ನನಗೆ ಕಂಡ 'ಅಕ್ಕು' – ರಮೇಶ್ ಗುರುರಾಜರಾವ್

ರಮೇಶ್ ಗುರುರಾಜರಾವ್

ಇತ್ತೀಚಿಗೆ ನಾಟಕಗಳಿಗೆ ಹೋಗುವುದು ತುಂಬಾ ಕಡಿಮೆಯಾಗಿ ಹೋಗಿತ್ತು…. ಕೆಲಸದ ಒತ್ತಡ, ನನ್ನ ಮನೆಗೂ ರಂಗಶಂಕರ, ಕೆ ಎಚ್ ಕಲಾಸೌಧದಂತಹ ಜಾಗಗಳಿಗೂ ದೂರ ಹೆಚ್ಚಾದ್ದರಿಂದ ನಾಟಕ ನೋಡುವುದು ತುಂಬಾ ಅಪರೂಪ…. ಅದ್ಯಾಕೋ ಇವತ್ತು ಗೆಳೆಯರು ಮಾಡಿದ ನಾಟಕ “ಅಕ್ಕು” ನೋಡಲೇಬೇಕು ಎನಿಸಿತ್ತು… ನಾಟಕ ಮುಗಿದ ಮೇಲೆ ಅನ್ನಿಸಿದ್ದು ಇನ್ನೆಷ್ಟೆಲ್ಲಾ ಒಳ್ಳೊಳ್ಳೆ ನಾಟಕಗಳು ಮಿಸ್ ಆಗಿದಾವೆ ಅಂತ….
ಚಂಪಾ ಶೆಟ್ಟಿ… ಇತ್ತೀಚಿನ ಕನ್ನಡದ ಹವ್ಯಾಸಿ ರಂಗಭೂಮಿಯಲ್ಲಿ ಹೆಚ್ಚು ಕೇಳಿಬರುತ್ತಿರುವ ಹೆಸರು… ನಿರ್ದೇಶಕಿಯಾಗಿ ಚಂಪಾ ಶೆಟ್ಟಿ “ಗಾಂಧೀ ಬಂದ” ನಾಟಕದ ಮೂಲಕ ಸಾಕಷ್ಟು ಹೆಸರು ಮಾಡಿದ ಬೆನ್ನಲ್ಲೇ ಬಂದಿದ್ದು ವೈದೇಹಿಯವರ ಕಥೆಗಳನ್ನಾಧರಿಸಿದ ನಾಟಕ “ಅಕ್ಕು”
ನನಗೆ ತಿಳಿದ ಮಟ್ಟಿಗೆ, ಯಾವುದೇ ನಾಟಕದ ವಸ್ತು ನಿರ್ಧಾರವಾಗಬೇಕಾದರೆ ಅದಕ್ಕೆ ಮುಖ್ಯವಾಗಿ ಬೇಕಾದದ್ದು ಆ ವಸ್ತುವನ್ನು ನಾವು ಯಾವ ಹಿನ್ನೆಲೆಯಲ್ಲಿ ನೋಡುತ್ತೇವೆ ಎಂಬುದು… ಆ ನಿಟ್ಟಿನಲ್ಲಿ ಚಂಪಾ, ನಾಟಕದ ವಸ್ತುವಿನ ವಿಷಯದಲ್ಲಿ, ಮೊದಲನೇ ಬಾಲಿಗೆ ಸಿಕ್ಸರ್ ಬಾರಿಸಿರುವುದು ಖುಷಿಯ ವಿಷಯ… ನಾಟಕ ತುಂಬಾ ಗಾಢವಾದ, ಮಹಿಳೆಯರ ಮನದೊಳಗಿನ ತುಮುಲಗಳಿಗೆ ದನಿ ನೀಡುವ ಪ್ರಯತ್ನ… ಮತ್ತೆ, ನನಗನ್ನಿಸಿದ್ದು, ಬಹುಷಃ ಒಬ್ಬ ನಿರ್ದೇಶಕ ಈ ನಾಟಕವನ್ನು ಇಷ್ಟು ಗಾಢವಾಗಿ ರಂಗದ ಮೇಲೆ ತರುವುದು ಸಾಧ್ಯವಿತ್ತೋ ಇಲ್ಲವೋ ಗೊತ್ತಿಲ್ಲ… ಆದರೆ, ಒಬ್ಬ ಹೆಣ್ಣಾಗಿ, ಪಾತ್ರಗಳ ತುಮುಲವನ್ನು, ತಳಮಳಗಳನ್ನು, ಹತಾಶೆಯನ್ನು ಚಂಪಾ ನೋಡಿದ ರೀತಿ ಬೇರೆಯೇ… ಅದಕ್ಕೇ ನಾನು ಆಗಲೇ ಹೇಳಿದ್ದು “ನಾಟಕದ ವಸ್ತುವಿನ ವಿಷಯದಲ್ಲಿ, ಮೊದಲನೇ ಬಾಲಿಗೆ ಸಿಕ್ಸರ್ ಬಾರಿಸಿರುವುದು ಖುಷಿಯ ವಿಷಯ” ಎಂದು….

ಅಕ್ಕಪಕ್ಕದ ಮನೆಯಲ್ಲಿ ಎರಡು ಬ್ರಾಹ್ಮಣ ಕುಟುಂಬ… ಇಡೀ ನಾಟಕ ಇದೆರಡು ಮನೆಗಳಲ್ಲಿ… ಒಂದು ಮನೆಯಲ್ಲಿ ಕೂಡುಕುಟುಂಬವಾದರೆ, ಪಕ್ಕದ ಮನೆಯಲ್ಲಿ ಎರಡು ತಲೆಮಾರಿಗೂ ತಂತಿಯೇ ಕಡಿದುಹೋಗಿದೆಯೇನೋ ಎಂದನ್ನಿಸುವ ಅಜ್ಜಿ ಮೊಮ್ಮೊಗಳ ವಾಸ.
ಕೂಡುಕುಟುಂಬದಲ್ಲಿ ಒಬ್ಬೊಬ್ಬರದು ಒಂದೊಂದು ದಿಕ್ಕು… ಇದರಲ್ಲಿ, ಈ ಕುಟುಂಬದ ಪಾಲಿಗೆ ಅಮುಖ್ಯವಾದ ಆದರೆ ನಾಟಕದ ಹೆಸರಾದ ಅಕ್ಕು ಕೂಡ ಒಂದು ಭಾಗ. ಅಕ್ಕು ಮಾನಸಿಕವಾಗಿ ಸ್ಥಿಮಿತದಲ್ಲಿ ಇಲ್ಲದ ಕಾರಣ, ಆಕೆಯನ್ನು ಕಂಡರೆ, ಮನೆಯ ಪುಟ್ಟ ಮಕ್ಕಳನ್ನು ಹೊರತುಪಡಿಸಿ, ಎಲ್ಲರಿಗೂ ಅಸಡ್ಡೆಯೇ…. ನಾಟಕ ತೆರೆದುಕೊಳ್ಳುವುದೇ ಅಕ್ಕು ಎಂಬ ಹೆಸರಿನ “ಭೂತದ ಕಾಟ”ದಿಂದ…. ಅಕ್ಕುವಿನ ಇರುವಿನಿಂದಲೇ ಮನೆಯ ಮಗಳಿಗೆ ಮದುವೆ ಆಗುತ್ತಿಲ್ಲವೆಂಬ ಗೊಣಗಾಟ ಮನೆಯ ಒಡತಿಯದ್ದು… ಅದಕ್ಕೆ ತಾಳ ಹಾಕುವ ಆಕೆಯ ಗಂಡ….. ಅಕ್ಕು ಆಡುವ ಪ್ರತಿಯೊಂದು ಮಾತು, ಮಾಡುವ ಪ್ರತಿಯೊಂದು ಕೆಲಸವೂ ಮನೆಯವರ ಪಾಲಿಗೆ ಹಿಂಸೆಯೇ… ಮೂಕನಾದ ಅಕ್ಕುವಿನ ತಂದೆ… ಇದೆಲ್ಲ ತಿಕ್ಕಾಟಗಳ ಸೂಕ್ಷ್ಮಗಳ ತಲೆಬುಡ ಅರ್ಥವಾಗದೆ ತಮ್ಮದೇ ಪ್ರಪಂಚದಲ್ಲಿ ಆಡುವ ಹುಡುಗರು…
ಇನ್ನು, ಪಕ್ಕದ ಮನೆಯಲ್ಲಿ, ವಯಸ್ಸಾದ ಮಡಿ ಹೆಂಗಸು ಮತ್ತು ಆಕೆಯ ನೇರಾನೇರ ಮಾತಾಡುವ ಅಲಂಕಾರಪ್ರಿಯೆ ಮೊಮ್ಮೊಗಳು….
ಇಡೀ ನಾಟಕದ ಘಟನೆಗಳು ನಡೆಯುವುದೇ ಈ ಎರಡು ಮನೆಗಳ ಸೂರಿನಡಿ…..
ಕರ್ಮಠ ಬ್ರಾಹ್ಮಣ ಸಂಪ್ರದಾಯದ ಕೆಂಡ ತುಳಿಯುವ ಕೆಲಸ ಮನೆಯ ಹೆಂಗಸರದ್ದಾದರೆ, ತುಳಿಯುವುದಕ್ಕೆ, ಆ ಕೆಂಡ ಹರಡುವ ಕೆಲಸ ಆ ಮನೆಯ ಗಂಡಸರದ್ದು…. ವಸ್ತುವಿಗೆ ಇಲ್ಲಿ ಎರಡು ಭಾಗ…. ನಾಟಕದ ಆರಂಭದಲ್ಲಿ ದುರ್ಬಲವಾದ ಅಕ್ಕುವಿನ ಪಾತ್ರ, ನಾಟಕದ ಕೊನೆ ಬರುತ್ತಿದ್ದಂತೆ ಶಕ್ತಿ, ಯುಕ್ತಿಯುತವಾಗಿ ರೂಪುಗೊಳ್ಳುತ್ತದೆ… ಅಲ್ಲಿಗೆ ಕಥೆಯ ವಸ್ತು ಇನ್ನಷ್ಟು ಗಟ್ಟಿಯಾಗುತ್ತದೆ… ಆರಂಭಶೂರರು ನಾಟಕದ ಕೊನೆಗೆ ಹೇಡಿಗಳಾಗುತ್ತಾರೆ….. ಅಸಹಾಯಕರಾಗುತ್ತಾರೆ…. ಇದು ವಸ್ತುವಿನ ತಾರ್ಕಿಕತೆಗೆ ಇನ್ನಷ್ಟು ಒತ್ತು ಕೊಡುತ್ತದೆ…. ಅಕ್ಕು ಗಟ್ಟಿಯಾದ್ದರಿಂದಲೇ ಮಿಕ್ಕ ಪಾತ್ರಗಳು ಅಸಹಾಯಕವಾಗುತ್ತವೆ…
ನಾಟಕದ ತಾಂತ್ರಿಕತೆಗೆ ಬಂದಾಗ, ಕಥೆಯ ರೂಪದಿಂದ ನಾಟಕದ ರೂಪಕ್ಕೆ ತರುವ ಪ್ರಯತ್ನದಲ್ಲಿ ವಸ್ತು ಜಾಳಾಗದಿರುವಂತೆ ಚಂಪಾ ಶೆಟ್ಟಿ ಪ್ರಯತ್ನಿಸಿರುವುದು ಮೆಚ್ಚುಗೆಗೆ ಪಾತ್ರವಾಗುತ್ತದೆ… ತುಂಬಾ ಸೂಕ್ಷ್ಮವಾದ ಹಂದರದ ಕಥೆಯನ್ನು ನಾಟಕ ರೂಪಕ್ಕೆ ತರುವಾಗ ಇರಬೇಕಾದ ಎಚ್ಚರ ತುಂಬಾ ಸ್ಪಷ್ಟವಾಗಿದೆ. ಪ್ರತಿ ಪಾತ್ರಕ್ಕೆ ಅದರದ್ದೇ ಆದ ತೂಕವಿದೆ…. ನಾಟಕದ ಮೊದಲಲ್ಲಿ ಭಾರವೆನಿಸಿದ ಪಾತ್ರಗಳು, ನಾಟಕದ ಕೊನೆಯಲ್ಲಿ ತೂಕ ಕಳೆದುಕೊಳ್ಳುತ್ತವೆ. ಅದು ನಾಟಕದ ವಸ್ತುವಿನ ಅಗತ್ಯವೂ ಹೌದು. ಇನ್ನು ನಾಟಕದ ವಿನ್ಯಾಸ ತುಂಬಾ ಸರಳ…ಅದನ್ನು ನಮಗೆ ಸರಳ ಎನ್ನಿಸುವಲ್ಲಿ, ಚಂಪಾ ಶೆಟ್ಟಿ ತುಂಬಾ ಶ್ರಮ ಪಟ್ಟಿರುವುದು ಸ್ಪಷ್ಟ….
ನಿರ್ದೇಶನದ ಮಾತು ಬಂದಾಗ ಚಂಪಾ ಶೆಟ್ಟಿಗೆ ಅವರೇ ಸಾಟಿ…. ವಸ್ತುವನ್ನು ವಿಶ್ಲೇಷಿಸಿದ ರೀತಿ, ಅದನ್ನು ರಂಗದ ಮೇಲೆ ಪ್ರಸ್ತುತ ಪಡಿಸಿದ ರೀತಿ, ಯಾವ ಪಾತ್ರ ಎಷ್ಟು ಓಡಾಡಬೇಕು, ಎಷ್ಟು ಮಾತಾಡಬೇಕು ಎಂಬುದನ್ನು ನಿರ್ಧರಿಸಿರುವುದು, ಎಲ್ಲವೂ ವಿಶೇಷ… ಅದರಲ್ಲೂ ರಂಗವನ್ನು ಅದರ ಹಿಂದೆ ನಿಂತೇ ನೋಡುಗರನ್ನು ಆವರಿಸಿಕೊಳ್ಳುವ ಕಲೆ ಚಂಪಾ ಶೆಟ್ಟಿಗೆ ಸಿದ್ಧಿಸಿದೆ ಎಂದೇ ಹೇಳಬೇಕು
ಈ ನಾಟಕದ ಮತ್ತೊಂದು ಮುಖ್ಯವಾದ ಅಂಶ ಬೆಳಕಿನ ವಿನ್ಯಾಸ… ಗೆಳೆಯ ಅರುಣ್ ಮೂರ್ತಿ ಮಾಡಿದ ಬೆಳಕಿನ ವಿನ್ಯಾಸ ಆಪ್ತವಾಗುತ್ತದೆ..ಬೆಳಕು ವಿಷಾದವನ್ನು ಕಟ್ಟಿಕೊಡುತ್ತದೆ… ನಾಟಕದ ಮೊದಲಿನಿಂದ ಕಥೆಯ ಜೊತೆಯಲ್ಲೇ ಸಾಗುವ ಬೆಳಕಿನ ವಿನ್ಯಾಸ, ನಾಟಕದ ಅಂತ್ಯಕ್ಕೆ ಅದ್ಭುತವಾದ ತೂಕವನ್ನು ಕೊಡುತ್ತದೆ… ಅಕ್ಕು, ಮಡಿ ಹೆಂಗಸು ಪದ್ಮಕ್ಕತ್ತೆ ಮತ್ತು ಅವಳ ಮೊಮ್ಮೊಗಳು ಅಮ್ಮಚ್ಚಿ, ಈ ಮೂರು ಜನ ಬೆಳಕಿನ ವಿನ್ಯಾಸದ ಮೂಲಕ ದ್ವೀಪಗಳಾಗುತ್ತಾರೆ, ಒಂಟಿಯಾಗುತ್ತಾರೆ…. ಬೆಳಕು ಅಷ್ಟರ ಮಟ್ಟಿಗೆ ನಾಟಕದ ಯಶಸ್ಸಿಗೆ ಕಾರಣವಾಗುತ್ತದೆ.
ರಂಗದ ಹಿಂದೆ ಗೆಳೆಯ ವೇಣು ನೆಪೋಲಿಯನ್ ಮತ್ತು ತಂಡ, ಶ್ರಮ ಪಟ್ಟು ಕೆಲಸ ಮಾಡಿದೆ… ರಂಗಸಜ್ಜಿಕೆ ಸರಳವಾಗಿ, ಅಗತ್ಯಕ್ಕೆ ತಕ್ಕಷ್ಟಿದೆ…
ಅಕ್ಕು ಪಾತ್ರಧಾರಿ ಎರಡೇ ದಿನದಲ್ಲಿ ತಯಾರಾದದ್ದು ಎಂದು ಗೆಳೆಯ ಪ್ರಕಾಶ್ ಶೆಟ್ಟಿ ಹೇಳಿದಾಗ ನಂಬಲಾಗಲಿಲ್ಲ.. ಅಷ್ಟರ ಮಟ್ಟಿಗೆ ನಮ್ಮ ಮನಸ್ಸಿನ ಮೇಲೆ ಭಾವನೆಗಳ ಮೇಲೆ ಪರಿಣಾಮ ಬೀರಿದೆ ಆಕೆಯ ಅಭಿನಯ… ಆಕೆಯ ಮುಗ್ಧತೆ, ಆಕೆ ತನ್ನ ಅಪ್ಪಯ್ಯನ ಅಸಹಾಯಕ ಪ್ರತಿಕ್ರಿಯೆಗೆ ಧಿಗ್ಮೂಢಳಾಗುವ ಭಾಗಗಳಲ್ಲಿ ಅಕ್ಕು ನಟನೆ ಅದ್ಭುತ… ರಾಧಾಕೃಷ್ಣ ಉರಾಳರು ಮಡಿ ಹೆಂಗಸಿನ ಪಾತ್ರದಲ್ಲಿ ಸಾಕಷ್ಟು ನೈಜತೆ ತುಂಬಿದ್ದಾರೆ…. ಅಪ್ಪಯ್ಯನ ಪಾತ್ರಧಾರಿ ರಾಜ್ಕುಮಾರ್ ಇದುವರೆಗೂ ಮಾಡಿರುವ ಪಾತ್ರಗಳಲ್ಲಿ ಇದೇ ಹೆಚ್ಚು ತೂಕದ್ದು ಎನಿಸುತ್ತದೆ… ಅಪ್ಪಯ್ಯ ಎದ್ದು ಅಕ್ಕುವನ್ನು ನೋವಿನಿಂದ ನೋಡಿ ಸಂಕಟದೊಂದಿಗೆ ಹೋಗುವ ದೃಶ್ಯ ಮನಸ್ಸನ್ನು ಕಲಕುತ್ತದೆ…. ಅಮ್ಮಚ್ಚಿ ಪಾತ್ರಧಾರಿ ದಿವ್ಯಾ ಕಾರಂತ್, ಪಾತ್ರಕ್ಕೆ ಹೊಸ ಆಯಾಮ ಕೊಟ್ಟಿದ್ದಾರೆ… ಆಕೆಯ instant reactions ಆ ತಲೆಮಾರನ್ನು ಬಿಂಬಿಸುತ್ತದೆ. ಉಳಿದಂತೆ ಪುಟ್ಟ ಮಕ್ಕಳು ನಾಟಕವನ್ನು ಇನ್ನಷ್ಟು ಫ್ರೆಶ್ ಆಗಿಸುತ್ತಾರೆ
ಸಂಭಾಷಣೆ ದಕ್ಷಿಣ ಕನ್ನಡದ ಭಾಷೆಯಲ್ಲಿ ಇರುವುದು ಕೆಲ ಪ್ರೇಕ್ಷಕರಿಗೆ ಕಷ್ಟವೆನಿಸಿದರೂ, ಆ ಭಾಷೆಯ ತಾಕತ್ತೇ ಈ ನಾಟಕವನ್ನು ಮತ್ತೊಂದು ಎತ್ತರಕ್ಕೆ ಒಯ್ದಿರುವುದು ಸ್ಪಷ್ಟ… ಸಾಕಷ್ಟು ಸಂಭಾಷಣೆಗಳು ನಮ್ಮನ್ನು ಆಳಕ್ಕೆ ಇಳಿಸುತ್ತವೆ.. ಪದ್ಮಕ್ಕತ್ತೆ ಪಕ್ಕದ ಮನೆಯ ಹುಡುಗಿ ಕೇಳುವ ಪ್ರಶ್ನೆ “ನಿಮಗೆ ಚಿಕ್ಕ ವಯಸ್ಸಲ್ಲೇ ಗಂಡ ತೀರಿಹೋದರಲ್ಲ, ನಿಮಗೆ ಹಸಿವು ಬಾಯಾರಿಕೆಯಾಗಲಿಲ್ಲವೇ?” ಅದಕ್ಕೆ ಪದ್ಮಕ್ಕತ್ತೆಯ ಉತ್ತರ “ಯಾರಿಗಿರೋದಿಲ್ಲ ಹೇಳು ಹಸಿವು ಬಾಯಾರಿಕೆ? (ಎದೆ ಮುಟ್ಟಿಕೊಂಡು) ಇದನ್ನು ಕಲ್ಲು ಮಾಡಿಕೊಂಡರೆ ಯಾವ ಹಸಿವೆ ಬಾಯಾರಿಕೆಯ ಪರಿವೆ ಇರುವುದಿಲ್ಲ” ತಕ್ಷಣವೇ ಚಿಕ್ಕ ಹುಡುಗ ಊಟಕ್ಕೆ ಓಡುತ್ತಾ ಹಸಿವೆಯ ಬಗ್ಗೆ ಹೇಳುತ್ತಾನೆ. ಇಲ್ಲಿ ಹಸಿವೆ ಬಾಯಾರಿಕೆ ಎಂಬುದು ಅವರವರ ದೃಷ್ಟಿಯಲ್ಲಿ ಅನಾವರಣಗೊಳ್ಳುತ್ತದೆ…ಪ್ರೀತಿ ಅನ್ನೋದು ಕರುಳು ಸಂಬಂಧದಲ್ಲಿ ಇಲ್ಲ… ಅದಿರೋದು (ಎದೆ ಮುಟ್ಟಿಕೊಂಡು) ಇಲ್ಲಿ.
ನಾಟಕದ ಹಿನ್ನೆಲೆ ಸಂಗೀತ ಪಂಡಿತ್ ಕಾಶೀನಾಥ್ ಪತ್ತಾರರದ್ದು… ನ್ಯಾಯ ಒದಗಿಸಿದ್ದಾರೆ… ದೃಶ್ಯಗಳ ತೀವ್ರತೆ ಹೆಚ್ಚಿಸೋದಕ್ಕೆ ಸಂಗೀತ ಸಹಕಾರಿಯಾಗಿದೆ…Live ಆಗಿ ಹಾಡಿದ್ದಿದ್ದರೆ ಇನ್ನಷ್ಟು ಚೆಂದವಿರುತ್ತಿತ್ತು… ಚಂಪಾ ಶೆಟ್ಟಿ ಹೇಳಿದಂತೆ ರೆಕಾರ್ಡೆಡ್ ಸಂಗೀತ ಉಪಯೋಗಿಸಿದ್ದಕ್ಕೆ ಅದರದ್ದೇ ಆದ ತಾಂತ್ರಿಕ ಕಾರಣಗಳಿವೆ
ಪ್ರೇಕ್ಷಕರಂತೂ, ತಮ್ಮ ಮನೆಯಲ್ಲೇ ಘಟನೆಗಳು ನಡೆಯುತ್ತಿವೆಯೇನೋ ಎಂಬಷ್ಟು ಮಟ್ಟಿಗೆ ಪ್ರತಿಕ್ರಿಯಿಸುತ್ತಿದ್ದಿದ್ದು ನಾಟಕದ ರೀಚ್ ತೋರಿಸಿತ್ತು…
ಒಟ್ಟಾರೆ, ಕನ್ನಡ ಹವ್ಯಾಸಿ ರಂಗಭೂಮಿಯಲ್ಲಿ ಸಾಕಷ್ಟು ವರ್ಷಗಳು ರೆಫರ್ ಆಗಬಲ್ಲ ನಾಟಕ “ಅಕ್ಕು”
 

‍ಲೇಖಕರು G

May 13, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: