ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನನ್ನು ಕಾಡಿದ ಸಿನಿಮಾ : ದುರಂತ ಪ್ರೇಮದ ದೃಶ್ಯ ಕಾವ್ಯ ಟೈಟಾನಿಕ್

ಹೆಚ್ ಎ ಪಾಟೀಲ್

ಇಂದಿನ ‘ಅವಧಿ’ಯನ್ನು ನೋಡುತ್ತಿದ್ದಾಗ ಒಂದು ಬರಹ ನನ್ನ ಕುತೂಹಲವನ್ನು ಕೆರಳಿಸಿತು. ಅದನ್ನು ಕ್ಲಿಕ್ಕಿಸಿ ನೋಡಿದಾಗ ನಿಮ್ಮನ್ನು ಕಾಡಿದ ಸಿನೆಮಾ ಕುರಿತು ಬರಯಿರಿ ಎಂದಿತ್ತು. ಹಾಗೆಯೆ ಓದುತ್ತ ಹೋದಂತ ಶಬ್ದಗಳ ಮಿತಿಯಿಲ್ಲ ಯಾವುದೇ ಸಿನೆಮಾ ಕುರಿತು ಎಷ್ಟೇ ಧೀರ್ಘವಾಗಿ ಬರೆಯಲು ಸ್ವಾತಂತ್ರ. ಈಗಿನ ಧಾವಂತದ ದಿನಗಳಲ್ಲಿ ಇದೊಂದು ಆಶ್ಚರ್ಯ ಹುಟ್ಟಿಸುವ ಕೋರಿಕೆ. ಎಲ್ಲ ಕೆಳ ಮಧ್ಯಮ ವರ್ಗದ ಜನಗಳಂತೆ ಸಿನೆಮಾ ಒಂದು ಕಾಲದಲ್ಲಿ ನನ್ನನ್ನು ಕಾಡಿದ್ದುಂಟು. ಸಿನೆಮಾಗಳನ್ನು ನೋಡಿದ್ದಕ್ಕಿಂತ ಓದಿದ್ದು ಕೇಳಿದ್ದು ಜಾಸ್ತಿ. ಶ್ರೀಮಂತ ಓದಿನ ಪ್ರಬುದ್ಧ ಬರವಣಿಗೆಯ ಸಾಹಿತಿಗಳನ್ನು ಒಳಗೊಂಡಿರುವ ‘ಅವಧಿ’ಗೆ ಒಬ್ಬ ಸಾಮಾನ್ಯ ಆಸಕ್ತ ಬ್ಲಾಗ್ ಓದುಗ ಬರೆಯ ಬಹುದೆ ಎನ್ನುವ ಪ್ರಶ್ನೆ ನನ್ನೆದುರು ನಿಂತಿತು. ಆದರೂ ಬರೆಯಲು ಒಂದು ಅವಕಾಶ ದೊರೆತಿರುವಾಗ ಯಾಕೆ ಒಂದು ಪ್ರಯತ್ನ ಮಾಡಬಾರದು ಎಂದು ಮನಸು ಹೇಳಿತು. ಅದರ ಪ್ರತಿಫಲವೆ ಈ ಬರಹ.
ಬರೆಯಲೇನೋ ನಿರ್ಧರಿಸಿಯಾಯಿತು ಆದರೆ ಯಾವ ಸಿನೆಮಾ ಕುರಿತು ಬರೆಯುವುದು ಕನ್ನಡ ಹಿಂದಿ ಮತ್ತು ಇಂಗ್ಲೀಷ್ ಎಂಬ ಪ್ರಶ್ನೆ ಬೃಹದಾಕಾರವಾಗಿ ನನ್ನೆದುರು ನಿಂತಿತು. ಇಂಗ್ಲೀಷ್ ವ್ಯಾಮೋಹ ಇಂದಿನ ಪ್ರತಿಷ್ಟೆಯ ಮತ್ತು ಅಗ್ಗಳಿಕೆಯ ವಿಷಯವಾಗಿರುವಾಗ ಇಂಗ್ಲೀಷ್ ಸಿನೆಮಾ ಕುರಿತು ಬರೆಯುವಾ ಎಂದು ನಿರ್ಧರಿ ಸಿದಾಗ ಹಾಲಿವುಡ್ ಚಿತ್ರಗಳ ಬೃಹತ್ತ ಮೆರವಣಿಗೆಯೆ ನನ್ನ ಮನದ ಮುಂದೆ ಸಾಗಿ ಬಂತು. ನಮ್ಮ ಭಾರತೀಯ ರಲ್ಲಿ ಒಂದು ನಂಬಿಕೆ ಧೃಢವಾಗಿದೆ. ಅದೇನೆಂದರೆ ಆಸ್ಕರ್ ಪ್ರಶಸ್ತಿ ಪಡೆದ ಚಿತ್ರಗಳೆಂದರೆ ನಮಗೆ ಏನೋ ಒಂದು ರೀತಿಯ ವ್ಯಾಮೋಹ ! ಈ ಮನಸ್ಥಿತಿಗೆ ನಾನೂ ಹೊರತಲ್ಲ. ಆಗ ಶುರುವಾಯಿತು ನೋಡಿ ಚಿತ್ರಗಳ ದಿಬ್ಬಣ. ಅವುಗಳಲ್ಲಿ ಕೆಲವೊಂದು ಚಿತ್ರಗಳು ನನ್ನ ಸ್ಮೃತಿ ಪಟಲದ ಹಾದು ಹೋದವು. ಅವುಗಳಲ್ಲಿ ಪ್ರಮುಖವಾದವುಗಳು ದಿ ಟೆನ್ ಕಮಾಂಡಮೆಂಟ್ಸ್, ದಿ ಬೈಬಲ್, ಜ್ಯೂಡಾ ಬೆನಹರ್, ದ ಬ್ರಿಡ್ಗ್ ಆನ್ ರಿವರ್ ಖ್ವಾಯ್, ಲಾರೆನ್ಸ್ ಆಫ್ ಅರೇಬಿಯಾ, ಡಾ.ಝಿವಾಗೊ, ದಿ ಗಾಂಧಿ ಮತ್ತು ಟೈಟಾನಿಕ್ ಚಿತ್ರಗಳು. ಇವುಗಳಲ್ಲಿ ನಾನು ಕೊನೆಗೆ ನೋಡಿದ ಚಿತ್ರ ಟೈಟಾನಿಕ್ ಆಗಿದ್ದು ಅದನ್ನು ಕುರಿತು ಬರೆಯಲು ಯೋಚಿಸಿದೆ.

ನಮ್ಮ ದೇಶದ ಎಲ್ಲ ಚಲನಚಿತ್ರ ಆಸಕ್ತರ ಕುತೂಹಲವಿರುವುದು ಯಾವ ಯಾವ ಹಾಲಿವುಡ್ ಇಂಗ್ಲೀಷ್ ಚಲನಚಿತ್ರಗಳು ಆಸ್ಕರ್ ಪ್ರಶಸ್ತಿಗೆ ಭಾಜನವಾಗುತ್ತವೆ ಎನ್ನುವುದು. ಅದು 1998 ನೇ ಇಸವಿ ಹಲವು ಚಿತ್ರಗಳು ಆಸ್ಕರ ಪ್ರಶಸ್ತಿಯ ರೇಸಿನಲ್ಲಿದ್ದವು. ಆದರೆ ಟೈಟಾನಿಕ್ ಚಿತ್ರದ ಬಗೆಗೆ ಒಂದು ರೀತಿಯ ವಿಶೇಷ ಕುತೂಹಲವಿತ್ತು. ಜುರಾಸಿಕ್ ಪಾರ್ಕ್ ಮತ್ತು ಸಿಂಡ್ಲರ್ಸ್ ಲೀಸ್ಟ್ ಚಿತ್ರಗಳ ಖ್ಯಾತಿಯ ಸ್ಟಿವನ್ ಸ್ಟೀಲ್ ಬರ್ಗ್ ಹೆಸರು ಮುಂಚೂಣಿ ಯಲ್ಲಿತ್ತು. ಆದರೆ ಅತಿ ಹೆಚ್ಚು ಆಸ್ಕರ್ ಪ್ರಶಸ್ತಿಗಳನ್ನು ಬಾಚಿದ್ದು ಟೈಟಾನಿಕ್ ಚಿತ್ರ. ಎಲ್ಲ ಕುತೂಹಲಿಗಳ ನೆಗೆ ನಿರೀಕ್ಷೆ ಮೀರಿ ಅದು ಗಳಿಸಿದ್ದು ಬರೋಬರಿ 11 ಆಸ್ಕರ್ ಪ್ರಶಸ್ತಿಗಳನ್ನ, ಅದು 1959 ರಲ್ಲಿ 11 ಆಸ್ಕರ್ ಗಳಿಸಿದ್ದ ‘ಬೆನಹರ್’ ಚಿತ್ರವನ್ನು ಸರಿಗಟ್ಟಿತ್ತು. ಜೇಮ್ಸ್ ಕ್ಯಾಮರೂನ್ ತಾನೂ ಬೆನಹರ್ ನಿರ್ಏಶಕ ವಿಲಿಯಂ ವೈಲರನಿಗೆ ಸರಿ ಸಮಾನನಾಗಿ ತಾನು ಸಾಧಿಸಿದ್ದೇನೆ ಎಂದು ಜಗತ್ತಿಗೆ ತೋರಿಸಿ ಕೊಟ್ಟ. ಆಗಲೆ ನಿರ್ಧಾರವಾಗಿ ಹೋಗಿತ್ತು ಟೈಟಾನಿಕ್ ಆ ವರೆಗೆ ಬಂದಿದ್ದ ಎಲ್ಲ ಹಾಲಿವುಡ್ ಚಿತ್ರಗಳ ಗಳಿಕೆಯ ದಾಖಲೆಯನ್ನು ಇದು ಮುರಿದು ಹಾಕು. ತ್ತದೆ ಎಂದು, ಹಾಗೆಯೆ ಆ ನಿರೀಕ್ಷೆ ನಿಜವಾಯಿತು ಕೂಡ. ಸುಮಾರು ಇನ್ನೂರು ಮಿಲಿಯನ್ ಅಮೇರಿಕನ್ ಡಾಲರ್ ಗಳ ಅಂದರೆ ನಮ್ಮ ಭಾರತೀಯ ಆಗಿನ ಲೆಖ್ಖದ ಪ್ರಕಾರ 800 ಕೋಟಿ ರೂಪಾಯಿಗಳ ವೆಚ್ಚದಲ್ಲಿ ತಯಾರಾದ ಈ ಚಿತ್ರ ಯಶಸ್ವಿ ಪ್ರದರ್ಶನಗೊಂಡು ಗಳಿಸಿದ್ದು ಬರೋಬರಿ 5000 ಕೋಟಿ ರೂಪಾಯಿಗಳು ಎಂದು ಪತ್ರಿಕೆಗಳಲ್ಲಿ ಓದಿದ ನೆನಪು. ಅಂದರೆ ಆ ಚಿತ್ರದ ಶೇಕಡಾವಾರು ಗಳಿಕೆ ಪ್ರತಿಶತ 625 ರಷ್ಟು. ಇನ್ನೂ ಯಶಸ್ವಿ ಪ್ರದರ್ಶನ ಕಾಣುತ್ತಿದ್ದ ಆ ಚಿತ್ರ ಇನ್ನೂ ಹೆಚ್ಚಿನ ಹಣ ಬಾಚಿದ್ದಿರಬಹುದು ಕೂಡ ಎಂಬ ಅನಿಸಿಕೆ ಆ ಕಾಲದ ಸತ್ಯ ಕೂಡ.
ಬೆನಹರ್ ಮತ್ತು ಟೈಟಾನಿಕ್ ಗಳಿಗೆ ಹಲವು ಸಾಮ್ಯತೆಗಳಿದ್ದವು. ಬೆನಹರ್ ಕಳೆದ ಶತಮಾನದ ಆರನೆ ದಶಕದ ಮಹಾನ್ ಐತಿಹಾಸಿಕ ಕಾವ್ಯವಾಗಿದ್ದರೆ ಟೈಟಾನಿಕ್ ಇಪ್ಪತ್ತನೆಯ ಶತಮಾನದ ಅಂತ್ಯದ ಮಹಾನ್ ಪ್ರೇಮ ಕಾವ್ಯವಾಗಿತ್ತು. ಅದು ಅನೇಕ ದಿನಗಳ ಕಾಲ ಚಿತ್ರ ಪ್ರೇಮಿಗಳನ್ನು ಕಾಡಿದ ತನ್ನ ಬಂಧನದಲ್ಲಿ ಹಿಡಿದಿಟ್ಟು ಕೊಂಡಿದ್ದ ದೃಶ್ಯ ಕಾವ್ಯವಾಗಿತ್ತು. ಬೆನಹರ್ ಚಿತ್ರದಿಂದ ಆ ಚಿತ್ರದ ನಾಯಕ ಚಾರ್ಲಟನ್ ಹೇಸ್ಟನ್ ಗಡಸುತನದ ಶೌರ್ಯದ ಸಂಕೇತವಾಗಿ ಚಿತ್ರ ರಸಿಕರ ಹೃದಯಕ್ಕೆ ಲಗ್ಗೆ ಹಾಕಿದ್ದರೆ, ಹೊಂಬಣ್ಣದ ಕೂದಲಿನ ಹೊಳಪಿನ ನೀಲಿ ಬಣ್ಣದ ಕಂಗಳ ಟೈಟಾನಿಕ್ ಹೀರೋ ಲಿಯೋನಾರ್ಡ್ ಡಿ ಕ್ಯಾಪ್ರಿಯೋ ಹೃದಯವಂತ ಯುವ ಪ್ರೇಮಿಯಾಗಿ ಚಿತ್ರ ರಸಿಕರ ಹೃದಯಕ್ಕೆ ಲಗ್ಗೆ ಇಟ್ಟಿದ್ದ. ಆದರೆ ಚಾರ್ಲಟನ್ ಹೇಸ್ಟನ್ ಅತ್ಯುತ್ತಮ ನಾಯಕ ನಟನೆಂದು 1959 ರಲ್ಲಿ ಆಸ್ಕರ್ ಪಡೆದಿದ್ದರೆ, 1998 ರಲ್ಲಿ ಲಿಯೋನಾರ್ಡ್ ಡಿ ಕ್ಯಾಪ್ರಿಯೋ ಅತ್ಯತ್ತಮ ನಾಯಕ ನಟ ಪ್ರಶಸ್ತಿಗೆ ಹೆಸರಿಸಲ್ಪಟ್ಟಿದ್ದ. ಕೇವಲ ಒಂದು ಮತದ ಅಂತರದಿಂದಾಗಿ ಆತನಿಗೆ ಆಸ್ಕರ್ ಪ್ರಶಸ್ತಿ ತಪ್ಪಿ ಹೋಗಿತ್ತು. ಆದರೆ ಡಿ ಕ್ಯಾಪ್ರಿಯೋ ಚಿತ್ರ ರಸಿಕರ ಮನ ಸೂರೆಗೊಂಡಿದ್ದ. ಅದಕ್ಕೂ ಮೊದಲು ಹಿಂದಿನ ವರ್ಷ ಸಹ ಆತ ‘ವಾಟ್ ಈಸ್ ಈಟಿಂಗ್ ಗಿಲ್ಬಟ್ಸ್ ಗ್ರೇಪ್ ಚಿತ್ರದ ನಟನೆಗಾಗಿ ಆಸ್ಕರ್ ಗೆ ಪ್ರಶಸ್ತಿಗೆ ಹೆಸರಿಸಲಪಟ್ಟಿದ್ದ. ಕೈಗೆಟುಕುವಷ್ಟು ಹತ್ತಿರಕ್ಕೆ ಎರಡು ಸಲ ಬಂದಿದ್ದ ಆಸ್ಕರ್ ಮಾಯಾ ಜಿಂಕೆ ಕಣ್ಣು ಮಿಟುಕಿಸಿ ಬೇರೆಯವರ ಪಾಲಾಗಿತ್ತು. ಆಗಷ್ಟೆ 24 ರ ತರುಣನಾಗಿದ್ದ ಆತ ಅಷ್ಟು ಮನಸಿಗೆ ಹಚ್ಚಿಕೊಂಡಂತೆ ಕಂಡು ಬಂದಿರಲಿಲ್ಲ. ಅದು ಬೆಳೆಯುವ ನಟನೊಬ್ಬನ ಪ್ರಮುಖ ಲಕ್ಷಣವಾಗಿತ್ತು. ಆತನ ಟೈಟಾನಿಕ್ ಚಿತ್ರವೊಂದರ ಅಭಿನಯವೆ ಸಾಕು ಆತ ಹಾಲುವುಡ್ ಚಿತ್ರ ಪ್ರಪಂಚದ ಅತಿರಥ ಮಹಾರಥ ನಟ ರಾಗಿದ್ದ ಗ್ರೆಾಗರಿ ಪೆಕ್, ಆ್ಯಂಟನಿ ಕ್ವಿನ್, ಓಮಾರ್ ಶಾರೀಫ್, ಅಲ್ ಪಸಿನೊ, ಕರ್ಕ್ ಡಗ್ಲಾಸ್, ಪೀಟರ್ ಊ ಟೂಲ್, ಫ್ರ್ಯಾಂಕ್ ಸಿನಾತ್ರಾ, ಸ್ಟೀಫನ್ ಬಾಯ್ಡ್ ಮತ್ತು ಹಂಫ್ರಿ ಬೊಗಾರ್ಟ್ ಮುಂತಾದವರ ಸಾಲಿಗೆ ಸೇರುತ್ತಾನೆ ಎಂದು ಸಿನೆಮಾ ವಿಮರ್ಶಕ ವಲಯದಿಂದ ಮೆಚ್ಚುಗೆಗಳಿಸಿದ್ದ. ಆದರೆ ಡಿ ಕ್ಯಾಪ್ರಿಯೋ ಟೈಟಾನಿಕ್ ಯಶಸ್ಸಿನ ಅಮಲನ್ನು ತಲೆಗೆ ಅಷ್ಟು ಏರಿಸಿ ಕೊಂಡಿರಲಿಲ್ಲ. ಆಸ್ಕರ್ ಪ್ರಶಸ್ತಿ ತನಗೆ ದೊರೆಯಲಿಲ್ಲವಂಬ ವಿಷಾದ ಎಂದೂ ಆತನನ್ನು ಕಾಡಲಿಲ್ಲ. ಅದು ಒಬ್ಬ ಸ್ಥಿತಪ್ರಜ್ಞ ನಟನ ಲಕ್ಷಣ ಜೊತೆಗೆ ಕಲಾಕಾರನೊಬ್ಬನ ಬೆಳವಣಿಗೆಯ ಲಕ್ಷಣ ಕೂಡ ಆಗಿತ್ತು.
1942ರ ಕಾಲದ ಯುವ ಪೀಳಿಗೆ ಹಂಫ್ರಿ ಬೊಗಾರ್ಟ್ ಮತ್ತು ಇನ್ಗ್ರೀಡ್ ಮರ್ಗಮನ್ ಅಭಿನಯದ ‘ಕಾಸಾ ಬ್ಲಾಂಕಾ’ ಚಿತ್ರವನ್ನು ಅಮರ ಪ್ರೇಮ ಕಾವ್ಯವೆಂದು ಆರಾಧಿಸಿದ್ದರೆ 1998 ರ ಯುವ ಪೀಳಿಗೆ ಲಿಯೋನಾರ್ಡ್ ಡಿ ಕ್ಯಾಪ್ರಿಯೋ ಮತ್ತು ಕೇಟ್ ವಿನ್ಸಲೇಟ್ ಅಭಿನಯದ ‘ಟೈಟಾನಿಕ್’ ತಮ್ಮ ಕಾಲದ ಅಮರ ಪ್ರೇಮ ಕಥಾನಕವೆಂದು ಆರಾಧಿಸಿದರು. ಸುಮಾರು 56 ವರ್ಷಗಳ ಧೀರ್ಘ ಕಾಲದ ನಂತರ ಮೂಡಿ ಬಂದ ಅದ್ಭುತ ಪ್ರೇಮ ಕಾವ್ಯ ಅದಾಗಿತ್ತು. ಟೈಟಾನಿಕ್ ಚಿತ್ರ ಬಿಡುಗಡೆಯ ನಂತರ ಬೆಳಗಾಗುವುದರೊಳಗೆ ಡಿ ಕ್ಯಾಪ್ರಿಯೋ ಅಸಂಖ್ಯಾತ ಯುವತಿ ಯರ ಆರಾಧ್ಯ ದೈವವಾದರೆ, ಕೇಟ್ ವಿನ್ಸಲೇಟ್ ಯು ವಕರ ಹೃದಯ ದೇವತೆಯಾಗಿ ಮಿನುಗಿದಳು. ಕೇಟ್ ಇಪ್ಪತ್ತನೆ ಶತಮಾನದ ಆಡ್ರಿ ಹೆಪ್ ಬರ್ನ್, ಇನ್ಗ್ರೀಢ೵ ಬರ್ಗಮನ್, ಸ್ಟನ್ನಿಂಗ್ ಬ್ಯಠಿ ಮರ್ಲಿನ್ ಮೆನ್ರೋ, ಚಿರ ಯೌವನೆ ಎಲಿಜಬೆತ್ ಟೇಲರ್, ಸುಂದರ ಕಣ್ಣುಗಳ ಜ್ಯೂಲಿ ಕ್ರೈಸ್ತ್ ಮತ್ತು ಇಟಾಲಿಯನ್ ಮೂಲದ ಸುಂದರಿ ಸೋಫಿಯಾ ಲಾರೆನ್ ರವರ ಸಾಲಿನಲ್ಲಿ ನಿಲ್ಲಬಲ್ಲಂತಹವಳು ಎಂದು ಪರಿಗಣಿಸಲ್ಪಟ್ಟಿದ್ದಳು. ಇಪ್ಪತ್ತು ಮತ್ತು ಇಪ್ಪತೊಂದನೆ ಶತಮಾನಗಳ ಅದ್ಭುತ ನಟ ನಟಿಯರ ಕೊಂಡಿಯಾಗಿ ಕೇಟ್ ಮತ್ತು ಕ್ಯಾಪ್ರಿಯೋ ಮೂಡಿ ಬಂದಿದ್ದರು. ಹಾಗೆ ನೋಡಿದರೆ ಕೇಟ್ ಅಂತಹ ಅದ್ಭುತ ಅಂದಗಾತಿಯೇನೂ ಆಗಿರಲಿಲ್ಲ. ಸ್ನಿಗ್ಧ ಸೌಂದರ್ಯದ ಸ್ವಲ್ಪ ಧಡೂತಿ ದೇಹದ ಆದರೆ ಸುಂದರ ದಂತ ಪಂಕ್ತಿಗಳನ್ನು ಹೊಂದಿದ ನಕ್ಕರೆ ಕೆನ್ನೆಯಲ್ಲಿ ಗುಳಿ ಬೀಳುವ ನಿರ್ಮಲ ನಗುವಿನ ಮಾದಕ ನಟಿ ಅವಳಾಗಿದ್ದಳು. ಟೈಟಾನಿಕ್ ರೋಸ್ ಡಾಸನ್ ಪಾತ್ರದಲ್ಲಿ ಅವಳು ತನ್ನನ್ನು ತಾನೇ ಆ ಪಾತ್ರವೆಂದು ಪರಿಭಾವಿಸಿಕೊಂಡು ನಟಿಸಿದ್ದಳು. ಅಂತಹಅವಕಾಶಗಳು ಕಲಾವಿದರ ಜೀವನದಲ್ಲಿ ಸಿಗುವುದು ಒಮ್ಮೆ ಮಾತ್ರ, ಆದರೆ ಕೇಟ್ ಅದನ್ನು ಸಮರ್ಥವಾಗಿ ಬಳಸಿ ಕೊಂಡಳು. ಡೀ ಕ್ಯಾಪ್ರಿಯೊ ಸಹ ಅಷ್ಟೆ ಜಾಕ್ ಡಾಸನ್ ಪಾತ್ರವನ್ನು ತನ್ನ ಅದ್ಭುತ ನಟನೆಯ ಮೂಲಕ ಅಜರಾಮರ ಗೊಳಿಸಿದ್ದಾನೆ.
*
ಈ ಟೈಟಾನಿಕ್ ಚಿತ್ರಕ್ಕೆ ಜೇಮ್ಸ್ ಕ್ಯಾಮರೂನನಿಗೆ ಪ್ರೇರಣೆ 1912 ರ ಎಪ್ರೀಲ್ 14 ರಾತ್ರಿ ಅಟ್ಲಾಂಟಿಕ್ ಮಹಾ ಸಾಗರದಲ್ಲಿ ನೀರ್ಗಲ್ಲು ಬಂಡೆಗೆ ಅಪ್ಪಳಿಸಿ ಟೈಟಾನಿಕ್ ಹೆಸರಿನ ಹಡಗು ಮುಳುಗಿದ ಘಟನೆ. ಚಿತ್ರದಲ್ಲಿ ಬರುವ ರೋಸ್ ಮತ್ತು ಜಾಕ್ ಡಾಸನ್ ರವರ ಪ್ರೇಮ ಕಥೆ, ಅದಕ್ಕೆ ಪೂರಕವಾಗಿ ಬರುವ ರೋಸ್ ತಾಯಿ, ರೋಸ್ ಳ ಭಾವಿ ಗಂಡನ ಪಾತ್ರದ ಕಾಲ್ ಹಾಕ್ಲಿ ಮತ್ತು ಇತರೆ ಪೂರಕ ಪಾತ್ರಗಳು ನಿರ್ಧೇಶಕ ಕ್ಯಾಮರೂನನ ಕಲ್ಪನೆಯ ಮೂಸೆಯಲ್ಲಿ ಮೂಡಿ ಬಂದ ಅದ್ಭುತ ಪಾತ್ರಗಳು. ಇದಕ್ಕೆ ಪೂರಕವಾಗಿ ಟೈಟಾನಿಕ್ ಹಡಗು ಮುಳುಗು ತ್ತಿದ್ದರೂ ಹಡಗಿನ ಚುಕ್ಕಾಣಿಯನ್ನು ಹಿಡಿದು ನಡೆಸಿದ ಕ್ಯಾಪ್ಟನ್ ಸ್ಮಿತ್ ಮತ್ತು ಸಿಬ್ಬಂದಿ ಹಡಗು ಮುಳುಗುವುದು ಖಚಿತವೆಂದು ತಿಳಿದರೂ ಕರ್ತವ್ಯಚ್ಯುತನಾಗಲು ಒಪ್ಪದೆ ತನ್ನ ಕಛೇರಿಯಿಂದ ಹೊರ ಬರದ ಹಡಗಿನ ವಿನ್ಯಾಸಕ ಥಾಮಸ್ ಆ್ಯಂಡ್ರೂಸ್, ಹಡಗು ಮುಳುಗುತ್ತಿದ್ದು ತಮ್ಮ ಸಾವು ಖಚಿವೆಂದು ತಿಳಿದಿದ್ದರೂ ಸಾವಿನ ಪರಿಧಿಯನ್ನು ದಾಟಲು ನುಗ್ಗದಿ ಜನ ಸಮೂಹವನ್ನು ನಜಿಯಂತ್ರಿಸಲಾಗದೆ ವಿಷಾದದಿಂದ ತನ್ನ ತಲೆಗೆ ತಾನೆ ಗುಂಡು ಹೊಡೆದು ಕೊಂಡು ಆತ್ಮಹತ್ಯೆ ಮಾಡಿಕೊಳ್ಳುವ ಹಡಗಿನ ಅಧಿಕಾರಿ ವಿಲಿಯಂ ಮರ್ಡೋಕ್, ತನ್ನ ಶ್ರೀಮಂತಿಕೆಯಿಂದ ಏನನ್ನೂ ಕೊಳ್ಳ ಬಲ್ಲೆನೆಂಬ ಅಹಮ್ಮಿನ ಸ್ವಾರ್ಥ ಕಾಲ್ ಹಾಕ್ಲಿ, ಮುಳುಗುತ್ತಿರುವ ಹಡಗಿನಲ್ಲಿ ಸ್ವಲ್ಪ ಸಮಯದಲ್ಲಿಯೆ ಸಾವು ಎಲ್ಲವನ್ನೂ ಕಬಳಿಸಲಿದೆ ಎಂಬ ಪರಿವೆಯೂ ಇಲ್ಲದೆ ತನ್ನ ತಂದೆ ತಾಯಿಗಳಿಂದ ತಪ್ಪಿಸಿಕೊಂಡು ದಿಕ್ಕೆಟ್ಟು ಅಳುತ್ತ ನಿಂತ ಮುಗ್ಧ ಬಾಲಿಕೆಯನ್ನು ಎತ್ತಿಕೊಂಡು ಜೀವ ರಕ್ಷಕ ಬೋಟಿನಲ್ಲಿ ಕೂಡ್ರಿಸಿ ಕೊಳ್ಳುವುದು ಇತ್ಯಾದಿ ಯಾಗಿ ಕಥೆಗೆ ಪೂರಕವಾಗುವಂತೆ ಪಾತ್ರಗಳನ್ನು ಸೃಷ್ಟಿಸಿ ದುಡಿಸಿ ಕೊಂಡಿರುವುದು ಕ್ಯಾಮರೂನನ ಪ್ರತಿಭೆಗೆ ಸಾಕ್ಷಿ.
ಟೈಟಾನಿಕ್ ತೆರೆಗೆ ತರುವಲ್ಲಿ ಕ್ಯಾಮರೂನ ವಹಿಸಿದ ಶ್ರದ್ಧೆ, ಪರಿಶ್ರಮ ಮತ್ತು ಕಲ್ಪನೆಗಳು ಇಲ್ಲಿ ಅದ್ಭುತವನ್ನೆ ಸೃಷ್ಟಿಸಿವೆ. ಕ್ಯಾಮರೂನ ಟೈಟಾನಿಕ್ ಹಡಗು ಮುಳುಗಿದ್ದ ಮೂಲ ಸ್ಥಳಕ್ಕೆ ಅನೇಕ ಬಾರಿ ಹೋಗಿ ಬಂದಿದ್ದಾನೆ. ಚಿತ್ರೀಕರಿಸಲು ಟೈಟಾನಿಕ್ ಹಡಗನ್ನು ಮರು ಸೃಷ್ಟಿಸಿದ್ದಾನೆ. ಮುಳುಗಿದ ಟೈಟಾನಿಕ್ ಹಡಗಿಗೆ ಕಂಪು ಕಾರ್ಪೆಟ್ ಒದಗಿಸಿದ್ದ ಕಂಪನಿಯಿಂದಲೆ ಟೈಟಾನಿಕ್ ಚಿತ್ರೀಕರಿಸುವ ವೇಳೆ ಕೆಂಪು ಕಾರ್ಪೆಟ್ ಪಡೆದು ಚಿತ್ರೀಕರಿಸಿದ್ದಾನೆ. ಹಡಗು ನೀರ್ಗಲ್ಲಿಗೆ ಅಪ್ಪಳಿಸಿದಾಗ ಐದು ವಾಟರ್ ಟೈಟ್ ಚೇಂಬರ್ ಗಳಿಗೆ ತೀವ್ರ ಪೆಟ್ಟು ಬಿದ್ದು ನೀರು ಒಳ ನುಗ್ಗುವುದನ್ನೂ ಹಾಗೆಯೆ ಆ ನೀರು ಹಡಗಿನ ಪ್ರತಿಯೊಂದು ಭಾಗಕ್ಕೂ ನುಸುಳುತ್ತ ಭೋರ್ಗರೆಯುತ್ತ ಅಪ್ಪಳಿಸಿ ಹಡಗನ್ನು ನುಚ್ಚು ನೂರು ಗೊಳಿಸುತ್ತ ಸಾಗುವದನ್ನು, ನೀರು ನುಗ್ಗುವ ಅಪಾಯವನ್ನು ಗ್ರಹಿಸಿ ನುಗ್ಗುತ್ತಿರುವ ನೀರಿನ ಮುಂದೆ ಓಡುವ ಇಲಿಗಳ ಗುಂಪು, ಹಡಗು ನೀರಿನಲ್ಲಿ ನಿಧಾನವಾಗಿ ಮುಳುಗುತ್ತ ನೀರು ಹಡಗಿನಲ್ಲಿ ತನ್ನ ಮಕ್ಕಳಿಗೆ ಕಥ ಹೇಳಿ ಅವುಗಳನ್ನು ಮಲಗಿಸುವ ತಾಯಿ, ಹಡಗಿನಲ್ಲಿ ಜೀವ ರಕ್ಷಕ ಬೋಟುಗಳ ಸಂಖ್ಯೆ ಕಡಿಮೆಯಿದ್ದು ಪ್ರಥಮ ದರ್ಜೆಯ ಪ್ರಯಾಣಿಕರನ್ನು ಸುರಕ್ಷಿತವಾಗಿ ಪಾರು ಮಾಡುವ ತರಾತುರಿಯಲ್ಲಿ ಮೂರನೆ ದರ್ಜೆಯ ಪ್ರಯಾಣಿಕರು ಹೊರಗೆ ಬಾರದಂತೆ ಡಕ್ ಗೆ ಬೀಗ ಹಾಕಿದಾಗ ತನ್ನ ಮಕ್ಕಳೊಡಿನೆ ಡಕ್ ನ ಬಾಗಿಲು ತೆಗೆಯುವುದನ್ನೆ ನಿರೀಕ್ಷಿಸುತ್ತ ನಿಂತ ತಾಯಿಗೆ ಆಕೆಯ ಚಿಕ್ಕ ಮಗಳು ಏಕೆ ಬೀಗ ಹಾಕಿದ್ದಾರೆ ಎಂದು ಪ್ರಶ್ನಿಸಿದಾಗ ಆ ತಾಯಿ ಅಷ್ಟೆ ಶಾಂತ ಸ್ವರದಲ್ಲಿ ಪ್ರಥಮ ದರ್ಜೆಯ ಗಣ್ಯ ವ್ಯಕ್ತಿಗಳನ್ನು ಸುರಕ್ಷಿತವಾಗಿ ಪಾರು ಮಾಡಿದ ನಂತರ ನಮ್ಮ ಡಕ್ ಬಾಗಿಲು ತೆಗೆಯುತ್ತಾರೆ ಎಂದು ಹೇಳುವ ತಾಯಿಯ ಪಾತ್ರವನ್ನು ಆಡಂಬರವಿಲ್ಲದೆ ಬಹಳಸರಳವಾಗಿ ಆದರೆ ಮಾರ್ಮಿಕವಾಗಿ ಚಿತ್ರಿಸಿದ್ದಾನೆ. ಬಡೆವ ಬಲ್ಲಿದನೆಂಬ ಬೇಧವಿಲ್ಲದೆ ಎಲ್ಲರನ್ನೂ ನುಂಗಲು ಸಾವು ತನ್ನ ಕರಾಳ ನಾಲಿಗೆಯನ್ನು ಚಾಚಿರುವ ವೇಳೆ ನಮ್ಮ ನಾಗರಿಕ ಪ್ರಪಂಚದ ವರ್ಗೀಕರಣ ಕ್ರಮವನ್ನು ವಿ. ಡಂಬನಕಾರಿಯಾಗಿ ತೋರಿಸಿದ್ದಾನೆ. ಅದನ್ನು ಮನವರಿಕೆ ಮಾಡಿ ಕೊಡುವುದೆ ಕ್ಯಾಮರೂನನ ಉದ್ದೇಶ. ಅದರಲ್ಲಿ ಆತ ಸಂಪೂರ್ಣವಾಗಿ ಯಶಸ್ವಿಯಾಗಿದ್ದಾನೆ.

ಟೈಟಾನಿಕ್ ನಿರೂಪಣೆಯಲ್ಲಿ ಕ್ಯಾಮರೂನ್ ಫ್ಲ್ಯಾಶ್ ಬ್ಯಾಕ್ ತಂತ್ರವನ್ನು ಅಳವಡಿಸಿ ಕೊಂಡಿದ್ದಾನೆ. ಈ ಕಥಾನಕದ ನಿರೂಪಣೆ ಪ್ರಾರಂಭವಾಗುವುದು ಅಟ್ಲಾಂಟಿಕ್ ಮಹಾ ಸಾಗರದಲ್ಲಿ ಮು|ಳುಗಿದ ಟೈಟಾನಿಕ್ ಹಡಿಗಿನಲ್ಲಿ ಇದೆ ಎನ್ನಲಾದ ಬೆಲೆ ಬಾಳುವ ವಜ್ರದ ನೆಕ್ ಲೇಸ್ ಪಡೆಯಲು ಬ್ಯಾಕ್ ಲೋವೆಟ್ ಎನ್ನುವ ನಿಧಿ ಶೋಧಕ ತನ್ನ ತಂಡದೊಂದಿಗೆ ಟೈಟಾನಿಕ್ ನ ಭಗ್ನ ಅವಶೇಷಗಳಲ್ಲಿ ಮೂರು ವರ್ಷಗಳಿಂದ ಹುಡುಕಾಟ ಪ್ರಾರಂಭಿಸಿರುತ್ತಾನೆ ಸಾಗರದ ತಳದಲ್ಲಿ ಅವಶೇಷಗಲಳೆಡೆಯಲ್ಲಿ ಹುಡುಕುತ್ತ ಸಾಗಿದಾಗ ಲೋವೆಟ್ ಕಣ್ಣಿಗೆ ಒಂದು ತಿಜೋರಿ ಕಂಡು ಬರುತ್ತದೆ. ಅದನ್ನು ಸಾಗರದ ತಳದಿಂದ ಮೇಲಕ್ಕೆ ತಂದಾಗ ಆತನ ತಂಢಕ್ಕೆ ನಿಧಿ ಸಿಕ್ಕಷ್ಟೆ ಸಂತೋಷವಾಗುತ್ತದೆ. ಆ ತಿಜೋರಿಯನ್ನು ಒಡೆದು ನೋಡಿದಾಗ ಅದರೊಳಗೆ ಸೇರಿ ಕೊಂಡಿದ್ದ ತಿಳಿ ಮಣ್ಣಿನ ರಾಶಿಯ ಒಳಗಿನಿಂದ ನೆನದು ತೊಯ್ದು ತೊಪ್ಪೆಯಾದ ಕರೆನ್ಸಿ ನೋಟುಗಳ ಕಟ್ಟುಗಳು ದೊರೆಯುತ್ತವೆ. ಆದರೆ ಅವರು ನಿರೀಕ್ಷಿಸಿದ ವಜ್ರದ ನೆಕ್ಲೆಸ್ ದೊರೆಯುವುದಿಲ್ಲ. ಆ ತಿಜೋರಿಯಲ್ಲಿ ಫೋಟೋ ಆಲ್ಬಂ ತರಹದ ಚಿತ್ರಗಳ ಸಂಗ್ರಹದ ಕಟ್ಟು ದೊರೆಯುತ್ತದೆ. ಅದನ್ನು ನೀರಿನಿಂದ ತೊ|ಳೆದಾಗಅದರಲ್ಲಿ ದೊರೆತ ಒಂದು ಚಿತ್ರದಲ್ಲಿ ತನ್ನ ಕತ್ತಿನಲ್ಲಿ ನೆಕ್ಲೆಸ್ ಧರಿಸಿ ನಗ್ನಾವಸ್ಥೆಯಲ್ಲಿ ಮಲಗಿದ ಒಬ್ಬ ಯುವತಿಯ ಚಿತ್ರ ಅದಾಗಿರುತ್ತದೆ. ಲೋವೆಟ್ ಹುಡುಕುತ್ತಿದ್ದ ವಜ್ರದ ನೆಕ್ಲೆಸ್ ಗೂ ಆ ಯುವತಿ ಧರಿಸಿದ್ದ ನೆಕ್ಲೆಸ್ಸಿಗೂ ಹೊಂದಿಕೆಯಿರುತ್ತದೆ. ಈ ಬಗ್ಗೆ ಮಾಹಿತಿಯಿರುವವರ ಸಹಾಯವನ್ನು ನಿಧಿ ಶೋಧಕ ಲೋವೆಟ್ ತಂಡದವರು ಕೇಳಿರುತ್ತಾರೆ. ಟೆಲಿವಿಜನ್ನಿನಲ್ಲಿ ಪ್ರಸಾರವಾಗುತ್ತಿದ್ದ ಅದನ್ನು ತನ್ನ ಮನೆಯಲ್ಲಿ ಮಣ್ಣಿನ ಪಾತ್ರೆಯ ತಯಾರಿಕೆಯಲ್ಲಿ ತೊಡಗಿದ್ದ ಹಣ್ಣು ಹಣ್ಣು ಮುದುಕಿ ರೋಸ್ ಡೇವಿಸ್ ಬುಕೆಟರ್ ನೋಡುತ್ತಾಳೆ. ಈ ಬಗ್ಗೆ ಲೋವೆಟ್ ತಂಡದವರೊಂದಿಗೆ ತನ್ನ ಮೊಮ್ಮಗಳ ಮುಖೇನ ಟೆಲಿಫೋನ್ ಸಂಪರ್ಕ ಬೆಳೆಸುತ್ತಾಳೆ. ಆ ತಂಡದವರು ರೋಸ್ ಳನ್ನು ಹೆಲಿಕ್ಯಾಪ್ಟರಿನಲ್ಲಿ ಟೈಟಾನಿಕ್ ಹಡಗು ಮುಳುಗಿದ ಸ್ಥಳಕ್ಕೆ ಕರೆ ತರುತ್ತಾರೆ.
ಅಲ್ಲಿ ಟೈಟಾನಿಕ್ ಹಡಗಿನ ಭಗ್ನ ಅವಶೇಷಗಳ ಎಡೆಯಿಂದ ಹುಡುಕಿ ತೆಗೆದ ವಸ್ತುಗಳು ಇರುತ್ತವೆ. ಒಂದು ದುಂಡಗಿನ ಆಕಾರದ ಸೀಳುಬಿಟ್ಟ ಕೈಗನ್ನಡಿ, ಒಂದು ಹಿಸರು ಬಣ್ಣದ ಪತಂಗದ ಆಕಾರದ ಹೇರ್ ಕ್ಲಿಪ್ ಮತ್ತು ಬರಿ ನೆಕ್ಲೆಸ್ ಧರಿಸಿ ಮಲಗಿದ ನಗ್ನ ಯುವತಿಯ ಚಿತ್ರಗಳಲಳಿದ್ದು ಆ ಚಿತ್ರ 103 ವರ್ಷದ ವೃದ್ಧೆ ರೋಸಳ ಗಮನ ಸೆಳೆಯುತ್ತದೆ. ಅವಳ ಕುತೂಹಲ ಭರಿತ ವರ್ತನೆ ನಿಧಿ ಶೋಧಕ ತಂಡದ ಗಮನ ಸೆಳೆಯುತ್ತದೆ. ಅವಳಿಂದ ಏನಾದರೂ ಮಾಹಿತಿ ದೊರೆಯ ಬಹುದು ಎಂದು ಕುತೂಹಲಭರಿತರಾಗಿ ಆಕೆಯ ಸುತ್ತ ಸೇರುತ್ತಾರೆ. ಸ್ವತಃ ಟೈಟಾನಿಕ್ ಹಡಗಿನಲ್ಲಿ ಪ್ರಯಾಣಿಸಿ ಘೋರ ಸಾವಿನಅಂಚಿಗೆ ಹೋಗಿ ಬದುಕಿ ಬಂದ ರೋಸ್ ತನ್ನ ನೆನಪು ಗಳಿಗೆ ಜೀವ ತುಂಬುತ್ತ ಟೈಟಾನಿಕ್ ಪಯಣವನ್ನು ನೆನೆಯುತ್ತ ಹೋಗುತ್ತಾಳೆ. ಆಕೆ ಸ್ವಗತವಾಗಿ ಹೇಳಿಕೊಳ್ಳ ತೊಡಗುತ್ತಾಳೆ. ಈ ಘಟನೆ ನಡೆದು 84 ವರ್ಷಗಳು ಉರುಳಿವೆ ಈಗಲೂ ನನಗೆ ಅದರ ಹೊಸ ಬಣ್ಣದ ವಾಸನೆ ಮೂಗಿನಲ್ಲಿ ಕಟ್ಟಿದಂತಿದೆ. ಇನ್ನೂ ಯಾರೂ ಉಪಯೋಗಿಸಿರದ ಚೀನಾ ಪಿಂಗಾಣಿ ವಸ್ತುಗಳು, ಯಾರೂ ಉಪಯೋಗಿಸದೆ ಇದ್ದ ಹಾಸಿಗೆ ಹೊದಿಕೆಗಳು ‘ಟೈಟಾನಿಕ್ ಕನಸುಗಳ ಹಡಗು’ ಎಂದು ಕರೆಯಲ್ಪಟ್ಟಿತ್ತು. ಅದು ಹಾಗೆಯೆ ಇತ್ತು ನಿಜಕ್ಕೂ ಹಾಗೆಯೆ ಇತ್ತು. ರೋಸ್ ತನ್ನ ಗತ ಕಾಲದ ನೆನಪಿಗೆ ಜಾರುತ್ತಾ|ಳೆ. ಕ್ಯಾಮರೂನನ ಅಮರ ಪ್ರೇಮದ ಕಲ್ಪನೆ ಅಲ್ಲಿಂದ ಪ್ರಾರಂಭವಾಗುತ್ತದೆ.

*

ಬ್ರಿಟನ್ನಿನ ಸೌತಾಂಪ್ಟನ್ನಿನ ಬಂದರಿನಲ್ಲಿ ಎಲ್ಲರ ಕನಸಿನ ಟೈಟಾನಿಕ್ ಲಿವರ್ ಪೂಲ್ ಎಂಬ ದೊಡ್ಡ ಬರಹದ ನಾಮ ಫಲಕ ಹೊತ್ತ ಬೃಹತ್ತಾದ ಹಡಗು ತನ್ನ ಮೊದಲ ಯಾನಕ್ಕೆ ತಯಾರಾಗಿ ನಿಂತಿರುತ್ತದೆ. ಅದರಲ್ಲಿ ಪ್ರಯಾಣಿಸಲು ಉತ್ಸುಕರಾಗಿ ಓಡಾಡುತ್ತ ಎಲ್ಲ ಪ್ರಾಯದ ಎಲ್ಲ ಅಂತಸ್ತಿನ ಜನ ಹರ್ಷದಿಂದ ಟೈಟಾನಿಕ್ ಏರಲು ಸಿದ್ಧರಾಗಿ ನಿಂತಿರುತ್ತಾರೆ. ಶ್ರೀಮಂತ ಕಾಲ್ ಹಾಕ್ಲಿ ತನ್ನ ಸಿರಿವಂತಿಕೆಯ ಎಲ್ಲ ಆಡಂಬರ ಮತ್ತು ಆಢ್ಯತೆಯೊಂದಿಗೆ ತನ್ನ ಭಾವಿ ವದು, ಆಕೆಯ ತಾಯಿ ಮತ್ತು ಆಳು ಕಾಳುಗಳೊಂದಿಗೆ ಟೈಟಾನಿಕ್ ಏರಲು ಬರುತ್ತಾನೆ. ಹರ್ಷಚಿತ್ತ ಮುಗ್ಧೆ ರೋಸ್ ಕುತೂಹಲಗೊಂಡು ಎಲ್ಲವನ್ನೂ ಬೆರಗುಗಣ್ಣುಗಳಿಂದ ನೋಡುತ್ತ ಹಡಗನ್ನು ಪ್ರವೇಶಿಸುತ್ತಾಳೆ. ಅಲ್ಲಿಗೆ ಸ್ವಲ್ಪ ದೂರದಲ್ಲಿ ಸಾಮಾನ್ಯ ಕ್ಲಬ್ ಒಂದರಲ್ಲಿ ಜಾಕ್ ಡಾಸನ್ ಇಸ್ಪೀಟು ಜೂಜಿನ ಆಟದಲ್ಲಿ ತೊಡಗಿದ್ದಾನೆ ಎಲ್ಲವನ್ನೂ ಸೋತ ಆತನ ಪ್ರತಿ ಜೂಜುಗಾರ ತಾನು ಕೊಂಡಿದ್ದ ಟೈಟಾನಿಕ್ ಹಡಗಿನ ಸಾಮಾನ್ಯ ದರ್ಜೆಯಲ್ಲಿ ಪಯಣಿಸಲು ಕೊಂಡಿದ್ದ ಟಿಕೆಟ್ ಜಾಕನಿಗೆ ಸೋಲುತ್ತಾನೆ. ಇದನ್ನು ನೋಡಿದ ಕ್ಲಬ್ಬಿನ ಉಸ್ತುವಾರಿಯನ್ನು ನೋಡಿ ಕೊಳ್ಳುವವ ಜಾಕನಿಗೆ ಇನ್ನು ಹದಿನೈದು ನಿಮಿಷಗಳಲ್ಲಿ ಟೈಟಾನಿಕ್ ಹೊರಡಲಿರುವ ವಿಷಯವನ್ನು ತಿಳಿಸುತ್ತಾನೆ. ಉತ್ಸಾಹದ ಚಿಲುಮೆಯಾದ ಯುವಕ ಜಾಕ್ ತನ್ನ ಇನ್ನೊಬ್ಬ ಸ್ನೇಹಿತನೊಂದಿಗೆ ಟೈಟಾನಿಕ್ ಹಡಗನ್ನು ಏರುತ್ತಾನೆ. ಅಲ್ಲಿ ಎಲ್ಲಿ ಯಾರನ್ನು ನೋಡಿದರೂ ಎಲ್ಲರ ಮಖದಲ್ಲ ಟೈಟಾನಿಕ್ ಹಡಗಿನಲ್ಲಿ ಪ್ರಯಾಣಿಸಲು ಅವಕಾಶ ಹೆಮ್ಮೆ ಇರುತ್ತದೆ. ಟೈಟಾನಿಕ್ ತನ್ನ ಸಂಭ್ರಮದ ಮೊದಲ ಪಯಣವನ್ನು ಪ್ರಾರಂಭಿಸುತ್ತದೆ.
ಜಾಕ್ ತನ್ನ ತನ್ನ ಬರ್ತ್ ನಲ್ಲಿ ಲಗೇಜ್ ಬ್ಯಾಗನ್ನು ಎಸೆದು ಡಕ್ಕಿಗೆ ಬರು.ತ್ತಾನೆ. ವಿಸ್ತಾರವಾಗಿ ದಶದಿಕ್ಕು ಗಳಿಗೆ ವ್ಯಾಪಿಸಿದ ಅಟ್ಲಾಂಟಿಕ್ ಸಾಗರದ ಮೇಲೆ ಹೆಮ್ಮೆಯಿಂದ ಸಾಗುತ್ತಿದ್ದ ಟೈಟಾನಿಕ್ ಹಡಗಿನ ಮುಂಭಾಗದಲ್ಲಿ ಸುತ್ತಲೂ ರಕ್ಷಣೆಗೆಂದು ಹಾಕಿದ್ದ ಕಬ್ಬಿಣದ ಸರಳುಗಳ ಮೇಲೆ ನಿಂತು ತನ್ನೆರಡು ಕೈಗಳನ್ನು ವಿಸ್ತಾರವಾಗಿ ಎಡ ಬಲಕ್ಕೆ ಎತ್ತಿ ನಾನು ಜಗತ್ತಿನ ರಾಜ ಎಂದು ಕೂಗುತ್ತಾನೆ. ಅಲೆಮಾರಿ ಜಾಕ್ ಹಡಗಿನ ಡಕ್ ಮೆಲೆ ಅನಂತಾಕಾಶ ದೆಡೆಗೆ ಮುಖ ಮಾಡಿ ಅಲ್ಲಿ ಮಿನುಗುತ್ತಿರುವ ಅಸಂಖ್ಯ ನಕ್ಷತ್ರಗಳನ್ನು ನೋಡುತ್ತ ಸುಂದರ ರಾತ್ರಿಯ ನೀರವತೆ ಯಲ್ಲಿ ಲೀನವಾಗಿರುತ್ತಾನೆ. ಶ್ರೀಮಂತಿಕೆಯ ದುರಾಶೆಯ ತಾಯಿ ತನ್ನ ಸ್ವಭಾವಕ್ಕೆ ಹೊಂದಿಕೆಯಾಗದ ಭಾವಿ ಪತಿ ಹಾಕ್ಲಿಯ ವರ್ತನೆಯಿಂದ ಬೇಸತ್ತ ರೋಸ್ ಆತ್ಮಹತ್ಯೆ ಮಾಡಿ ಕೊಳ್ಳಬೇಕೆನ್ನುವ ಉದ್ದೇಶದಿಂದ ಹಡಗಿನ ಡಕ್ಕಿನ ತುದಿಗೆ ಬರುತ್ತಾಳೆ ಸಂಧಭ೵ವನ್ನು ಗ್ರಹಿಸಿದ ಡಕ್ ಮೇಲೆ ಮಲಗಿದ್ದ ಜಾಕ್ ನೀರಿಗೆ ಹಾರುವ ಯತ್ನವನ್ನು ಕೈಬಿಟ್ಟು ಮರಳಿ ಬಾ ಎಂದು ರೋಸ್ ಳನ್ನು ಕರೆಯುತ್ತಾನೆ. ಸಿಟ್ಟುಗೊಂಡ ಆಕೆ ನನ್ನನ್ನು ತಡೆಯಲು ನೀನ್ಯಾರು ? ನನ್ನ ಹತ್ತಿರ ಬರಬೇಡ ಎನ್ನುತ್ತಾಳೆ ಸಂಧಭ೵ವನ್ನು ಜಾಕ್ ನಿಭಾಯಿಸುವ ರೀತಿ ಪ್ರೇಕ್ಷಕರ ಮೆಚ್ಚುಗೆಯನ್ನು ಪಡೆಯುವಂತೆ ಕ್ಯಾಮರೂನ್ ನಿರ್ದೇಶಿಸಿದ್ದಾನೆ. ಸಿಗರೇಟನ್ನು ಸಾಗರಕ್ಕೆ ಎಸೆಯುವ ನೆಪದಲ್ಲಿ ರೋಸ್ ಅನುಮತಿ ಯನ್ನು ಪಡೆದು ಅವಳನ್ನು ಸಮೀಪಿಸುತ್ತಾನೆ. ಆಕೆಯನ್ನು ಉದ್ದೇಶಿಸಿ ಏ ಹುಡುಗಿ! ಈ ಸಾಗರದಲ್ಲಿ ಅಸಂಖ್ಯ ಶಾರ್ಕಗಳಿವೆ ಮೊಸಳೆಗಳಿವೆ ಅವು ನಿನ್ನನ್ನು ಹರಿದು ತಿಂದು ಬಿಡುತ್ತವೆ ಮೇಲಾಗಿ ನೀರು ತುಂಬಾ ತಣ್ಣಗಿದೆ ಏನು ಮಾಡುತ್ತಿ ಆಲೋಚಿಸು ಎಂದು ಬಗೆ ಬಗೆಯಾಗಿ ಆಕೆಗೆ ವಾಸ್ತವದ ಮಾಡಿ ಕೊಡುತ್ತಾನೆ. ಜಾಕ್ ಧ್ವನಿಯ ಮಾರ್ದ ವತೆಗೆ ಸಭ್ಯ ನಡೆಗೆ ಮನಸೋತ ಆಕೆ ಆತ್ಮಹತ್ಯೆ ಪ್ರಯತ್ನವನ್ನು ಕೈ ಬಿಡುತ್ತಾಳೆ ಜಾಕ್ ಕೈ ಹಿಡಿದು ಆಕೆಯನ್ನು ಹಡಗಿನೊಳಕ್ಕೆ ಎಳೆದು ಕೊಳ್ಳುವ ವೇಳೆ ಆಕೆಯ ಕಾಲು ಜಾರಿ ಜಾಕ್ ಕೈ ಹಿಡಿದು ನೇತಾಡ ತೊಡಗಿದ ಆಕೆ ಭಯ ದಿಂದ ಕಂಪಿಸಿ ಕೂಗಿ ಕೊಳ್ಳುತ್ತಾಳೆ. ಆಕೆಗೆ ಧೈರ್ಯ ನೀಡಿ ಜಾಕ್ ಆಕೆಯನ್ನು ಹಡಗಿನೊಳಕ್ಕೆ ಎಳೆದು ಕೊಂಡಾಗ ಆಯ ತಪ್ಪಿದ ಇಬ್ಬರೂ ಡಕ್ಕಿನ ಮೇಲೆ ಬೀಳುತ್ತಾರೆ. ಆಕೆ ಕೂಗಿ ಕೊಂಡದ್ದನ್ನು ಕೇಳಿದ ಕಾಲ್ ಹಾಕ್ಲಿ ಮತ್ತು ಆಕೆಯ ತಾಯಿ ಹಾಗೂ ಹಡಗಿನ ಸಿಬ್ಬಂದಿ ಸ್ಥಳಕ್ಕೆ ಬರುತ್ತಾರೆ. ಬಟ್ಟೆ ಅಸ್ತವ್ಯಸ್ತಗೊಂಡ ಸ್ಥಿತಿಯಲ್ಲಿದ್ದ ರೋಸ್ ಳನ್ನು ನೋಡಿದ ಅವರು ಜಾಕ್ ಆಕೆಯ ಮೇಲೆ ಅತ್ಯಾಚಾರಕ್ಕೆ ಪ್ರಯತ್ನಿಸಿರಬಹುದೆಂದು ಭಾವಿಸಿ ಅವನನ್ನು ಖಂಡಿಸಿ ಹಡಗಿನ ಸಿಬ್ಬಂದಿ ವರ್ಗಅವನ ಮೇಲೆ ಕ್ರಮಕ್ಕೆ ಮುಂದಾದಾಗ, ಜಾಕ್ ಅಹವಾಲನ್ನು ಯಾರೂ ಕೇಳದ ಸ್ಥಿತಿ ಯಲ್ಲಿರುವಾಗ ರೋಸ್ ಆತನ ರಕ್ಷಣೆಗೆ ಬಂದು ಅದೊಂದು ಅಕಸ್ಮಿಕ ಘಟನೆಯೆಂದು ವಿವರಸುತ್ತಾಳೆ.

ಅದಕ್ಕೆ ಪ್ರತಿಯಾಗಿ ಆ ರಾತ್ರಿಯ ಔತಣ ಕೂಟಕ್ಕೆ ಜಾಕ್ ಆಹ್ವಾನ ಪಡೆಯುತ್ತಾನೆ. ಸುಸಂಕೃತ ಸಮಾಜದ ನಯ ನಾಜೂಕಿನ ನಡತೆಗಳ ಪರಿಚಯವಿಲ್ಲದಅಮಾಯಕ ಮುಗ್ಧ ಜಾಕ್ ಗೆ ಸನ್ನೆ ಹಾಗೂ ಪಿಸು ಮಾತುಗಳ ಮೂಲಕ ಡಿನ್ನರ್ ವೇಳೆ ಅನುಸರಿಸುವ ವಿಧಾನಗಳ ಬಗ್ಗೆ ಪಿಸು ನುಡಿಯುತ್ತಿದ್ದ ಸಂಧರ್ಭವನ್ನು ನೆನಪಿಸಿಕೊಳ್ಳುತ್ತ ರೋಸ್ ತನ್ನ್ನು ಸುತ್ತುವರಿದು ಕುಳಿತಿದ್ದ ಬ್ರ್ಯಾಕ್ ಲೋವೆಟ್ ಮತ್ತು ಆತನ ತಂಡಕ್ಕೆ ವಿವರಿಸುತ್ತ ಆ ರಾತ್ರಿ ಡಿನ್ನರ್ ಬರುವ ವೇಳೆ ಸ್ವಲ್ಪ ಜಾಕ್ ಅಧೈರ್ಯವುಳ್ಳವನಾಗಿದ್ದರೂ ಧೈರ್ಯಗೆಟ್ಟಿರಲಿಲ್ಲವೆಂದು ಅಭಿಮಾನದಿಂದನುಡಿಯು ತ್ತಾಳೆ. ಡಿನ್ನರ್ ವೇಳೆ ಪಾನೀಯವನ್ನು ಮಿತವಾಗಿ ನಾಜೂಕಾಗಿ ಕುಡಿಯುವ ವಿಧಾನ ಗೊತ್ತಿಲ್ಲದ ಜಾಕ್ ಪಾನೀಯ ಭರಿತ ಗ್ಲಾಸನ್ನು ಎತ್ತಿ ಒಂದೇ ಗುಟುಕಿಗೆ ಮುಗಿಸಿ ಬಿಡುತ್ತಾನೆ. ಪ್ಲೇಟಿನಲ್ಲಿದ್ದ ಬನ್ ಎತ್ತಿಕೊಂಡು ತಿನ್ನಲು ಪ್ರಾರಂಭಿಸುತ್ತಾನೆ. ರೋಸ್ ಕೊಡುವ ಸಲಹೆ ಸೂಚನೆಗಳು ಯಾವುವೂ ಅಲ್ಲಿ ಲೆಖ್ಖಕ್ಕೆ ಬರದೆ ಆಕೆ ಸ್ವಲ್ಪ ಮುಜುಗರ ವನ್ನು ಅನುಭವಿಸುವಂತಾದರೂ, ಆತನ ನಿಷ್ಕಲ್ಮಷ ನಡುವಳಿಕೆ ಆಕೆಯಲ್ಲಿ ಅನುಕಂಪವನ್ನು ಹುಟ್ಟಿಸುತ್ತದೆ. ಮರದಿನ ಹಗಲು ವೇಳೆ ಜಾಕ್ ಡಕ್ಕಿನ ಮೇಲೆ ಡ್ರಾಯಿಂಗ್ ಪೇಪರ್ ಮೇಲೆ ಸ್ಕೆಚ್ ಮಾಡುತ್ತ ಕುಳಿತ ವೇಳೆ ಅಲ್ಲಿಗೆ ಬರುವ ರೋಸ್ ಕುತೂಹಲಗೊಂಡು ಆ ಸ್ಕೆಚ್ ಪುಸ್ತಕವನ್ನು ಪಡೆದು ನೋಡುತ್ತ ಹೋಗುತ್ತಾಳೆ. ಅದರಲ್ಲಿ ಮಗುವನ್ನು ಅಪ್ಪಿ ಕೊಂಡು ನಿಂತಿರುವ ತಂದೆ, ಮಗುವಿಗೆ ಹಾಲೂಡಿಸುತ್ತಿರುವ ತಾಯಿ ಮತ್ತು ವಿವಿಧ ಭಂಗಿಗಳಲ್ಲಿ ಸ್ಕೆಚ್ ಮಾಡಿದ ಹೆಣ್ಣಿನ ಚಿತ್ರಗಳನ್ನು ನೋಡುತ್ತ ಜಾಕ್ ಕಡೆಗೆ ಪ್ರಶ್ನಾರ್ಥಕ ನೋಟ ಬೀರುತ್ತಾಳೆ. ಅವಳ ಮನೋಗತವನ್ನು ಗ್ರಹಿಸಿದ ಜಾಕ್ ನಿಸ್ಸಂಕೋಚವಾಗಿ ಎಲ್ಲವನ್ನೂ ವಿವರಿಸುತ್ತ ಮುಖ ಮುಚ್ಚಿಕೊ|ಂಡು ಬೆನ್ನ ಹಿಂದೆ ಕೈಗಳನ್ನು ಚಾಚಿ ಮಲಗಿದ ಹೆಣ್ಣಿನ ಚಿತ್ರದ ಬಗೆಗೆ ವಿವರಿಸುತ್ತ ಆ ಚಿತ್ರದ ರೂಪದರ್ಶಿ ಒಬ್ಬಳು ವೇಶ್ಯೆಯೆಂದು ಆಕೆಯ ನೀಳವಾದ ಸುಂದರ ಕೈಗಳು ಮತ್ತು ಬೆರಳುಗಳು ತನ್ನನ್ನು ಆಕರ್ಷಿಸಿದ್ದು ಕೈಗಳಿಗೆ ಪ್ರಾಧಾನ್ಯತೆಯನ್ನು ನೀಡಿ ಆ ಚಿತ್ರ ಬಿಡಿಸಿರುವುದಾಗಿ ಮುಚ್ಚು ಮರೆಯಿಲ್ಲದೆ ವಿವರಿಸುತ್ತಾನೆ. ಆತನ ನಿಷ್ಕಲ್ಮಷ ಮುಕ್ತ ನಡವಳಿಕೆಗೆ ಮನಸೋತ ರೋಸ್ ಮಾನಸಿಕವಾಗಿ ಜಾಕನಿಗೆ ಹತ್ತಿರವಾಗುತ್ತ ಹೋಗುತ್ತಾಳೆ. ತನ್ನ ಸಿರಿವಂತಿಕೆ ಮತ್ತು ಸ್ಥಾನ ಮಾನಗಳ ಬಲ ದಿಂದ ಆಕೆಯನ್ನು ಗೆಲ್ಲಲು ಆಕೆಯ ಭಾವಿ ಪತಿ ಕಾಲ್ ಹಾಕ್ಲಿ ಪ್ರಯತ್ನಿಸಿ ಇಪ್ಪತ್ತೆರಡು ಕ್ಯಾರೆಟ್ಟಿನ ನೀಲಿ ಬಣ್ಣದ ವಜ್ರದ ಹರಳಿನ ನೆಕ್ಲೆಸನ್ನು ರೋಶ೵ ಸಳಿಗೆ ನೀಡುತ್ತಾನೆ. ಆದರೆ ಕೋಮಲ ಮನದ ತನ್ನ ಭಾವಿ ವಧುವಿನ ಹೃದಯವನ್ನು ಅರಿಯದ ಹಾಕ್ಲಿ ಅವಳ ಮನದಾಳದಿಂದ ಮರೆಯಾಗುತ್ತ ಸಾಗುತ್ತಾನೆ. ಚಿತ್ರ ಪ್ರೇಕ್ಷಕರನ್ನು ತನ್ನೊಳಗೆ ಸೆಳೆದು ಕೊಳ್ಳುತ್ತ ಮುಂದುವರಿಯುತ್ತ ಹೋಗುತ್ತದೆ.
ರೋಸ್ ಆ ರಾತ್ರಿ ಜಾಕ್ ಡಾಸನ್ನನನ್ನು ತನ್ನ ಚಿತ್ರವನ್ನು ಬಿಡಿಸಲು ತನ್ನ ಖಸಗಿ ಕೋಣೆಗೆ ಆಹ್ವಾನಿಸುತ್ತಾಳೆ. ರೋಸ್ ಕುಳಿತು ಕೊಳ್ಳಲು ಅನುಕೂಲವಾಗುವ ರೀತಿಯಲ್ಲಿ ಸೋಫಾವನ್ನು ಇರಿಸಿ ದಿಂಬುಗಳನ್ನು ಎಡ ಮತ್ತು ಬಲ ಬದಿಗಳಲ್ಲಿ ಹೊಂದಿಸಿ ಹೊಂದಿಸಿ ಇಟ್ಟು ಸುಮಾರು ಅಂತರದಲ್ಲಿ ಡ್ರಾಯಿಂಗ್ ಶೀಟ್ ಹಿಡಿದುಕೊಂಡು ಪೆನ್ಸಿಲ್ಲನ್ನು ಹೆರೆದು ಅ|ಣಿಗೊಳಿಸಿ ಕೊಳ್ಳುತ್ತ ಕುಳಿತಿರುತ್ತಾನೆ. ಆಗ ತನ್ನ ಡ್ರೆಸ್ಸಿಂಗ್ ರೂಮಿನಿಂದ ಕಪ್ಪು ಬಣ್ಣದ ಗೌನು ಮತ್ತು . ಮೇಲು ಹೊದಿಕೆಯನ್ನು ಹೊದ್ದ ರೋಸ್ ಬರುತ್ತಾಳೆ. ಅವಳ ಸ್ನಿಗ್ಧ ಸೌಂದರ್ಯ ಮತ್ತು ನಿಂತಿರುವ ಭಾವ ಭಂಗಿಯನ್ನು ನೋ|ಡಿ ಗರ ಬಡಿದಂತವ ನಾಗುತ್ತಾನೆ. ನಂತರ ಸಾವರಿಸಿಕೊಂಡು ಸೋಫಾ ಮೇಲೆ ಚಿತ್ರ ರಚನೆಗೆ ಅನುಕೂಲವಾಗುವ ರೀತಿಯ ಭಂಗಿಯಲ್ಲಿ ಕುಳಿತು ಕೊಳ್ಳುವಂತೆ ಸೂಚಿಸುತ್ತಾನೆ. ಮೇಲು ಹೊದಿಕೆ ಮತ್ತು ಗೌನನ್ನು ಕಳಚಿ ವಿವಸ್ತ್ರಳಾದ ರೋಸ್ ಳನ್ನು ನೋಡಿ ಒಂದು ಕ್ಷಣ ವಿಚಲಿತನಾದ ಜಾಕ್ ತಕ್ಷಣ ಸಾವರಿಸಿಕೊಂಡು ಸೋಫಾ ಮೇಲೆ ದಿಂಬುಗಳಿಗೆ ಒರಗಿ ಮಲಗಿದ ಭಂಗಿಯಲ್ಲಿ ಪವಡಿಸುವಂತೆ ಸೂಚಿಸುತ್ತಾನೆ. ಆಕೆಯ ಕತ್ತಿನಲ್ಲಿ ಕಾಲ್ ಹಾಕ್ಲಿ ಕೊಟ್ಟ ನೀಲಿ ಬಣ್ನಧ ವಜ್ರದ ನೆಕ್ಲೆಸ್ ಬಿಟ್ಟರೆ ಮತ್ತೇನೂ ಇರುವುದಿಲ್ಲ. ಆ ಸೂಕ್ಷ್ಮ ಸನ್ನೆವೇಶವನ್ನು ಕ್ಯಾಮರೂನ್ ಚಿತ್ರೀಕರಿಸಿದ ನೈಪುಣ್ಯತೆಯ ರೀತಿಗೆ ಪ್ರೇಕ್ಷಕ ತಲೆದೂಗಲೆ ಬೇಕಾಗುತ್ತದೆ. ಹಿತ ಮಿತವಾಗಿ ಕೇಟ್ ಳನ್ನು ಪರದೆಯ ಮೇಲೆ ಕ್ಯಾಮರೂನ್ ತೋರಿಸಿದ್ದಾನೆ. ತುಂಡು ಲಂಗ ಧರಿಸಿದ ಹೆಣ್ಣು ಪರದೆಯ ಮೇಲೆ ಕಾಣಿಸಿ ಕೊಂಡರೆ ಸಾಕು ಸೀಟಿ ಮತ್ತು ವಿಚಿತ್ರ ಕೂಜನಗಳಿಂದ ಸ್ವಾಗತಿಸುವ ಪ್ರೇಕ್ಷಕರನ್ನು ಕಾಣುವ ನಾವು ಮೇಲ್ಕಂಡ ದೃಶ್ಯ ತೆರೆಯ ಮೇಲೆ ಮೂಡಿ ಬಂದಾಗ ತುಂಬಿದ ಥಿಯೆಟರ್ ನಲ್ಲಿ ಒಂದೇ ಒಂದು ಕೂಗು ಮತ್ತು ಸೀಟಿಗಳು ನಮಗೆ ಕೇಳಿ ಬರುವುದಿಲ್ಲ. ಯಾಕೆಂದರೆ ಅಲ್ಲಿ ಯಾವ ಕ್ಷಣದಲ್ಲೂ ಅಶ್ಲೀಲ ಭಾವ ಬಾರದಂತೆ ಕ್ಯಾಮರೂನ್ ಆ ದೃಶ್ಯವನ್ನು ಕಲಾತ್ಮಕವಾಗಿ ನವಿರಾಗಿ ಚಿತ್ರೀಕರಿಸಿದ್ದಾನೆ. ಇದು ಕ್ಯಾಮರೂನ್ ನಿರ್ದೇಶನದ ಮೇಲೆ ಸಾಧಿಸಿದ ಹಿಡಿತವನ್ನು ತೋರಿಸುತ್ತದೆ. ತನ್ನೆದುರು ತನ್ನೆಲ್ಲ ಸೌಂದರ್ಯವನ್ನು ತೆರೆದಿಟ್ಟು ತೆರೆದಿಟ್ಟು ಚಿತ್ರ ರಚನೆಗೆ ಪೂರಕವಾದ ಭಂಗಿಯಲ್ಲಿ ಮಲಗಿದ ರೋಸ್ ಳನ್ನು ನೋಡಿ ವಿಚಲಿತನಾಗದೆ ಅವಳ ಚಿತ್ರವನ್ನು ಬಿಡಿಸುತ್ತಾನೆ. ಆತನ ಸುಸಂಸ್ಕೃತ ನಡವಳಿಕೆ ರೋಸ್ ಮನವನ್ನು ಗೆಲ್ಲುತ್ತದೆ ಅದರಂತೆ ಪ್ರೇಕ್ಷಕರನ್ನೂ ಸಹ. ಜಾಕ್ ಬಿಡಿಸಿದ ತನ್ನ ಚಿತ್ರವನ್ನು ನೋಡಿದ ರೋಸ್ ಅದನ್ನು ತನ್ನ ಖಾಸಗಿ ಕೋಣೆಯಲ್ಲಿರುವ ತಿಜೋರಿ ಯಲ್ಲಿ ಭದ್ರವಾಗಿ ಇಡುತ್ತಾಳೆ.
ನಂತರ ರೋಸ್ ಮತ್ತು ಜಾಕ್ ಡಾಸನ್ ಪರಸ್ಪರ ಮಾನಸಿಕವಾಗಿ ಹತ್ತಿರವಾಗುತ್ತ ಹೋಗುತ್ತಾರೆ. ಈ ವಿಷಯ ತಿಳಿದ ಕಾಲ್ ಹಾಕ್ಲಿ ರೋಸ್ ಳನ್ನು ಪ್ರಶ್ನಿಸಿ ವ್ಯಂಗ್ಯವಾಗಿ ಮಾತನಾಡಿ ಆಕೆಯ ಕೆನ್ನೆಗೆ ಬಾರಿಸುತ್ತಾನೆ. ರೋಸ್ ಅವಮಾನದಿಂದ ಕುದ್ದು ಹೋಗುತ್ತಾಳೆ ವಿಷಯದ ವಾಸನೆಯನ್ನು ಸೂಕ್ಷ್ಮವಾಗಿ ಗ್ರಹಿಸಿದ ರೋಸ್ ಳ ತಾಯಿ ಏಕಾಂತದಲ್ಲಿ ಮಗಳನ್ನು ಕರೆದು ಜಾಕ್ ಬಗೆಗೆ ಗಟ್ಟಿಯಾಗಿ ಪ್ರಶ್ನಿಸಿ ಆತನಿಗೆ ಏನು ಇದೆ ? ಅವನೊಬ್ಬ ಅಲೆಮಾರಿ ಚಿತ್ರಕಾರ ಜೊತೆಗೆ ನೆಲೆ ಇಲ್ಲದವ ನಿನ್ನನ್ನು ಸರಿಯಾಗಿ ನೋಡಿ ಕೊಳ್ಳುವನೆ ? ನಿನಗಾಗಿ ನಾನು ಏನೆಲ್ಲ ಕಷ್ಟ ಪಟ್ಟಿದ್ದೇನೆ, ತಿಳಿದುಕೋ ಹಾಕ್ಲಿಯೆ ನಿನ್ನ ಗಂಡ ಎಂದು ವಾಸ್ತವ ಸ್ಥಿತಿಯನ್ನು ಮನಗಾಣಿಸುತ್ತಾಳೆ ತಾಯಿಯ ಹಿತವಚನಕ್ಕೆ ಕಟ್ಟು ಬಿದ್ದ ರೋಸ್ ಪ್ರಯತ್ನ ಪೂರ್ವಕವಾ?ಗಿ ಜಾಕ್ ನನ್ನು ಮರೆಯಲು ಪ್ರಯತ್ನಿಸುತ್ತಾಳೆ.ಅಷ್ಟರಲ್ಲಾಗಲೆ ತನಗರಿಯದಂತೆ ರೋಸ್ ಳನ್ನು ಪ್ರೀತಿಸಲು ತೊಡಗಿದ್ದ ಜಾಕ್ ಆಕೆಯನ್ನು ಏಕಾಂತದಲ್ಲಿ ಭೇಟಿಯಾಗಿ ತಾನು ಆಕೆಯನ್ನು ಪ್ರೀತಿಸುತ್ತಿರುವ ವಿಷಯವನ್ನು ರೋಸ್ ಳಿಗೆ ಹೇಳುತ್ತಾನೆ. ಜಾಕ್ ನನ್ನು ತಿರಸ್ಕರಿಸಲಾಗದೆ ಹಾಕ್ಲಿಯನ್ನು ಒಪ್ಪದೆ ತಾಯಿಯನ್ನು ಬೇಸರಿಸಬಾರದೆಂಬ ಗೊಂದಲದಲ್ಲಿದ್ದ ರೋಸ್ ತಾನು ಜಾಕ್ ನನ್ನು ಪ್ರೀತಿಸುವುದು ಸಾಧ್ಯವಿಲ್ಲವೆಂದು ನುಡಿಯುತ್ತಾಳೆ. ಈ ಘಟ್ಟದಲ್ಲಿ ಒಂದು ದೃಶ್ಯವನ್ನು ನಿರ್ದೇಶಕ ಎಷ್ಟು ಸಾಂಧರ್ಭಿಕ ವಾಗಿ ಕಥೆಗೆ ತಿರುವು ಕೊಡಲು ಬಳಸಿದ್ದಾನೆಂದರೆ ಜಾಕನ ಪ್ರೇಮ ಸ್ರಸ್ತಾಪವನ್ನು ತಿರಸ್ಕರಿಸಿ ಬಂಧ ರೋಸ್ ಅನ್ಯಮನಸ್ಕಳಾಗಿ ತನ್ನ ತಾಯಿಯೊಡನೆ ಭೋಜನ ಕೂಟದಲ್ಲಿ ಕುಳಿತಾಗ ಆಕೆಯ ಮನ ಅನತಿ ದೂರದಲ್ಲಿ ಟೇಬಲ್ ಮುಂದೆ ಕುಳಿತ ಸಣ್ಣ ಮಗು ಮತ್ತು ಅದರೆ ತಾಯಿಯಡೆಗೆ ಹರಿಯುತ್ತದೆ. ಆ ತಾಯಿ ತನ್ನ ಮಗುವಿಗೆ ಸರಿಯಾಗಿ ಕುಳಿತುಕೋ ವಸ್ತ್ರವನ್ನು ತೊಡೆಯ ಮೇಲೆ ಹೀಗೆ ಹರಡಿಕೊ, ಫೋರ್ಕನ್ನು ಕೈಯಲ್ಲಿ ಹೀಗೆ ಹಿಡಿದುಕೋ ಎಂದು ಮುಂತಾಗಿ ಶಿಷ್ಟಾಚಾರವನ್ನು ಕಲಿಸುವುದನ್ನು ನೋಡುತ್ತಾಳೆ. ಜಾಕ್ ಡಾಸನ್ ಮತ್ತು ಕಾಲ್ ಹಾಕ್ಲಿಯವರ ಪೈಕಿ ಯಾರನ್ನು ಆಯ್ದು ಕೊಳ್ಳುವುದು ಎಂಬ ಗೊಂದಲದಲ್ಲಿ ಬಿದ್ದ ರೋಸ್ ಮಗುವಿಗೆ ತಾಯಿ ಕಲಿಸುತ್ತಿದ್ದ ಶಿಷ್ಟಾಚಾರವನ್ನು ನೋಡಿ ಒಂದು ವೇಳೆ ತಾನು ಕಾಲ್ ಹಾಕ್ಲಿಯನ್ನು ವರಿಸಿದರೆ ಆತನ ಶಿಷ್ಟಾಚಾರದ ಒತ್ತಡಗಳಿಗೆ ಮಣಿದು ಆತನ ಕೈಗೊಂಬೆಯಾಗಿ ಬದುಕ ಬೇಕಾಗುತ್ತದೆ ಎನ್ನುವುದನ್ನು ಗ್ರಹಿಸಿದ ರೋಸ್ ಸಿರಿವಂತನಲ್ಲದಿದ್ದರೂ ತನ್ನನ್ನು ಗೌರವಿಸುವ ಮತ್ತು ಪ್ರೀತಿಸುವ ಯಾವುದೆ ನಿರ್ಭಂಧ ಹೇರದ ಜಾಕ್ ನನ್ನು ನೆನೆದು ರೋಸ್ ಮನಸ್ಸು ಸ್ವಾತಂತ್ರವನ್ನು ಬಯಸಿ ಜಾಕ್ ಡಾಸನ್ ಕಡೆಗೆ ವಾಲುವುದನ್ನು ನಿರ್ದೇಶಕ ಬಹಳ ಅರ್ಥಗರ್ಭಿತವಾಗಿ ನವಿರಾಗಿ ಚಿತ್ರೀಕರಿಸಿದ್ದಾನೆ. ತಕ್ಷಣ ಡೈನಿಂಗ್ ಟೇಬಲ್ ನಿಂದ ಎದ್ದ ರೋಸ್ ಹಡಗಿನ ಮೇಲ್ಭಾಗದ ಡಕ್ ಮೇಲೆ ಇದ್ದ ಜಾಕ್ ಬಳಿ ಓಡಿ ಬಂದು ನಾನು ನನ್ನ ಮನಸನ್ನು ಬದಲಿಸಿದ್ದೇನೆ ಎಂದು ತಿಳಿಸುತ್ತಾಳೆ. ರೋಸ್ ಮನಗೆದ್ದ ಸಂತಸದಲ್ಲಿ ಜಾಕ್ ಆಕೆಯನ್ನ ಹಡಗಿನ ಮುಂಚೂಣಿಗೆ ಕಟಾಂಜನದ ಹತ್ತಿರ ಕರೆದೊಯ್ಯುತ್ತಾನೆ. ಪ್ರರಸ್ಪರರ ಪ್ರೀತಿ ಗೆದ್ದ ಸಂತಸದಲ್ಲಿದ್ದ ಇಬ್ಬರೂ ಮುಳುಗಿದ್ದಾರೆ. ಜಾಕ್ ರೋಸ್ ಗೆ ಕಟಾಂಜನಕ್ಕೆ ಅಳವಡಿಸಿದ ಕಬ್ಬಿಣದ ಸರಳುಗಳನ್ನು ಏರಿ ನಿಲ್ಲುವಂತೆ ಸೂಚಿಸುತ್ತಾನೆ. ಹಡಗಿನ ಎತ್ತರ ಮತ್ತು ನೀರಿನ ಆಳವನ್ನು ನೋಡಿ ರೋಸ್ ಒಂದು ಕ್ಷಣ ಹಿಂಜರಿಯುತ್ತಾಳೆ. ಜಾಕ್ ಆಕೆಗೆ ಧೈರ್ಯ ನೀಡುತ್ತಾನೆ. ತನ್ನ ಮನಗೆದ್ದ ಜಾಕ್ ಪ್ರೋತ್ಸಾಹಿಸುತ್ತಿರುವಾಗ ಯಾಕಾಗಬಾರದು? ಜಾಕ್ ಸಹಾಯದಿಂದ ಡಕ್ ನ ಮುಂಭಾಗದ ಕಟಾಂಜನವನ್ನು ಏರಿ ನಿಲ್ಲುತ್ತಾಳ ಆಕೆಯ ಹಿಂಭಾಗದಲ್ಲಿ ಆಕೆಗೆ ಆಸರೆಯಾಗಿ ಜಾಕ್ ನಿಲ್ಲುತ್ತಾನೆ. ಎದುರುಗಡೆ ಸುಧೀರ್ಘವಾಗಿ ಸುತ್ತಲೂ ಅಂತ್ಯವೆ ಕಾಣದಂತೆ ವಿಸ್ತಾರಕ್ಕೆ ಹರಡಿ ಕೊಂಡಿದ್ದ ನೀಲಿ ಸಮುದ್ರ ಮೇಲೆ ದೃಷ್ಟಿ ಹಾಯಿಸಿದರೆ ಅನಂತ ಆಕಾಶ, ದೂರ ದೂರಕೆ ದಿಟ್ಟಿಸಿದರೆ ಸಾಗರ ಮತ್ತು ಆಕಾಸಗಳು ಮಿಳಿತ ಗೊಂಡಂತೆ ಕಾಣುತ್ತಿವೆ. ರೋಸ್ ಳ ಯೌವನ ಜಾಕ್ ಮನಗೆದ್ದ ಹರುಷ ತನ್ನ ವೇಗವನ್ನು ವೃದ್ಧಿಸಿಕೊಂಡು ಅಟ್ಲಾಂಟಿಕ್ ಸಾಗರದಲ್ಲಿ ಸಾಗುತ್ತಿರುವ ಟೈಟಾನಿಕ್ ಹಡಗು, ಧೈರ್ಯ ತುಂಬುತ್ತ ತನಗೆ ಆಸರೆಯಾಗಿ ನಿಂತಿರುವ ಜಾಕ್, ಸಂತಸದ ಉನ್ಮಾದದಲ್ಲಿ ರೋಸ್ ಮುಕ್ತವಾಗಿ ನಗುತ್ತಾಳೆ ಕೂಗುತ್ತಾಳೆ, ಆಕೆಯ ಸಂತಸದಲ್ಲಿ ಜಾಕ್ ಸಹ ಪಾಲ್ಗೊಳ್ಳುತ್ತಾನೆ ಎಂತಹ ರಸಮಯ ಗಳಿಗೆ ಅದು ! ನಿರ್ದೇಶಕ ಕ್ಯಾಮರೂನನ ಅದ್ಭುತ ಪರಿಕಲ್ಪನೆಗೆ ಯಾರು ಬೆರಗಾಗದೆ ಇರಲು ಸಾಧ್ಯ?
ರೋಸ್ ಮತ್ತು ಜಾಕ್ ರ ಸುತ್ತಾಟವನ್ನು ಗಮನಿಸಿದ ಹಾಕ್ಲಿಯ ಬಂಟ ಆ ವಿಷಯವನ್ನು ಹಾಕ್ಲಿಯ ಗಮನಕ್ಕೆ ತರುತ್ತಾನೆ. ಸುಂದರಿ ರೋಸ್ ತನ್ನ ಕೈ ತಪ್ಪುತ್ತಿರುವುದನ್ನು ಊಹಿಸಿದ ಹಾಕ್ಲಿ ತನ್ನ ಮನಸಿನ ಸ್ಥಿಮಿತವನ್ನು ಕಳೆದು ಕೊಳ್ಳುತ್ತಾನೆ ಎಲ್ಲರ ಮೇಲೆ ಹರಿ ಹಾಯುತ್ತಾನೆ. ಅದಾಗಲೆ ರೋಸ್ ಹಾಕ್ಲಿಯ ವಲಯದಿಂದ ತಪ್ಪಿಸಿಕೊಂಡು ಜಾಕ್ ಹೃದಯವನ್ನು ಸೇರಿಯಾಗಿರುತ್ತದೆ. ತನ್ನ ಬಂಟನಿಗೆ ರೋಸ್ ಚಲನ ವಲನದ ಬಗ್ಗೆ ಗಮನಿಸಲು ತಿಳಿಸುತ್ತಾನೆ. ಆ ರಾತ್ರಿ ರೋಸ್ ಜಾಕ್ ನನ್ನು ತನ್ನ ಖಾಸಗಿ ರೂಮಿಗೆ ಆಹ್ವಾನಿಸುತ್ತಾ|ಳೆ. ಅವರಿಬ್ಬರ ಮಾತು ಕತೆಗಳನ್ನು ಆಲಿಸಿದ ಹಾಕ್ಲಿಯ ಬಂಟ ಅವರ ಜಾಡನ್ನು ಅರಸಿ ಬರುತ್ತಿರುವುದನ್ನು ನೋಡಿದ ರೋಸ್ ಜಾಕ್ ನೊಂದಿಗೆ ತನ್ನ ರೂಮಿನಿಂದ ಪಲಾಯನ ಮಾಡುತ್ತಾಳೆ. ಹಾಕ್ಲಿಯ ಹದ್ದಿನ ಕಣ್ಣಿಂದ ತಪ್ಪಿಸಿ ಕೊಳ್ಳಲು ರೋಸ್ ಜಾಕ್ ಕೈ ಹಿಡಿದುಕೊಂಡು ಮುಕ್ತವಾಗಿ ನಗುತ್ತ ತಪ್ಪಿಸಿ ಕೊಳ್ಳುತ್ತ ಹಡಗಿನ ಎಲ್ಲ ಭಾಗಗಳನ್ನು ಸುತ್ತುತ್ತ ಹಡಗಿನ ಎಂಜಿನ್ ಇರುವ ಭಾಗವನ್ನು ದಾಟಿ ನಿರ್ಜನವಾಗಿದ್ದ ಸರಕು ಸಂಗ್ರಹಣೆಯ ಜಾಗಕ್ಕೆ ಬರುತ್ತಾರೆ ಅಲ್ಲಿದ್ದ ಕಾರೊಂದರಲ್ಲಿ ಇಬ್ಬರೂ ಸೇರುತ್ತಾರೆ ಅವರಿಬ್ಬರ ಆತ್ಮಗಳು ಧನ್ಯತೆಯನ್ನು ಪಡೆಯುತ್ತವೆ. ಅವರನ್ನು ಅರಸುತ್ತ ಬಂದ ಹಾಕ್ಲಿಯ ಬಂಟ ಮತ್ತು ಹಡಗಿನ ರಕ್ಷಣಾ ಸಿಬ್ಬಂದಿ ಹಡಗಿನ ಯಂತ್ರಾಲಯದಲ್ಲಿ ನಾವಿಕ ವರ್ಗದವರನ್ನು ಕೇಳುತ್ತಾರೆ. ಅವರು ಸರಕು ಸಂಗ್ರಹಣೆಯ ಕೋಣೆಯಡೆಗೆ ಕೈಮಾಡಿ ತೋರಿಸುತ್ತಾರೆ. ಎಲ್ಲರೂ ಅಲ್ಲಿಗೆ ಬರುತ್ತಾರೆ. ಕಾರಿನ ಬಾಗಿಲು ತೆಗೆದು ನೋಡುತ್ತಾರೆ. ಆದರೆ ಹಕ್ಕಿಗಳು ಹಾರಿ ಹೋಗಿರುತ್ತವೆ ವಿಷಯ ತಿಳಿದ ಹಾಕ್ಲಿ ವ್ಯಗ್ರನಾಗುತ್ತಾನೆ. ಅಷ್ಟರಲ್ಲಾಗಲೆ ಕನಸಿನ ಹಡಗು ಟೈಟಾನಿಕ್ ಒಂದು ಬೃಹತ್ತಾದ ನೀರ್ಗಲ್ಲಿಗೆ ಅಪ್ಪಳಿಸಿ ದುರಂತ ಸಂಭವಿಸಿ ಯಾಗಿರುತ್ತೆ. ಹಾಕ್ಲಿಯ ಬಂಟ ಮತ್ತು ಹಡಗಿನ ಸಿಬ್ಬಂದಿ ರೋಸ್ ಮತ್ತು ಜಾಕ್ ರನ್ನು ರೋಸ್ ಳ ಖಾಸಗಿ ಕೊಠಡಿಗೆ ಕರೆ ತರುತ್ತಾರೆ. ಜಾಕ್ ಮೇಲೆ ವಜ್ರದ ನೆಕ್ಲೆಸ್ ಹಾರದ ಕಳುವಿನ ಅಪವಾದವನ್ನು ಹೊರಿಸಲಾಗುತ್ತದೆ. ರೋಸ್ ಜಾಕ್ ಏನೂ ಕದ್ದಿಲ್ಲವಂದು ತಾನು ಆತನ ಜೊತೆಗೆ ಇದ್ದೆನೆಂದು ಹೇಳುತ್ತಾಳೆ ಆಕೆಯ ಮಾತಿಗೆ ಯಾರೂ ಗಮನ ಕೊಡುವುದಿಲ್ಲ. ಬೇಕಾದರೆ ತನ್ನನ್ನ್ನು ತಲಾಶ ಮಾಡಿರಿ ತಾನು ನಿರಪರಾಧಿ ಎಂದು ಹೇಳುತ್ತಾನೆ. ಅಷ್ಟರಲ್ಲಾಗಲೆ ಕಾಕ್ಲಿಯ ಬಂಟ ಜಾಕ್ ನ ಕೋಟಿನ ಜೋಬಿಗೆ ರೋಸ್ ಳ ನೀಲಿ ವರ್ಣಧ ವಜ್ರದ ಹರಳಿನ ನೆಕ್ಲೆಸ್ ನ್ನು ಹಾಕಿಯಾಗಿರುತ್ತದೆ. ಇದು ಹಾಕ್ಲಿ ಮತ್ತು ಆತನ ಬಂಟನನ್ನು ಬಿಟ್ಟು ಇನ್ನಾರ ಗಮನಕ್ಕೂ ಬರುವುದಿಲ್ಲ, ಹಡಗಿನ ರಕ್ಷಣಾ ಸಿಬ್ಬಂದಿ ಜಾಕ್ ನನ್ನು ಆರೋಪಿಗಳ ಸಲ್ ಗೆ ಒಯ್ದು ಒಂದು ಪೈಪ್ ಗೆ ಹ್ಯಾಂಟ್ ಕಫ್ ಹಾಕಿ ಕೂಡಿ ಹಾಕುತ್ತಾರೆ.
ಆಗಲೆ ಕನಸಿನ ಹಡಗು ಟೈಟಾನಿಕ್ಕಿನ ಕಪ್ತಾನ್ ಸಹಾಯಕ್ಕಾಗಿ ವೈರ್ ಲೆಸ್ ಮೂಲಕ ಸಂದೇಶ ಕಳಿಸಿರುತ್ತಾನೆ, ಮತ್ತು ಸಹಾಯ ಒದಗಿ ಬರಲು ಕನಿಷ್ಟ ನಾಲ್ಕು ಗಂಟೆಗಳ ಸಮಯ ಬೇಕಿರುತ್ತದೆ. ಒಂದು ಗಂಟೆಯ ಅವಧಿಯಲ್ಲಿ ಹಡಗು ಮುಳುಗಲಿದೆ ಎಂಬ ಸಂಗತಿ ತಿಳಿದು ಬರುತ್ತದೆ. ಎಲ್ಲ ಜೀವ ರಕ್ಷಕ ಬೋಟುಗಳನ್ನು ನೀರಿಗೆ ಬಿಡುವ ಮತ್ತು ಪ್ರಯಾಣಿಕರಿಗೆ ತೇಲುಗವಚ ತೊಡಿಸುವ ಕ್ರಿಯೆ ಪ್ರಾರಂಭವಾಗುತ್ತದೆ. ಕಾಲ್ ಹಾಕ್ಲಿ, ರೋಸ್ ಮತ್ತು ಆಕೆಯ ತಾಯಿ ಅಲ್ಲಿ ನೆರೆದ ಎಲ್ಲರೊಂದಿಗೆ ಜೀವ ರಕ್ಷಕ ಬೋಟ್ ಹತ್ತಲು ಅಣಿಯಾಗಿ ಕಾತುರದಿಂದ ಕಾಯುತ್ತಿರುತ್ತಾರೆ. ರೋಸ್ ಳಿಗೆ ಬಂದಿಯಾಗಿ ಆ ಹಡಗಿನ ಕೆಳಗಿನ ಕೋಣೆಯಲ್ಲಿ ಇರಿಸಲ್ಪಟ್ಟ ಜಾಕ್ ನೆನಪಿಗೆ ಬರುತ್ತಾನೆ. ಆತನನ್ನು ಬಿಟ್ಟು ಹೋಗಲು ಆಕೆಯ ಮನ ಒಪ್ಪುವುದಿಲ್ಲ. ಆಕೆಯು ಕುಳಿತಿದ್ದ ಬೋಟು ನೀರಿಗಿಳಿಯಲು ಪ್ರಾರಂಭಿಸುತ್ತಿದ್ದಂ ತೆ ರೋಸ್ ಮರಳಿ ಹಡಗಿಗೆ ನೆಗೆದು ಜಾಕ್ ನನ್ನು ಕರೆತರಲು ಓಡುತ್ತಾಳೆ. ಟೈಟಾನಿಕ್ಕಿನ ವಾಟರ್ ಟೈಟ್ ಚೇಂಬರ್ ಗಳಿಗೆ ತೀವ್ರ ಪೆಟ್ಟು ಬಿದ್ದ ಕಾರಣ ಜಾಕ್ ನನ್ನು ಕೂಡಿ ಹಾಕಿದ್ದ ಸೆಲ್ ಗೆ ನೀರು ನುಗ್ಗಲು ಪ್ರಾರಂಭಿಸಿರುತ್ತದೆ. ನೀರು ನುಗ್ಗಿ ಮೇಲೇರುತ್ತ ನಡೆದಂತೆ ತನ್ನನ್ನು ಬಂಧಿಸಿದ ಆಧಿ ಕಾರಿಯನ್ನು ಕೈ ಕೋಳ ಬಿಚ್ಚುವಂತೆ ಕೇಳುತ್ತಾನೆ ಆದರೆ ಆತ ಕೈ ಕೋಳ ಬಿಚ್ಚಲು ಒಪ್ಪುವುದಿಲ್ಲ. ಜಾಕ್ ನನ್ನು ಅಲ್ಲಿಯೆ ಅದೇ ಸ್ಥಿತಿಯಲ್ಲಿ ಬಿಟ್ಟು ಬೇರೆಡೆಗೆ ತೆರಳುತ್ತಾನೆ. ಆತಂಕಗೊಂಡ ರೋಸ್ ಜಾಕ್ ನನ್ನು ಕೂಗುತ್ತ ಬಂದು ಆತನ ಕೈ ಕೋಳ ಬಿಚ್ಚಲು ಏನೆಲ್ಲ ಪ್ರಯತ್ನ ಮಾಡಿದರೂ ಬಿಚ್ಚಲಾಗುವುದಿಲ್ಲ. ಕೊನೆಗೆ ಅಲ್ಲಿದ್ದ ಅಗ್ನಿಶಾಮಕ ಸಿಲೆಂಡರ ಹತ್ತಿರವಿಟ್ಟಿದ್ದ ಒಂದು ಸಣ್ಣ ಕೈ ಗೊಡಲಿಯನ್ನು ತಂದು ಕೈಕೋಳವನ್ನು ತುಂಡರಿಸಿ ಇಬ್ಬರೂ ಹಡಗಿನಲ್ಲಿ ತುಂಬುತ್ತಿದ್ದ ನೀರಿನಿಂದ ತಪ್ಪಿಸ ಕೊಳ್ಳುತ್ತ ತೊಂದರೆಯಲ್ಲಿ ಸಿಕ್ಕಿ ಹಾಕಿ ಕೊಂಡವರಿಗೆ ಸಹಾಯ ಮಾಡುತ್ತ ಜೀವ ರಕ್ಷಕ ಬೋಟುಗಳನ್ನು ಸಮುದ್ರಕ್ಕೆ ಇಳಿಸುತ್ತಿದ್ದ ಜಾಗಕ್ಕೆ ಬರುತ್ತಾರೆ. ಹಡಗಿನಲ್ಲಿ ನಿಧಾನವಾಗಿ ನೀರು ತುಂಬುತ್ತ ಅಟ್ಲಾಂಟಿಕ್ ಸಾಗರದ ತಳಕ್ಕೆ ಟೈಟಾನಿಕ್ ಹಡಗು ಇಳಿಯುತ್ತ ಜನರ ಆತಂಕಗಳನ್ನು ಕ್ಯಾಮರೂನ ಹೃದಯ ಮಿಡಯುವಂತೆ ಚಿತ್ರೀಕರಿಸಿದ್ದಾನೆ. ಹಡಗಿನ ಕೊನೆಯ ತುದಿ ಸಾಗರದ ತಳದಲ್ಲಿ ಮುಳುಗುವ ವರೆಗೂ ಜಾಕ್ ಮತ್ತು ರೋಸ್ ಹಡಗಿನ ಸುತ್ತ ಹಾಕಿದ ಕಬ್ಬಿಣದ ಕಟಾಂಜನದ ಆಸರೆಯನ್ನು ಗಟ್ಟಿಯಾಗಿ ಹಿಡಿದು ಕೊಂಡಿದ್ದರೂ ನೀರಿನಲ್ಲಿ ಮುಳುಗಿ ಆಸರೆಗಾಗಿ ತೇಲುತ್ತಿದ್ದ ಹಡಗಿನ ಮರದ ಒಂದು ಹಲಗೆಯ ಆಸರೆಯನ್ನು ಪಡೆಯುತ್ತಾರೆಯಲ್ಲಿ. ಆದರೆ ಇಬ್ಬರ ಭಾರವನ್ನು ಅದು ತಡೆಯುವ ಸ್ಥಿತಿಯಲ್ಲಿ ಅದು ಇರುವುದಿಲ್ಲ. ಜಾಕ್ ರೋಸ್ ಳನ್ನು ಆ ಹಲಗೆಯ ಮೇಲೆ ಹತ್ತಿಸಿ ಆ ಹಲಗೆಯ ಒಂದು ಬದಿಗೆ ತನ್ನ ಎರಡು ತೋಳುಗಳ ಆಸರೆಯನ್ನು ಕೊಟ್ಟು ರೋಸ್ ಮುಳುಗದಂತೆ ತೆಡೆಯುತ್ತಾನೆ. ತೇಲುವ ಹಲಗೆಯ ಆಸರೆಯನ್ನು ರೋಸ್ ಮತ್ತು ಜಾಕ್ ಜೀವ ಉಳಿಸಿ ಕೊಳ್ಳುವ ಪ್ರಯತ್ನದಲ್ಲಿರುತ್ತಾರೆ. ಮೃತ್ಯುವಿನ ದವಡೆಯಲ್ಲಿದ್ದ ಇಬ್ಬರೂ ಪರಸ್ಪರ ಕೈ ಹಿಡಿದುಕೊಂಡು ಸಹಾಯದ ನಿರೀಕ್ಷೆಯಲ್ಲಿರುತ್ತಾರೆ. ಅದೊಂದು ನೀರವ ಭಯಂಕರ ರಾತ್ರಿಯ ಸನ್ನಿವೇಶ ಅಸಹನೀಯ ಮೌನಅಲ್ಲಿ ವ್ಯಾಪಿಸಿರತ್ತೆ, ಬಹುಶಃ ಜಾಕ್ ಗೆ ಪರಿಸ್ಥಿತಿಯ ಅರವಾಗಿರುತ್ತೋ |ಏನೊ ಆತ ರೋಸ್ ಳಿಗೆ ಜೀವನದಲ್ಲಿ ಎಂದೂ ಆಶೆಯನ್ನು ಕಳೆದುಕೊಳ್ಳಬೇಡ ರೋಸ್ ಎನ್ನುತ್ತಾನೆ ಜೊತೆಗೆ ಆಕೆಯಿಂದ ಮಾತುಕೂಡ ಪಡೆಯುತ್ತಾನೆ. ಸಾಗರದ ಸುತ್ತೆಲ್ಲ ಕರಾಳ ಕತ್ತಲೆ ತನ್ನ ಸಾಮ್ರಾಜ್ಯವನ್ನು ಸ್ಥಾಪಿಸಿರುತ್ತೆ ನಿಸ್ಸಹಾಯಕ 1500 ಜನ ಪ್ರಯಾಣಿಕರು ಸಾಗರದಲ್ಲಿ ತೇಲುತ್ತಿರುತ್ತಾರೆ, ಅವರಲ್ಲೆಲ್ಲ ಬದುಕುಳಿದಿದ್ದವರು ಕೆಲವೆ ಕೆಲವರಿದ್ದಿರ ಬಹುದು. ಉಳಿದವರೆಲ್ಲ ಹೆಣವಾದವರೆ. ಸುಮಾರು ವೇಳೆಯ ನಂತರ ಬದುಕುಳಿದವರನ್ನು ರಕ್ಷಿಸಲು ಒಂದು ಡೋಣಿ ಆ ಸ್ಥಳಕ್ಕೆ ಬರುತ್ತದೆ. ಆ ಡೋಣಿಯಲ್ಲಿದ್ದ ರಕ್ಷಣಾ ಸಿಬ್ಬಂದಿ ನೀರಿನಲ್ಲಿ ತೇಲುತ್ತಿದ್ದ ಹೆಣಗಳ ರಾಶಿಯಲ್ಲಿ ಬದುಕುಳಿದವರಿಗಾಗಿ ಹುಡುಕುತ್ತ ನಿರಾಶರಾಗಿ ಹಿಂದಿರುಗುತ್ತಿರುವ ವೇಳೆ ಆ ಭೀಭತ್ಸ ರಾತ್ರಿಯಲ್ಲಿ ಒಂದು ಹಲಗೆಯ ಮೇಲೆ ಸುಸ್ತಾಗಿ ಬಿದ್ದಿದ್ದ ರೋಸ್ ಜಾಕ್ ನನ್ನು ಕೂಗುತ್ತಾಳೆ ಅವನಿಂದ ಪ್ರತಿಕ್ರಿಯೆ ಬಾರದಿದ್ದುದನ್ನು ಕಂಡು ಮತ್ತೆ ಕೂಗುತ್ತಾಳೆ ಪುನಃ ಕೂಗುತ್ತಾಳೆ, ಆಕೆಯ ಕೂಗಿಗೆ ಓಗೊಡಲು ಆತ ಬದುಕಿರುವುದಿಲ್ಲ ಅಷ್ಟೆ ಮೈಕೊರೆವ ಚಳಿಗೆ ಆತ ಅಸುನೀಗಿರುತ್ತಾನೆ. ಹಲಗೆಗೆ ಅಡ್ಡಲಾಗಿ ಹಿಡಿದ ಜಾಕ್ ನ ಕೈಗಳನ್ನು ರೋಸ್ ಬಿಡಿಸುತ್ತಾಳೆ. ಜಾಕ್ ನಿಧಾನಕಕ್ಕೆ ಸಾಗರದ ತಳಕ್ಕೆ ಇಳಿದು ಹೋಗುತ್ತಾನೆ. ರೋಸ್ ಆಕ್ರಂದನ ಮೇರೆ ಮೀರುತ್ತದೆ. ಸುತ್ತ ಮುತ್ತಲ
ಲೆಲ್ಲ ಹರಡಿ ಕೊಂಡಿದ್ದ ಹೆಣಗಳ ರಾಶಿಯಲ್ಲಿ ಸತ್ತ ರಕ್ಷಣಾ ಸಿಬ್ಬಂದಿಯೊಬ್ಬನ ಬಾಯಿಯಲ್ಲಿದ್ದ ಶೀಟಿಯನ್ನು ತೆಗೆದುಕೊಂಡು ಸಹಾಯಕ್ಕಾಗಿ ಅದನ್ನು ಊದುತ್ತಾಳೆ ಕೇಳಿಸಿಕೊಂಡ ಮ|ರಳಿ ತರಳುವ ಸನ್ನಾಹದಲ್ಲಿದ್ದರ ಕಡಲ ರಕ್ಷಣಾ ಪಡೆಯವರು ಮರಳಿ ಬಂದು ರೋಸ್ ಳನ್ನು ರಕ್ಷಿಸುತ್ತಾರೆ. ಸಾಯುವ ಗಳಿಗೆಯಲ್ಲಿ ಜಾಕ್ ಗೆ ಮಾತು ಕೊಟ್ಟಂತೆ ರೋಸ್ ಬದುಕುವ ಧೃಡ ಸಂಕಲ್ಪ ಮಾಡುತ್ತಾಳೆ.
ನಿರಾಶ್ರಿತರ ಕ್ಯಾಂಪಿನಲ್ಲಿ ಬದುಕುಳಿದಿರುವ ಕೆಲವು ಜನಗಳಲ್ಲಿ ರೋಸ್ ಸಹ ಇರಬಹುದೆ ಎಂದು ಹುಡುಕುತ್ತ ಕಾಲ್ ಹಾಕ್ಲಿ ಬರುತ್ತಾನೆ. ಕುಳಿತಿದ್ದ ರೋಸ್ ಬೆನ್ನ ಹಿಂದಿನಿಂದಲೆ ಹಾದು ಹೋಗುತ್ತಾನೆ, ರೋಸ್ ಅವನನ್ನು ಕಣ್ಣಂಚಿನಲ್ಲಿ ಗಮನಿಸು ತ್ತಾಳೆ. ಅವಳ ಉಸಿರ ಕಣ ಕಣದಲ್ಲೂ ಜಾಕ್ ತುಂಬಿ ಹೋಗಿರುತ್ತಾನೆ. ಬದುಕುಳಿದವರ ಪಟ್ಟಿ ಮಾಡುತ್ತ ಬಂದ ಅಧಿಕಾರಿಗೆ ತನ್ನ ಹೆಸರು ಡಾಸನ್ ರೋಸ್ ಡಾಸನ್ ಎಂದು ಹೇಳುತ್ತಾಳೆ. 103 ವರ್ಷ ಪ್ರಾಯದ ವೃದ್ಧೆ ರೋಸ್ ಡೇವಿಸ ಬುಕೆಟರ್ ತನ್ನ ಮುಂದೆ ಕುಳಿತಿದ್ದ ಬ್ರ್ಯಾಕ್ ಲೋವೆಟ್ ತಂಡದವರಿಗೆ ತನ್ನ ಗತ ಜೀವನದ ಕುರತು ಕೆಲವು ಮಾತು ಹೇಳುತ್ತಾಳೆ. ಟೈಟಾನಿಕ್ ದುರಂತದಲ್ಲಿ ಬದುಕುಳಿದ ನಂತರ ತನ್ನ ಮತ್ತು ಜಾಕ್ ಡಾಸನ್ನನ ಪ್ರೇಮದ ಕುರಿತು ಯಾರಲ್ಲಿಯೂ ಹೇಳಲಿಲ್ಲ ವೆಂದು, ತನ್ನ ಜೊತೆಗಿದ್ದ ಮೊಮ್ಮಗಳನ್ನು ಉದ್ದೇಶಿಸಿ ನಿನ್ನ ಅಜ್ಜನಿಗೂ ಸಹ ಈ ವಿಷಯವನ್ನು ಹೇಳಿರಲಿಲ್ಲ ವೆನ್ನುತ್ತಾಳೆ. ಹೆಣ್ಣಿನ ಮನಸು ಒಂದು ಸಾಗರವಿದ್ದ ಹಾಗೆ ಎಲ್ಲ ನೋವು ನಿರಾಶೆಗಳನ್ನು ತನ್ನ ಒಡಲಲ್ಲಿ ಟಡಗಿಸಿ ಕೊಂಡಿರುತ್ತಾಳೆ. ಮೇಲ್ನೋಟಕ್ಕೆ ಶಾಂತವಾಗಿ ಕಂಡರೂ ಒಳಗಿನ ಪ್ರಕ್ಷುಬ್ಧತೆ ಅದರ ಒಳಹೊಕ್ಕು ನೋಡಿದಾಗಲೆ ಗೊತ್ತು ಎಂದು. ಅವಶೇಷ ಗಳೆಡಯಲ್ಲಿ ನೀಲಿ ವಜ್ರದ ನೆಕ್ಲೆಸ್ ಇಲ್ಲವೆನ್ನುವುದನ್ನು ವೃದ್ಧೆ ರೋಸ್ ಳಿಂದ ತಿಳಿದ ಬ್ರ್ಯಾ ಖ್ ಲೋವೆಟ್ ತನ್ನ ಮೂರು ವರ್ಷದ ಶ್ರಮ ವ್ಯರ್ಥವಾಯಿತೆಂದು ಹಳ ಹಳಿಸುತ್ತಾನೆ. ವೃದ್ಧೆ ರೋಸ್ ನಿಧಾನವಾಗಿ ಹೆಜ್ಜೆಗಳನ್ನಿಡುತ್ತ ನಿಧಿ ಶೋಧಕ ಹಡಗಿನ ಅಂಚಿಗೆ ಬಂದು ನಿಲ್ಲುತ್ತಾಳೆ. ಅವಳನ್ನು ಒಂದು ರೀತಿಯ ವಿಷಾದ ಭಾವ ಆವರಿಸುತ್ತದೆ. ತನ್ನ ಪ್ರಿಯಕರ ಜಾಕ್ ಮತ್ತು ಇತರ 1500 ಜನರನ್ನು ಬಲಿ ತೆಗೆದುಕೊಂಡ ವಿಶಾಲ ಸಾಗರದೆಡೆಗೆ ತನ್ನದೃಷ್ಟಿಯನ್ನು ಹಾಯಿಸುತ್ತಾಳೆ. ನಿಧಾನವಾಗಿ ತನ್ನ ಬಲಗೈ ಮುಷ್ಟಿಯನ್ನು ಬಿಡಿಸುತ್ತಾಳೆ. ಬ್ರ್ಯಾಕ್ ಲೋವೆಟ್ ಹುಡುಕುತ್ತಿದ್ದ ನೀಲಿ ಬಣ್ಣದ ವಜ್ರದ ನೆಕ್ಲೆಸ್ ವೃದ್ಧೆ ರೋಸ್ ಕೈಯಲ್ಲಿಯೆ ಇರುತ್ತದೆ. ಜಾಕ್ ಆಕೆಯ ನೆನಪಿಗೆ ಬರುತ್ತಾನೆ, ದುಃಖ ಉಮ್ಮಳಿಸಿ ಬರುತ್ತದೆ. ತನ್ನ ಕೈಯನ್ನು ಬಿಡಿಸಿ ನೆಕ್ಲೆಸ್ ನ್ನು ಎತ್ತಿ ಹಿಡಿದು ಅವಲೋಕಿಸುತ್ತಿರುವಾಗ ಅದು ಕೈಜಾರಿ ನೀರಿಗೆ ಬಿದ್ದು ಸಾಗರದ ತಳ ಸೇರುತ್ತದೆ. ರೋಸ್ ಅದಕ್ಕಾಗಿ ಪರಿ ತಪಿಸುವುದಿಲ್ಲ. ತನ್ನ ಪ್ರಿಯಕರ ಜಾಕ್ ನನ್ನು ಕಳೆದುಕೊಂಡು ಆತನ ನೆನಪಿನಲ್ಲಯೆ ಬಾಳು ಸವೆಸಿದ ರೋಸ್ ಳಿಗೆ ಆ ವಜ್ರದ ನೆಕ್ಲೆಸ್ ಕಳೆದದ್ದು ಒಂದು ನಷ್ಟವೆನಿಸುವುದಿಲ್ಲ.
ಅಲ್ಲಿಗೆ ಟೈಟಾನಿಕ್ ಹಡಗಿನ ದುರಂತದ ಹಿನ್ನೆಲೆಯಲ್ಲಿ ಜಾಮ್ಸ್ ಹಾರ್ನರ್ ನ ಮಧುರ ಮನ ಕಲಕುವ ಸಂಗೀತದ ಹಿನ್ನೆಲೆಯಲ್ಲಿ ಕೇಳಿ ಬರುವ ಸಿಲಿಯನ್ ಡಯಾನಾ ಹಾಡಿದ
ಹತ್ತಿರ ದೂರ .. …..ನೀನು ಎಲ್ಲಿಯೆ ಇರು
ಎನ್ನ ಹೃದಯ ನಿನಗಾಗಿ ಅಲೆಯುತ್ತಿರುತ್ತೆ
ಮತ್ತೊಮ್ಮೆ ಎನ್ನೆದೆಯ ಬಾಗಿಲು ತೆಗೆದು ನೊಡು
ನೀನೆನ್ನ ಹೃದಯದಲಿ ನೆಲೆಸಿರುವೆ …….
ಪ್ರತಿ ರಾತ್ರಿ ಎನ್ನ ಕನಸುಗಳಲ್ಲಿ ನಾ ನಿನ್ನ
ಕಾಣುತ್ತೇನೆ ಅನುಭವಿಸುತ್ತೇನೆ
 
ಎಂಬ ಅರ್ಥಪೂರ್ಣ ಹಾಡಿನ ಸಾಲಿಗಳೊಂದಿಗೆ ಜಾಕ್ ಮತ್ತೂ ರೋಸ್ ರ ದುರಂತ ಪ್ರೇಮ ಕಾವ್ಯ ಕೊನೆಗೊಳ್ಳುತ್ತದೆ. ಎಂತಹ ದುರಂತಮಯ ದೃಶ್ಯ ಕಾವ್ಯ ! ವಾಸ್ತವದ ಸಣ್ಣ ಎಳೆಯೊಂದನ್ನಾಧರಿಸಿ ಬೆಸೆದ ಕಾಲ್ಪನಿಕ ದುರಂತ ಪ್ರೇಮ ಕಾವ್ಯ ಸೃಷ್ಟಿಸಿ ಯೌವನ, ಮುಪ್ಪು, ಸಾವು ಮತ್ತು ಜೀವನದ ಹೋರಾಟದ ಬದುಕನ್ನು ಅದೆಷ್ಟು ಅದ್ಭುತವಾಗಿ ಜೇಮ್ಸ್ ಕ್ಯಾಮರೂನ್ ಸೆಲ್ಯುಲಾಯ್ಡ್ ಪರದೆಯ ಮೇಲೆ ತಂದಿದ್ದಾನೆ ! ಥಿಯೆಟರಿನಿಂದ ಹೊರ ಬರುವ ಪ್ರತಿಯೊಬ್ಬ ಪ್ರೇಕ್ಷಕನ ಮನದ ತುಂಬ ಜಾಕ್, ರೋಸ್ ಮತ್ತು ಕ್ಯಾಮರೂನ್ ತುಂಬಿರುತ್ತಿದ್ದರು. ನಿಜಕ್ಕೂ ಟೈಟಾನಿಕ್ ಒಂದು ಅಸದೃಶ ಪ್ರೇಮ ದುರಂತದ ದೃಶ್ಯಕಾವ್ಯ ವಾಗಿತ್ತು ! ಕಾಸಾಬ್ಲಾಂಕಾ ಬಿಟ್ಟರೆ ಪ್ರೇಕ್ಷಕರನ್ನು ಸಮೂಹ ಸನ್ನಿಗೊಳ ಪಡಿಸುವ ಮತ್ತೊಂಧು ಪ್ರೇಮ ಕಾವ್ಯ ತೆರೆಯ ಮೇಲೆ ಬಂದಿಲ್ಲ. ಹೀಗಾಗಿ ಟೈಟಾನಿಕ್ ಸಾರ್ವಕಾಲಿಕವಾದ ಒಂದು ದುರಂತ ಪ್ರೇಮದ ದೃಶ್ಯಕಾವ್ಯ ಎರಡು ಮಾತಿಲ್ಲ.

*****

 
 

‍ಲೇಖಕರು G

20 January, 2014

2 Comments

  1. mmshaik

    sir namaskaara,
    avadhige tumbu hrudayada swaagata..uttama pramaaNika lekhana..

    • h a patil

      – ಮೇಡಂ ವಂದನೆಗಳು ಲೇಖನದ ಮೆಚ್ಚುಗೆಗೆ ಧನ್ಯವಾದಗಳು.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading