದನ್ನು ತೋರಿಸುವಂತಿದೆ! ಸಾಹಿತ್ಯ ಅಕಾಡೆಮಿ, ನಾಟಕ ಅಕಾಡೆಮಿ, ಅನುವಾದ ಅಕಾಡೆಮಿ, ರಾಜ್ಯೋತ್ಸವ ಪ್ರಶಸ್ತಿಗಳು – ಬಹುಶಃ ಅತ್ತಿಮಬ್ಬೆ ಪ್ರಶಸ್ತಿ ಒಂದನ್ನುಳಿದು ಅವರಿಗೆ ಎಲ್ಲಾ ರೀತಿಯ ಪ್ರಶಸ್ತಿಗಳು ದೊರಕಿವೆ. ಆದರೆ ಅವರು ಯಾವುದಕ್ಕೂ ಹಿಗ್ಗುತ್ತಿರಲಿಲ್ಲ, ಕೊರಗುತ್ತಿರಲಿಲ್ಲ, ತಮ್ಮ ನಿರ್ಧಾರದಿಂದ ಕದಲುತ್ತಿರಲಿಲ್ಲ.

ಒಂದು ವಿಚಾರದಲ್ಲಿ ಮಾತ್ರ ಅಮ್ಮ ಸೋತರು ಎಂದೆನಿಸುತ್ತದೆ. ಕೊನೆಗಾಲದಲ್ಲಿ ಮಲಗಿರುವಾಗಲೂ ಛಲದಿಂದ ಚುಟುಕಗಳು ಎಂಬ ಪುಸ್ತಕವನ್ನು ಹೊರತಂದರೇ ಹೊರತು, ಅದೇ ಛಲದಿಂದ ನಡೆಯಲು ಬಯಸಲಿಲ್ಲ. ಅದೇ ಅವರಿಗೆ ಮುಳುವಾಯಿತು ಅನಿಸುತ್ತದೆ. ಹಾಸಿಗೆಗೆ ಅಂಟಿಕೊಳ್ಳಬಾರದು ಹಾಗೆಯೇ ಸಾಯಬೇಕು ಎಂದು ಬಯಸಿದ್ದರು ಅಮ್ಮ ಆದರೆ ಹಾಗಾಗಲಿಲ್ಲ. ಎಲ್ಲದರಲ್ಲೂ ಹಟ, ಛಲ ಇದ್ದ ಅಮ್ಮ ಹೀಗೇಕೆ ಅಂಜಿದರು? _ _ _ ರಾಮಾಯಣದ ಬಗ್ಗೆ ಮತ್ತೆ ಬರೀಬೇಕು ಎಂದು ಹೊರಟಿದ್ದ ಅಮ್ಮ ಎಲ್ಲ ರೀತಿಯ ಪುಸ್ತಕಗಳನ್ನೂ ತರಿಸಿಕೊಂಡು ಓದಲು ಶುರು ಮಾಡಿದರು, ಅದರ ಬಗ್ಗೆ ಸಂಶೋಧನೆ ಶುರು ಮಾಡಿದರು ಮಲಗಿದ ಕಡೆಯಿಂದಲೆ, ಆದರೆ ಕೊನೆ ಗಳಿಗೆಯಲ್ಲಿ ಎರಡು ಪುಟ ಬರೆದರು ಅಷ್ಟೆ.

‘ಪರ್ವತದಂತೆ ಅಚಲೆ ಪಾರ್ವತಿ’ ಎಂದು ಒಂದು ಲೇಖನದಲ್ಲಿ ಬರೆದಿದ್ದೆ, ಕೊನೆಗಾಲ ನೆನಪಿಸಿಕೊಂಡರೆ, ಬಿಸಿಲಿಗೆ ಹಿಮ ಕರಗಿದಂತೆ ಯಾವುದೋ ಕ್ಷುಲ್ಲಕ ಹೆದರಿಕೆಗೆ ಅವರ ಛಲ ಕರಗಿತೇ ಎನಿಸುತ್ತದೆ. ನಾನು ಅವರು ತೀರಿಕೊಂಡಾಗಲೂ ಅಳಲಿಲ್ಲ ಈಗಲೂ ಅಳುವುದಿಲ್ಲ. ಒಂದು ರೀತಿಯಲ್ಲಿ ಕೊನೆಗಾಲದಲ್ಲಿ ಅವರನ್ನು ನೋಡಿದಾಗ ಕಷ್ಟದಿಂದ ಮುಕ್ತರಾದರೇನೋ ಎನಿಸುತ್ತದೆ ಆದರೆ ಮನಸ್ಸು ಮಾಡಿದ್ದರೆ ರಾಮಾಯಣವನ್ನೂ ಮುಗಿಸಿರಬಹುದಿತ್ತು ಎನಿಸುತ್ತದೆ. ಅವರು ಸದಾ ನನ್ನ ಜೊತೆಗಿದ್ದಾರೆ, ಈಗಲೂ ಮುಂದೂ ಸಹ. ಎಂ.ಆರ್.ಕಮಲಾರವರ ಕವಿತೆಯಂತೆ.

ಅಮ್ಮ ಹಚ್ಚಿದೊಂದು ಹಣತೆ ಇನ್ನು ಬೆಳಗಿದೆ

ಮನಕೆ ಮಬ್ಬು ಕವಿಯದಂತೆ ಸದಾ ಕಾದಿದೆ…

‍ಲೇಖಕರು avadhi

May 9, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

22 ಪ್ರತಿಕ್ರಿಯೆಗಳು

  1. T S SHRAVANA KUMARI

    ಅಮ್ಮ ಎನ್ನುವ ಮಮಕಾರದಿಂದ ಬಿಡಿಸಿಕೊಂಡು ಅಮ್ಮನ ವ್ಯಕ್ತಿತ್ವವನ್ನು ಕಟ್ಟಿಕೊಟ್ಟಿರುವ ಪರಿ ಆಪ್ತವಾಗಿದೆ

    ಪ್ರತಿಕ್ರಿಯೆ
  2. Vidya.M.S Malavalli

    ಧನ್ಯವಾದಗಳು,ಮೋಹನ್.ನಾನು ನುರಿತ ಬರಹಗಾರ್ತಿ ಅಲ್ಲ.ಆಗಾಗ್ಗೆ ತೋಚಿದ್ದು ಬರೆಯುವವಳು .ಅಮ್ಮನ ಬಗ್ಗೆ ಬರೆದಿದ್ದು ಅವಧಿಯಲ್ಲಿ ಪ್ರಕಟವಾಗಿದ್ದು ಹೇಳಲಾರದಷ್ಟು ಸಂತೋಷ ಆಗುತ್ತಿದೆ

    ಪ್ರತಿಕ್ರಿಯೆ
  3. ನಾಗರಾಜಮೂ್ರ

    ವಿದ್ಯಾಅದ್ಬುತವಾಬರೆದಿದ್ದೀನಿಬರವಣಿಗೆಯನ್ನು ಮುಂದುವರೆಸು
    ನಾಗರಾಜ ಮೂರ್ತಿ

    ಪ್ರತಿಕ್ರಿಯೆ
  4. ಗೀತಾ ಕುಮಾರಸ್ವಾಮಿ

    ಪಾರ್ವತಿಯವರ ಬಗ್ಗೆ ಓದಿ ತುಂಬಾ
    ಖುಷಿಯಾಯ್ತು. ಅವರ ಆತ್ಮೀಯತೆ
    ತುಂಬಿದ ಮಾತುಗಳು ನೆನಪಾದವು.
    ಬಹಳ ಜನಗಳಿಗೆ ಧೈರ್ಯ ತುಂಬಿದವರು.
    ಬರಹ ನೈಜತೆಯಿಂದ ಸೊಗಸಾಗಿ ಮೂಡಿದೆ.

    ಪ್ರತಿಕ್ರಿಯೆ
  5. H.S. Saraswati

    ಲೇಖನ ತುಂಬಾ ಚೆನ್ನಾಗಿದೆ- ಸರಸ್ವತಿ, ಆಕಾಶವಾಣಿ

    ಪ್ರತಿಕ್ರಿಯೆ
  6. Nirmala

    Nanusaha nimma ammana kathegala fan . Pakkada maneya radionalli avara kathegalannu kelisikolluthidde she is really a great woman

    ಪ್ರತಿಕ್ರಿಯೆ
  7. ಡಾ.ನಟರಾಜ್ ತಲಘಟ್ಟಪುರ

    ಬರೆಯೊಲ್ಲಾ ಬರೆಯೊಲ್ಲಾ ಅಂತ ಹೇಳ್ತಾನೆ ಚೆನ್ನಾಗಿಯೇ ಬರೆಯುತ್ತಿದ್ದೀರಿ.ಅಭಿನಂದನೆಗಳು. ಬರಹ ಆಪ್ತವಾಗಿದೆ

    ಪ್ರತಿಕ್ರಿಯೆ
  8. Dr Geetha Shenoy

    ಪಾರ್ವತಿಯವರ ವ್ಯಕ್ತಿತ್ವ ಹಾಗೂ ಬರೆವಣಿಗೆಯನ್ನು ಚೆನ್ನಾಗಿ ಬಲ್ಲ ನನಗೆ ನಿಮ್ಮ ಮಾತುಗಳು ಎಲ್ಲಿಯೂ ಉತ್ಪ್ರೇಕ್ಷೆಯಾಗಿ ಕಂಡಿಲ್ಲ. ಲೇಖನ ತುಂಬಾ ಚೆನ್ನಾಗಿದೆ ವಿದ್ಯಾ.

    – ಗೀತಾ ಶೆಣೈ

    ಪ್ರತಿಕ್ರಿಯೆ
  9. V. Manohar

    Ohh… Nimma Ammana hesaru kēlidde, nõdidde vinahaa ishtella vichaara gotthirlilla, thumbaa Dhanyavaadagalu Vidya.. Ammana kurithu intha lekhana bēkitthu.

    ಪ್ರತಿಕ್ರಿಯೆ
    • Dayananda Pakkala

      It is an extremely interesting article about multi-talented Parvathi. Though, we were colleagues at the Bangalore station of the AIR for few years, I was not much familiar with her early years and her theatre activities. Your article sheds light on her multi-faceted life and her contributions to Kannada literature and culture. Your observations about Parvathi as a person and as a mother are very revealing. I commend you for this well-rounded article about a gifted and much-loved writer and artist.

      ಪ್ರತಿಕ್ರಿಯೆ
  10. JnanaJai

    Mam, ನಿಮ್ಮ ಬರಹವನ್ನು ಓದುತ್ತಿದ್ದರೆ ತಾಯಿಯ ಮಹತ್ವ ನಿಮ್ಮ ಜೀವನದಲ್ಲಿ ಎಷ್ಟು ಪ್ರಮುಖವಾದದ್ದು ಎಂದು ತಿಳಿಯಿತು.ನಿಮ್ಮ ಶಿಷ್ಯೆಯಾಗಿರುವುದು ನನ್ನ ಭಾಗ್ಯ.ನೀವು ನನಗೆ ಶಿಕ್ಷಕಿ ಮಾತ್ರವಲ್ಲ ನನ್ನ ತಾಯಿಯೆಂದೇ ಕರೆಯಲು ಇಚಿಸುತ್ತೆನೆ

    ಪ್ರತಿಕ್ರಿಯೆ
  11. Sumathi BK

    ವಿದ್ಯಾ.. ಲೇಖನ ಸೊಗಸಾಗಿ ಮೂಡಿ ಬಂದಿದೆ.

    ಪ್ರತಿಕ್ರಿಯೆ
    • M S Vidya

      ನನ್ನ ಬರವಣಿಗೆಯನ್ನು ಮೆಚ್ಚಿ ಒಳ್ಳೆಯ ಮಾತುಗಳನ್ನು ಬರೆದು ಪ್ರೋತ್ಸಾಹಿಸುರುವ ಎಲ್ಲರಿಗೂ ಧನ್ನ್ಯವಾದಗಳು

      ಪ್ರತಿಕ್ರಿಯೆ
  12. M S Vidya

    ನನ್ನ ಲೇಖನವನ್ನು ಮೆಚ್ಚಿ ಅಭಿಪ್ರಾಯ ನೀಡಿ ಪ್ರೋತ್ಸಾಹಿಸಿರುವ ಎಲ್ಲರಿಗೂ ಧನ್ಯವಾದಗಳು

    ಪ್ರತಿಕ್ರಿಯೆ
    • Uma Rao

      Vidya. Nimma lekhana eshtondu aaptavagide
      Parvathi avaru nanna badukinalli bandiruva atyanta snehamayi vyaktigalallobbaru. I miss her. Uma rao.

      ಪ್ರತಿಕ್ರಿಯೆ
  13. Uma Rao

    Vidya. Ninna baraha tumba aaptavaagide. Parvathi avarantha snehamayi vyakti nanna badukinalli bandaddu khushiya vishaya.
    Thanks.

    ಪ್ರತಿಕ್ರಿಯೆ
  14. Dr G B Harisha

    Vidya it is indeed a very interesting and timely article on Smt H S Parvathi. She has contributed in her own special way for Kannada literature. I think you can recollect everything about her write a beautiful book.ನನ್ನ ಅಮ್ಮ ಪಾರ್ವತಿ!! Believe me it will be a significant contribution from your end to our language.
    Congratulations for awadhi article. Many unknown factors came kn this article.
    Dr G B Harisha
    Vietnam

    ಪ್ರತಿಕ್ರಿಯೆ
  15. M S Sriram

    Vidya , This is your (second ) cousin Srirama, here ( son of your mother’s cousin, Jaya). Your article is really very mature and very good. Gives an overview of your great mother”s life, without indulging in emotionalism.

    ಪ್ರತಿಕ್ರಿಯೆ
  16. ಅಚ್ಯುತ

    ಚೆನ್ನಾಗಿ ಬರೆದಿದ್ದೀರಿ, ಬಹಳ ಸ್ಫೂರ್ತಿದಾಯಕ ಬದುಕು ಅವರದ್ದು.

    ಪ್ರತಿಕ್ರಿಯೆ
  17. na. damodara shetty

    ಅಮ್ಮನ ಕುರಿತು ನೀವು ಬರೆದ ಲೇಖನ ಹೃದಯಕ್ಕೆ ಹತ್ತಿರದ್ದಾಗಿತ್ತು. ಹೆಚ್.ಎಸ್ ಪಾರ್ವತಿಯವರನ್ನು ನಾನು ಅವರ ಬರಹಗಳ ಮೂಲಕ ತಕ್ಕಮಟ್ಟಿಗೆ ಬಲ್ಲವನಾಗಿದ್ದೆ. ಅವರ ಪ್ರಗತಿಪರ ಚಿಂತನೆಗಳ ಚಿತ್ರಣ ನೋಡಿದಾಗ ಯುವ ತಲೆಮಾರಿಗೆ ಅವರೊಂದು ಆಶಾಕಿರಣವಾಗಿದ್ದರು ಎಂದೆನಿಸುತ್ತದೆ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: