ನಂಬಿ ಕರೆದರೆ..

ಡಾ. ದಾಕ್ಷಾಯಣಿ. ಯಡಹಳ್ಳಿ

ನನ್ನ ತಂದೆಗೆ ರುದ್ರಪ್ಪ ಎಂಬ ಒಬ್ಬನೆ ತಮ್ಮ. ಅಕ್ಕ ತಂಗಿಯರಿರಲಿಲ್ಲ. ಆತ ಎಷ್ಟು ಕಲಿತಿದ್ದನೊ ಏನೊ, ಓದು ಬರಹ ಗೊತ್ತಿದ್ದವು. ಓದುವ ರುಚಿ ಇರಲಿಲ್ಲ. ಆತ ಪುಸ್ತಕ ಹಿಡಿದು ಓದಿದ್ದು ನಾವೆಂದೂ ನೋಡಲಿಲ್ಲ. ಅಣ್ಣ ತಮ್ಮಂದಿರ ಸ್ವಭಾವದಲ್ಲಿ ಬಹಳಷ್ಟು ಅಂತರವಿತ್ತು.  ನನ್ನ ತಂದೆಗೆ 24 ತಾಸೂ ದುಡಿಯುವ ಹುಮ್ಮಸ್ಸು. ಕಾಕಾನಿಗೆ  ದೈಹಿಕ ಶ್ರಮ ಅಷ್ಟಕ್ಕಷ್ಟೆ.  ತನ್ನ ತೋಟದಲ್ಲಿ ಎಷ್ಟು ಕೆಲಸ ಮಾಡುತ್ತಿದ್ದನೊ ಅಷ್ಟೆ.

ಹೆಚ್ಚು ದುಡಿದು ಗೊತ್ತಿಲ್ಲ  ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಎಂಬ ಮಹತ್ವಾಕಾಂಕ್ಷೆ ಇರಲಿಲ್ಲ. ತಂದೆಯ ಹಾಗೆ ಆತನೂ ಎತ್ತರ ಹಾಗೂ ಗೌರವರ್ಣದವ. ಬಹಳಷ್ಟು ಮೆತ್ತಗಿನ ಸ್ವಭಾವ ಯಾರೊಂದಿಗೂ ತಂಟೆ ತಕರಾರು ಜಗಳ ಮಾಡಿ ಗೊತ್ತಿಲ್ಲ. ಹಳ್ಳಿಯ ಪರಿಸರದಲ್ಲಿ ಹುಟ್ಟಿ ಬೆಳೆದರೂ ಆತನ ಬಾಯಿಂದ ಎಂದೂ ಅಪಶಬ್ದಗಳು ಬರುತ್ತಿರಲಿಲ್ಲ. ನನ್ನ ಅಜ್ಜಿಯ ಬತ್ತಳಿಕೆಯಲ್ಲಿ ಅಂಥ ಶಬ್ದಗಳ ಭಂಡಾರವೇ ಇತ್ತು.

ನಮ್ಮ ಮನೆಗೆ ಬಂದಾಗ ಯಾವಾಗಲೂ ಶಿವಾ, ಶಿವಾ, ಶಿವಾ, ಎನ್ನುತ್ತಲೇ ಇರುತ್ತಿದ್ದ.  ತನ್ನ ತಾಯಿಯ ಸ್ವಭಾವದಿಂದ ತುಂಬ ಭಿನ್ನ. ಆತನ ಹೆಸರು ರುದ್ರಪ್ಪ ಎಂದು ಇದ್ದರೂ ತಂದೆ ಶೆಟ್ಟಿ ಎಂದು ಸಂಬೋಧಿಸುತ್ತಿದ್ದರು. ತಾಯಿ ಶೆಟ್ಟೆಪ್ಪ ಎಂದು ಕರೆಯುತ್ತಿದ್ದಳು. ನನ್ನ ಅಜ್ಜಿಯ ಕೃಪೆಯಿಂದ ಕಾಕಾನ ಹೆಂಡತಿ ಮನೆ ಬಿಟ್ಟು ಹೋದ ಮೇಲೆ ಅತ ಮರುಮದುವೆ ಮಾಡಿಕೊಳ್ಳಲಿಲ್ಲ.

ನಮ್ಮ ಕಷ್ಟದಲ್ಲಿ ನಮ್ಮ ಕಡೆಗೆ ಬಾರದೆ ಇರಲು ಅಜ್ಜಿಯೇ ಕಾರಣಳಾಗಿದ್ದಳು. ಅಜ್ಜಿ ನಮ್ಮ ಮನೆಯಲ್ಲಿ ಇರಲು ಬಂದ ಮೇಲೆ ವಾರಕ್ಕೊಮ್ಮೆ ಕಾಕಾ ನಮ್ಮ ಮನೆಗೆ ಬರುತ್ತಿದ್ದ. ಬಂದಾಗೊಮ್ಮೆ ನಮಗಾಗಿ ತೋಟದ ಹಣ್ಣುಗಳನ್ನು ತರುತ್ತಿದ್ದ. ತನ್ನ ಹೊಲದಲ್ಲಿ ಬೆಳೆದ ಜೋಳವನ್ನು ನಮ್ಮ ಮನೆಯಲ್ಲಿಯೇ ಇರಿಸುತ್ತಿದ್ದ.

ಬೆಳಗಿನ ಹತ್ತು ಗಂಟೆಗೆ ಮನೆಗೆ ಬಂದರೆ ತಾಯಿ ಅತನ ಜೋಳದ ಚೀಲವನ್ನು ಬಿಚ್ಚಿ ಅದರಿಂದ ಜೋಳವನ್ನು ತೆಗೆದುಕೊಂಡು ಸ್ವಚ್ಛಗೊಳಿಸಿ ಕೊಡುತ್ತಿದ್ದಳು. ಇದನ್ನು ಕೆಲವು ಸಾರೆ ಅಜ್ಜಿ ಅಥವಾ ನಾವು ಮಾಡುತ್ತಿದ್ದೆವು. ಗಿರಣಿಗೆ ಒಯ್ದು ಹಿಟ್ಟುಮಾಡಿಸಿಕೊಂಡು ಬರುತ್ತಿದ್ದ. ನಂತರ ಊಟ ಮಾಡಿ ಚಿನ್ನಾಪೂರಿಗೆ ಹೋಗುತ್ತಿದ್ದ. ಕೆಲಸ ಮಾಡಲು ತಾಯಿಗೆ ಎಂದೂ ಬೇಸರವಾಗುತ್ತಿರಲಿಲ್ಲ. ಸದಾ ಕೆಲಸಮಾಡಿಕೊಂಡಿರುವದೇ ಆಕೆಯ ಜೀವನವಾಗಿತ್ತು.

ಚಿನ್ನಾಪೂರಿನಲ್ಲಿ ಕಾಕಾ ಸ್ವತಃ ರೊಟ್ಟಿ ಮಾಡಿಕೊಂಡು ಉಣ್ಣುತ್ತಿದ್ದ. ಬೇಸರವಾದಾಗ ಬಂದು ನಮ್ಮ ಮನೆಯಲ್ಲಿ ಎಂಟು ದಿನ ಇರುತ್ತಿದ್ದ. ಬರಬರುತ್ತ ಆತನಿಗೆ ಒಂಟಿ ಜೀವನ ಬೇಸರವಾಯಿತೇನೊ ನಮ್ಮ ಮನೆಯಲ್ಲಿಯೇ ಇರಲು ಪ್ರಾರಂಭಿಸಿದ. ಕಾಕಾನ ಊಟ ಗಟ್ಟಿಯಾಗಿತ್ತು. ದಿನಕ್ಕೆ ಎರಡೇ ಊಟ. ಮಧ್ಯದಲ್ಲಿ ತಿಂಡಿ ತೀರ್ಥ ಏನೂ ಇಲ್ಲ.

ರೊಟ್ಟಿ ಮಾಡಲು ನಾವು ಬೇಸರಿಸಿಕೊಂಡರೆ ಸಂಕ್ಟಿ ಮಾಡ್ರೆವಾ, ಇಲಾ ಮುದ್ದೀ ಮಾಡ್ರಿ ನಾ ಉಂತೀನಿ ರೊಟ್ಟೀನ ಬೇಕಂತೇನಿಲ್ಲ ಅನ್ನುತ್ತಿದ್ದ. ನಮಗೆಂದೂ ಬೈದು ಗದ್ದರಿಸಿ ತನ್ನ ಹಿರಿಯತನದ ಅಧಿಕಾರ ತೋರಿದವನಲ್ಲ. ಅಜ್ಜಿಯ ಹಾಗೆ ಹೊಡೆಯುವದು ಅಪಶಬ್ದಗಳನ್ನು ಕೇಳಿಸುವದು ಆತನ ಸ್ವಭಾವವಾಗಿರಲಿಲ್ಲ.

ಆತನಿಗೆ ವಾಸಿಯಾಗದ ಒಂದು ಕಾಯಿಲೆ ಇತ್ತು. ಬಹಳ ವರ್ಷಗಳಿಂದ ಯಾವ ಮದ್ದಿಗೂ ಮಣಿದಿರಲಿಲ್ಲ. ಆ ಕಾಯಿಲೆಯ ನಿಯಂತ್ರಣಕ್ಕೆಂದು ಊಟದಲ್ಲಿಯೇ ವ್ಯತ್ಯಾಸವನ್ನು ಮಾಡಿಕೊಂಡಿದ್ದ. ಆತನ ಊಟವೆಂದರೆ ರೊಟ್ಟಿ, ಬೇಳೆ, ಬೇಳೆಕಾಳುಗಳು. ಹಸಿ ಸೊಪ್ಪು, ಈರುಳ್ಳಿ, ಮೂಲಂಗಿ ಗಜ್ಜರೆ ಸೌತೆಕಾಯಿ ಇತ್ಯಾದಿ. ಉಪ್ಪು,ಖಾರ,ಹುಳಿ ಮಸಾಲೆ ಇವೆಲ್ಲ ಆತನಿಗೆ ವಜ್ರ್ಯವಾಗಿದ್ದವು. ಸಿಹಿ ಊಟವನ್ನು ಪ್ರೀತಿಯಿಂದ ತಿನ್ನುತ್ತಿದ್ದ.

ಉಪ್ಪು ಖಾರ, ಒಮ್ಮೆ, ತಿಂದರೂ ಸಹಿತ ಆತನ ಅಂಗೈ ಹಾಗೂ ಅಂಗಾಲುಗಳು ಸೀಳಿ ತುಂಬ ನೋವನ್ನುಂಟುಮಾಡುತ್ತಿದ್ದವು. ಅದಕ್ಕಾಗಿ ಆತ ಸಪ್ಪೆಯಾದ ಆಹಾರವನ್ನು ಸೇವಿಸುತ್ತಿದ್ದ. ಊಟಕ್ಕಾಗಿ ಯಾವ ತಕರಾರುಗಳನ್ನೂ ಮಾಡುತ್ತಿರಲಿಲ್ಲ. ನಮಗೆ ತಿಳುವಳಿಕೆ ಬಂದಾಗಿನಿಂದಲೂ ಕಾಕಾ ಇದೇ ರೀತಿ ಉಣ್ಣುತ್ತಿದ್ದುದನ್ನು ನಾವು ನೋಡಿದ್ದೆವು.

ನಮ್ಮ ಮನೆಯಲ್ಲಿ ಇರುತ್ತಾ ಇರುತ್ತಾ ಆತನಿಗೆ ಏನೆನಿಸಿತೊ ಏನೊ ಊರಲ್ಲಿರುವ ವಿಜಯಮಹಾಂತೇಶ್ವರ ಮಠಕ್ಕೆ ಹೋದ. ಪೀಠಾಧಿಪತಿಗಳಾದ ಶ್ರೀ.ಮ.ನಿ.ಪ್ರ.ಮಹಾಂತಪ್ಪಗಳ ಪಾದಕ್ಕೆ ಅಡ್ಡಬಿದ್ದ. ಆತನ ಕುಶಲೋಪರಿಯನ್ನು ಶ್ರೀಗಳು ವಿಚಾರಿಸಿದರು.ತನ್ನ ಆಸ್ತಿಯನ್ನು ಮಠಕ್ಕೆ ದಾನ ಕೊಟ್ಟು ತಾನು ಮಠದ ಸೇವೆಯಲ್ಲಿ ಇರುತ್ತೇನೆಂದು ವಿನಂತಿಸಿಕೊಂಡ.

ಆತನಿಗೆ ಒಬ್ಬ ಅಣ್ಣ ಇದ್ದು ಸಂಸಾರ ಹಾಗೂ ಮಕ್ಕಳು ಇರುವದನ್ನು ತಿಳಿದುಕೊಂಡ ಶ್ರೀಗಳು ಆಸ್ತಿಯನ್ನು ಸಂಬಂಧಿಕರಿಗೆ ಕೊಟ್ಟು ಮಠದಲ್ಲಿ ಸೇವೆ ಮಾಡಿಕೊಂಡು ಇರುವಂತೆ ಅಪ್ಪಣೆ ಕೊಡಿಸಿದರು. ಆತನ ಜೀವನ ವಿಧಾನ ಈಗ ಬದಲಾಯಿತು. ಕೆಲವು ದಿನ ಮಠದಲ್ಲಿ ಉಳಿದ. ಮನೆಗೆ ಬಂದು ಕೆಲವು ದಿನ ಉಳಿಯುತ್ತಿದ್ದ.

ನಮ್ಮ ಊರಿನ ಪೂರ್ವ ದಿಸೆಗೆ ಹಿರೇ ಹಳ್ಳವೆಂದು ಇದೆ. ಹಳ್ಳದ ಆಚೆ ದಂಡೆಗೆ, ಪೂರ್ವ ಮತ್ತು ದಕ್ಷಿಣ ದಿಕ್ಕುಗಳ ನಡುವೆ ವಿಜಯಮಹಾಂತೇಶ್ವರ ಗದ್ದುಗೆ ಇದೆ. ಅಲ್ಲಿ ವಿಸ್ತಾರವಾದ ಪ್ರಾಂಗಣ ಅದರ ಸುತ್ತಲೂ ಗೋಡೆ ಹಾಗೂ ಅನೇಕ ಗಿಡಗಳಿವೆ. ಗದ್ದುಗೆಯ ಹಿಂದೆ ವಿಶಾಲವಾದ ತೋಟ, ಅಲ್ಲಿ ಸಾಕಷ್ಟು ತೆಂಗಿನ ಮರಗಳು ಹೂ ಹಣ್ಣಿನ ಗಿಡಗಳು ಇದ್ದವು ಈಗ ತೋಟವಿಲ್ಲ. ಒಣ ಭೂಮಿ ಕಾಣುತ್ತದೆ. ಕಾಕಾ ಗದ್ದುಗೆಯ ಸೇವೆ ಮಾಡುತ್ತೇನೆಂದು ಅಲ್ಲಿಯೇ ಉಳಿದ. ಆಗ ಆತನ ಜೊತೆಗಿದ್ದ ಆಸ್ತಿ ಎಂದರೆ, ಎರಡು ಧೋತರ ಎರಡು ಅಂಗಿ ಹಾಗೂ ಎರಡು ರುಮಾಲು.

ಯಾವಾಗಲೂ ಶ್ವೇತವಸ್ತ್ರಗಳನ್ನೇ ಉಪಯೋಗಿಸುತ್ತಿದ್ದ, ತಂದೆಯೂ ಅಷ್ಟೆ. ತಂದೆ ಗಾಂಧಿ ಟೋಪಿಯನ್ನು ಹಾಕುತ್ತಿದ್ದರೆ ಕಾಕಾ ರುಮಾಲನ್ನು ಸುತ್ತಿಕೊಳ್ಳುತ್ತಿದ್ದ. ಅವರಿಬ್ಬರೂ ಎಂದೂ ಬಣ್ಣದ ಅಂಗಿಗಳನ್ನು ಹಾಕಿಕೊಳ್ಳಲಿಲ್ಲ. ಕಾಕಾ ತನ್ನ ಉಡುಪುಗಳನ್ನು ತಾನೇ ಶುಚಿಮಾಡಿಕೊಳ್ಳುತ್ತಿದ್ದ, ನಮಗೆಂದೂ ಆ ಕೆಲಸ ಹೇಳಲಿಲ್ಲ. ತಂದೆಯೂ ಅಷ್ಟೆ ತನ್ನ ಧೋತಿಯನ್ನು ತಾನೇ ಒಗೆದುಕೊಳ್ಳುವದಿತ್ತು. ವಯಸ್ಸಾದಂತೆ ಮಕ್ಕಳು ಆ ಕೆಲಸವನ್ನು ಮಾಡಲಾರಂಭಿಸಿದರು.

ಗದ್ದುಗೆಯಲ್ಲಿ ಕಾಕಾ ಸುರ್ಯೋದಯಕ್ಕೆ ಮುನ್ನವೇ ಎದ್ದು ತನ್ನ ಸೇವಾಕಾರ್ಯ ಪ್ರಾರಂಭಿಸುತ್ತಿದ್ದ. ಬೆಳಗಿನ 5 ಗಂಟೆಗೆ ಜಾಗಟೆಯ ಧ್ವನಿ ಕೇಳುತ್ತಿತ್ತು. ಹಿತ್ತಾಳೆಯ ದೊಡ್ಡ ಜಾಗಟೆಯ ಮೇಲೆ ಕಟ್ಟಿಗೆಯ ಕೊಡತಿಯಿಂದ ಹೊಡೆಯುವದು ಕಾಕಾನ ನಿತ್ಯದ ಕೆಲಸ. ಬೆಳಗಿನ ಶಾಂತ ವಾತಾವರಣದಲ್ಲಿ ಜಾಗಟೆಯ ಸದ್ದು ಅರ್ಧ ತಾಸಿನವರೆಗೆ ಇಡೀ ಊರಿಗೇ ಕೇಳಿಸುತ್ತಿತ್ತು. ಅಲ್ಲಿಯ ಪ್ರಾಂಗಣವನ್ನು ಚೆನ್ನಾಗಿ ಗುಡಿಸಿ ಶುಚಿಗೊಳಿಸುತ್ತಿದ್ದ.

ತನ್ನ ಪ್ರಾತರ್ವಿಧಿಯನ್ನು ತೀರಿಸಿಕೊಂಡು ಸ್ನಾನ ಮಾಡಿಕೊಂಡು ದೇವರ ಗದ್ದುಗೆಗೆ ಪ್ರದಕ್ಷಿಣೆ ಹಾಕುತ್ತಿದ್ದ.ನಾಲಿಗೆಯ ಮೇಲೆ ಯಾವಾಗಲೂ `ವಿಜಯ ಮಹಾಂತೇಶ ವಿಜಯ ಮಹಾಂತೇಶ ವಿಜಯ ಮಹಾಂತೇಶ’ ಎಂಬ ನಾಮದ ಮಂತ್ರವು  ನಲಿಯುತ್ತಿತ್ತು. ಮಂತ್ರ ಹೇಳುತ್ತಾ ತನ್ನ ದೇಹಕ್ಕೆಲ್ಲ ಅಂಗಾರವನ್ನು ಹಚ್ಚಿಕೊಳ್ಳುತ್ತಿದ್ದ. ದಿನಾಲೂ ಗದ್ದುಗೆಗೆ ಬರುವ ಭಕ್ತರಿರುತ್ತಿದ್ದರು ಅವರನ್ನು ನೋಡುತ್ತಾ ಶರಣು ಬನ್ನಿ ಎನ್ನುವವ.

ಊಟದ ಸಮಯಕ್ಕೆ ಊರಿನಲ್ಲಿರುವ ಮಠಕ್ಕೆ ಬಂದು ಪ್ರಸಾದ ನಿಲಯದಲ್ಲಿ ಪ್ರಸಾದ ಸ್ವೀಕರಿಸಿ ಗದ್ದುಗೆಗೆ ಹಿಂತಿರುಗುತ್ತಿದ್ದ. ಸಂಜೆಗೆ ಮತ್ತೆ ಕಸಗೂಡಿಸುವದು, ಬರುವವರಿಗೆ ಶರಣು ಎನ್ನುವದು, ಮಂತ್ರದ ಪಠಣ,  ಪ್ರಸಾದದ ಸಮಯಕ್ಕೆ ಮಠಕ್ಕೆ ಬಂದು ಪ್ರಸಾದ ಸ್ವೀಕಾರ, ಈ ಪ್ರಕಾರ ಆತನ ದಿನಚರಿ ಪ್ರಾರಂಭವಾಯಿತು.

ಪ್ರಸಾದ ನಿಲಯದಲ್ಲಿ ಉಪ್ಪು ಖಾರ ಹುಳಿ ಮಸಾಲೆ ಎಲ್ಲ ಹಾಕಿದ ಪದಾರ್ಥಗಳಿರುತ್ತಿದ್ದವು. ಅದೆಲ್ಲವನ್ನೂ ಆತ ವಿಜಯಮಹಾಂತೇಶ ಎನ್ನುವ ನಾಮಸ್ಮರಣೆಯೊಂದಿಗೆ ಸ್ವೀಕರಿಸುತ್ತಿದ್ದ. ಈ ಆಹಾರವನ್ನು ಸೇವಿಸಿದರೂ ಕಾಕಾನ ಕಾಯಿಲೆ ಕಾಣಿಸಿಕೊಳ್ಳಲಿಲ್ಲ. ಪ್ರಸಾದದ ಮಹಿಮೆಯೊ ಮಂತ್ರದ ಮಹಿಮೆಯೊ ಎಂದು ನಾವು ಅಚ್ಚರಿಪಟ್ಟುಕೊಂಡೆವು.

ವಿಜಯಮಹಾಂತೇಶ ಎಂಬ ಮಂತ್ರದಲ್ಲಿರುವ ಶಕ್ತಿ, ಮಠದ ಪ್ರಸಾದದಲ್ಲಿರುವ ಶಕ್ತಿ ಎರಡೂ ಕಾಕಾನ ಕಾಯಿಲೆಯನ್ನು ವಾಸಿಮಾಡಿದ್ದವು. ಆಗೀಗ ನೆಗಡಿ ಕೆಮ್ಮು  ಜ್ವರ ಇಂತಹ ಚೂರು ಪಾರು ಕಾಯಿಲೆಗಳಿಗೆ ಡಾ,ಸಂಗಣ್ಣ ಮಾಟೂರ (ಒ.S.)ಎನ್ನುವ ವೈದ್ಯರು  ಪುಕ್ಕಟೆ ಚಿಕಿತ್ಸೆ ಕೊಡುತ್ತಿದ್ದರು. ಕೃಪೆ ಮಠದ ಶ್ರೀಗಳದ್ದು.  ತನ್ನ ಚಿಕಿತ್ಸೆಗೆ ಹಣ ಕೇಳಿಕೊಂಡು ನಮ್ಮ ಮನೆಗೆ ಆತ ಎಂದೂ ಬರಲಿಲ್ಲ.

ಕಾಕಾ ಈಗ ಪೂರ್ಣವಾಗಿ ಮಠದ ಸೇವಕನಾಗಿ ಉಳಿದ. ಮನೆಗೆ ಬರುತಿದ್ದನಾದರೂ ಊಟ ಮಾಡುತ್ತಿರಲಿಲ್ಲ. ಗದ್ದುಗೆಗೆ ಹೋಗುವವರಿಗೆ ಶರಣು ಬನ್ನಿ ಎಂದು ಹೇಳುತ್ತ ಎಲ್ಲರ ಪ್ರಿತಿಗೆ ಪಾತ್ರನಾದ. ಕೆಲವರು ಆತನಿಗೆ ಹಣ ಕೊಡುತ್ತಿದ್ದರು. ದೇವರ ಹುಂಡಿಗೆ ಹಣ ಹಾಕುವಂತೆ ಈತನ ಕೈಗೂ ಹಣ ಹಾಕುತ್ತಿದ್ದರು ಬೇಡವೆಂದರೂ ಪ್ರೀತಿಯಿಂದ ಕೊಡುತ್ತೇವೆ ತೆಗೆದುಕೊ ಎನ್ನುವರು. ವಿಜಯ ಮಹಾಂತೇಶ ಎಂಬ ನಾಮಸ್ಮರಣೆಯಿಂದಲೆ ಹಣ ಸ್ವೀಕರಿಸುತ್ತಿದ್ದ.

ನನ್ನ ತಂದೆಯ ಹಾಗೆ ಕಾಕಾನಿಗೂ ಯಾವ ಚಟಗಳಿರಲಿಲ್ಲ. ಶ್ರೀಮಠದ ಗದ್ದುಗೆಯಲ್ಲಿ ಸೇವಕನಾಗಿ ನಿಲ್ಲುವ ಮೊದಲೂ ಕೂಡ. ಹೀಗಾಗಿ ಭಕ್ತರು ಕೊಟ್ಟ ಹಣವನ್ನು ಗಂಟುಹಾಕಿ ಹಾಗೆಯೇ ಇಟ್ಟುಕೊಂಡಿರುತ್ತಿದ್ದ. ನನ್ನ ಹಿರಿಯ ಅಕ್ಕ ಊರಿಗೆ ಬಂದಾಗ  ಗದ್ದುಗೆಯ ದರುಷನಕ್ಕೆಂದು ನಾವು ಅಲ್ಲಿಗೆ ಹೋದಾಗ, ಆಕೆಗೆ ಆ ಹಣವನ್ನು ದೇವರ ಪ್ರಸಾದವೆಂದು, ಬೇಡ ಅನ್ನಬಾರದೆಂದು ಹೇಳಿ ಕೊಡುತ್ತಿದ್ದ.

ಈ ಹಣದಿಂದ ಅಕ್ಕನಿಗೆ ಬೆಳ್ಳಿಯ ಕರಡಿಗೆಯೊಂದನ್ನು ಕೊಡಿಸಿದ್ದ. ಹಿರಿಯ ಅಕ್ಕನಿಗೆ ಮಾತ್ರ ಹಣ ಕೊಡುತ್ತಿದ್ದ, ಉಳಿದ ನಾವು ಮೂವರಿಗೂ ಕೊಡುತ್ತಿರಲಿಲ್ಲ. ಕೊಟ್ಟರೂ ನಾವು ತೆಗೆದುಕೊಳ್ಳುತ್ತಿರಲಿಲ್ಲ.  ನಾವು ಅಕ್ಕ ತಂಗಿಯರ  ಹೆಸರನ್ನು ಆತ ಸಾದಾ ರೀತಿಯಲ್ಲಿ ಕರೆದುದಿಲ್ಲ. ನಿಂಗಮ್ಮ, ಗಿರಿಜಮ್ಮ, ದಾಕ್ಷಾಣೆಮ್ಮ ಹಾಗೂ ವಿಜಯಮ್ಮ ಎಂದೇ ಸಂಬೋಧಿಸುತ್ತಿದ್ದ.

ಮಠದ ಭಕ್ತರನ್ನು ಶರಣು ಬನ್ನಿ ಎಂದು ಕರೆಯುತ್ತಿದ್ದ ಆತನಿಗೆ ಪ್ರತಿಯಾಗಿ ಶರಣು ಎನ್ನುತ್ತ ಅವರು ಕ್ರಮೇಣ ಆತನನ್ನು ಶರಣ ಎಂದೇ ಕರೆಯತೊಡಗಿದರು. ಕಾಕಾನ ಹೆಸರು ಯಾರಿಗೂ ಗೊತ್ತಿರಲಿಲ್ಲವಾದರೂ, ನವಭಾರತ ಪ್ರೆಸ್ಸಿನ ವಿರಭದ್ರಪ್ಪನ ತಮ್ಮ ಎಂದು ಹೆಚ್ಚಿನವರು ತಿಳಿದಿದ್ದರು.

ಕಾಕಾನಿಗೆ 4 ಎಕರೆ ಹೊಲ ಹಾಗೂ 1 ಎಕರೆ ತೋಟವಿತ್ತು. ಮಠದ ಶ್ರೀಗಳು ಆಸ್ತಿಯನ್ನು ನಿನ್ನ ಸಂಬಂಧಿಕರಿಗೆ ಕೊಡು ಎಂದು ಹೇಳಿದ್ದರಿಂದ ಮನೆಗೆ ಬಂದು ತನ್ನ ವಿಚಾರವನ್ನು ತಿಳಿಸಿದ. ತಂದೆ ಒಪ್ಪಿಕೊಂಡರು, ತಾಯಿಗೆ ಇದು ಒಪ್ಪಿಗೆಯಾಗಲಿಲ್ಲ. ತಾಯಿ ಕಾಕಾನಿಗೆ  `ನೀನು ಜೀವಂತ ಇರುವವರೆಗೆ ಆಸ್ತಿ ನಿನ್ನ ಹೆಸರಿನಲ್ಲಿಯೇ ಇರಲಿ  ಯಾರಿಗೂ ಕೊಡುವದು ಬೇಡ,ನಿನಗೆ ಹೊಲಕ್ಕೆ ಹೋಗಲು ಸಾಧ್ಯವಾಗದು ಎಂದು ನನಗೆ ಗೊತ್ತು ಅದಕ್ಕಾಗಿ ನೀನು ಈ ವಿಚಾರ ಮಾಡಿರುವೆ, ಅದನ್ನು ಮಾರಿ ಹಣವನ್ನು ನಿನ್ನ ಹೆಸರಲ್ಲಿ ಬ್ಯಾಂಕಿನಲ್ಲಿ ಇಟ್ಟುಕೊ. 

ನನ್ನ ನಂತರ ಇವರಿಗೆ ಎಂದು ಬರೆದಿಡು’ ಎಂದು ತಿಳಿಸಿ ಹೇಳಿದಳು.  ಇದು ತಾಯಿಯ ದೊಡ್ಡ ಗುಣ. ಆಕೆಯ ಮಾತನ್ನು ಆತ ಒಪ್ಪಿಕೊಳ್ಳಲಿಲ್ಲ. ಅಣ್ಣನ ಮಕ್ಕಳಿಗೆ ಕೊಡುತ್ತೇನೆಂದ. ನಿನ್ನ ಅವಸಾನದ ನಂತರ ಎಂದು ಬರೆದಿಡು ಈಗ ಸಧ್ಯಕ್ಕೆ ಬೇಡ  ಎಂದು ಆಕೆ ಎಷ್ಟೇ ಸಮಜಾಯಿಸಿದರೂ ಕಾಕಾ ತನ್ನ ನಿರ್ಣಯವನ್ನು ಬದಲಿಸಲಿಲ್ಲ.

ಕಾಕಾ ತನ್ನ ಹೊಲ ಹಾಗೂ ತೋಟವನ್ನು ಮುಂಬೈಯಲ್ಲಿರುವ ನನ್ನ ಹಿರಿಯ ಅಣ್ಣನ ಹೆಸರಿಗೆ ನೋಂದು ಮಾಡಿದ. ಆದರೆ ಕೆಲ ಸಮಯದ ನಂತರ ನೌಕರಿಯಲ್ಲಿರುವವರ ಹೆಸರಲ್ಲಿ ಹೊಲ ಇರಬಾರದಂತೆ ಎಂದು  ಯಾರೊ ಯಾರಿಗೊ ಸುದ್ದಿಕೊಟ್ಟರು. ಆಗ ಈ ಆಸ್ತಿ ನನ್ನ ಹಿರಿಯ ಅಣ್ಣನಿಂದ ಎರಡನೆಯ ಅಣ್ಣನ ಹೆಸರಿಗೆ ನೋಂದು ಆಯಿತು. ಕಾಕಾ ಇರುವಾಗಲೇ ಈ ಆಸ್ತಿ ಕರಗಿಯೂ ಹೋಯಿತು. ಅದಕ್ಕಾಗಿ ಆತ ಬೇಸರಿಸಿಕೊಳ್ಳಲಿಲ್ಲ. ನೊಂದುಕೊಳ್ಳಲಿಲ್ಲ. ಏನೂ  ಹೇಳಲಿಲ್ಲ. ಈಗಾಗಲೇ  ಅಂಥ ಸ್ಥಿತ ಪ್ರಜ್ಞೆಯನ್ನಾತ ಬೆಳೆಸಿಕೊಂಡಿದ್ದ.

ನನ್ನ ತಂದೆ ತಾಯಿಯ ಜೀವಿತ ಕಾಲದಲ್ಲಿಯೇ ತಂದೆಯ ಹೆಸರಿನಲ್ಲಿದ್ದ ಹೊಲ ಮತ್ತು ಪ್ರೆಸ್ಸ್ ಮಟಾ ಮಾಯವಾದವು. ಕೃಪೆ ನನ್ನ ಎರಡನೆಯ ಅಣ್ಣ ಹಾಗೂ ತಮ್ಮ, ಆರು ದೊಡ್ಡ ಕೊಠಡಿಗಳಿರುವ  ದೊಡ್ಡ ಮನೆ ನಮ್ಮದಿತ್ತು. ಅದರ ಅರ್ಧ ಭಾಗ ಹೋಯಿತು. ಇದರಿಂದ ತಂದೆ ತಾಯಿಗಳು ಬಹಳೇ ನೊಂದುಕೊಂಡರು. ಅವರು ಸಂಸಾರಿಗಳಾಗಿದ್ದರು, ಮಕ್ಕಳ ಮೋಹದಲ್ಲಿ ಸಿಲುಕಿದವರಾಗಿದ್ದರು. ಪುತ್ರ ಮೋಹ ಅವರಿಗೆ ನೋವನ್ನೇ ತಂದುಕೊಟ್ಟಿತು.

ನನ್ನ ತಾಯಿ ಮೃತಳಾದಾಗ, ಮೃತ ಶರೀರಕ್ಕೆ ಉಡಿಸಿದ ಇಲಕಲ್ಲ ರೇಶಿಮೆ ಸೀರೆ ಸಹಿತ,(ಆಕೆಯ ತಮ್ಮ ಶಂಕರಗೌಡನ ಇಚ್ಛೆಯಂತೆ) ದೇಹವನ್ನು ಹೂಳಲಾಗಿತ್ತು.  ಸೀರೆಯ ಆಸೆಗೆ ಯಾರಾದರೂ ಕುಣಿಯನ್ನು ತೆಗೆದಾರು ಎಂಬ ಶಂಕೆಯಿಂದ ಕಾಕಾ ತಿಂಗಳವರೆಗೆ ರಾತ್ರಿಯ ಹೊತ್ತು ಸ್ಮಶಾನಕ್ಕೆ ಹೋಗಿ ಕುಣಿಯನ್ನು ಕಾಯ್ದ. ತಾಯಿಗೆ ಅತ್ತಿಗೆಮ್ಮ ಅನ್ನುತ್ತಿದ್ದ. ತಾಯಿಯ ಮೇಲೆ ಆತನಿಗೆ ಬಹಳ ಗೌರವವಿತ್ತು.

1988 ಅಗಷ್ಟ ತಿಂಗಳಲ್ಲಿ ತಾಯಿಯ ಅಂತ್ಯವಾಯಿತು. 1989ಜುಲೈಯಲ್ಲಿ ಕಾಕಾ ಇಲ್ಲವಾದ. ಆತನ ಕೊನೆ ಬಹಳ ಶಾಂತಿಯುತವಾಗಿತ್ತೆನ್ನಬಹುದು. ಮಠದಲ್ಲಿ ಪ್ರಸಾದ ಸ್ವೀಕರಿಸಲು ಬಂದಾಗ, ಬಿದ್ದು ಕಾಕಾನ ಒಳತೊಡೆಗೆ  ಪೆಟ್ಟಾಯಿತು.  ಎದ್ದೇಳಲು ಸಾಧ್ಯವಿಲ್ಲ. ಮಲಗಿಕೊಂಡೇ ಇರಬೇಕಾಯಿತು. ತಕ್ಷಣ ಮಠದವರು ಮನೆಗೆ ಸುದ್ದಿ ಮುಟ್ಟಿಸಿದರು.

ತಂಗಿ ವಿಜಯಲಕ್ಷ್ಮಿ ಕಾಲೇಜಿನಲ್ಲಿ ನೌಕರಿ ಮಾಡುತ್ತಿದ್ದಳು. ತನ್ನ ಅಣ್ಣ ಮಹಾಂತೇಶನಿಗೆ ಕಾಕಾನ ಸ್ಥಿತಿಯನ್ನು ವಿವರಿಸಿ, ಹೋಗಿ ಕರೆದು ತಾ ಎಂದಳು. ಮಹಾಂತೇಶ ಮಠಕ್ಕೆ ಹೋದ. ಮನೆಗೆ ಹೋಗೋಣವೆಂದೂ ತಾನು, ಕಾಕಾನನ್ನು ಆರೈಕೆ ಮಾಡುವ ಜವಾಬ್ದಾರಿಯನ್ನು ತೆಗೆದುಕೊಳ್ಳುತ್ತೇನೆಂದೂ ಹೇಳಿ ಕಾಕಾನನ್ನು ಕರೆದ. ಕಾಕಾ ಮನೆಗೆ ಬರಲು ಒಪ್ಪಲಿಲ್ಲ.

ಮಹಾಂತೇಶ ಮನೆಯನ್ನು ಹೊಂದಿಕೊಂಡು ಇರಲಿಲ್ಲ. ಕೆಲವು ಸಾರೆ ರಾತ್ರಿ ಮನೆಗೆ ಬರುತ್ತಿರಲಿಲ್ಲ. ಅದರಿಂದಾಗಿ ಕಾಕಾನಿಗೆ ಅವನ ಮೇಲೆ ಭರವಸೆ ಬರಲಿಲ್ಲ. ತನ್ನನ್ನಾತ ಕಾಳಜಿ ಮಾಡಿಯಾನೆಂದು ಅನಿಸಲಿಲ್ಲ. ವಿಜಯಮ್ಮ ಬಂದು ಕರೆದರೆ ಬರುತ್ತೇನೆ ಎಂದನಂತೆ. ವಿಜಯಳಿಗೆ ಕಾಕಾನನ್ನು ಎತ್ತಿ ಕುಳ್ಳಿರಿಸಲು ತನಗೆ ಸಾಧ್ಯವಾದೀತೆ ಎನಿಸಿತಂತೆ. ಆದರೂ ಎರಡು ದಿನ ಬಿಟ್ಟು  ಕಾಕಾನನ್ನು ಕರೆತರಲು ಮಠಕ್ಕೆ ಹೋದಳು. ಅಷ್ಟೊತ್ತಿಗೆ ಆತನ ಮಾತುಗಳು ನಿಂತುಹೋಗಿದ್ದವು. ಈಕೆ ಬಾಯಲ್ಲಿ ನೀರು ಹಾಕಿದಳು. ಪ್ರಾಣ ಪಕ್ಷಿ ಹಾರಿಹೋಯಿತು.

ಮಠದ ಭಕ್ತನಾಗಿ ಕಾಕಾ  ತನ್ನ ಜೀವನವನ್ನು ಸಾರ್ಥಕಮಾಡಿಕೊಂಡ. ಮಠಕ್ಕೆ ಹೋಗುವಂತೆ ಆತನಿಗೆ ಹೇಗೆ ಪ್ರೇರಣೆಯಾಯಿತೊ ಕಾಣೆ.

‍ಲೇಖಕರು Avadhi

October 16, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

2 ಪ್ರತಿಕ್ರಿಯೆಗಳು

  1. Shyamala Madhav

    ನಿರ್ಮಲಾತ್ಮರಾದ ಕಾಕಾ ಚರಿತೆ ಇಷ್ಟವಾಯ್ತು, ದಾಕ್ಷಾಯಿಣಿ.

    ಪ್ರತಿಕ್ರಿಯೆ
  2. ವಿಜಯಲಕ್ಷ್ಮಿ ಸಂಗಮೇಶ

    ಕಾಕಾ ಕಥೆ ತುಂಬಾ ಚೆನಾಗಿದೆ. ಇದು ಅವರ ನಿಜ ಜೀವನ ನಂಬಿ ಕರೆದರೆ ಓ ಎನ್ನನೆ ಶಿವ.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: