‘ಅಡ್ಡುಗೆ ಸರ’
ಸ್ಪೂರ್ತಿ ಗಿರೀಶ್
ಶಿವಶಂಕರ್ ಬಣಗಾರ್

”ಈ ಹೂ ನಿಮಗೆ ಗೊತ್ತಿದೆ ಅಂದರೆ ನಿಮ್ಮ ಬಾಲ್ಯ ಹಳ್ಳಿಯೊಂದಿಗೆ ದಟ್ಟವಾಗಿ ಅಂಟಿಕೊಂಡಿರುತ್ತದೆ” ಅಂತ ಛಾಯಾಗ್ರಾಹಿ ಶಿವಶಂಕರ್ ಬಣಗಾರ್ ಫೆಸ್ ಬುಕ್ ನಲ್ಲಿ ಬರೆದಿದ್ದರು..
ಹೌದು, ನನ್ನಲ್ಲಿ, ನನ್ನೊಂದಿಗೆ ಈ ಹೂ ದಟ್ಟವಾಗಿ ಹಬ್ಬಿಕೊಂಡಿದೆ. ಈಗಲೂ ಕಣ್ಣಿಗೆ ಬಿದ್ದರೆ ಕ್ಷಣಕಾಲ ನಿಂತು ನೋಡಿ, ಸಾಧ್ಯ ವಾದರೇ ಮುಟ್ಟಿ ಮೂಸಿ ಆನಂದಿಸುವೆನು.
ನಾವು ಸಣ್ಣವರಿದ್ದಾಗ ಗುಂಪಿನಲ್ಲಿ ಆಟವಾಡುತ್ತಿದ್ದೆವು. ಕವೆಯ ಕಡ್ಡಿಗಳನ್ನು ಹೆಣ್ಣು ಮತ್ತು ಗಂಡಾಗಿಸಿ ಅವನ್ನು ಹರಿದ ಬಟ್ಟೆಗಳಿಂದ ಶೃಂಗರಿಸುತ್ತಿದ್ದೆವು. ಪ್ರತಿ ಮಕ್ಕಳು ಹಳೆಯ ಬಣ್ಣದ ಬಟ್ಟೆಗಾಗಿ ಅವರ ಅಮ್ಮಂದಿರ ಬಳಿ ದಂಬಾಲು ಬಿದ್ದು ತರುತ್ತಿದ್ದರು. ಒಬ್ಬರ ಹರಿದ ಸೀರೆ ಮತ್ತೊಬ್ಬರ ತುಂಡಾದ ಪಂಚೆಗಳಿಂದ ಕಡ್ಡಿಗೊಂಬೆಗಳು ಮದುವೆಗೆ ಸಿದ್ದವಾಗುತ್ತಿದ್ದವು. ನಾವು ಸಣ್ಣಮಕ್ಕಳಿರುವಾಗ ಜೀವನ ಅಂದರೆ ಮದುವೆಯಾಗುವುದಷ್ಟೇ ಗುರಿ ಅನ್ನುವ ಅಭಿಪ್ರಾಯ ಇತ್ತು.
ಜನ ಬದುಕುವುದೇ ಮದುವೆಯಿಂದ , ಸಣ್ಣ ಮಕ್ಕಳು ಬೆಳೆಯುವುದೇ ಮದುವೆಯಾಗಲು ಇತ್ಯಾದಿ ಅಭಿಪ್ರಾಯ ಇದ್ದವು. ಆವಾಗಿನ ಸಣ್ಣಮಕ್ಕಳಿಗೆ ಗೊತ್ತಿದ್ದ ಇಷ್ಟವಾಗುವ ಆಟ ಮದುವೆಯಾಟ ಮಾತ್ರ. ಈಗಿನ ಸಣ್ಣ ಮಕ್ಕಳಿಗೆ ಜೀವನದ ಬಗೆಗೆ ಯಾವ ಅಭಿಪ್ರಾಯ ಇರುವುದೋ ಗೊತ್ತಿಲ್ಲ.
ಕಡ್ಡಿ ಬೊಂಬೆಗಳಿಗಾಗಿ ನಮಗೆ ಬಂಗಾರದ ಒಡವೆಗಳು ಬೇಕಿತ್ತು. ಈ ಹೂವುಗಳಂತು ಬಂಗಾರದ ಸಣ್ಣ ತುಣುಕುಗಳಂತೇ ಅರಳಿ ಹೊಳೆಯುತ್ತ ನಿಂತಿರುತ್ತಿದ್ದವು. ಎಳೆಯ ಸೂರ್ಯಕಾಂತಿಯಲ್ಲಿ ಈ ಹೂಗಳನ್ನು ನೋಡುವುದು ತುಂಬಾ ಚೆಂದ ಇಡೀ ಹೂ ರಾಶಿ ಬಂಗಾರದಲ್ಲಿ ಮಿಂದು ಎದ್ದು ಬಂದಂತೆ ಆಕರ್ಷಿಸುತ್ತವೆ. ಈ ಹೂವಿನ ಬಾಲ, ಕಾಂಡ ಉದ್ದವಾಗಿದ್ದು ಒಂದರಲ್ಲಿ ಒಂದೇ ಹೂ ಅರಳಿ ಆಕಾಶಕ್ಕೆ ಚಿಮ್ಮಿರುತ್ತದೆ.
ನಾವು ಇದರಲ್ಲಿ ಅಡ್ಡುಗೆಸರ, ಅಡ್ಡುಗೆ ಡಾಬು, ತೋಳುಬಂಧಿ, ಕಾಲಂದುಗೆ ಹೆಣೆಯುತ್ತಿದ್ದೆವು. ಎಲ್ಲಿಯೂ ತುಂಡಾಗದಂತೆ ಹೂವು ಕತ್ತರಿಸಿ ಹೋಗದಂತೆ ಸೇರಿಸುತ್ತಾ ದೊಡ್ಡ ಸರ ಹೆಣೆಯುವುದು ಒಂದು ಕಲೆ. ಹುಡುಗರು ಜಾದುಗಾರರಂತೆ ಹೂ ಕೊಯ್ದು ತಂದರೆ ಹುಡುಗಿಯರು ಅವನ್ನು ಸರಾಗವಾಗಿ ಸರವನ್ನಾಗಿ ಮಾಡುತ್ತಿದ್ದೆವು. ಈ ಒಡವೆಗಳನ್ನು ಒಣಗಿಸಿಯೂ ವಾರನುಗಟ್ಟಲೇ ಹಾಕಿಕೊಂಡು ಸಂಭ್ರಮಿಸುತ್ತಿದ್ದೆವು. ನಾವು ಈ ಹೂವನ್ನು ‘ಅಡ್ಡುಗೆ ಹೂ’ ಅಂತಲೇ ಕರೆಯುತ್ತಿದ್ದದ್ದು. ‘ಅಡ್ಡುಗೆ ಸರ’ ಒಂದು ಪ್ರಸಿದ್ಧ ಆಭರಣದ ಮಾದರಿ.
ಹೊಲ ಕುಯ್ಯುವಾಗ, ಕಳೆ ಕೀಳುವಾಗ ಕೈ ಮೈ ಗಾಯವಾದರೇ ಇದರ ಸೊಪ್ಪನ್ನು ಹಿಂಡಿ ರಸಮಾಡಿಕೊಂಡು ತಿಕ್ಕಿದರೆ ರಕ್ತ ಒಸರುವುದು ನಿಲ್ಲುತ್ತಿತ್ತು. ಈ ಪುಟ್ಟ ಗಿಡದಲ್ಲಿ ಎಂತಹ ಅಪರಿಮಿತ ಶಕ್ತಿ , ಆಕರ್ಷಣೆ ಇರುವ ಬಗ್ಗೆ ಆಶ್ಚರ್ಯ ಅನಿಸುವುದು.





0 Comments