ಮಾಕೋ ನಮ್ಮೂರ ಮಲ್ಲಿಕಾರ್ಜುನನ ಶಾರ್ಟ್ ಫಾರ್ಮ್!!!

ನಂದಿನಿ ಹೆದ್ದುರ್ಗ
ಮೊದಲ ಕಥೆಯೇ ಹಿಡಿದು ಒಳಗೆಳೆದು ಕೊಂಡಿತು.
“ಮಾಕೋನ ಏಕಾಂತ”ಅಮೆರಿಕ ವಾಸಿಗಳಾದ ಇಂಡಿಯಾ ದಂಪತಿ ಅದರಲ್ಲೂ ಹದಿಹರೆಯದ ಮಗನ ತಾಯಿಯೊಬ್ಬಳ ಕಥೆ.
ಬದುಕಿನ ನಿಮಿತ್ತ ಹೆಚ್ಚು ಪ್ರವಾಸದಲ್ಲಿರುವ ಗಂಡ, ಪತಿಯಿಂದ ದೂರವೇ ಉಳಿದ ಸಂಧರ್ಭದಲ್ಲಿ ಹೇಗೋ ಆರಂಭವಾದ ಇನ್ನೊಬ್ಬನೊಂದಿಗಿನ ಮೋಹ, ಈ ನಡುವೆ ದಿನವೂ ತಡವಾಗಿ ಮನೆಗೆ ಬರುವ ಮಗ ನಂತರದ ದಿನಗಳಲ್ಲಿ ನಡುರಾತ್ರಿಯಲ್ಲಿ ಸಾಕಷ್ಟು ಗೆಳೆಯಗೆಳತಿಯರೊಡನೆ ಬರುತ್ತಿದ್ದಿದ್ದು ಗೊತ್ತಾಗಿ ಅದನ್ನು ಪ್ರಶ್ನಿಸಲು ಹೋಗಿ ಎದುರಾದ ಒಂದು ವಿಚಿತ್ರ ಸನ್ನಿವೇಶದಲ್ಲಿ ಮಗನೆದಿರು ತಾನೇ ಬೆತ್ತಲಾದಂತಾಗುವುದು ಕಥೆ. ತನ್ನ ಸಂಕೀರ್ಣ ವಸ್ತುವಿನಿಂದ ಮತ್ತು ಹದಿಹರೆಯದ ಮಕ್ಕಳ ತಾಯಂದಿರ ಸಂಕಟಗಳ ಯಥಾವತ್ ನಿರೂಪಣೆಯಿಂದ ಈ ಕತೆ ಅದ್ಬುತ.
“ತಂದೆ” ಕತೆಯೂ ಅಮೆರಿಕ ವಾಸಿಗಳಾದ ಇಂಡಿಯಾ ದಂಪತಿಗಳ ಕಥೆ.
ಇಲ್ಲಿನ ವಸ್ತು ಹಳೆಯದಾದರೂ ಹೇಳಿರುವ ಬಗೆ ಸೊಗಸಾಗಿದೆ.
ಇಂತ ಸಂಗತಿಗಳು ಕತೆಯಾಗಿಸುವ ಹೊತ್ತಿನಲ್ಲಿ ಎಷ್ಟು ಹೇಳಿ ಎಷ್ಟು ಒಳಗಿಟ್ಟರೆ ಸೊಗಸು ಎನ್ನುವಲ್ಲಿ ಕತೆಗಾರ್ತಿ ಕೌಶಲ್ಯ ತೋರಿದ್ದಾರೆ.
“ಪದವಿ ಪ್ರಧಾನ” ಕಥೆಯ ಮೋಜೇ ಬೇರೆ.
ಇಂಡಿಯ ದಂಪತಿಗಳು ಅಮೆರಿಕದಲ್ಲಿ ತಮ್ಮ ಮಗನಿಗೆ ಉಪನಯನ ಮಾಡಿಸಲು ಹೋಗಿ ಎದುರಿಸಿದ ಅವಮಾನ ಮತ್ತು ಮುಂಡ ಮಾಡಿಸಿಕೊಳ್ಳದೇ ಓಡಿಹೋದ ಉಪನಯನ ವೇಷದಲ್ಲಿದ್ದ ಮಗಾ ಅದೇ ಬೀದಿಯಲ್ಲಿದ್ದ ಪದವಿ ಹುಚ್ಚಿನ ಹಿರಿಯರೊಬ್ವರ ಮನೆ ಹೊಕ್ಕು ಬಾಗಿಲು ಹಾಕಿದಾಗ ಸಂಸ್ಕೃತ ವಿವಿಯಿಂದ ಪದವಿ ಪ್ರಧಾನ ಮಾಡಲು ಸಾಂಪ್ರದಾಯಿಕ ವೇಷದಲ್ಲೇ ಬಂದಿದ್ದಾರೆ ಎಂದುಕೊಂಡ ಘಟನೆ ಕಥೆಯಾಗಿರುವುದು ಸೊಗಸಾಗಿದೆ.ಲಘುವಾಗಿ ಹೇಳಿರುವ ಈಕಥೆಯೂ ಅಮೆರಿಕ ವಾಸಿಗಳಾದ ಇಂಡಿಯಾ ದಂಪತಿಗಳ ಸಂಕಟ ವನ್ನೇ ಹೇಳಿದೆಯಾದರೂ ಕಿರುನಗುವೊಂದು ಕಥೆಯುದ್ದಕ್ಕೂ ಉಳಿಯುವಂತಿದೆ.

ಎಷ್ಟು ಆರ್ದ್ರ ಕಥೆ “ಕ್ಲಾರಾ ನನ್ನ ಗೆಳತಿ!!”
ಪ್ರೀತಿಸದವನಿಂದ ಮೋಸ ಹೋಗಿ ಅದರ ಪ್ರತೀಕಾರ ತೆಗೆಯಲು ಡ್ಯಾನ್ಸ್ ಕ್ಲಬ್ಬಿನಲ್ಲಿ ಯಾರಿಗೋ ಮುತ್ತಿಟ್ಟು ಅವನು ಅದೇ ಅವಕಾಶ ಬಳಸಿ ಅವಳೊಪ್ಪಿಗೆಯೇ ಇಲ್ಲದೆ ಅವಳ ಮೇಲೆರೆಗಿದ ನಂತರದಲ್ಲಿ ತೆರೆದುಕೊಳ್ಳುವ ಘಟನೆಗಳು.
ಬಹುಶಃ ಆಧುನಿಕ ಎಂದುಕೊಳ್ಳುವ ಈ ಕಾಲಘಟ್ಟದಲ್ಲಿ ಎಂಬತ್ತು ಶೇಕಡಾ ಹೆಣ್ಣುಮಕ್ಕಳ ಕಥೆ.ಆದರೆ ಇಲ್ಲಿ ಕ್ಲಾರಾ ಬರುತ್ತಾಳೆ..ವಿದೇಶಿ ನೆಲೆಯಲ್ಲಿ ಅದೂ ಅಮೆರಿಕದಲ್ಲಿ ಆಫ್ರಿಕನ್ ಅಮೆರಿಕನ್ ರ ಮನುಷ್ಯ ಪ್ರೀತಿಯ ಕುರಿತು ಕೇಳಿ ತಿಳಿದಿದ್ದರೂ ಈ ಕಥೆಯಲ್ಲಿ ಸಾಕ್ಷತ್ ದೇವರೇ ಕ್ಲಾರಳ ರೂಪದಲ್ಲಿ ಬಂದು ನಾಯಕಿಯ ನೋವು ಮರೆಸಿದೆ.
ಈ ಕಥೆಯ ಶೈಲಿ,ವಸ್ತು ನಿರೂಪಣೆ ಎಲ್ಲದ್ದೂ ಬೆಸ್ಟ್.
ಕೊನೆಯಲ್ಲಿ ಭಕ್ತಕುಂಬಾರ ಸಿನೆಮಾ ಉಲ್ಲೇಖಿಸುವ ಪ್ರಸಂಗ ಕಣ್ಣು ತುಂಬಿಸುತ್ತದೆ.
ಸುನೇತ್ರ ಪಬ್ಲಿಷರ್ಸ್…ನಮ್ಮ ನೆಲದ ಕಥೆ…ಇಲ್ಲಿ ಆಯ್ಕೆ ಮಾಡಿಕೊಂಡಿರುವ ವಿಷಯವಂತೂ ತೀರತೀರಾ ಭಿನ್ನ.
ಬಂಡಾಯ ಮನೋಭಾವದ ತಂಗಿ ಗಂಡನನ್ನು ಬಿಟ್ಟು ತವರಿಗೆ ಬಂದು ಅಣ್ಣನ ಪಬ್ಲೀಕೇಷನ್ ನಲ್ಲಿ ಕೂತು ಅಣ್ಣ ಮಾಡುತ್ತಿದ್ದ ರೌಡಿಯೊಬ್ಬನ ಆತ್ಮಚರಿತ್ರೆಗೆ ನಕಾರ ಮಾಡಿ ಕೊನೆಗೆ ಯಾರಿಗೂ ತಿಳಿಯದ ಬಗೆಯಲ್ಲಿ ಸತ್ತು ಹೋಗುವ ಕಥೆ.
ಕಥೆಯಲ್ಲಿ ತರಬೇಕಾದ ಎಲ್ಲಾ ಅಂಶಗಳಲ್ಲೂ ಕಾವ್ಯಕೈಚಳಕ ಸೊಗಸಾಗಿದೆ.
ಸಂಕಲನದ ಕೊನೆಯ ಕಥೆ ‘ಆ ಒಂದು ಥರ’ .
ಅಮೆರಿಕವಾಸಿಗಳಾದ ಆ ದಂಪತಿಗಳ ದಾಂಪತ್ಯ ಮುದ್ದಾಗಿಯೇ ಇದೆ. ಎಲ್ಲಾ ಇಂಡಿಯನ್ಮೆರಿಕನ್ನರಂತೆ ಶನಿವಾರ ಭಾನುವಾರ ವಿಕೆಂಡ್ ಸಂಭ್ರಮ… ಕಾರನ್ನು ತನ್ನ ದೇಹದ ಒಂದಂಗ ಅಂತಲೇ ತಿಳಿಯುವ ಗಂಡ ತನ್ನ ಹೆಂಡತಿ ಅಪರೂಪಕ್ಕೆ ಡ್ರೈವ್ ಮಾಡುವಾಗ ವಿಪರೀತ ಅನ್ರೆಸ್ಟ್ ಆಗುತ್ತಾನೆ.ಅವನ ಸ್ವರ ಏರಿಸುವ ಬಗೆಯಿಂದಾಗಿ ಆ ವಿಕೆಂಡ್ ವಿರಸದಲ್ಲಿ ಮುಗಿಯುತ್ತದೆ..

ಪ್ರೇಮವೇ ತುಂಬಿದ ದಾಂಪತ್ಯದಲ್ಲಿ ಸಣ್ಣ ಕಿಡಿಯೊಂದು ಹೇಗೆ ಸುಟ್ಟ ವಾಸನೆ ಅಂಟಿಸಿಹೋಗಬಹುದು ಎನ್ನುವುದು ಹೇಳುತ್ತಲೇ ನೆರಳು ಸರಿದು ಒಲವು ಬೆಳಗುವ ಕಥೆ ತನ್ನ ನಿರೂಪಣೆಯಿಂದಲೂ ಪ್ರೇಮದ ಅಸಂಖ್ಯ ಸಂಕಟಗಳನ್ನು ಹೇಳುವ ಬಗೆಯಿಂದಲೂ ಹೊಸದಾಗಿದೆ.
ಮೀಲೋ..ಕೊನೆ ಊಟ ಕಥೆಗಳು ಕೂಡ ತಮ್ಮ ವಿಶಿಷ್ಟ ಕಥಾವಸ್ತು ಮತ್ತು ತಾಜಾ ನಿರೂಪಣೆಯಿಂದಾಗಿ ಸೆಳೆಯುತ್ತವೆ.
ಕಥೆಗಾರರಿಗೆ ಮುಕ್ತ ಲೋಕನುಭವ ಎಷ್ಟು ಮುಖ್ಯವಾಗುತ್ತದೆ ಎನ್ನುವುದನ್ನು ಇಲ್ಲಿನ ಪ್ರತಿ ಕಥೆಯೂ ಹೇಳುತ್ತದೆ.
ಕನ್ನಡದ ನೆಲದಲ್ಲಿ ನಿಂತು ವಿದೇಶದ ಕಥೆಗಳನ್ನು ನಮ್ಮ ಮನೋ ಭೂಮಿಕೆಗೆ ಒಗ್ಗಿಸಿಕೊಂಡು ಓದುವ ಖುಷಿಯೇ ಸೊಗಸು.
ಬರೆಯುವವರು ಅಧುನಿಕವಾಗಬೇಕು. ಹೊಸ ಸಂಗತಿ ಹೊಸ ಪರಿಸರ ಹೊಸ ಭಾಷೆಯಲ್ಲಿ ಕಥೆ ಹೇಳಬೇಕು ಎನ್ನುವ ಕಥಾ ಆಸಕ್ತರ ನಿರೀಕ್ಷೆಗೆ ತಕ್ಕಂತಹ ಕಥೆಗಳು ಕಾವ್ಯರ ಮಾಕೋನ ಏಕಾಂತದಲ್ಲಿವೆ.
ಇನ್ನಷ್ಟು ಸುಂದರ ಕಥೆಗಳನ್ನು ಬರೆಯಲಿ ಕಾವ್ಯ.
ನನ್ನ ಪುಟ್ಟ ಅಂಗಳದಲ್ಲಿ ಕುಳಿತು ಬೆರಗಿನಿಂದ ಓದುವ ನನ್ನಂತವರಿಗೆ ಅಮೆರಿಕೆ ಹೊಸದಾಗಿ ಇಳಿಯಲಿ ಎನ್ನುವ ಸ್ವಾರ್ಥದೊಂದಿಗೆ ಅಭಿನಂದನೆಗಳು ಕಾವ್ಯ.






ಸೂಕ್ಷ್ಮ ಓದು ನಂದಿನಿ