ರಾಜೇಂದ್ರ ಪ್ರಸಾದ್
ಇಂತಹವುದೊಂದು ಪೋಸ್ಟ್ ಬರೆಯುತ್ತಿರುವ ನಾನು ಸ್ವತಹಃ ಉಸಿರಾಟದ ತೊಂದರೆಯಿಂದ ಬಳಲುತ್ತಿರುವ ವ್ಯಕ್ತಿ ಹಾಗು ಆಕ್ಸಿಜೆನ್ ಸರಬರಾಜುದಾರ ಕೂಡ!
ಸೈನಸ್ ಸಮಸ್ಯೆಗೆ ಸಿಕ್ಕಿಕೊಂಡು ಎರಡು ದಶಕಗಳಿಂದ ಉಸಿರಾಟ ನಿಲ್ಲುವ ಸಂಕಟವನ್ನು ಚೆನ್ನಾಗಿ ಬಲ್ಲವನು. ನಾಕೈದು ನಿಮಿಷ ಮೂಗು ಮುಚ್ಚಿಕೊಂಡು ”ನಾವೂ ಬಲ್ಲೆವು” ಅನ್ನುವ ಬಲ್ಲಿದರಿಗೆ ಇಲ್ಲಿಂದಲೇ ಕೈಮುಗಿವೆನು. ನೀವೆಲ್ಲಾ ದೂರದಲ್ಲೇ ಸಂತಸದಲ್ಲಿರಿ. ನನಗೀಗ ಸೂತಕ! ನೊಂದವರೆಲ್ಲ ನನ್ನ ಬಳಗ.
ಇದೊಂದು ಹಸುಳೆಯ ಫೋಟೋವನ್ನು ನೋಡಿ ಕಣ್ಣಾಲಿ ತುಂಬಿ ಸುರಿಯುತ್ತಿವೆ. ಹೇಗೆ ನಿಲ್ಲಿಸಲಿ ? ಹೇಗೆ ನನ್ನ ನಾ ಸಂತೈಸಿಕೊಳ್ಳಲಿ? ಮದುವೆ, ಮಕ್ಕಳು ಇಲ್ಲದ ಮಾತ್ರಕ್ಕೆ ಕರುಳಕುಡಿಯ ಸಾವ ನೋವರಿಯದಷ್ಟು ಎದೆಯ ಪಸೆ ಒಣಗಿಹೋಗಿಲ್ಲ. ತಿರುಗಿ ತಿರುಗಿ ಫೋಟೋ ನೋಡಿದಷ್ಟೂ ಅದು ನಾನೆಯೇ ಆಗಿದ್ದೇನೆಂದು ಅನ್ನಿಸುವಷ್ಟು ಮಟ್ಟಿಗೆ ಎದೆ ವಿಲಗುಡುತ್ತಿದೆ. ಉಸಿರುಗಟ್ಟಿ ನೊಂದ ರಾತ್ರಿಗಳು ಕಣ್ಮುಂದೆ ರಾಕ್ಷಸಾಕಾರವಾಗಿ ನಿಲ್ಲುತ್ತಿವೆ. ಆ ಹಸುಳೆ ಹೇಗಾದರೂ ಸಹಿಸೀತು! ಸಾಯುವ ಸಂಕಟವ ಅದನ್ನು ಮುಟ್ಟಿದವನು, ಸನಿಹ ನಿಂತವನು ಮಾತ್ರ ಬಲ್ಲ. ಇನ್ನು ಈ ಕುಡಿಗಳನ್ನು ಕಳೆದುಕೊಂಡ ಕುಟುಂಬಗಳ ಕಣ್ಣೀರಿನ ಬಿಸಿ ದೇಶಭಕ್ತಿಯ ಬಿಸಿಮಾತುಗಳ ನಡುವೆ ಯಾರಿಗೂ ತಾಗಿದಂತಿಲ್ಲ.
ಈ ಸರ್ಕಾರೀ ವ್ಯವಸ್ಥೆಗಳೇ ಹೀಗೆ! ಬೇಜವಾಬ್ದಾರಿ, ದುರಂಹಕಾರ, ದರ್ಪ, ಮತ್ತು ದೌರ್ಜನ್ಯಗಳ ಆಗರ. ಭ್ರಷ್ಟಾಚಾರಕ್ಕೆ ಕಡಿವಾಣ ಹಾಕಲು ಸಾವಿರ ನಿಯಂತ್ರಣಗಳನ್ನು ತಂದರೆ ಅದಕ್ಕೆ ಸಾವಿರ ಕುತಂತ್ರಗಳನ್ನು ಸರಕಾರಿ ವ್ಯವಸ್ಥೆಯೊಳಗಿನ ಹೆಗ್ಗಣಗಳು ಹೆಣೆಯುತ್ತವೆ. ಎಲ್ಲ ರೀತಿಯ ಆಸ್ಪತ್ರೆಗಳು ಈಗ ಕೇಂದ್ರೀಕೃತ ಆಕ್ಸಿಜನ್ ಸರಬರಾಜು ವ್ಯವಸ್ಥೆಗಳನ್ನು ಮಾಡಿಕೊಂಡಿವೆ. ದೊಡ್ಡ ದೊಡ್ಡ ಆಸ್ಪತ್ರೆಗಳು ಇನ್ನು ಮುಂದೆ ಹೋಗಿ PSA Medical Oxygen Unit ಗಳನ್ನೂ ( ಸ್ಥಳದಲ್ಲೇ ಆಕ್ಸಿಜೆನ್ ತಯಾರಾರಿಸುವ ಯಂತ್ರಗಳು), ದೊಡ್ಡ ಲಿಕ್ವಿಡ್ ಆಕ್ಸಿಜನ್ ಟ್ಯಾಂಕ್ ( ದ್ರವೀಕೃತ ಆಮ್ಲಜನಕದ ಟ್ಯಾಂಕ್ )ಗಳನ್ನು ಇಟ್ಟುಕೊಂಡಿರುತ್ತವೆ.
ಇವು ಆಮ್ಲಜನಕ ಕೊರತೆಯನ್ನು ನೀಗುವ ಜೊತೆಗೆ ವಿಪರೀತ ಹಣವನ್ನು ಉಳಿಸುತ್ತವೆ. ಆದರೆ ವಾಸ್ತವದಲ್ಲಿ ಖಾಸಗಿ ಆಸ್ಪತ್ರೆಗಳು ಮಾತ್ರ ಇಂತಹ ಹಣ ಉಳಿಸುವ ಸಾಧನಗಳನ್ನು ಅಳವಡಿಸಿಕೊಂಡು ನಿಯತವಾಗಿ ಕೊರತೆಯಾಗದಂತೆ ಆಮ್ಲಜನಕ ಪೂರೈಕೆಯಾಗುವ ವ್ಯವಸ್ಥೆ ಮಾಡಿಕೊಂಡಿರುತ್ತವೆ. ಆದರೆ ಸರ್ಕಾರೀ ವ್ಯವಸ್ಥೆಗಳಲ್ಲಿ ಹಣ ದೋಚುವ ಉದ್ದೇಶದಿಂದಲೇ ಈ ಕಾಲದಲ್ಲೂ ಸಿಲಿಂಡರ್ ಗಳನ್ನೂ ಬಳಸಲಾಗುತ್ತದೆ. ಅದೂ ಸಾವಿರಾರು ರೋಗಿಗಳು ಇರುವ ಆಸ್ಪತ್ರೆಗಳಲ್ಲೂ ಸಹ. ಹೆಚ್ಚು ಶ್ರಮದಾಯಕವೂ ವೆಚ್ಚದಾಯಕವೂ ಆಗಿರುವ ಈ ಕ್ರಮವು ಅತ್ಯಂತ ಅವೈಜ್ಞಾನಿಕವೂ ಆಗಿದೆ. ಕಡಿಮೆ ರೋಗಿಗಳು ಇರುವ ಸಣ್ಣಪುಟ್ಟ ಆಸ್ಪತ್ರೆಗಳಿಗೆ ಸಿಲಿಂಡರ್ ಗಳನ್ನ ಬಳಸಬಹುದೇ ಹೊರತು ದೊಡ್ಡ ದೊಡ್ಡ ಆಸ್ಪತ್ರೆಗಳಿಗೆ ಈ ಕ್ರಮವು ತಕ್ಕುನಾದುದಲ್ಲ.

ಇನ್ನು ಸರ್ಕಾರೀ ವ್ಯವಸ್ಥೆಗಳಲ್ಲಿ ಬಿಲ್ ಪಾವತಿಯು ಸುಲಭದಲ್ಲ. ಸುಲಭದ್ದಲ್ಲ. ಬಿಲ್ ಕೊಟ್ಟ ಮೇಲೆ ಅದಕ್ಕಾಗಿ ಅಲೆಯ ಬೇಕು. ಪಾವತಿಯ ಚೆಕ್ಕು ಕೈಗೆ ಸಿಗುವವರೆವಿಗೂ ಲಂಚದ ಮೆಟ್ಟಿಲುಗಳನ್ನು ಪೂರೈಸಬೇಕು. ( ಈ ಹಿಂದೆ ಮೈಷುಗರ್ ಕಂಪನಿಗೆ ನಾನು Industrial Oxygen ಸರಬರಾಜು ಮಾಡಿ ಹಣ ಪಾವತಿಸದೇ ಇದ್ದಾಗ ಸರಬರಾಜು ನಿಲ್ಲಿಸಿದೆ. ಆಗ ಮತ್ತೆ ಸಿಲಿಂಡರ್ ಗಳ ಸರಬರಾಜು ಮುಂದುವರಿಸಬೇಕೆಂದು ಇಲ್ಲವಾದರೆ ಯಾವ ಬಿಲ್ಲು ಪಾವತಿಯಾಗುದಿಲ್ಲವೆಂದು ಬೆದರಿಸಿ ಸರಬರಾಜು ಮಾಡಿಸಿಕೊಂಡ ಘಟನೆ ಬಗ್ಗೆ ಹೇಳಿದ್ದೆ. ಕಡೆಗೆ ನಾಲ್ಕು ವರ್ಷವಾದರೂ ಇನ್ನು ಆ ಹಣವನ್ನು ಕಂಪನಿಯು ಪಾವತಿಸಿಲ್ಲ. 🙁 ಎಷ್ಟು ದೂರು , ನೋಟೀಸುಗಳನ್ನು ಕೊಟ್ಟರೂ ಪ್ರಯೋಜನವಾಗಲಿಲ್ಲ! )





ರಾಜೇಂದ್ರ , ಚಿಕ್ಕ ಹುಡುಗ ನೀವು, ಎಷ್ಟು ಆಳವಾಗಿ ಯೋಚಿಸಿ ಬರೆದಿರುವಿರಿ, ಲೇಖನ ಓದುತ್ತ ಭಾವೋದ್ವೇಗ ತಪ್ಪೊ ಸರಿಯೊ ಎಂಬ ತರ್ಕವೆಲ್ಲ ಹಾರಿಹೋಗಿ ಕಣ್ಣು ಮಂಜಾಗಿಬಿಟ್ಟವು. ಮೂರುದಿನದಿಂದಲು ನಾನಿದೆ ಸಂಕಟ ಅನುಭವಿಸುತ್ತಿರುವೆ.
ಅಕ್ಕ ಅಂದುಬಿಟ್ಟಳು, ಬಂಜೆಯೆತ್ತ ಬಲ್ಲಳು ಹಡೆಯುವ ನೋವ ಎಂದು. ಆದರೆ ಬಂಜೆ ಹೆಣ್ಣುಮಗಳೊಳಗೆ ತಾಯಿ ಇದ್ದೆ ಇರುತ್ತಾಳೆ, ಅವಳಿಗೂ ಗೊತ್ತು ಹಡೆಯುವ ನೋವಿನೊಂದಿಗಿನ ನಲಿವು. ಹಾಗೇ ಅಪ್ಪನಾಗಲೇ ಬೇಕಿಲ್ಲ ಕಂಡವರ ಮಕ್ಕಳ ಸಾವು ಇದಿರಿದ್ದಾಗ ಕಣ್ಣೀರಾಗಲು.
ಲೇಖನದಲ್ಲಿ ಸರ್ಕಾರಿ ಜಡತ್ವದ ಬಗ್ಗೆ ಹೇಳಿರುವ ಮಾತುಗಳು ಕಹಿಯಾದ ವಾಸ್ತವ. ಶಿಕ್ಷೆಯಾಗಬೇಕಾದ್ದು ಈ ಸರ್ಕಾರಿ ಯಂತ್ರಕ್ಕೆ. ಆಕ್ಸಿಜನ್ ಸಿಲಿಂಡರ್ ಸರಬರಾಜುದಾರ 64 ಲಕ್ಷ ರೂ ಬಾಕಿ ಇದ್ದರೆ ಹೇಗೆ ಬದುಕಬೇಕು, ನಾನಿದನ್ನೆ ಯೋಚಿಸುತ್ತಿರುವೆ. ನಿಜ ಸಮಸ್ಯೆ ಅಲ್ಲಿದೆ. ಅದನ್ನು ಮುಚ್ಚಲು ಪ್ರಯತ್ನಿಸುತ್ತಿದ್ದಾರೆ.
ಆಕ್ಸಿಜನ್ ಸರಬರಾಜಾಗಿಲ್ಲ ಎಂದು ಆಸ್ಪತ್ರೆ ಅಧಿಕಾರಿಗಳು ಹೇಳಿ ಕೈ ತೊಳೆದುಕೊಳ್ಳಬಹುದು, ಆದರೆ ಹಾಗೆ ಅರವತ್ತ್ನಾಲ್ಕು ಲಕ್ಷ ಬಾಕಿ ಉಳಿಯುವ ತನಕ ಆಸ್ಪತ್ರೆಯ ಮುಖ್ಯಸ್ಥನೇನು ಪಗಡೆ ಆಡುತ್ತಿದ್ದನೇ ? ಮಕ್ಕಳ ವಾರ್ಡಿನ ಡಾಕ್ಟರ್ ಗಳಿಗೆ ಮಿದುಳುಜ್ವರದ ಶಿಶುಗಳಿಗೆ ಬೇಕಾದ ಮೊದಲ ಪೂರೈಕೆ ಆಮ್ಲಜನಕ ಎಂದು ತಿಳಿದಿದ್ದೂ ಕೊನೆಗಳಿಗೆಯವರೆಗೆ ಸುಮ್ಮನಿದ್ದರೆ ? ಗೋರಖಪುರ ಮಿದುಳುಜ್ವರದ ಆವಾಸ ಆಗಿರುವುದು ಅಲ್ಲಿನ ಆರೋಗ್ಯ ಇಲಾಖೆಯ ಗಮನಕ್ಕೆ ಹತ್ತು ವರ್ಷಗಳಿಂದ ಬಂದಿಲ್ಲವೆ? ಸರ್ಕಾರದ ಆರೋಗ್ಯ ಇಲಾಖೆಯೇನು ಮಣ್ಣು ತಿನ್ನುತ್ತಿದೆಯೆ?
ಈ ತಳದ ಪ್ರಶ್ನೆಗಳಿಗೆ ಉತ್ತರ ಹುಡುಕದ ಹೊರತು ಈ ಸಮಸ್ಯೆ ಪರಿಹಾರ ಆಗದು. ಇಂದು ಯುಪಿ, ನಾಳೆ ಮಗದೊಂದು ರಾಜ್ಯ. ಎಲ್ಲೂ ಇರುವುದು ಇಂತಹುದೇ ಜಡವಾದ ಸರ್ಕಾರಿಯಂತ್ರ.
ಎಚ್ಚೆತ್ತುಕೊಳ್ಳಬೇಕಾದ್ದು ನಾವು ನೀವು ಎಂಬ ಜನ. ಸ್ವಾತಂತ್ರ್ಯ ದ ಅರ್ಥ ಅದೇ ಅಲ್ಲವೇ ?
ನೀವು ಹೇಳಿದ್ದು ಸತ್ಯವಾಗಿಯೇ ಇದೆ.
ಖಂಡಿತವಾಗಿ ನೋವನ್ನು ವರ್ಗಾಯಿಸಲು ಸಾಧ್ಯವಿಲ್ಲ. ರಾತ್ರೋರಾತ್ರಿ ಪುಟ್ಟ ಮಗುವನ್ನು ಹಿಡಿದು ಆಸ್ಪತ್ರೆಗೆ ಓಡುವ, ಉಸಿರು ಸಾಕಾಗದೆ ಮುಖವೆಲ್ಲ ಕೆಂಪಾಗಿ ಬೆವರು ಹತ್ತುವಾಗ ಅಯ್ಯೋ ನನ್ನ ಉಸಿರು ಕೊಡಲು ಸಾಧ್ಯವಾಗುತ್ತಿಲ್ಲವಲ್ಲ ಎಂಬ ಅಸಹಾಯಕತೆಯನ್ನ ಹೇಗೆ ತೋಡಿಕೊಳ್ಳುವುದು. ಒಳರೋಗಿಗಳಿರುವ ಆಸ್ಪತ್ರೆಯಲ್ಲಿ ಆಮ್ಲಜನಕದ ಕೊರತೆಯಾದರೆ ಆಗುವ ದುರಂತದ ಅರಿವಿದ್ದೂ ಅಷ್ಟೊಂದು ಮೊತ್ತ ಬಾಕಿ ಇಟ್ಟುಕೊಂಡ ಆಸ್ಪತ್ರೆಯ ಆಡಳಿತ ಮಂಡಳಿಯ ಬಂಡತನವನ್ನ ಅದರಿಂದಾಗಬಹುದಾದ ಅಪಾಯವನ್ನ ಅಲ್ಲಿಯ ವೈದ್ಯರುಗಳಾದರೂ ಆರೋಗ್ಯ ಇಲಾಖೆಯ ಗಮನಕ್ಕೆ ತರಬೇಕಿತ್ತಲ್ಲವೆ? ಅಥವಾ ಗೊತ್ತಿದ್ದೂ ಇಲಾಖೆ ಸ್ವಸ್ಥವಾಗಿತ್ತೆ?