ನಟ್ಚತ್ತಿರಂ ನಗರ್ಗಿರದು: ಲವ್‌ ಇಸ್‌ ನಾಟ್‌ ಓನ್ಲಿ ಪೊಲಿಟಿಕಲ್‌ ಬಟ್‌ ಆಲ್ಸೊ ಪ್ಲೂರಲ್…

ಮ ಶ್ರಿ  ಮುರಳಿ ಕೃಷ್ಣ

‌ʼಲವ್‌ ಇಸ್‌ ಪೊಲಿಟಿಕಲ್ ʼಎಂಬುದು ಪ ರಂಜೀತ್ ನಿರ್ದೇಶಿಸಿರುವ ʼನಟ್ಚತ್ತಿರಂ ನಗರ್ಗಿರದುʼ ಎಂಬ ಇತ್ತೀಚಿನ ತಮಿಳು ಚಲನಚಿತ್ರದ ಒಂದು ಪೋಸ್ಟರ್‌ನಲ್ಲಿ ಕಂಡಬರುವ ಒಂದು ಟ್ಯಾಗ್ಲೈನ್.‌ ಇದರಂತೆ ರಾಜಕೀಯದ ಸ್ಪಂದನ ಈ ಚಲನಚಿತ್ರದಲ್ಲಿ ಇದ್ದೇ ಇರುತ್ತದೆ ಎಂಬ ಪೂರ್ವಾಲೋಚನೆಯೊಂದಿಗೆ ಈ ಚಲನಚಿತ್ರವನ್ನು ವೀಕ್ಷಿಸಲು ಮುಂದಾದೆ. ಅಲ್ಲದೆ ಪ ರಂಜೀತ್‌ ಅವರ ಚಲನಚಿತ್ರಗಳಲ್ಲಿ ರಾಜಕೀಯ ಎಂಬ ಅಂಶ ಒಂದಲ್ಲ ಒಂದು ರೀತಿಯಲ್ಲಿ ಅಭಿವ್ಯಕ್ತಿಗೊಳ್ಳುತ್ತಲೇ ಬರುತ್ತಿರುವುದು ಕೂಡ ನನ್ನ ಪೂರ್ವಾಲೋಚನೆಗೆ ಒಂದು ಕಾರಣವಾಗಿತ್ತು.

ಪ್ರಥಮ ದೃಶ್ಯದಲ್ಲೇ ಇನಿಯನ್(ನಟ ಕಾಲಿದಾಸ್‌ ಜಯರಾಮನ್)‌ ಮತ್ತು ತಮಿಳ್(‌ ಆಕೆ ತನ್ನನ್ನು ರೆನೆ ಎಂದು ಕರೆದುಕೊಳ್ಳುತ್ತಿರುತ್ತಾಳೆ.  ಇತರರು ಆಕೆಯನ್ನು ಇದೇ ಹೆಸರಿನಿಂದ ಸಂಬೋಧಿಸುತ್ತಿರುತ್ತಾರೆ.  ಬರಹಗಾರ ಗ್ಯಾಬ್ರಿಯಲ್‌ ಗಾರ್ಸಿಯಾ ಮಾರ್ಕ್ವೆಝ್‌ನ ʼಒನ್‌ ಹಂಡ್ರೆಡ್‌ ಇಯರ್ಸ್‌ ಆಫ್‌ ಸಾಲಿಟ್ಯೂಡ್‌ʼ ಎಂಬ ಕಾದಂಬರಿಯ ಪ್ರಧಾನ ಸ್ತ್ರೀಪಾತ್ರದ ಹೆಸರನ್ನೇ ಹೃಸ್ವಗೊಳಿಸಿ ಆಕೆ ಬಳಸುತ್ತಿರುತ್ತಾಳೆ) ಶಯ್ಯೆಯಲ್ಲಿರುತ್ತಾರೆ.  ರೆನೆ ಪಾತ್ರವನ್ನು ನಟಿ ದುಶಾರಾ ವಿಜಯನ್‌ ನಿರ್ವಹಿಸಿದ್ದಾರೆ. ಪ್ರಥಮವಾಗಿ ಹಿನ್ನೆಲೆಯಲ್ಲಿ ಇನಿಯನ್‌ ತುಂಬ ಇಷ್ಟಪಡುವ ಅಮೆರಿಕಾದ ಕಪ್ಪು ಹಾಡುಗಾರ್ತಿ ನಿನಾ ಸಿಮೋನ್ ಳ ಒಂದು ಹಾಡು ಕೇಳಿ ಬರುತ್ತದೆ.  ರೆನೆಗೆ ಇಳಯರಾಜರ ಹಾಡುಗಳೆಂದರೇ ಪಂಚಪ್ರಾಣ.  ಇನಿಯನ್‌ಗೆ ಜಾತಿಯ ಕಾರಣದಿಂದ ಇಳಯರಾಜ ಇಷ್ಟವಾಗುವುದಿಲ್ಲ ಎಂಬ ರೆನೆಳ ಆಪಾದನೆ ಅವರೀರ್ವರ ನಡುವೆ ಮುಂಚೆಯೇ ಇದ್ದ ಜಟಾಪಟಿಯನ್ನು ತಾರಕಕ್ಕೆ ಕೊಂಡೈದು, ಅವರು ಬೇರೆಯಾಗುತ್ತಾರೆ.

ಇನಿಯನ್‌ ಮತ್ತು ರೆನೆ ಪಾಂಡಿಚೇರಿಯಲ್ಲಿ ಒಂದು ನಾಟಕ ತಂಡದಲ್ಲಿ ಕೆಲಸವನ್ನು ಮಾಡುತ್ತಿರುತ್ತಾರೆ.  ಅದರಲ್ಲಿ ಎಲ್ಲ ತೆರನಾದ ಮಂದಿಯೂ ಇರುತ್ತಾರೆ. ಇಂತಿಪ್ಪ ಈ ತಂಡಕ್ಕೆ ಮೇಲು ಜಾತಿಯ, ಸಂಪ್ರದಾಯವಾದಿ ದೃಷ್ಟಿಕೋನದ ಯುವಕ ಅರ್ಜುನ್‌(ನಟ ಕಲೈಅರಸನ್) ಸೇರ್ಪಡೆಯಾಗುತ್ತಾನೆ.‌  ಅಲ್ಲಿರುವ ಒಂದು ಮುಕ್ತ ವಾತವರಣ ಆತನ ನಂಬಿಕೆಗಳ ಮೇಲೆ ಪ್ರಹಾರಗಳನ್ನು ನೀಡುತ್ತದೆ.  ಹೀಗಾಗಿ ಆತ ಕಲ್ಚುರಲ್‌ ಶಾಕ್‌ ಗೆ ಒಳಗಾಗುತ್ತಾನೆ. ಇದರಿಂದ ಪರಿಣಮಿಸುವ ಆತನ ನಡವಳಿಕೆ ತಂಡದ ಇತರ ಸದಸ್ಯರಲ್ಲಿ ಕೋಪದ, ಇರುಸುಮುರುಸಿನ ಭಾವಕ್ಕೆ ಎಡೆಮಾಡಿಕೊಡುತ್ತದೆ.

ಒಮ್ಮೆ ಒಂದು ಪಾರ್ಟಿಯಲ್ಲಿ ಅರ್ಜುನ್‌ ರೆನೆಳೊಡನೆ ಅಸಭ್ಯವಾಗಿ ನಡೆದುಕೊಳ್ಳುತ್ತಾನೆ.  ಇದಕ್ಕಾಗಿ ನಾಟಕ ತಂಡದ ನಿರ್ದೇಶಕ ಸುಬೀರ್‌ (ನಟ ರೇಜಿನ್‌ ರೋಸ್)‌ ಆತನನ್ನು ತಂಡದಿಂದ ಹೊರಹೋಗಲು ತಿಳಿಸುತ್ತಾನೆ.  ಆದರೆ ರೆನೆ ಬೇಡವೆನ್ನುತ್ತಾಳೆ.  ಅರ್ಜುನ ತಪ್ಪು ಮಾಡಿದ್ದಾನೆ.  ಆದರೆ ತಿದ್ದಿಕೊಳ್ಳಲು ಅವಕಾಶವಿರಬೇಕು ಎಂದು ಹೇಳುತ್ತಾಳೆ.  ಆಗ ʼಪೊಲಿಟಿಕಲ್‌ ಕರೆಕ್ಟ್ನೆಸ್‌ ʼ ಬಗೆಗೆ ಚರ್ಚೆಯಾಗುತ್ತದೆ.  ರೆನೆ-“ ಪೊಲಿಟಿಕಲ್‌ ಕರೆಕ್ಟ್ನೆಸ್‌ ಒಂದು ದಿನದಲ್ಲಿ ಬರುವುದಿಲ್ಲ “ ಎಂದು ಹೇಳುತ್ತಾಳೆ! ಅರ್ಜುನ್‌ ಮನಪರಿವರ್ತನೆಗೆ ಒಳಗಾಗುತ್ತಾನೆ.

ನಂತರ ಪ್ರಣಯದ ಬಗೆಗೆ ಒಂದು ನಾಟಕವನ್ನು ಮಾಡಲು ತಂಡದ ನಿರ್ದೇಶಕರು ಮುಂದಾಗುತ್ತಾರೆ.  ತಾಲೀಮುಗಳು ಜರಗುತ್ತವೆ.  ಯಾವುದೇ ಜಾತಿಯನ್ನು ನೇರವಾಗಿ ಪ್ರಸ್ತಾಪಿಸುವುದು ಬೇಡ ಎಂದು ನಿರ್ಧರಿಸಿ ನಾಟಕಕ್ಕೆʼ ಕಾಟು ಪೂನೈ –ನಾಟು ಪೂನೈʼ( ʼಕಾಡು ಬೆಕ್ಕು-ನಾಡಬೆಕ್ಕುʼ ) ಎಂಬ ಶೀರ್ಷಿಕೆಯನ್ನು ಇಡಲಾಗುತ್ತದೆ!       ಪ್ರದರ್ಶನದ ದಿನದಂದು ಒಬ್ಬ ವ್ಯಕ್ತಿ (ಈತನನ್ನು ʼಉಗ್ರ ಬೆಕ್ಕುʼ ಎಂದು ಕರೆಯಲಾಗಿದೆ) ದಾಂಧಲೆ ಮಾಡಿ, ತಂಡದವರನ್ನು ಹೊಡೆದು-ಬಡಿದು, ನಾಟಕವನ್ನು ಮೊಟಕುಗೊಳಿಸುತ್ತಾನೆ.  ಅಂತ್ಯದಲ್ಲಿ ನಾಟಕ ತಂಡದ ಪ್ರತಿಕ್ರಿಯೆ ಏನಾಗಿರುತ್ತದೆ ಎಂಬುದನ್ನು ಚಲನಚಿತ್ರವನ್ನು ವೀಕ್ಷಿಸಿ ತಿಳಿದುಕೊಳ್ಳುವುದು ಸೂಕ್ತ.

ಪರಿಶಿಷ್ಟ ಜಾತಿಗೆ ಸೇರಿದವಳಾದ ರೆನೆಯ ಕ್ಯಾರಕ್ಟರ್‌ ಆರ್ಚ್‌ ಕುತೂಹಲಕಾರಿಯಾಗಿದೆ. ಒಂದು ಸಂದರ್ಭದಲ್ಲಿ ಆಕೆ ತಾನೊಂದು ಒಡೆದ ಕನ್ನಡಿ ಎಂದು ತನ್ನನ್ನು ಬಣ್ಣಿಸಿಕೊಳ್ಳುತ್ತಾಳೆ.  ಆಕೆಯ ಹೆಗಲ ಮೇಲೆ ತಾನು ಜಾತಿಯ ಕಾರಣದಿಂದ ಎದುರಿಸಿದ ನಾನಾ ಕಷ್ಟ-ಕೋಟಲೆಗಳ ಭಾರ ಇರುತ್ತದೆ ; ಸ್ಮೃತಿಗಳೂ ಕೂಡ. ಆಕೆ ಅವುಗಳನ್ನೆಲ್ಲ ಮೆಟ್ಟಿ ನಿಂತದ್ದರಿಂದ ಧಾಡಸಿತನದಿಂದ ವರ್ತಿಸುವಳೇ ಅಥವಾ ಅದು ಬೇಕಂತಲೇ ಮೈಗೂಡಿಸಿಗೊಂಡಿರುವ ಪ್ರವರ್ತಿಯೇ? ಆಕೆ ಬಿಡುಗಡೆಯ ಸಂಕೇತವೇ? ರೋಮ್ಯಾಂಟಿಕ್‌ ಸಂಬಂಧದಲ್ಲಿರುವ ಸಾಂಪ್ರದಾಯಿಕತೆಯನ್ನು ಮುರಿಯುವ ಸ್ವಚ್ಛಂದ ಪ್ರವೃತ್ತಿಯವಳೇ? ಆಕೆ ನೈಜವಾಗಿ ಗಟ್ಟಿಯಾಗಿರುವಳೇ ಅಥವಾ ಹಾಗೆಂದು ತೋರ್ಪಡಿಸುತ್ತಿರುವಳಾ? ಎಂಬಿತ್ಯಾದಿ ಪ್ರಶ್ನೆಗಳು ವೀಕ್ಷಕರ ಮನಸ್ಸಿನಲ್ಲಿ ಮೂಡಿದರೇ, ಅವು ಸಹಜ. ಎಲ್ಲ ಬಗೆಯ ಸಂದರ್ಭಗಳಲ್ಲೂ  ಆಕೆಯ ನಗು ಕೂಡ ಅನೇಕಾರ್ಥಗಳನ್ನು ಸ್ಪುರಿಸುತ್ತದೆ !

ತಮಿಳುನಾಡಿನಲ್ಲಿ ʼನಾಡಗ ಕಾದಲ್‌ ʼ(ನಾಟಕದ ಪ್ರೇಮ) ಎಂಬುದು ದಲಿತರು ಅಂತರ್ಜಾತಿ ವಿವಾಹ ಮಾಡಿಕೊಂಡಾಗ ಅವರನ್ನು ದೂಷಿಸುವ  ಒಂದು ಬಗೆ.  ಇದಕ್ಕೆ ಪ್ರತಿರೋಧಿಸುವಂತೆ ಚಲನಚಿತ್ರದಲ್ಲಿ ಪ್ರೇಮಕ್ಕೆ ಸಂಬಂಧಿಸಿದ, ವಿಶಾಲ ದೃಷ್ಟಿಕೋನದ, ಮರ್ಯಾದೆ ಹತ್ಯೆಯ ವಸ್ತುವುಳ್ಳ ಒಂದು ನಾಟಕ ಜರಗುವಂತೆ ಕಥೆಯಲ್ಲಿ ಹೆಣೆಯಲಾಗಿದೆ.  ಅರ್ಜುನ್‌ ತನ್ನ ಅಜ್ಜಿ ಮರಣಶಯ್ಯೆಯಲ್ಲಿದ್ದಾಳೆ ಎಂದು ತಿಳಿದು ಮನೆಗೆ ದೌಡಾಯಿಸುತ್ತಾನೆ.  ಆಗ ತನ್ನ ತಾಯಿಯ ಬಳಿ  ತಾನು ರೆನೆಯಲ್ಲಿ ಅನುರಕ್ತನಾಗಿದ್ದೇನೆ ಎಂದು ತಿಳಿಸುತ್ತಾನೆ. ಇದನ್ನು ಅರಿತ ಅರ್ಜುನನ ಅಕ್ಕ  ರೆನೆಯದ್ದುʼ ನಾಡಗ ಕಾದಲ್ ʼಎಂದು ಮೂದಲಿಸುತ್ತಾಳೆ.

ಡೈಲಾಗ್‌ಗಳು ಈ ಚಲನಚಿತ್ರಕ್ಕೆ ವಿಶೇಷ ಪುಷ್ಟಿಯನ್ನು ನೀಡುತ್ತವೆ.  ಚಲನಚಿತ್ರದಿಂದ ಚಲನಚಿತ್ರಕ್ಕೆ ಪ ರಂಜೀತರ ಸಿನಿಮಾ ಕ್ರಾಫ್ಟ್ ನ ಮೇಲಿನ ಹಿಡಿತ ಪ್ರಬಲಗೊಳ್ಳುತ್ತಿದೆ.  ಅನೇಕ ದೃಶ್ಯಗಳಲ್ಲಿ  ಕಲಾತ್ಮಕತೆ ಅಭಿವ್ಯಕ್ತಿಗೊಂಡಿದೆ.  ವರ್ಣವಿನ್ಯಾಸದ ಬಳಕೆ ಗಮನಿಸುವಂತಿದೆ.  ನನಗೆ ನೆನಪಿರುವಂತೆ ಒಂದು ಶಾಟ್‌ನಲ್ಲಿ ಆಸ್ಟ್ರೀಯಾದ ಪ್ರಸಿದ್ಧ ವರ್ಣಚಿತ್ರಕಾರರಾಗಿದ್ದ ಗುಸ್ತಾವ್‌ ಕ್ಲಿಮ್ಟ್‌ ನ ಪೈಂಟಿಂಗ್‌ನ ಒಂದು ಪ್ರತಿಕೃತಿಯನ್ನು ತೋರಿಸಲಾಗಿದೆ.  ರೆನೆ ತಾನು ಮುಂದಾಗಿ, ಇನಿಯನ್‌ನ ಕೈಹಿಡಿದುಕೊಂಡು ಮೆಟ್ಟಲುಗಳನ್ನು ಏರುವಂತೆ ಮಾಡುತ್ತಾಳೆ. ಆಗ ಪ್ರಭೆಯಿಂದ ಕೂಡಿರುವ ಬೆಳಕಿನ ಕಿರಣಗಳು ಬಾಗಿಲಿನಿಂದ ಹಾದು ಬಂದು ಅವರಿಬ್ಬರ ಮೈ ಸೋಕುತ್ತವೆ. ಇದೊಂದು ಶಕ್ತಿಯುತ ವಿಶ್ಯುವಲ್‌ ಮೆಟಫರಾಗಿ ಮೂಡಿಬಂದಿದೆ. ಮಿಯಾಂವ್‌ ಎಂದು ಕೂಗುವ ಬೆಕ್ಕನ್ನು ಸಹ ಮೋಟಿಫ್‌ನಂತೆ ಬಳಸಲಾಗಿದೆ.   ಒಂದು ಶಾಟ್‌ ನಲ್ಲಿ ಬುದ್ಧನ ಬಿಂಬವನ್ನು ತೋರಿಸಲಾಗಿದೆ.

ಈ ಚಲನಚಿತ್ರದಲ್ಲಿ ಶೋಷಕರನ್ನು ಹಿಂಸೆ ಅಥವಾ ಇನ್ಯಾವುದೇ ಋಣಾತ್ಮಕ ವಿಧಾನಗಳ ಮೂಲಕ ಹತ್ತಿಕ್ಕಬೇಕಿಲ್ಲ, ಸಂಯಮದಿಂದಲೇ ಅವರ ತಪ್ಪನ್ನು ಮನಗಾಣಿಸಿ, ಮನಸ್ಸುಗಳನ್ನು ಪರಿವರ್ತಿಸಬೇಕು ಎಂಬ ಆಶಯ ಢಾಳಾಗಿ ಕಂಡು ಬರುತ್ತದೆ.  ಅರ್ಜುನನ ಮನಃಪರಿವರ್ತನೆ ತುಂಬ ಬೇಗನೆ ಸಂಭವಿಸಿತು ಮತ್ತು LGBTQ+ ಪಾತ್ರಗಳನ್ನು ಇನ್ನಷ್ಟು ಆಳಗೊಳಿಸಬಹುದಿತ್ತು ಎಂದೆನಿಸಿತು.  ಆದರೆ ಈ ಚಲನಚಿತ್ರದ ಅವಧಿ ಎರಡು ಗಂಟೆ ಎಪ್ಪತ್ತು ನಿಮಿಷಗಳು.  ಆದುದರಿಂದ ನಿರ್ದೇಶಕರು ಮೇಲಿನ ಅಂಶಗಳನ್ನು ಲಂಬಿಸಲಿಲ್ಲವೇನೋ? ವೈಯಕ್ತಿಕ ಸ್ತರದಿಂದ ಸಾಮುದಾಯಿಕ ಮಟ್ಟದ ಜಿಗಿತವಿರುವುದು ಈ ಚಲನಚಿತ್ರದ ಪ್ಲಸ್‌ ಪಾಯಿಂಟ್.

ನಿರ್ದೇಶಕರು ಮೂರು ಅಂಕಗಳ ಚಿತ್ರಕಥಾ ವಿಧಾನವನ್ನು ಮುರಿದಿದ್ದಾರೆ.  ಚಲನಚಿತ್ರ ಮುಗಿಯುವ ಇಪ್ಪತ್ತು ನಿಮಿಷಗಳ ಮುನ್ನ ನಾಟಕವನ್ನು ಅಡ್ಡಪಡ್ಡಿಸುವ ಹಾಗೂ ಪಾತ್ರಧಾರಿಗಳನ್ನು ಥಳಿಸುವ ಒಂದು ಪಾತ್ರವನ್ನು ಪರಿಚಯಿಸಿದ್ದಾರೆ.  ತೆನ್ಮಾರ ಸಂಗೀತ ಗಮನಾರ್ಹಾವಾಗಿದೆ.  ಹಾಗೆಯೇ ಸಿನಿಮೊಟೋಗ್ರಫಿ ಮತ್ತು ಸಂಕಲನ.

ಒಬ್ಬನ ಟ್ರಾನ್ಸ್‌ ವುಮನ್‌ ಮೇಲಿನ ಅನುರಾಗ, ಲೆಸ್ಬಿಯನ್‌ ಮತ್ತು ಗೇ ಜೋಡಿಗಳು, ಫ್ರೆಂಚ್‌ ಯುವತಿಯ ಪ್ರೇಮಕ್ಕಾಗಿ ಹಪಹಪಿಸುವ ಒಬ್ಬ ಮಧ್ಯವಯಸ್ಕ, ಅರೇಂಜ್ಡ್‌ ಮ್ಯಾರೇಜ್‌ ನಲ್ಲಿರುವ ಒಬ್ಬ ಪುರುಷ, ಇನಿಯನ್‌, ರೆನೆ ಮತ್ತು ಅರ್ಜುನರ ಲವ್‌ ಟ್ರಯಾಂಗಲ್ ಇತ್ಯಾದಿ ನಿರ್ಬಂಧವಿರದ ಮಾನವ ಸಂಬಂಧಗಳ ಜೀವಂತಿಕೆಯು ನಾಟಕ  ತಂಡದ ಸದಸ್ಯರ ನಡುವೆ ಲಾಸ್ಯವಾಡುತ್ತಿರುವುದನ್ನು ಸೂಚಿಸುತ್ತವೆ.  ಆದುದರಿಂದ ಈ ಚಲನಚಿತ್ರದಲ್ಲಿ ಲವ್‌ ಎನ್ನುವುದು ಪೊಲಿಟಿಕಲ್‌ ಮಾತ್ರ ಅಲ್ಲ, ಅದು ಪ್ಲೂರಲ್‌ ಕೂಡ ಎಂಬ ವಿಚಾರ ಗಮನೀಯ ರೀತಿಯಲ್ಲಿ ಬಿಂಬಿತಗೊಂಡಿದೆ ಎಂದೆನಿಸಿತು.

‍ಲೇಖಕರು Admin

September 10, 2022

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. ಮ ಶ್ರೀ ಮುರಳಿ ಕೃಷ್ಣ

    ಮೇಲಿನ ನನ್ನ ಬರಹವನ್ನು ಪ್ರಕಟಿಸಿದ್ದಕ್ಕೆ ‘ಅವಧಿ’ಗೆ ನನ್ನಿ..

    – ಮ ಶ್ರೀ ಮುರಳಿ ಕೃಷ್ಣ –

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: