ದೋ ದಿವಾನೆ ಶೆಹರ್ ಮೆ….

ಬಿ ವಿ ಭಾರತಿ
ಹೋಗಿ ಬರಲೇನು ರಾಧಾ – ಮಾಧವನ ಮೆಲುನುಡಿ ರಾಧೆಯನ್ನು ಸುಡುತ್ತದೆ
ಹೋಗಲೇಬೇಕೇನು ಮಾಧವ – ದನಿ ಬೇಡವೆಂದರೂ ನಡುಗುತ್ತದೆ
ಎಲ್ಲ ತಿಳಿದ ನೀನೂ ಹೀಗೆ ಕೇಳಬಹುದೇನೇ – ಮಾಧವನ ದನಿಯಲ್ಲಿ ಯಾಕೆ ಆ ನೋವು …
ಏನು ತಿಳಿದಿರುವುದು ಮಾಧವ? ಯಾವ ತಿಳುವಳಿಕೆಯೂ ಇಂಥ ಸಮಯದಲ್ಲಿ ಕೆಲಸಕ್ಕೆ ಬರುವುದಿಲ್ಲ. ಈ ಅಗಲಿಕೆಯ ಕೊರಗು ಇಡೀ ಚರ್ಮವನ್ನೇ ಕೊಯ್ದು ಒಳ ಹೊಕ್ಕ ಹಾಗೆ ಅನ್ನಿಸುತ್ತಿದೆ
ನಮ್ಮ ನಮ್ಮ ಸ್ಥಳಗಳು ಇದೇ ಎಂದು ನಿಗದಿತವಾಗಿರುತ್ತದೆ ರಾಧೆ. ಇಲ್ಲಿ ಇದ್ದೆನಷ್ಟೇ … ಈಗ ಹೊರಡಬೇಕಲ್ಲ ….
ಹೌದು, ಹೊರಡಬೇಕೆನ್ನುವುದು ನಿನಗೆ ಎಂದಿನಿಂದಲೂ ಗೊತ್ತಿತ್ತು. ನಾನು ಮಾತ್ರ ಯಾಕೋ ಮರೆತೆ… ಅಥವಾ ಮರೆತಂತೆ ನಟಿಸಿದೆನಾ ….
ಇದ್ದ ಘಳಿಗೆಗಳನ್ನು ಪೂರ್ತಿ ನಮ್ಮದಾಗಿಸಿಕೊಂಡೆವಲ್ಲವೇನೇ … ಈ ನೆನಪುಗಳಲ್ಲಿ ಸಾಯುವವರೆಗೂ ಬದುಕಬಹುದು …
ಸಾಯುವವರೆಗೆ …? ನನ್ನ ಸಾವು ನಾಳೆಯೇ ಮಾಧವ. ನೀನು ಹೊರಟ ಮರುಕ್ಷಣ ಎಲ್ಲವೂ ಮುಗಿದಂತೆಯೇ …
ಅಂದರೆ ..? ನೀನು ಪ್ರಾಣ ತೆಗೆದುಕೊಳ್ಳುತ್ತೀಯೇನು! ರಾಧೆ ನೋಯಿಸಲೇ ಬೇಕೆಂದು ನಿರ್ಧರಿಸಿರುವೆಯಾ?
ನಾನು ದೇಹದ ವಿಷಯ ಮಾತಾಡುತ್ತಿಲ್ಲ ಮಾಧವ … ನಾನು ಎನ್ನುವುದು ಇಂದಿಗೆ ಮುಗಿದುಹೋಗುತ್ತದೆ …
ಮಾಧವನ ಮುಖದಲ್ಲಿ ನೋವು ಪಸರಿಸುತ್ತದೆ. ಪಕ್ಕದಲ್ಲಿದ್ದ ಕೊಳಲನ್ನು ತುಟಿಗಳ ನಡುವೆಯಿರಿಸಿ ನಸು ಕಂಪಿಸುತ್ತ ಉಸಿರು ತುಂಬುತ್ತಾನೆ
ರಾಗವೊಂದು ಸುತ್ತಲೂ ಹರಡುತ್ತದೆ

ರಾಧೆ ಮಾಧವನ ಪಕ್ಕಕ್ಕೆ ಸರಿಯುತ್ತಾಳೆ
ಮಾಧವನ ಮುರಲಿಗೆ ನೋವಿಲ್ಲವೇನು? ಈ ಘಳಿಗೆಯಲ್ಲೂ ಅಪಸ್ವರವಿಲ್ಲದಂತೆ ನಾದ ಹೊಮ್ಮಿಸುತ್ತದೆ!
ಮಾಧವಾ … ಮಾಧವಾ …..
ಕೊಳಲಿನ ನಾದ ನಿಲ್ಲುತ್ತದೆ … ಪ್ರಶ್ನಾರ್ಥಕವಾಗಿ ನೋಡುತ್ತಾನೆ …
ನಿನ್ನ ಕೊಳಲಿಗೆ ಅಳಲಿಲ್ಲವೇನು? ಅಗಲಿಕೆಯ ಅಳಲು …?
ಮಾಧವ ಮಾತನಾಡದೆ ರಾಧೆಯನ್ನು ಮಡಿಲಿಗೆಳೆದುಕೊಳ್ಳುತ್ತಾನೆ
ಮತ್ತೆ ಮುರಲಿಯ ನಾದ ಹರಡುತ್ತದೆ
ರಾಧೆಗೆ ಆತಂಕವಾದಾಗಲೆಲ್ಲ ನಿದ್ರೆ ಬರುವಂತಾಗುತ್ತದೆ … ಈಗಲೂ ಹಾಗೆಯೇ …
ರಾಧೆ ಕರ್ತವ್ಯದ ವಿಷಯ ನನಗೆ ಬೇಡ. ಇಲ್ಲೇ ಇದ್ದುಬಿಡುತ್ತೇನೆ ಕಣೇ – ಮಾಧವನ ದನಿ
ರಾಧೆ ಬೆಚ್ಚಿ ಕಣ್ಣು ತೆರೆಯುತ್ತಾ ಕೇಳುತ್ತಾಳೆ – ನಿಜಕ್ಕೂ ….?
ಕೊಳಲನಾದ ನಿಲ್ಲಿಸಿ ಮಾಧವ ‘ಏನಂದೆ?’ ಎನ್ನುತ್ತಾನೆ
ಓಹ್! ಆ ಮಾತುಗಳನು ಮಾಧವ ಆಡಿಯೇ ಇಲ್ಲ! –
ವಿಷಾದದ ನಗು ರಾಧೆಯ ತುಟಿಗಳ ತುಂಬ … ಮತ್ತಿನಂಥ ನಿದ್ರೆ ಮತ್ತೆ ಆವರಿಸುತ್ತದೆ
ನಸುಕಿನಲ್ಲೇ ನಾನು ಹೊರಡಬೇಕು. ಇನ್ನು ಹೊರಡೋಣವೇ – ಎಲ್ಲೋ ಮಾಧವನ ದನಿ
ರಾಧೆ ಎಚ್ಚರಗೊಳ್ಳುತ್ತಾಳೆ. ಯಾರಿಗೆ ಬೇಕಿತ್ತು ಈ ಎಚ್ಚರ?
ಮಾಧವ ಬೀಳ್ಕೊಡುತ್ತ ರಾಧೆಯನ್ನು ಕಡೆಯಬಾರಿ ಎನ್ನುವಂತೆ ಚುಂಬಿಸುತ್ತಾನೆ
ರಾಧೆ ಮತ್ತೆ ಕಣ್ಣು ತೆರೆದಾಗ ಮಾಧವನ ಬೆನ್ನು ಕಾಣುತ್ತದೆ
ಕೊಳಲ ನಾದ ಸ್ತಬ್ಧ …
***
ಕೊಳಲ ನಾದ ಸ್ತಬ್ಧ …
ಬೆಚ್ಚಿಬಿದ್ದು ಏಳುತ್ತಾಳೆ ಅವಳು.
ಈಗ ಯಾವ ರಾಗವನ್ನು ನುಡಿಸಲಿ – ಚೌರಾಸಿಯಾರ ಮೃದು ದನಿ ಬೀಳುತ್ತದೆ ಕಿವಿಯ ಮೇಲೆ
ಯಾರೋ ರಾಗ್ ಪಹಾಡಿ ಎಂದು ಕೂಗುತ್ತಾರೆ
ಮತ್ತೆ ಯಾರೋ ರಾಗ್ ಹಂಸಧ್ವನಿ ಎನ್ನುತ್ತಾರೆ
ನೀವು ಎಷ್ಟೆಲ್ಲ ರಾಗಗಳ ಬಗ್ಗೆ ತಿಳಿದುಕೊಂಡಿದ್ದೀರಿ! ನನಗೆ ಇವೆಲ್ಲ ಗೊತ್ತೇ ಇಲ್ಲ – ತುಂಟತನ ಅವರ ದನಿಯಲ್ಲಿ
ಮತ್ತೆ ಯಾರೋ ರಾಗ್ ಜೋಗ್ ಎಂದು ಕೂಗುತ್ತಾರೆ
ಚೌರಾಸಿಯಾ – ಸರಿ ನಾನೀಗ ಜೋಗ್ ರಾಗವನ್ನೇ ನುಡಿಸುತ್ತೇನೆ ಎನ್ನುತ್ತಾರೆ
ಅವಳು ಸುಮ್ಮನೆ ಎಲ್ಲ ದನಿಗಳಿಗೂ ಕಿವಿಯಾಗುತ್ತಾಳೆ

ನೀವು ನಾದವೊಂದನ್ನು ನನ್ನ ತೆಕ್ಕೆಗಿಡಿ ಸಾಕು. ರಾಗ ಯಾವುದಾದರೂ ಆಗಲಿ. ಬಿಗಿದಪ್ಪಿ ನಾನು ಈ ಮಾತಿನಾಚೆಯ ಲೋಕಕ್ಕೆ ಹೊರಡುತ್ತೇನೆ – ಚಡಪಡಿಸುತ್ತಾಳೆ
ಕೊಳಲೆತ್ತಿ ತುಟಿಗಿಡುತ್ತಾರೆ
ನಾದವೆನ್ನುವುದು ದಾರವಾಗಿ ಭೂಮಿ-ನಭಗಳನ್ನು ಹೆಣೆಯುತ್ತದೆ
ಏಕಾಏಕಿ ನಭದ ನಕ್ಷತ್ರಗಳೆಲ್ಲವೂ ಭೂಮಿಯ ಮಡಿಲಲ್ಲಿ … ಭೂಮಿಯ ಆಕಾಶಮಲ್ಲಿಗೆ ನಭದ ತೆಕ್ಕೆಯಲ್ಲಿ …
ಕಣ್ಣು ಮುಚ್ಚುತ್ತಾಳೆ
ಮತ್ತೆ ಕೊಳಲನಾದ …
***
ಮತ್ತೆ ಕೊಳಲನಾದ …
ಅವನ ಜೊತೆಗಿದ್ದರೆ ನಿಲ್ಲುವುದೇ ಇಲ್ಲ ಎಂದುಕೊಳ್ಳುತ್ತಾಳೆ ಅವಳು
ನೋಡು ಇದೇ ನೀನು ಹೇಳಿದ ಜಾಗ – ಅವನು ಗಾಡಿ ನಿಲ್ಲಿಸುತ್ತಾನೆ
ಕಿತ್ತುಹೋದ ಅಂಗಡಿಗಳ ಬಯಲು ಸ್ವಾಗತಿಸುತ್ತದೆ
ಅವಳ ಮುಖ ಚಿಕ್ಕದಾಗುತ್ತದೆ. ಆ ವಸ್ತುಪ್ರದರ್ಶನ ಮುಗಿದುಹೋಗಿದೆ!
ಈಗ ತಾನಿನ್ನು ಹೊರಡುತ್ತೇನೆ ಎಂದುಬಿಡುತ್ತಾನಾ?
ಸುಂದರ ಪಯಣವೊಂದು ಇದ್ದಕ್ಕಿದ್ದ ಹಾಗೆ ಮೊಟಕಾಗಿ ಬಿಡುತ್ತದಾ?
ನನಗೆ ಈ ಪಯಣ ಈಗಲೇ ಮುಗಿಯಬಾರದು!
ಇದ್ದಕ್ಕಿದ್ದಂತೆ ‘ಅಲ್ಲಿಗೆ ಕರೆದೊಯ್ಯುತ್ತೀಯಾ?’ ಎನ್ನುತ್ತಾಳೆ.
ಅವಳ ಪ್ರಿಯವಾದ ಜಾಗ ಅದು. ಪ್ರತೀಬಾರಿಯೂ ಅದೇಕೋ ಅಲ್ಲಿಗೆ ಹೋಗುವ ಆಸೆ ಕೈಗೂಡುವುದೇ ಇಲ್ಲ …
ಕೆಲವೊಂದು ಹಾಗೆಯೇ ಈ ಬದುಕಿನಲ್ಲಿ, ಸಿಕ್ಕಾಗ … ಸಿಕ್ಕಷ್ಟು … ಅಷ್ಟೇ ….
ಅಲ್ಲಿಗೆ ಬೇಡ – ಅವನು
ಈಗ ಹೊರಡುವೆ ಎನ್ನುತ್ತಾನೆ – ಅಯ್ಯೋ ಅಂದೇಬಿಡುತ್ತಾನೆ – ಹೊರಟೇ ಬಿಡುತ್ತಾನೆ … ಅವಳು ಮನಸ್ಸಿನಲ್ಲಿ ಗಾಭರಿಗೊಳ್ಳುತ್ತಿರುವಾಗಲೇ
ಒಂದು ಗೊತ್ತುಗುರಿಯಿಲ್ಲದ ಪ್ರಯಾಣಕ್ಕೆ ಹೊರಡೋಣವಾ?
ಓಹ್! ಪಯಣ ಮುಗಿಸುವ ಮಾತಾಡಲಿಲ್ಲ ಅವನು! – ನಿಟ್ಟುಸಿರಾಗುತ್ತಾಳೆ ಅವಳು
ಗಾಡಿ ಮುಂದೆ ಹೊರಡುತ್ತದೆ
ಊರ ಆಚೆಯ ಬಯಲು, ಹಸಿರು, ಗಾಳಿ, ಅವನು, ಪಯಣ … ಎಲ್ಲವೂ ಎಷ್ಟು ಸುಂದರ!
ಅನುಭವಗಳೆಲ್ಲ ಎದೆಯಲ್ಲಿ ಕವಿತೆಯಾಗತೊಡಗುತ್ತವೆ ….
ಗಾಡಿ ಕವಲೊಂದರಲ್ಲಿ ನಿಂತಾಗ – ಇಲ್ಲೊಂದು ದೇಗುಲವಿದೆ, ಹೋಗೋಣವೇ ಎನ್ನುತ್ತಾನೆ
ದೇಗುಲವೋ, ಬಯಲೋ, ಆಲಯವೋ – ನಿನ್ನೊಡನಿರುವಾಗ ಎಲ್ಲವೂ ಏಕ ಅಂದುಕೊಳ್ಳುತ್ತಾಳೆ
ಗದ್ದೆಯೊಂದರ ನಡುವಿನ ಹಾದಿ. ಎರಡೂ ಬದಿಯಲ್ಲೂ ಹಸಿರು … ಹಸಿರು … ಮತ್ತಿಷ್ಟು ಹಸಿರು …
ಇಲ್ಲಿಯೇ ಎಲ್ಲೋ ಆ ದೇಗುಲವಿದ್ದಿದ್ದು – ಅವನು ಮತ್ತೆ ಮತ್ತೆ ಅದನ್ನೇ ಹೇಳುತ್ತಾನೆ
ಅವಳಿಗೆ ಗಮ್ಯದ ಕಡೆಗೆ ಗಮನವೇ ಇಲ್ಲ! ಅವನ ಜೊತೆಗಿನ ಪಯಣದ ಸಂಭ್ರಮ ಮಾತ್ರ …
ಸೂರ್ಯ ಕೆಲಸ ಮುಗಿಸಿ ಮನೆಯ ಕಡೆ ಹೊರಡುತ್ತಾನೆ
ನಭದ ನೀಲ ಮೆಲ್ಲನೆ ಕೆಂಪಾಗುತ್ತದೆ
ರಸ್ತೆಯ ಮುಂದಕ್ಕೆ ಕಣ್ಣು ಹಾಯಿಸಿದರೆ ಅದು ಎಲ್ಲಿಗೂ ಹೋಗಿ ಸೇರುತ್ತದೆ ಅಂತಲೇ ಅನ್ನಿಸದಂತೆ …
ಭೂಲೋಕದ ಆಚೆಗೆಲ್ಲಿಗೋ ಕರೆದೊಯ್ಯುತ್ತದೋ ಅನ್ನುವಂತೆ ಕಾಣತೊಡಗುತ್ತದೆ
ನೇರ ದಾರಿ. ಪುಟ್ಟವಳಿರುವಾಗ ಅಮ್ಮ ತೆಗೆಯುತ್ತಿದ್ದ ಬೈತಲೆಯಂತೆ …
ನಾನು ಪುಟ್ಟವಳೇ ಆಗಿರಬೇಕಿತ್ತು. ಈ ಬದುಕು, ಈ ಗೊತ್ತಿರದ ರಸ್ತೆಗಳು, ಈ ಪಯಣ, ಈ ಹುಡುಕಾಟ …ಉಫ್!
ಏನು ಯೋಚನೆಗೆ ಬಿದ್ದೆ – ಅವನ ದನಿ
ಎಲ್ಲಿಗೆ ಕೊಂಡೊಯ್ಯುತ್ತದೆ ಅಂತಲೇ ಅರ್ಥವಾಗುತ್ತಿಲ್ಲವಲ್ಲ – ಅನ್ನುತ್ತಾಳೆ
ಅಷ್ಟರಲ್ಲಿ ಗದ್ದೆಯ ನಡುವಲ್ಲಿದ್ದ ದೇಗುಲ ಕಣ್ಣಿಗೆ ಬೀಳುತ್ತದೆ.
ಹಿಂದೆ ಬಂದಾಗ ಅಲ್ಲಿಗೆ ಹೋಗಲು ರಸ್ತೆಯಿತ್ತು. ಈಗ ಕಾಲುದಾರಿಯಲ್ಲೇ ಹೋಗಬೇಕೇನೋ ಎನ್ನುತ್ತಾನೆ ಅವನು
ರಸ್ತೆಗಳು ಹಠಾತ್ತಾಗಿ ಮುಚ್ಚಿಹೋಗುತ್ತವೆ ಒಮ್ಮೊಮ್ಮೆ. ಎದುರಿಗೆ ಕಾಣುವುದನ್ನು ತಲುಪಲು ಮತ್ಯಾರಿಗೋ ಸೇರಿದ ಭೂಮಿಯ ಅತಿಕ್ರಮಣ ಮಾಡಬೇಕು …
ಅತಿಕ್ರಮಣ ಮಾಡಿಯಾದರೂ ಅಲ್ಲಿಗೆ ಹೋಗಬೇಕಾ? ಬೇಡ ಅಲ್ಲವೇ? – ಕೇಳುತ್ತಾನೆ
ನೀನು ಹೇಳುವುದು ಸರಿ. ಮುಚ್ಚಿದ ರಸ್ತೆಯನ್ನು ಬಿಟ್ಟು ನಮ್ಮೆದುರಿಗಿರುವ ರಸ್ತೆಯಲ್ಲಿ ಹೋಗೋಣ ಸಾಕು ಎನ್ನುತ್ತಾಳೆ ಅವಳು
ಎಲ್ಲಿಗೂ ಹೋಗಿ ತಲುಪಿಸದಂಥ ರಸ್ತೆಯಲ್ಲಿ ಎಷ್ಟು ಹೊತ್ತು ಸುಮ್ಮನೆ ಹೋಗುವುದು? – ಅವಳೆನ್ನುತ್ತಾಳೆರಸ್ತೆಯ ಸೌಂದರ್ಯ ಕಣ್ಣು ತುಂಬುವಂತಿದ್ದರೂ, ಸ್ವಲ್ಪ ಹೊತ್ತಿನಲ್ಲಿ ಇಬ್ಬರಲ್ಲೂ ಸಣ್ಣ ಚಡಪಡಿಕೆ …
ಇದ್ದಕ್ಕಿದ್ದಂತೆ ಬೈತಲೆಯ ರಸ್ತೆಯಲ್ಲಿ ಸಣ್ಣ ತಿರುವು ಕಾಣಿಸುತ್ತದೆ
ಅಲ್ಲಿ ಸಾಗಿದಾಗ ಇದ್ದಕ್ಕಿದ್ದಂತೆ ರಸ್ತೆ ಬದಿಯಲ್ಲಿ ಕುಳಿತ ಮೂವರು ಕಾಣುತ್ತಾರೆ
ಮುಂದೆ ಹೋದರೆ ಮುಖ್ಯರಸ್ತೆಗೆ ಆ ದಾರಿ ಸೇರುತ್ತದೆ ಅನ್ನುತ್ತಾರೆ ಅವರು.
ಇಬ್ಬರಿಗೂ ಈಗ ತುಸು ನಿರಾಳವೆನ್ನಿಸುತ್ತದೆ, ಪಯಣಕ್ಕೊಂದಿಷ್ಟು ಅರ್ಥವೂ ಇರುವಂತೆ ಭಾಸ …
ಮತ್ತೆ ಎಷ್ಟೋ ದೂರ ಹೋದ ನಂತರವೂ ಮುಖ್ಯ ರಸ್ತೆ ಸಿಗದಾದಾಗ ಮತ್ತೆ ಎದುರಾದ ಯಾರನ್ನೋ ವಿಚಾರಿಸುತ್ತಾನೆ
ಮುಂದಕ್ಕೆ ಸರಿದ ಹಾಗೆ ಮುಖ್ಯರಸ್ತೆ ಎದುರಾಗುತ್ತದೆ
ಅವನು ಕವಲಿನಲ್ಲಿ ಗಾಡಿ ನಿಲ್ಲಿಸಿ ‘ಈಗ?’ ಎನ್ನುತ್ತಾನೆ
ಎಡಕ್ಕೆ ಹೋದರೆ ಅವಳ ಊರು – ಬಲಕ್ಕೆ ಹೋದರೆ ಅವನ ಊರು
ಅವಳು ನಗುತ್ತಾ – ನನ್ನೂರಿಗೆ ಹೋಗೋಣ ಅಂತ ನಾನು ಅಂದರೆ ಬಂದೇ ಬಿಡುತ್ತೀಯೇನು ಎನ್ನುತ್ತಾಳೆ
ಅವನು ಮಾತನಾಡುವುದಿಲ್ಲ
ಸುಮ್ಮನೇ ಮಾತಿಲ್ಲದೇ ನಿನ್ನೂರಿನ ಕಡೆ ತಿರುಗಿಸು – ನಗುತ್ತಲೇ ಹೇಳಿದ ಅವಳ ದನಿಯಲ್ಲಿ ಬದುಕಿನ ಸತ್ಯವೆಲ್ಲವೂ ಅಡಗಿರುತ್ತದೆ
ಗಾಡಿ ಬಲಕ್ಕೆ ತಿರುಗುತ್ತದೆ
ಅವನೂರಿನ ದಾರಿಯನ್ನು ಸೇರುವುದರಲ್ಲಿ ಮಿಣುಕು ದೀಪಗಳು ಅಲ್ಲಲ್ಲಿ …
ಅವಳಿದ್ದ ಸ್ಥಳ ತಲುಪಿಸಿ ‘ನಾನಿನ್ನು ಬರಲೇ’ ಎನ್ನುತ್ತಾನೆ
ಮತ್ತೆಂದು ಸಿಗುತ್ತೀವೋ, ಐದು ನಿಮಿಷ ಬಂದು ಹೋಗು – ಎನ್ನುತ್ತಾಳೆ
ನೀನು ಅಳಲು ಶುರು ಮಾಡಿದರೆ ಎಂದು ನನಗೆ ಭಯ – ಎನ್ನುತ್ತಾನೆ
ಇಲ್ಲ, ಇಲ್ಲ. ನನಗೆ ಅಳು ಬರುವುದು ನಿಂತು ಹೋಗಿ ಎರಡು ವರ್ಷವೇ ಆಗಿಹೋಯಿತು ಅನ್ನುತ್ತಾಳೆ
ಬಾಗಿಲು ತೆರೆದು ಒಳಹೊಕ್ಕ ಕೂಡಲೇ ‘ನಾನಿನ್ನು ಹೊರಡುತ್ತೇನೆ’ ಎನ್ನುತ್ತಾನೆ
ಅವನ ಹತ್ತಿರ ಸೇರಿ ಭುಜದ ಮೇಲೆ ತಲೆಯಿಡುತ್ತಾಳೆ
ಅವನು ಹಗುರವಾಗಿ ಅವಳನ್ನು ಹಿಡಿಯುತ್ತಾನೆ
ನಂತರ ಬಾಗಿಲು ತೆರೆದು ಹೊರಡುತ್ತಾನೆ….
ಅವಳು ಅವನ ಅಸ್ತಿತ್ವದ ತುಣುಕಿನ ಕೊನೆಯ ಬಿಂದುವನ್ನೂ ಅವಳದಾಗಿಸಿಕೊಳ್ಳುವವಳಂತೆ ಬಾಲ್ಕನಿಗೆ ಓಡುತ್ತಾಳೆ
ಅವನು ಗಾಡಿ ಹತ್ತಿ ಹೊರಟವನು ಕೈ ಬೀಸುತ್ತಾನೆ
ಅವನು ಪೂರ್ತಿ ಮರೆಯಾಗುವವರೆಗೆ ಅಲ್ಲೇ ನಿಂತಿರುತ್ತಾಳೆ
ನಂತರ ಹಿಂತಿರುಗಿ ಬಂದು ಅವಳ ಕೊಠಡಿ ಸೇರಿ ಬಾಗಿಲು ಮುಚ್ಚುತ್ತಾಳೆ
ಕಣ್ಣಲ್ಲಿ ನೀರು ತುಂಬುತ್ತದೆ ,… ಸಣ್ಣ ಬಿಕ್ಕು ಕೂಡ …
ಮತ್ತೆ ಕೊಳಲ ನಾದ ಸ್ತಬ್ಧ ….
***
ಮತ್ತೆ ಕೊಳಲ ನಾದ ಸ್ತಬ್ಧ …
ಇಡೀ ಪ್ರಪಂಚವನ್ನೆಲ್ಲ ಸುತ್ತುವರೆದಿದ್ದ ಪಹಾಡಿ ರಾಗ ನಿಲ್ಲುತ್ತದೆ
ಖುರ್ಚಿಗೊರಗಿ ಕುಳಿತಿದ್ದ ಅವಳು ಕಣ್ಣು ಬಿಡುತ್ತಾಳೆ
ಕಣ್ಣೀರು ಹರಿದು ಕುತ್ತಿಗೆಯೆಲ್ಲ ಒದ್ದೆಯಾಗಿರುವುದು ಅರಿವಿಗೆ ಬರುತ್ತದೆ
ರಾಗವೊಂದು ಈ ರೀತಿ ನನ್ನನ್ನು ಕದಲಿಸಿದ್ದು ಇದೇ ಮೊದಲು ಎಂದುಕೊಳ್ಳುತ್ತಾಳೆ
ಚೌರಾಸಿಯಾ ಕೊಳಲನ್ನು ಪಕ್ಕಕ್ಕಿಟ್ಟು ಕೈ ಮುಗಿಯುತ್ತಾರೆ
ನಿಮಗೊಂದು ಗುಟ್ಟು ಹೇಳಲೇ – ಎನ್ನುತ್ತಾರೆ ಚೌರಾಸಿಯಾ
ಅವಳು ಕೆನ್ನೆ ತುಂಬ ಮೆತ್ತಿದ್ದ ಕಂಬನಿ ಒರೆಸಿಕೊಳ್ಳುವುದೂ ಬೇಡವಾದಂತೆ ಅವರ ಗುಟ್ಟಿಗೆ ಕಿವಿಗೊಡುತ್ತಾಳೆ
ಆಗ ನೀವು ರಾಗ್ ಜೋಗ್ ಅಂದಾಗ ನಾನು ಹೇಗೂ ಅದನ್ನೇ ನುಡಿಸುವವನಿದ್ದೆ. ಅದು ನನ್ನದೇ ತೀರ್ಮಾನವಾಗಿತ್ತು – ಎಂದು ಮಗುವಿನಂತೆ ನಗುತ್ತಾರೆ
ಹೌದು, ನುಡಿಸುವ ರಾಗಗಳೆಲ್ಲವೂ ಅವರವರ ನಿರ್ಧಾರವೇ ಆಗಿರುತ್ತದೆ!
ಇನ್ನೊಂದೇ ಒಂದು? – ಎಲ್ಲರ ದನಿಯಲ್ಲೂ ಒತ್ತಾಯ
ಪಹಾಡಿ ಆದಮೇಲೆ? ಉಹುಂ, ಅದಾದ ನಂತರ ಮತ್ತೆ ಯಾವುದನ್ನೂ ನುಡಿಸಲು ಹೋಗಬಾರದು – ಚೌರಾಸಿಯಾ ನಿರ್ಧಾರದ ದನಿಯಲ್ಲಿ ಹೇಳುತ್ತಾರೆ
ಸಭೆ ಮೌನವಾಗುತ್ತದೆ
ಹೌದು, ಅದ್ಭುತ ರಾಗವೊಂದರ ನಂತರ ಮತ್ತೆ ಯಾವುದೂ ರಾಗವಿರುವುದಿಲ್ಲ …
ಏಕೆಂದರೆ ನಾದ ಸ್ತಬ್ಧವಾಗುವುದೇ ಇಲ್ಲ!





ವಾವ್… ಕೊಳಲ ನಾದ ಸ್ತಬ್ದವಾಗದೆ ಮುಂದುವರೆಯುತ್ತಲೇ ಇದೆ,
ಮತ್ತೆಲ್ಲೊ ಹೊಸ ರಾಗ ಹುಟ್ಟತ್ತದೆ, ಹೊಸ ದಾರಿ ಕರೆಯುತ್ತದೆ
Nice article.
Dwapara yuga vaagali kaliyugada vaagali radhe mattu Krishna na aagalikeya nittusiru badalaaguvudilla!!! Adbhuta vaagi moodi bandide radhe madhavana talalata nimma kaiyalli Bharti
thanks Manju 🙂