ಹೊಸ ಓದು;
ಅಶ್ಫಾಕ್ ಪೀರಜಾದೆ
ಕಾಗದ ರಹಿತ ಕಾವ್ಯ ಸಂಕಲನ
ಗೂಗಲ್ ಮುಖಾಂತರ –
https;//raveendra-munnolimath.blogspot.com ಎಂಬ ಬ್ಲಾಗಕ್ಕೆ ಎಂಟ್ರಿ ಕೊಟ್ಟರೆ ಸಾಕು ಒಂದು ಅಕ್ಕಿಕಾಳಿನ ಸುಂದರವಾದ ಚಿತ್ರವಿರುವ ಪುಟ ತೆರೆದುಕೊಳ್ಳುತ್ತದೆ. ಅದು ರವೀಂದ್ರ ಮುನ್ನೋಳಿಮಠ ಅವರ ಪ್ರಥಮ ಹಾಗು ಕಾಗದ ರಹಿತ ಕವನ ಸಂಕಲನ ‘ನನ್ನದೊಂದು ಇರಲಿ ಅಕ್ಕಿಕಾಳು’ವಿನ ಮುಖಪುಟ.
ಇಂದಿನ ಡಿಜಿಟಲ್ ಜಮಾನಾದಲ್ಲಿ ಇ-ಪುಸ್ತಕಗಳು ಪ್ರಕಟವಾಗುವುದು ಹೊಸದೇನು ಅಲ್ಲ ಆದರೆ ಒಂದು ಬ್ಲಾಗ್ ಮುಖಾಂತರ ಒಂದು ಇಡೀ ಪುಸ್ತಕವನ್ನು ಒಂದೊಂದೇ ಪುಟವಾಗಿ ತೆರೆದುಕೊಳ್ಳುತ್ತ ಹೋಗುವುದು ಕನ್ನಡದ ಮಟ್ಟಿಗಂತೂ ಹೊಸ ಪ್ರಯೋಗವೇ ಇರಬಹುದು. ಹೀಗೆ ಒಂದೊಂದಾಗಿ ತೆರೆದುಕೊಳ್ಳುತ್ತ ಹೋಗುವ ಪುಟಗಳಲ್ಲಿ ಪುಸ್ತಕದ ವಿವರ, ಅರ್ಪಣೆ, ಮುನ್ನುಡಿ ರೂಪದ ನಲ್ನುಡಿ, ಲೇಖಕರ ನುಡಿ, ಪರಿವಿಡಿ ಎಲ್ಲ ಮುಗಿದು ಒಂದೊಂದಾಗಿ ದೃಶ್ಯ ಕಾವ್ಯಗಳು ಸುರಳಿ ಬಿಚ್ಚಿಕೊಳ್ಳುತ್ತ ಹೋದಂತೆಲ್ಲ ಓದುಗ ಅವುಗಳ ಸುಳಿಗೆ ಸಿಕ್ಕು ಕಾವ್ಯರಸದ ಆಸ್ವಾಧನೆಯಲ್ಲಿ ಮೀಯುತ್ತ ತನ್ನ ತಾನೇ ಮರೆಯುವಂತೆ ಮಾಡುವುದು ಈ ಸಂಕಲನದ ವಿಶೇಷತೆ.
ಈ ಸಂಕಲನದ ಕವಿ ರವೀಂದ್ರ ಮುನ್ನೋಳಿಮಠರು ತಮ್ಮ ಈ ಐವತ್ತೇಳನೇಯ ವಯಸ್ಸಿನಲ್ಲಿ ಆಕಸ್ಮಿಕವಾಗಿ ಕಾವ್ಯಕ್ಕೆ ಬಂದ ಬಗ್ಗೆ ಬರೆದುಕೊಳ್ಳುತ್ತಾರೆ. ಸ್ನೇಹಿತರೊಬ್ಬರು ಕನಸುಗಾರ ಮೌನೇಶ ಬಡಿಗೇರ ಅವರ ವಾಟ್ಸಪ್ ಗ್ರುಪ್ “ಕನ್ನಡ ಸಾಹಿತ್ಯ ಬಳಗ”ಕ್ಕೆ ಅವರ ಮೊಬೈಲ್ ಸಂಖ್ಯೆ ಸೇರಿಸುವ ಮೂಲಕ ಸದಸ್ಯರಾಗಿಸುತ್ತಾರೆ. ಅಲ್ಲಿ ಪ್ರಕಟವಾಗುತ್ತಿದ್ದ ಸಾಹಿತ್ಯ ಇವರಲ್ಲಿಯೂ ಸಾಹಿತ್ಯಾಸಕ್ತಿ ಮೂಡಿಸುತ್ತದೆ. ಅಲ್ಲಿ ಅಡ್ಮಿನ್ ಹಾಕುವ ಚಿತ್ರಪಟಕ್ಕೆ ಕವನ ಬರೆಯಬೇಕು. ಅದರಂತೆ ರವೀಂದ್ರರು ಸಹ ಅಲ್ಲಿನ ಚಿತ್ರಗಳೊಂದಿಗೆ ಅನುಸಂದಾನ ನಡೆಸುತ್ತ ಬರೆಯಲು ಪ್ರಯತ್ನಿಸುತ್ತ ಪ್ರಯತ್ನಿಸುತ್ತ ಒಬ್ಬ ಪ್ರಬುದ್ಧ ಕವಿಯಾಗಿ ಹೊರಹೊಮ್ಮುತ್ತಾರೆ.
ಆಗ ಆ ಗುಂಪಿನ ಸ್ನೇಹಿತರು, ಕುಟುಂಬ ಸದಸ್ಯರು ಚಿತ್ರಪಟಗಳಿಗೆ ಬರೆದ ಕಾವ್ಯಗಳನ್ನು ಸಂಗ್ರಹಿಸಿ ಒಂದು ಕಾವ್ಯ ಸಂಕಲನ ಪ್ರಕಟ ಮಾಡುವಂತೆ ಸಲಹೆ ಒತ್ತಾಯಿಸುತ್ತಾರೆ. ಆದರೂ ತಮ್ಮಲ್ಲಿರು ಮುಜುಗರದ ಕಾರಣ ಅವರು ಹಿಂಜರಿಯುತ್ತಾರೆ. ಆಗ ಸಾಪ್ಟವೇರ್ ಇಂಜಿನೀಯರ್ ಆಗಿರುವ ಅವರ ಅಳಿಯ ಆನಂದ ಪಶುಪತಿಮಠ ಅವರು ಬ್ಲಾಗ್ ಮುಖಾಂತರ ಕಾಗದ ರಹಿತ ಪುಸ್ತಕವನ್ನು ಪ್ರಕಟಿಸಿ ಆಸಕ್ತ ಓದುಗರರಿಗೆ ತಲುಪಿಸುವ ಯೋಜನೆಯನ್ನು ಹೇಳಿಕೊಂಡು ಕಾರ್ಯಪ್ರವೃತ್ತರಾದಾಗ ಸಮ್ಮತಿಸಲೇ ಬೇಕಾಗುತ್ತದೆ. ಇದೇ ಪ್ರಯತ್ನದ ಫಲವಾಗಿ ಸಾಹಿತ್ಯಿಕ ನಗರಿಯ ಸಾಹಿತ್ಯಾಸಕ್ತರ ಸಮ್ಮುಖದಲ್ಲಿ ಹೊಸದೊಂದು ರೀತಿಯಲ್ಲಿ ಇದರ ಲಿಂಕನ್ನು ಬೇರೆ ವಾಟ್ಸಪ್ ಗುಂಪಿಗೆ ರವಾನಿಸುವ ಮೂಲಕ ವಿದ್ಯುಕ್ತವಾಗಿ ಲೋಕಾರ್ಪಣೆ ಮಾಡಲಾಯಿತು.
ಕನ್ನಡ ಕಡಲ ಸದೃಶ ಕಣಜದಲ್ಲಿ “ನನ್ನದೊಂದು ಇರಲಿ ಅಕ್ಕಿ ಕಾಳು” ಎಂದು ಈ ಕಾಳುಇರಿಸಿದ್ದೇನೆ ಎಂದು ವಿನಮ್ರತೆಯಿಂದ ಹೇಳಿಕೊಳ್ಳುವ ರವೀಂದ್ರರು ಇದು ಕನ್ನಡ ಸಾಹಿತ್ಯಾಸಕ್ತರ ಹಸಿವು ಕಿಂಚಿತ್ತಾದರು ನೀಗಿಸಿದರೆ ತಮ್ಮ ಪ್ರಯತ್ನ ಸಾರ್ಥಕವೆಂದು ಹೇಳಿಕೊಳ್ಳುತ್ತಾರೆ. ಈ ಬ್ಲಾಗ್ ಬೇಸ್ ಕವನ ಸಂಕಲನದಲ್ಲಿ ಒಟ್ಟು ನಲವತ್ತೈದು ಕವನಗಳಿವೆ
ಹಳ್ಳಿ ಅಜ್ಜನ ಚಿತ್ರಕ್ಕೆ ಕವಿ ಕೊಡುವ ಕಲ್ಪನೆಯ ಬಣ್ಣ ನೋಡಿ-
ಜಲವೂ ನೆಲ ತೋಯಿಸುವದೆಂತು?
ನೆಲಕೆ ಕಸುವು ಬರುದೆಂತು?
ಕಸುವಿನ ಚಿಗುರು ನಳನಳಿಸುದೆಂತು?
ಮಣ್ಣ ಪದರಿನ ತೀಕ್ಷಣ ನೋಟ
ಭೂಗರ್ಭದೊಡಲಿನ ಸೂಕ್ಷ್ಮ ಆಟಕೆ
ಟೊಂಕ ಕಟ್ಟಿ ಮೇಟಿಯಾಗಿಹನು ಭಂಟ {ಭಂಟ}
ಸಾವಿತ್ರಿಬಾಯಿ ಫುಲೆ ಕಂಡು ಸಾಕ್ಷರದೀಪವೆಂದು ಕರೆಯುವ ಕವಿ-
ಈ ಸಾವಿತ್ರಿಗೆ ನಿತ್ಯ ಯಮಾಸುರರು
ಎಸೆದ ಸೆಗಣಿ ಕಲ್ಲಿಗೆ ಎದುರ್ಸೊಲ್ಲಿಲ್ಲ ಹೆದುರ್ಸೋರಿಲ್ಲ
ಸಾಯುವ ಜಾಯಮಾನವಲ್ಲ
ಧಡಿ ಮುಚ್ಚಿ ಉಡಿ ಬಿಚ್ಚಿ
ಸಂದಿಗೊಂದಿಗೆ ಮಂದಿ ಮಾರಿಗೆ
ತೂರ್ಯಾಳೆ ಅಕ್ಷರ ಬಾಳ
ತೆರದೆದಿ ಹೊಲದಿ ಬಿತ್ಯಾಳ ಕಾಳ {ಸಾಕ್ಷರ ದೀಪ}
ಇಂಥದ್ದೇ ವರಕವಿ ಬೇಂದ್ರೆಯವರ ಕಪ್ಪ ಬಿಳುಪು ಕವಿ ಹೃದಯ ಹಾಡಿ ಹೊಗಳುವುದು ಕೇಳಿ-
ಬಣ್ಣಿಲ್ಲದ ಪಡಕಜ್ಜ
ಕರಿಮಿಸ್ಯಾಗ ನಸು ನಕ್ಕಾನ
ರಸ ಪದಗಳೊರತ್ಯಾಗ
ಅಡವಿಟ್ಟ ದುಕ್ಕಾನ
ಬಿಳಿ ಹಾಳಿ ಹೊಕ್ಕಾನ
ಗ್ವಾಡೀಗ ಸಿಕ್ಕಾನ
ಬಾಡಿಗಿ ಅಂಟ್ಸಿಲ್ಲ್ಯಾವ ಸಿಕ್ಕಾನ {ಪಟಕಜ್ಜ}
ಹೀಗೆ ಬೇಂದ್ರೆಯವರ ಕುರಿತು ರವೀಂದ್ರರ ತನನ ಮುಂದವರೆಯುತ್ತದೆ.
ಕನ್ನಡ ಗ್ರಾಂಥಿಕ ಭಾಷೆಯ ಮೇಲೆ ಹಿಡಿತವಿರುವ ರವೀಂದ್ರರು “ಕನ್ನಡ ಸಾಲಿ”ಯಂಥ ಪದ್ಯಗಳಲ್ಲಿ ಪಕ್ಕಾ ಜಾನಪದ ಭಾಷೆಯನ್ನು ಸಲಿಸಾಗಿ ಬಳಸುವ ಮೂಲಕ ಬೆರಗು ಹುಟ್ಟಿಸುತ್ತಾರೆ.
ಕಲ್ಲಿಂದ ಕಲ್ಲಿಗೆ ಇದೆಯೊಂದ ಲೆಕ್ಕ
ತೆವುಳ್ದಂಗ ಹಿಡೀಬೇಕು ರಿಕ್ಕ
ಉರಿಕುಣಿತದ ನೋಡಿದರ ಸೊಕ್ಕ
ಮ್ಯಾಲ್ತವಗಂದ್ರೇನ ಗೊತ್ತಿಲ್ಲ ತುಕ್ಕ { ಕನ್ನಡ ಸಾಲಿ}
ಎಂದು ಕ್ಕ..ಕ್ಕ ಗಳ ಸರಮಾಲೆಯನ್ನೇ ಪೋಣಿಸುತ್ತ ಹೋಗುತ್ತಾರೆ

ಕಾಳು ಹಸನ ಮಾಡುವ ಹೆಣ್ಣು ನೋಡಿ ಕವಿಯ ಕಲ್ಪನೆ ಗರಿಗೆದರುದನ್ನು ನೋಡಿ-
ಹಸನು ಹರಿಸುವ ಬೆಡಗಿಗೊಮ್ಮೆ ಒರಗ
ಒಸುಗೆಯಿದುವೆಂದಿರಿ ಶೋಭಿಸಿ ಮೆರಗ
ಅರಗಿಸೊಲಿದುದನ ಅರಗಿಣಿಯನುತ ತಿರುಗ {ಹಸನು}ನಮ್ಮ ಬಾಳು ಹಸನಾಗಿಸುವ ಬೆಡಗಿ ಅಂದರೆ ಪತ್ನಿಗೆ ಧನ್ಯತಾ ಬಾವದಿಂದ ನಮಿಸಬೇಕು ಎನ್ನುವುದು ಕವಿ ಆಶಯ-
ವೃದ್ಧ ದಂಪತಿಗಳ ಚಿತ್ರಕ್ಕೆ ಕಲ್ಪನೆ ಕಟ್ಟುವ ಕಟು ಸತ್ಯ ನೋಡಿ-
ಕೊಟ್ಟು ಪಡದಿದಕ್ಕ
ನಕ್ಕು ನಗಿಸಿದ್ದಕ್ಕ
ಅತ್ತು ಅಳಸಿದಕ್ಕ
ಅವರು ರಸೀದಿ ಇಟ್ಟಿಲ್ಲ
ಅಂತರದ ನಗುವಲಿ
ಆಂತರ್ಯ ಅರಿಯೋಣ
ಎಂದು ಉಯಸ್ಸಾದ ದಂಪತಿಗಳು ದೂರದಿಂದಲೆ ನಗುನಗುತ ಅಂತರಂಗವನರಿತು ಬಾಳ ಬೇಕು ಎನ್ನುವುದನ್ನು ಹೇಳುತ್ತಾರೆ..
ಇನ್ನೊಂದು ಕವಿತೆಯಲ್ಲಿ-
ಭರ್ತಿ ಹೊತ್ತಾತು ಮುಗ್ದಿಲ್ಲ ಸಂತಿ
ಸೊಡ್ಸಪ್ಪ ಮಾರುದಕ ಮಾರಾಮಾರಿ ಧಾವತಿ
ನೀರ್ಗುಳ್ಳಿ ಬಾಳೀಗಿ ಥರಾಥರಾ ಒರತಿ
ನಿಲ್ದಾಂಗೋಡಬೇಕು ಬಿದ್ದಾಂಗ ಶರ್ತಿ [ಕೈಲಾಸದ ಕಾಯಕ}
ಎಂದು ಒಂದು ದಿನ ಬರಿಗೈಯಲ್ಲಿ ಹೋಗುವ ಜೀವಕ್ಕೆ ಏನೆಲ್ಲ ಕಸರತ್ತು ನಡೆಸಬೇಕು ಎನ್ನುವ ಋಪಕವನ್ನು ತರಕಾರಿ ಸಂತೆಯ ಮೂಲಕ ಕಟ್ಟಿಕೊಡುತ್ತಾರೆ. ಅಂಥದ್ದೇ ಇನ್ನೊಂದು ತರಕಾರಿ ಮಾರುವನ ಚಿತ್ರಕ್ಕೆ ಬರೆದ ಕವಿತೆ ಈ ಮಾತಿಗೆ ಪೂರಕವಾಗಿರುವಂಥದ್ದು-
ಮಾರಿದರೆ ಮಾತ್ರ ಹೊಟ್ಟೆಗೆ
ಮಲ್ಲಿಗೆ ಹೂ ಜುಟ್ಟಿಗೆ
ಉಳಿದಿದ್ದೆಲ್ಲ ಬಿಟ್ಟಿಗೆ
ಇಲದಿರೆ ಸೇರಿ ತಟ್ಟಿಗೆ
ಎಂದು ಬಡವರ ಬದುಕು ಬವಣೆಯನ್ನು ಪ್ರತಿಬಿಂಬಿಸುತ್ತಾರೆ.
ಸೂರ್ಯನ ಚಿತ್ರವೊಂದಕ್ಕೆ-
ಅದ್ಯಂತ ಕತ್ತಲೆಯೊಂದು ಸಾಧ್ಯಂತ ದೀಪ
ಇಟ್ಟವನಾರೋ? ತೈಲೆನರೆದವನಾರೋ?
ಬಯಲಲೆ ಬೆಳಕ ಚೆಂಡಮದ್ದಳೆ {ಅಸ್ಮಿತೆ}
ಎಂದು ಸೂರ್ಯನ ಸುಂದರ ದೃಶ್ಯವನ್ನು ಕಣ್ಣಿಗೆ ಕಟ್ಟುವಂತೆ ವರ್ಣಿಸುವ ಮೂಲಕ ಸೃಷ್ಟಿಯ ವಿಸ್ಮಯವನ್ನು ಬಿಚ್ಚಿಡುತ್ತಾರೆ.
ಹೀಗೆ ರವೀಂದ್ರರ ಕಾವ್ಯ ಹಲವು ಹತ್ತಾರು ರೂಪ ಧರಿಸಿ ಓದಿದ ನಂತರವೂ ನಮನ್ನು ಕಾಡುತ್ತವೆ. ಈ ಕೃತಿಗೆ ಮುನ್ನಡಿ ಬರೆದ ಕಲಾವಿದ ಸುರೇಶ ಕುಲಕರ್ಣಿ ಅವರು “ಚಿತ್ರ ಮೌನವಾದರೂ ಮಾತಾಡಿಸದೇ ಬಿಡದು, ಕಾಣುವುದು ಹೊರಗಿರುತ್ತದೆ, ನೋಡುವುದು ಒಳಗಿರುತ್ತದೆ, ಚಿತ್ರವನ್ನು ನೋಡಿ ತಿಳಿಯಲು ಅರಿವಿನ ಬೆಳಕು ಬೇಕು” ಎನ್ನುತ್ತಾರೆ ಮತ್ತು ಆ ಅರಿವಿನ ಬೆಳಕು ರವೀಂದ್ರರಲ್ಲಿ ಇರುವ ಸತ್ಯವನ್ನು ಅವರು ಗುರುತಿಸಿದ್ದಾರೆ.
ಬೆನ್ನುಡಿ ಬರೆದ ರಾಜಕುಮಾರ ಮಡಿವಾಳರ ಅವರು ರವೀಂದ್ರರ ಸಾಲಿನಂತೆ “ಮಿಡಿ ಚಿಗುರಿಗೆ ಮಿಡಿವೊಗರಿನುಗಾದಿ” ಎನ್ನವುದು ಈ ಸಂಕಲನ ಓದಿದಾಗ ಮನಸ್ಸು ಅನುಭವಿಸಿದೆ. ಇದು ಕವಿಯ ಆದಿ, ನವ ಸಂವತ್ಸರದಷ್ಟೆ ಹರ್ಷ, ವಿಫುಲತ್ಸಾಹಗಳ, ಅಮಿತಾನಂದನ ಕವಿಗೂ ಸಹೃದಯನಿಗೂ ಸಿಗಲಿ ಹಾರೈಸುತ್ತಾರೆ ಮತ್ತು ಕವಿ ಅತ್ಯಂತ ತಾಳ್ಮೆ ಹಾಗೂ ಸಹನೆಯಿಂದ ಚಿತ್ರದ ಮಾತುಗಳಿಗೆ ಕಿವಿಕೊಟ್ಟಿದ್ದಾರೆ. ಆ ಪ್ರಮಾಣಿಕ ತಾಳ್ಮೆ ಮತ್ತು ಸಹನೆಯ ಕೇಳುವನ್ನೆ ದಾಖಲಿಲು ಕವಿತೆಯ ದಾರಿ ಹಿಡಿಯಲು ಸಾಧ್ಯವಾಗಿದ್ದು ಎಂದು ಹೇಳಿದ್ದಾರೆ.





Interesting