ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನನ್ನು ಕಾಡಿದ ’ನಿಮಿತ್ತ’ ….

ರಮೇಶ್ ಗುರುರಾಜ ರಾವ್

ಬದುಕನ್ನು ಯಾವ ಉದ್ದೇಶಕ್ಕೆ ಬದುಕುತ್ತೇವೋ (ಅದು ಸರಿಯೋ ತಪ್ಪೋ, ನಿಜವೋ ಸುಳ್ಳೋ ಅದು ಬೇರೆ ವಿಚಾರ) ಅದನ್ನು ಸಣ್ಣ ಸಣ್ಣ ಎಳೆಗಳಾಗಿ ಕಂಡಾಗ ನಮಗಾಗುವ ಅನುಭವ ಊಹೆಗೂ ನಿಲುಕದ್ದು. ಹೌದಾ ? ಹೀಗೂ ಉಂಟಾ ? ಅರೆ ಈ ಸಂಧರ್ಭ ನನ್ನ ಬದುಕಲ್ಲೇ ಆಗಿದ್ದಲ್ಲವಾ ? ಇದೆಲ್ಲಾ ಪ್ರಶ್ನೆಗಳು ಹುಟ್ಟುವುದು ಸುಳ್ಳಲ್ಲ….. ಇದೆಲ್ಲಾ ನನಗನ್ನಿಸಿದ್ದು ಸೇತೂರಾಂ ನಿರ್ದೇಶನದ “ನಿಮಿತ್ತ” ನಾಟಕ ಕಂಡಾಗ.
ಗಂಡ ಹೆಂಡತಿ, ತಾಯಿ ಮಗ, ತಂದೆ ಮಕ್ಕಳು, ನಮ್ಮ ನಡುವಿನ ಈ ಸಂಬಂಧಗಳು, ವ್ಯವಸ್ಥೆಯ ಹೊಡೆತಕ್ಕೆ ಮತ್ತು ತಮ್ಮದೇ ಆದ ಸ್ವಾರ್ಥಗಳ ಸುಳಿಯೊಳಗೆ ಸಿಕ್ಕಾಗ ಅನುಭವಿಸುವ ತುಮುಲಗಳ ತೇರನ್ನು ಕಂಡಿದ್ದು ನಿಮಿತ್ತ ನಾಟಕದ ದೃಶ್ಯಗಳಲ್ಲಿ.

ಭಂಡ ಬದುಕನ್ನೇ ತನ್ನ ಜೀವನದ ಪರಮ ಗುರಿಯನ್ನಾಗಿಸಿಕೊಂಡ ಗಂಡನೆಂಬ ಪ್ರಾಣಿ, ಹೊರಗೂ ದುಡಿದು, ಮನೆಯಲ್ಲೂ ಚಾಕರಿ ಮಾಡಿ, ಮಕ್ಕಳನ್ನು ಸಾಲದೆಂಬಂತೆ ಗಂಡನನ್ನೂ ಸಾಕುವ ಕಷ್ಟ ಜೀವಿ ಹೆಂಗಸು, ತನ್ನ ಮಗ ಕಳ್ಳ ಸ್ವಾರ್ಥಿಯೆಂದು ಗೊತ್ತಿದ್ದರೂ, ಒಂದು ಹೆಣ್ಣಿನ ಬಾಳನ್ನು ಬಲಿ ಕೊಟ್ಟಾದರೂ ಮಗನನ್ನು ಸರಿ ದಾರಿಗೆ ತರುವ ಆಲೋಚನೆಯ ತಾಯಿ, ಇವತ್ತಿನ ಮನಸ್ಥಿತಿಗೆ ಮಾತನಾಡುವ NRI ಮಕ್ಕಳು, ವೃತ್ತಿಧರ್ಮ, ಹಣಕಾಸು ಎನ್ನುತ್ತಲೇ ಮಾನವೀಯತೆ ಬಗ್ಗೆ, ದುರಾಸೆಯ ಬಗ್ಗೆ, ಸಮಾಜದ ವ್ಯವಸ್ಥೆಯ ಬಗ್ಗೆ ಮಾತಾಡುವ ಹೃದಯ ತಜ್ಞ, ಇವಿಷ್ಟೂ ಅಲ್ಲಿಯ ಪಾತ್ರಗಳು. ವಿಶೇಷವೆಂದರೆ ನಾಟಕದುದ್ದಕ್ಕೂ ಯಾವ ಪಾತ್ರಗಳಿಗೂ ಹೆಸರಿಲ್ಲ. ಎಲ್ಲವೂ ರಂಗದ ಮೇಲೆ ಕಾಣಿಸಿಕೊಳ್ಳುವುದು ಬರೀ ಸಂಬಂಧಗಳಾಗಿ. ಹೀಗಾಗಿ , ಅವು ನಮ್ಮೊಳಗೇ ಇಳಿಯುತ್ತಾ ಹೋಗುತ್ತವೆ. ಹೆಸರೊಂದನ್ನು ಕೊಟ್ಟುಬಿಟ್ಟರೆ ನಾವು ಸಂಬಂಧದ ಬೇರುಗಳನ್ನು ಕಾಣುತ್ತಿರಲಿಲ್ಲ ಅನ್ನಿಸುತ್ತದೆ.
ನಾಟಕ ಶುರುವಾಗುವುದೇ ಹೃದಯ ತಜ್ಞ, ಒಂದರ್ಥದಲ್ಲಿ ಸೂತ್ರಧಾರನ ಮಾತುಗಳಿಂದ. ದುಡ್ಡಿನಾಸೆಯ ವೈದ್ಯರ ಜನ್ಮ ಜಾಲಾಡುವ, ಸಂದರ್ಭ ಬಂದಾಗ ಅನಿವಾರ್ಯತೆಯ ಬಲೆಗೆ ಸಿಕ್ಕಿಕೊಳ್ಳುವ ಪಾತ್ರ, ಸ್ಥಳ ಪರಿಚಯ ಮಾಡಿಕೊಡುತ್ತಲೇ ಆಸ್ಪತ್ರೆಗಳ ತಾಪತ್ರಯಗಳನ್ನು ಅದನ್ನು ನಡೆಸುವವರ ದ್ವಂದ್ವ ತೊಳಲಾಟಗಳನ್ನು ಹೇಳುತ್ತಾ ಹೋಗುತ್ತದೆ. ಇಲ್ಲಿಂದ ಕಥೆ ಬಿಚ್ಚಿಕೊಳ್ಳುತ್ತದೆ. ಎಂ ಬಿ ಎ ಮಾಡಿ ಆಸ್ಪತ್ರೆಯ ವ್ಯವಸ್ಥೆಯನ್ನು, ರೋಗಿಗಳ ನಾಡಿ, ಹೃದಯ ಮಿಡಿತವನ್ನು ದುಡ್ಡಿನ ಶಬ್ಧವಾಗಿ ಅಳೆಯುವ ಆಸ್ಪತ್ರೆಯ administrator ತಣ್ಣಗಿನ ಕ್ರೌರ್ಯವನ್ನು ನಮ್ಮ ಮುಂದಿಡುತ್ತಾನೆ. ಮಗನನ್ನು ಉಳಿಸಿಕೊಳ್ಳಲು ಇಲ್ಲಸಲ್ಲದ ಯತ್ನ ಮಾಡುವ ತಾಯಿ, ತನ್ನ ಮಗನ ಹೆಂಡತಿಗೆ ಅವಳ ಆಫೀಸಿನಿಂದ ದುಡ್ಡಿನ ವ್ಯವಸ್ಥೆ ಮಾಡಿದ ಮೇಲೆ, ತನ್ನ ಮಗನ ಹೆಂಡತಿಯನ್ನು ಸಂಪರ್ಕಿಸುತ್ತಾಳೆ.

ಇದು ಅತ್ತೆ ಸೊಸೆ ಮಧ್ಯೆ ಭಾವಗಳ ಸ್ಪೋಟಕ್ಕೆ ಕಾರಣವಾಗುತ್ತದೆ. ಹೇಗಾದರೂ ಈ ದುಷ್ಟ ಗಂಡನಿಂದ ಮುಕ್ತಿ ಪಡೆಯುವ ಹಂಬಲದ (ಪ್ರತಿಯೊಂದು ಹೆಣ್ಣಿನ ತೊಳಲಾಟ ಬಹುಷಃ ಇದೇ ಇರಬಹುದು) ಹೆಂಡತಿ, ಬದುಕಿನ ಸೂಕ್ಷ್ಮಗಳನ್ನು, ದುರಂತಗಳನ್ನು, ನಿರ್ಭಾವುಕವಾಗಿ ಎಳೆ ಎಳೆಯಾಗಿ ಬಿಡಿಸಿಡುತ್ತಾಳೆ. ನಂತರ ಅಮೆರಿಕಾದಿಂದ ಬಂದ ಮಕ್ಕಳು, ಅವಳದೇ ತಪ್ಪು ಎನ್ನುವಂತೆ ತಮ್ಮ ನೇರಕ್ಕೆ ತಾವು ಮಾತನಾಡುತ್ತಾರೆ. ತಾಯಿ ಮಕ್ಕಳು, ತಂದೆಯ / ಗಂಡನ ಬಿಡುಗಡೆಗೆ ಕಾಯುತ್ತಲೇ ಹಳೆಯ ಘಟನೆಗಳನ್ನು ನೆನೆಸಿಕೊಂಡು ಕ್ಷಣಕಾಲ ನಗಿಸಿ ನಕ್ಕು ಹಗುರಾಗುತ್ತಾರೆ. ಅತ್ತೆ ಸೊಸೆ ಜಟಾಪಟಿಗಳು, ಬದುಕಿನ ಹಳವಂಡಗಳಿಗೆ ಸಾಕ್ಷಿಯಾಗುತ್ತಾ ಹೋಗುತ್ತವೆ. ಮಕ್ಕಳು ತಾಯಿಯನ್ನು ಧಿಕ್ಕರಿಸುವಂತೆ ಮಾತನಾಡಿ ತಂದೆಯನ್ನು ಭೇಟಿಯಾದಾಗ, ಆತನ ಎಲ್ಲಾ ಕೈಚಳಕಗಳ ಅರಿವು ಉಂಟಾಗುತ್ತದೆ. ಇಲ್ಲಿ, ತಾಯಿ ಏಕೆ ತಂದೆಯನ್ನು ದ್ವೇಷಿಸುತ್ತಾಳೆ ಎಂಬುದು ಸ್ಪಷ್ಟವಾಗುತ್ತದೆ. ಈ ಮಧ್ಯೆ ಅವನು ಮನೆಗೆ ಬಂದ ಮೇಲೆ ಅಗತ್ಯವಿರುವ ತೊಳೆಯುವ ಬಳಿಯುವ ಸೇವೆಗಳನ್ನು ನೇರವಾಗಿ ಹೆಂಡತಿಯ ಮೇಲೆ ಹಾಕಲಾಗುತ್ತದೆ. ಸಂದರ್ಭದ, ವ್ಯವಸ್ಥೆಯ ಕುಚೋದ್ಯ ಇಲ್ಲಿ ಇನ್ನೂ ದಟ್ಟವಾಗುತ್ತಾ ಸಾಗುತ್ತದೆ.
ಇದೆಲ್ಲಾ ನಡೆದ ನಂತರ ಹೃದಯ ತಜ್ಞ, ರೋಗಿಯ ಹೆಂಡತಿಯ ಬಳಿ ಮಾತಾಡಿದಾಗ, ಅವಳು ತನ್ನ ಗಂಡನನ್ನು ತನ್ನ ಬದುಕಿನಿಂದ ದೂರವಿಡಲು ಅಲ್ಲೇ ಆಸ್ಪತ್ರೆಯಲ್ಲೇ ಇಟ್ಟುಕೊಳ್ಳುವಂತೆ ಹೇಳುತ್ತಾಳೆ. ಸಂದರ್ಭದ ಸೂಕ್ಷ್ಮತೆ ಅರಿತ ಹೃದಯ ತಜ್ಞ ಇದಕ್ಕೆ ಒಪ್ಪುತ್ತಾನೆ. ಪುನಃ ತಜ್ಞ ಮತ್ತು ರೋಗಿಯ ನಡುವೆ ಸಂವಾದ ನಡೆಯುತ್ತದೆ. ಈ ಸಮಯದಲ್ಲಿ ಕೂಡ ರೋಗಿ ತಣ್ಣನೆಯ ಕ್ರೌರ್ಯದ ಪ್ರತಿರೂಪವಾಗುತ್ತಾನೆ. ತಜ್ಞ ತನ್ನ ಹೆಂಡತಿಯ ರೂಪ ನೋಡಿ ಅವಳ ಬೇಡಿಕೆಯನ್ನು ಒಪ್ಪಿರುವುದಾಗಿ ಹೇಳಿದಾಗ, ಕೋಪಗೊಂಡ ತಜ್ಞ, ಇಂಥಾ ವ್ಯಕ್ತಿ ಸಮಾಜಕ್ಕೆ ಸ್ವಸ್ಥ ಸಂಬಂಧಗಳಿಗೆ ವ್ಯತಿರಿಕ್ತ ಎಂದು ಅರಿವಾಗಿ ಆತನ ವೃತ್ತಿ ಧರ್ಮದ ವಿರುದ್ಧವಾಗಿ ಆ ರೋಗಿಯ ಚಿಕಿತ್ಸೆ ನಿಲ್ಲಿಸುತ್ತಾನೆ, ರೋಗಿ ಸಾಯುತ್ತಾನೆ.
ಇಡೀ ನಾಟಕದ ಉದ್ದಕ್ಕೂ ಸಂಭಾಷಣೆಯ ಮೊನಚಾದ ಬಾಣಗಳು ಸತತವಾಗಿ ಹಾರುತ್ತಲೇ ಇರುತ್ತವೆ. ಸೇತೂರಾಂ ನಾಟಕವೆಂದ ಮೇಲೆ ಇದು ಸಹಜವೇ ಕೆಲವು ಸಂಭಾಷಣೆಗಳು ನಮಗೆ ಚಪ್ಪಲಿಯಲ್ಲಿ ಹೊಡೆದಷ್ಟೇ ರಭಸವಾಗಿದ್ದರೂ, ನಾವು ಪ್ರೇಕ್ಷಕರಾಗಿ ನಗುತ್ತೇವೆ, ಚಪ್ಪಾಳೆ ತಟ್ಟುತ್ತೇವೆ. ಇದು ನನ್ನ ಮಟ್ಟಿಗೆ ನಾವು ಪ್ರೇಕ್ಷಕರಾಗಿ ಆ ಸಂಭಾಷಣೆಗಳಿಗೆ ನಾವು ಪ್ರತಿಕ್ರಯಿಸುವ ರೀತಿಯಾ ಎನ್ನುವ ಪ್ರಶ್ನೆ. ಬದುಕಿಗೆ ಸುಳ್ಳು ತುಂಬಾ ಇಷ್ಟ , ನಿಜವಲ್ಲ ಎಂಬ ಮಾತು ಸಾರ್ವಕಾಲಿಕ ಸತ್ಯವೆನಿಸಿಬಿಡುತ್ತದೆ. ಹೆಂಡತಿಯ ಪಾತ್ರ ಎಲ್ಲ ಕಡೆಯಿಂದಲೂ ಹೊಡೆತ ತಿಂದಾಗ, ಆ ಪಾತ್ರದ ಬಗ್ಗೆ ದಟ್ಟ ಮೋಡದ ರೀತಿಯ ಭಾವನೆಗಳು ಉಂಟಾಗುತ್ತವೆ. ತಾಯಿಯ ಪಾತ್ರವಂತೂ, ಅದರ ಅಸಹಾಯಕತೆ, ತೊಳಲಾಟದಿಂದ ಗಟ್ಟಿಯಾಗುತ್ತದೆ. ಮಕ್ಕಳ ಪಾತ್ರಗಳು, ಪರಿಸ್ಥಿತಿಯ ಅಲೆಯ ಮೇಲೆ ತೇಲಿಕೊಂಡು ದೂರದಿಂದ ಕೈ ಚಾಚಿ ಹೋಗಿಬಿಡುತ್ತವೆ. ಇನ್ನು ಹೃದಯ ತಜ್ಞ ನಮ್ಮ ಎದೆಯಾಳದಲ್ಲಿ ತನ್ನ ಕಳವಳದ ಪ್ರತಿಷ್ಠಾಪನೆ ಮಾಡಿಬಿಡುತ್ತಾನೆ. ಅವನು ಹೇಳುವ “ಹೆದರಿಕೆ ಆಗುತ್ತೆ ಕಣ್ರೀ… ಎದೆಯನ್ನು ಬಗೆದು ನೋಡಿದಾಗ ಹೃದಯವೇ ಇಲ್ಲದಿದ್ದರೆ ಹೇಗೆ ಹೇಳಿ ಎಂದು ಪ್ರಶ್ನೆ ತೋರಿ ನಮ್ಮೊಳಗೇ ಬಿರುಗಾಳಿ ಎಬ್ಬಿಸಿ, ನಮ್ಮ ಹೃದಯವಂತಿಕೆಯ ಬಗ್ಗೆ ಮತ್ತೊಮ್ಮೆ ಮುಟ್ಟಿ ನೋಡಿಕೊಳ್ಳುವಂತೆ ಮಾಡುತ್ತಾನೆ. ಇದೆಲ್ಲದರ ಮಧ್ಯೆ, ಈ ತೊಳಲಾಟಗಳ, ಹೋರಾಟಗಳ, ಹಾರಾಟಗಳ ರೂವಾರಿಯಾದ ಗಂಡ / ರೋಗಿ / ತಂದೆ ನಮ್ಮೊಳಗೇ ನಮ್ಮೆಲ್ಲರ ದುಷ್ಟತನದ ಕಹಿಯನ್ನು ಉಳಿಸಿಬಿಡುತ್ತಾನೆ. ನಿರ್ಭಾವುಕತೆಯಿಂದ ತಾನು ಮಾಡಿದ ಸಕಲ ಘನಕಾರ್ಯಗಳ ಬಗ್ಗೆ ಮಕ್ಕಳಿಗೆ ಹೇಳುವಾಗ ನಮ್ಮೊಳಗೇ, ನಾವು ಕೂಡ ಹೀಗೇನಾ ಎಂಬ ಪ್ರಶ್ನೆ ಹುಟ್ಟಿಬಿಡುತ್ತದೆ.
ನಾಟಕಕ್ಕೆ, ಚಿಕ್ಕದಾಗಿ ಆದರೆ ಅಷ್ಟೇ ಚೊಕ್ಕವಾಗಿ ಕಟ್ಟಿಕೊಟ್ಟಿದ್ದು ಕಿರಿಯ ಗೆಳೆಯ ಮನೋಜ್ ವಸಿಷ್ಠ. ಸಂಗೀತ ನಾಟಕದ ತೂಕದ ಜೊತೆಗೆ ಹೊಂದಿಕೊಂಡು ಸಾಗುತ್ತದೆ
ತಾಯಿಯಾಗಿ ಹಿರಿಯ ನಟಿ ಬಿ ಜಯಶ್ರೀ ಅಸಹಾಯಕತೆಯ ಪ್ರತಿರೂಪವಾಗಿ ನಮ್ಮ ಮುಂದೆ ನಿಲ್ಲುತ್ತಾರೆ. ತುಂಬಾ matured ಆದ ಪಾತ್ರ. ಬದುಕಿನ ಎಲ್ಲಾ ಮಜಲುಗಳನ್ನು ಕಂಡ ಹಿರಿಯ ಜೀವವಾಗಿ ಪಾತ್ರಕ್ಕೆ ನ್ಯಾಯ ಒದಗಿಸುತ್ತಾರೆ. ಹೆಂಡತಿಯಾಗಿ ವಿದ್ಯಾ ವೆಂಕಟರಾಮ್, ನೊಂದ ಜೀವವಾಗಿ, ಏನೇ ಬಂದರೂ ಎಲ್ಲವನ್ನೂ ಎದುರಿಸುತ್ತಲೇ ಬದುಕಿಗೇ ಒಂದು ಸವಾಲಾಗಿ ನಿಲ್ಲುವ ಪಾತ್ರವಾಗಿ ಅದ್ಭುತ. ಈ ಪಾತ್ರವನ್ನು ನಿಭಾಯಿಸಲು ಬೇಕಾದ ಆ ಮಟ್ಟದ maturity ವಿದ್ಯಾಗೆ ಇದೆ. ಮಕ್ಕಳಾಗಿ ದೀಪಾ ಮತ್ತು ಶ್ವೇತಾ ಬಡಿಗೇರ್ (ನಾನು ಈ ನಟಿಯ ಹೆಸರನ್ನು ಸರಿಯಾಗಿ ನೆನಪಿಟ್ಟು ಕೊಂಡಿದ್ದೇನೆ ಎಂದುಕೊಂಡಿದ್ದೇನೆ) ಹೀಗೆ ಬಂದು ಹಾಗೆ ಹೋಗುತ್ತಾರೆ. ಅವರ ಮಾತುಗಳಲ್ಲಿ ಇವತ್ತಿನ ಸಮಾಜದ ದುಷ್ಟರ ಬಗ್ಗೆ, ಅದರಲ್ಲೂ ಸಣ್ಣ ಮಕ್ಕಳ ಮೇಲೂ ಬಲಾತ್ಕಾರ ಮಾಡುವ ಕೀಚಕರ ಬಗ್ಗೆ ಸೇತೂರಾಂ ಹೇಳಿಸಿ, ನಮ್ಮೊಳಗೇ ಒಂದು ಸಾಮಾಜಿಕ ಪ್ರಜ್ಞೆ ಜಾಗೃತಿಗೊಳಿಸುವ ಪ್ರಯತ್ನ ಮಾಡುತ್ತಾರೆ. ಆದರೆ ಪಾತ್ರಗಳಾಗಿ ಅಷ್ಟರ ಮಟ್ಟಿಗೆ ಮನದಲ್ಲಿ ಗಟ್ಟಿಯಾಗುವುದಿಲ್ಲ
ಹೃದಯ ತಜ್ಞನಾಗಿ, ಮಾನವೀಯ ತಲ್ಲಣಗಳನ್ನು ಎದೆಯಲ್ಲಿಟ್ಟುಕೊಂಡು ಬದುಕುವ ಪಾತ್ರವಾಗಿ ಸೇತೂರಾಂ ಅದ್ಭುತವಾದ ಯಶಸ್ಸನ್ನು ಕಂಡಿದ್ದಾರೆ. ಅವರ ಮಾತುಗಳು ನೇರ, ಸ್ಪಷ್ಟ. ನಾಟಕದಲ್ಲಿನ ಅವರ ಮಾತುಗಳು ನಮ್ಮತ್ತ ಬರುತ್ತವೆ ಮತ್ತು ಹಾಗೆಯೇ ನಮ್ಮೊಳಗೇ ಚಿಂತನೆಯ ಅಲೆ ಹುಟ್ಟಿಸುತ್ತದೆ.
ಬಹುಷಃ, ಈ ನಾಟಕದ ಪ್ರೇಕ್ಷಕರಿಗೆ ಇವೆಲ್ಲದಕ್ಕಿಂತಾ ಹೆಚ್ಚಿನ ಅಚ್ಚರಿ ಎಂದರೆ, ಅದು, ಸಿಹಿಕಹಿ ಚಂದ್ರು. ಕಾಮೆಡಿ ಪಾತ್ರಗಳಲ್ಲೇ ಗುರುತಿಸಿಕೊಂಡ ಈ ಅದ್ಭುತ ಕಲಾವಿದನೊಳಗೆ ಇನ್ನೂ ಸಾವಿರಾರು ಬಣ್ಣಗಳಿವೆ ಎಂಬುದಕ್ಕೆ ರೋಗಿಯಾಗಿ, ಗಂಡನಾಗಿ, ತಂದೆಯಾಗಿ ನಿಭಾಯಿಸಿರುವುದೇ ಸಾಕ್ಷಿ. ತುಂಬಾ ಸೀರಿಯಸ್ ಕಲಾವಿದ ಈ ಮನುಷ್ಯ ಎಂಬುದನ್ನು ಜಗತ್ತು ಇನ್ನಾದರೂ ಮನಗಾಣಲೇಬೇಕು. ಅದ್ಭುತ ಪ್ರತಿಭೆಯ ಈ ಕಲಾವಿದನ ತಾಕತ್ತನ್ನು ಇನ್ನಾದರೂ ನಮ್ಮ ಚಿತ್ರರಂಗ ಗಂಭೀರ ರೀತಿಯಲ್ಲಿ ದುಡಿಸಿಕೊಳ್ಳಬೇಕು. ಸಂಭಾಷಣೆ ಹೇಳುವ ರೀತಿ, ಯಾವುದೇ ಭಾವನೆಗಳಿಲ್ಲದೆ ನಾನಿರುವುದೇ ಹೀಗೆ ಎನ್ನುತ್ತಲೇ ಜಗತ್ತಿನ, ಮನುಷ್ಯನ ಮನಸ್ಸಿನ ಎಲ್ಲಾ ಧೂರ್ತತನವನ್ನು ಬಿಚ್ಚಿಡುವ ರೀತಿ ಅದ್ಭುತ. ಕೊನೆಯಲ್ಲಿ ರೋಗಿ ಉಸಿರಾಟಕ್ಕೆ ಒದ್ದಾಡುವ ದೃಶ್ಯದಲ್ಲಂತೂ ಈ ಕಲಾವಿದ ಸೂಪರ್, ಸೂಪರ್….
ನಾಟಕ ನೋಡಲೆಂದು ಹೋಗಿ, ಮನಸ್ಸಿಗೆ ಗಾಯ ಮಾಡಿಕೊಂಡು, ನಮ್ಮೊಳಗಿನ ಸ್ವಾರ್ಥವನ್ನು ಗುರುತಿಸಿ ಕೂಡ ನಮ್ಮನ್ನು ಅದರಿಂದ ದೂರವಿರಿಸಿಕೊಳ್ಳುವ ಪ್ರಯತ್ನ ಮಾಡುತ್ತೇವೆ. ಮನುಷ್ಯ ಸಂಬಂಧಗಳು, ಸೂಕ್ಷ್ಮಗಳು, ಯಾವುದರ ನಿಮಿತ್ತ ಎಂಬ ಪ್ರಶ್ನೆ ಬೃಹದಾಕಾರವಾಗಿ ನಿಲ್ಲುತ್ತದೆ
 

‍ಲೇಖಕರು avadhi

23 July, 2013

ನಿಮಗೆ ಇವೂ ಇಷ್ಟವಾಗಬಹುದು…

11 Comments

  1. guruprasad M D

    ramesh avare nimitha natakavanu nodida nanagu kooda ide bavane modithu , thumba chenagi natakada vishshelashane kotidira ,

    • Ramesh Gururajarao

      Dhanyavaadagalu Guruprasad avare !! 🙂

  2. Manjula Narayanarao

    Vimarshe natakadashte chennagide – congrats

    • Ramesh

      Thank you Manjula Madam… 🙂

  3. Shwetha Hosabale

    ಮನುಷ್ಯನ ಮನಸ್ಸಿನ ವಿವಿಧ ಮುಖಗಳನ್ನು ತೆರೆದು ತೋರಿಸುವುದರಲ್ಲಿ ಸೇತುರಾಂ ಸಿದ್ಧಹಸ್ತರು…ನಾನು ಅವರ ನಾಟಕವನ್ನು ನೋಡಿಲ್ಲ, ಧಾರಾವಾಹಿಗಳನ್ನು ತುಂಬ ಇಷ್ಟಪಟ್ಟು ನೋಡಿದ್ದೇನೆ; ಅವುಗಳಲ್ಲಿನ ಪಾತ್ರಪೋಷಣೆಗೆ ಸಂಭಾಷಣೆಗೆ ಬೆರಗಾಗಿದ್ದೇನೆ. ಕಿರುತೆರೆಯಲ್ಲಿ ಸೀತಾರಾಂ ಹೇಗೆ ತಮ್ಮದೇ ಒಂದು ದಾರಿಯನ್ನು ರೂಪಿಸಿಕೊಂಡಿದ್ದಾರೋ ಹಾಗೇ ಸೇತುರಾಂ ಕೂಡಾ ತಮ್ಮದೇ ವಿಭಿನ್ನ ಶೈಲಿಯಲ್ಲಿ ಧಾರಾವಾಹಿಗಳನ್ನು ಕೊಟ್ಟವರು. ಅವರ ಅಭಿಮಾನಿಯಾಗಿ ನಿಮ್ಮ ವಿಶ್ಲೇಷಣೆ ಓದಿ ಖುಷಿಯಾಯಿತು, ನಾಟಕ ನೋಡಬೇಕೆನಿಸಿತು.

  4. Santosh Karki

    Super blog on Nimitta. Nimage dhanyavadagalu. Naanu 34 , innu sambandhagala tumulinalli hejje iduttiddene, aadrooo nanna yella jeevana kannadi antha itta nataka. Naavu inthadakke tayyarirabeku

  5. Harish athreya

    ನನಗೆ ತೋಚಿದ್ದು……
    ಒ೦ದು ಸಾವಿನ ಸುತ್ತ – ’ನಿಮಿತ್ತ’
    “ನಾಲ್ಕು ಜನ ಪು೦ಡರು ಒ೦ದು ಹುಡುಗಿಯನ್ನ ಅತ್ಯಾಚಾರ ಮಾಡ್ತಾರೆ, ನೀರಲ್ಲಿ ನೆ೦ದು ಒರಟಾದ ತುಕ್ಕು ಹಿಡಿದ ಕಬ್ಬಿಣವನ್ನ…. ನಾಗರಿಕ ಸಮಾಜ, ಅದರೊಲ್ಲೊಬ್ಬ ಅಪ್ರಾಪ್ತ ವಯಸ್ಸಿನವನ೦ತೆ”. ಹೀಗೆ ಒಬ್ಬ ಕಾರ್ಡಿಯಾಲಜಿಸ್ಟ್ ಹೇಳುತ್ತಾ ಹೋಗುತ್ತಾನೆ. ಆ ದನಿಯಲ್ಲಿನ ಹತಾಶೆ ನೋವು ಬೇಸರ ಕ೦ಡು ಬರುತ್ತಾ ಮು೦ದಾಗುವ ಮಾನಸಿಕ ಅತ್ಯಾಚಾರದ ಬಗ್ಗೆ ಆ ಮಾತುಗಳು ಮುನ್ನುಡಿಯಾಗುತ್ತವೆ.
    ಒ೦ದು ಸಾವಿನ ನಿರೀಕ್ಷೆಯೊ೦ದಿಗೆ ನಾಟಕದ ಪರದೆಯೇಳುತ್ತದೆ. ಸಾವಿನ ಹಾಸಿಗೆಯಲ್ಲಿ ಮಗನಿದ್ದಾನೆ. ಅದರ ಚಿಕಿತ್ಸೆಗಾಗಿ ತಾಯೊಬ್ಬಳು ಬರುತ್ತಾಳೆ. ಅವಳಿಗೆ ೭೮ ಅವನಿಗೆ ೬೩ ಬೇಜವಾಬ್ದಾರಿ ಮತ್ತು ಎಲ್ಲ ಚಟಗಳ ದಾಸನಾದ ಅಯೋಗ್ಯ ಮಗನನ್ನ ಪಡೆದಿರುವ ಮತ್ತು ಯೋಗ್ಯ ಸೊಸೆಯನ್ನೂ ಪಡೆದಿರುವ ತಾಯಿಯ ಮಾತುಗಳೊ೦ದಿಗೆ ನಾಟಕ ಮು೦ದುವರಿಯುತ್ತದೆ. ಅವನ ಸಾವಿಗೆ ಸೊಸೆ ಕಾದಿರಬಹುದು. ಅವಳಿಗೆ ಅದಾದಾಗಲೇ ಮುಕ್ತಿ. ಅವನ ಉಳಿಸುವಿಕೆಯಲ್ಲಿ ಅವಳು ನಿರಾಸಕ್ತಳು. ಆದ ಕಾರಣ ಮೊದಲು ದುಡ್ಡಿನ ಹೊ೦ದಿಕೆ ಯಾಗಲಿ
    ಅವಳ ಸ೦ಬಳದ ಮೇಲೆಯೇ ಅವಲ೦ಬಿತವಾದ ತಾಯಿ ಮಗ ಅವಳ ಆಫೀಸಿನಿ೦ದ ಬರುವ ಮೆಡಿಕ್ಲೈಮ್ ದುಡ್ಡನ್ನು ಉಪಯೋಗಿಸಿಕೊಳ್ಳುವ ಮತ್ತು ಅವಳಿಗೆ ತಿಳಿಯದ೦ತೆಯೇ ಅದನ್ನು ಆಫೀಸಿಗೆ ತಲುಪಿಸುವ ಕ್ರುತ್ಯವನ್ನು ತಾಯಿ ಎಸಗುತ್ತಾಳೆ. ಅದಕ್ಕೆ ಆಕೆಯದೇ ಆದ ಸಮರ್ಥನೆಯಿದೆ
    ಅದು ಸೊಸೆಯ ಪರವಾಗಿಯೂ ಮತ್ತು ವಿರುದ್ಧವಾಗಿಯೂ ಇರುವುದು ವಿಪರ್ಯಾಸ.ಮಗನ ಎಲ್ಲಾ ಚಟಗಳನ್ನೂ ಸಹಿಸಿಕೊಳ್ಳುವ ಸೊಸೆ ದೊಡ್ಡವಳೇನೋ ಹೌದು ಆದರೆ ಅವನ ಚಟಗಳಿಗೆ ಮತ್ತು ಬೇಜವಾಬ್ದಾರಿತನಕ್ಕೆ ಬೇಸತ್ತು ಅವನ್ನು ಸಾಯಲು ಬಿಡುವುದಕ್ಕೂ ಹೇಸುವವಳಲ್ಲ, ಕಾರಣ ಅವಳು ಪಟ್ಟ ನೋವೇ ಆಗಿದೆ ಎನ್ನುವ ತಾಯಿ ಸೊಸೆಯ ಪರವಾಗಿ ಮತ್ತು ವಿರುದ್ದವಾಗಿ ಮಾತನಾಡುತ್ತಾಳೆ.
    ಗ೦ಡನ ಆಯಸ್ಸು ಹೆ೦ಡತಿಯ ಯೋಗ್ಯತೆಯಲ್ಲಿರುತ್ತದೆ. ಸರಿ ಹೋದಾನು ಎ೦ದು ಮಾಡಿಸಿದ ಮದುವೆ ಅವಳ ಕೊರಳಿಗೆ ಉರುಳಾದದ್ದು. ಅವನನ್ನು ಸರಿದಾರಿಗೆ ತರುವ ಜವಾಬ್ದಾರಿ ಹೆ೦ಡತಿಯದೇ ಆಗಿತ್ತು ಅದನ್ನು ನಿಭಾಯಿಸಲಾಗದಿದ್ದುದು ಅವಳ ತಪ್ಪು. ಅವನ ಹೀನಾಯ ಸ್ಥಿತಿಗೆ ಅವಳೇ ಕಾರಣವೆನ್ನುವ೦ತೆ ಸೊಸೆಯನ್ನು ದೂರುವ ತಾಯಿ. ಮಾವನ ಸಾವಿನ ರಹಸ್ಯವನ್ನು ಕೆದಕಿ ಅತ್ತೆಯ ಯೋಗ್ಯತೆಯನ್ನು ಹೇಳುವ ಸೊಸೆ. ಬಿ ಜಯಶ್ರೀಯವರು ಅತ್ತೆಯಾಗಿ ಇಡೀ ಮೊದಲ ಭಾಗವನ್ನು ಆವರಿಸಿಬಿಡುತ್ತಾರೆ. ಅವರ ಮು೦ದೆ ಮ೦ಗಳ ಸಪ್ಪೆ ಎನಿಸಿದ್ದು ಹೌದು. ಸಹಜವಾಗಿ ಜಯಶ್ರೀ ಅವರ ಅಭಿನಯ ಗೊ೦ದಲ ಮತ್ತು ಪಾಪಪ್ರಜ್ಞೆಯನ್ನು ತೋರುವ ಪರಿ ಎಲ್ಲವೂ ಅದ್ಭುತ.
    ಮ೦ಗಳಾರವರ ನಾಟಕದ ಸ೦ಭಾಷಣೆಗಳನ್ನು ನೇರವಾಗಿ ಪ್ರೇಕ್ಷಕರಿಗೆ ತಲುಪಿಸುವಲ್ಲಿ ಯಶಸ್ವಿ. ಎಳೆ ಕೂಸಿನ ಆಟವನ್ನು ಮತ್ತದರ ರೂಪನ್ನು ಹೇಳುವಾಗ ಮ೦ಗಳಾ ಅವರ ಭಾವಾಭಿವ್ಯಕ್ತಿಗೆ ಮರು ಮಾತಿಗೆ. ಕಣ್ಣೊಳಗೆ ಕಾ೦ತಿ ಹೇಳುವ ಹ೦ಬಲ ದನಿಯಲ್ಲಿ ಉತ್ಸಾಹತು೦ಬಿ ಹೇಳುವಿಕೆ ಎಲ್ಲವೂ ಅತ್ಯುತ್ತಮ.
    ನ೦ತರದ್ದು ಸಾಯುವ ವ್ಯಕ್ತಿಯ ಮಕ್ಕಳ ಆಗಮನ , ಮಾತು ಕತೆ, ಒಬ್ಬಾಕೆ ಡಾಕ್ಟರ್ ಮತ್ತೊಬ್ಬಾಕೆ ಸಾಫ್ಟ್ ವೇರ್ ಇ೦ಜಿನಿಯರ್. ಇಬ್ಬರ ಕಾಸ್ಟ್ಯೂಮ್, ಆಯಾ ವ್ರುತ್ತಿಗೆ ಮತ್ತು ವಾಸ್ತವದಲ್ಲಿರುವ ಹಾಗೆ ಕೊಟ್ಟಿರುವುದು ಸೊಗಸಾಗಿ ಮೂಡಿತ್ತು. (ಪಾಶ್ ಆದ ಡ್ರೆಸ್ – ಸಾಫ್ಟ್ ವೇರ್ ಇ೦ಜಿನಿಯರದ್ದಾಗಿದ್ದರೆ, ಅರೆ ಪಾಶ್ ಆದ ಧಿರಿಸು ಅಷ್ಟಾಗಿ ಧಿರಿಸಿನ ಕಡೆ ಗಮನ ಹರಿಸದ ಒ೦ದು ಬಗೆಯ ಒರಟು, ವೈದ್ಯರಿಗಿರುವ ಆವಾಹಿಸಿಕೊ೦ಡ ಒಗರು ಭಾವದೊಳಗೆ ಧರಿಸಿದ ಡ್ರೆಸ್)
    ಮಕ್ಕಳಾಗಿ ನ೦ದಿನಿ ಮೂರ್ತಿ ಮತ್ತು ಶ್ವೇತ ತಮ್ಮ ಅಭಿನಯದಿ೦ದ ಕಾಡಿಬಿಟ್ಟರು. ’ ನನಗೆ ಒ೦ದು ವರ್ಷದ ಮಗಳಿದಾಳೆ ಕಣೆ ನೋಡಕ್ಕೆ ಮುದ್ದಾಗಿದಾಳೆ’ ಎನ್ನುತ್ತಾ ತಾಯಿಗಾದ, ಸ೦ಸಾರದ ಚೌಕಟ್ಟಿನೊಳಗಾದ ಅತ್ಯಾಚಾರಕ್ಕೆ ತನ್ನ ಪ್ರತಿಕ್ರಿಯೆ ತೋರಿಸುವಾಗ ಅವರ ಧ್ವನಿಯಲ್ಲಿ ಭಯ ಆತ೦ಕಗಳನ್ನು ನಮಗೆ ಮುಟ್ಟಿಸಿಬಿಡುತ್ತಾರೆ.
    ಎರಡನೆಯ ಬಾರಿ ’ಒ೦ದು ವರ್ಷದ ಮಗಳು ಕಣೆ ನೋಡಕ್ಕೆ ಮುದ್ದಾಗಿದಾಳೆ……” ಮು೦ದೆ ಮಾತಿಲ್ಲ ಭಯ ಹುಟ್ಟಿದ್ದು ಇಲ್ಲಿ. “ಮೂರು ವರ್ಷದ ಮಗಳಿಗೆ ಯಾವ ಬಟ್ಟೆ ಹಾಕ್ಲೇ?” ಮೂರು ವರ್ಷದ ಮಗೂನೂ ಬಿಡದೆ ರೇಪ್ ಮಾಡೋ ಜನಗಳ ಮಧ್ಯೆ ಬದುಕುವ ನಮ್ಮ ಸ್ಥಿತಿಯನ್ನ ಮತ್ತು ಅಸಹಾಯಕತೆಯನ್ನು ಮಾತಿನಲ್ಲಿ ಹೇಳಿ ಭಯವನ್ನು ನಮ್ಮೆದೆಗೆ ದಾಟಿಸಿಬಿಡುತ್ತಾರೆ.
    ನ೦ದಿನಿ ಮೂರ್ತಿ ನಿಮಗೊ೦ದು ನಮಸ್ಕಾರ. ಎದೆ ಝಲ್ ಎನಿಸಿಬಿಟ್ಟಿರಿ. . ಕೋಪ, ಅಸಹ್ಯವನ್ನು ತೋರಿಸಿದ ರೀತಿಗೆ ತಲೆಬಾಗಲೇ ಬೇಕು.
    ಕೆಲವು ಸ೦ಭಾಷಣೆಗಳು ….ಕಾಡಿದ್ದು
    “ನೀವು ಹೆಣ್ಮಕ್ಕಳು ಸುಖವಿಲ್ಲದೆ ಹೇಗೆ ಬದುಕ್ತೀರಿ?”
    ಅದಕ್ಕೆ ಆಕೆ ಕೊಡುವ ಉತ್ತರ ಋತುಗಳು ಬದಲಾದ೦ತೆ ಮತ್ತೆ ಹೊಸತಾದ೦ತೆ ಎನ್ನುವುದು.
    ಆಕೃತಿಗಿ೦ತ ಭಾವ ಮುಖ್ಯ ಎನ್ನುವಾಗ ಶ್ವೇತ( ನಾನು ನೋಡಿದಾಗ ಆಕೆ ಇನ್ನೊಬ್ಬ ಮಗಳಾಗಿ ನಟಿಸುತ್ತಿದ್ದರು) ಮೂರ್ತಿ ಮುಖ್ಯ ಆಗಲಿಲ್ಲ ಭಕ್ತಿಭಾವ ಮುಖ್ಯ. ಭೀಮನಮವಾಸ್ಯೆ ಹಬ್ಬ ಸಗಣಿ ಉ೦ಡೆಕಟ್ಟಿ ಅದಕ್ಕೊ೦ದು ದಾಸವಾಳ.. ಗ೦ಡ ಅ೦ತ ಭಾವಿಸಿಕೊ೦ಡು ಕೈಮುಗಿದು ನಿಲ್ಲೋದು ಗೊತ್ತು ಅದು ಸಗಣಿ ಅ೦ತ ಭಾವದಲ್ಲಿ ಬದುಕ್ತೀವಿ. ಇಷ್ಟು ಸಾಕು …… ಸೇತುರಾ೦ ….. ಮೆದುಳನ್ನ ತೊಳೆದು ಕೈಗಿಡುತ್ತಾರೆ
    ಹರಿ

  6. ತ್ರಿಲೋಚನ ರಾಜಪ್ಪ

    ರಮೇಶ್, ತುಂಬಾ ಚೆನ್ನಾಗಿದೆ ನಿಮ್ಮ ಅನುಭವಗಳು. ನಾನು ಈಗಾಗಲೇ ಎರಡು ಬಾರಿ ನಿಮಿತ್ತ ನೋಡಿದೆ. ಜೀವನದ ಸತ್ಯಗಳು ನಮಗೆ ಹಾಸ್ಯವನ್ನು ಭರಿಸುತ್ತವೆ. ನಾವೆಲ್ಲ ಚಪ್ಪಾಳೆ ತಟ್ಟಿದ್ದು ಆ ಸಂಭಾಷಣೆಗಳಿಗಿಂತ ಅದರ deliveryಗೆ 🙂

  7. Nithish S

    Thank you all 🙂 🙂

  8. ಹರೀಶ್‌ಬಸವರಾಜ್‌, ಹುಳಿಯಾರು

    ಸೇತುರಾಂ ಅವರ ಸಂಭಾಷಣೆಗಳೇ ಅವರ ನಾಟಕ ಮತ್ತು ಧಾರವಾಹಿಗಳಿಗೆ ಜೀವ ಎಂದರೆ ತಪ್ಪಾಗಲಾರದು…… ನಾನು ಅವರ ನಾಟಕಗಳನ್ನು ನೋಡದೆ ಇರಬಹುದು ಆದರೆ ಅವರ ಧಾರವಾಹಿಗಳಿಗೆ ಅಭಿಮಾನಿಯಾಗಿದ್ದೆ ಸಂಬಂಧಗಳ ಮಧ್ಯೆ ಅವರು ಬರೆಯುವ ಒಂದೊಂದು ಸಂಭಾಷಣೆಗಳೂ ಅದ್ಭುತ ಅವು…ಪ್ರತಿಯೊಬ್ಬರನ್ನು ಮನ ಕಲಕಿಸುತ್ತವೆ…ಬಹಳ ಬೇಗ ಮತ್ತೊಂದು ಧಾರವಾಹಿ ಅವರ ಕುಂಚದಿಂದ ಅರಳಲಿ ಎಂಬುದೇ ಸೇತುರಾಂರ ಅಭಿಮಾನಿಯ ಬಯಕೆ

  9. Sarala

    natakada sambhashanegalu, abhinaya, adarallu sihikahi chandru avardantu tumba, tumba chennagittu. mattomme nodbeku.

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading