ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ನಂಜನಗೂಡು; ಗುಂಡ್ಲುಪೇಟೆ ಹೇಳಿದ್ದೇನು?

ರಾಜಾರಾಂ ತಲ್ಲೂರು

ಸಹಜ ಚುನಾವಣೆಗೆ ಇನ್ನೂ ವರ್ಷವೊಪ್ಪತ್ತು ಬಾಕಿ ಇರುವಾಗಲೇ ರಾಜಕೀಯ ಪಗಡೆಯಾಟವನ್ನು ಪೂರ್ಣಪ್ರಮಾಣದಲ್ಲಿ ತೆರೆದು ತೋರಿಸಿದ ಕರ್ನಾಟಕದ ಉಪಚುನಾವಣೆ ತನ್ನ ಫಲಿತಾಂಶದ ಮೂಲಕ ಎಲ್ಲರಿಗೂ ಒಂದಷ್ಟು ಪಾಠ ಕಲಿಸಿದೆ.

70ರ ದಶಕದಲ್ಲಿ ‘ಇಂದಿರಾ ಪರ’ ಮತ್ತು ‘ಇಂದಿರಾ ವಿರುದ್ಧ’ ಎಂದಿದ್ದ ಮತ ವಿಭಜನೆ ಈವತ್ತು ‘ಬಿಜೆಪಿ ಪರ’ ಮತ್ತು ‘ಬಿಜೆಪಿ ವಿರುದ್ಧ’ ಎಂದು ತಿರುವಿಕೊಂಡಿರುವುದು ಬಿಜೆಪಿಯ ಮಟ್ಟಿಗೆ ಕಡಿಮೆ ಸಾಧನೆಯೇನಲ್ಲ.

ಇಂದಿರಾ ಕಾಲಕ್ಕೂ, ಈವತ್ತಿಗೂ “ಗೆಲ್ಲಬಲ್ಲ” ಕುದುರೆಯನ್ನು ಮೊದಲೇ ಗುರುತಿಸಿ, ಆಳುವವರ “ಪರ” ಗಟ್ಟಿಯಾಗಿ ನಿಂತವರು ಯಾರೆಂದರೆ: ವ್ಯವಹಾರಸ್ಥರು, ಮೇಲುವರ್ಗದವರು ಮತ್ತು ರಾಜಕೀಯವನ್ನು ತಮ್ಮ ಬದುಕಿನ ಬಂಡಿ ಮುನ್ನಡೆಸುವ ಇಂಧನವನ್ನಾಗಿ ಮಾಡಿಕೊಂಡವರು.

ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರದು ಆವತ್ತಿಗೂ ಈವತ್ತಿಗೂ ಒಡೆದ ಮನೆಯೇ. ಅವರಿಗೆ ದಿನದ ಕೂಳಿಗೆ ಮೈ ಬಗ್ಗಿಸಿ ದುಡಿಯುವುದೇ ದಾರಿ ಹೊರತು ರಾಜಕೀಯದಂತಹ ಪರಿಕರ ಬಳಸಿ ಬದುಕುವ ದಾರಿ ಸುಗಮಗೊಳಿಸಿಕೊಳ್ಳುವ ಮನಸ್ಸು ಬಂದಿಲ್ಲ. ಅವರು ಒಂದೋ ತಮ್ಮ ಸ್ವಾಭಿಮಾನ, ಇಲ್ಲವೇ ತಮ್ಮ ಆರ್ಥಿಕ ಸ್ಥಿತಿ, ಅಥವಾ ತಮ್ಮ ಸಾಮಾಜಿಕ ಸನ್ನಿವೇಶಗಳಿಗೆ ಪ್ರತಿಕ್ರಿಯಿಸುತ್ತಾ ಬಂದವರು. ಹಾಗಾಗಿಯೇ ಈವತ್ತಿಗೂ ಅವರದು ಒಡೆದ ಮನೆ.

ಈ ಒಡೆದ ಮನೆಯ ಮಂದಿಯನ್ನು ಯಾರು ದುಡ್ಡು, ಜಾತಿ ಇತ್ಯಾದಿ ಹೆಸರುಗಳಲ್ಲಿ ಹೆಚ್ಚು ಆಕರ್ಷಿಸುತ್ತಾರೋ ಅವರಿಗೆ ದೇಶ ಆಳುವ ಅಧಿಕಾರ ದೊರೆಯುತ್ತಾ ಬಂದಿರುವುದು ಭಾರತದ ರಾಜಕೀಯ ಚರಿತ್ರೆ. ಎಲ್ಲೆಲ್ಲಿ ಈ “ಆಳಿಸಿಕೊಳ್ಳುವ” ಮಂದಿ ಜಾಸ್ತಿ ಹರಿದು ಹಂಚಿ ಹೋಗಿದ್ದಾರೋ, ಅಲ್ಲೆಲ್ಲ “ಆಳುವ ಮಂದಿ” ಸುಲಭವಾಗಿ ಗೆದ್ದಿದ್ದಾರೆ.

ಈ ಹಿನ್ನೆಲೆಯಲ್ಲಿ ಗುಂಡ್ಲುಪೇಟೆ ಮತ್ತು ನಂಜನಗೂಡುಗಳ ಫಲಿತಾಂಶವನ್ನು ನೊಡೋಣ.

ಉತ್ತರ ಪ್ರದೇಶದ ಗೆಲುವಿನ ಬೆನ್ನಿಗೇ ದೇಶದೆಲ್ಲೆಡೆ ಚುನಾವಣೆಯ ಕಿಚ್ಚು ಹಚ್ಚಿಬಿಟ್ಟಿರುವ ಬಿಜೆಪಿ, ಕರ್ನಾಟಕದ ಮಟ್ಟಿಗೆ ಜಾತಿ ರಾಜಕಾರಣದ ಚೌಚೌ ಬಾತನ್ನು ನಂಬಿ ಕುಳಿತಿದೆ. ಲಿಂಗಾಯಿತರು ಮತ್ತು  ಮೇಲುವರ್ಗಗಳ ಜೊತೆ ಒಕ್ಕಲಿಗರನ್ನು ರಾಜ್ಯದಲ್ಲಿ ಪಕ್ಷದ ತೆಕ್ಕೆಗೆ ತೆಗೆದುಕೊಳ್ಳುವ ಪ್ರಯತ್ನಗಳು ಜೋರಾಗಿ ನಡೆದಿದ್ದರ ಪರಿಣಾಮವೇ ಎಸ್ಸೆಂ ಕ್ರಷ್ಣ, ಜಯಪ್ರಕಾಶ ಹೆಗ್ಡೆ ಆದಿಯಾಗಿ ಹಲವಾರು ಒಕ್ಕಲಿಗ ನಾಯಕರು ಬಿಜೆಪಿಗೆ ಸೇರ್ಪಡೆಗೊಂಡದ್ದು ಮತ್ತು ಇನ್ನೂ ಹಲವು ಮಂದಿ ಪೈಪ್ ಲೈನಿನಲ್ಲಿದ್ದಾರೆ ಎಂಬ ಸುದ್ದಿ. ಅದರ ಜೊತೆಗೆ ರುಚಿಗೆ ತಕ್ಕಷ್ಟು ಒಬಿಸಿ-ದಲಿತ ಮತಗಳೂ ಬಿದ್ದರೆ “ಚೌಚೌಬಾತ್” ಅದ್ಭುತ ರುಚಿ ಪಡೆಯಲಿದೆ ಎಂಬುದು ಅವರ ಲೆಕ್ಕಾಚಾರ.

ನಂಜನಗೂಡಿನಲ್ಲಿ ನಡೆದದ್ದು ಇದೇ ಪ್ರಯೋಗ. ಅಲ್ಲಿ ನಾಮ್ ಕೇ ವಾಸ್ತೆ ಎಂಬಂತಿದ್ದ ಬಿಜೆಪಿಗೆ ಶ್ರೀನಿವಾಸ ಪ್ರಸಾದ್ ದೊರೆತದ್ದು, ರೊಟ್ಟಿ ಜಾರಿ ತುಪ್ಪಕ್ಕೆ ಬಿದ್ದಂತಾಗಿತ್ತು. ಆದರೆ, ಯಾವತ್ತಿಗೆ ಜನತಾದಳದ ವ್ಯಕ್ತಿಯೊಬ್ಬರು ಕೊನೆ ಕ್ಷಣದಲ್ಲಿ ಕಾಂಗ್ರೆಸ್ ಅಭ್ಯರ್ಥಿಯಾಗಿ ನಿಂತು ನೇರ ಮುಖಾಮುಖಿ ಸ್ಪರ್ಧೆ ಎದುರಾಯಿತೋ, ಅಲ್ಲಿಗೆ ಬಿಜೆಪಿ ಲೆಕ್ಕಾಚಾರ ತಪ್ಪಿತು. ಕಾಂಗ್ರೆಸ್-ದಳ ನಡುವೆ ಓಟು ಹರಿದು ಹಂಚಿಹೋಗಿ, ತನ್ನ ಓಟು ತನಗೆ ಬಿದ್ದರೆ ತಾನು ಗೆಲ್ಲಬಹುದೆಂದುಕೊಂಡಿದ್ದ  ಬಿಜೆಪಿಗೆ ಚುನಾವಣೆಗೆ ಮೊದಲೇ ಸೋಲು ಸಿದ್ಧವಾಗಿತ್ತು.

ಇತ್ತ ಗುಂಡ್ಲುಪೇಟೆಯಲ್ಲೂ ನಡೆದದ್ದು ಇಂತಹದೇ ರಾಜಕೀಯ. ಸಚಿವರಾಗಿದ್ದ ದಿ| ಮಹದೇವ ಪ್ರಸಾದ್ ಅವರ ಪತ್ನಿ ಗೀತಾ ಅವರಿಗೆ ಪತಿಯ ಸಾವಿನ ಅನುಕಂಪದ ನೆರಳಿನ ನಿರೀಕ್ಷೆಯಲ್ಲಿತ್ತು ಕಾಂಗ್ರೆಸ್. ಆದರೆ, ಅದಕ್ಕಿಂತ ಹೆಚ್ಚಾಗಿ ಅಲ್ಲಿ ಸತತ ಸೋಲುಣ್ಣುತ್ತಾ ಬಂದಿದ್ದ ಬಿಜೆಪಿಯ  ನಿರಂಜನ ಕುಮಾರ್  ಅವರ ಮೇಲಿನ ಅನುಕಂಪ ಹೆಚ್ಚಾದದ್ದರಿಂದ ಅಂತಿಮ ಫಲಿತಾಂಶದ ಅಂತರ ಸಣ್ಣದಾಯಿತು. ಬಿಜೆಪಿಗೆ ನಂಜನಗೂಡಿಗಿಂತ ಗುಂಡ್ಲುಪೇಟೆಯ ಮೇಲೇ ಹೆಚ್ಚು ನಿರೀಕ್ಷೆ ಇದ್ದದ್ದು ಸುಳ್ಳಲ್ಲ.

ಒಟ್ಟಿನಲ್ಲಿ, ನೇರ ಸ್ಪರ್ಧೆಯಲ್ಲಿ (ಅಂದರೆ ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ಮತಗಳು ಒಡೆಯದೇ ಒಂದೇ ಕಡೆ ನಿಂತರೆ) ಆಳುವವರ ವಿರುದ್ಧ ಗೆಲುವು ಸುಲಭ ಎಂಬುದು ಮತ್ತೆ ಸಾಬೀತಾಗಿದೆ.

ರಾಜಕೀಯದ ಹೊಸ ತಳಿ

ಈ ನಡುವೆ, ಬಡವರು, ದಲಿತರು, ಹಿಂದುಳಿದವರು, ಅಲ್ಪಸಂಖ್ಯಾತರ ರಾಜಕೀಯವನ್ನು ಒಗ್ಗೂಡಿಸಿ ಒಂದು ಶಕ್ತಿಯಾಗಿ ಮೇಲೆಬ್ಬಿಸುವ ಪ್ರಯತ್ನಗಳು ಹೊಸದೇನಲ್ಲ. ಲಂಕೇಶರಾದಿಯಾಗಿ ಈವತ್ತಿನ ತನಕ ಇಂತಹ ಪ್ರಯತ್ನಗಳು ನಡೆಯುತ್ತಲೇ ಇವೆ. ಈ ಎಲ್ಲ ತಳಿಗಳು ತಾವು ಕಸಿ ತಳಿಗಳು; ಹಾಗಾಗಿ ಬೇಗ ಫಲಕೊಡಬೇಕೆಂಬ ನಿರೀಕ್ಷೆ ಇಟ್ಟುಕೊಂಡು ಹೊರಡುತ್ತಿರುವುದೇ ಅವುಗಳ ದೊಡ್ಡ ಮಿತಿ.

ವಾರ್ಡು- ಪಂಚಾಯತ್ ಗಳ ಮಟ್ಟದಲ್ಲಿ ಜನಪ್ರತಿನಿಧಿಗಳೆನಿಸಿಕೊಂಡು ತಳ ಮಟ್ಟದಿಂದ ಆರಂಭಗೊಳ್ಳುವ ರಾಜಕಾರಣಕ್ಕೆ ಭವಿಷ್ಯ ಇದೆಯೇ ಹೊರತು ರಾಜಧಾನಿಯಲ್ಲಿ ರಾತ್ರೋರಾತ್ರಿ ಹೊರಹೊಮ್ಮುವ ನಾಯಕತ್ವಗಳಿಗೆ  ಈ ದೇಶದ ಜನ ಬೆಲೆ ಕೊಟ್ಟದ್ದು ಕಡಿಮೆ. ಈಗ ಬೇಕಾಗಿರುವುದು ಬೇರು ಮಟ್ಟದ ವಿಶ್ವಾಸದ ರಾಜಕಾರಣವೇ ಹೊರತು ತಲೆ ಮಟ್ಟದ ಮೆದುಳಿನ ರಾಜಕಾರಣ ಅಲ್ಲ.

‍ಲೇಖಕರು avadhi

13 April, 2017

1 Comment

  1. jeevanamuktha

    ಒಟ್ಟಾರೆ ವಿಶ್ಲೇಷಣೆ ಸರಿಯಾಗಿದೆ. ಸ್ವರಾಜ್ ಇಂಡಿಯಾ ಸಭೆ ಸೇರಿದಂತೆ ಈಚಿನ ಸಭೆಗಳ ತಮ್ಮ ಮಾತುಗಳಲ್ಲಿ ದೇವನೂರು ಮಹಾದೇವ, ಗ್ರಾಮ ಪಂಚಾಯ್ತಿ ಸದಸ್ಯರ ಮಟ್ಟದ, ತಳರಾಜಕಾರಣದ ಬಗ್ಗೆ ಒತ್ತು ನೀಡುತ್ತಿರುವುದು, ಸರಿಯಾದ ನಡೆಯಾಗಿರಬಹುದೆ?

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading