ಮತ್ತೆ… ಮತ್ತೆ… ನಮ್ಮ ಹಾಡು

ಮಲಯಾಳಂ ಮೂಲ: ಸುಧೀರ್ ರಾಜ್
ಇಂಗ್ಲಿಷಿಗೆ: ರ ಶ ರವಿ ಶಂಕರ್
ಕನ್ನಡಕ್ಕೆ: ಪ್ರತಿಭಾ ನಂದಕುಮಾರ್
ನಮ್ಮ ತಳಕ್ಕರ ಅಜ್ಜ ಹಾಡುವುದನ್ನು ನೀವೊಮ್ಮೆ ಕೇಳಬೇಕು
ಜಗಲಿಯಲ್ಲಿ ಕೂತು ಅಂಗಳಕ್ಕೆ ಕಾಲು ಚಾಚಿ ಹಾಡುತ್ತಾನೆ
ಸಾವಿರದೊಂದು ಹಾಡುಗಳು ಗೊತ್ತು ಅವನಿಗೆ
ಒಂದೊಂದು ಹಾಡಿನಲ್ಲಿ ಒಬ್ಬೊಬ್ಬರು ಅವತರಿಸುತ್ತಾರೆ
ಭೂತ, ಪ್ರೇತ, ಪಿಶಾಚಿ, ದೆವ್ವ, ಕುಟ್ಟಿಚಾತ, ಊರಾಳಿ, ಹಿರಿಯರ ಆತ್ಮ
ನಿಲ್ಲಕ್ಕಾಗಲ್ಲ, ಕೂರಕ್ಕಾಗಲ್ಲ
ಮಲಗಕ್ಕಾಗಲ್ಲ, ನಿದ್ದೆ ಬರಲ್ಲ
ಮಣ್ಣಿನ ಮಡಕೆಯ ತಳವನ್ನು ಚಿಪ್ಪಿನ ಸೌಟು ಕೆರೆಯುವ ತನಕ ಹಾಡುತ್ತಾನೆ
ನಮ್ಮ ಊಟ ಮುಗಿಯುವಾಗ ಕೊಟ್ಟಿಗೆಯಿಂದ ದೊಡ್ಡ ತೇಗು ಕೇಳಿಸುತ್ತದೆ
ಹುಶ್…. ಸದ್ದು…. ಎಂದೋ ತೀರಿಕೊಂಡ ಕುರುಡು ಕುಟ್ಟಕ್ಕಳಿ
ಬಡಿಸಿಕೊಟ್ಟ ಹಳಸಲು ಗಂಜಿ ಅದು.
ನಮ್ಮ ಮುಂಡಪ್ಪಳ್ಳಿ ಅಜ್ಜನ ಹಾಡನ್ನು ನೀವೊಮ್ಮೆ ಕೇಳಬೇಕು
ಅವನು ಗದ್ದೆಯ ನಡುವಿನ ದೈವ ಬನದಲ್ಲಿ ಕೂತು ಹಾಡುತ್ತಾನೆ
ಹಾಡಿನ ಏರಿಳಿತಕ್ಕೆ ತಕ್ಕಂತೆ ಗದ್ದೆಯ ಒಂಟಿ ಬದು
ಈಗ ಕಾಣಿಸಿಕೊಳ್ಳುತ್ತಾ, ಈಗ ಮಾಯವಾಗುತ್ತಾ ಇರುತ್ತದೆ.
ನಡುರಾತ್ರಿಯಲ್ಲಿ ಉಡುಕ್ಕು ಡಪ್ಪಿನ ತಾಳಕ್ಕೆ
ಬಾವಲಿಗಳೆಲ್ಲ ಹಾರಿಹೋಗುತ್ತವೆ.
ನೆಲೆಯಿಲ್ಲದ ಯಕ್ಷಿ, ನಾಡಿಲ್ಲದ ಯಕ್ಷಿ, ಕಾಡಿಲ್ಲದ ಯಕ್ಷಿ
ಬನ್ನಿ, ಬಂದು ನೆಲೆಸಿ, ರಾಹು, ಗುಳಿಕಗಳು
ಶೂಲದಿಂದಿರಿದ ಈ ನಾಲಿಗೆಯ ಮೇಲೆ.
ತಾಳೆ ಮರ ಬಿರಿದು, ಹಾಲೆ ಮರ ಒಡೆದು, ಸಿಡಿಲು ಬಡಿದ ರೆಂಜೆ ಮರದ
ನಡುಮಂಡೆ ಸೀಳಾಗಿ, ಪಿತೃಗಳು ನೆಲೆಸಿರುವ,
ಕರಿಕಾಳಿಯ ಪಾದಗಳ ಗುರುತಿರುವ ಈ ಎದೆಯ ಮೇಲೆ ಏರಿ ಕೂರಿ.
ಸ್ಮಶಾನದಲ್ಲಿ ಒಣ ಈಚಲು ಚಾಪೆ ಹಾಸಿ
ಪಟ್ಟೆ ಸೀರೆ, ಬಳೆಗಳು, ಹಿತ್ತಾಳೆ ಗಗ್ಗರಗಳನ್ನು ಕಂಡು ಹೆದರಿದ
ರಾತ್ರಿಯನ್ನು ತೂಗಿ ಮಲಗಿಸಿ…. ಮಲಗಿಸಿ…
ನಮ್ಮ ತಳವಾಯಿಲ ಅಜ್ಜನ ಹಾಡನ್ನು ಒಮ್ಮೆ ಕೇಳಬೇಕು
ಕುಯ್ಲು ನೋಡುತ್ತಾ, ಎಲೆಅಡಿಕೆ ಜಗಿಯುತ್ತಾ
ದಿಬ್ಬದ ಮೇಲೆ ನಿಂತ ದೇವಿಯನ್ನು, ಗಾಳಕ್ಕೆ ಸಿಕ್ಕ ಮರಿಗಲ ಮೀನಿನಂತೆ
ಹಾಡಿನಲ್ಲಿ ಪೋಣಿಸಿ ಗುಡಿಯಲ್ಲಿ ಕೂರಿಸಿದ ಆಸಾಮಿ ಇವನು.
ಮಟಮಟ ಮಧ್ಯಾಹ್ನ ಭತ್ತಕ್ಕೆ ಹುಚ್ಚು ಹಿಡಿಸುವ ಹಾಡು
ನಟ್ಟನಡು ರಾತ್ರಿ ಹಾಲೆ ಮರಕ್ಕೆ ಮತ್ತೇರಿಸುವ ಹಾಡು.
ಸಣ್ಣ ಚಾಕುವಿನಲ್ಲಿ ಗೀರಿದಂತೆ ಹೆಣ್ಣುಮಕ್ಕಳ ಎದೆಯನ್ನು
ಹಾಡಿನಲ್ಲೇ ಕೊರೆದುಬಿಡುತ್ತಾನೆ.
ಸುತ್ತಲ ಹರದಾರಿಯಷ್ಟು ಹೆಣ್ಣುಗಳಿಗೆ ನಿದ್ದೆಯಿಲ್ಲ, ಹಸಿವಿಲ್ಲ
ಭತ್ತದ ಎಳೆ ತೆನೆಯ ಕಾಳುಗಳಲ್ಲಿ ತುಂಬಿಕೊಳ್ಳುವಂತೆ ಹಾಲು
ಅವನು ನಗುತ್ತಾನೆ… ನಗುತ್ತಾನೆ… ನಕ್ಕೇ ನಗುತ್ತಾನೆ…
ಅಜ್ಜಿಯ ಬಗ್ಗೆ ವಿಶೇಷ ಹೇಳಲೇನಿಲ್ಲ
ಆದರೆ ಅವಳ ಹಾಡು ಮೀರಿಸುವ ಹಾಡಿಲ್ಲ
ತಳಕ್ಕರೆ ಅಜ್ಜನೂ
ಮುಂಡಪ್ಪಳ್ಳಿ ಅಜ್ಜನೂ
ತಳವಾಯಿಲ ಅಜ್ಜನೂ
ಕಂದಮ್ಮಗಳಾಗಿ ಕೇದಗೆ ಹೂವಿನ ಪರಿಮಳದ
ಅವಳ ಮಡಿಲಲ್ಲಿ ಮಲಗಿ ನಿದ್ದೆ ಮಾಡುತ್ತಾರೆ
ರಾತ್ರಿ, ಹಗಲು, ಮುಸ್ಸಂಜೆ, ಕತ್ತಲು
ಯಾರೂ ತುಟಿ ಪಿಟಿಕ್ ಅನ್ನುವುದಿಲ್ಲ,
ನೋಡಿ, ಮಕ್ಕಳು ಹೇಗೆ ಮಲಗಿ ನಿದ್ದೆ ಮಾಡುತ್ತಿದ್ದಾರೆಂದು
ಅವಳು ಮಿನುಗುವ ಕಣ್ಣಲ್ಲೇ ಕೇಳುತ್ತಾಳೆ.
ಹಾಡೆಂದರೆ, ಹೇಳಿಕೊಳ್ಳಲು ಅಂಥಾ ವಿಶೇಷ ಏನಿಲ್ಲದ,
ನನ್ನಜ್ಜಿಯ ಹಾಡೇ ಹಾಡು.
**






0 Comments