ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನನಗೆ ಶಾಕ್ ಹೊಡೆದಂತಾಗಿತ್ತು!

ಅದಕ್ಕೇ ಲಕ್ಷ್ಮಿನಾರಾಯಣ ಹೇಳಿದಾಗ ನಾನು ನಿರುತ್ಸಾಹ ತೋರಿಸಿದ್ದರೂ ಆ ಕುರಿತಾಗಿ ನನ್ನೊಳಗೇ ಕಾತರ ಹುಟ್ಟಿಕೊಂಡಿತ್ತು. ಆ ಯಾನಕ್ಕಾಗಿ ನಾನು ಆಸಕ್ತಿಯಿಂದ ಕಾಯುತ್ತಲೇ ಇದ್ದೆ.

ಈ ದೋಣಿಯಾನದ ಬಗ್ಗೆ ಮರೆತೇಬಿಟ್ಟೆವು ಎನ್ನುವಂತಿದ್ದಾಗ ಲಕ್ಷ್ಮಿನಾರಾಯಣ ಫೋನ್ ಮಾಡಿ “ನಾಡಿದ್ದು ಹೊನ್ನೆಮರಡುವಿನಿಂದ ಹೊರಡೋದು. ಸ್ವಾಮಿ ತುಂಬಾ ಗಡಬಿಡಿಯಲ್ಲಿದಾರೆ. ನನ್ನ ಹತ್ರಾನೇ ನಿಮ್ಗೆ ಹೇಳಿ ಅಂದಿದಾರೆ. ಅವ್ರೂ ಫೋನ್ ಮಾಡಬಹುದು. ಎಂತಾದ್ರೂ ನಾಡಿದ್ದು ಬೆಳಿಗ್ಗೆ ಬೇಗ ತಾಳಗುಪ್ಪಕ್ಕೆ ಬನ್ನಿ. ಇಲ್ಲಿಂದ ಹೊನ್ನೆಮರಡುಗೆ ಹೋಗೋಣ” ಎಂದು ಅವಸರದಲ್ಲಿ ಹೇಳಿದರು.

ಅವರು ಹೇಳುತ್ತಿದ್ದುದು ಕೇಳಿದರೆ ದೋಣಿಯಲ್ಲಿ ಹತ್ತಿ ಕೂತೇ ಫೋನ್ ಮಾಡ್ತಿದ್ದಾರೇನೋ ಎನ್ನುವಂತಿತ್ತು. “ ಅಲ್ಲಾರೀ, ಹೋಗೋದಾಯ್ತು. ನಾವೇನು ತಯಾರಿ ಮಾಡ್ಕೋಬೇಕು? ಅಲ್ಲಿ ತಿನ್ನೋಕೆ ಏನು, ಉಳಿಲೀಕ್ಕೆ ಏನು? ಎಂತಾ ಇಲ್ದೇ ಬರಿಗೈಯಲ್ಲಿ ಬರೋಕೆ ಆಗುತ್ತೇನ್ರಿ” ಎಂದು ನಾನು ಗದರಿದೆ.

“ ಏನಿಲ್ಲ, ನಿಮ್ಮ ನಿತ್ಯದ ಬಟ್ಟೆ ತಗೊಳ್ರಿ. ರಾತ್ರಿ ಹೊದೆಯೋಕೆ ಒಂದು ರಗ್, ಟವೆಲ್, ಊಟ ಮಾಡಲು ಪ್ಲೇಟ್ ಹಾಗೂ ಲೋಟ ಇಟ್ಕೊಂಡಿರಿ. ಊಟದ ವ್ಯವಸ್ಥೆ ಸ್ವಾಮಿ ಮಾಡ್ತಾರೆ. ಅಲ್ಲಿಗೆ ಬನ್ನಿ, ನಂತ್ರ ನೋಡುವಾ” ಎಂದವರು. “ ಜಲಯಾನದಲ್ಲಿ ಗುಟ್ಕಾ, ಸಿಗರೇಟ್ ಹಾಗೂ ಯಾವುದೇ ಮಾದಕ ಪದಾರ್ಥಗಳಿಗೆ ಅವಕಾಶವಿಲ್ಲವೆಂತಲೂ, ಮೊಬೈಲ್ ಬಳಕೆಗೆ ನಿಷೇಧವಿದೆಯೆಂತಲೂ ಸ್ವಾಮಿ ಕಟ್ಟುನಿಟ್ಟಾಗಿ ಹೇಳಿದಾರೆ” ಎನ್ನುತ್ತ ತಮ್ಮ ಎಂದಿನ ರೀತಿಯಲ್ಲಿ ಅಸ್ಪಷ್ಟವಾದ ವಿವರ ನೀಡಿ ಫೋನ್ ಕಟ್ ಮಾಡಿದರು.

ಲಕ್ಷ್ಮೀನಾರಾಯಣ ಅವರಿಗೆ ಬೈಯ್ದುಕೊಳ್ಳುತ್ತ ನನ್ನ ಕೆಲಸಗಳನ್ನು ಮುಂದಕ್ಕೆ ಹಾಕಿ ಹೇಗೋ ಏನೋ ಅಂತೂ ಹೊರಡುವ ಸಿದ್ಧತೆ ಮಾಡಿಕೊಳ್ಳತೊಡಗಿದೆ.
ಆ ಬೆಳಿಗ್ಗೆ ಹೊನ್ನೆಮರಡುವಿಗೆ ಬಂದು ನಿಲ್ಲುವ ಕ್ಷಣದವರೆಗೂ ಈ ನೀರಯಾನದ ಬಗ್ಗೆ ಏನೊಂದು ಗೊತ್ತಾಗಿರಲಿಲ್ಲ. ಆ ವಿವರಗಳನ್ನು ನನಗೆ ಹೇಳಬೇಕಿದ್ದ ಲಕ್ಷ್ಮಿನಾರಾಯಣ ತಾನೂ ಅದನ್ನು ತಿಳಿಯುವ ಗೋಜಿಗೇ ಹೋಗಿರಲಿಲ್ಲ. ವಿಚಿತ್ರವಾದ ಖುಷಿಯಲ್ಲಿ ಲಕಲಕಿಸುತ್ತ, ಗುಂಡುಮುಖದ ತುಂಬ ನಗು ತುಂಬಿಕೊಂಡು ಅತ್ತಿಂದಿತ್ತ ಠುಣು ಠುಣು ಓಡಾಡುತ್ತಿದ್ದರು.

ಆಗಲೂ ಅವರಿಗೆ ಬೇಸರವೊಂದಿತ್ತು. ಫೋಟೋಗ್ರಾಫರ್ ಮಂಜಪ್ಪ ತಪ್ಪಿಸಿಕೊಂಡರು ಎಂದು ಅಲವತ್ತುಕೊಳ್ಳುತ್ತ “ಅಲ್ಲಾ ಮಾರಾಯ್ರಾ, ಆ ಮಂಜಪ್ಪಂಗೆ ಸಿಗರೇಟ್ ದೊಡ್ಡದೋ? ದೋಣಿ ಮೇಲೆ ಹೋಗೋದೋ? ಇಲ್ಲಿ ಸಿಗರೇಟ್ ಸೇದೋಕೆ ಕೊಡೋದಿಲ್ಲಾ ಅಂತಾ ಬರೋದ್ನೇ ತಪ್ಪಿಸಿಕೊಂಡ” ಎಂದು ಲೊಚಗುಡುತ್ತಿದ್ದರು.

“ಅವರಿಗೆ ತನಗೆ ಯಾವುದು ಮುಖ್ಯ ಅಂತ ಗೊತ್ತಿರುತ್ತೆ. ನಿಮಗ್ಯಾಕ್ರೀ ಅವರ ಮೇಲೆ ಹೊಟ್ಟೆಕಿಚ್ಚು?” ಎಂದು ನನಗೆ ತಲೆಬಿಸಿ ಹುಟ್ಟಿಸಿದ್ದಕ್ಕೆ ಮುಯ್ಯಿ ತೀರಿಸಿಕೊಳ್ಳಲು ಸಿಟ್ಟಿನಿಂದ ಪ್ರಶ್ನಿಸಿದಾಗ “ಹಾಂಗಲ್ರೀ” ಎಂದು ಅತ್ತ ಕಡೆ ಹೋದರು.

ನನಗೆ ಗೊತ್ತಿತ್ತು; ಯಾವಾಗಲೂ ಗುಟ್ಕಾ ಹಾಕುತ್ತಲೇ ಇರುವ ಲಕ್ಷ್ಮಿನಾರಾಯಣ ಅವರ ಚಟವನ್ನು ಬಿಡಿಸಲು ಸ್ವಾಮಿ ಹಾಗೂ ಲಕ್ಷ್ಮಿನಾರಾಯಣ ಅವರ ಪತ್ನಿ ಪ್ಲಾನ್ ಹಾಕಿದ್ದರು. ಬೇಕೆಂದೇ ಲಕ್ಷ್ಮಿನಾರಾಯಣರ ಬಳಿ “ನಿಮ್ಮಿಂದ ಜಲಯಾನ ಸಾಧ್ಯವಿಲ್ಲ. ಅಷ್ಟು ಕಾಲ ನೀವೆಲ್ಲಿ ಗುಟ್ಕಾ ಬಿಟ್ಟಿರೋಕೆ ಸಾಧ್ಯ” ಎಂದೆಲ್ಲ ಅವರ ನಿಗ್ರಹ ಶಕ್ತಿಯನ್ನ ಅವಹೇಳನ ಮಾಡುವಂತೆ ಹೇಳಿದ್ದರು. “ನೋಡ್ತಾ ಇರಿ, ನಾನೇನೂ ಗುಟ್ಕಾಕ್ಕೆ ಅಡಿಕ್ಟ್ ಆಗಿಲ್ಲ. ಸುಮ್ನೆ ಟೈಂಪಾಸ್‍ಗೆ ಹಾಕ್ತೀನಿ ಅಷ್ಟೇ. ಗುಟ್ಕಾ ಬಿಡ್ತೀನೋ ಇಲ್ವೋ ನೋಡ್ತೀರಿ” ಎಂದು ಅವರ ಬಳಿ ಲಕ್ಷ್ಮಿನಾರಾಯಣ ತಾವಾಗಿಯೇ ಛಾಲೆಂಜ್ ಮಾಡಬೇಕಾದ ಪರಿಸ್ಥಿತಿ ತಂದಿಟ್ಟಿದ್ದರು.

ಲಕ್ಷ್ಮೀನಾರಾಯಣರಿಗೆ ತನ್ನಂತೇ ಮಂಜಪ್ಪ ಕೂಡ ಅವಸ್ಥೆಪಡಲಿ ಎಂದಿತ್ತೋ, ಏನೋ? ತನಗೆ ಕಂಪನಿ ಕೊಡಬಹುದಾಗಿದ್ದ ಮಂಜಪ್ಪ ಕೈ ಕೊಟ್ಟದ್ದಕ್ಕೆ ಅವರ ಪಡಿಪಾಟಲು ನೋಡಿ ನಗು ಬಂತು.

ಹೆಗ್ಗೋಡಿನ ಪಿ.ಎಸ್.ಮಂಜಪ್ಪ ನಿಜಕ್ಕೂ ನಮ್ಮಲ್ಲಿನ ಪ್ರತಿಭಾವಂತ ಛಾಯಾಚಿತ್ರಗಾರರಲ್ಲೊಬ್ಬರು. ನಿಖರತೆ, ಸ್ಪಷ್ಟತೆಗಳ ಜೊತೆಗೆ ಅವರು ತೆಗೆಯುವ ಫೋಟೊಗಳಿಗೆ ಒಂದು ಹೊಸತನ ಇದ್ದೇ ಇರುತ್ತದೆ. ಅವರ ಛಾಯಾಗ್ರಹಣ ಸೋಕಾಲ್ಡ್ ಫೋಟೊಗ್ರಾಫರಿಗಿಂತ ಒಂದು ಕೈ ಹೆಚ್ಚೇ ಅನ್ನಬಹುದು. ನೀನಾಸಂ ನಾಟಕಗಳ ಅದ್ಭುತವಾದ ಫೋಟೊ ತೆಗೆದು ಕೆ.ವಿ.ಸುಬ್ಬಣ್ಣನಂಥವರ ಬಳಿ ಶಹಬ್ಬಾಸ್ ಅನ್ನಿಸಿಕೊಂಡವರು. ಪ್ರಾಯಶ: ಕನ್ನಡದ ಬಹುತೇಕ ಎಲ್ಲ ಸಾಹಿತಿ, ಕಲಾವಿದರ, ದೇಶ, ವಿದೇಶಗಳ ಹೆಸರಾಂತ ರಂಗಕರ್ಮಿಗಳ ಅಪೂರ್ವವಾದ ಫೋಟೊಗಳನ್ನು ಕ್ಲಿಕ್ಕಿಸಿದವರು ಮಂಜಪ್ಪ.

ತಾಳಗುಪ್ಪದಲ್ಲಿ ಸ್ಟುಡಿಯೋ ಇಟ್ಟುಕೊಂಡಿರುವ ಮಂಜಪ್ಪ ಚೈನ್ ಸ್ಮೋಕರ್. ಸದಾ ಕಾಲ ಅವರ ಕೈಬೆರಳುಗಳ ನಡುವೆ ಸಿಗರೇಟ್ ಹೊಗೆ ಕಾರುತ್ತಾ ಇರುತ್ತದೆ. ಮತ್ತು ಹಾಗಿದ್ದಾಗಲೇ ಅವರಿಗೆ ಐಡಿಯಾಗಳು ಹೊಳೆಯುತ್ತವೆ. ಅವರು ಜಲಯಾನಕ್ಕೆ ಬರುವದನ್ನು ತಪ್ಪಿಸಿಕೊಂಡದ್ದಕ್ಕೆ ಹಾಗೂ ಅದಕ್ಕಾಗಿ ಲಕ್ಷ್ಮಿನಾರಾಯಣ ಕೊರಗುತ್ತಿದ್ದುದಕ್ಕೆ ಕಾರಣ ನಂತರ ತಿಳಿಯಿತು. ಲಕ್ಷ್ಮಿನಾರಾಯಣ, ಎಸ್.ಎನ್.ಎಲ್.ಸ್ವಾಮಿ ಸೇರಿಕೊಂಡು ಒಂದಿಷ್ಟು ಸಮಯವಾದರೂ ಮಂಜಪ್ಪ ಸಿಗರೇಟ್ ಸೇದುವದನ್ನು ನಿಲ್ಲಿಸುವ ಪ್ಲಾನ್ ಹಾಕಿದ್ದರು. ಅದು ಹೇಗೋ ಮೊದಲೇ ಗೊತ್ತಾಗಿ ತಾಳಗುಪ್ಪದಲ್ಲೇ ಇದ್ದರೆ ಇಬ್ಬರೂ ಸೇರಿ ದುಂಬಾಲು ಬಿದ್ದು, ಕೈಕಾಲು ಕಟ್ಟಿಯಾದರೂ ಕರೆದುಕೊಂಡು ಹೋದಾರೂ ಎಂದು ಯಾರಿಗೂ ಸುಳಿವು ಕೊಡದೇ ಹಿಂದಿನ ದಿನವೇ ಮಂಜಪ್ಪ ಸಾಗರದ ಲಾಡ್ಜವೊಂದರಲ್ಲಿ ರೂಮ್ ಮಾಡಿ ಉಳಿದಿದ್ದರಂತೆ. ಒಟ್ಟಿನಲ್ಲಿ ಮಂಜಪ್ಪ ಅವರಿಗೆ ಬುದ್ದಿ ಕಲಿಸಲು ಹೋದ ಲಕ್ಷ್ಮೀನಾರಾಯಣ ಆ ಉರುಳಲ್ಲಿ ತಾವೇ ಸಿಕ್ಕಾಕಿಕೊಂಡಿದ್ದರು!

ಹೊನ್ನೆಮರಡು ಎನ್ನುವ ಹೆಸರಿನ ಆ ವಿಶಿಷ್ಠ ಪ್ರದೇಶವನ್ನು ತಮ್ಮ ಕಾರ್ಯಕ್ಷೇತ್ರವಾಗಿಸಿಕೊಳ್ಳಲು ಸ್ವಾಮಿಯವರು ಪಟ್ಟ ಶ್ರಮ, ಎದುರಿಸಿದ ಸಮಸ್ಯೆಗಳ ಬಗ್ಗೆ ಅವರ ಬಾಯಿಂದಲೇ ಹಲವಾರು ಬಾರಿ ಕೇಳಿದ್ದೆ. ಮತ್ತೊಂದಿಷ್ಟನ್ನು ಲಕ್ಷ್ಮೀನಾರಾಯಣ ಹೇಳಿದ್ದರು. ಹೊನ್ನೆಮರಡಿನಿಂದ ಮೂರ್ನಾಲ್ಕು ಕಿಲೋಮೀಟರ್ ಕೆಳಗಡೆ ಇರುವ ಲಿಂಗನಮಕ್ಕಿ ಆಣೆಕಟ್ಟಿನ ಮೇಲ್ಭಾಗದ ಆ ಹಿನ್ನೀರು ಪ್ರದೇಶ ನೈಸರ್ಗಿಕವಾಗಿ ವಿಶೇಷತೆ ಹೊಂದಿರುವದು ಎಂಥವನಿಗೂ ಅರ್ಥವಾಗುತ್ತದೆ. ಸ್ವಾಮಿಯವರಲ್ಲದೇ ಬೇರೆ ಯಾರಿಗಾದರೂ ಆ ಸ್ಥಳ ದೊರಕಿದ್ದರೆ ಅಲ್ಲೊಂದು ಹೋಮ್ ಸ್ಟೇನೋ, ರೆಸಾರ್ಟನ್ನೋ ಮಾಡಿ ಕೋಟಿಗಟ್ಟಲೆ ಹಣ ದುಡಿಯುವ ಪ್ಲಾನ್ ಹಾಕುತ್ತಿದ್ದರೇನೋ?

ಆದರೆ ಸ್ವಾಮಿಯವರ ಕಾಳಜಿ ಹೇಗಿದೆಯೆಂದರೆ ಅಲ್ಲಿನ ಮರಗಿಡಗಳ ಎಲೆದರಕು, ಕಡ್ಡಿಗಳನ್ನ ಬಿಟ್ಟರೆ ಹೊರಗಿನಿಂದ ತರುವ ಒಂದೇ ಒಂದು ಚೂರು ಕಸವನ್ನೂ ಅಲ್ಲಿ ಹಾಕಗೊಡುವದಿಲ್ಲ. ಮಾದಕ ವಸ್ತು ಸೇವನೆ ಇರಲಿ, ಬೀಡಿ, ಸಿಗರೇಟನ್ನು ಸೇದಲು ಕೊಡುವದಿಲ್ಲ. ಪಿಕ್ನಿಕ್ಕಿಗೆ ಬಂದು ಇಡೀ ಜಗತ್ತೇ ತಮ್ಮದೇನೋ ಅನ್ನುವಂತೆ ಕಿರುಚುವ, ಕುಣಿದಾಡುವ ಪೇಟೆ ಮಂದಿಯ ಮಂಗಾಟಗಳಿಗೆಲ್ಲ ಅಲ್ಲಿ ಅವಕಾಶವೇ ಇಲ್ಲ. ಅಂಥದ್ದೇನಾದರೂ ಮಾಡಿದವರು ಅದೆಷ್ಟೇ ದೊಡ್ಡ ಮನುಷ್ಯರಿರಲಿ, ನಿಷ್ಠುರವಾಗಿ ಅಲ್ಲಿನ ನಿಬಂಧನೆಗಳನ್ನ ಹೇಳಿಬಿಡುವ ಜಿಗುಟು ಮನುಷ್ಯ ಸ್ವಾಮಿ. ಪರಿಸರದ ಬಗ್ಗೆ ಅವರ ನಿಲುವು ಅತ್ಯಂತ ಧೃಡವಾದದ್ದು, ಅಲ್ಲಿ ರಾಜಿಯ ಪ್ರಶ್ನೆಯೇ ಇಲ್ಲ ಎನ್ನುವದನ್ನು ಹಲವಾರು ಬಾರಿ ಕಂಡೂಕಂಡಿದ್ದೆ.

ಹೊನ್ನೆಮರಡುವಿನ ಸಾಹಸ ಸಮನ್ವಯ ಕಚೇರಿ ಬಳಿ ಹರಟುತ್ತಾ ನಿಂತವರನ್ನು ಸ್ವಾಮಿ ಗಟ್ಟಿ ಧ್ವನಿಯಲ್ಲಿ ಎಚ್ಚರಿಸಿದರು. ಎಲ್ಲರೂ ನಿಧಾನಕ್ಕೆ ಇಳಿಜಾರನ್ನು ಇಳಿದು ನೀರಿನ ಬಳಿ ಬಂದುನಿಂತೆವು.

ಎದುರಿನಲ್ಲಿ ಪುಟ್ಟ ಸಮುದ್ರವಿತ್ತು ; ಎರಡೂ ಪಕ್ಕದಲ್ಲಿನ ಗುಡ್ಡಗಳ ನಡುವೆ ವಿಶಾಲವಾದ ಲಿಂಗನಮಕ್ಕಿ ಹಿನ್ನೀರಿನ ನೀರ ತೆರೆಗಳ ಮೇಲೆ ಬೆಳಗಿನ ಬಿಸಿಲಿನ ಕಿರಣಗಳು ಥಳಥಳಿಸುತ್ತಿದ್ದವು. ಬೇಸಿಗೆ ಆರಂಭವಾಗದೇ ಇನ್ನೂ ಫೆಬ್ರುವರಿ ತಿಂಗಳಾಗಿದ್ದರಿಂದ ಹಿನ್ನೀರು ಹೆಚ್ಚುಪ್ರಮಾಣದಲ್ಲಿ ಖಾಲಿಯಾಗದೇ ದೃಷ್ಟಿ ಗೋಚರವಾಗುವ ದೂರದವರೆಗೂ ಮಲೆತುನಿಂತಿತ್ತು. ನೀರಿನ ನಡುವೆ ಅಲ್ಲಲ್ಲಿ ನೆತ್ತಿಯ ಮೇಲೆ ಒಂದಿಷ್ಟು ಗಿಡಮರಗಳನ್ನು ಇಟ್ಟುಕೊಂಡ ಗುಡ್ಡಗಳು ತಲೆ ಮೇಲೆತ್ತಿಕೊಂಡಿದ್ದವು.

ಯಾನಕ್ಕೆ ಬರುವವರಲ್ಲಿ ಹಲವರು ಗದ್ದಲವೆಬ್ಬಿಸುತ್ತ ಅತ್ತಿತ್ತ ಓಡಾಡತೊಡಗಿದ್ದರು. ನಾನು ತುಸುದೂರ ದಡದಲ್ಲಿ ಹೋಗಿ ಎದುರಿನ ನೀರನ್ನ, ಮಧ್ಯೆ ಅಲ್ಲಲ್ಲಿ ಕಾಣಿಸಿಕೊಳ್ಳುವ ನಡುಗುಡ್ಡಗಳನ್ನ, ಅದರಾಚೆ ದೂರದಲ್ಲಿ ಮಸುಕಾಗಿ ಕಾಣುವ ಗುಡ್ಡಗಳನ್ನ ನೋಡುತ್ತ ನನ್ನೊಳಗೆ ಯೋಚಿಸತೊಡಗಿದೆ. ವಿಶಾಲವಾದ, ದೃಷ್ಟಿಹಾಯುವವರೆಗೂ ಮಧ್ಯೆ ಯಾವ ತಡೆಯೂ ಇರದ ಸಮುದ್ರವನ್ನ ನೋಡುತ್ತಿದ್ದರೆ ಬಾರದ ಪ್ರಶ್ನೆಯೊಂದು ನನ್ನನ್ನ ಕೊರೆಯತೊಡಗಿತು. ಮುಂದಿರುವದು ನಾವು ಹೋಗಲಿರುವ ನೀರದಾರಿ. ಅಲ್ಲೆಲ್ಲೋ ನಡುಗುಡ್ಡಗಳು ಕಾಣುತ್ತಿವೆ. ಅದರಾಚೆ ಏನಿರಬಹುದು? ಆ ಮಸುಕುಮಸುಕಾಗಿ ತೋರುವ ದಿಗಂತದ ಕೆಳಗೆ ಯಾವ ಸನ್ನಿವೇಶವಿರಬಹುದು? ಕಾಣದ ಲೋಕದಂತಿರುವ ಆ ಪ್ರದೇಶಕ್ಕೆ ಹೋದಾಗ ಏನು ಘಟಿಸಬಹುದು? ಎನ್ನುವ ವಿಸ್ಮಯ ನನಗಾಗತೊಡಗಿತು. ಹೊನ್ನೆಮರಡು ಎನ್ನುವ ಪ್ರಕೃತಿಯ ಅಪೂರ್ವ ಸಾನಿಧ್ಯ ನನ್ನೊಳಗೆ ಒಂದು ರೀತಿಯ ಅನುಭೂತಿಯನ್ನು ಹುಟ್ಟಿಸತೊಡಗಿತ್ತು.

“ಎಲ್ರೂ ರೆಡಿಯಾಗಿ, ಮೊದಲು ಲೈಪ್ ಜಾಕೆಟ್ ಹಾಕ್ಕೊಳ್ಳಿ” ಎಂದು ಅಲ್ಲಿ ರಾಶಿ ಹಾಕಿದ್ದ ಲೈಪ್ ಜಾಕೆಟ್‍ಗಳನ್ನು ತೋರಿಸಿ ಅದನ್ನು ಧರಿಸಿಕೊಳ್ಳುವಂತೆ ಸ್ವಾಮಿ ಸೂಚಿಸಿದರು. ಯುದ್ದಕ್ಕೆ ಸಿದ್ಧಗೊಳ್ಳುವ ಸೈನಿಕರಂತೆ ಆ ಜಾಕೆಟ್‍ಗಳನ್ನು ತೊಟ್ಟು ವಿಚಿತ್ರವಾದ ಹುಮ್ಮಸಿನಲ್ಲಿ ಸನ್ನದ್ಧರಾದೆವು. ಹಿಂದೆ ಒಂದೆರಡು ಬಾರಿ ಹೊನ್ನೆಮರಡುಗೆ ಬಂದಾಗ ಈ ಲೈಪ್ ಜಾಕೆಟ್ ತೊಟ್ಟಿದ್ದು ನೆನಪಾಯ್ತು.

ಒಮ್ಮೆ ನಾನು, ಪತ್ರಕರ್ತ ಸ್ನೇಹಿತ ರಘುಪತಿ ಯಾಜಿ, ಲಕ್ಷ್ಮೀನಾರಾಯಣ, ಅವರ ಮಗ ವಿನಾಯಕರಾಮ್ ಹೀಗೇ ನಾಲ್ಕಾರು ಮಂದಿ ಇಲ್ಲಿಗೆ ಬಂದು ಲೈಫ್ ಜಾಕೆಟ್ ತೊಟ್ಟು ನೀರಿಗಿಳಿದಿದ್ದೆವು. ಈ ಜಾಕೆಟ್ ಇಲ್ಲದೇ ಯಾರನ್ನೂ ನೀರಿಗಿಳಿಯಲು ಸ್ವಾಮಿ ಬಿಡೋದೇ ಇಲ್ಲ. ಅವತ್ತು ಸ್ವಾಮಿ ಇಲ್ಲದಿದ್ದರೂ ಅವರ ಸಹಾಯಕನ ಸುಪರ್ದಿಯಲ್ಲಿ ನಾವು ನೀರಿಗಿಳಿದಿದೆವು.

ನನ್ನನ್ನು ಬಿಟ್ಟರೆ ಉಳಿದವರೆಲ್ಲ ಈಜಿನಲ್ಲಿ ಸಾಕಷ್ಟು ಪರಿಣಿತರು. ಅವರ ವಿವಿಧ ಶೈಲಿಯ ಈಜನ್ನು ನೋಡುತ್ತ, ನನಗೆ ಒದಗದ ಭಾಗ್ಯಕ್ಕೆ ಹೊಟ್ಟೆಕಿಚ್ಚುಪಡುತ್ತ ನಾನು ಅಲ್ಲೇ ದಡದಿಂದ ಮಾರುದೂರದ ನೀರಿನಲ್ಲಿ ಈಜುವ ಪ್ರಯತ್ನ ಮಾಡುತ್ತಿದ್ದೆ. ತೆಳ್ಳಗೆ, ಕಡುನೀಲಿಯಾದ ಆ ನೀರಲ್ಲಿ ಸುಮಾರು ದೂರದವರೆಗೂ ಈಜುತ್ತ ಹೋಗಿ ವಾಪಸ್ಸು ಬಂದ ಲಕ್ಷ್ಮೀನಾರಾಯಣ “ಅದೆಂಥದ್ರೀ, ಹುಡ್ರಾಂಗೇ ನೆಲಹಿಡಿದು ಈಜ್ತೀರಾ? ಜಾಕೆಟ್ ಹಾಕ್ಕೊಂಡವ್ರು ಮುಳುಗೋದಿಲ್ಲ. ಆದಷ್ಟು ನೇರವಾಗಿ ಇರಿ, ಕೈ,ಕಾಲು ಬಡೀತಾ ಇರ್ರೀ” ಎಂದೆಲ್ಲ ಈಜಿನ ಕುರಿತಾದ ಕೋಚಿಂಗ್ ಶುರುಹಚ್ಚಿಬಿಟ್ಟರು.

“ನಾವಿದೀವಿ, ನಿಮಗೆಂತಾ ಹೆದರಿಕೆ” ಎಂದು ಅಭಯ ಕೊಟ್ಟದ್ದಕ್ಕೆ ತುಸು ಧೈರ್ಯ ತಂದುಕೊಂಡು ಅವರೊಟ್ಟಿಗೆ ಸ್ವಲ್ಪ ದೂರದವರೆಗೂ ಹೋದೆ. ನೆಲ ಆಳವಾದಂತೆಲ್ಲ ನೀರಿನ ಓಲಾಟ ಹೆಚ್ಚುತ್ತಿತ್ತು. ನೀರಿನ ಓಲಾಟದಲ್ಲಿ ಏನೇ ಒದ್ದಾಡಿದರೂ ನೇರವಾಗಿರಲು ಸಾಧ್ಯವಾಗದೇ ಅಡ್ಡಲಾಗಿಬಿಡುತ್ತಿದ್ದೆ. ಆಗೆಲ್ಲ ತಲೆ ಮುಳುಗಿ ಮೂಗು, ಕಣ್ಣಿಗೂ ನೀರು ನುಗ್ಗುತ್ತಿತ್ತು. ಒಮ್ಮೆಯಂತೂ ಎಷ್ಟು ಭಯವಾಗಿತ್ತೆಂದರೆ ಇನ್ನೇನು ನೀರಲ್ಲಿ ಮುಳುಗೇಬಿಟ್ಟೆ ಅನ್ನಿಸಿಬಿಟ್ಟಿತ್ತು. ಹೇಗೋ ಒದ್ದಾಡುತ್ತ ದಡದ ಹತ್ತಿರ ಬಂದು ಉಸಿರು ತೆಗೆದಿದ್ದೆ.

ಅದು ನೆನಪಾಗಿ ನಾನು ಈ ಯಾನದಲ್ಲಿ ಪಾಲ್ಗೊಳ್ಳಲು ಸಾಧ್ಯವೇ? ಎನ್ನುವ ಪ್ರಶ್ನೆ ನನ್ನಲ್ಲಿ ಹುಟ್ಟಿಕೊಂಡಿತು.

ಹೊನ್ನೆಮರಡುವಿಗೆ ಬಂದು ಕೆಳಗೆ ನೀರಿನ ಬಳಿ ಬರುವ ತನಕವೂ ದೋಣಿಯಾನದ ಗುಂಗಿನಲ್ಲೇ ಇದ್ದ ನನಗೆ ಅಲ್ಲಿ ಆಶ್ಚರ್ಯ ಕಾದಿತ್ತು. ದಡದಲ್ಲಿ ಒಂದೇ ಒಂದು ದೋಣಿ ಇರಲಿಲ್ಲ! ನೀರ ಅಂಚಿನ ನೆಲದ ಮೇಲೆ ಹತ್ತಾರು ದೊಡ್ಡ ಬಟ್ಟಲಿನಾಕಾರದ ಉಕ್ಕಡಗಳು ಮಗುಚಿಕೊಂಡಿದ್ದವು.

“ಅಲ್ರೀ, ದೋಣಿ ಮೇಲೆ ಹೋಗೋದು ಅಂತೀರಿ, ಎಲ್ರೀ ದೋಣಿ?” ಎಂದು ಲಕ್ಷ್ಮಿನಾರಾಯಣ ಬಳಿ ಪ್ರಶ್ನಿಸಿದರೆ “ಅದರಲ್ಲಿ ಅಲ್ರೀ, ಈ ಫೈಬರ್ ಕೊರೆಕಲ್‍ನಲ್ಲಿ ಹೋಗೋದಂತೆ. ಇದರ ಮಜಾನೇ ಬೇರೆ ಇರತ್ತೆ” ಎಂದು ಜಲಯಾನಕ್ಕೆ ಬಂದ ಮತ್ಯಾರೋ ಪರಿಚಯದವರನ್ನ ಮಾತನಾಡಿಸಲು ಅತ್ತ ಜಾರಿಕೊಂಡಿದ್ದರು.

ನಾನು ಮನೆಯಲ್ಲಿ ಮಡದಿ ಬಳಿ ಏನೇನೋ ಸಬೂಬು ಹೇಳಿ ಬಂದಿದ್ದೆ. ಅವಳು ಹೊನ್ನೆಮರಡು, ಅಲ್ಲಿನ ಜಲರಾಶಿಯನ್ನು ನೋಡಿದವಳಾದ್ದರಿಂದ ದೋಣಿಯಾನದಂಥ ಅಪಾಯಕಾರಿ ಸಾಹಸಕ್ಕೆ ಸುತಾರಾಂ ಒಪ್ಪಿರಲಿಲ್ಲ. “ನಿಮಗೆಂತ ತಲೆ ಕೆಟ್ಟಿದೆಯಾ? ನಿಮಗೆಲ್ಲಾದ್ರೂ ಈ ಥರ ಓಡಾಟಕ್ಕೆ ಹೋಗಬೇಕೆಂದಿದ್ರೆ ಮತ್ತೆಲ್ಲಾದ್ರೂ ಹೋಗ್ರಿ, ಅಂಥಾ ಡೇಂಜರ್ ಕೆಲಸಕ್ಕೆ ಯಾಕ್ರೀ ಹೋಗ್ತೀರಾ” ಎಂದು ಗದರಿದ್ದಳು. ಅವಳಿಗೆ ಎಲ್ಲಾದ್ರೂ ಹೆಚ್ಚುಕಡಿಮೆಯಾಗಿ ಪ್ರಾಣಕ್ಕೆ ಸಂಚಕಾರ ಬಂದರೆ ಎನ್ನುವ ಭಯ. ನನಗೇ ನನ್ನ ಪ್ರಾಣದ ಮೇಲಿಲ್ಲದ ಪ್ರೀತಿ ಅವಳಿಗಿದೆಯಲ್ಲ ಎನ್ನುವ ಆಶ್ಚರ್ಯದ ಜೊತೆಗೆ ನನ್ನ ಬಗ್ಗೆ ಇದ್ದ ಕಾಳಜಿಯ ಬಗ್ಗೆ ಮೆಚ್ಚುಗೆಯಾಯಿತು. ಒಂದು ಹಗಲು, ಒಂದು ರಾತ್ರಿಯ ಜಲಯಾನವೆಂತಲೂ, ದೋಣಿಯ ಮೇಲೆ ಹೋಗುವದ್ದಾದ್ದರಿಂದ ಭಯವಿಲ್ಲವೆಂತಲೂ ಗುದ್ದಾಟ ಮಾಡಿ ಒಪ್ಪಿಸಿಬಂದಿದ್ದೆ.

ಇಲ್ಲಿ ನೋಡಿದರೆ ದೋಣಿಯಲ್ಲ ! ಕನ್ನಡದ ಗ್ರಾಮೀಣ ಭಾಷೆಯಲ್ಲಿ ಉಕ್ಕಡ ಎಂದು ಕರೆಯುವ, ಇಂಗ್ಲೀಷನಲ್ಲಿ ಕೊರೆಕಲ್ ಎನ್ನುವ ವೃತ್ತಾಕಾರದ ತೆಪ್ಪದಲ್ಲಿ ತೇಲಬೇಕಿತ್ತು.

ಲಕ್ಷ್ಮಿನಾರಾಯಣ ಮತ್ತೊಂದು ಹುಕ್ಕೆ ಹೊಡೆದಿದ್ದರು. ಅವರು ಹೇಳಿದಂತೆ ನೀರಯಾನ ಒಂದು ಹಗಲು, ಒಂದು ರಾತ್ರಿಯ ಸುತ್ತಾಟವಾಗಿರದೇ ಸುಮಾರು 70 ಮೈಲಿಗೂ ಮಿಕ್ಕಿದ ದೂರದ ಹೊಸನಗರದವರೆಗಾಗಿತ್ತು!

ನನಗೆ ಶಾಕ್ ಹೊಡೆದಂತಾಗಿತ್ತು!

ಎಪ್ಪತ್ತು ಮೈಲಿ ದೂರದವರೆಗೆ, ಕನಿಷ್ಠ ಮೂರು ದಿನಗಳ ಕಾಲ, ಅದೂ ಈ ಕೊರೆಕಲ್‍ನಲ್ಲಿ ಹುಟ್ಟು ಹಾಕುತ್ತ ತೇಲಿಕೊಂಡು ಹೋಗುವದು ಸಾಧ್ಯವೇ? ಎನ್ನುವ ಆತಂಕವೂ ಆಯಿತು. ಹಾಗೇ ವಾಪಸ್ಸಾಗೋಣವೇ ಎನ್ನುವ ಆಲೋಚನೆಯೂ ಬಂತು. ಲಕ್ಷ್ಮಿನಾರಾಯಣರ ಬಳಿ ಹೇಳಿಕೊಳ್ಳೋಣ ಎಂದರೆ ಆ ಪುಣ್ಯಾತ್ಮ ಅಷ್ಟರಲ್ಲೇ ಒಂದು ಕೊರೆಕಲ್ ಎತ್ತಿಕೊಂಡು ನೀರಲ್ಲಿಳಿಸಿ ಒಂದು ಕಾಲನ್ನು ಕೊರೆಕಲ್‍ನಲ್ಲೂ, ಇನ್ನೊಂದು ಕಾಲನ್ನು ನೀರಿನಲ್ಲೂ ಬಿಟ್ಟುಕೊಂಡು “ ಬರ್ರೀ, ಬರ್ರೀ” ಎಂದು ಕೈ ಬೀಸಿ ಕರೆಯುತ್ತಿದ್ದರು.

। ಇನ್ನು ಉಳಿದದ್ದು ನಾಳೆಗೆ ।

‍ಲೇಖಕರು avadhi

16 November, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading