ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಟರಾಜ ಹುಳಿಯಾರ್: ವಿಮರ್ಶೆಯಿಲ್ಲದ ಮೀಡಿಯಾ ಸಂಸ್ಕೃತಿ

ನವ ಸಂಸ್ಕೃತಿಗಳ ಠೇಂಕಾರ: ಏನು ಬೇಕಾದರೂ ಆಗಬಹುದು

-ಡಾ. ನಟರಾಜ್ ಹುಳಿಯಾರ್

ಕೃಪೆ: ವಾರ್ತಾ ಭಾರತಿ

ರಾಜಕೀಯ ಪಕ್ಷದ ಅಧ್ಯಕ್ಷನೊಬ್ಬ ತನ್ನ ಪಕ್ಷ ಅಧಿಕಾರ ಹಿಡಿಯಲು ಇತರ ಪಕ್ಷಗಳ ಶಾಸಕರ ಖರೀದಿ ನಡೆಸಿರುವ ಬಗ್ಗೆ ಪ್ರಶ್ನೆ ಕೇಳಿದ ಪತ್ರಕರ್ತರಿಗೆ ಹೇಳುತ್ತಾನೆ: ‘ರಾಜಕೀಯದಲ್ಲಿ ಏನು ಬೇಕಾದರೂ ಆಗಬಹುದು’. ಇದನ್ನು ಕೇಳಿಸಿ ಕೊಂಡ ಜನರಿಗೆ ಅಸಹ್ಯವಾಗ ಬಹುದು; ಅಥವಾ ಈ ಭಾಷೆ ತಮಗೆ ಸಂಬಂಧಪಟ್ಟಿದ್ದಲ್ಲ,. ರಾಜ ಕೀಯಕ್ಕೆ ಮಾತ್ರ ಸಂಬಂಧಪಟ್ಟದ್ದು ಎಂದು ಜನ ಸುಮ್ಮನಾಗಬಹುದು. ಆದರೆ, ಒಂದು ರೀತಿಯ ಅಫೀಮಿನಂತೆ ಜನ ತಿನ್ನುತ್ತಿರುವ ಅಧಿಕಾರ ರಾಜಕಾರಣದ ಠೇಂಕಾರ ಸಮಾಜದ ಇನ್ನಿತರ ವಲಯಗಳಲ್ಲೂ ಇದೇ ಬಗೆಯ ಭಂಡ ಸಂಸ್ಕೃತಿಯನ್ನು ಹುಟ್ಟು ಹಾಕುತ್ತಿರುತ್ತದೆ ಎಂಬು ದನ್ನು ನಾವು ಮರೆಯಬಾರದು. ರಾಜಕೀಯದಲ್ಲಿ ಏನು ಬೇಕಾ ದರೂ ಆಗಬಹುದಾದರೆ, ಧರ್ಮ ದಲ್ಲೂ ಏನು ಬೇಕಾದರೂ ಆಗ ಬಹುದು ಎಂದು ಧಾರ್ಮಿಕ ಮುಖಂಡರು ಹೇಳತೊಡಗುತ್ತಾರೆ. ತಮ್ಮ ಜಾತಿಯ ಮುಖ್ಯಮಂತ್ರಿಯ ಭ್ರಷ್ಟಾಚಾರವನ್ನು ನಾಚಿಕೆಯಿಲ್ಲದೆ ಸಮರ್ಥಿಸಿಕೊಳ್ಳುತ್ತಾರೆ. ತಾವು ಬೆಂಬಲಿಸುವ ರಾಜಕೀಯ ಪಕ್ಷ ತಾವು ಪ್ರತಿನಿಧಿಸುವ ಧರ್ಮ ಹೇಳಿಕೊಟ್ಟಿರಬಹುದಾದ ನೈತಿಕತೆಗಿಂತ ದೊಡ್ಡದೆಂದು ತಿಳಿದಿರುವ ಪೇಜಾವರ ವಿಶ್ವೇಶ್ವರತೀರ್ಥರು, ‘ಪಾಪ, ವಿಚಾರಣೆ ಮುಗಿಯುವವರೆಗೆ ಯಡಿಯೂರಪ್ಪನವರು ಅಧಿಕಾರ ವಿಲ್ಲದೆ ಕೂತಿರೋಕಾಗುತ್ತಾ?’ ಎಂದು ಹೊಟ್ಟೆಗಿಲ್ಲದೆ ಸಾಯುತ್ತಿ ರುವ ವ್ಯಕ್ತಿಯ ಬಗ್ಗೆ ತೋರು ವಷ್ಟೇ ಕನಿಕರದಿಂದ ಮಾತಾ ಡುತ್ತಾರೆ.

ರಾಜಕೀಯ ಸಂಸ್ಕೃತಿ ಹಾಗೂ ಧಾರ್ಮಿಕ ಸಂಸ್ಕೃತಿಯಲ್ಲಿ ಏನು ಬೇಕಾದರೂ ಆಗ ಬಹುದು ಎಂದ ಮೇಲೆ ಶಿಕ್ಷಣದಲ್ಲಿ ಕೂಡಾ ‘ಏನು ಬೇಕಾದರೂ ಆಗಬಹುದು’ ಎಂಬ ದುಷ್ಟತನಕ್ಕೆ ನ್ಯಾಯ ಬದ್ಧತೆ ಸಿಕ್ಕಂತಾಗುತ್ತದೆ. ಹೊರ ರಾಜ್ಯದಿಂದ ಬರುವ ಹುಡುಗರಿಗೆ ತನ್ನ ಕಾಲೇಜಿನಲ್ಲಿ ಸೀಟು, ಹಾಸ್ಟೆಲು ಎಲ್ಲವೂ ಪ್ಯಾಕೇಜಿನ ರೂಪದಲ್ಲಿ ಸಿಗುತ್ತದೆ ಎಂದು ಶಿಕ್ಷಣ ಸಂಸ್ಥೆಯ ಮಾಲಕ ಜಾಹೀರಾತು ಕೊಡುತ್ತಾನೆ. ಈ ಪ್ಯಾಕೇಜಿನಲ್ಲಿ ವಿದ್ಯಾರ್ಥಿಯ ಮಾರ್ಕ್ಸ್ಕಾರ್ಡ್ ತಿದ್ದಿ ಪಾಸ್ ಮಾಡಿಸುವುದೂ ಸೇರಿದೆ. ಶಿಕ್ಷಣದಲ್ಲಿ ‘ಏನು ಬೇಕಾದರೂ ಆಗಬಹುದು’ ಎಂದು ಅವನೂ ಇತರರಂತೆಯೇ ಹೇಳತೊಡಗುತ್ತಾನೆ.

ರೇಖೆ: ಸತೀಶ್ ಆಚಾರ್ಯ

ಈ ಥರದ ಬೆಳವಣಿಗೆಗಳ ಬಗೆಗೆ ಕಸಿವಿಸಿಗೊಳ್ಳು ತ್ತಲೇ, ಹೇಗಾದರೂ ಮಾಡಿ ಇದನ್ನು ರಿಪೇರಿ ಮಾಡಬೇಕು; ಕೊನೆಯ ಪಕ್ಷ ಜನರನ್ನು ಎಚ್ಚರಿಸುವ ಕೆಲಸವನ್ನಾದರೂ ಮಾಡಬೇಕು ಎಂದು ಹೊರಟ ಟೆಲಿವಿಷನ್ ಚಾನಲ್ ಒಂದರ ವರದಿಗಾರನಿಗೆ ಚಾನಲ್ ಪ್ರೋಗಾಂ್ರ ಪ್ರೊಡ್ಯೂಸರ್ ಯಾವುದೋ ವಿದ್ಯಮಾನವನ್ನು ಉತ್ಪ್ರೇಕ್ಷಿಸಿ ವರದಿ ಮಾಡಲು ಸೂಚಿಸುತ್ತಾನೆ. ಹಾಗೆ ಮಾಡಲು ಹಿಂಜರಿಯುವ ಈ ಸೂಕ್ಷ್ಮ ತರುಣನಿಗೆ ಪ್ರೊಡ್ಯೂಸರ್ ಕೊಂಚ ಅಸಹಾ ಯಕ ದನಿಯಲ್ಲಿ ಹೇಳುತ್ತಾನೆ: ‘‘ಈ ಚಾನಲ್ಗಳ ಕಾಂಪಿಟೇಷನ್ನಲ್ಲಿ ಉಳಿಯೋಕೆ ಇದನ್ನೆಲ್ಲ ಅನಿ ವಾರ್ಯವಾಗಿ ಮಾಡಬೇಕಾಗುತ್ತದೆ’’. ಆದ್ದರಿಂದಲೇ ಈ ಪ್ರೊಡ್ಯೂಸರ್, ಹೊಟ್ಟೆಪಾಡಿಗೆ ವೇಶ್ಯಾವಾಟಿಕೆ ಮಾಡುವ ಅಸಹಾಯಕ ಹೆಂಗಸರ ಚಿತ್ರಗಳನ್ನು ಪದೇ ಪದೇ ತೋರಿಸುವುದು ಅನಿವಾರ್ಯ ಎಂದೂ, ಅಗತ್ಯ ಬಿದ್ದರೆ ಯಾವ ಸ್ಟೋರಿಯನ್ನಾಗಲೀ, ಯಾವ ವಿಶ್ಲೇಷಣೆಯನ್ನಾಗಲೀ ಸೃಷ್ಟಿಸಬೇಕಾಗುತ್ತದೆ ಎಂದೂ ತನ್ನನ್ನೇ ತಾನು ನಂಬಿಸಿಕೊಂಡಿದ್ದಾನೆ; ಗಳಿಗೆಗಳಿಗೆಗೂ ಸೆನ್ಸೇಶನ್ ಬಯಸುವ ಮಾಧ್ಯಮದಲ್ಲಿ ಸುಳ್ಳು, ಮೂಢನಂಬಿಕೆ, ಅಪಪ್ರಚಾರ ಏನನ್ನು ಬೇಕಾದರೂ ಸೃಷ್ಟಿ ಮಾಡಿ ತೋರಿಸುತ್ತಾನೆ. ತಮ್ಮ ಚಾನೆಲ್ನಲ್ಲಿ ಪ್ರಸಾರವಾಗುವ ಜಾಹೀರಾತಿನಲ್ಲಿರುವ ಅರೆ ಸುಳ್ಳು ಮತ್ತು ಉತ್ಪ್ರೇಕ್ಷೆ ಸುದ್ದಿಯಲ್ಲಿ ಹಾಗೂ ಸುದ್ದಿ ವಿಶ್ಲೇ ಷಣೆಯಲ್ಲೂ ಇರುವುದನ್ನು ಗಮನಿಸುವ ವರದಿ ಗಾರನಿಗೆ, ಹೀಗೆ ಭಾಷೆಯಲ್ಲಿ ಏನು ಬೇಕಾದರೂ ಮಾಡುವುದು ಅನೈತಿಕವಲ್ಲವೇ ಎಂಬ ಪ್ರಶ್ನೆ ಎದುರಾಗುತ್ತದೆ. ಅಲ್ಲೇ ಜಾಹೀರಾತು ಸೆಕ್ಷನ್ನಿನಲ್ಲಿ ಕೆಲಸ ಮಾಡುವ ಹುಡುಗಿ ಇವನ ಸಂದಿಗ್ಧ ಕಂಡು ಹೇಳುತ್ತಾಳೆ: ‘ಅಯ್ಯೋ ಅದರಲ್ಲೇನಿದೆ, ಯಾರಿಗೆ ಏನು ಬೇಕೋ ಅದನ್ನು ಬರೆದರಾ ಯಿತು.’ ಹೊಸ ತಲೆಮಾರಿನ ಆ ಚುರುಕು ಹುಡುಗಿಗೆ, ತಾನು ಬಳಸುವ ಭಾಷೆಗೂ ತನ್ನ ಆಳದ ನಂಬಿಕೆಗೂ ಸಂಬಂಧವಿದೆ ಎಂಬ ಅರಿವೂ ಇಲ್ಲ; ನಂಬಿಕೆಯೂ ಇಲ್ಲ.

ಇನ್ನು ಇದೇ ಚಾನೆಲ್ನಲ್ಲಿ ಎರಗುವ ಜ್ಯೋತಿಷಿಗೆ ಬಾಯಿಗೆ ಬಂದ ಉತ್ತರ ಹೇಳಲು, ಸುಳ್ಳು ಹೇಳಿ ಅಮಾಯಕರನ್ನು ಹೆದರಿಸಲು ಯಾವ ನಾಚಿಕೆಯೂ ಆಗುವು ದಿಲ್ಲ. ಈ ಕಾರ್ಯಕ್ರಮ ಮುಗಿದ ತಕ್ಷಣ ಪ್ರಸಾರವಾಗುವ ರಾಜಕೀಯ ಚರ್ಚೆಯಲ್ಲಿ ಮೂರೂ ಪಕ್ಷಗಳ ರಾಜಕೀಯ ವಕ್ತಾರರು ತಮ್ಮದೇ ಪರಮಸತ್ಯವೆಂಬಂತೆ ಮಾತಾಡುತ್ತಿ ದ್ದಾರೆ. ಅದು ಹಾಳಾಗಲಿ ಎಂದರೆ, ಅವರ ನಡುವೆ ಕೂತಿರುವ ಬುದ್ಧಿಜೀವಿಯೂ ತನ್ನ ಹಿಡನ್ ಅಜೆಂಡಾ ಯಾರಿಗೂ ಗೊತ್ತಾಗುವುದಿ ಲ್ಲವೆಂಬಂತೆ ನಯವಾಗಿ ತನಗೆ ಬೇಕಾದ ಪಕ್ಷವನ್ನು ಬೆಂಬಲಿಸುತ್ತಿದ್ದಾನೆ. ಕೆಲವು ಸಲ ಇವರ ನಡುವೆ ಜ್ಯೋತಿಷಿಯೂ ಕೂತು, ಶನಿ ಎಂಟನೆ ಮನೆಯನ್ನು ಪ್ರವೇಶಿಸಿರುವುದರಿಂದ ಮುಖ್ಯಮಂತ್ರಿಗೆ ಕಷ್ಟವಿದೆ; ಆ ಕಷ್ಟಕ್ಕೆ ತನ್ನ ಬಳಿ ಪರಿಹಾರವಿದೆ ಎನ್ನುತ್ತಾನೆ…

ಅಂದರೆ, ‘ಸಮ್ಮತಿಯ ಉತ್ಪಾದನೆ’ ಎಲ್ಲ ‘ಜನಪರಿ ಚಿತ’ ಸಂಸ್ಕೃತಿಗಳಲ್ಲೂ ಎಡೆಬಿಡದೆ ನಡೆಯುತ್ತಿದೆ. ದಿನನಿತ್ಯ ರೂಪುಗೊಳ್ಳುತ್ತಿರುವ ಈ ನವಸಂಸ್ಕೃತಿಗಳನ್ನು ‘ಜನಪ್ರಿಯ’ ಎನ್ನದೆ ‘ಜನಪರಿಚಿತ’, ‘ಜನಪೀಡಕ’ ಅಥವಾ ‘ಜನಪ್ರಚೋದಕ’ ಸಂಸ್ಕೃತಿಗಳು ಎಂದು ಕರೆಯುವುದೇ ಸರಿ ಎನ್ನಿಸುತ್ತದೆ. ಅಮೆರಿಕದ ಸರಕಾರ ಮತ್ತು ಮಾಧ್ಯಮಗಳೆರಡೂ ತಮಗೆ ಬೇಕಾದಂತೆ ಎಲ್ಲವನ್ನೂ ತಿರುಚಿ ಸಮ್ಮತಿಯ ಉತ್ಪಾದನೆ ಮಾಡುತ್ತಿ ರುವುದನ್ನು ನೋಮ್ ಚಾಮ್ಸ್ಕಿ ಹಿಂದೊಮ್ಮೆ ತೋರಿಸಿದ್ದರು. ಆದರೆ ಆ ಕೆಲಸ ಇಲ್ಲಿ ಈ ಜನಪೀಡಕ ಸಂಸ್ಕೃತಿಗಳಲ್ಲಿ ಎಗ್ಗಿಲ್ಲದೆ ನಡೆಯುತ್ತಿದೆ. ಮಿತ್ರರೊಬ್ಬರು ಹೇಳಿದಂತೆ ‘ಧರ್ಮದ ಹೆಸರಿನಲ್ಲಿ ಜಾತಿ ಪದ್ಧತಿ, ಲಿಂಗಭೇದ ಎಲ್ಲವನ್ನೂ ಸೃಷ್ಟಿಸಿರುವ ಈ ದೇಶದಲ್ಲಿ ಸಮ್ಮತಿಯ ಉತ್ಪಾದನೆ ಇವತ್ತಿನದೇನಲ್ಲ’ ಎನ್ನುವುದು ನಿಜ. ಆದರೆ ಈ ಜಾಹೀರಾತು ಯುಗದಲ್ಲಿ ಈ ‘ಸಮ್ಮತಿಯ ಉತ್ಪಾದನೆ’ಯ ಸೈತಾನ ಕಾರ್ಖಾನೆ ಭಯಾನಕ ಚಟುವಟಿಕೆಗಳಲ್ಲಿ ತೊಡಗಿದೆ. ಒಂದು ವಸ್ತುವಿಗೆ ಮಾರುಕಟ್ಟೆ ಸೃಷ್ಟಿಸಿದ ಹಾಗೆ ಒಡೆದು ಆಳುವ ತತ್ವಗಳಿಗೆ, ಮತೀಯವಾದಕ್ಕೆ, ಹಿಂಸೆಗೆ, ದೇವರು, ಧರ್ಮದ ಹೆಸರಿನಲ್ಲಿ ಬಿತ್ತುವ ಸುಳ್ಳುಗಳಿಗೆ ಮಾರುಕಟ್ಟೆ ಸೃಷ್ಟಿಸುವ ವ್ಯವಸ್ಥಿತ ಕೆಲಸ ನಡೆಯುತ್ತಿದೆ. ಧರ್ಮ ಪ್ರಸಾರಕ್ಕೆ ಉಚಿತ ಟೆಲಿವಿಷನ್ ಚಾನಲ್ಗಳೇ ಇರುವುದನ್ನು ನೋಡಿದರೆ, ಎಷ್ಟೊಂದು ಕಪ್ಪು ಹಣವನ್ನು ಈ ಹುಸಿ ಸಂಸ್ಕೃತಿಯ ಪ್ರಸಾರದಲ್ಲಿ ತೊಡಗಿಸಲಾಗಿದೆ ಎಂಬುದು ತಿಳಿಯುತ್ತದೆ. ಹೊಸ ಹೊಸ ಕಗ್ಗಗಳನ್ನು ಜನರ ಮೇಲೆ ಛೂ ಬಿಡುವ ಕೆಲಸ ಈ ಸಾಧು ವೇಷಧಾರಿಗಳಿಂದ ನಡೆಯುತ್ತಲೇ ಇದೆ. ಇನ್ನು ಮುಲ್ಲಾಗಳ ಏರುದನಿಯ ಧಾರ್ಮಿಕ ಚೀರಾಟ, ಏಸುವಿನ ಹೆಸರಿನ ಪ್ರಲಾಪಗಳು ಇವನ್ನು ಮೀರಿಸುವಂತೆ ನಡೆಯುತ್ತಲೇ ಇರುತ್ತವೆ…

ಈ ಥರದ ನವಸಂಸ್ಕೃತಿಗಳನ್ನು ‘ಮ್ಯಾನೇಜ್ಮೆಂಟ್’ ಪದವಿ ಪಡೆದವರು ನಿರ್ವಹಿಸುತ್ತಿರುತ್ತಾರೆ ಎಂಬ ಅಂಶ ಇನ್ನಷ್ಟು ಕಳವಳಕಾರಿಯಾಗಿದೆ. ಚುನಾವಣೆಯಲ್ಲಿ ಪಕ್ಷಗಳ ಪ್ರಚಾರವನ್ನು ನಿರ್ವಹಿಸಲು ಕೂಡಾ ಮ್ಯಾನೇಜ್ಮೆಂಟ್ ವಿದ್ವಾಂಸರು ನೇಮಕವಾಗುತ್ತಾರೆ. ಅವರು ಕಲಿತ ಮ್ಯಾನೇಜ್ಮೆಂಟ್ ವಿದ್ಯೆಯೇ ಅವರಿಗೆ ‘ಗೆಲ್ಲಲು ಏನು ಬೇಕಾದರೂ ಮಾಡಬಹುದು’ ಎಂಬ ಅನೈತಿಕತೆಯನ್ನು ಪರೋಕ್ಷವಾಗಿಯಾದರೂ ಕಲಿಸಿದೆ. ಈ ಕಾಲದ ಹುಡುಗ, ಹುಡುಗಿಯರು ಈ ಮ್ಯಾನೇಜ್ಮೆಂಟ್ ವಿದ್ಯೆ ಕಲಿಯಲು ನೂಕುನುಗ್ಗಲಿನಲ್ಲಿದ್ದಾರೆ; ಭಾಷೆಯ ದುರ್ಬಳಕೆಯ ಕಲೆಯನ್ನು ಕಾಲೇಜು, ವಿಶ್ವವಿದ್ಯಾಲಯಗಳಲ್ಲೇ ಕಲಿಯಲು ಸಿದ್ಧವಾಗುತ್ತಿದ್ದಾರೆ.

ಹೀಗೆ ದಿನನಿತ್ಯ ಬಳಸುವ ಭಾಷೆಯ ಭ್ರಷ್ಟತೆ ಒಂದು ವಲಯದಿಂದ ಮತ್ತೊಂದು ವಲಯಕ್ಕೆ ಹಬ್ಬುವ ಕೆಲಸ ಅಥವಾ ಆಸಕ್ತ ಹಿತಗಳು ಅದನ್ನು ವ್ಯವಸ್ಥಿತವಾಗಿ ಹಬ್ಬಿಸಿ ಲಾಭ ಪಡೆಯುವ ಯೋಜನೆಗಳು ಚರಿತ್ರೆಯುದ್ದಕ್ಕೂ ನಡೆಯುತ್ತಾ ಬಂದಿವೆ. ಆದರೆ ಈ ಬಗ್ಗೆ ಯಾವ ಲಜ್ಜೆಯೂ ಇಲ್ಲದೆ, ಇದೆಲ್ಲ ತೀರಾ ಸಹಜ ಹಾಗೂ ನ್ಯಾಯಬದ್ಧ ಎಂಬಂತೆ ವ್ಯಾಪಕ ಮಟ್ಟದಲ್ಲಿ ನಡೆಯತೊಡಗಿರುವುದು ಮಾತ್ರ ಈ ಕಾಲದಲ್ಲೇ ಎಂದು ಕಾಣುತ್ತದೆ. ಆದ್ದರಿಂದಲೇ ಈ ಬೆಳವಣಿಗೆಗಳನ್ನು ಹೆಚ್ಚು ಆತಂಕದಿಂದ ಗಮನಿಸಬೇಕಾಗಿದೆ. ಇವತ್ತಿನ ‘ರಾಜಕೀಯ ಸಂಸ್ಕೃತಿ’ಯಲ್ಲಿ ಎದ್ದು ಕಾಣುವ ಬೂಟಾಟಿಕೆಯ ಭಾಷೆ ಧಾರ್ಮಿಕ ವಲಯಕ್ಕೆ ಬಂದಿದೆಯೋ? ಅಥವಾ ಧಾರ್ಮಿಕ ವಲಯಗಳಲ್ಲಿ ಸಾವಿರಾರು ವರ್ಷಗಳಿಂದ ಇರುವ ಬೂಟಾಟಿಕೆ ರಾಜಕೀಯವೂ ಸೇರಿದಂತೆ ಸಮಾಜದ ಎಲ್ಲ ಸಂಸ್ಕೃತಿಗಳಿಗೂ ಹಬ್ಬುತ್ತಿದೆಯೋ? ಮತೀಯವಾದಿ ರಾಜಕಾರಣದ ಕುತರ್ಕ ಹಾಗೂ ಮೋಸ ರಾಜಕಾರಣಿಗಳಿಂದ ಹುಟ್ಟಿತೋ? ಧರ್ಮದ ಹೆಸರಿನಲ್ಲಿ ಕೊಲ್ಲುವ ಕ್ರೌರ್ಯ ಧರ್ಮದಿಂದಲೇ ಬಂತೋ? ಅಥವಾ ಧರ್ಮದ ಆಧುನಿಕ ತಿರುಚುವಿಕೆಯಿಂದ ಬಂತೋ?

ದಿನನಿತ್ಯ ಜನರ ಬದುಕನ್ನು, ಆಕ್ರಮಿಸಿಕೊಂಡಂತೆ ತೋರುವ ಧರ್ಮ ಹಾಗೂ ರಾಜಕೀಯಗಳಲ್ಲಿ ಸಲೀಸಾಗಿರುವ ಈ ತಿರುಚುವಿಕೆಯ ಮಾದರಿಗಳನ್ನು ನಮ್ಮ ಟೆಲಿವಿಷನ್ಗಳಲ್ಲಿ ಜನಪರಿಚಿತ ಧಾರಾವಾಹಿಗಳ ಕತೆ ಹೊಸೆಯುವವವರು ಕೂಡಾ ಮುಂದುವರಿಸಿದಂತಿದೆ. ಸಾಮಾನ್ಯವಾಗಿ ಒಂದು ಉತ್ತಮ ಕತೆ ಕಾಲ್ಪನಿಕ ಎಂಬಂತೆ ತೋರಬಹುದಾದ ಚೌಕಟ್ಟನ್ನು ಇಟ್ಟುಕೊಂಡರೂ ಸತ್ಯಶೋಧನೆಯಲ್ಲಿ ತೊಡಗಿರಬೇಕಾಗುತ್ತದೆ ಎಂದು ಸಾಹಿತ್ಯದ ಗಂಭೀರ ಓದುಗರು, ಜವಾಬ್ದಾರಿಯಿಂದ ಬರೆಯುವ ಲೇಖಕ, ಲೇಖಕಿಯರು ನಂಬುತ್ತಾರೆ. ಇಂಥವರಿಗೆ, ಟೆಲಿ ಸೀರಿಯಲ್ ಮಾಡುವವರು ತಲೆಗೆ ಬಂದಂತೆ ಕತೆಯ ಪಾತ್ರಗಳನ್ನು ಬದಲಾಯಿಸುವುದು, ಯಾವ ನೈತಿಕತೆಯೂ ಇಲ್ಲದೆ ಪಾತ್ರಗಳನ್ನು ಕೊಲ್ಲುವುದು, ಮನಸ್ಸಿಗೆ ಬಂದ ಮನೋವೈಜ್ಞಾನಿಕ ವ್ಯಾಖ್ಯಾನಗಳನ್ನು ಪಾತ್ರಗಳನ್ನು ಬಾಯಿಂದ ಮಂಡಿಸುವುದು… ಇವನ್ನೆಲ್ಲಾ ನೋಡಿದಾಗ, ರಾಜಕೀಯದಂತೆ ಇಲ್ಲಿ ಕೂಡಾ ‘ಏನೂ ಬೇಕಾದರೂ ಆಗಬಹುದು!’ ಎಂದು ಸಿನಿಕ ನಗೆ ಉಕ್ಕಬಹುದು; ಅಥವಾ ‘ಜನಪ್ರಿಯ’ ಎಂಬ ಭ್ರಮೆ ಹುಟ್ಟಿಸುವ ಪ್ರಕಾರಗಳಲ್ಲಿ ಈ ಬಗೆಯ ಫಾರ್ಮುಲಾ ನೆಯ್ಗೆ ಯಾವಾಗಲೂ ನಡೆಯುತ್ತಲೇ ಇರುತ್ತದೆ ಎನ್ನಿಸಬಹುದು.

ಆದರೆ ಸೀರಿಯಲ್ಗಳ ಯಾಂತ್ರಿಕ ಹಾಗೂ ಕೃತಕ ‘ಸಾಮೂಹಿಕ’ ರಚನೆಗಳನ್ನು ಅಥವಾ ಅದೇ ಬಗೆಯ ಕತೆಗಳನ್ನು ಉತ್ತಮ ಕೃತಿಗಳೆಂಬಂತೆ ಪತ್ರಿಕೆಗಳ ಇನ್ಸ್ಟಂಟ್ ವಿಮರ್ಶೆಗಳು ಚರ್ಚಿಸತೊಡಗಿದಾಗ ಗಂಭೀರ ಓದುಗರಿಗೆ ಶಾಕ್ ಆಗತೊಡಗುತ್ತದೆ; ಸಿನಿಮಾ ಬಗ್ಗೆ ಉಬ್ಬಿದ ಭಾಷೆ ಬಳಸಿ ಹೈಪ್ ಮಾಡು ವಂತೆ ಪುಸ್ತಕವೊಂದಕ್ಕೆ ಅತಿಯಾದ ಪ್ರಚಾರ ನೀಡಲು ಹೈಪ್ ತಂತ್ರವನ್ನು ಬಳಸತೊಡಗಿದಾಗ ಅಸಹ್ಯ ವಾಗುತ್ತದೆ; ಪುಸ್ತಕ ವಿಮರ್ಶೆಯಂಥ ಗಂಭೀರ ಚಟುವಟಿಕೆಯಲ್ಲೂ ರಾಜಕೀಯ ಪಕ್ಷಗಳ ವಕ್ತಾರರಂತೆ ಲಜ್ಜೆಗೇಡಿತನದಿಂದ ಮಾತಾಡುವಾಗ ಗಾಬರಿಯಾಗ ತೊಡಗುತ್ತದೆ. ಎಲ್ಲೋ ಚಿತ್ರದುರ್ಗ ಜಿಲ್ಲೆಯ ಪುಟ್ಟ ಊರಿನಲ್ಲಿ ತಮ್ಮ ಪಾಡಿಗೆ ತಾವು ಬರೆಯುವ ಹುಡುಗ, ಹುಡುಗಿಯರ ಪದ್ಯ, ಕತೆಗಳ ನಿಜವಾದ ಸತ್ವ ಜಾಹೀ ರಾತುಗಳ ಮಾರ್ಕೆಟ್ ಭಾಷೆಯನ್ನು ಉಪಾಯದಿಂದ ಬಳಸಿದ ಹೈಪ್ ವಿಮರ್ಶೆಗಳ ಅಬ್ಬರದಲ್ಲಿ ಹಿನ್ನೆಲೆಗೆ ಸರಿಯುವುದನ್ನು ಕಂಡಾಗ ಆತಂಕ ಶುರುವಾಗುತ್ತದೆ. ಪ್ರಾಮಾಣಿಕವಾದದ್ದು ಯಾವುದು ಎಂಬುದನ್ನು ಗುರುತಿಸಬಲ್ಲ ಸಂವೇದನೆ ಕನ್ನಡ ಸಾಹಿತ್ಯ ಸಂಸ್ಕೃತಿಯಲ್ಲಿ ಸದಾ ಜಾಗೃತವಾಗಿದೆ ಎಂದು ನಾವು ಸಮಾಧಾನ ಪಟ್ಟುಕೊಳ್ಳಬಹುದು. ಆದರೆ ಈ ಸಂವೇದನೆ ಕೆಲವು ವ್ಯಕ್ತಿಗಳಲ್ಲಿ ಮಾತ್ರ ಕಂಡು, ಒಟ್ಟಾರೆ ಸಾಹಿತ್ಯ ಸಂಸ್ಕೃತಿ ಯಲ್ಲಿ ಪ್ರಧಾನವಾಗಿ ಕಾಣದಿದ್ದರೆ ಈ ಸಮಾಧಾನ ಕೂಡ ಹುಸಿ ಸಮಾಧಾನವಾಗಬಹುದು.

ಇದೆಲ್ಲದರ ಜೊತೆಗೆ, ಸ್ವವಿಮರ್ಶೆಯಿಲ್ಲದ ಮೀಡಿಯಾ ಸಂಸ್ಕೃತಿ ಸೃಷ್ಟಿಸುತ್ತಿರುವ ‘ಮೀಡಿಯೋಕರ್ ಸಂಸ್ಕೃತಿ’ಯ ಅಪಾಯವನ್ನು ಕೂಡ ಕಡೆಗಣಿಸಲಾಗದು. ರಾಜಕೀಯ, ಶಿಕ್ಷಣ, ಧರ್ಮ, ಸಿನಿಮಾ ಮುಂತಾದ ‘ವಿಸಿಬಲ್’(ಎದ್ದು ಕಾಣುವ) ಕ್ಷೇತ್ರಗಳಿಂದ ವಸ್ತು ನಿಷ್ಠ ವಿಮರ್ಶೆಯನ್ನು ಹೆಚ್ಚು ಕಡಿಮೆ ಉಚ್ಛಾಟಿಸುತ್ತಿರುವುದನ್ನು ಸರಿಯಾಗಿ ಗಮನಿಸಬೇಕು. ಚಿತ್ರಮಂದಿರದಿಂದ ಹೊರಬರುವ ಪ್ರೇಕ್ಷಕರ ಬಾಯಿಗೆ ಟಿವಿ ಚಾನಲ್ಲಿನ ಮೈಕುಗಳನ್ನು ತುರುಕಿ (ಅಥವಾ ಚಿತ್ರನಿರ್ಮಾಪಕರ ಆಮಿಷದಿಂದ ತುರುಕಿಸಿ) ‘ಸೂಪರ್!’ ‘ಗ್ರೇಟ್!’ ‘ಹಂಡ್ರಡ್ ಡೇಸ್ ಗ್ಯಾರಂಟಿ!’ ಎಂದು ಹೇಳಿದ್ದನ್ನು ಮಾತ್ರ ಪ್ರಸಾರ ಮಾಡುವ ತಂತ್ರ ಗಮನಿಸಿ: ಇದು ಏಕಕಾಲಕ್ಕೆ ಎರಡು ಬಗೆಯ ಸುಳ್ಳುಗಳಿಗೆ ಉತ್ತೇಜನ ನೀಡುತ್ತಿದೆ: ಒಂದು, ಟಿವಿಯಲ್ಲಿ ಕಾಣಿಸಿಕೊಳ್ಳುವ ಆಸೆಯಿಂದ ಪ್ರೇಕ್ಷಕರು ತಮಗೆ ಅನಿಸಿದ್ದನ್ನು ಹೇಳದೆ ಸುಮ್ಮನೆ ಹೊಗಳುವಂತೆ ಇದು ಪ್ರಚೋದಿಸುತ್ತದೆ; ಎರಡು, ಯಾವ ನಿಷ್ಠುರ ವಿಮರ್ಶೆ ಬಂದರೂ ಅದು ತಾನು ಈಗಾಗಲೇ ಉತ್ಪಾದಿಸಿರುವ ಪ್ರೇಕ್ಷಕರ ಸುಳ್ಳು ತೀರ್ಪಿನ ಮುಂದೆ ನಿಲ್ಲುವುದಿಲ್ಲ ಎಂಬ ಭ್ರಮೆಯನ್ನು ಸೃಷ್ಟಿಸುತ್ತದೆ.

ಈ ಸಿನಿಮಾ ‘ವಿಮರ್ಶೆ’ಯ ಹೊಸ ಧಾಟಿಯನ್ನು ಅನುಸರಿಸುವ ನಮ್ಮ ರಾಜಕೀಯ ವಿಶ್ಲೇಷಕರು ಸಿಬಿಐ ಬಂಧನದಲ್ಲಿರುವ ಜಗನ್ಮೋಹನ್ ರೆಡ್ಡಿ ಆಂಧ್ರ ಪ್ರದೇಶದ ಚುನಾವಣೆಯಲ್ಲಿ ಗೆದ್ದ ತಕ್ಷಣ, ‘ಜನತಾ ನ್ಯಾಯಾಲಯ ತೀರ್ಪು ನೀಡಿದೆ; ಅದನ್ನು ಮಾನ್ಯ ಮಾಡಲೇಬೇಕು’ ಎಂದು ಆರಾಮವಾಗಿ ಷರಾ ಬರೆಯುತ್ತಾರೆ!

 

ಇದೇ ‘ಜನತಾ ನ್ಯಾಯಾಲಯ’ದಲ್ಲಿ ನರೇಂದ್ರ ಮೋದಿ, ಡಿ.ಕೆ.ಶಿವಕುಮಾರ್, ಯಡಿಯೂರಪ್ಪ, ಕುಮಾರಸ್ವಾಮಿ…. ಹೀಗೆ ಯಾರು ಬೇಕಾದರೂ ಗೆಲ್ಲಬಹುದು; ಆದರೆ ಈ ತೀರ್ಪನ್ನು ಸೃಷ್ಟಿಸಲು ಅವರು ಹಿಡಿದಿರಬಹುದಾದ ಅಡ್ಡ ಮಾರ್ಗಗಳನ್ನು ಬೇಕೆಂತಲೇ ಮರೆಯುವ ವಿಶ್ಲೇಷಕರು ‘ಜನತಾ ನ್ಯಾಯಾಲಯದ ತೀರ್ಪು’ ಎಂದು ಭ್ರಷ್ಟಾಚಾರಿಗಳು ಕೊಡುವ ಕಳ್ಳವರ್ಣನೆಯ ಗಿಳಿಪಾಠ ಒಪ್ಪಿಸುತ್ತಿರುತ್ತಾರೆ; ಆ ಮೂಲಕ ಈ ಗೆಲುವಿನ ಪಾಲುದಾರರಾಗಲು ಯತ್ನಿಸುತ್ತಿರುತ್ತಾರೆ. ಚುನಾವಣೆಯಲ್ಲಿ ಏನು ಬೇಕಾದರೂ ಆಗಬಹುದು; ಹಾಗೆಯೇ ಚುನಾವಣಾ ವಿಶ್ಲೇಷಣೆಯ ಭಾಷೆಯಲ್ಲಿ ಕೂಡ ಏನು ಬೇಕಾದರೂ ಆಗಬಹುದು! ಈ ಭಂಡತನ ಅನೇಕ ಬಗೆಯ ಸಾರ್ವಜನಿಕ ಚರ್ಚೆಗಳಲ್ಲಿ, ಪತ್ರಿಕಾ ಬರಹಗಳಲ್ಲಿ ಮರುಕಳಿಸತೊಡಗುತ್ತದೆ. ಯಾವುದಕ್ಕಾದರೂ ವಾದ ಕಟ್ಟಬಹುದು ಎಂಬ ವಾದ ಪಟುಗಳು ಎದ್ದು ಕಾಣತೊಡಗುತ್ತಾರೆ. ಸ್ವವಿಮರ್ಶೆಯಿಂದ ಹುಟ್ಟುವ ವಿಮರ್ಶೆ ಹಿನ್ನೆಲೆಗೆ ಸರಿಯತೊಡಗುತ್ತದೆ. ರಾಜಕೀಯ ಪಕ್ಷಗಳಂತೆಯೇ ಸಾಮಾಜಿಕ ಚಳವಳಿಗಳು ಒಡೆದಿದ್ದಕ್ಕೂ ಆಯಾ ಗುಂಪಿನಿಂದ ಸಮರ್ಥನೆಗಳು ಹುಟ್ಟುತ್ತವೆ; ಯಾರಿಗೂ ಈ ಬಗ್ಗೆ ಸ್ವವಿಮರ್ಶೆ, ಅಳುಕು ಅಥವಾ ಪಾಪ ಪ್ರಜ್ಞೆ ಇರುವಂತೆ ಕಾಣುವುದಿಲ್ಲ. ಹೀಗೆ ವಿವಿಧ ಸಾರ್ವಜನಿಕ ಸಂಸ್ಕೃತಿಗಳಿಂದ ವಿಮರ್ಶೆಯನ್ನು ಉಚ್ಛಾಟಿಸಿದ ಮೇಲೆ ಎಲ್ಲ ವಲಯಗಳಲ್ಲೂ ಮೀಡಿಯೋಕರ್ ಸಂಸ್ಕೃತಿಯ ವಿಜೃಂಭಣೆಯ ಜೊತೆಗೆ ಹೀನವಾದ ಪಕ್ಷಪಾತ ಕೂಡ ನಡೆಯುತ್ತಲೇ ಇರುತ್ತದೆ.

ಇವುಗಳ ನಡುವೆ, ಈ ನವಸಂಸ್ಕೃತಿಗಳ ಹೊಂಚು ಬಲ್ಲವರು, ಇವುಗಳ ಎದುರು ಸೆಣಸುವ ಗಟ್ಟಿ ವ್ಯಕ್ತಿಗಳು. ಸೂಕ್ಷ್ಮ ಸಂವೇದನೆ ಉಳ್ಳವರು ಈ ವಲಯಗಳಲ್ಲೂ, ಈ ವಲಯಗಳ ಹೊರಗೂ ಇರುತ್ತಾರೆ. ಈ ನವಸಂಸ್ಕೃತಿಗಳ ಒಳಗೇ ನೈತಿಕ ಹೋರಾಟ ನಡೆಸುವವರು, ಜನರ ಹಿತ ಕಾಯುವವರು ಕೂಡಾ ಜಾಗೃತರಾಗಿರುತ್ತಾರೆ. ಅದಕ್ಕಿಂತ ಮಿಗಿಲಾಗಿ ಈ ಸಂಸ್ಕೃತಿಗಳ ಮೂಕ ವೀಕ್ಷಕರಂತಿರುವ ಕೋಟ್ಯಂತರ ಜನರ ಸಹಜ ನೈತಿಕತೆ ಕೂಡ ಈ ಉತ್ಪಾದಿತ ಸುಳ್ಳುಗಳನ್ನು ಕಂಡು ಅಸಹ್ಯಪಡುತ್ತಿರುತ್ತದೆ. ಹೀಗೆ ಅಸಹ್ಯ ಪಡುವವರ ಸಂತತಿ ಹೆಚ್ಚಿಸುವ ಪ್ರಯತ್ನ ಮಾಡುವುದೇ ‘ಏನು ಬೇಕಾದರೂ ಆಗಬಹುದು’ ಎಂಬ ಈ ನವ ಸಂಸ್ಕೃತಿಗಳ ನಿರ್ಮಾಪಕರ ಠೇಂಕಾರವನ್ನು ಎದುರಿಸುವ ಮುಖ್ಯ ಹೆಜ್ಜೆ ಎನ್ನಿಸುತ್ತದೆ.

‍ಲೇಖಕರು G

18 October, 2012

15 Comments

  1. Pramod

    ನೀವು ಹೇಳಿದ್ದು ನೂರಕ್ಕೆ ನೂರು ಸತ್ಯ. ಕಹಿ ಸತ್ಯ. ವಸ್ತು ನಿಷ್ಠ ವರದಿ ಕೊರತೆ ತೀವ್ರವಾಗಿ ಎದ್ದು ಕಾಣುತ್ತಿದೆ. ರಾಷ್ಟ್ರೀಯ ವಾಹಿನಿಗಳಾದ ಟೈ೦ಸ್ ನೌ, ಸಿಎನ್ ಎನ್ ಐಬಿ ಎನ್, ಎನ್ ಡಿಟೀವಿ ಕಾ೦ಗ್ರೆಸ್ ಪಕ್ಷದ ವರದಿಗಾರರಾಗಿದ್ದಾರೆ. ನ್ಯೂಟ್ರಲ್ ನ್ಯೂಸ್ ಇಲ್ಲ. ನ್ಯೂಟ್ರಲ್ ಟೋನ್ ಇಲ್ಲ. ಜಗಳವಾಡುವ೦ತಹ ಸ್ವರದಲ್ಲಿ ನ್ಯೂಸ್ ಅರಚುತ್ತಾರೆ. ನ್ಯೂಸ್ ಗ್ಲೋರಿಫೈ ಆಗಿದೆ. ಸುದ್ದಿ ಮನೆಯ ಸಾವಾಗಿದೆ.
    ಇ೦ತಹದೇ ಆತ೦ಕಕಾರಿ ಬೆಳವಣಿಗೆ ನ್ಯೂಸ್ ಪೇಪರ್ ನಲ್ಲಾಗಿದೆ.
    ಸಾಮನ್ಯ ಪ್ರಜೆಗೆ ಇದು ದೇಶವಲ್ಲ. ಅವನಿಗೆ ಚಾನೆಲ್ ಇಲ್ಲ. ಅವನಿಗೆ ಪೇಪರಿಲ್ಲ.

  2. K.V. Tirumalesh

    Dear Nataraj
    Somebody had to say it and you said it! An excellent analysis. The concept of media should also include website journals and all social websites that are promoting uncritical knee-jerk responses. Unfortunately, this has entered literature and now we have no way to allow ourselves to be influenced by writings. Has anyone the time to read War and Peace? Writings are becoming shorter and shorter–hit and go kind of things. So from the readers it is either is either mindless eulogy or irresponsible condemnation. Neither the media nor the readers/viwers in general want anything ‘difficult’or complex since such things disturb them. Remember the chorus in Eliot’s Murder in the Cathedral? Leave us alone–is the cry.
    kvtirumalesh

  3. ಚಂದಿನ

    There is another sky

    There is another sky,
    Ever serene and fair,
    And there is another sunshine,
    Though it be darkness there;
    Never mind faded forests, Austin,
    Never mind silent fields—
    Here is a little forest,
    Whose leaf is ever green;
    Here is a brighter garden,
    Where not a frost has been;
    In its unfading flowers
    I hear the bright bee hum:
    Prithee, my brother,
    Into my garden come!
    Emily Dickinson

    ಎನ್ನಬೇಕೋ, ಇಲ್ಲಾ

    ನಲವತ್ತೇಳರ ಸ್ವಾತಂತ್ರ್ಯ
    ಯಾರಿಗೆ ಬಂತು ಎಲ್ಲಿಗೆ ಬಂತು
    ನಲವತ್ತೇಳರ ಸ್ವಾತಂತ್ರ್ರ್ಯ
    ಟಾಟಾ ಬಿರ್‍ಲಾ ಜೋಬಿಗೆ ಬಂತು
    ಜನಗಳ ತಿನ್ನುವ ಬಾಯಿಗೆ ಬಂತು
    ಕೋಟ್ಯಾಧೀಶನ ಕೋಣೆಗೆ ಬಂತು
    ನಲವತ್ತೇಳರ ಸ್ವಾತಂತ್ರ್ರ್ಯ
    ಬಡವರ ಮನೆಗೆ ಬರಲಿಲ್ಲ
    ಬೆಳಕಿನ ಕಿರಣ ತರಲಿಲ್ಲ
    ಗೋಳಿನ ಕಡಲನು ಬತ್ತಿಸಲಿಲ್ಲ
    ಸಮತೆಯ ಹೂವನು ಅರಳಿಸಲಿಲ್ಲ
    ಹಣವಂತರು ಕೈ ಸನ್ನೆ ಮಾಡಿದರೆ
    ಕತ್ತಲೆಯಲ್ಲಿ ಬೆತ್ತಲೆಯಾಯಿತು
    ಯಾರೂ ಕಾಣದ ಸ್ವಾತಂತ್ರ್ರ್ಯ
    ನಲವತ್ತೇಳರ ಸ್ವಾತಂತ್ರ್ರ್ಯ
    ಸಾವಿರಾರು ಜನ ಗೋರಿಯಾದರು
    ಲಕ್ಷ ಲಕ್ಷ ಜನ ಗಲ್ಲಿಗೇರಿದರು
    ರೈತ ಕಾರ್ಮಿಕರು ರಕ್ತವ ಕೊಟ್ಟರು
    ಯಾರಿಗೆ ಬಂತು ಸ್ವಾತಂತ್ರ್ರ್ಯ
    ನಲವತ್ತೇಳರ ಸ್ವಾತಂತ್ರ್ರ್ಯ
    ಪೋಲೀಸರ ಬೂಟಿಗೆ ಬಂತು
    ಮಾಲೀಕರ ಚಾಟಿಗೆ ಬಂತು
    ಬಂದೂಕದ ಗುಂಡಿಗೆ ಬಂತು
    ನಲವತ್ತೇಳರ ಸ್ವಾತಂತ್ರ್ರ್ಯ
    ಪಾರ್ಲಿಮೆಂಟಿನ ಕುರ್ಚಿಯ ಮೇಲೆ
    ವರ್ಷಗಟ್ಟಲೆ ಚರ್ಚೆಗೆ ಕೂತು
    ಬಡವರ ಬೆವರು ರಕ್ತವ ಕುಡಿದು
    ಏಳಲೆ ಇಲ್ಲ ಸ್ವಾತಂತ್ರ್ರ್ಯ
    ನಲವತ್ತೇಳರ ಸ್ವಾತಂತ್ರ್ರ್ಯ
    ಯಾರಿಗೆ ಬಂತು ಎಲ್ಲಿಗೆ ಬಂತು
    ನಲವತ್ತೇಳರ ಸ್ವಾತಂತ್ರ್ಯ

    ಕವಿ – ಡಾ. ಸಿದ್ಧಲಿಂಗಯ್ಯ
    ಹಕ್ಕುಗಳು: ಲೇಖಕರದು

    ಎನ್ನಬೇಕೋ, ಇಲ್ಲಾ

    Still I Rise
    You may write me down in history
    With your bitter, twisted lies,
    You may trod me in the very dirt
    But still, like dust, I’ll rise.

    Does my sassiness upset you?
    Why are you beset with gloom?
    ‘Cause I walk like I’ve got oil wells
    Pumping in my living room.

    Just like moons and like suns,
    With the certainty of tides,
    Just like hopes springing high,
    Still I’ll rise.

    Did you want to see me broken?
    Bowed head and lowered eyes?
    Shoulders falling down like teardrops.
    Weakened by my soulful cries.

    Does my haughtiness offend you?
    Don’t you take it awful hard
    ‘Cause I laugh like I’ve got gold mines
    Diggin’ in my own back yard.

    You may shoot me with your words,
    You may cut me with your eyes,
    You may kill me with your hatefulness,
    But still, like air, I’ll rise.

    Does my sexiness upset you?
    Does it come as a surprise
    That I dance like I’ve got diamonds
    At the meeting of my thighs?

    Out of the huts of history’s shame
    I rise
    Up from a past that’s rooted in pain
    I rise
    I’m a black ocean, leaping and wide,
    Welling and swelling I bear in the tide.
    Leaving behind nights of terror and fear
    I rise
    Into a daybreak that’s wondrously clear
    I rise
    Bringing the gifts that my ancestors gave,
    I am the dream and the hope of the slave.
    I rise
    I rise
    I rise.
    Maya Angelou

    ನನಗಂತೂ, Still I rise ಬಹಳ ಸೂಕ್ತವೆನಿಸುತ್ತದೆ…

  4. ಅಶೋಕ ಶೆಟ್ಟರ್

    “…ಅದಕ್ಕಿಂತ ಮಿಗಿಲಾಗಿ ಈ ಸಂಸ್ಕೃತಿಗಳ ಮೂಕ ವೀಕ್ಷಕರಂತಿರುವ ಕೋಟ್ಯಂತರ ಜನರ ಸಹಜ ನೈತಿಕತೆ ಕೂಡ ಈ ಉತ್ಪಾದಿತ ಸುಳ್ಳುಗಳನ್ನು ಕಂಡು ಅಸಹ್ಯಪಡುತ್ತಿರುತ್ತದೆ. ಹೀಗೆ ಅಸಹ್ಯ ಪಡುವವರ ಸಂತತಿ ಹೆಚ್ಚಿಸುವ ಪ್ರಯತ್ನ ಮಾಡುವುದೇ ‘ಏನು ಬೇಕಾದರೂ ಆಗಬಹುದು’ ಎಂಬ ಈ ನವ ಸಂಸ್ಕೃತಿಗಳ ನಿರ್ಮಾಪಕರ ಠೇಂಕಾರವನ್ನು ಎದುರಿಸುವ ಮುಖ್ಯ ಹೆಜ್ಜೆ ಎನ್ನಿಸುತ್ತದೆ.”

    ನನಗನಿಸಿದ ಮಟ್ಟಿಗೆ ಇದೇ ಸರಿಯಾದ ವಿಚಾರ.ಮೇಲಾಟಕ್ಕೆ ನಿಂತವರಂತೆ ಮಾನಸಿಕವಾಗಿಯೋ,ಭೌತಿಕವಾಗಿಯೋ ಭ್ರಷ್ಟರಾಗುತ್ತ ನಡೆದು,ಆ ಕುರಿತು ಅಳುಕು-ನಾಚಿಕೆ ಇರುವದು ದೂರ ಉಳಿಯಿತು,ಭ್ರಷ್ಟ ವಿಧಾನದಲ್ಲಿ ತಾವು ಸಾಧಿಸಿದ ’ಯಶಸ್ಸ’ನ್ನೇ ಭುಜಕೀರ್ತಿಯಂತೆ ಭಾವಿಸಿರುವ ಖೂಳರ ಸಂಖ್ಯೆ ಎಲ್ಲ ಕ್ಷೇತ್ರಗಳಲ್ಲಿ ಹೆಚ್ಚುತ್ತಿರುವ ವೇಗ ನೋಡಿದರೆ ಗಾಬರಿಯಾಗುತ್ತದೆ.
    ನಟರಾಜ್ ರ ಈ ಬರಹ ನಮ್ಮ ಸಮಾಜದಲ್ಲಿ ಚಿಂತನೆ ಹುಡುಕಾಟಗಳ ಹೊಸ ಧೃವೀಕರಣವೊಂದಕ್ಕೆ ನಾಂದಿಯಾದರೆ ಒಳ್ಳೆಯದು

  5. ಎಚ್. ಸುಂದರ ರಾವ್

    ಪತ್ರಕರ್ತರ, ಟಿವಿಯವರ ಭಾಷೆಯಲ್ಲಿ “ನಾವು ಅದನ್ನು ವರದಿ ಮಾಡಿದ್ದೆವು” ಎನ್ನುವುದಕ್ಕೆ “ನಾವು ಅದನ್ನು ಸ್ಟೋರಿ ಮಾಡಿದ್ದೆವು” ಎನ್ನುವುದನ್ನು ಕೇಳಿದ್ದೇನೆ. ಇರುವುದಕ್ಕೆ ತಲೆ, ಕಾಲು, ಬಾಲ ಸೇರಿಸಿ ಕಥೆ ಮಾಡಿದರೇ ಅದು ಸುದ್ದಿಯಾಗುವುದು.

  6. Prem Shekhar

    ತುಂಬಾ ಅರ್ಥಪೂರ್ಣ ಲೇಖನ. ಹೌದು, ಈ ಬಗ್ಗೆ ನಾನೂ ಸಾಕಷ್ಟು ಯೋಚಿಸಿದ್ದೇನೆ. ಸಾಹಿತ್ಯ ಕ್ಷೇತ್ರದಲ್ಲಿನ ಉತ್ಪಾದಿತ ಸುಳ್ಳುಗಳು, ತುಂಬಾ ’ತಿಳಿದವರು’ ಇದನ್ನು ಉತ್ಪಾದಿಸುತ್ತಿರುವುದು ಸಾಹಿತ್ಯದ ಗತಿಯನ್ನೇ ಬದಲಾಯಿಸಿಬಿಟ್ಟಿದೆ. ಇದನ್ನು ಸರಿದಾರಿಗೆ ತರಲು ಸಾಧ್ಯವೇ? ಗೊತ್ತಿಲ್ಲ. ಬೇಸರವಾಗುತ್ತಿದೆ.

  7. natraj Honnavalli

    An excellent analysis.

  8. Mohan V Kollegal

    ತುಂಬಾ ಸೂಕ್ತ ಲೇಖನ… ಮಾಧ್ಯಮದವರ ಚಟುವಟಿಕೆಗಳನ್ನು ತುಂಬಾ ಸೂಕ್ಷ್ಮವಾಗಿ ಗಮನಿಸಿ ಬರೆದಿದ್ದೀರಿ…

    ವಿಮರ್ಶೆ ಇಲ್ಲದ, ಕೇವಲ ಟಿ.ಆರ್.ಪಿಗೋಸ್ಕರ ಏನು ಬೇಕಾದರೂ ಮಾಡುವ ಹಂತದಲ್ಲಿ ಇಂದಿನ ಮಾಧ್ಯಮದವರಿದ್ದಾರೆ. ಒಬ್ಬ ನೀಚ ಸ್ವಾಮಿಯನ್ನು ಕರ್ನಾಟಕಕ್ಕೇ ಪರಿಚಯಿಸಿ ತಮ್ಮ ಬುಡಕ್ಕೇ ಬಂದಾಗ ಪೇಟ ತೆಗೆಸುವ ನಾಟಕವಾಡುತ್ತಾರೆ. ಸಿಕ್ಕ ಸಿಕ್ಕವರನ್ನೆಲ್ಲಾ ಕರೆದು ಕೂರಿಸಿಕೊಂಡು ಅವರು ಹೇಳಿದ್ದೇ ಸತ್ಯವೆಂದು ನಂಬಿಕೊಂಡು ಬ್ರೇಕಿಂಗ್ ನ್ಯೂಸ್ ಮಾಡುತ್ತಾರೆ. ಬಂದು ಕುಳಿತ ಮಹಾಶಯರು ಒದರಿದ ಘಟನೆಗಳನ್ನೆಲ್ಲಾ ಯಾವುದೋ ‘ಮಾಯಾಕನ್ನಡಿ’ಯಲ್ಲಿ ನೋಡಿ ಸಾಕ್ಷೀಕರಿಸಿಕೊಂಡು ವರದಿ ಮಾಡಿದಂತೆ ಮಾಡುತ್ತಾರೆ. ವ್ಯಂಗ್ಯ ಪ್ರಶ್ನೆಗಳ ಮೂಲಕ ನೊಂದ ಹೃದಯಗಳನ್ನು ಚುಚ್ಚುತ್ತಾರೆ. ವರದಿಗಾರರಂತೂ ಹೊಟ್ಟೆಕಿಚ್ಚು ಹೆಚ್ಚಾದ, ಆಡಿಕೊಳ್ಳಲೇಬೇಕು ಎಂಬ ವಿಕೃತ ಮನಸ್ಥಿತಿ ಹೊತ್ತವರಂತೆ ಪ್ರಶ್ನೆಗಳನ್ನು ಕೇಳುತ್ತಾರೆ. ಕೋರ್ಟ್ ಅಂಗಳದಲ್ಲಿ ಅರ್ಧಬೆಂದನ್ನದಂತೆ ಅಲ್ಪ ಸ್ವಲ್ಪ ಉಸಿರಾಡಿ ಜೀವ ಪಡೆದುಕೊಳ್ಳುವ ಹಂತದಲ್ಲಿರುವ ವಿಚಾರಗಳನ್ನೆಲ್ಲಾ ಟೀವಿ ಸ್ಟುಡಿಯೋದೊಳಗೆ ಎಳೆದುತಂದು ತಮಗೆ ಬೇಕಾದಂತೆ ವರದಿ ಮಾಡಿಕೊಳ್ಳುತ್ತಾರೆ. ಅಲ್ಲೆಲ್ಲೋ ಗಲ್ಲಿಯಲ್ಲಿ ನಡೆಯುವ ಗಂಡ ಹೆಂಡತಿ ಜಗಳವನ್ನು ಲೈವ್ ನಲ್ಲಿ ತೋರಿಸುವುದಲ್ಲದೇ, ಅದ್ಯಾವುದೋ ಎಪಿಸೋಡ್ ಮಾಡುತ್ತಾರೆ, ‘ಈಗ ನಮ್ಮ ಪ್ರತಿನಿಧಿಯಿಂದ ಹೆಚ್ಚಿನ ಮಾಹಿತಿ’ ಎಂದು ಮತ್ತೂ ಕೊರೆಸುತ್ತಾರೆ, ಹಂಗಿಸುತ್ತಾರೆ. ಯಾರೇ ಆಗಲಿ ಗುದ್ದಾಡುವಾಗ, ಬಡಿದಾಡುವಾಗ ಮೊದಲು ಜಗಳ ಬಿಡಿಸಬೇಕೆಂಬ ಪಕ್ವತೆಯಿಲ್ಲದವರು ಮತ್ತೆ ಅದನ್ನು ‘ತಲೆ ಹರಟೆ’, ‘ನೀವು ಹೇಳಿದ್ದು, ನಾವು ಕೇಳಿದ್ದು’ ಎಂಬ ವಿಕೃತ ಕಾರ್ಯಕ್ರಮದೊಳಗಿಟ್ಟು ಮಾನ ಹರಾಜಿಗಿಡುತ್ತಾರೆ. ಆ ಘಟನೆಗೆ ಸಾಕ್ಷಿಯಾದ ವ್ಯಕ್ತಿಗಳು ಬೀದಿಯಲ್ಲಿ ಮುಖವೆತ್ತು ನಡೆಯದಂತೆ ಮಾಡಿಬಿಡುತ್ತಾರೆ. ಇನ್ನೊಂದು ಹೆಣ್ಣು ಮಗಳ ಚಿತ್ರ ಪ್ರಕಟಿಸಿ, ಮರ್ಯಾದೆ ಹರಾಜಿಗಿಡುವಾಗ ತಮ್ಮ ಮನೆಯ ಹೆಣ್ಣು ಮಕ್ಕಳು, ಅಕ್ಕ ತಂಗಿಯರು ನೆನಪಾಗದೇ ಇರುವುದು ವಿಪರ್ಯಾಸ.ಮೂಢನಂಬಿಕೆ ವಿರುದ್ಧ ನಾವಿದ್ದೇವೆ ಎಂದು ಬೊಗಳುವವರು ಜಾಹಿರಾತು ತುಂಬಾ ಆ ಸ್ವಾಮೀಜಿ, ಈ ಸ್ವಾಮೀಜಿ ಎಂದು ಕಾಣಿಸುವುದು ತಮ್ಮ ಮನೆಯನ್ನೇ ವೇಶ್ಯಾಗಾರ ಮಾಡಿಕೊಂಡಂತೆ. ಆ ದೇವಸ್ಥಾನದಲ್ಲಿ ಪೂಜೆ ಮಾಡಿಸಿ, ಆ ವ್ರತ ಮಾಡಿ, ಈ ಮಡಿಯಲ್ಲಿರಿ, ಬಲಗಡೆಯಿಂದ ಮೇಲೇಳಿ, ಇಂದೇ ಪ್ರಳಯವಾಗುತ್ತದೆ, ನಾಳೆ ಕಾಳಿ ಬರಲಿದ್ದಾಳೆ, ಲಕ್ಷ್ಮಿಯನ್ನು ಒಲಿಸಿಕೊಳ್ಳುವುದು ಹೇಗೆ ಈ ರೀತಿಯ ಹುಚ್ಚು ವಿಚಾರಗಳ ಮೂಲಕ ಲಗ್ಗೆ ಇಡುವ ಸ್ವಾಮೀಜಿಗಳನ್ನು ಕ್ಯಾಮರಾ ಮುಂದೆ ಕೂರಿಸಿ ಒಂದು ಘಂಟೆ ಕಾರ್ಯಕ್ರಮಕ್ಕೆ ಬಿಟ್ಟುಕೊಡುವುದು ‘ಉತ್ತಮ ಸಮಾಜವನ್ನು ನೆಲ ಕಚ್ಚಿಸಿ ಒಂದಷ್ಟು ದುಡ್ಡು ಮಾಡಿ ತಮ್ಮ ಮಕ್ಕಳು,ಮೊಮ್ಮಕ್ಕಳಿಗೆ ಪಾಪದ ಗಂಟನ್ನು ಬಿಟ್ಟು ಹೋಗುವ ಹುನ್ನಾರ. ಇವೇ ವಿಚಾರಗಳ ವಿಚಾರವಾಗಿ ಮತ್ತೆ ಚಾನೆಲ್ಲು ಚಾನೆಲ್ಲುಗಳೇ ಗುದ್ದಾಡಿಕೊಳ್ಳುತ್ತವೆ. ಕೊನೆಗೆ ಪ್ರೇಕ್ಷಕನಿಗೆ ಈ ಬಾಲಿಶ, ಅತಿಯಾಸೆಯ, ವಿಮರ್ಶೆ ಮಾಡಲು ಬರದ ವರದಿಗಾರರಿಂದ ಸತ್ಯ ಯಾವುದು ತಿಳಿಯದೇ, ಈ ವಿಚಾರ ಯಾವುದೇ ಕಾರಣಕ್ಕೂ ಇತ್ಯರ್ಥವಾಗುವುದಿಲ್ಲವೆಂಬುದು ತಿಳಿಯುತ್ತದೆ. ಮಾಧ್ಯಮದವರಿಗೆ ಕಡಿವಾಣ ಹಾಕುವ ಕಾಲ ದೂರವಿಲ್ಲವೆಂದೆನಿಸುತ್ತದೆ…

  9. Chandrashekhar Mandekolu

    ಒಳ್ಳೆಯ ಲೇಖನ

  10. Shekhar

    ಬ್ರೇಕಿಂಗ್ ನ್ಯೂಸ್ ಕೊಡುವ ಭರದಲ್ಲಿ ನಮ್ಮ ಮಾದ್ಧ್ಯಮಗಳು ಸಮಾಜದ ಸ್ವಾಸ್ಥವನ್ನೇ ಬ್ರೇಕ್ ಮಾಡುತ್ತಿವೆ. ಈ ಮಾಧ್ಯಮಗಳ ಪತ್ರಕರ್ತರು ತಮ್ಮ ಕೆಲಸದ ವೈಖರಿಯ ಸ್ವ-ವಿಮರ್ಶೆ ಮಾಡಿಕೊಳ್ಳಲಿ. ಬರೀ ತಮ್ಮ ಮಾಲಕರ ಹಿಡನ್ ಅಜೆಂಡಾದಂತೆ ನಡೆಯದೇ, ತಮ್ಮ ಪತ್ರಿಕಾ ಧರ್ಮವನ್ನು ಪಾಲಿಸುವಂತಾಗಬೇಕು. ತಮ್ಮ ಸಾಮಾಜಿಕ ಜವಾಬ್ದಾರಿಯನ್ನು ಮರೆಯಬಾರದು.

  11. natarajhuliyar

    I am so happy that there are so many likeminded people around who take the same moral position as I do.Thanks Avadhi for such a solidarity.

  12. vasanth

    sir,

    Very thought provoking and your article lucidly depicts the moral degradation of visual media.

  13. BHAGYALAKSHMI B V

    ಸರ್ ತಮ್ಮ ಲೇಖನ ನಮ್ಮೆಲ್ಲೆರ ಮನಸುಗಳ ಅಸಹ್ಯಗಳ ಪ್ರತಿರೂಪದಂತಿದೆ. ಈ ರೀತಿಯ ಆಲೋಚನೆಗಳು ನಿಧಾನವಾಗಿಯಾದರೂ ಒಂದು ಪ್ರತಿರೋಧದ ಅಲೆಯನ್ನು ಎಬ್ಬಿಸಲು ಸಾಧ್ಯ ಎಂದೆನಿಸುತ್ತದೆ. ಒಳ್ಳೆಯ ಲೇಖನ ಅವಧಿಗೂ ಧನ್ಯವಾದಗಳು

  14. mahipalreddy munnur

    exlent articl

Trackbacks/Pingbacks

  1. ಕೆ ವಿ ತಿರುಮಲೇಶ್ ಮತ್ತು ಅಶೋಕ್ ಶೆಟ್ಟರ್ ಬರೀತಾರೆ.. « Avadhi / ಅವಧಿ - [...] ಕೊಂಡಿ ಇಲ್ಲಿದೆ).  ಅದಕ್ಕೆ ಬಂದ ಪ್ರತಿಕ್ರಿಯೆಗಳಲ್ಲಿ [...]

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading