ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನನ್ನು ಕಾಡಿದ ಸಿನಿಮಾ : ಅಮಿತ್ ದೇಸಾಯಿ ಬರೀತಾರೆ

ಅಮಿತ್ ದೇಸಾಯಿ

ನನ್ನನ್ನು ಕಾಡಿದ ಅದೆಷ್ಟೋ ಸಿನಿಮಾಗಳಲ್ಲಿ ಅತಿಹೆಚ್ಚು ಕಾಡಿಡ್ದು ಯಾವ್ದು ಅಂತ ಯೋಚಿಸೋದಕ್ಕೆ ಹೊರಟ್ರೇ ನನ್ನ ಸ್ಮೃತಿ ಪಟಲದಲ್ಲಿ ತನ್ನ ಬ್ಯಾಕ್ ಗ್ರೌಂಡ್ ಮ್ಯೂಸಿಕ್ ಸಮೇತ ದ್ವೀಪ ಚಿತ್ರ ಹಾಜರಾಗುತ್ತೆ.

ದ್ವೀಪ ಸಿನಿಮಾವನ್ನ ಮೊದಲಬಾರಿ ನಾನು ನೋಡಿದ್ದು 2006ನೇ ಇಸ್ವಿ ನವೆಂಬರ್ 26ನೇ ತಾರೀಖು. ಆವತ್ತಿಗೆ ನನಗೆ 18 ವರ್ಷ, ಧಾರವಾಡದಲ್ಲಿ ಡಿಪ್ಲೋಮೊ ಫೈನಲ್ ಇಯರ್ ವ್ಯಾಸಂಗ ಮಾಡ್ತಿದ್ದೆ. ಆವತ್ತಿಗಾಗ್ಲೇ ಕನ್ನಡದಲ್ಲಿ ಅದೆಷ್ಟೋ ಟಿ.ವಿ ಚಾನೆಲ್ ಗಳು ಚಾಲ್ತಿಯಲ್ಲಿದ್ರೂ ನಮ್ಮ ಮನೆಯಲ್ಲಿ ಮಾತ್ರ ನಮ್ಮ ಓದಿಗೆ ತೊಂದರೆಯಾಗುತ್ತೆ ಅಂತ ಕೇಬಲ್ ಹಾಕಿಸಿರಲಿಲ್ಲ. ಹೀಗಾಗಿ ಟಿ.ವಿ ಅಂದ್ರೆ ಡಿ.ಡಿ.1 ಮಾತ್ರ ನಮ್ಮ ಪಾಲಿಗಿರ್ತಿತ್ತು. ಡಿ.ಡಿ.1 ನಲ್ಲಿ ಪ್ರತಿ ಭಾನುವಾರ ಸಂಜೆ 04 ಗಂಟೆಗೆ ಪ್ರಸಾರ ಮಾಡ್ತಿದ್ದ ಸಿನಿಮಾವೇ ಆಗ ನಾವು ನೋಡಬಹುದಾದ ಏಕೈಕ ಸಿನಿಮಾ ಆಗಿರ್ತಿತ್ತು. ಅದನ್ನು ಹೊರತು ಪಡಿಸಿ ವಾರಕ್ಕೆ ಇನ್ನೊಂದು ಕನ್ನಡ ಸಿನಿಮಾ ನೋಡಬಹುದಾದ ಅವಕಾಶ ನಮ್ಮ ಪಾಲಿಗಿರ್ಲಿಲ್ಲ. ಭಾನುವಾರ 11.30ಕ್ಕೆ ಪನೋರಮಾ ವಿಭಾಗದಲ್ಲಿ ಪ್ರಸಾರವಾಗ್ತಿದ್ದ ಸಿನಿಮಾಗಳ ಪೈಕಿ ಅಪ್ಪಿ ತಪ್ಪಿ ಕನ್ನಡ ಸಿನಿಮಾ ಹಾಕಿದ್ರೆ ಮಾತ್ರ ವಾರಕ್ಕೆ ಇನ್ನೊಂದು ಕನ್ನಡ ಸಿನಿಮಾ ನೋಡೊ ಅವಕಾಶ ಲಭ್ಯವಾಗ್ತಿತ್ತು. ಹೀಗಾಗಿ ಪ್ರತಿ ಭಾನುವಾರ ನಾವು ತಪ್ಪದೇ 11.30ಕ್ಕೆ ಯಾವುದಾದ್ರೂ ಕನ್ನಡ ಸಿನಿಮಾ ಹಾಕಿದ್ದಾರಾ ನೋಡಿಯೇ ಮಲಗೋದು ರೂಢಿಯಾಗಿ ಹೋಗಿತ್ತು. ಹೀಗೆ ನವೆಂಬರ್ 26ನೇ ತಾರೀಖು ಅಚಾನಕ್ಕಾಗಿ 11.30ಕ್ಕೆ ಟಿ.ವಿ ಹಾಕಿದಾಗ ಕನ್ನಡದ ದ್ವೀಪ ಸಿನಿಮಾ ಶುರುವಾಗಿತ್ತು.
ನಾನು ಸಿಕ್ಕಾಪಟ್ಟೆ ಖುಷಿಯಾಗಿ ನೋಡೊದಕ್ಕೆ ಕುಳಿತುಕೊಂಡೆ. ನನ್ನಕ್ಕ ಇದ್ಯಾವುದೋ `ದರಿದ್ರ’ ಸಿನಿಮಾ ಅಂತ್ಹೇಳಿ ಮಲಗಿಕೊಂಡ್ಳು. ನಿದ್ದೆ ಬಾರದೇ ಹೊಗಿದ್ದರಿಂದ ನನ್ನಮ್ಮ ಕೂಡ ಸಿನಿಮಾ ನೋಡೊದಕ್ಕೆ ಕುಳಿತ್ರು. ಮಲಗುವವರಿಗೆ ತೊಂದರೆಯಾಗದಂತೆ ಮನೆಯೊಳಗಿನ ಟ್ಯೂಬ್ ಲೈಟ್ ಆರಿಸಿ, ಇಪ್ಪತ್ತು ಇಂಚಿನ ಬ್ಲಾಕ್ ಆಂಡ್ ವೈಟ್ ಟಿ.ವಿ ಎದುರು ನಾವಿಬ್ರೂ ಕುಳಿತುಕೊಂಡ್ವಿ. ಕಾಸರವಳ್ಳಿಯವ್ರ ದ್ವೀಪದೊಳಗೆ ಬಂಧಿಯಾದ್ವಿ.

ದ್ವೀಪ ಸಿನಿಮಾದೊಳಗಿರೋದು ಮುಖ್ಯವಾಗಿ ನಾಲ್ಕು ಪಾತ್ರಗಳಿವೆ. ನಾಗಿ, ನಾಗಿಯ ಗಂಡ ಗಣಪ ಮತ್ತವನ ಅಪ್ಪ ದುಗ್ಗಜ್ಜ. ಮತ್ತು ಇವ್ರಿಗೆ ಮಳೆಗಾಲದೊಳಗೆ ದ್ವೀಪದೊಳಗೆ ಸಹಾಯ ಮಾಡೋದಕ್ಕಾಗಿ ಅಂತ ಬಂದು ಸೇರಿಕೊಂಡ ಕೃಷ್ಣ. ಡ್ಯಾಮ್ ನ ಹಿನ್ನೀರು ಹೆಚ್ತಾ ಹೋಗಿ ಮುಳುಗಿಹೋಗಲಿರೋ ಸೀತಾ ಪರ್ವತದ ನಿವಾಸಿಗಳನ್ನ ಒಕ್ಕಲೆಬ್ಬಿಸುವಲ್ಲಿ ಸರ್ಕಾರದವ್ರು ಯಶಸ್ವಿಯಾಗ್ತಾರೆ. ಆದ್ರೆ ದುಗ್ಗಜ್ಜನ ಕುಟುಂಬದವ್ರು ಮಾತ್ರ ತಮಗೆ ತಕ್ಕುದಾದ ಪರಿಹಾರ ಸಿಗದೇ ಹೋಗಿದ್ರಿಂದ ಅಲ್ಲಿಯೇ ಉಳಿತಾರೆ. ಸೀತಾ ಪರ್ವತದ ಎಲ್ಲ ನಿವಾಸಿಗಳ ಪಾಲಿಗೆ ಅರ್ಚಕನಾಗಿದ್ದ ದುಗ್ಗಜ್ಜನಿಗೆ ಯಾವುದೇ ಆಸ್ತಿ ಇಲ್ಲ ಅನ್ನೋದು ಸರ್ಕಾರಿ ಅಧಿಕಾರಿಗಳ ವಾದವಾದ್ರೆ ತನ್ನ ಅರ್ಚಕ ವೃತ್ತಿ, ಗೌರವಕ್ಕೆ ತಕ್ಕ ಪರಿಹಾರ ಧನ ಕೊಡಬೇಕು ಅನ್ನೋದು ದುಗ್ಗಜನ ವಾದ. ಕೊನೆಗೂ ದುಗ್ಗಜ್ಜನ ಹಠದ ಮುಂದೆ ಸೋತು ದುಗ್ಗಜ್ಜನ ಮಗ, ಸೊಸೆಯೂ ಸೀತಾ ಪರ್ವತದಲ್ಲೇ ಉಳಿದುಹೋಗ್ತಾರೆ. ದುಗ್ಗಜ್ಜನ ಸೊಸೆ ನಾಗಿಗೇ ಅಲ್ಲಿರೋಕೆ ಯಾವುದೇ ಮನಸ್ಸಿಲ್ಲದಿದ್ರೂ ಗಂಡನನ್ನ ಬಿಟ್ಟು ಬರಲಾಗದೇ ಅಲ್ಲಿಯೇ ಉಳಿತಾಳೆ. ಮಳೆಗಾಲದಲ್ಲಿ ಸೀತಾ ಪರ್ವತ ದ್ವೀಪವಾಗಿ ಮಾರ್ಪಡುತ್ತೆ. ಈ ದ್ವೀಪದೊಳಗೆ ಉಳಿದು ಹೋದ ಈ ಮೂವರಿಗೆ ಜೊತೆಯಾಗಲಿಕ್ಕೆ ಅಂತ ಮುಂಬೈನಿಂದ ಓಡಿಬಂದ ಕೃಷ್ಣ ಬರ್ತಾನೆ.
ಇದು ಮೇಲ್ನೋಟದ ಕಥೆಯಾದ್ರೇ ನನಗೆ ಆವತ್ತು ಈ ಕಥೆ ಕಾಣಿಸಿಕೊಂಡಿದ್ದೇ ಬೇರೆ ರೀತಿ. ತಾನು ಹುಟ್ಟಿ ಬೆಳೆದ ಊರನ್ನ ಬಿಟ್ಟುಹೋಗಲಿಕ್ಕೆ ಮನಸ್ಸಿಲ್ಲದ ದುಗ್ಗಜ್ಜ ಭೂತಕಾಲದ ಪ್ರತಿನಿಧಿಯಂತೆ ಕಂಡ್ರೆ ನಾಗಿ ವರ್ತಮಾನದ ಪ್ರತಿನಿಧಿಯಾಗಿ ಕಾಣಿಸಿತೊಡಗಿದ್ಳು. ಈಕೆಯ ಪತಿ ಗಣಪ ವರ್ತಮಾನದ ಸಹಚರ, ಈತನೂ ವರ್ತಮಾನದೊಳಗಿರುವವನೇ. ಆದರೂ ತಂದೆಯ ಮಾತಿಗೆ ಬದ್ಧನಾದವನು. ಸೀತಾ ಪರ್ವತ ಬಿಟ್ಟು ಎಲ್ಲರಂತೆ ನಾವೂ ಬದುಕಬೇಕು ಅಂತ ಯೋಚಿಸೋ ನಾಗಿ, ತಂದೆಯ ಆಸೆಯಂತೆ ಇಲ್ಲಿಯೇ ಬದುಕಬೇಕು ಅಂತ ಯೋಚಿಸೋ ಗಣಪ ನಮ್ಮೊಳಗೇ ಇರೋ ತಾಕಲಾಟ, ವೈಪರಿತ್ಯಗಳ ಸಂಕೇತಗಳಾಗಿ ಕಾಣಿಸತೊಡಗಿದ್ರು. ಇನ್ನೂ ಮುಂಬೈನಿಂದ ಬಂದ ಕೃಷ್ಣ ಭವಿಷ್ಯತ್ ಕಾಲದ ಪ್ರತಿನಿಧಿ. ಹೀಗಂತ ನಾನು ಯೋಚಿಸುತ್ತಲೇ ಅದನ್ನ ಪುಷ್ಠಿಕರಿಸೋ ದೃಶ್ಯವೊಂದು ಅಲ್ಲಿಬಂತು. ಗಣಪನ ಜೊತೆ ಜಗಳವಾಡಿಕೊಂಡ ಕೃಷ್ಣ ದ್ವೀಪದಿಂದ ಅಲ್ಲಿದ್ದ ಏಕೈಕ ದೋಣಿಯನ್ನ ತೆಗೆದುಕೊಂಡು ಹೊರಟು ಹೋಗ್ತಾನೆ. ಹೊರಜಗತ್ತಿಗೆ ಹೋಗಲು ಏಕೈಕ ಸಾಧನವಾಗಿದ್ದ ದೋಣಿ ಭವಿಷ್ಯತ್ ಕಾಲದೊಂದಿಗೆ ಹೊರಟು ಹೋಗುತ್ತೆ.!

ಅದೂವರೆಗೂ ಅನೇಕ ಸಾಹಿತ್ಯಿಕ ಬರಹಗಳಲ್ಲಿ ಸಂಕೇತ, ಪ್ರತಿಮೆ ಎಂಬ ಪದಗಳನ್ನ ಓದಿದ್ದ ನನಗೆ ಮೊದಲ ಬಾರಿಗೆ ಸಿನಿಮಾದಲ್ಲೂ ಸಂಕೇತ ಪ್ರತಿಮೆ ಗಳು ಇರ್ತಾವೆ ಅನ್ನೋದು ಅರಿವಿಗೆ ಬಂದಿತ್ತು. ಆದ್ರೆ ನಾನು ಅಂದುಕೊಂಡತೇ ಗಿರೀಶರೂ ಯೋಚಿಸಿ ಈ ಸಿನಿಮಾ ಮಾಡಿರಬಹುದಾ, ಇಲ್ಲಾ ಇವೆಲ್ಲಾ ಕೇವಲ ನನ್ನ ಆಲೋಚನೆ ಗಳಿರಬಹುದಾ ಎಂಬ ಅನುಮಾನವೂ ಬರ್ತಾ ಇತ್ತು. ಒಟ್ನಲ್ಲಿ ಕುರುಡನೊಬ್ಬ ಆನೆಯನ್ನ ಮುಟ್ಟಿ ಆನೆಯೆಂದರೇ ಹೀಗೆ ಇರಬಹುದು ಅಂತ ಕಲ್ಪಿಸಿಕೊಂಡತೇ ನಾನೂ ದ್ವೀಪವನ್ನ ನನಗೆ ಕಂಡಂತೇ ಕಾಣತೊಡಗಿದ್ದೆ. ಅದು ವಿಪರೀತ ಖುಷಿಯನ್ನೂ ಕೊಡ್ತಿತ್ತು.
ಇನ್ನೂ ಚಿತ್ರದ ಕ್ಲೈಮ್ಯಾಕ್ಸ್ ಇನ್ನಷ್ಟು ಆಲೋಚಿಸುವಂತೆ ಮಾಡ್ತು. ಸೀತಾ ಪರ್ವತದೊಳಗೆ ಸೇರಿಕೊಂಡ ಹುಲಿಯಿಂದ ಪಾರಾಗೋದಕ್ಕೆ ರಾತ್ರಿಯಿಡಿ ಹೋರಾಡ್ತಾಳೆ ನಾಗಿ. ಮಳೆಗೆ ಮನೆ ಬಿದ್ದು ಹೋಗದಂತೆ ಶ್ರಮ ಪಡ್ತಾಳೆ.
ತಾವು ಬದುಕೋದು ಅಸಾದ್ಯ ಅಂತಲೇ ಭಾವಿಸಿ ಹೊಚ್ಚಿಕೊಂಡು ಮಲಗಿದ್ದ ತನ್ನ ಸಹಚರನಂತೆ ತಾನೂ ಮಲಗದೇ ಹೋರಾಟ ನಡೆಸ್ತಾಳೆ. ಕೊನೆಗೂ ಕ್ಲೈಮ್ಯಾಕ್ಸ್ ನಲ್ಲಿ ಸಂಕಷ್ಟಗಳೆಲ್ಲಾ ಕಳೆದುಹೋಗುತ್ವೆ. ಡ್ಯಾಮ್ ನ ಕೊನೆ ಬಾಗಿಲು ಹಾಕಿದ್ರೂ ದ್ವೀಪ ಮುಳುಗೋದಿಲ್ಲ. ಆ ದ್ವೀಪದೊಳಗೆ ಉಳಿದುಕೊಂಡು ಸಕಲ ಪರಿಕ್ಷೆಗಳನ್ನೂ ಎದುರಿಸಿ ಅವ್ರು ಗೆದ್ದಿರ್ತಾರೆ. ಆದ್ರೆ ಗಣಪ ಇದೆಲ್ಲವೂ ದಯ್ಯದ ಕೃಪೆ ಅಂತಾನೆಯೇ ಹೊರತು ತಾವು ಬದುಕಲಿಕ್ಕಾಗಿ ಹೋರಾಡಿದ ನಾಗಿಯನ್ನ ನೆಪಮಾತ್ರಕ್ಕೂ ಅಭಿನಂದಿಸೋದಿಲ್ಲ.
ಹಾಗಾದ್ರೆ ಹುಲಿ ಬರದಂತೆ ಕಾಯ್ದಿದ್ದು ನಾನಲ್ವಾ, ನಮ್ಮ ಸಂಸಾರ ಉಳಿಸಿದ್ದು ನಾನಲ್ವಾ,,ಮನೆ ಬೀಳದಂಗೆ ದುಡಿದದ್ದು ನಾನಲ್ವಾ ಅಂತ ನಾಗಿ ಹತಾಶಳಾಗಿ ಪ್ರಶ್ನೆ ಕೇಳ್ತಿದ್ರೆ ಆಕೆಯ ಪತಿ ನೀನು ನಿಮಿತ್ತ ಮಾತ್ರ ಎಲ್ಲ ಮಾಡಿದ್ದು `ದಯ್ಯ’ ಅಂತಾನೆ.
ಆತನ ಉತ್ತರ ಕೇಳಿನಾಗಿ ಕುಸಿದು ಕೂರ್ತಾಳೆ. ಅಲ್ಲಿಗೆ ಸಿನಿಮಾ ಮುಕ್ತಾಯವಾಗುತ್ತೆ.
ಚಿತ್ರವನ್ನ ನೋಡ್ತ ನೋಡ್ತ ನಾನು ನಾಗಿಯೆಡೆಗೆ ನನ್ನ ಸಹಾನುಭೂತಿ, ಪ್ರೀತಿ ಬೆಳೀತಾ ಹೋಯ್ತು. ನಾಗಿಯಂತೆಯೇ ನಾನು ಯೋಚಿಸೋದಕ್ಕೆ ಶುರುಮಾಡಿದ್ದೆ. ಪಾಪ ಇಷ್ಟೆಲ್ಲಾ ಹೋರಾಡಿದ ನಾಗಿಯನ್ನ ಆಕೆಯ ಗಂಡ ಒಂದು ಮಾತು ಅಭಿನಂದಿಸಿಲಿಲ್ಲವಲ್ಲ ಅಂತ ಆತನ ಮೇಲೆ ಕೋಪವೂ ಬಂತು.ಸಿನಿಮಾ ಮುಗಿದು ಟಿ.ವಿ. ಆರಿಸಿ ನಾನು ನನ್ನ ರೂಮಿಗೆ ಹೊರಡುವ ಮುನ್ನ ನನ್ನ ಅಮ್ಮನನ್ನ ಹೆಂಗನಿಸ್ತು ಸಿನಿಮಾ ಅಂತ ಕೇಳಿದೆ. ನನ್ನ ಅಮ್ಮ ಕೊಟ್ಟ ಉತ್ತರ ನನ್ನ ಮತ್ತಷ್ಟು ದಂಗುಬಡಿಸ್ತು. ನನ್ನ ಕತೀನಾ ಇದ್ದಹಂಗದs… ನಿಮ್ಮಪ್ಪ ಏನೂ ಮಾಡವ ಅಲ್ಲ, ನಮ್ಮ ಸಂಸಾರನೂ ನಾನs ದಂಡಿಗಿ ಮುಟ್ಟಿಸಿದ್ದು, ಆದ್ರ ಒಂದ್ ದಿನಾನೂ ನಾ ಮಾಡಿದ್ದನ್ನ ಯಾರೂ ನೆನೆಸಲಿಲ್ಲಾ… ಅಂತದ್ಳು ನನ್ನಮ್ಮ. ಕಾಸರವಳ್ಳಿ ಸೃಷ್ಟಿಸಿದ ನಾಗಿ ಪಾತ್ರದೊಂದಿಗೆ ನನ್ನ ತಾಯಿ ತನ್ನನ್ನ ಹೋಲಿಸಿಕೊಂಡಿದ್ಳು! ಹೆಚ್ಚೆನೂ ಓದದ ನನ್ನ ತಾಯಿಗೂ ದ್ವೀಪ ಸಿನಿಮಾ ಆಕೆದ್ದೇ ನೆಲೆಯಲ್ಲಿ ಅರ್ಥವಾಗಿತ್ತು!
ಸಿನಿಮಾ ಮುಗಿಸಿ ನನ್ನ ರೂಮಿನಲ್ಲಿ ಹಾಸಿಗೆ ಮೇಲೆ ಕುಳಿತು ಸಾಕಷ್ಟು ಹೊತ್ತು ದ್ವೀಪ ಕುರಿತು ಯೋಚಿಸಿದೆ. ಮಲಗುವ ಮುನ್ನ ಆವತ್ತಿನ ಡೈರಿಯಲ್ಲಿ ಒಂದು ಸಾಲು ಬರೆದಿದ್ದೆ “ ಇಂತಾ ಅದ್ಭುತ ಸಿನಿಮಾ ಅಚಾನಕ್ಕಾಗಿ ನೋಡೊದಕ್ಕೆ ಸಿಕ್ತಲ್ಲ. ಇವತ್ತು ನನ್ನ ಪಾಲಿನ ಲಕ್ಕಿ ಡೇ” ಅಂತ….
*ಅಮೀತ್ ದೇಸಾಯಿ
 
 

‍ಲೇಖಕರು G

1 January, 2014

1 Comment

  1. Raj

    A nice tribute to a wonderful movie.
    It is a masterpiece and excellent acting by all, especially Soundarya, she is just too good in this one.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading