ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನ್ನನ್ನು ಕಾಡಿದ ಈ ಫ್ರೆಂಚ್ ಚಿತ್ರ – ಆಕರ್ಷ ಬರೀತಾರೆ

ಆಕರ್ಷ

ಫ್ರ್ಯಾನ್ಸ್ ನಿಂದ

ಫ್ರೆಂಚ್ ಚಿತ್ರ: ಲೋಬರ್ಜ್ ಎಸ್ಪ್ಯಾನ್ಯೋಲ್
ನಿರ್ದೇಶನ: ಸೆಡ್ರಿಕ್ ಕ್ಲಾಪಿಶ್

ಇದೊಂದು ಸರಳ ಕಥಾವಸ್ತುವಿನ ನೇರ ನಿರೂಪಣೆಯ ಚಿತ್ರ. ತಂದೆಯ ಸ್ನೇಹಿತರೊಬ್ಬರ ಸಲಹೆಯ ಮೇರೆಗೆ ಚಿತ್ರದ `ನಾಯಕ’ ಕ್ಸೇವಿಯರ್ ತಾಯ್ನೆಲವಾದ ಫ್ರಾನ್ಸ್ನಿಂದ ಸ್ಪೇನಿನ ಬಾರ್ಸಿಲೋನಕ್ಕೆ ಸ್ನಾತಕೋತ್ತರ ವಿದ್ಯಾಭ್ಯಾಸಕ್ಕಾಗಿ ಬರುತ್ತಾನೆ. ತಾಯಿ ಮತ್ತು ಜೀವದ ಗೆಳತಿಯನ್ನು ಅಗಲುವುದು ಕೊಂಚ ಕಸಿವಿಸಿ ಎನಿಸಿದರೂ ಹೊಸ ದೇಶದ ಸೆಳೆತ, ಅನ್ವೇಷಣೆಯ ಉತ್ಸಾಹ ಬಹು ಬೇಗ ಎಲ್ಲವನ್ನು ಮರೆಸಿಬಿಡುತ್ತದೆ. ಏರ್ ಪೋರ್ಟಿನಲ್ಲಿ  ಪರಿಚಿತವಾದ ಯುವ ದಂಪತಿಗಳು ಬಾರ್ಸಿಲೋನಾದ ತಮ್ಮ ಮನೆಗೆ ಪ್ರೀತಿಯ ಆಹ್ವಾನ ನೀಡುತ್ತಾರೆ. ಗಂಡ ನರ ತಜ್ಞ,  ಹೆಂಡತಿ ಜೀವನೋತ್ಸಾಹದ ಚಿಲುಮೆ.
ನಗರದ ಮಧ್ಯಭಾಗದಲ್ಲಿ, ಬೇರೆ ಬೇರೆ ದೇಶದ ಬೇರೆ ಬೇರೆ ಭಾಷೆಯ ಐವರು ಯುವಕ, ಯುವತಿಯರು ವಾಸ ಮಾಡುತ್ತಿದ್ದ ಅಪಾರ್ಟ್ ಮೆಂಟಿನಲ್ಲಿ ಕ್ಸೇವಿಯರ್ ನ  ಬಾರ್ಸಿಲೋನಾದ ಜೀವನ ಆರಂಭವಾಗುತ್ತದೆ. ಸ್ವಾತಂತ್ರ್ಯ, ಸ್ವಚ್ಛಂದದ ಲೋಕ ಅವನ ಬದುಕಿಗೆ ಹೊಸ ಮೆರಗು ಕೊಡುತ್ತದೆ. ಏರ್ ಪೋರ್ಟ್ ನಲ್ಲಿ ಸಿಕ್ಕ ಯುವ ದಂಪತಿಗಳ ಮನೆಗೆ ಆಗಾಗ್ಗೆ ಭೇಟಿ ನೀಡುತ್ತಾ, ನರರೋಗ ತಜ್ಞನ ಹೆಂಡತಿಯ ಜೊತೆ ಬಾರ್ಸಿಲೋನಾದ ಚೆಲುವನ್ನು ಹೀರಿಕೊಳ್ಳುತ್ತ ಅವಳ ಮೋಹ ಪಾಶಕ್ಕೆ ಸಿಲುಕುತ್ತಾನೆ. ಈ ಮಧ್ಯೆ ಅವನ ಜೀವದ ಗೆಳತಿಯು ಹೊಸ ಸ್ನೇಹಿತನೊಂದಿಗೆ ಅಲೆದಾಡುವ ವಿಷಯ ತಿಳಿದು ಫ್ರಾನ್ಸ್ ದೇಶಕ್ಕೆ ಮರಳಿ ಗೆಳತಿಯನ್ನು ಮತ್ತೆ ಒಲಿಸಿಕೊಳ್ಳುವ ಪ್ರಯತ್ನ ಮಾಡುತ್ತಾನೆ. ಅದು ಸಫಲವಾಗದೆ ನಿರಾಶೆಗೊಂಡ ನಾಯಕ ಬಾರ್ಸಿಲೋನಾಕ್ಕೆ ಹಿಂದಿರುಗುತ್ತಾನೆ. ಇದ್ದಕ್ಕಿದ್ದಂತೆ ಅವನಿಗೆ ತಾನು ಒಂಟಿ ಎಂಬ ಭಾವನೆ ಮೂಡುತ್ತದೆ. ಅನಾಥ ಪ್ರಜ್ಞೆ ಕಾಡುತ್ತದೆ. ತನ್ನ `ಐಡೆಂಟಿಟಿ’ ಯನ್ನು ಕಳೆಡುಕೊಂಡಂತೆ ವಿಚಿತ್ರ ಕನಸುಗಳು ಬೀಳುತ್ತವೆ.
ತನ್ನ ಗೆಳೆಯ ನರ ತಜ್ಞನನ್ನು ಭೇಟಿ ಮಾಡಿದಾಗ ಆತ ಅಂತಹ ಸಮಸ್ಯೆ ಇಲ್ಲವೆಂದು ಇನ್ನು ಮುಂದೆ ತನ್ನ ಹೆಂಡತಿಯಿಂದ ದೂರ ಉಳಿಯಬೇಕೆಂದು ಮೃದುವಾಗಿ ಎಚ್ಚರಿಸುತ್ತಾನೆ. ಉಳಿದ ಆರು ತಿಂಗಳ ವಿದ್ಯಾಭ್ಯಾಸ ಮುಗಿಸಿ ಕ್ಸೇವಿಯರ್ ಫ್ರಾನ್ಸ್ ಗೆ ಹಿಂತಿರುಗಿ ಕಛೇರಿಯೊಂದರಲ್ಲಿ ಕೆಲಸಕ್ಕೆ ಸೇರುತ್ತಾನೆ. ಆದರದು ಅವನಿಗೆ ಅಷ್ಟೇನು ಖುಷಿ ಕೊಡುವುದಿಲ್ಲ. ಒಮ್ಮೆ ಮನೆಯಲ್ಲಿ ತನ್ನ ಮೇಜಿನ ಡ್ರಾಯರ್ ಎಳೆಯುವಾಗ ಅಲ್ಲಿದ್ದ ಹಳೆಯ ಭಾವಚಿತ್ರಗಳು ಕೆಳಗೆ ಬೀಳುತ್ತವೆ. ತಾನು ಚಿಕ್ಕವನಿದ್ದಾಗ ಅದೇ ಮೇಜಿನ ಮೇಲೆ ಕೂತು ಕವಿತೆಯೊಂದನ್ನು ಬರೆಯುತ್ತಿದ್ದ ಚಿತ್ರವೊಂದು ಕಣ್ಣಿಗೆ ಬೀಳುತ್ತದೆ. ತಾನೇನಾಗಬೇಕೆಂದು ತಿಳಿಯದೆ ಅನಿಶ್ಚಿತತೆಯಿಂದ ಒದ್ದಾಡುತ್ತಿದ್ದ ಕ್ಸೇವಿಯರ್ ಕೊನೆಗೆ ತಾನು ಬರಹಗಾರ ಎಂದು ಕಂಡುಕೊಳ್ಳುವುದರ ಮೂಲಕ ಚಿತ್ರ ಮುಕ್ತಾಯಗೊಳ್ಳುತ್ತದೆ.

ಕಥಾವಸ್ತು ಅತ್ಯಂತ ಸರಳವಾಗಿದ್ದರೂ, ಸಹಜ ಸನ್ನಿವೇಶಗಳ ಸುಂದರ ಹೆಣಿಗೆ ಪ್ರೇಕ್ಷಕನನ್ನು ಕುರ್ಚಿಗೆ ಕಟ್ಟಿ ಹಿಡಿಯುತ್ತದೆ. ಬಾರ್ಸಿಲೋನಾದ ಗಗನ ಚುಂಬಿ ಕಟ್ಟಡಗಳು, ಚಿತ್ರವತ್ತಾದ ಬೀಚ್ಗಳು ಕ್ಯಾಮರಾದ ಕಣ್ಣಿನಲ್ಲಿ ಹೊಸಲೋಕವೊಂದನ್ನು ಸೃಜಿಸಿದೆ. ಸ್ಪೈನ್ ದೇಶದ ಸ್ಥಳೀಯ ರಾಗಗಳನ್ನು ಭಾವುಕ ಸನ್ನಿವೇಶಗಳಿಗೆ ಅತ್ಯಂತ ಸಮಂಜಸವಾಗಿ ಸಂಗೀತ ನಿರ್ದೇಶಕ ಬಳಸಿಕೊಂಡಿದ್ದಾನೆ. ನಟನೆಯೊಂದಿಗೆ ಸಂಗೀತ ಮಿಳಿತಗೊಂಡಿರುವುದು ವಿಶೇಷ. ಎಲ್ಲ ನಟರು ತಮ್ಮ ಪಾತ್ರಕ್ಕೆ ನ್ಯಾಯ ಒದಗಿಸಿದ್ದಾರೆ. ಈ ಪಾತ್ರಗಳೆಲ್ಲ ನಮ್ಮ ಜೀವನದ ಒಂದು ಭಾಗವೇನೋ ಎಂಬ ಭಾವನೆ ಪ್ರೇಕ್ಷಕನಿಗೆ ನಿರಾಯಾಸವಾಗಿ ಮೂಡುತ್ತದೆ. ಪರದೇಶವನ್ನು ಹೊಕ್ಕಾಗ ಉಂಟಾಗುವ ತಲ್ಲಣ, ಭಾವೋದ್ವೇಗ, ಸಂಕಷ್ಟ, ಸವಾಲುಗಳು ಅತ್ಯಂತ ಸಹಜವಾಗಿ ಚಿತ್ರಿತವಾಗಿವೆ. ತನ್ನೆಲ್ಲ ಸೋಲು, ಭಾವನಾತ್ಮಕ ಕುಸಿತಗಳ ನಡುವೆಯೂ ನಾಯಕ ಪ್ರೇಕ್ಷಕರಿಗೆ ಆತ್ಮೀಯವಾಗುತ್ತ ಹೋಗುತ್ತಾನೆ. ಪರದೇಶದಲ್ಲಿ ಪರಕೀಯರ ನಡುವೆ ಪರಕೀಯನಾಗುವ ಸಂಕಟ ಬಹುಶಃ ಸ್ವದೇಶದಲ್ಲಿಯೂ ಹಳ್ಳಿ ತೊರೆದು ಪಟ್ಟಣಕ್ಕೆ ಹೋಗುವವನೊಬ್ಬನ ತಲ್ಲಣದಂತೆ ಭಾಸವಾಗುತ್ತದೆ. ತನ್ನ `ಅಸ್ಮಿತೆ’ಯನ್ನು ಕಳೆದುಕೊಳ್ಳುವ ಆತಂಕ, ಭಾಷೆಯ ಬಗೆಗಿನ ಭಾವುಕತನ, ಸಾಂಸ್ಕೃತಿಕ ಆಘಾತಗಳು, ಹೋರಾಟಗಳ ನಡುವೆಯೇ ನಾಯಕನ ವ್ಯಕ್ತಿತ್ವ ಗಟ್ಟಿಗೊಳ್ಳುತ್ತ ಹೋಗುವುದನ್ನು ಚಿತ್ರ ಅದ್ಬುತವಾಗಿ ತೆರೆದಿಡುತ್ತದೆ.
`ಪರಕೀಯರ ನಡುವೆ ಪರಕೀಯ’ನಾಗಿದ್ದ ಕ್ಸೇವಿಯರ್ ಫ್ರಾನ್ಸ್ಗೆ ಮರಳಿದ ಮೇಲೂ ತನ್ನ ಜನರ ನಡುವೆಯೇ ಪರಕೀಯನಾಗುತ್ತಾನೆ. ಮನುಷ್ಯ ಜನಾಂಗವೆಲ್ಲ ಒಂದೇ, ಈ `ಐಡೆಂಟಿಟಿಗಳು’ ನಾವೇ ಸೃಷ್ಟಿಸಿಕೊಂಡವು, ಮನುಷ್ಯನೊಬ್ಬನ ವಿವಿಧ ಗುಣಲಕ್ಷಣಗಳಿರಬಹುದೆಂಬ ಸಂದೇಹವೇಳುತ್ತದೆ. ಭಾವುಕತೆಯನ್ನು ಮತ್ತು ಬೌದ್ಧಿಕತೆಯನ್ನು ಒಟ್ಟೊಟ್ಟಾಗಿ ಉದ್ದೀಪನಗೊಳಿಸುವ ಈ ಚಿತ್ರ ನೋಡಲೇಬೇಕಾದ ಚಿತ್ರಗಳಲ್ಲಿ ಒಂದು. ನಿಮ್ಮದೇ ಜೀವನವನ್ನು ಮತ್ತೊಮ್ಮೆ ಜೀವಿಸಲು L`auberge espagnole’ ಚಿತ್ರವನ್ನು ವೀಕ್ಷಿಸಿ.


 

‍ಲೇಖಕರು G

6 November, 2013

4 Comments

  1. Rajendra Prasad

    ಭಾವುಕತೆಯನ್ನು ಮತ್ತು ಬೌದ್ಧಿಕತೆಯನ್ನು ಒಟ್ಟೊಟ್ಟಾಗಿ ಉದ್ದೀಪನಗೊಳಿಸುವದು ಚಿತ್ರ ಮಾತ್ರವಲ್ಲ ನಿಮ್ಮ ಬರಹ ಕೂಡ.. ಓದುವ ಹಂಬಲವಿದೆ ಬರೆಯಿರಿ ಮತ್ತಷ್ಟು,… ಹಾಗೆಯೇ ಸಾಧ್ಯವಾದ್ರೆ ಮದ್ಯಕಾಲೀನ ಪ್ರೆಂಚ್ ಕಾವ್ಯದ ಮಹತ್ವದ ಕವಿ Francois Villon ನ ಕೆಲವು ಕವಿತೆಗಳನ್ನು ಕನ್ನಡಕ್ಕೆ ಕೊಡಿ..

    • Akarsha

      dhanyavaada rajendra. Khandita prayatna maduttene

  2. chandan

    i have read your article… if u know any such movies plz comment

  3. Akarsha

    chandan- tumba ive . Nimma email id kodi. Avadhiyalli innashtu chitragalannu vimarshe maduttene

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading