ಇದು ಗುಜರಿ ಅಂಗಡಿ ಯಿಂದ..
ರಾಜ್ಯ ಸರಕಾರ ಬ್ಯಾರಿ ಸಾಹಿತ್ಯ ಅಕಾಡೆಮಿಯನ್ನು ಘೋಷಿಸಿದ ಸಂದರ್ಭದಲ್ಲಿ ಬರೆದ ಲೇಖನ ಇದು.
ಒಂದೆಡೆ ಈ ತಲೆಮಾರಿಗೆ ತಾವು ಆಡುವ ಭಾಷೆ ಒಂದು ಸ್ವತಂತ್ರ ಭಾಷೆ ಎಂಬ ಅರಿವೇ ಇದ್ದಿರಲಿಲ್ಲ. ‘ನಿಮ್ಮ ಮಾತೃಭಾಷೆ ಯಾವುದು?’ ಎಂದು ಯಾರಾದರೂ ಕೇಳಿದರೆ ಅವರು ‘ಮಲಯಾಳಂ’ ಎಂದು ಹೇಳುತ್ತಿದ್ದರು. ಇತ್ತ ಮಲಯಾಳಂ ಮಾತನಾಡುವವರು ಆ ಭಾಷೆಯನ್ನು ಒಪ್ಪಿಕೊಳ್ಳುತ್ತಿರಲಿಲ್ಲ. ‘ಬ್ಯಾರಿ’ ಎನ್ನುವ ಪದಕ್ಕೆ ಅಂಜುತ್ತಾ ಬದುಕುತ್ತಿದ್ದ ಈ ತಲೆಮಾರಿಗೆ ತಮ್ಮ ಭಾಷೆಯನ್ನು ‘ಬ್ಯಾರಿ ಭಾಷೆ ’ ಎಂದು ಕರೆಯುವುದಕ್ಕೆ ಧೈರ್ಯ ಸಾಲುತ್ತಿರಲಿಲ್ಲ. ಈ ಭಾಷೆಯನ್ನು ಕರಾವಳಿಯ ಒಂದು ಪ್ರದೇಶದ ಜನರು ‘ನಕ್ಕ್ನಿಕ್ಕ್’ ಭಾಷೆ ಎಂದು ಕರೆಯುತ್ತಿದ್ದರು. ‘ನಕ್ಕ್-ನಿಕ್ಕ್’ ಅಂದರೆ ‘ನನಗೆ-ನಿನಗೆ’ ಎಂದರ್ಥ. ಇದೊಂದು ರೀತಿಯಲ್ಲಿ ಒಂದು ಭಾಷೆಯನ್ನು ‘ಸಾರ್ವತ್ರಿಕ’ವಾಗಿಸುವಲ್ಲಿರುವ ಭಯವನ್ನು, ಕೀಳರಿಮೆಯನ್ನು ಎತ್ತಿ ತೋರಿಸುತ್ತದೆ. ‘ನನಗೆ ಮತ್ತು ನಿನಗೆ’ ಮಾತ್ರ ಅನ್ವಯವಾಗುವ ಒಂದು ಭಾಷೆಯಿದ್ದರೆ ಅದು ‘ಬ್ಯಾರಿ ಭಾಷೆ’ ಮಾತ್ರ ಎಂದು ಹೇಳಬೇಕು. ಒಂದು ಕಡೆ ತನ್ನ ಭಾಷೆಯನ್ನು ಮಲಯಾಳಂ ಎಂದು ಕರೆಯುತ್ತಲೇ ‘ಮಲಯಾಳಂ ಅಂದರೆ ಮಲಯಾಳಂ ಅಲ್ಲ. ಸ್ವಲ್ಪ ವ್ಯತ್ಯಾಸವಿದೆ..’ ಎಂಬಿತ್ಯಾದಿ ಸಮರ್ಥನೆಗಳನ್ನು ವ್ಯಾಖ್ಯಾನಗಳನ್ನು ನೀಡುತ್ತಾ, ತನ್ನದೇ ಭಾಷೆಯ ಕುರಿತು ಒಂದು ತಲೆಮಾರು ಕೀಳರಿಮೆಯಿಂದ ಬದುಕುತ್ತಾ ಬಂತು. ಅನ್ಯಭಾಷಿಕರ ನಡುವೆ ಇಬ್ಬರು ಬ್ಯಾರಿ ಭಾಷೆಯಲ್ಲಿ ಮಾತನಾಡಿದರೆ, ಅದನ್ನು ನೋಡಿ ತಮಾಷೆ ಮಾಡುವ ಸಮುದಾಯದ ನಡುವೆ ಬ್ಯಾರಿಗಳ ಒಂದು ತಲೆಮಾರು ಬದುಕಿದೆ, ಎಲ್ಲಕ್ಕಿಂತ ಮುಖ್ಯವಾಗಿ ಸರಕಾರಿ ಕಡತಗಳಲ್ಲಿ ಬ್ಯಾರಿಗಳು ತಮ್ಮ ಭಾಷೆಯ ಹೆಸರನ್ನು ‘ಮಲಯಾಳಂ’ ಎಂದು ಬರೆಯುತ್ತಿದ್ದರು. ಆದರೆ ಅವರು ಮಲಯಾಳಿಗಳಾಗಿರದೆ, ಕರಾವಳಿಯ ತುಳು ಮಣ್ಣಿನ ಮುಸ್ಲಿಮರೇ ಆಗಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಮಲಯಾಳಿಗಳಿಂದ ಈ ಸಮುದಾಯ ಮತ್ತು ಅವರು ಆಡುವ ಭಾಷೆ ತಿರಸ್ಕೃತವಾಗಿದ್ದವು. ಜೊತೆಗೆ, ತಮ್ಮದೇ ನೆಲದ ಜನರಿಂದಲೂ ತಮ್ಮ ಭಾಷೆ ಮತ್ತು ಐಡೆಂಟಿಟಿಯ ಕಾರಣಕ್ಕಾಗಿ ಅವರು ಅವಮಾನಿತರಾಗಿ ಬದುಕಬೇಕಾಗಿತ್ತು. ಕರಾವಳಿಯ ಮುಸ್ಲಿಮರನ್ನು ನಿಂದಿಸಬೇಕೆಂದರೆ ‘ಸೂ..ಮಗ, ಬೇ.. ಬೋ…ಮಗ’,ಇತ್ಯಾದಿಗಳನ್ನು ಬಳಸಬೇಕೆಂದಿರಲಿಲ್ಲ. ‘ಬ್ಯಾರಿ!’ ಎಂದರೆ ಸಾಕಿತ್ತು. ಬ್ಯಾರಿಗಳು ತಮ್ಮ ಮಸೀದಿಗಳಲ್ಲಿ ‘ವೌಲ್ವಿ’ಗಳಿಂದ ಧರ್ಮ ಪ್ರವಚನ ಮಾಡಿಸಬೇಕೆಂದರೆ ಕೇರಳದಿಂದಲೇ ಮುಸ್ಲಿಯಾರುಗಳನ್ನು ತರಿಸುತ್ತಿದ್ದರು. ಯಾಕೆಂದರೆ ‘ಧರ್ಮಪ್ರವಚನ’ ಬ್ಯಾರಿ ಭಾಷೆಯಲ್ಲಿ ಮಾಡುವುದು ಅವರಿಗೆ ನಿಲುಕುವ ವಿಷಯವಾಗಿರಲಿಲ್ಲ. ‘ಗಂಭೀರ ಮತ ಪ್ರಸಂಗ’ ಏನಿದ್ದರೂ ಅದು ‘ಗಂಭೀರ ಮಲಯಾಳಂ’ನಲ್ಲೇ ನಡೆಯಬೇಕು ಎಂದು ಅವರು ನಂಬಿದ್ದರು. ಧಾರ್ಮಿಕ ವಿಷಯಗಳನ್ನು ಮಲಯಾಳಂನಲ್ಲೇ ಮುಸ್ಲಿಯಾರುಗಳು ಬೋಧಿಸುತ್ತಿದ್ದ ಕಾಲವಿತ್ತು. ಬ್ಯಾರಿ ಭಾಷೆಯನ್ನು ಅಲ್ಲಿ ಬಳಸಲಾಗುತ್ತಿರಲಿಲ್ಲ. ತಮ್ಮದಲ್ಲದ, ಅರ್ಥವಾಗದ ‘ಕಠಿಣ ಮಲಯಾಳಂ’ನಲ್ಲೇ ವಿದ್ಯಾರ್ಥಿಗಳು ಧಾರ್ಮಿಕ ವಿಷಯಗಳನ್ನು ಕಲಿಯುತ್ತಿದ್ದರು. ಎಲ್ಲಕ್ಕಿಂತ ಮುಖ್ಯವಾಗಿ ಬ್ಯಾರಿ ಭಾಷೆಗೆ ಲಿಪಿಯಿಲ್ಲ. ಬ್ಯಾರಿ ಭಾಷೆಯನ್ನು ಬರೆಯುವುದಕ್ಕೆ ಬಳಕೆ ಮಾಡುವ ಸಂದರ್ಭವೇ ತೀರ ಕಡಿಮೆಯಿತ್ತು. ಆದುದರಿಂದಲೇ ಲಿಪಿಯ ಕುರಿತಂತೆ ಯಾರೂ ತಲೆ ಕೆಡಿಸಿಕೊಂಡಿಲ್ಲ. ಮದರಸಗಳ ಲೆಕ್ಕಪತ್ರಗಳನ್ನೆಲ್ಲ ಕನ್ನಡದಲ್ಲೇ ಬರೆಯಲಾಗುತ್ತಿತ್ತು. ಬ್ಯಾರಿಗಳು ಮನೆಯಲ್ಲಿ ಬ್ಯಾರಿ ಭಾಷೆ, ಹೊರಗೆ ತುಳು ಭಾಷೆ, ಶಾಲೆ, ಕಚೇರಿಗಳಲ್ಲಿ ಕನ್ನಡ ಹೀಗೆ ಒಂದೇ ಸಂದರ್ಭದಲ್ಲಿ ಹಲವು ಭಾಷೆಗಳನ್ನು ಕಲಿಯಬೇಕಾದ, ಹಲವು ಭಾಷೆಗಳೊಂದಿಗೆ ರಾಜಿ ಮಾಡಿಕೊಳ್ಳಬೇಕಾದ ಪರಿಸ್ಥಿತಿಯಿತ್ತು. ಇಷ್ಟು ಅವಮಾನ, ಪ್ರತಿಕೂಲ ಪರಿಸ್ಥಿತಿಯ ನಡುವೆ ಒಂದು ಭಾಷೆ ಉಳಿದು ಬೆಳೆದು, ಇದೀಗ ಸರಕಾರದಿಂದ ಸಾಹಿತ್ಯ ಅಕಾಡೆಮಿಯನ್ನು ತನ್ನದಾಗಿಸಿಕೊಂಡಿರುವುದು, ಆ ಭಾಷೆಯ ಸಾಮರ್ಥ್ಯವನ್ನು ಎತ್ತಿ ಹಿಡಿಯುತ್ತದೆ.
ಅತಂಹದೊಂದು ಸಮುದಾಯಕ್ಕೆ ಇದ್ದಕ್ಕಿದ್ದಂತೆಯೇ ಯಾಕೆ ಗ್ರಹಣ ಬಡಿಯಿತು? ಅನಂತರದ ಕೆಲವು ತಲೆಮಾರುಗಳು ಯಾಕೆ ತಮ್ಮ ಹೆಸರಿಗೆ ಅಂಜುವಂತಹ ಪರಿಸ್ಥಿತಿ ಎದುರಾಯಿತು?ಇದು ಅತ್ಯಂತ ಕುತೂಹಲಕರವಾಗಿದೆ. ಕಾಲ ಹೇಗೆ ಉರುಳಿತೆಂದರೆ, ಬ್ಯಾರಿಗಳ ಭಂಡಸಾಲೆಯಲ್ಲಿ ಲೆಕ್ಕ ಬರೆಯುತ್ತಿದ್ದವರೆಲ್ಲ ಕ್ರಮೇಣ ಪ್ರಬಲರಾದರು. ಹೆಸರುವಾಸಿಗಳಾಗಿದ್ದ ಬ್ಯಾರಿಗಳ ನಂತರದ ತಲೆಮಾರು ಲೆಕ್ಕ ಬರೆಯುತ್ತಿದ್ದವರನ್ನೇ ಒಡೆಯರೆಂದು ಕರೆಯುವ ಪರಿಸ್ಥಿತಿ ಎದುರಾಯಿತು. ತುಳುನಾಡಿನಲ್ಲಿ ಬ್ರಾಹ್ಮಣ್ಯದ ಪ್ರವೇಶವಾದಂತೆ ಕ್ರಮೇಣ ಬ್ಯಾರಿಗಳು ತುಳುವರಿಗೆ ಅನ್ಯರಾಗತೊಡಗಿದರು. ಬ್ಯಾರಿಗಳ ಅತಿ ಆತ್ಮವಿಶ್ವಾಸ, ‘ಒಂದಾನೊಂದು ಕಾಲದಲ್ಲಿ ನನ್ನಜ್ಜನಿಗೊಂದಾನೆಯಿತ್ತು’ ಎನ್ನುವ ಒಣ ಹುಂಬತನ, ಪಾಳೇಗಾರಿಕೆಯ ಕಾಲದ ಆ ‘ಭ್ರಮೆ’ಗಳಿಂದ ಹೊರಬರಲು ಸಿದ್ಧವಿಲ್ಲದ ಅನಂತರದ ಪೀಳಿಗೆ ಸಮಾಜದಲ್ಲಿ ತಮಾಷೆಗೆ ಗುರಿಯಾಯಿತು. ಶಿಕ್ಷಣದಿಂದ ವಂಚಿತವಾದ ಈ ಪೀಳಿಗೆಗೆ, ಕೈ ತಪ್ಪಿದ ‘ತರವಾಡು ಅಂತಸ್ತಿ’ನಿಂದ ಏಕಾಏಕಿ ಮೀನು ಮಾರುವುದು, ಗುಜರಿ ಹೆಕ್ಕುವುದು ಇತ್ಯಾದಿಯೇ ಅನಿವಾರ್ಯವಾಯಿತು. ಬ್ಯಾರಿಗಳನ್ನು ಏಕಾಏಕಿ ಆಹುತಿ ತೆಗೆದುಕೊಂಡ ಬಡತನ, ನಾಯಕತ್ವದ ಕೊರತೆ ಅವರನ್ನು ಅತಂತ್ರವನ್ನಾಗಿಸಿದವು. ಅವರ ಅಸಹಾಯಕತೆಯನ್ನು ಚೆನ್ನಾಗಿಯೇ ಬಳಸಿಕೊಂಡ ‘ಮೇಲ್ವರ್ಗ’ ಬ್ಯಾರಿಗಳನ್ನು ಕಳ್ಳರನ್ನಾಗಿಯೂ, ಕಾಮುಕನ್ನಾಗಿಯೂ ಬಿಂಬಿಸುವ ಪ್ರಯತ್ನ ನಡೆಸಿತು. ಅದರ ಪರಿಣಾಮ ಎಷ್ಟು ತೀವ್ರವಾಯಿತೆಂದರೆ ಒಂದು ತಲೆಮಾರು ತನ್ನ ಭಾಷೆ, ಐಡೆಂಟಿಟಿಗಾಗಿ ನಾಚಿಕೊಳ್ಳುವಷ್ಟು. ಇದರಿಂದಾಗಿ ಬ್ಯಾರಿ ಭಾಷೆ, ಸಂಸ್ಕೃತಿಯೊಳಗೆ ಅಡಕವಾಗಿದ್ದ ಜಾನಪದಗಳು, ಸಾಹಿತ್ಯಗಳು ಸಂಪೂರ್ಣ ಅವಜ್ಞೆಗೊಳಗಾದವು.
ಇಂತಹ ಒಂದು ಭಾಷೆ ಏಕಾಏಕಿ ಆತ್ಮವಿಶ್ವಾಸದೊಂದಿಗೆ ತಲೆ ಎತ್ತಿ ನಿಂತುದು 90ರ ದಶಕದಲ್ಲಿ. ಕೆಲವು ಬ್ಯಾರಿ ಸಾಹಿತಿಗಳು, ಮುಖಂಡರು ಒಂದಾಗಿ ‘ನಾವೆಲ್ಲ ಬ್ಯಾರಿಗಳು’ ಎಂದು ಘೋಷಿಸಿಕೊಂಡುದು ತುಳುನಾಡಿನ ಜನರಿಗೆ ಅಚ್ಚರಿಯನ್ನು ತಂದಿತ್ತು. ಅಷ್ಟೇ ಅಲ್ಲ, ಬ್ಯಾರಿ ಸಮುದಾಯದ ಜನರಿಗೆ ಇದು ಮೊತ್ತ ಮೊದಲ ಬಾರಿಗೆ ‘ತಮಾಷೆ’ಯಾಗಿ ಕಂಡಿತ್ತು. ಆದರೆ ಕೆಲವು ಮುಖಂಡರು ಸೇರಿ ಮೊತ್ತ ಮೊದಲ ಬ್ಯಾರಿ ಸಮಾವೇಶ ಮಾಡಿದಾಗ, ಅದರಲ್ಲಿ ಸರ್ವ ಬ್ಯಾರಿಗಳು ಒಂದಾಗಿ ತಮ್ಮ ಸಾಹಿತ್ಯ, ಸಂಸ್ಕೃತಿಯನ್ನು ಅಭಿವ್ಯಕ್ತಿಗೊಳಿಸಿದಾಗ ಕರಾವಳಿಯ ಇತರ ಮೇಲ್ವರ್ಣಿಯ ತುಳುವರು ‘ಅಪರಾಧಿಗಳಂತೆ’ ತಲೆ ತಗ್ಗಿಸಿದರು. ಆ ಒಂದು ಸಮ್ಮೇಳನದಲ್ಲಿ ಬ್ಯಾರಿ ಭಾಷೆ, ಸಮುದಾಯ ತನ್ನ ಅವಮಾನ, ಕೀಳರಿಮೆ ಇತ್ಯಾದಿಗಳನ್ನು ಕೊಡವಿ ತಲೆಯೆತ್ತಿ ನಿಂತಿತು. ಅನಂತರ ಬ್ಯಾರಿಗಳು ಮಾಡಿದ ಎಲ್ಲ ಸಮಾವೇಶಗಳು ಉಳಿದ ಸಮಾವೇಷಗಳಿಗೆ ಒಂದು ಮಾದರಿಯಂತಿದ್ದವು. ಪ್ರಪ್ರಥಮ ಬ್ಯಾರಿ ಸಮ್ಮೇಳನದಲ್ಲಿ ಸಭಿಕರಲ್ಲೊಬ್ಬನಾಗಿ ನಾನೂ ಭಾಗವಹಿಸಿದ್ದೆ. ರೋಮಾಂಚಿತನಾಗಿದ್ದೆ. ಈ ಸಮ್ಮೇಳನ ನಡೆದ ಬರೇ ಹತ್ತು ವರ್ಷಗಳಲ್ಲಿ ಬ್ಯಾರಿ ಭಾಷೆ ತನ್ನದೇ ಆದ ಒಂದು ಅಕಾಡಮಿಯನ್ನು ಸರಕಾರದಿಂದ ಗಿಟ್ಟಿಸಿಕೊಂಡಿತು. ಬ್ಯಾರಿ ಭಾಷೆಗೆ ಯಾಕೆ ಅಕಾಡಮಿ ನೀಡುವುದು? ಎಂದು ಕೇಳಿದವರೇ ಬ್ಯಾರಿಗಳ ಒಂದು ಕಾಲದ ಹೀನಾಯ ಸ್ಥಿತಿಗೆ ಕಾರಣರಾದವರು ಎನ್ನುವುದನ್ನು ನಾನಿಲ್ಲಿ ಪ್ರತ್ಯೇಕವಾಗಿ ವಿವರಿಸಬೇಕಾಗಿಲ್ಲ.
ಬ್ಯಾರಿ ಭಾಷೆಗೆ ಅಕಾಡಮಿ ನೀಡುವ ಮೂಲಕ 12 ಲಕ್ಷಕ್ಕೂ ಅಧಿಕ ಜನರಿರುವ ಒಂದು ಸಮುದಾಯಕ್ಕೆ ಆತ್ಮವಿಶ್ವಾಸ ತುಂಬುವ ಕೆಲಸವನ್ನು ಸರಕಾರ ಮಾಡಿದೆ. ಒಂದು ಕಾಲದಲ್ಲಿ ಅವಮಾನ, ಕೀಳರಿಮೆಯ ಬದುಕನ್ನು ಸವೆಸಿದ ಸಮುದಾಯಕ್ಕೆ ನ್ಯಾಯವನ್ನು ನೀಡುವ ಪ್ರಯತ್ನ ಇದಾಗಿದೆ. ಆದುದರಿಂದ ಬ್ಯಾರಿಗಳ ಸಂಭ್ರಮದಲ್ಲಿ ಕರಾವಳಿಯ ತುಳುವರು ಮಾತ್ರವಲ್ಲ ಇಡೀ ಕನ್ನಡಿಗರೇ ಪಾಲುಗೊಳ್ಳಬೇಕು. ಅವರಿಗೆ ಮಾರ್ಗದರ್ಶನವನ್ನು ನೀಡಬೇಕು. ಈ ಮೂಲಕ, ಬ್ಯಾರಿ ಸಮುದಾಯಕ್ಕೆ ಈವರೆಗೆ ಆದ ಅನ್ಯಾಯಕ್ಕೆ ಪಶ್ಚಾತ್ತಾಪ ಪಡಬೇಕು.








Priya basheer,
lekhana thumba ishtavayithu. 70 ra dashakada balika karavali ya byarigalige gulf samparka bandudoo ottu samajada belavanigege ondu pramukha karanavagirbeku. Shaikshanika, arthika vikasave `identity’ agathyakke karanavayithu. Ee vikasada adhyayana thumba kuthoohalakaravagide.
varadaraja chandragiri
ಬ್ಯಾರಿ ಜನಾಂಗಕ್ಕಾದ ಅವಮಾನಕ್ಕೆ ನನ್ನ ವಿಷಾದವಿದೆ. ಆದರೆ ಕರಾವಳಿಯ ಜನ ತಮಾಷೆ ಮಾಡೋದ್ರಲ್ಲಿ ನಂ. ೧!! ಇಲ್ಲಿ ಯಾರೂ ಯಾರನ್ನೂ ಬಿಡಲ್ಲ 🙁
ಶೆಟ್ರು ಕೊಂಕಣಿಗಳನ್ನು ಕೊಂಕಣಿಗಳು ಮೊಗವೀರರನ್ನು ಮೊಗವೀರರು ಭಟ್ಟರನ್ನು ಭಟ್ಟರು ಶೆಟ್ಟರನ್ನು ಹೀಗೇ ಮುಂದುವರೆಯುತ್ತದೆ ಅದು ! ಅಂದ ಹಾಗೆ ಇದೆಲ್ಲಾ ಶುರುವಾಗೋದು ಶಾಲೆಯಿಂದ!
‘ಆಯೆ ಮಲ್ಲ ಕೊಂಕಣೆ ‘ ಅಂದರೆ ‘ಅವನು ದೊಡ್ಡ ಜಿಪುಣ’ ಅಂತಲೇ ಅರ್ಥ.
ಏನೇ ಇರಲಿ ಬ್ಯಾರಿ ಜನಾಂಗದ ಬಗ್ಗೆ ಸಾಕಷ್ಟು ಮಾಹಿತಿ ನೀಡಿದ ನಿಮಗೆ ಧನ್ಯವಾದಗಳು.