ನನ್ನ ಅಪ್ಪ ಅಗ್ರಾಳ ಪುರಂದರ ರೈ..

purandararai5qಅಗ್ರಾಳ ಪುರಂದರ ರೈ ಅವರ ಶತಮಾನೋತ್ಸವ ಜರುಗುತ್ತಿದೆ.

ಪುರಂದರ ರೈ ಅವರನ್ನು ನೆನಪಿಸಿಕೊಳ್ಳುವುದು ಎಂದರೆ ಒಂದು ಮೌಲ್ಯದ ಜೊತೆ ಒಡನಾಡುವುದು ಎಂದು ಅರ್ಥ. ಜಾಗತೀಕರಣ ಎಲ್ಲರ ಒಳಗೂ ಒಂದು ಸ್ವಾರ್ಥವನ್ನು ಹುಟ್ಟುಹಾಕಿರುವ ಈ ದಿನಗಳಲ್ಲಿ ರೈ ಅವರ ನೆನಪು ಜೀವಂತವಿಡುವುದು ಅಗತ್ಯ.

ಅಂತಹ ಒಂದು ಕಾರ್ಯಕ್ರಮ ಮಂಗಳೂರಿನಲ್ಲಿ ನಾಳೆ (೩೧) ರಂದು ಜರುಗುತ್ತಿದೆ 

ಈ ಸಂದರ್ಭದಲ್ಲಿ ವಿವೇಕ ರೈ ಗಳು ಈ ಹಿಂದೆ ಸಂಪಾದಿಸಿದ್ದ ‘ಅಗ್ರಾಳ ಪುರಂದರ ರೈ- ಸಮಗ್ರ ಸಾಹಿತ್ಯ’  ದ ಒಂದು ಭಾಗವನ್ನು ಸರಣಿ ರೂಪದಲ್ಲಿ ನೀಡುತ್ತಿದ್ದೇವೆ 

 

ನನ್ನ ಅಪ್ಪ ‘ಅಗ್ರಾಳ ಪುರಂದರ ರೈ ‘ಸುಮಾರು ಎಂಬತ್ತೈದು ವರ್ಷ (೩೧ ಆಗಸ್ಟ್ ೧೯೧೬ ರಿಂದ ೫ ಮೇ ೨೦೦೧ ) ಬದುಕಿ , ಎರಡು  ಜಾಗತಿಕ ಮಹಾಯುದ್ಧಗಳನ್ನು, ಭಾರತದ ಸ್ವಾತಂತ್ರ್ಯ ಹೋರಾಟವನ್ನು, ಸ್ವಾತಂತ್ರ್ಯೋತ್ತರ ಭಾರತದ ಕನಸು-ಮುಖವಾಡಗಳನ್ನು ಕಂಡವರು.

ಅತಿಸಣ್ಣ ರೈತರಾಗಿ, ಸ್ವಾತಂತ್ರ್ಯ ಹೋರಾಟಗಾರರಾಗಿ, ಬರಹಗಾರರಾಗಿ, ಪತ್ರಕರ್ತರಾಗಿ, ಮೌಲ್ಯಗಳಿಗಾಗಿ ನಿರಂತರ ಹೋರಾಡುತ್ತಾ ಬಂದವರು.

೧೯೬೯ರ ವರೆಗೆ ಕಾಂಗ್ರೆಸ್ ಪಕ್ಷದ ಸದಸ್ಯರಾಗಿ, ದೇಶಸೇವೆ ಮಾಡಿ, ರಾಜಕಾರಣದಿಂದ ಯಾವುದೇ ಪ್ರಯೋಜನ ಪಡೆಯದೇ, ಧೀಮಂತವಾಗಿ ಬದುಕಿದವರು. ಸಾವಿನ ಕೊನೆಯ ಕ್ಷಣದ ವರೆಗೂ ಖಾದಿ ಬಟ್ಟೆಯಲ್ಲೇ ತನ್ನ ಬಟ್ಟೆಯನ್ನು ಸಾಗಿಸಿದವರು.

ಅವರು ಸಾಯುವ ಹದಿನೈದು ದಿನಗಳ ಮೊದಲು ಅವರ ಬಗ್ಗೆ ಮತ್ತು ಅವರ ಬರಹಗಳ ಸಂಕಲನ ರೂಪದಲ್ಲಿ, ನಾನು ಸಂಪಾದಿಸಿದ ‘ಅಗ್ರಾಳ ಪುರಂದರ ರೈ -ಸಮಗ್ರ ಸಾಹಿತ್ಯ ‘ (೨೦೦೧) ಗ್ರಂಥದಿಂದ ಅವರು ತಮ್ಮ ಬಗ್ಗೆ ಹೇಳಿಕೊಂಡ, ಅನುಭವದ ಮಾತುಗಳನ್ನು ಇಲ್ಲಿ ಕೊಟ್ಟಿದ್ದೇನೆ.

ಇಪ್ಪತ್ತನೆಯ ಶತಮಾನದ ಆದರ್ಶಗಳನ್ನು ಮೆಲುಕು ಹಾಕಲು ಇದು ಒಂದು ಮಹತ್ವದ ದಾಖಲೆ ಎಂದು ಭಾವಿಸುತ್ತೇನೆ.

-ಬಿ ಎ ವಿವೇಕ ರೈ 

purandararai4a

ತಲಕಾವೇರಿಯ ತಲದಿಂದ ಪಡುಗಡಲ ತಡಿಯವರೆಗೆ :   ಅಗ್ರಾಳ ಪುರಂದರ ರೈ

ಭಾಗಮಂಡಲ ಮಧ್ಯದಿಂದ ಅಗ್ರಾಳದ ಅಗ್ರಹಾರಕ್ಕೆ

ನನ್ನ ತಂದೆ ಬಿ.ಕೆ.ಮುಂಡಪ್ಪ ರೈ    ಕೊಡಗಿನ ಭಾಗಮಂಡಲದಲ್ಲಿ ನೆಲೆಸಿದ್ದರು.ಅವರ ತಂದೆ ಕುನ್ಹನ್ನ ರೈಯವರ ಕಾಲದಲ್ಲೇ ಅವರು ತುಳುನಾಡಿನಿಂದ ಭಾಗಮಂಡಲಕ್ಕೆ ಬಂದಿದ್ದರಂತೆ. ನನ್ನ ತಂದೆಯವರಿಗೆ ಭಾಗಮಂಡಲ ಪೇಟೆಯಲ್ಲಿ ಜೀನಸಿನ ಅಂಗಡಿ ಇತ್ತು . ದಕ್ಷಿಣ ಕನ್ನಡದಿಂದ ತಲೆಹೊರೆಯಲ್ಲಿ ಅಕ್ಕಿಯನ್ನು ತರಿಸಿಕೊಂಡು ,ಅವರು ತಮ್ಮ ಅಂಗಡಿಯಲ್ಲಿ ಮಾರುತ್ತಿದ್ದರಂತೆ. ಬಹಳ ಧರ್ಮಿಷ್ಟರು ದಾನಿಗಳು ಆಗಿದ್ದರಂತೆ. ಭಾಗಮಂಡಲದ ದೇವಾಲಯದ ಮುಖ್ಯ ದ್ವಾರದ ಕಂಚಿನ ದಾರಂದದಲ್ಲಿ ‘ಬಿ.ಕೆ. ಮುಂಡಪ್ಪ ರೈಯವರ ಸೇವೆ’ ಎನ್ನುವ ಅಕ್ಷರಗಳನ್ನು ಇಂದೂ ಕಾಣಬಹುದು. ನನ್ನ ತಾಯಿ ಪೂವಕ್ಕೆ , ದಕ್ಷಿಣ ಕನ್ನಡದ ಆಗಿನ ಪುತ್ತೂರು ತಾಲೂಕಿನ ಪುಣಚಾ ಗ್ರಾಮದ ಅಗ್ರಾಳದವರು.

ನಾನು ಹುಟ್ಟಿದ್ದು ಮೊದಲನೆಯ ಮಹಾಯುದ್ಧದ ಕಾಲದಲ್ಲಿ, ೧೯೧೬ರ ಅಗೊಸ್ತು ೩೧ನೆಯ ತಾರೀಕು. ನನ್ನ ತಂದೆ ತೀರಿಕೊಂಡಾಗ ನಾನು ಮೂರೂವರೆ ವರ್ಷದ ಮಗು. (೧೯೨೦). ಭಾಗಮಂಡಲದಲ್ಲಿ ಒಂದು ವರ್ಷ ನಾನು ಶಾಲೆಗೇ ಹೋದೆ. ಅದು ನನ್ನ ವಿದ್ಯಾಭ್ಯಾಸದ ಮೊದಲನೆಯ ವರ್ಷ , ಅಂದರೆ ಒಂದನೆಯ ಕ್ಲಾಸ್. ನಮ್ಮ ಜಾತಿಯ ಅಳಿಯ ಕಟ್ಟಿನ ಪದ್ಧತಿಯಂತೆ , ತಂದೆ ತೀರಿಕೊಂಡ ಕಾರಣ , ತಾಯಿ ಮನೆ ಪುಣಚಾ ಗ್ರಾಮದ ಅಗ್ರಾಳಕ್ಕೆ ನಾನು ಬರಬೇಕಾಯಿತು. ಅದು ೧೯೨೪ರಲ್ಲಿ. ಮರುವರ್ಷವೇ , ೧೯೨೫ರಲ್ಲಿ ಅಗ್ರಾಳದಲ್ಲಿ ನನ್ನ ತಾಯಿ ತೀರಿಕೊಂಡರು. ಆಗ ನಾನು ಎಂಟು ವರ್ಷದ ಹುಡುಗ. ಹೀಗೆ ಎಂಟು ವರ್ಷದೊಳಗೆ ತಂದೆತಾಯಿಯರನ್ನು ಕಳೆದುಕೊಂಡು ಅನಾಥನಾದ ನಾನು , ಅಗ್ರಾಳದ ಅವಿಭಕ್ತ ಕುಟುಂಬದ ದೊಡ್ಡ ಸಂಸಾರ ಸಾಗರದಲ್ಲಿ ಹನಿಯಾಗಿ ಕಿರಿಯ ಸದಸ್ಯ ಆಗಿ ಸೇರ್ಪಡೆ ಗೊಂಡೆ.

viveka rai4ಅಗ್ರಾಳದ ಮೂಲ ಹೆಸರು ‘ಅಗ್ರಹಾರ ‘. ಅದು ಬ್ರಾಹ್ಮಣರ  ಅಗ್ರಹಾರ ಆಗಿತ್ತಂತೆ . ಆ ಭೂಮಿಯನ್ನು ನನ್ನ ತಾಯಿಯ ಹಿರಿಯರು ಕ್ರಯಕ್ಕೆ ಕೊಂಡುಕೊಂಡರಂತೆ.  ಪುಣಚಾದ ಪರಿಯಾಲ್ತದ್ಕ ಎಲಿಮೆಂಟರಿ ಶಾಲೆಯಲ್ಲಿ ನನ್ನ ಶಿಕ್ಷಣ ಮತ್ತೆ ಮುಂದುವರಿಯಿತು. ೧೯೨೪ರಿನ್ದ ೧೯೨೮ರವರೆಗೆ ಐದು ವರ್ಷಗಳ ಕಾಲ ಅಗ್ರಾಳದಿಂದ ಪರಿಯಾಲ್ತದ್ಕ ಶಾಲೆಗೆ ಹೋಗುತ್ತಾ ಬರುತ್ತಾ ,ಓದು ಬರಹ ಕಲಿಯುತ್ತಾ ಶಿಕ್ಷಣದ ಆಸೆಯನ್ನು ತೀರಿಸಿಕೊಳ್ಳಲು ಬಯಸಿದೆ. ಆಗ ಪರಿಯಾಲ್ತದ್ಕ ಶಾಲೆಯಲ್ಲಿ ಇಬ್ಬರೇ ಮಾಸ್ತರುಗಳು. ಒಬ್ಬರು ವಿಷ್ಣು ಭಟ್ಟರು. ಅವರನ್ನು ಹುಲಿ ಮಾಸ್ತರು ಎಂದು ಕರೆಯುತ್ತಿದ್ದರು. ಅವರೇ ಹೆಡ್ ಮಾಸ್ತರರು. ಇನ್ನೊಬ್ಬ ಮಾಸ್ತರು ತಿಮ್ಮಣ್ಣ ಭಟ್ಟರು. ಆಗ ಐದನೆಯ ಕ್ಲಾಸಿಗೆ ಪಬ್ಲಿಕ್ ಪರೀಕ್ಷೆ ಇತ್ತು. ಐದನೆಯ ತರಗತಿಯಲ್ಲಿ ತೇರ್ಗಡೆಯಾದೆ. ಆದರೆ ವಿದ್ಯೆ ಮುಂದುವರಿಸಲು ಅನೇಕ ಅಡ್ಡಿಗಳು ಜೊತೆಯಾಗಿಯೇ ಎದುರು ಬಂದುವು. ತಂದೆ ತಾಯಿಯರನ್ನು ಕಳೆದುಕೊಂಡ ನನಗೆ ರಕ್ಷಕರಾಗಿದ್ದ  ಮಾವ ತೀರಿಕೊಂಡರು. ನಾವು ವಾಸವಾಗಿದ್ದ ಮನೆ ಸುಟ್ಟುಹೋಯಿತು. ಆ ಕಾಲದ ಹಳ್ಳಿಯ ಅವಿಭಕ್ತ ಕುಟುಂಬದ ಹುಡುಗನಿಗೆ ಶಿಕ್ಷಣ ಬೇಕು ಎನ್ನುವುದನ್ನು ಅರ್ಥ ಮಾಡಿಕೊಳ್ಳಬಲ್ಲ  ಹಿರಿಯರು ಆಗ ಇರಲಿಲ್ಲ. ಹಾಗಾಗಿ ಎಳೆಯ ವಯಸ್ಸಿನಲ್ಲೇ ಕೃಷಿ ಕೆಲಸದ ದೈಹಿಕ ಶ್ರಮಕ್ಕೆ ಒಡ್ಡಿಕೊಳ್ಳ ಬೇಕಾಯಿತು. ಹೀಗೆ ೧೯೨೮ರಿನ್ದ ೧೯೩೧ರವರೆಗೆ ನಾಲ್ಕು ವರ್ಷಗಳ ಕಾಲ , ಬಾಲ ಕೃಷಿ ಕಾರ್ಮಿಕನಾಗಿ ಮಣ್ಣಿನ ಜೊತೆಗೆ ಸಂಬಂಧ ಬೆಳೆಸಿದೆ. ಆ ವೇಳೆಗೆ ನನ್ನ ಅಕ್ಕನಿಗೆ ಮದುವೆ ಆಯಿತು.

ದೈವ ಭಕ್ತರಾದ ನನ್ನ ತಂದೆಯವರು ಮಕ್ಕಳಿಗಾಗಿ ಉಳಿಸಿದ ಹಣ ಅತ್ಯಲ್ಪ. ಆ ಹಣವು ಕೊಡಗು ಸರಕಾರದ ವಶ ಇತ್ತು. ನನ್ನ ಭಾವನವರು ನಮ್ಮ ಜೀವನೋಪಾಯಕ್ಕಾಗಿ ಆ ಹಣವನ್ನು ಪಡೆಯಲು ಪ್ರಯತ್ನಿಸಿದರು. ಆದರೆ ಆ ಕಾಲದ ಕೊಡಗು ಸರಕಾರದ ಕಾನೂನು ಕಾಯಿದೆಗಳು ವಿಶಿಷ್ಟ ಆಗಿದ್ದುವು. ಗತಿಸಿದ ತಂದೆಯ ಏಕಮಾತ್ರ ಪುತ್ರನಾದ ನನಗೆ ವಿದ್ಯೆ ಕಲಿಸದಿದ್ದರೆ ಸರಕಾರದಿಂದ ಆ ಹಣ ಸಿಗಲಾರದು ಎನ್ನುವ ಆದೇಶ ಬಂತು. ಆಗ ಭಾವನವರು ನನ್ನನ್ನು ಶಾಲೆಗೇ ಸೇರಿಸಲು ಪುತ್ತೂರಿಗೆ ಕರೆದುಕೊಂಡು ಹೋದರು. ಆಗ ಪುಣಚಾದಲ್ಲಿ ಐದನೆಯ ತರಗತಿಯ ವರೆಗೆ ಮಾತ್ರ ಅವಕಾಶ ಇದ್ದುದು. ಹೀಗೆ ತೀರಿಹೋದ ನನ್ನ ತಂದೆಯವರು ಉಳಿಸಿದ ಹಣ ಪರೋಕ್ಷವಾಗಿ ನನ್ನ ಶಿಕ್ಷಣವನ್ನು ಮುಂದುವರಿಸಲು ದಾರಿ ತೋರಿಸಿತು.

೧೯೩೧ರಲ್ಲಿ ಪುತ್ತೂರಲ್ಲಿ ನಾನು ಸೇರಿದ್ದು ,ಬೋರ್ಡ್ ಹೈಯರ್ ಎಲಿಮೆಂಟರಿ ಶಾಲೆಯನ್ನು. ಮೂರು ವರ್ಷ ಗದ್ದೆ ಗುದ್ದೆಗಳಲ್ಲಿ ಅಲೆದಾಡಿದ ಕಾರಣ , ನನ್ನ ವಿದ್ಯೆ ಗುಡ್ಡೆ ಹತ್ತಿತ್ತು. ಹಾಗಾಗಿ ಐದನೇ ತರಗತಿ ಪಾಸ್ ಮಾಡಿದ ನಾನು , ಮತ್ತೆ ಪುತ್ತೂರಿನ ಈ ಶಾಲೆಯಲ್ಲಿ ಐದನೇ ತರಗತಿಗೆ ಮತ್ತೆ ಸೇರಿದೆ. ಸುಮಾರು ಒಂದು ವರ್ಷ ಮೂರು ತಿಂಗಳು ಅಲ್ಲಿ ವಿದ್ಯಾರ್ಥಿ ಆಗಿದ್ದೆ. ಮತ್ತೆ ನನ್ನ ವಿದ್ಯೆ ಮುಂದುವರಿದದ್ದು ಪುತ್ತೂರಿನ ಬೋರ್ಡ್ ಹೈಯರ್ ಸೆಕೆಂಡರಿ ಶಾಲೆಯಲ್ಲಿ. ಅದೇ ಮತ್ತೆ ಪುತ್ತೂರು ಬೋರ್ಡ್ ಹೈಸ್ಕೂಲ್ ಆಯಿತು. ೧೯೩೩ರಿನ್ದ ೩೫ರವರೆಗೆ ಮೂರು ವರ್ಷ ಬೋರ್ಡ್ ಹೈಸ್ಕೂಲಿನಲ್ಲಿ ನಾನು ವಿದ್ಯಾರ್ಥಿ ಆಗಿದ್ದೆ. ಆಗಿನ ೧,೨ ಮತ್ತು ೩ನೆ ಫಾರ್ಮ್ ಮುಗಿಸಿದೆ. ಸಾಹಿತ್ಯದ ಒಲವು ಹುಚ್ಚು ನನಗೆ ಹಿಡಿದದ್ದು ಈ ಅವಧಿಯಲ್ಲಿ. ಶಿವರಾಮ ಕಾರಂತರ ಭೇಟಿ ಮತ್ತು ಪ್ರಭಾವಕ್ಕೆ ಒಳಗಾದದ್ದು ಈ ವಿದ್ಯಾರ್ಥಿ ದೆಸೆಯಲ್ಲಿ.

ಪುತ್ತೂರು ಬೋರ್ಡ್ ಹೈಸ್ಕೂಲಿನಲ್ಲಿ ೩ನೆ ಫಾರ್ಮ್ , ಅಂದರೆಎಂಟನೆ ಕ್ಲಾಸ್ ಮುಗಿಸಿದಾಗ , ಅಗ್ರಾಳದಲ್ಲಿ ನಮ್ಮ ಕುಟುಂಬದ ಆಸ್ತಿ ಪಾಲಾಯಿತು. ನನ್ನ ತಾಯಿಯ ಪಾಲಿಗೆ ಸೇರಿದ ಆಸ್ತಿಯಲ್ಲಿ ನನ್ನ ಇಬ್ಬರು ಅಕ್ಕಂದಿರು ಮತ್ತು ನಾನು ಪ್ರಯತ್ನ ಇಲ್ಲದೆಯೇ ಪಾಲುದಾರರಾದೆವು. ಗಂಡಾಗಿ ಹುಟ್ಟಿದವನು ನಾನೊಬ್ಬನೇ ಆದುದರಿಂದ , ಆಸ್ತಿ ನೋಡಿಕೊಳ್ಳಲು ಅಗ್ರಾಳಕ್ಕೆ ಹಿಂದಿರುಗುವುದು ಅನಿವಾರ್ಯ ಆಯಿತು. ಹೀಗೆ ಭಾಗಮಂಡಲದ ತಲಕಾವೇರಿಯಲ್ಲಿ ಬುಗ್ಗೆಯಾಗಿ ಹೊರಹೊಮ್ಮಿದ ನನ್ನ ಶಿಕ್ಷಣ , ಪರಿಯಾಲ್ತದ್ಕದಲ್ಲಿ ಕಿರುತೊರೆಯಾಗಿ ಹರಿದು, ಮತ್ತೆ ಪುತ್ತೂರಿನಲ್ಲಿ ರಭಸವಾಗಿ ಮುಂದುವರಿಯುತ್ತದೆ ಎನ್ನುವಷ್ಟರಲ್ಲಿ , ಅಲ್ಲೇ ಸ್ತಬ್ಧವಾಯಿತು. ಇಲ್ಲಿಗೆ ಮುಗಿಯಿತು ನನ್ನ ಶಾಲಾ ಶಿಕ್ಷಣದ ಪಯಣ.

ಮುಂದಿನ ಭಾಗದಲ್ಲಿ : ‘ ಕಿರಣದಿಂದ ಅಂತಃಕರಣಕ್ಕೆ’.

‍ಲೇಖಕರು Admin

August 30, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: