ಧಾರವಾಡದಲ್ಲಿ ದೇವನೂರು

ದೇವನೂರರ ಬರವಣಿಗೆಯ ವಿಚಾರಸಂಕಿರಣ ಮತ್ತು ಪೊರೆ ಕಳಚಿದ ಪರಿ

-ಡಾ.ಎಸ್.ಬಿ.ಜೋಗುರ

ಧಾರವಾಡದ ಪಾಟೀಲ ಪುಟ್ಟಪ್ಪ ಸಭಾಭವನ ಕಿಕ್ಕಿರಿದು ತುಂಬಿತ್ತು. ಹಾಗೆ ಬಂದವರು ಯಾವುದೇ ಬಗೆಯ ಒತ್ತಡಗಳನ್ನು ಬೆನ್ನಿಗಂಟಿಸಿಕೊಂಡು ಬಂದವರಾಗಿರಲಿಲ್ಲ. ದೇವನೂರ ಮಹಾದೇವರ ಮೇಲಿನ ಪ್ರಾಮಾಣಿಕ ಪ್ರೀತಿ, ಮತ್ತು ಅವರ ಬರವಣಿಗೆಯಲ್ಲಿಯ ಸತ್ಯ, ಸತ್ವ, ಶಕ್ತಿಯನ್ನು ನಂಬಿ ಬಂದವರಾಗಿದ್ದರು. ಹಾಗಾಗಿಯೇ ಬೆಳಿಗ್ಗೆಯಿಂದ ಕುಳಿತವರು ಸಾಯಂಕಾಲದವರೆಗೂ ಎಲ್ಲೂ ಕದಲಲಿಲ್ಲ. ದೇವನೂರರ ಬರವಣಿಗೆಯನ್ನಾಧರಿಸಿದ ಕ್ರಿಯೆ, ತತ್ವ ಮತ್ತು ಅಭಿವ್ಯಕ್ತಿ ಎನ್ನುವ ಒಂದು ದಿನದ ವಿಚಾರ ಸಂಕಿರಣ ಎಲ್ಲ ಬಗೆಯ ಅಕಾಡೆಮಿಕ್ ಸೆಮಿನಾರ್ ಗಳನ್ನು, ಇತ್ತೀಚಿನ ಎಲ್ಲ ಬಗೆಯ ಸಾಹಿತ್ಯ ಕಾರ್ಯಕ್ರಮಗಳನ್ನು ಓವರ್ ಟೇಕ್ ಮಾಡುವ ಹಾಗೆ ನಡೆದದ್ದು ಒಂದು ದಾಖಲೆ.
ಕಾರ್ಯಕ್ರಮದ ಚಾಲನೆಯಲ್ಲಿ ನಟರಾಜ ಹುಳಿಯಾರರ ಕ್ರಿಯಾತ್ಮಕ ಚಲನಶೀಲತೆಯ ಮಾತುಗಳು, ದೇವನೂರರು ಯುವಜನತೆಗೆ ನೀಡಿದ ವಿಶ್ವಮಾನವ ಸಂದೇಶ ಮತ್ತು ಕೃತಿಕೇಂದ್ರಿತ ಜೀವನಪ್ರೀತಿಯ ಮಾತು ಇಡೀ ಸಭಾಭವನದ ಭಾವಪರವಶತೆಗೆ ಕಾರಣವಾಗಿತ್ತು. ಪುಟ್ಟಪ್ಪನವರ ಅಧ್ಯಕ್ಷೀಯ ನುಡಿಗಳೊಂದಿಗೆ ಮುಕ್ತಾಯವಾದ ಮೊದಲ ಘಟ್ಟ ಎರಡನೆಯ ಹಂತದ ಗೋಷ್ಟಿಗಳ ಕಾರ್ಯಕ್ರಮಕ್ಕೆ ಎಡೆ ಮಾಡಿಕೊಟ್ಟಿತು.
‘ಕ್ರಿಯೆ’ ಎನ್ನುವ ಮೊದಲ ಗೋಷ್ಟಿಯಲ್ಲಿ ಡಾ. ತುಕಾರಾಂ ದೇವನೂರರ ಒಡನಾಟ ತಮ್ಮನ್ನು ರೂಪಿಸಿದ ಬಗೆಯನ್ನು ಎಳೆ ಎಳೆೆಯಾಗಿ ಬಿಡಿಸಿಟ್ಟರೆ, ಮೋಹನ ನಾಗಮ್ಮನವರ ಅವರು ದೇವನೂರರು ತಮ್ಮ ಎದುರಿಗಿರುವ ಒಂದು ಆದರ್ಶಎಂದರು. ಎರಡನೆಯ ಗೋಷ್ಟಿ ‘ತತ್ವ’ ದಲ್ಲಿ ಹಂಪಿ ವಿಶ್ವವಿದ್ಯಾಲಯದ ಬಿ.ಎಂ.ಪುಟ್ಟಯ್ಯನವರು ದೇವನೂರರ ಚಿಂತನೆ ಒಟ್ಟು ಮನುಕುಲದ ಕಾಳಜಿಯ ಚಿಂತನೆ ಎಂದರೆ, ಅಶೋಕ ಶೆಟ್ಟರ್ ಅವರು ದೇವನೂರರನ್ನು ಒಂದು ರೇಡಿಮೇಡ್ ಚೌಕಟ್ಟಿಗೆ ಹೊಂದಿಸಲಾಗದು ಎಂದರು. ಎಸ್.ಬಿ.ಜೋಗುರ ಮಾತನಾಡಿ ದೇವನೂರರಲ್ಲಿ ಒಬ್ಬ ಸಮಾಜಶಾಸ್ತ್ರಜ್ಞ, ಮಾನವಶಾಸ್ತ್ರಜ್ಞ, ರಾಜಕೀಯ ಚಿಂತಕ ಅಡಕವಾಗಿರುವದಿದೆ ಎಂದರು.
ಮೂರನೇಯ ಗೋಷ್ಟಿಯಲ್ಲಿ ಮಾತನಾಡಿದ ಸಬಿತಾ ಬನ್ನಾಡಿ ದೇವನೂರರ ಕಥನಕ್ರಮವನ್ನು ಅತ್ಯಂತ ವಿಶಿಷ್ಟವಾದುದು ಎಂದು ಕೊಂಡಾಡಿದರೆ, ಕುಂಸಿ ಉಮೇಶ ಕೆಲವು ದೇವನೂರರ ಬದುಕಿನ ಕೆಲವು ತುಣುಕುಗಳನ್ನು ಎತ್ತಿ ತೋರಿಸಿ, ದೇವನೂರರು ಮಾತ್ರ ಹೀಗೆ ಬರೆಯಲು ಸಾಧ್ಯ ಎಂದರು. ಅಪ್ಪಗೆರೆ ಸೋಮಶೇಖರ ದೇವನೂರರನ್ನು ಒಂದೇ ರೀತಿಯಲ್ಲಿ ಗ್ರಹಿಸಲಾಗದು ಎಂದರು. ನಾಲ್ಕನೇಯ ಗೋಷ್ಟಿಯಲ್ಲಿ ಅವರ ಕಾದಂಬರಿಯ ಬಗ್ಗೆ ಮಾತನಾಡಿದ ನಟರಾಜ ಬೂದಾಳು ದೇವನೂರರ ಕೃತಿಗಳು ಮತ್ತೆ ಮತ್ತೆ ಓದಿದ ಮೇಲೂ ಅಗಮ್ಯವಾದುದನ್ನು ಹೇಳಲು ಹಾತೊರೆಯುವಂತಿರುತ್ತದೆ ಎಂದರು. ಮಲ್ಲಿಕಾರ್ಜುನ ಮೇಟಿಯವರು ದೇವನೂರರನ್ನು ನಾವು ವಿಭಿನ್ನವಾಗಿ ಓದಬೇಕಿದೆ ಎಂದರು. ಅರುಣಜೋಳದ ಕೂಡ್ಲಗಿಯವರು ದೇವನೂರರ ಬರವಣಿಗೆಯನ್ನು ವಸ್ತುನಿಷ್ಟವಾಗಿ ಅಧ್ಯಯನ ಮಾಡಬೇಕಿದೆ ಎಂದರು.
ಸಮಾರೋಪದಲ್ಲಿ ರಹಮತ ತರೀಕೇರೆ ಯವರು ದೇವನೂರರ ಬರವಣಿಗೆ ಮತ್ತು ದೇವನೂರರನ್ನು ರೂಪಿಸಿರುವುದು ಅವರ ನಾಲ್ಕು ದಶಕಗಳ ಹೋರಾಟ. ಆ ಹೋರಾಟವನ್ನು ದೇವನೂರರು ಬೆಳೆಸಿದರೆ, ದೇವನೂರರನ್ನು ಹೋರಾಟ ಬೆಳೆಸಿದೆ ಎನ್ನುವ ಮಾತನಾಡಿದರು. ಸಮಾರೋಪದ ಅಧ್ಯಕ್ಷರಾಗಿದ್ದ ದುರ್ಗಾದಾಸ್ ಅವರು ದೇವನೂರರ ಬರವಣಿಗೆಯಲ್ಲಿ ಮಾನವೀಯತೆ, ಅಂತ:ಕರುಣೆ ತುಂಬಿ ತುಳುಕುತ್ತಿದೆ ಎಂದರು.
ಒಂದು ಇಡೀ ದಿನ ದೇವನೂರರು ಆ ಸಭಾ ಭವನದಲ್ಲಿದ್ದ ಎಲ್ಲರನ್ನೂ ತಮ್ಮ ವಿಚಾರ ಮತ್ತು ಬರವಣಿಗೆಯ ಮೂಲಕ ಪರಕಾಯ ಪ್ರವೇಶವನ್ನು ಮಾಡಿದಂತಿತ್ತು. ಅತ್ಯಂತ ಅಚ್ಚುಕಟ್ಟಾಗಿ ಸಂಘಟಿಸಲ್ಪಟ್ಟ ಈ ದೇವನೂರರ ಬರಹದ ಬಗೆಗಿನ ವಿಚಾರ ಸಂಕಿರಣ ಅದರಲ್ಲಿ ಪರೋಕ್ಷವಾಗಿ ಮತ್ತು ಅಪರೋಕ್ಷವಾಗಿ ತೊಡಗಿಸಿಕೊಂಡವರೆಲ್ಲರ ಪೊರೆ ಕಳಚುವ ಯತ್ನವನ್ನು ಮಾಡಿದೆ. ಇಂಥಾ ಒಂದು ಅಭೂತಪೂರ್ವವಾದ ವಿಚಾರಸಂಕಿರಣವನ್ನು ರೊಪಿಸಿ, ಸಂಘಟಿಸಿ ಯಶಸ್ಸುಗೊಳಿಸಿದ ಶ್ರೇಯಸ್ಸು ಮುಖ್ಯವಾಗಿ ಡಾ. ಎಮ್.ಡಿ.ವಕ್ಕುಂದ, ಬಸವರಾಜ ಸೂಳಿಬಾವಿ, ಶಂಕರ ಹಲಗತ್ತಿಯವರಿಗೆ ಸಲ್ಲುತ್ತದೆ. ಇವರ ಜೊತೆಗೆ ಮಾನಸಿಕವಾಗಿ, ಭೌತಿಕವಾಗಿ ಸಾಥ್ ನೀಡಿರುವ ಎಲ್ಲರೂ ಆ ದಿಸೆಯಲ್ಲಿ ಅಭಿನಂದನಾರ್ಹರು.
ಸಂಕಿರಣದ ಕೆಲವು ದೃಶ್ಯಗಳು ನಿಮಗಾಗಿ :
ಚಿತ್ರಕೃಪೆ : ಹುಸೇನ್ ಪಾಷಾ
ಚಿತ್ರಗಳನ್ನು ದೊಡ್ಡದಾಗಿ ನೋಡಲು ಅವುಗಳ ಮೇಲೆ ಕ್ಲಿಕ್ಕಿಸಿ :

‍ಲೇಖಕರು G

February 28, 2013

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: