ಅಂಬೇಡ್ಕರ್ ಎಂಬ ಸೂರ್ಯ
ಡಾ. ಬಿ.ಆರ್. ಅಂಬೇಡ್ಕರ್ ಭಾರತದ ಸಾಮಾಜಿಕ ಮತ್ತು ರಾಜಕೀಯದ ಇತಿಹಾಸದಲ್ಲಿ ಅಳಿಸಲಾರದ ಒಂದು ಹೆಸರು. ಬಹು ಸಂಸ್ಕೃತಿಯ ಮತ್ತು ಬಹು ಭಾಷೆಯ ನೆಲವಾದ ಭಾರತದಲ್ಲಿ ಧರ್ಮ ಮತ್ತು ಜಾತಿಯ ನೆಪದಲ್ಲಿ ತಾಂಡವಾಡುತ್ತಿದ್ದ ಎಲ್ಲಾ ಅಸಮಾನತೆಗಳ ವಿರುದ್ದ ಏಕಾಂಗಿ ಹೋರಾಡುತ್ತಾ, ದೀನ ದಲಿತರಿಗೆ ಸ್ವಾಭಿಮಾನವನ್ನು ಮತ್ತು ಮೇಲ್ವರ್ಗದ ಜನತೆಗೆ ಸಾಮಾಜಿಕ ನ್ಯಾಯವನ್ನು ಏಕ ಕಾಲಕ್ಕೆ ಬೋಧಿಸಿದ ಅನನ್ಯ ವ್ಯಕ್ತಿತ್ವ ಡಾ.ಅಂಬೇಡ್ಕರ್.ರವರದು. ಡಾ.ಅಂಬೇಡ್ಕರ್ ರವರನ್ನು ಸಂವಿಧಾನ ಶಿಲ್ಪಿ ಎಂದಷ್ಟೇ ಕರೆಯಲಾಗುತ್ತದೆ ಈ ಮಾತು ನಿಜ ಕೂಡ ಹೌದು. ಆದರೇ, ಭಾರತದಂತಹ ಅಸಮಾನತೆಯ ಸಾಮಾಜಿಕ ಬದುಕಿಗೆ ಅವರು ನೀಡಿದ ಬಹು ದೊಡ್ಡ ಕೊಡುಗೆಯೆಂದರೇ, ಸಾಮಾಜಿಕ ನ್ಯಾಯದ ಪರಿ ಕಲ್ಪನೆ ಇದನ್ನು ನಾವು ಎಂದೂ ಮರೆಯಲಾಗದು.
ಸಂವಿಧಾನದಲ್ಲಿ ನಾಗರೀಕ ಹಕ್ಕುಗಳನ್ನು ಮನುಷ್ಯನೊಬ್ಬನ ಸಾರ್ವಭೌಮ ಹಕ್ಕುಗಳು ಎಂದು ಅಂಬೇಡ್ಕರ್ ಪರಿಗಣಿಸುವಾಗ ‘ ವ್ಯಕ್ತಿಯೊಬ್ಬ ಜಾತಿಯ ನೆಪದಲ್ಲಿ ಇನ್ನೊಬ್ಬ ವ್ಯಕ್ತಿಯ ಮೇಲೆ ಸವಾರಿ ಮಾಡುತ್ತಿದ್ದ ಅಮಾನುಷ ಕ್ರಿಯೆ ಅವರ ಮನಸ್ಸಿನಲ್ಲಿ ಹಸಿರಾಗಿತ್ತು. ಈ ಕಾರಣಕ್ಕಾಗಿ ಜಾತಿ ಮತ್ತು ಧರ್ಮದ ನೆಪದಲ್ಲಿ ಇನ್ನೊಬ್ಬ ವ್ಯಕ್ತಿಯ ಹಕ್ಕನ್ನು ಕಸಿದು ಕೊಳ್ಳುವುದನ್ನು ತೀವ್ರವಾಗಿ ವಿರೋಧಿಸುತ್ತಿದ್ದ ಅಂಬೇಡ್ಕರ್, ವ್ಯಕ್ತಿ ಸ್ವಾತಂತ್ರ್ಯಕ್ಕಾಗಿ ಸಂವಿಧಾನದಲ್ಲಿ ಮನುಷ್ಯನ ಮೂಲ ಭೂತ ಹಕ್ಕುಗಳಿಗೆ ಹೆಚ್ಚಿನ ಮಹತ್ವ ನೀಡಿದರು. ಸ್ವತಃ ಮಹಾರಾಷ್ಟ್ರದ ದಲಿತ ಕುಟುಂಬದಲ್ಲಿ ಜನಿಸಿದ ಅಂಬೇಡ್ಕರ್ ತಮ್ಮ ಬದುಕಿನುದ್ದಕ್ಕೂ ಅನುಭವಿಸಿದ ಅಪಮಾನ ಮತ್ತು ಹಿಂಸೆ ಅವರನ್ನು ಮನುಕುಲದ ಎಲ್ಲಾ ಅಸಮಾನತೆಗಳ ವಿರುದ್ದ ಸಿಡಿದೆಳುವಂತೆ ಮಾಡಿತು. ಒಂದು ಸಮುದಾಯದ ನೋವನ್ನು ತನ್ನ ನೋವೆಂದು ಪರಿಭಾವಿಸುವ ಮಾತೃ ಹೃದಯ ಅವರಲ್ಲಿತ್ತು. ಈ ಕಾರಣಕ್ಕಾಗಿ ಅವರು ನಡೆಸಿದ ಅವಿರತ ಹೋರಾಟದ ಫಲವಾಗಿ ಇಂದು ಭಾರತದ ದಲಿತರು, ದಮನಿತರು, ಬಾಯಿಲ್ಲದವರು, ಮುಖವಿಲ್ಲದವರು ತಲೆಯೆತ್ತಿ ನಡೆದಾಡುವಂತಾಗಿದೆ.
ಇದು ಅತಿಶಯದ ಮಾತಲ್ಲ. ಭಾರತದ ಇತಿಹಾಸದಲ್ಲಿ ಅಂಬೇಡ್ಕರ್ ರವರ ಹಾಗೆ ಜಾತಿ ಎಂಬ ಭೂತದ ವಿರುದ್ಧ ಅವ್ಯಾಹತ ಹೋರಾಟ ನಡೆಸಿದ ವ್ಯಕ್ತಿ ಮತ್ತೊಬ್ಬರಿಲ್ಲ. ಭಾರತದ ಜಾತಿ ವ್ಯವಸ್ಥೆಯ ಬೇರುಗಳಿಗೆ ಕೈ ಹಾಕಿ ಅಲುಗಾಡಿಸಿದ ಧೀಮಂತ ವ್ಯಕ್ತಿತ್ವ ಅವರದು. ಜಾತಿ ವ್ಯವಸ್ಥೆ ಕುರಿತು ಅಂಬೇಡ್ಕರ್ ಹೇಳುತ್ತಿದ್ದ ಮಾತುಗಳು ಇವು. ನೀವು ಎದುರಿಸಬೇಕಾದ ವೈರಿ, ಜಾತಿ ನಿಷ್ಠ ಜನರಲ್ಲ. ಅವರಿಗೆ ಈ ಧರ್ಮವನ್ನು ಭೋಧಿಸಿದ ಶಾಸ್ತ್ರಗಳೇ ನಿಮ್ಮ ನಿಜವಾದ ಶತ್ರಗಳು. ಶಾಸ್ತ್ರಗಳಲ್ಲಿ ಜನರಿಗೆ ಇರುವ ನಿಷ್ಠೆಯನ್ನು ಮೊದಲು ನಾಶಪಡಿಸಬೇಕು ಎನ್ನುತ್ತಿದ್ದರು.
ಜಾತಿಯೆಂಬುದು ಶ್ರೇಷ್ಟ ಅಥವಾ ಪವಿತ್ರ ಎಂಬ ಭ್ರಮೆಯನ್ನು ತುಂಬುವ ನಿಮ್ಮ ಧರ್ಮಗಳಲ್ಲಿ ನ್ಯೂನ್ಯತೆ ಇದೆ ಎಂದು ಹೇಳುವ ಧೈರ್ಯ ನಿಮ್ಮಲ್ಲಿ ಬರಬೇಕು ಎಂದು ತಮ್ಮ ಹಿಂಬಾಲಕರಿಗೆ ಹೇಳುತ್ತಿದ್ದರು. ಬಹುಷಃ ಭಾರತದಲ್ಲಿ ಹಿಂದೂ ಧರ್ಮವನ್ನು ವಿಮರ್ಶೆಯ ಒರೆಗಲ್ಲಿಗೆ ಹಚ್ಚಿ, ಅದರ ಕೊಳಕನ್ನು ಅಂಬೇಡ್ಕರ್ ರವರ ಹಾಗೆ ಹೊರತೆಗೆದವರು ಮತ್ತೊಬ್ಬರು ಇರಲಾರರು. ಹಿಂದೂ ದರ್ಮವೆಂಬುದು ಕಿಟಕಿ ಬಾಗಿಲುಗಳಿಲ್ಲದ ಮನೆ’ ಎಂದು ಬಹಳ ಅರ್ಥಗರ್ಭಿತವಾಗಿ ಅಂಬೇಡ್ಕರ್ ವಿಶ್ಲೇಷಿಸಿದ್ದರು. ಒಂದು ಧರ್ಮಕ್ಕೆ ಗುರುವಾಗಬಲ್ಲ ವ್ಯಕ್ತಿ ಎಂದೂ ಕ್ರಾಂತಿಕಾರಿ ವ್ಯಕ್ತಿಯಾಗುವುದಿಲ್ಲ ಎಂದು ಹೇಳುವುದರ ಮೂಲಕ ಧರ್ಮಗುರುಗಳ ಸೀಮಿತ ಬೌದ್ಧಿಕ ಜ್ಞಾನವನ್ನು ಅವರು ಅನಾವರಣಗೊಳಿಸಿದ್ದರು.
ಧರ್ಮವನ್ನು ಕಟುವಾಗಿ ವಾಖ್ಯಾನ ಮಾಡುತ್ತಿದ್ದ ಅಂಬೇಡ್ಕರ್ , ಇತರೆ ಧರ್ಮಗುರುಗಳಿಗಿಂತ ಹೆಚ್ಚಾಗಿ ಧರ್ಮವನ್ನು ಅಳವಾಗಿ ಅಧ್ಯಯನ ಮಾಡಿದ್ದರು. ಅವರ ದೃಷ್ಟಿಯಲ್ಲಿ ಧರ್ಮ ಮನುಷ್ಯನ ಎದೆಯಲ್ಲಿ ಮೌಡ್ಯವನ್ನು ಬಿತ್ತುವ ಒಂದು ರೋಗವಾಗಿತ್ತು. ಅಂಬೇಡ್ಕರ್ ದೃಷ್ಟಿಕೋನದಲ್ಲಿ ಧರ್ಮವೆಂಬುದು ಮನುಷ್ಯನಿಗೆ ಗೌರವ ಅಥವಾ ಸಂಪತ್ತು ತರುವ ಸಾಧನವಲ್ಲ, ಬದಲಾಗಿ ಅದು ಮಾನಸಿಕ ಶಾಂತಿಯನ್ನು ತರುವುದರ ಮೂಲಕ ಸಾಮಾಜಿಕ ಕ್ಷೊಭೆಗಳನ್ನು ಹೋಗಲಾಡಿಸುವ ಮಾರ್ಗವಾಗಬೇಕು ಎಂಬುದಾಗಿತ್ತು. ಈ ಇಪ್ಪತ್ತೊಂದನೆಯ ಶತಮಾನದ ಆಧುನಿಕ ತಂತ್ರಜ್ಞಾನದ ಯುಗದಲ್ಲೂ, ಅಭಿವೃದ್ಧಿಶೀಲ ರಾಷ್ಟ್ರವೆನಿಸಿಕೊಂಡಿದ್ದ ಭಾರತ ಈಗ ಅಭಿವೃಧ್ಧಿ ರಾಷ್ಟ್ರ ಎಂಬ ಪಟ್ಟಕ್ಕೆ ದಾಪುಗಾಲು ಹಾಕುತ್ತಿರುವ ಸಂದರ್ಭದಲ್ಲಿ, ಹಿಂದೆಂದಿಗಿಂತಲೂ ಹೆಚ್ಚಾಗಿ ಜಾತಿ ವ್ಯವಸ್ಥೆ ಮುಂಚೂಣಿಗೆ ಬಂದಿದೆ, ಮತ್ತೇ ಎಲ್ಲರೂ ತಮ್ಮ ತಮ್ಮ ಜಾತಿಗಳಿಗೆ ಅಂಟಿಕೊಳ್ಳುತ್ತಿದ್ದಾರೆ.ಇದು ವರ್ತಮಾನದ ನಾಗರೀಕ ಜಗತ್ತಿನ ನಾಚಿಕೆಗೇಡಿನ ಸಂಗತಿ.
ಜಾತಿಯನ್ನು ಮುಂಚೂಣಿಗೆ ತರಲು, ರಾಜಕಾರಣಿಗಳು ಆಡುತ್ತಿರುವ ನಾಟಕಗಳು, ಹೂಡುತ್ತಿರುವ ತರಾವರಿ ಬಾಣಗಳು, ಕಟ್ಟುತ್ತಿರುವ ವೇಷ, ಆಡುತ್ತಿರುವ ಮಾತು ಇವುಗಳ ಮರ್ಮವನ್ನು ನಾವು ಅರಿಯದಿದ್ದರೆ, ಅದು ನಾವುಗಳು ಅಂಬೇಡ್ಕರ್ ರವರ ತ್ಯಾಗಮಯ ಹೋರಾಟದ ಬದುಕಿಗೆ ಮಾಡುತ್ತಿರುವ ಅಥವಾ ಮಾಡಬಹುದಾದ ಅಪಮಾನವೇ ಹೊರತು ಬೇರೇನಲ್ಲ. ಏಕೆಂದರೆ, ಅಂಬೇಡ್ಕರ್ ಚಿಂತನೆಗಳು ಯಾವುದೋ ಒಂದು ಧರ್ಮದ ಪ್ರವಾದಿಯೊಬ್ಬನ ಭಾಷಣಗಳಲ್ಲ. ನಿಗಿ ನಿಗಿ ಉರಿಯುವ ಅವರ ವ್ಯಕ್ತಿತ್ವದಂತೆ ಅವರ ಚಿಂತನೆಗಳಲ್ಲಿ ಜೀವಪರವಾದ ತುಡಿತಗಳಿವೆ, ಜೊತೆಗೆ ಮನುಷ್ಯನನ್ನು ಕತ್ತಲಿಂದ ಬೆಳಕಿನ ಲೋಕಕ್ಕೆ ಕರೆದೊಯ್ಯಬಲ್ಲ ದಾರಿ ದೀಪದಂತಹ ಗುಣಗಳಿವೆ. ಈ ಕಾರಣಕ್ಕಾಗಿ ಅಂಬೇಡ್ಕರ್ ರವರು ಗತಿಸಿದ ಅರ್ಧಶತಮಾನದ ನಂತರವೂ ಎಲ್ಲ ಪ್ರಗತಿಪರ ಮನಸ್ಸುಗಳಲ್ಲಿ ಅವರು ಜೀವಂತವಾಗಿದ್ದರೆ.
(ಧಾರವಾಡ ಆಕಾಶವಾಣಿಯ ಸಮಾನತೆಯ ಸೂರ್ಯ ಕಾರ್ಯಕ್ರಮಕ್ಕೆ ನೀಡಿದ ಕಿರು ಉಪನ್ಯಾಸ)








ಚೆನ್ನಾಗಿದೆ …
nice sir
ಲೇಖನ ಚೆನ್ನಾಗಿದೆ. ಧರ್ಮದ ಬಗ್ಗೆ ಅಂಬೇಡ್ಕರ್ ಅವರು ಹೊಂದಿದ್ದಾರೆಂದು ಭಾವನೆಯ ಕುರಿತು ಲೇಖಕರ ಮಾತು ಅರ್ಥಮಾಡಿಕೊಳ್ಳಲು ಕಷ್ಟ ಆಯಿತು. ಧರ್ಮವನ್ನು ಜಾತಿಯೊಂದಿಗೆ ಸಮೀಕರಿಸಿದ್ದರ ಪ್ರಭಾವ ಇದ್ದಿರಬಹುದು. ಯಾವ ಧರ್ಮವೂ ಅಸಮಾನತೆಯನ್ನು ಬೋಧಿಸುವುದಿಲ್ಲ. ಧರ್ಮ ಬೋಧಕರಿಂದ ಅಂತಹ ಅಪಾಯಗಳಾಗಿವೆ. ಅದನ್ನು ಧರ್ಮದ ಮೇಲೆ ಹಾಕಲಾಗದು. ಲೇಖಕರಿಗೆ ಅಭಿನಂದನೆಗಳು.
ಧರ್ಮವೆಂದರೆ ಸದ್ಹುಣಗಳ ಸಮೂಹ. ಜಾತಿಗೂ, ಧರ್ಮಕ್ಕೂ ಗಂಟು ಹಾಕಬಾರದು. ಜಗತ್ತಿಗೆಲ್ಲಾ ಇರುವುದು ಒಂದೇ ದರ್ಮ. ಮತಗಳು ನೂರಾರು ಇರಬಹುದು. ಜಾತಿವೈವಸ್ಥೆಯ ವಿಷಮತೆಯನ್ನು ಚಿತ್ರಿಸುವಾಗ ಧರ್ಮವನ್ನು ತೆಗಳುವುದು ತಪ್ಪು. ವೇದಗಳು “ಮನುರ್ಭವ” ಎಂದರೆ ಮನುಷ್ಯನಾಗು ಎಂದು ಕರೆ ಕೊಡುತ್ತದೆ. ಮತಗಳು ನೀನು ಹಿಂದುವಾಗು, ಬೌದ್ಧನಾಗು ಎನ್ನುತ್ತದೆ. ಡಾ| ಅಂಬೇಡ್ಕರ್ ಜಾತಿ ವಿಷಮತೆಯಲ್ಲಿ ನೊಂದು ಅವರು ಹಿಂದೂ ಮತವನ್ನು ತಿರಸ್ಕರಿಸಿದ್ದರು. ಇದು ಸಹಜ. ಆದರೆ, ಡಾ| ಅಂಬೇಡ್ಕರ್ ಗಿಂತ ಮೊದಲು ವೇದದ ಹಿನ್ನೆಲೆಯಲ್ಲಿಯೇ ಜಾತಿ ವೈವಸ್ತೆಯನ್ನು ತಿರಸ್ಕರಿಸಿ, ಸಮಾನತೆಯನ್ನು ಭೋದಿಸಿದವರು ಆರ್ಯಸಮಾಜದ ಸಂಸ್ಥಾಪಕರಾದ ಸ್ವಾಮಿ ದಯಾನಂದರು. ಬಹುಶಃ ಡಾ| ಅಂಬೇಡ್ಕರ್ ರವರು ದಯಾನಂದರನ್ನು ಹೆಚ್ಚು ಅಭ್ಯಾಸ ಮಾಡಿದಿದ್ದಲ್ಲಿ ಅವರು ಜೀರ್ಣಾವಸ್ತೇಯಲ್ಲಿರುವ ಭೌದ್ಧ ಮತವನ್ನು ಸ್ವೀಕರಿಸದೆ, ಶುದ್ಧ ಮಾನವೀಯತೆ, ತರ್ಕ ಮತ್ತು ವಿಜ್ಞಾನದ ನೆಲೆವೀಡಾದ ವೇದ ಧರ್ಮವನ್ನು ಆಶ್ರಯಿಸುತ್ತಿದ್ದರೇನೋ. ಅದು ಹಾಗಾಗಲಿಲ್ಲ.
ಆರ್ಯ ಸಮಾಜ ಮಾಡಿದ ಜಾತಿ ವೆವ್ಯಸ್ಥೆ ಇಂದಿಗೂ ಹಾಗೇ ಇದೆ ಯಾವ ಬದಲಾವಣೆ ಯಾಗಿಲ್ಲ ಮಿಸ್ಟರ್ Aryaveer ನೀವು ಆರ್ಯಸಮಾಜದ ಸಂಸ್ಥಾಪಕರಾದ ಸ್ವಾಮಿ ದಯಾನಂದರು. ಬಹುಶಃ ಡಾ| ಅಂಬೇಡ್ಕರ್ ರವರು ದಯಾನಂದರನ್ನು ಹೆಚ್ಚು ಅಭ್ಯಾಸ ಮಾಡಿದಿದ್ದಲ್ಲಿ ಅವರು ಜೀರ್ಣಾವಸ್ತೇಯಲ್ಲಿರುವ ಭೌದ್ಧ ಮತವನ್ನು ಸ್ವೀಕರಿಸದೆ, ಶುದ್ಧ ಮಾನವೀಯತೆ, ತರ್ಕ ಮತ್ತು ವಿಜ್ಞಾನದ ನೆಲೆವೀಡಾದ ವೇದ ಧರ್ಮವನ್ನು ಆಶ್ರಯಿಸುತ್ತಿದ್ದರೇನೋ. ಎನ್ನುವುದು ಎಷ್ಟು ಸರಿ ಈಗ ನೀವು ಮಾಡಿರುವ ಜಾತಿ ವವ್ಯಸ್ಥೆ ನಮ್ಮ ದೇಶ ವಿಭಜನೆಗೆ ಕಾರಣ ನೀವೆ
ಜಾತಿಗಳ ಹೆಸರಲ್ಲಿ ಜನ ಮಾಡಿದ್ದು ಒಂದೊಂದಲ್ಲ… ಅಸಹಾಯಕ ಜನರನ್ನು ಹುರಿದು ಮುಕ್ಕಿದರು… ಒಂದೊಳ್ಳೆ ಲೇಖನ ಸರ್
ವೇದಗಳು ಜಾತೀಯತೆಯನ್ನು ಪ್ರತಿಪಾದಿಸುವುದಿಲ್ಲ.ಆದರೆ’ಮನುಸ್ಮೃತಿ’ ಮಾತ್ರ ಜಾತಿಯತೆಯನ್ನು ಪ್ರತಿಪಾದಿಸುತ್ತದೆ. ದಯಾನಂದ ಸರಸ್ವತಿಯವರು ವೇದಗಳತ್ತ ತಿರುಗಿ ಎಂಬ ಕರೆಯನ್ನು ಕೊಟ್ಟರು. ‘ಕೃಣ್ವಂತೆ ವಿಶ್ವಮಾರ್ಯನ್’ ಇಡೀ ವಿಶ್ವವನ್ನು ಆರ್ಯರನ್ನಾಗಿ ಮಾಡಿ’ಎಂಬ ವೇದದ ಕರೆಯನ್ನೇ ದಯಾನಂದ ಸರಸ್ವತಿಯವರು ಪ್ರತಿಪಾದಿಸಿದ್ದು. ಬಹುಶಃ ದಯಾನಂದ ಸರಸ್ವತಿಯವರ ಸಂಪರ್ಕಕ್ಕೆ ಬರುತ್ತಿದ್ದರೆ ಅಂಬೇಡ್ಕರರು ಹಿಂದೂ ಧರ್ಮವನ್ನು ತ್ಯಜಿಸುತ್ತಿರಲ್ಲಿವೋ ಏನೋ. ಉದಯಕುಮಾರ ಹಬ್ಬು, ಕಿನ್ನಿಗೋಳಿ
Agreed, Uday
ಹಿಂದೂಗಳಲ್ಲಿ ವಿವಿಧ ವರ್ಗಗಳ ಧಾರ್ಮಿಕ ಆಚರಣೆಗಳಷ್ಟೇ, ಆಹಾರ ಪದ್ಧತಿಯೂ ಭಿನ್ನವಾಗಿದೆ. ಧಾರ್ಮಿಕ ಸಂಪ್ರದಾಯಗಳಿಂದ ಹಿಂದೂಗಳನ್ನು ವಿವಿಧ ವರ್ಗಗಳಾಗಿ ಹೇಗೆ ವಿಂಗಡಿಸಬಹುದೋ ಹಾಗೆ ಆಹಾರ ಪದ್ಧತಿ ಯಿಂದಲೂ ವಿಂಗಡಿಸಬಹುದು. ಧಾರ್ಮಿಕ ವರ್ಗಗಳ ಪ್ರಕಾರ ಹಿಂದೂಗಳನ್ನು ಶೈವರು ಮತ್ತು ವೈಷ್ಣವರು ಎನ್ನಬಹುದು. ಹಾಗೇ ಆಹಾರ ಪದ್ಧತಿಯ ಪ್ರಕಾರ ಮಾಂಸಾಹಾರಿಗಳು ಸಸ್ಯಾಹಾರಿಗಳು ಎಂದು ವಿಂಗಡಿಸಬಹುದು.
ಸಾಮಾನ್ಯ ಉದ್ದೇಶಕ್ಕೆ ಹಿಂದೂಗಳನ್ನು ಮಾಂಸಾಹಾರಿಗಳು ಮತ್ತು ಸಸ್ಯಾಹಾರಿಗಳು ಎಂದು ವಿಂಗಡಿಸಿದರೆ ಸಾಕು. ಆದರೆ ಅದು ಪರಿಪೂರ್ಣ ವಿಭಜನೆಯಲ್ಲ. ಅದು ಹಿಂದೂಗಳ ಎಲ್ಲ ಪಂಗಡಗಳನ್ನು ಗುರುತಿಸುವುದಿಲ್ಲ. ಮಾಂಸಾಹಾರಿಗಳನ್ನು ಎರಡು ಗುಂಪುಗಳಾಗಿ ವಿಂಗಡಿಸುವುದು ಅಗತ್ಯ. ೧. ಮಾಂಸಾಹಾರಿಗಳು, ಆದರೆ ಗೋಮಾಂಸ ಭಕ್ಷಿಸದವರು. ೨. ಗೋಮಾಂಸ ಸೇರಿದಂತೆ ಎಲ್ಲ ಬಗೆಯ ಮಾಂಸ ಭಕ್ಷಿಸುವವರು. ಅಂದರೆ ಆಹಾರ ಪದ್ಧತಿಯಲ್ಲಿ ಹಿಂದೂ ಸಮಾಜವು ಮೂರು ವರ್ಗಗಳಾಗಿ ವಿಭಜನೆಗೊಂಡಿದೆ:
೧. ಸಸ್ಯಾಹಾರಿಗಳು. ೨. ಗೋಮಾಂಸವನ್ನುಳಿದು ಇತರ ಪ್ರಾಣಿಗಳ ಮಾಂಸವನ್ನು ಭಕ್ಷಿಸುವವರು. ೩. ಗೋಮಾಂಸ ಮತ್ತು ಇತರ ಮಾಂಸ ಭಕ್ಷಿಸುವವರು. ಇದಕ್ಕೆ ಅನುಗುಣವಾಗಿ ಹಿಂದೂಗಳನ್ನು ಮೂರು ಗುಂಪ ಮಾಡಬಹುದು.. ೧. ಬ್ರಾಹ್ಮಣರು ೨. ಬ್ರಾಹ್ಮಣೇತರರು ಮತ್ತು ೩. ಅಸ್ಪೃಶ್ಯರು, ಈ ವರ್ಗೀಕರಣವು ಚಾತುರ್ವರ್ಣ್ಯಕ್ಕಿಂತ ಭಿನ್ನವಾಗಿದೆಯಾದರೂ ವಸ್ತುಸ್ಥಿತಿಗೆ ಸಮೀಪವಾಗಿದೆ.
ಈ ಮೂರು ಬಗೆಯ ವರ್ಗೀಕರಣ ಗಮನಾರ್ಹವಾದುದಾಗಿದ್ದು ವಾಸ್ತವಿಕ ಪರಿಸ್ಥಿತಿಯನ್ನು ಬಿಂಬಿಸುತ್ತದೆ. ಈ ವರ್ಗೀಕರಣದ ಬಗೆಗೆ ವಿವೇಚಿಸ ಲೆತ್ನಿಸುವವರು ಬ್ರಾಹ್ಮಣೇತರರ ವೈಶಿಷ್ಟ್ಯದ ಬಗೆಗೆ ನೋಡಬಹುದು. ಸಸ್ಯಾಹಾರ ಪದ್ಧತಿಯನ್ನು ಅರ್ಥಮಾಡಿಕೊಳ್ಳಬಹುದು. ಮಾಂಸಾಹಾರ ಪದ್ಧತಿಯನ್ನು ಅರ್ಥ ಮಾಡಿಕೊಳ್ಳಬಹುದು. ಆದರೆ ಮಾಂಸಾಹಾರಿಯಾದವರು ಒಂದುಬಗೆಯ ಅಂದರೆ ಗೋಮಾಂಸದ ಬಗೆಗೆ ಮಾತ್ರ ಏಕೆ ವಿರೋಧಿಸಬೇಕು ಎಂಬುದು ಸಮಸ್ಯೆಯೇ ಆಗಿದೆ. ಇದು ಒಂದು ಒಗಟು. ಅದಕ್ಕೆ ತಕ್ಕ ವಿವರಣೆ ಅಗತ್ಯವಾಗಿದೆ. ಬ್ರಾಹ್ಮಣೇತರರೇಕೆ ಗೋಮಾಂಸ ಭಕ್ಷಣೆಯನ್ನು ನಿಷೇಧಿಸಿದರು? ಈ ಬಗೆಗೆ ಈ ವಿಷಯದ ಮೇಲಿನ ವಿಧಿ ನಿಯಮಗಳನ್ನು ಪರಿಶೀಲಿಸುವುದು ಅಗತ್ಯ. ಇದಕ್ಕೆ ಸಂಬಂಧಿಸಿದ ನಿಯಮಗಳು ಅಶೋಕನ ಶಾಸನ ಅಥವಾ ಮನುಧರ್ಮ ಶಾಸ್ತ್ರದಲ್ಲಿ ಇರಬೇಕಲ್ಲವೆ?
ಈ ವಿಷಯಕ್ಕೆ ಸಂಬಂಧಿಸಿದ ಅಶೋಕನ ಶಿಲಾಶಾಸನಗಳು ಮೂರು. ಅವು ಶಿಲಾಲೇಖ ಸಂಖ್ಯೆ ೧, ಸ್ತಂಭಲೇಖಗಳ ಸಂಖ್ಯೆ ೨ ಮತ್ತು ೫. ಶಿಲಾಲೇಖ ಸಂಖ್ಯೆ ೧ ಈ ಕೆಳಗಿನಂತಿದೆ:
“ಪವಿತ್ರಾತ್ಮನೂ ದಯಾಳುವೂ ಆದ ಪ್ರಭುವಿನ ಆಜ್ಞೆಯಂತೆ ಈ ಪವಿತ್ರ ಶಾಸನವನ್ನು ಬರೆಯಿಸಲಾಗಿದೆ. ಇಲ್ಲಿ ರಾಜಧಾನಿಯಲ್ಲಿ ಯಜ್ಞಕ್ಕಾಗಿ ಅಥವಾ ಹಬ್ಬದ ಔತಣಗಳಿಗಾಗಿ ಯಾವೊಂದು ಪ್ರಾಣಿಯನ್ನೂ ವಧಿಸಬಾರದು, ಹಬ್ಬದ ಔತಣಗಳು ಕೆಲವೆಡೆ ಅತ್ಯುತ್ತಮವಾಗಿದ್ದರೂ ಇಂತಹ ಭೋಜನಕೂಟದಲ್ಲಿ ತೀವ್ರ ಕೆಡುಕಿದೆ ಎಂದು ಮಹಾಪ್ರಭುಗಳಿಗೆ ಅನಿಸಿದೆ.”
” ಈ ಮೊದಲು ಮಹಾಪ್ರಭುಗಳ ಭೋಜನ ಶಾಲೆಯಲ್ಲಿ ಪ್ರತಿದಿನ ಅಡುಗೆಗಾಗಿ ನೂರಾರು ಪ್ರಾಣಿಗಳ ವಧೆಯಾಗುತ್ತಿತ್ತು. ಈಗ, ಈ ಶಾಸನ ಬರೆಸಿದ ನಂತರ, ದಿನನಿತ್ಯ ಅಡುಗೆಗಾಗಿ ವಧೆಯಾಗುವ ಪ್ರಾಣಿಗಳೆಂದರೆ ಮೂರು ಮಾತ್ರ. ಎರಡು ನವಿಲು ಮತ್ತು ಒಂದು ಜಿಂಕೆ… ಮುಂದೆ ಆ ಪ್ರಾಣಿಗಳೂ ವಧೆಯಾಗತಕ್ಕದ್ದಲ್ಲ.”
ಸ್ತಂಭಲೇಖ ಸಂಖ್ಯೆ ೨ ಈ ಮುಂದಿನಂತಿದೆ:
” ಅಹಿಂಸಾ ಧರ್ಮ ಅತ್ಯಂತ ಶ್ರೇಷ್ಠ. ಆದರೆ ಅಹಿಂಸಾಧರ್ಮ ಯಾವುದರಲ್ಲಿದೆ ? ಇಲ್ಲಿನ ಅಲ್ಪ ಅಪವಿತ್ರತೆ. ಅಪಾರ ಒಳ್ಳೆಯ ಕಾರ್ಯಗಳು, ದಯೆ, ಔದಾರ್ಯ, ಸತ್ಯ ಮತ್ತು ಪರಿಶುದ್ಧತೆಗಳಲ್ಲಿದೆ.
ಧಾರ್ಮಿಕ ವಿಚಾರಧಾರೆಯನ್ನು ನಾನು ಅನೇಕ ಮುಖವಾಗಿ ನೀಡಿದ್ದೇನೆ. ಎರಡು ಕಾಲುಗಳ ಮತ್ತು ನಾಲ್ಕು ಕಾಲುಗಳ ಪ್ರಾಣಿಗಳಿಗೆ, ಹಕ್ಕಿಗಳಿಗೆ ಜಲಚರ ಪ್ರಾಣಿಗಳಿಗೆ ಪ್ರಾಣದಾನ ಸಹಿತ ನಾನಾ ಬಗೆಯ ದಾನಗಳನ್ನು ನಾನು ನೀಡಿದ್ದೇನೆ. ಇತರ ಅನೇಕ ಒಳಿತನ್ನು ನಾನು ಮಾಡಿದ್ದೇನೆ.
ಈ ಉದ್ದೇಶಕ್ಕಾಗಿ ಈ ಪವಿತ್ರ ಶಾಸನ ಬರೆಸಿದ್ದೇನೆ. ಮಾನವರು ಈ ಸಂದೇಶದಂತೆ ನಡೆಯಲಿ, ದೀರ್ಘ ಕಾಲ ಇದು ಸ್ಥಿರವಾಗಿರಲಿ. ಈ ಉಪ ದೇಶದಂತೆ ನಡೆಯುವವರಿಗೆ ಶುಭವಾಗಲಿ.”
ಸ್ತಂಭಲೇಖ ಸಂಖ್ಯೆ ೫ ಹೀಗೆ ಹೇಳಿದೆ.
“ಪವಿತ್ರಾತ್ಮನೂ ದಯಾಳುವೂ ಆದ ಮಹಾಪ್ರಭು ಅರಸು ಹೀಗೆಂದಿದ್ದಾನೆ:
ಇಪ್ಪತ್ತಾರು ವರ್ಷಗಳ ನಂತರ ನನ್ನ ರಾಜ್ಯಭಾರದಲ್ಲಿ ಈ ಕೆಳಗಿನ ಪ್ರಾಣಿಗಳನ್ನು ಕೊಲೆಯಿಂದ ಮುಕ್ತಗೊಳಿಸಿದ್ದೇನೆ; ಗಿಳಿಗಳು, ಬಕ, ಬಾತು, ಹೆಣ್ಣುಬಾತು, ಪಂಡಿತಮುಖ, ಗೆಲತ, ಬಾವಲಿ, ರಾಣಿ ಇರುವೆ, ಹೆಣ್ಣು ಆಮೆ, ಎಲುಬಿಲ್ಲದ ಮೀನು. ವೇದವೇಯಕ, ಗಂಗ ಪುತಕ, ನದಿ ಆಮೆ, ಮುಳ್ಳು ಹಂದಿ, ಅಳಿಲು, ಬರಸಿಂಘ, ಜಿಂಕೆ, ಬ್ರಾಹ್ಮನಿ ಎತ್ತು, ಕೋತಿ, ನೀರಾನೆ, ಕಂದುಕ ಪೋತ, ಊರ ಪಾರಿವಾಳ ಹಾಗೂ ಬಳಸದ ಅಥವಾ ತಿನ್ನದಂತಹ ಇತರ ನಾಲ್ಕು ಕಾಲಿನ ಪ್ರಾಣಿಗಳು.
ಹೆಣ್ಣಾಡುಗಳು, ಆಡಿನ ಮರಿಗಳು, ಎಳೆಯದಾದ ಹಾಗೂ ಹಾಲು ತುಂಬಿದ ಪ್ರಾಣಿಗಳು, ಆರು ತಿಂಗಳ ವಯಸ್ಸಿನ ಮರಿಗಳೂ ಕೊಲೆಯಾಗ ತಕ್ಕದಲ್ಲ.
ಹುಂಜನ ಬೀಜ ಒಡೆಯಬಾರದು.
ಜೀವಂತ ಪ್ರಾಣಿಗಳಿರುವ ಕಸದ ಕುಪ್ಪೆಯನ್ನು ದಹಿಸಬಾರದು.
ಚೇಷ್ಟೆಗಾಗಲಿ, ಜೀವಂತ ಪ್ರಾಣಿಗಳ ಕೊಲೆಗಾಗಲಿ ಕಾಡುಗಳನ್ನು ಸುಡಬಾರದು.
ಮಾನವರಿಗೆ ಅಥವಾ ಪ್ರಾಣಿಗಳಿಗೆ ಸಜೀವಿಗಳನ್ನು ಆಹಾರವಾಗಿ ನೀಡಲಾಗದು. ಹಬ್ಬದ ಮೂರು ಹುಣ್ಣಿಮೆಯ ದಿನಗಳಲ್ಲಿ, ತಿಷ್ಯ ಮಾಸದ ಹುಣ್ಣಿಮೆಯಂದು ಮೂರು ದಿನ ಅಂದರೆ ಮೊದಲ ಪಕ್ಷದಲ್ಲಿ ೧೪ ಮತ್ತು ೧೫ನೇ ದಿನ ಮತ್ತು ಎರಡನೆ ಪಕ್ಷದ ಪ್ರಥಮ ದಿನ ಹಾಗೂ ಇಡೀ ವರ್ಷದ ಪ್ರಥಮ ದಿನಗಳಲ್ಲಿ ಮೀನು ಕೊಲ್ಲಲಾಗದು, ಮಾರಾಟ ಮಾಡಲಾಗದು.
ಅದೇ ದಿನಗಳಲ್ಲಿ ಆನೆಗಳ ಹಿಂಡಿನಲ್ಲಿ ಅಥವಾ ಮೀನು ಸಂಗ್ರಹಿತ ಕೊಳಗಳಲ್ಲಿ ಹಾಗೂ ಇತರ ವರ್ಗದ ಪ್ರಾಣಿಗಳನ್ನು ನಾಶಮಾಡಕೂಡದು.
ಪ್ರತಿಪಕ್ಷದ ೮, ೧೪ ಮತ್ತು ೧೫ನೇ ದಿನಗಳಲ್ಲಿ ಹಾಗೂ ತಿಷ್ಯ, ಪುನರ್ವಸು ಮತ್ತು ಹಬ್ಬದ ದಿನಗಳಲ್ಲಿ ಹೋರಿಗಳ ಬೀಜ ಒಡೆಯಲಾಗದು. ಹಾಗೇ ಹೋತ, ಟಗರು, ಕರಡಿ ಮತ್ತಿತರ ಪ್ರಾಣಿಗಳ ಬೀಜ ಒಡೆಯಬಾರದು.
ತಿಷ್ಯ ಮತ್ತು ಪುನರ್ವಸು ದಿನಗಳಲ್ಲಿ, ಹುಣೆಮೆ ದಿನಗಳಲ್ಲಿ ಹಾಗೂ ಹಬ್ಬದ ಹುಣ್ಣಿಮೆಯ ಪಕ್ಷದಲ್ಲಿ ಕುದುರೆಗಳಿಗೂ ಎತ್ತುಗಳಿಗೂ ಬರೆ ಎಳೆಯಬಾರದು.
ನನ್ನ ರಾಜ್ಯ ಭಾರದ ೨೬ನೇ ವಾರ್ಷಿಕೋತ್ಸವದವರೆಗೆ ೨೫ ಸಾರಿ ಖೈದಿಗಳನ್ನು ಬಿಡುಗಡೆ ಮಾಡಿದೆ.” ಇದು ಅಶೋಕನ ಶಾಸನ.
ಈಗ ಮನುವನ್ನು ನೋಡೋಣ . ಮಾಂಸ ಭಕ್ಷಣೆಯ ವಿಚಾರದಲ್ಲಿ ಆತ ಈ ಕೆಳಗಿನಂತೆ ಸಾರಿದ್ದಾನೆ:
“ಆತ ಎಲ್ಲ ಬಗೆಯ ಕಾಡುಹಕ್ಕಿಗಳನ್ನು, ಹಳ್ಳಿಗಳಲ್ಲಿ ವಾಸವಾಗಿರುವುಗಳನ್ನು ಮತ್ತು ತಿನ್ನಲೇಬಾರದಾದ ಒಂದು ಕಾಲಿನ ಪ್ರಾಣಿಗಳನ್ನು ಮತ್ತು ತಿತ್ತಿಭವನ್ನು ತಿನ್ನದಿರಲಿ (v-೧೧)
ಗುಬ್ಬಚ್ಚಿ, ಪ್ಲವ, ಹಂಸ, ಬ್ರಾಹ್ಮನಿ ಬಾತು, ಊರ ಹುಂಜ, ಸರಸ ಕೊಕ್ಕರೆ, ರೆಗ್ಗುಡಲ, ಮರುಕುಟಿಗ, ಗಿಳಿ ಮತ್ತು ಮೈನಾ. (v-೧೨)
ತಮ್ಮ ಕೊಕ್ಕುಗಳಿಂದ ಕುಕ್ಕಿ ಆಹಾರ ಸೇವಿಸುವ ಹಕ್ಕಿಗಳು, ಪಾದದಲ್ಲಿ ಪರೆ ಇರುವುವು. ಕೊಯಷ್ಟಿ, ಕಾಲಿನಿಂದ ನೆಲ ಕೊರೆಯುವುವು, ನೀರಿನಲ್ಲಿ ಮುಳುಗಿ ಜೀವಂತ ಮೀನು ತಿನ್ನುವುವು. ಕಟುಕನಂಗಡಿಯಿಂದ ಮಾಂಸವನ್ನೂ, ಒಣಮಾಂಸವನ್ನೂ ತಿನ್ನುವವು. (v-೧೩)
ಬಕ ಮತ್ತು ಬಲಾಕ, ಕೊಕ್ಕರೆ, ಹದ್ದು, ಮೀನು ತಿನ್ನುವ ಪ್ರಾಣಿಗಳು, ಊರ ಹಂದಿಗಳು ಮತ್ತು ಎಲ್ಲ ಬಗೆಯ ಮೀನುಗಳು. (v-೧೪) (v.೧೪)
ಆತನು ಯಾವೊಂದರ ಮಾಂಸ ತಿಂದರೂ ಮಾಂಸಾಹಾರಿ ಎನಿಸುತ್ತಾನೆ ಮತ್ತು ಅವುಗಳಲ್ಲಿ ಯಾವೊಂದರ ಮಾಂಸ ತಿಂದರೂ ಎಲ್ಲ ಬಗೆಯ ಮಾಂಸಾಹಾರಿ ಎನಿಸುತ್ತಾನೆ.. ಆದ್ದರಿಂದ ಆತ ಮೀನು ತಿನ್ನದಿರಲಿ. (v-೧೫) (v.೧೫)
ಆದರೆ ಪಾಠೀಣ ಮತ್ತು ರೋಹಿತ ಎಂಬ ಮೀನುಗಳನ್ನು ದೇವರಿಗೆ ಅರ್ಪಿಸಿದಲ್ಲಿ ತಿನ್ನಬಹುದು. ಹಾಗೇ ಎಲ್ಲ ಸಂದರ್ಭಗಳಲ್ಲಿರಗಿವಾ, ಸಿಂಹ ತುಂಡ ವಕತ್ತು ಸಶಲ್ಕ ಮೀನುಗಳನ್ನು ತಿನ್ನಬಹುದು.( v-೧೬) (v.೧೭)
ಆತ ತಿನ್ನಬಹುದಾದ ವರ್ಗಕ್ಕೆ ಸೇರಿದ್ದರೂ ಕೂಡ ಏಕಾಂಗಿಯಾದ ಅಥವಾ ಗುರುತರಿಯದ ಪ್ರಾಣಿಯನ್ನಾಗಲಿ, ಹಕ್ಕಿಯನ್ನಾಗಲಿ ತಿನ್ನದಿರಲಿ. (v-೧೭)
ಮುಳ್ಳುಹಂದಿ, ಕಾಡಿಲಿ, ನೀರಾನೆ, ಆಮೆ ಮತ್ತು ಮೊಲ ತಿನ್ನಲರ್ಹವಾದುವು. ಅದೇ ರೀತಿ ಒಂಟೆಯ ಹೊರತಾಗಿ ದವಡೆಯಲ್ಲಿ ಹಲ್ಲುಗಳಿರುವ ಎಲ್ಲ ಸಾಕುಪ್ರಾಣಿಗಳು ಸಹ. (v-೧೮).
ಪ್ರಾಣಿಹತ್ಯೆಯ ಬಗೆಗೆ ಅಶೋಕ ಮತ್ತು ಮನುವಿನ ಶಾಸನಗಳನ್ನು ನೋಡಿದೆವು. ನಾವು ಮುಖ್ಯವಾಗಿ ಗೋವಿನ ಬಗ್ಗೆ ಆಸಕ್ತರಾಗಿದ್ದೇವೆ. ಆಶೋಕನ ಶಾಸನಗಳನ್ನು ಪರಿಶೀಲಿಸಿದಾಗ ಎದುರಾಗುವ ಪ್ರಶ್ನೆ ಎಂದರೆ ಆತ ಗೋಹತ್ಯೆ ನಿಷೇಧಿಸಿದ್ದನೆ? ಈ ವಿಚಾರದಲ್ಲಿ ಭಿನ್ನಾಭಿಪ್ರಾಯಗಳಿವೆ. ಅಶೋಕನು ಗೋಹತ್ಯೆಯನ್ನು ನಿಷೇಧಿಸಿಲ್ಲವೆಂದು ಪ್ರೊ. ವಿನ್ಸೆಂಟ್ ಸ್ಮಿತ್ ಅಭಿಪ್ರಾಯ ಪಡುತ್ತಾರೆ. ಅಶೋಕನ ಶಾಸನಗಳ ಬಗ್ಗೆ ವಿಮರ್ಶಿಸುತ್ತಾ ಸ್ಮಿತ ಹೇಳುತ್ತಾರೆ:
“ಅಶೋಕನ ಶಾಸನವು ಗೋಹತ್ಯೆ ನಿಷೇಧಿಸಿಲ್ಲವೆಂಬುದು ಗಮನಾರ್ಹ ಅಂಶ. ಗೋಹತ್ಯೆ ಧರ್ಮಸಮ್ಮತವಾಗಿ ಮುಂದುವರಿದಂತೆ ಕಾಣುತ್ತದೆ.”
ಪ್ರೊ.ಸ್ಮಿತ್ರೊಡನೆ ಚರ್ಚೆಗಿಳಿದ ಪ್ರೊ. ರಾಧಾ ಕುಮುದ ಮುಖರ್ಜಿಯವರು ಅಶೋಕನು ಗೋಹತ್ಯೆ ನಿಷೇಧಿಸಿದ್ದಾನೆ ಎಂದು ಸಾರಿದ್ದಾರೆ. ಪ್ರೊ. ಮುಖರ್ಜಿಯವರು ಮೇಲೆ ಉದಾಹರಿಸಿದ ಸ್ತಂಭಲೇಖ ಸಂಖ್ಯೆ ೫ನ್ನು ಉದಾಹರಿಸಿದ್ದಾರೆ. ಅದರಲ್ಲಿ ಎಲ್ಲಾ ನಾಲ್ಕು ಕಾಲಿನ ಪ್ರಾಣಿಗಳಿಗೂ ಶಾಸನ ಅನ್ವಯಿಸಿದೆಯಾಗಿ ಈ ಶಾಸನದಂತೆ ಗೋಹತ್ಯೆ ನಿಷೇಧವಾಗಿದೆ ಎನ್ನುತ್ತಾರೆ.
ಶಾಸನದ ಹೇಳಿಕೆಯ ಸರಿಯಾದ ಅರ್ಥ ಇದಲ್ಲ. ಸ್ತಂಭ ಲೇಖದ ಹೇಳಿಕೆ ಸೂಚಕವಾಗಿದೆ. ಅದು ಎಲ್ಲಾ ನಾಲ್ಕು ಕಾಲಿನ ಪ್ರಾಣಿಗಳಿಗೆ ಅನ್ವಯಿಸುವುದಿಲ್ಲ; ಬದಲಾಗಿ ಬಳಸಲಾಗದಿರುವ ಅಥವಾ ಭಕ್ಷಿಸದಿರುವ ನಾಲ್ಕು ಕಾಲಿನ ಪ್ರಾಣಿಗಳಿಗೆ ಮಾತ್ರ ಸಂಬಂಧಿಸಿದೆ. ಹಸವು ಬಳಸಲಾಗದ ಅಥವಾ ತಿನ್ನದಿರುವ ನಾಲ್ಕು ಕಾಲಿನ ಪ್ರಾಣಿ ಎನ್ನಲು ಸಾಧ್ಯವಿಲ್ಲ. ಅಶೋಕನು ಗೋಹತ್ಯೆ ನಿಷೇಧಿಸಲಿಲ್ಲ ಎಂಬ ಪ್ರೊ. ಸ್ಮಿತ್ರ ಅಭಿಪ್ರಾಯಸರಿ ಎಂದು ತೋರುತ್ತದೆ. ಪ್ರೊ. ಮುಖರ್ಜಿಯವರು ಅಶೋಕನ ಕಾಲದಲ್ಲಿ ಗೋಭಕ್ಷಣೆ ಇರಲಿಲ್ಲವಾದ್ದರಿಂದ ಅದು ನಿಷೇಧದ ವ್ಯಾಪ್ತಿಯಲ್ಲಿ ಸೇರುತ್ತದೆ ಎಂದಿದ್ದಾರೆ. ಆದರೆ ಗೋವನ್ನು ಎಲ್ಲ ವರ್ಗದವರೂ ಭಕ್ಷಿಸುತ್ತಿದ್ದರಿಂದ ಅವರ ಹೇಳಿಕೆ ಅಸಂಬದ್ಧವಾಗಿದೆ.
ಅಶೋಕನ ಸ್ತಂಭಲೇಖನಕ್ಕೆ ಹೊಸ ಅರ್ಥ ಕಲ್ಪಿಸಿ ಅಶೋಕ ಗೋಹತ್ಯೆ ನಿಷೇಧಿಸಿದ್ದನೆಂದು – ಹಾಗೆ ಮಾಡುವುದು ಅವನ ಕರ್ತವ್ಯವಾಗಿತ್ತು ಎಂಬಂತೆ ಪ್ರೊ. ಮುಖರ್ಜಿಯವರ ಹಾಗೆ ಸಿದ್ಧಪಡಿಸಲು ತೊಡಗುವುದು ಅನಾವಶ್ಯಕ. ಅಶೋಕನಿಗೇನೂ ಗೋವಿನ ಬಗ್ಗೆ ವಿಶೇಷ ಆಸಕ್ತಿ ಇರಲಿಲ್ಲ ಹಾಗೂ ಗೋಹತ್ಯೆ ನಿಷೇಧಿಸುವ ವಿಶಿಷ್ಟ ಹೊಣೆಯೂ ಇರಲಿಲ್ಲ. ಅಶೋಕನಿಗೆ ಮಾನವರು ಮತ್ತು ಎಲ್ಲ ಪ್ರಾಣಿವರ್ಗದ ಜೀವಗಳ ಪಾವಿತ್ರ್ಯತೆಯಲ್ಲಿ ಆಸಕ್ತಿ ಇತ್ತು. ಹತ್ಯೆಯು ಅನಗತ್ಯವಾದ ಕಡೆಗಳಲೆಲ್ಲಾ ಅದನ್ನು ನೆಷೇಧಿಸುವುದು ತನ್ನ ಕರ್ತವ್ಯವೆಂದು ಆತ ತಿಳಿದಿದ್ದ. ಅದಕ್ಕಾಗೇ ಯಜ್ಞಕ್ಕಾಗಿ ಪ್ರಾಣಿಹತ್ಯೆ ಮಾಡುವುದು ಅನಗತ್ಯವೆಂದು ತಿಳಿದು ಅದನ್ನು ನಿಷೇಧಿಸಿದ್ದ. ಬಳಸದ ಹಾಗೂ ತಿನ್ನದ ಪ್ರಾಣಿಗಳನ್ನು ಕೊಲೆಮಾಡುವುದೂ ಅನಾವಶ್ಯಕ ಎಂದು ಅಂತಹ ಕೊಲೆಯನ್ನು ನಿಷೇಧಿಸಿದ್ದ. ಬೌದ್ಧಧರ್ಮದ ಮೇಲಿರುವ ಗೌರವ ಭಾವದಿಂದ, ಅಶೋಕನು ಗೋಹತ್ಯೆಯನ್ನು ನಿರ್ದಿಷ್ಟವಾಗಿ ನಿಷೇಧಿಸಲಿಲ್ಲವೆಂಬ ಸತ್ಯವನ್ನೇ ಅವನ ಮೇಲೆ ಆರೋಪವಾಗಿ ಬಳಸಲಾಗದು.
ಮನುವಿನ ವಿಚಾರಕ್ಕೆ ಬಂದರೆ ಆತ ಸಹ ಗೋಹತ್ಯೆ ನಿಷೇಧಿಸಿಲ್ಲ ವೆಂಬುದರಲ್ಲಿ ಸಂದೇಹವೇ ಇಲ್ಲ. ಬದಲಾಗಿ ಆತ ಕೆಲವೊಂದು ಸಂದರ್ಭಗಳಲ್ಲಿ ಗೋಮಾಂಸ ಭಕ್ಷಣೆ ಕಡ್ಡಾಯ ಮಾಡಿದ್ದಾನೆ.
ಹಾಗಾದರೆ ಬ್ರಾಹ್ಮಣೇತರರು ಗೋಮಾಂಸ ಭಕ್ಷಣೆಯನ್ನೇಕೆ ಕೈಬಿಟ್ಟರು? ಇದಕ್ಕೆ ನಿರ್ದಿಷ್ಟವಾದ ಯಾವೊಂದು ಕಾರಣವೂ ಇದ್ದಂತೆ ತೋರುವುದಿಲ್ಲ. ಆದರೆ ಅದರ ಹಿನ್ನೆಲೆಯಲ್ಲಿ ಯಾವುದೋ ಕಾರಣವಿರಲೇಬೇಕು. ಅಂಬೇಡ್ಕರರ ಪ್ರಕಾರ ಬ್ರಾಹ್ಮಣರನ್ನು ಅನುಕರಿಸುವ ಬಯಕೆಯಿಂದಲೇ ಬ್ರಾಹ್ಮಣೇತರರು ಗೋಮಾಂಸ ಸೇವನೆಯನ್ನು ಕೈಬಿಟ್ಟರು. ಇದು ನೂತನ ಶೋಧನೆಯಾದರೂ ಅಸಾಧ್ಯವಾದುದೇನಲ್ಲ. ಮೇಲ್ವರ್ಗದ ಜನರ ರೀತಿನೀತಿಗಳನ್ನು ಕೆಳವರ್ಗದವರು ಅನುಕರಿಸುವುದರಿಂದ ಸಮಾಜದೊಳಗೆ ಸಂಸ್ಕೃತಿಯು ಹರಡುತ್ತದೆ ಎಂದು ಫ್ರೆಂಚ್ ಸಾಹಿತಿ ’ಗಾಬ್ರಿಯಲ್ ಟಾರ್ಡ್” ವಿವರಿಸಿದ್ದಾರೆ. ಈ ವಿಷಯ ಸಾಮಾನ್ಯವಾಗಿ ಎಲ್ಲರಿಗೂ ತಿಳಿದ ಸಂಗತಿಯೇ ಆಗಿದೆಯಾದ್ದರಿಂದ ಇದನ್ನು ಪ್ರಶ್ನಿಸುವವರಾರೂ ಸಿಗಲಾರರು.
ತಮಗಿಂತ ಉಚ್ಛವರ್ಗದವರೆನಿಸಿದ ಬ್ರಾಹ್ಮಣರ ರೀತಿನೀತಿಗಳನ್ನು ಅನುಕರಿಸುವ ಭರದಲ್ಲಿ ಬ್ರಾಹ್ಮಣೇತರರು ಗೋಮಾಂಸ ಭಕ್ಷಣೆಯನ್ನು ತೊರೆಯುವುದರೊಂದಿಗೆ ಗೋಪೂಜೆಯನ್ನೂ ಪ್ರಾರಂಭಿಸಿದರು ಎಂಬುದು ನಿರ್ವಿವಾದವಾದುದು. ವಾಸ್ತವವಾಗಿ ಗೋಪೊಜೆ ಬಗೆಗೆ ಬ್ರಾಹ್ಮಣರು ಅಪಾರ ಪ್ರಚಾರ ಮಾಡಿದ್ದಾರೆ. ’ಗಾಯತ್ರಿ ಪುರಾಣ’ ಈ ಪ್ರಚಾರದ ಒಂದು ಮಾದರಿ. ಆದರೆ ಇದು ಅನುಕರಣ ನಿಯಮದ ಫಲ.
ವಾಸ್ತವವಾಗೇ ಇದರಿಂದ ಮತ್ತೊಂದು ಪ್ರಶ್ನೆ ಉದ್ಭವಿಸುತ್ತದೆ. ಹಾಗಾದರೆ ಬ್ರಾಹ್ಮಣರೇಕೆ ಗೋಮಾಂಸ ಭಕ್ಷಣೆಯನ್ನು ಕೈಬಿಟ್ಟರು? ಬ್ರಾಹ್ಮಣೇತರರು ವಾಸ್ತವವಾಗಿ ಕ್ರಾಂತಿಯನ್ನೇ ಸಾಧಿಸಿದ್ದಾರೆ. ಗೋಮಾಂಸ ಭಕ್ಷಕರಾಗಿದ್ದವರು ಗೋಮಾಂಸ ಭಕ್ಷಿಸದವರಾಗಿದ್ದಾರೆ. ನಿಜಕ್ಕೂ ಇದೊಂದು ಕ್ರಾಂತಿಯೇ. ಆದರೆ ಬ್ರಾಹ್ಮಣೇತರರು ಒಂದು ಕ್ರಾಂತಿಯನ್ನು ಹಾದು ಸಾಗಿದ್ದರೆ, ಬ್ರಾಹ್ಮಣರು ಎರಡು ಕ್ರಾಂತಿ ಸಾಧಿಸಿದ್ದಾರೆ. ಅವರು ಗೋಮಾಂಸ ಭಕ್ಷಣೆ ನಿಲ್ಲಿಸಿದುದು ಒಂದು ಕ್ರಾಂತಿ ; ಮಾಂಸಾಹಾರವನ್ನು ಪೂರ್ಣ ತ್ಯಜಿಸಿ ಸಸ್ಯಾಹಾರಿಗಳಾದುದು ಎರಡನೆಯ ಕ್ರಾಂತಿ.
ಇದು ಮಹತ್ತಾದ ಕ್ರಾಂತಿ ಎಂಬುದರಲ್ಲಿ ಸಂದೇಹವಿಲ್ಲ. ಬ್ರಾಹ್ಮಣರು ಅತ್ಯಂತ ಅಧಿಕ ಗೋಮಾಂಸ ಭಕ್ಷಕರಾಗಿದ್ದ ಕಾಲವೊಂದಿತ್ತು. ಬ್ರಾಹ್ಮಣೇತರರೂ ಗೋಮಾಂಸ ಭಕ್ಷಿಸುತ್ತಿದ್ದರಾದರೂ ಪ್ರತಿ ದಿನ ಅದು ಅವರಿಗೆ ಸಾಧ್ಯವಿರಲಿಲ್ಲ. ಗೋವು ಅಮೂಲ್ಯವಾದ ಪ್ರಾಣಿ ಹಾಗೂ ಆಹಾರಕ್ಕಾಗೇ ಅದನ್ನು ಕೊಲ್ಲಲು ಬ್ರಾಹ್ಮಣೇತರರು ಶಕ್ತರಾಗಿರಲಿಲ್ಲ. ನಿರ್ದಿಷ್ಟ ಸಂದರ್ಭಗಳಲ್ಲಿ ಧಾರ್ಮಿಕ ಕಾರ್ಯಗಳಿಗಾಗಿಯೋ ಅಥವಾ ವೈಯಕ್ತಿಕ ಕಾರಣದಿಂದಲೋ ಆತ ಗೋಹತ್ಯೆ ನಡೆಸಬೇಕಾಗಿತ್ತು. ಆದರೆ ಬ್ರಾಹ್ಮಣನ ವಿಷಯವೇ ಬೇರೆ; ಆತ ಪುರೋಹಿತ, ಸದಾ ಯಜ್ಞ ಯಾಗಾದಿಗಳು ನಡೆಯುತ್ತಿದ್ದ ಅಂದಿನ ಕಾಲದಲ್ಲಿ ಬ್ರಾಹ್ಮಣನಿಗೆ ಆಹ್ವಾನವಿಲ್ಲದ, ಗೋಬಲಿ ಇಲ್ಲದ ದಿನವೇ ಇರಲಿಲ್ಲ, ಪ್ರತಿದಿನವೂ ಬ್ರಾಹ್ಮಣನಿಗೆ ಗೋ ಮಾಂಸದ ದಿನವಾಗಿತ್ತು. ಆದುದರಿಂದ ಬ್ರಾಹ್ಮಣರು ಅತ್ಯಂತ ಅಧಿಕ ಗೋಮಾಂಸ ಭಕ್ಷಕರಾಗಿದ್ದರು. ಬ್ರಾಹ್ಮಣರ ಯಜ್ಞವೆಂದರೆ ವೈಭವಯುತವಾಗಿ ಧರ್ಮದ ಹೆಸರಿನಲ್ಲಿ ಪ್ರಾಣಿಗಳ ವಧೆ ಹಾಗೂ ತನ್ನ ಗೋಮಾಂಸಾಕಾಂಕ್ಷೆಯನ್ನು ಮರೆಸುವ ಅಂಧಶ್ರದ್ಧೆಯ ಒಂದು ಮುಸುಕು!
ಜೈ ಭೀಮ್