ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಥಿಂಗ್ ಸೀರಿಯಸ್ ಸೆಂಡ್ ಫಾದರ್ ಇಮ್ಮಿಡಿಯೆಟ್ಲಿ!

ಟೆಲಿಗ್ರಾಂ …

ಅಮರ್ ದೀಪ್ ಪಿ ಎಸ್
ಬಹಳಷ್ಟು ಹಳೆಯ ಸಂವಹನ ಮಾಧ್ಯಮದಲ್ಲೊಂದು ಪ್ರಕಾರವಾಗಿದ್ದ ಸಾಧನ. ಭಾರತದಲ್ಲಿ ಅಂಚೆ ಸೌಲಭ್ಯದ ಜೊತೆಗೆ ಚಾಲ್ತಿಯಲ್ಲಿದ್ದಂಥ ಸವಲತ್ತು ಇದಾಗಿತ್ತು. ಟೆಲಿಗ್ರಾಂ ಬಳಸಲು ಕೇವಲ ತುರ್ತು ಸಂಧರ್ಭಕ್ಕೆ ಮಾತ್ರವೇ  ಅಲ್ಲದೇ ವಿವಿಧ ಸಂಧರ್ಭಗಳಲ್ಲಿ ಶುಭ ಕೋರಲು ಸಹ ಅವಕಾಶವೂ ಇದ್ದಿತು. ಅನಕ್ಷರಸ್ಥರ  ಮಧ್ಯೆ ಟೆಲಿಗ್ರಾಂ  ಎಂದರೆ ಏನೋ ಅಪಶಕುನದ ಸುದ್ದಿಯೇ ಇರಬೇಕೆಂದು ಘಾಬರಿಯಾಗುತ್ತಿದ್ದುದು ಇದ್ದೇ ಇತ್ತು. ಆದರೆ, ಕ್ಷೇಮಕ್ಕೆ ಖುಷಿಗೆ ಕೇವಲ ಪತ್ರಗಳ ಮೂಲಕ ವಿಲೇ ಮಾಡಿಕೊಳ್ಳುತ್ತಿದ್ದನ್ನು ಸಹ ನಾವು ನೋಡಿದ್ದೇವೆ, ಸೌಲಭ್ಯ ಪಡೆದಿದ್ದೇವೆ.  ಇತ್ತೀಚಿಗೆ ಬಂದ ತಾಂತ್ರಿಕ ಬಳುವಳಿಯ ಸಡಗರದಲ್ಲಿ ಕೈ ಬರಹದ ಪತ್ರವೂ ಸಹ ಕಡಿಮೆ ಆಗಿ ಮೇಲ್, ಎಸ್ ಎಂ ಎಸ್. ಫೇಸ್ ಬುಕ್, ವಾಟ್ಸ್ ಅಪ್  ಇತ್ಯಾದಿ ಉಪಯೋಗದ ಒಲವು ಹೆಚ್ಚಾಗಿದೆ.
ನಾನು ಬಳ್ಳಾರಿಯಲ್ಲಿ ಕೆಲಸಕ್ಕೆ ಸೇರಿದ ಹೊಸತರಲ್ಲಿ, ಅಂದರೆ ೧೯೯೭ರಲ್ಲಿ  ನಮ್ಮ ಗ್ರಾಹಕರ ವೇದಿಕೆ ಯಲ್ಲಿ ಒಂದು ಸ್ವಾರಸ್ಯಕರವಾದ ಪ್ರಕರಣವೊಂದು ದಾಖಲಾಗಿತ್ತು. ಸಂಕ್ಷಿಪ್ತವಾಗಿ ವಿವರ ಹೇಳಿ ಬಿಡುತ್ತೇನೆ.  ಒಂದು ಮಧ್ಯಮ ವರ್ಗದ  ಕುಟುಂಬ, ವಯಸ್ಸಾದ ತಂದೆ, ತಾಯಿ, ಮಗ ಮತ್ತು ಅವನ ಸಂಸಾರವಿರುತ್ತದೆ.  ವಯೋ ಸಹಜದ ತಂದೆ, ತಾಯಿ ಮೇಲಿನ  ಕಾಳಜಿ ಮಗನಿಗೆ.  ಆತನಿಗೊಬ್ಬ ಸಹೋದರಿ, ಮದುವೆಯಾಗಿ ಹೈದರಾಬಾದ್ನಲ್ಲಿ ನೆಲೆಸಿರುತ್ತಾರೆ.  ಅಪರೂಪಕ್ಕೆ ಹಿರಿಯರಿಗೆ ಮಗಳನ್ನು ನೋಡಬೇಕೆನ್ನಿಸಿದಾಗೆಲ್ಲ ಹೈದರಾಬಾದ್ ಗೆ ಹೋಗಿ ಬಂದು ಮಾಡುತ್ತಿರುತ್ತಾರೆ. ಹೀಗೆ ಒಮ್ಮೆ ಅಚಾನಕ್ಕಾಗಿ ತಂದೆಗೆ ಹೈದರಾಬಾದ್ ನಲ್ಲಿರುವ ಮಗಳನ್ನು ನೋಡುವ ಬಯಕೆ ಆಗಿದೆ. ತಾಯಿಗೆ ಹವಾಮಾನದ ವೈಪರಿತ್ಯದಿಂದಾಗಿ ತೆರಳಲು ಆರೋಗ್ಯ ಸಹಕರಿಸುತ್ತಿಲ್ಲ. ಮಗ ಮುತುವರ್ಜಿಯಿಂದ ತಂದೆಯೊಬ್ಬರನ್ನೇ ಕಳುಹಿಸಿ ನಂತರ ಸಹೋದರಿಯಿಂದ ಸುರಕ್ಷಿತವಾಗಿ ತಲುಪಿದ ಬಗ್ಗೆ ಸ್ಥಿರ ದೂರವಾಣಿಗೆ  ಕರೆ ಮಾಡಿ ಖಚಿತಪಡಿಸಿಕೊಂಡ  ಮೇಲೆಯೇ ನಿರುಮ್ಮಳವಾಗಿದ್ದಾರೆ.
ಇತ್ತ ತಾಯಿ, ಹೆಂಡತಿ ಮಕ್ಕಳೊಂದಿಗೆ ಒಂದಿಷ್ಟು ದಿನಗಳವರೆಗೆ ದಿನಗಳನ್ನು ದೂಡಿದ ನಂತರ ಬಹಳ ದಿನಗಳಾಗಿವೆಯೆನಿಸಿ  ತನ್ನ ಸಹೋದರಿಗೆ ಕರೆ ಮಾಡಿ ತಂದೆಯ ಆರೋಗ್ಯದ ಬಗ್ಗೆ ವಿಚಾರಿಸಿದ್ದಾರೆ. ಎಲ್ಲವೂ ಸರಿಯಿದೆ. ಆದರೆ, ಕಾಲ ಕಾಲಕ್ಕೆ ಆರೋಗ್ಯದ ತಪಾಸಣೆ ನಿಮಿತ್ತ ತಂದೆಯನ್ನು ವಾಪಸ್ಸು ಕರೆಸಿಕೊಳ್ಳಬೇಕಾದ ಅನಿವಾರ್ಯ ಬಂದ ಸಂಧರ್ಭದಲ್ಲಿ ಒಂದು ದಿನ  ಹೈದರಾಬಾದ್ ನಲ್ಲಿರುವ ಸಹೋದರಿಗೆ S.T.D. ಕರೆ ಮಾಡಿದ್ದಾರೆ. ಅದಲ್ಲದೇ ಆ ವ್ಯಕ್ತಿಯ ಮನೆಯಲ್ಲಿ ಸ್ಥಿರ ದೂರವಾಣಿ ಇದ್ದಿಲ್ಲ.  ಆದರೆ, ಸಹೋದರಿ ಮನೆಯ  ಸ್ಥಿರ ದೂರವಾಣಿ ದುರಸ್ತಿ ಇದ್ದ ಕಾರಣವಾಗಿ ಹಾಗೂ ಮೊಬೈಲ್ ಸೌಲಭ್ಯವಿನ್ನು ವಿಸ್ತರಿಸಿರದ ದಿನಗಳಾಗಿದ್ದರಿಂದ  ಅನಿವಾರ್ಯವಾಗಿ ಹೈದರಾ ಬಾದಿನ ಸಹೋದರಿ ನಿವಾಸದ  ವಿಳಾಸಕ್ಕೆ ಟೆಲಿಗ್ರಾಂ ಕಳುಹಿಸಿದ್ದಾರೆ. ಟೆಲಿಗ್ರಾಂ ಒಕ್ಕಣೆ ಹೀಗಿರುತ್ತದೆ;  “NOTHING SERIOUS SEND FATHER IMMEDIATELY”. ಅಷ್ಟೇ….
ಮಾರನೆ ದಿನದ ಸುಮಾರು ರಾತ್ರಿ ಹೊತ್ತಿಗೆ ಹೈದರಾಬಾದಿನಿಂದ ಸಹೋದರಿ ತನ್ನ ತಂದೆಯೊಂದಿಗೆ ಬಂದಿಳಿದು ಬಾಗಿಲು ತಟ್ಟಿದಾಗಲೇ ಗೊತ್ತಾಗಿದ್ದು ನಡೆದಿರುವ ಅವಘಡ ಎಂತದೆಂದು.. ತಂದೆಯ ಆರೋಗ್ಯದಲ್ಲಿ ಏರುಪೇರಾಗಿದ್ದ ರಕ್ತದೊತ್ತಡ, ಆಯಾಸ, ಮತ್ತು ದಿಗಿಲು.  ಸಹೋದರಿಗೆ ವಯಸ್ಸಾದ ಅಮ್ಮನಿಗೆ  ಏನಾಗಿದೆ ಮತ್ತು ಖಾಯಿಲೆಯ ಅಪ್ಪನಿಗೆ ಏನಾದರೂ ಆದರೆ ಎಂಬ ಸಂಧಿಗ್ಧ.. ಟೆಲಿಗ್ರಾಂ ನೀಡಿದ ವ್ಯಕ್ತಿ ಮನೆಗೆ ಬಂದ ತಂದೆ ಮತ್ತು ಸಹೋದರಿಯನ್ನು  ಸಮಾಧಾನದಿಂದ ಕೇಳಿದ್ದಾರೆ. ಆತನ ಸಹೋದರಿ ಏನೊಂದು ಮಾತಾಡದೇ ಹೈದರಾಬಾದಿನ ತನ್ನ ನಿವಾಸಕ್ಕೆ ಬಂದ ಟೆಲಿಗ್ರಾಂ ಕೈಗಿತ್ತಿದ್ದಾಳೆ..  ಟೆಲಿಗ್ರಾಂ ನೋಡಿದ ಕೂಡಲೇ ಕಳುಹಿಸಿದ ವ್ಯಕ್ತಿಗೆ ಗಾಬರಿಯಾಗಿದೆ..
ಏಕೆಂದರೆ ಟೆಲಿಗ್ರಾಂ ವಿತರಣೆ ಆಗಿದ್ದು  “MOTHER SERIOUS SEND FATHER IMMEDIATELY”.ಎಂದು. ಸಾವಕಾಶದಿಂದ ಕೇಳಿದಾಗ ಆ ವ್ಯಕ್ತಿಗೆ ತಿಳಿದದ್ದೇನೆಂದರೆ, ಟೆಲಿಗ್ರಾಂ ಕೈ ಸೇರಿದ ಗಳಿಗೆಯಿಂದ ಅವಸರದಿಂದ ವಯಸ್ಸಾದ ತಂದೆಯನ್ನು ಜೊತೆಗಿರಿಸಿಕೊಂಡು ಆ ಸಹೋದರಿ ದುಗುಡ ಹೊತ್ತು ಪ್ರಯಾಸ ಪಟ್ಟುಕೊಂಡೇ ದೂರದೂರಿಂದ ಬಂದ ಹಾಗೂ ಅನುಭವಿಸಿದ ಮಾನಸಿಕ ಆಘಾತವನ್ನು ವಿವರಿಸುತ್ತಾ ಸೇವಾ ನಿರ್ಲಕ್ಷ್ಯದಿಂದ ಉಂಟಾದಂಥ ಅವಘಡಕ್ಕೆ ಪರಿಹಾರ ಕೋರಿ ಟೆಲಿಗ್ರಾಂ ಕಳುಹಿಸಿದ ವ್ಯಕ್ತಿ  ಗ್ರಾಹಕರ ವೇದಿಕೆಗೆ ದೂರು ದಾಖಲಿಸಿದ್ದರು.
ವಿಚಾರಣೆ ವೇಳೆ ದಾಖಲೆಗಳ ಪರಿಶೀಲನೆಯಲ್ಲಿ ಕಂಡು ಬಂದಿದ್ದೆಂದರೆ, ಮಾನವ ಸಹಜ ತಪ್ಪಿ ನಿಂದ ಹಾಗೂ ಟೆಲಿಗ್ರಾಂ ಕಳುಹಿಸುವ ವೇಳೆ “ನಥಿಂಗ್ ಸೀರಿಯಸ್ ಸೆಂಡ್ ಫಾದರ್ ಇಮ್ಮಿಡಿಯೆಟ್ಲಿ ” ಬದಲು “ಮದರ್ ಸೀರಿಯಸ್ ಸೆಂಡ್ ಫಾದರ್ ಇಮ್ಮಿಡಿಯೆಟ್ಲಿ” ಎಂದು ಅಚ್ಚುಪಡಿಸಿ ಸಂದೇಶ ರವಾನೆಯಾಗಿಬಿಟ್ಟಿದೆ. ಮತ್ತದು ಮೇಲ್ನೋಟಕ್ಕೇ ಸಾಬಿತಾಗುವಂತೆ ದೂರುದಾರ ಬರೆದುಕೊಟ್ಟ    ಹಸ್ತಪ್ರತಿಯಲ್ಲಿ ಸಹ  “ನಥಿಂಗ್ ಸೀರಿಯಸ್ ಸೆಂಡ್ ಫಾದರ್ ಇಮ್ಮಿಡಿಯೆಟ್ಲಿ ” ಎಂದೇ ಇತ್ತು.  ವಿಚಾರಣೆ ನಡೆದು ಪ್ರಕರಣ ಇತ್ಯರ್ಥವೂ ಆಗಿ ಪರಿಹಾರವನ್ನು ಘೋಷಿಸಲಾಯಿತು.. ಆದರೆ, ಒಮ್ಮೊಮ್ಮೆ ಮಾನವ ಸಹಜ ತಪ್ಪುಗಳಿಂದಾಗುವ ಇಂಥ ಪ್ರಸಂಗಗಳು ಎಂಥ ಸಂಧಿಗ್ಧವನ್ನು ತಂದೊಡ್ಡುತ್ತವೆ ಅನ್ನುವುದಕ್ಕೆ ಇಂದೊಂದು ಚಿಕ್ಕ ಉದಾಹರಣೆ. ಈಗ ಟೆಲಿಗ್ರಾಂ ಯಂತ್ರದ ಉಪಯೋಗವನ್ನು ಸಹ ಸ್ಥಗಿತಗೊಳಿಸಿ ವರ್ಷದ ಮೇಲಾಗುತ್ತಾ  ಬಂದಿದೆ. ಆದರೆ, ಅದೊಂದು ಸಾಧನದಿಂದ ಅದರ ಹುಟ್ಟಿನಿಂದ ಮೊನ್ನೆ ಮೊನ್ನೆ ಅದಕ್ಕೆ  ವಿದಾಯ ಹೇಳುವವರೆಗೆ ನಾವೆಲ್ಲ ಸಾಕಷ್ಟು ಉಪಯೋಗವನ್ನು ಪಡೆದಿದ್ದರಲ್ಲಿ ಎರಡು ಮಾತಿಲ್ಲ..

‍ಲೇಖಕರು avadhi

8 February, 2014

2 Comments

  1. vihar kumar.a

    if the mistake takes place even in sms then what penalty be imposed ? and that too on whom whether on the sender? R on the Mobile? If it is on Mobile what kind of Punishment b imposed probably?

  2. Kotraswamy M

    Swaarasykara ashte alla, maahithidaayakavoo aagide. Niroopane sogasaagide Amar. Aadare, aa kshana aa kutumba anubhavisida yaathanege yaava parihaaravoo samanaagalaaradu!

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading