ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದ್ವೇಷ, ಭ್ರಮೆ, ಸುಳ್ಳು..

 

 

 

 

ಜಿ ಎನ್ ನಾಗರಾಜ್ 

 

 

 

 

ದೇವನೂರು ಮಹಾದೇವರವರೊಡನೆ ಮೊನ್ನೆ ಮೈಸೂರಿನ ರಂಗಾಯಣದ ಕ್ಯಾಂಟೀನಿನಲ್ಲಿ ಮಾತನಾಡುತ್ತಿರುವಾಗ ದೇಶದಲ್ಲಿ ಪ್ರಜಾಪ್ರಭುತ್ವಕ್ಕೆ ಎರಗಿರುವ ಅಪಾಯವನ್ನು ತೊಡೆಯಲು ಬಿಜೆಪಿಯ ಸರ್ವಾಧಿಕಾರದ ಮೂಲವಾದ ದ್ವೇಷ, ಭ್ರಮೆ, ಸುಳ್ಳುಗಳ ಬಗ್ಗೆ ಜನರಿಗೆ ಮನವರಿಕೆ ಮಾಡಿಕೊಡಬೇಕು ಎಂದರು. ಈ ಬಗ್ಗೆ ಈಗಲೇ ಏನೂ ಹೇಳುವುದು ಬೇಡ ಯೋಚನೆ ಮಾಡಿ ಎಂದರು. ಅದನ್ನು ಕೇಳಿಸಿಕೊಂಡ ನಮ್ಮ ಮೇಜಿನ ಸುತ್ತ ಇದ್ದ ನಾಲ್ಕಾರು ಜನರ ಮನಸ್ಸಿನಲ್ಲಿಯೂ ಈ ವಿಚಾರ ಮೊಳಕೆಯೊಡೆಯುತ್ತಿರಬೇಕು.

ನನ್ನ ಮನಸ್ಸಿನಲ್ಲಿ ಈ ಮೂರು ಪದಗಳು ಬಿಂಬಿಸುವ ಮನೋ “ವ್ಯಾಪಾರ “ ಕ್ಕೆ ಸಂಬಂಧಿಸಿದ ವಿಷಯಗಳನ್ನು ಆಳುವ ಜನರು ಹೇಗೆಲ್ಲಾ ತಮ್ಮ ಅಧಿಕಾರಾಕಾಂಕ್ಷೆಗೆ , ದುರ್ಲಾಭಕ್ಕೆ ಬಳಸಿಕೊಂಡಿದ್ದಾರೆ ಎಂಬುದು ತೆರೆದುಕೊಳ್ಳುತ್ತಾ ಹೋಯಿತು.

ಈ ಸುಳ್ಳುಗಳ ಸುರಿಮಳೆ, ಅದರ ಮೇಲೆ ಭ್ರಮೆಯ ಬೆಳೆ ಸಂವಿಧಾವನ್ನು ಅಂಗೀಕರಿಸಿದ ಮೊದಲ ವರ್ಷಗಳಿಂದಲೇ ಆರಂಭವಾಯಿತು. ಸಂವಿಧಾನದಲ್ಲಿ ಅಂಬೇಡ್ಕರ್ ರವರು ಮತ್ತು ಕೆಲ ಪ್ರಜಾಸತ್ತಾತ್ಮಕ ಮನಸ್ಸಿನವರು ಸೇರಿಸಿದ ಹೊಸ ಮೌಲ್ಯಗಳಿಗೆ ತಿಲಾಂಜಲಿ ಕೊಡಲಾಯಿತು. ಅದಕ್ಕೆ ಬಹು ಮುಖ್ಯ ಸಾಕ್ಷಿ – ಅಸ್ಪೃಶ್ಯತೆಯ ನಿಷೇಧ , 1950 ರಲ್ಲಿಯೇ ನಿಷೇಧಗೊಂಡಿದ್ದರೂ ಇಂದೂ ಕೂಡ ದೇಶದ ಯಾವ ಮೂಲೆಯಲ್ಲಿಯೂ ನಿಷೇಧವಾಗದ ಅಸ್ಪೃಶ್ಯತೆ . ಸಂವಿಧಾನದ ರಕ್ಷಕರಾದ ರಾಷ್ಟ್ರ ಪತಿ, ಮೂರು ಮುಖ್ಯ ಅಂಗಗಳಾದ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗಗಳಲ್ಲಿ ನಿಷೇಧವಾಗದ ಅಸ್ಪೃಶ್ಯತೆ. ಸಂಸದರು, ಶಾಸಕರು, ಪ್ರಧಾನ ಮಂತ್ರಿ, ಮಂತ್ರಿಮಂಡಲ ಕಾರ್ಯಾಂಗ, ಸುಪ್ರೀಂ ಕೋರ್ಟ್ ನ ಮುಖ್ಯ ನ್ಯಾಯಾಧೀಶರು, ಇಡೀ ನ್ಯಾಯಾಂಗದಲ್ಲಿ ನಿಷೇಧವಾಗದ ಅಸ್ಪೃಶ್ಯತೆ ಮತ್ತು ಮೂಡದ ಸಮಾನತೆ, ಭ್ರಾತೃ ಭಾವ. ಇದಕ್ಕಿಂತ ದೊಡ್ಡ ಸುಳ್ಳು ಬೇಕೇ. ಇದು ಮೂಡಿಸಿದ ಮಹಾಭ್ರಮೆ. ಇಂದು ನಮ್ಮ ದೇಶವನ್ನು ಕಾಡುತ್ತಿರುವ ದ್ವೇಷದ ರಾಜಕೀಯಕ್ಕೆ ಮೀಸಲಾತಿ ದ್ವೇಷದ ಮೂಲಕ ಈ ಸುಳ್ಳು ಎಷ್ಟು ದೊಡ್ಡ ಕಾಣಿಕೆ ನೀಡಿದೆ ಎಂಬ ಯೋಚನೆ ನನ್ನ ಮನಸ್ಸನೆಲ್ಲಾ ಅವರಿಸಿದೆ.
ಇನ್ನು ಈ ಎಪ್ಪತ್ತು ವರ್ಷಗಳಲ್ಲಿ ಅಧಿಕಾರ ನಡೆಸಿದವರು ಬಿತ್ತಿದ ಸುಳ್ಳುಗಳ ಸರಮಾಲೆ ಎಷ್ಟೋ ! ಮೂಡಿಸಿದ ಭ್ರಮೆಗಳೆಷ್ಟೋ !

1952 ರ ಮೊದಲ ಚುನಾವಣೆಯಲ್ಲಿಯೇ ‘ನಯಾಜೀವನ್ ‘ ಎಂಬುದು ಚುನಾವಣೆಯ ಪ್ರಧಾನ ಘೋಷಣೆ ಮತ್ತು ಸುಳ್ಳು. 1957 ರ ಚುನಾವಣೆಯಲ್ಲಿ ಸಮಾಜವಾದ ಎಂಬುದರ ಬಗ್ಗೆ ಏನೂ ಗೊತ್ತಿಲ್ಲದ ಜನರ ಮುಂದೆ ಸಮಾಜವಾದದ ಗಂಧವೇ ಇಲ್ಲದ ‘ ಸಮಾಜವಾದೀ ರೀತಿಯ ಸಮಾಜ’ ನಮ್ಮ ಗುರಿ ಎಂದು ಮಹಾ ಸುಳ್ಳು ಹೇಳಿದರು.. ಜನರನ್ನು ಮಹಾಭ್ರಮೆಯಲ್ಲಿ ಮುಳುಗಿಸಿ ಗೆದ್ದರು. 1970 ರ ‘ಗರೀಬಿ ಹಠಾವೋ’ ಎಂದು ಹೇಳುತ್ತಲೇ ಗರೀಬಿಯನ್ನು ಬೆಳೆಸಿದ ಎಂಬ ಪ್ರಸಿದ್ಧ ಸುಳ್ಳಿನ ಬಗ್ಗೆ ಈಗಿನ ತಲೆಮಾರಿಗೆ ನೆನಪಿದೆ. ಇದೇ ನೆಪವನ್ನು ಬಳಸಿ ದೇಶದಲ್ಲಿ ಪ್ರಜಾಪ್ರಭುತ್ವವನ್ನು ಅಲುಗಾಡಿಸಿದ ತುರ್ತು ಪರಿಸ್ಥಿತಿಯ ಪಾಠಗಳನ್ನು ದೇಶ ಮರೆಯಲು ಸಾಧ್ಯವೇ ಇಲ್ಲ.

1977 ರ ಚುನಾವಣೆಯಲ್ಲಿ ಪ್ರಜಾಪ್ರಭುತ್ವವನ್ನು ಮತ್ತೆ ಅರಳಿಸುವ ಮತ್ತು ಭ್ರಷ್ಟಾಚಾರ ತೊಲಗಿಸುವ ಭರವಸೆ ಇತ್ತು ಅಧಿಕಾರಕ್ಕೆ ಬಂದವರು ಹಿಂದಿನ ಸರ್ವಾಧಿಕಾರದ ಕೆಲ ಸರಪಳಿಗಳನ್ನು ಕಡಿದು ಹಾಕುತ್ತಲೇ ಇಂದಿನ ಪ್ರಜಾಪ್ರಭುತ್ವ ನಾಶದ ಬೀಜಗಳನ್ನು ಬಿತ್ತನೆ ಮಾಡಿದರು

1991 ರ ನಂತರವಂತೂ ಸುಳ್ಳುಗಳು ಮಹಾ ಸುಳ್ಳುಗಳಾದವು. ಈ ಜಾಗತೀಕರಣ ಕಾಲದ ಅಭಿವೃದ್ಧಿಯ ಮಹಾಸುಳ್ಳುಗಳ ಸುಳ್ಳುತನವನ್ನು ಮುಚ್ಚಿಬಿಡಲು ಸುಳ್ಳುಗಳ ಆಧಾರದ ಮೇಲೆ ಬೆಳೆಸಿದ ದ್ವೇಷವನ್ನುಜೊತೆಗೆ ಸೇರಿಸಿಕೊಳ್ಳಲಾಯಿತು. . ಅಂಧಿನ ಎರಡು ಬೃಹತ್ ಸುಳ್ಳುಗಳು-ಬಾಬ್ರಿ ಮಸೀದಿ ನಾಶ ಮಾಡುವುದಿಲ್ಲವೆಂದು ಸುಪ್ರೀಂ ಕೋರ್ಟಿಗೆ ಬರೆದುಕೊಟ್ಟದ್ದು, ಬಾಬ್ರಿ ಮಸೀದಿ ರಕ್ಷಣೆ ಮಾಡುತ್ತೇವೆಂದು ಸರ್ಕಾರ ನಡೆಸುತ್ತಿದ್ದವರು ದೇಶಕ್ಕೆ ಅಭಯ ನೀಡಿದ್ದು . ಅನೇಕ ಸಣ್ಣ, ದೊಡ್ಡ ಸುಳ್ಳುಗಳು ಮತ್ತು ಈ ಬೃಹತ್ ಸುಳ್ಳುಗಳ ಗೊಬ್ಬರದ ಮೇಲೆ ಬೆಳೆದ ದ್ವೇಷದ ವಿಫುಲ ಬೆಳೆ. ಅದರ ವಿಷಫಲವನ್ನು ಇಂದು ನಾವೆಲ್ಲಾ ಅನುಭವಿಸುತ್ತಿದ್ದೇವೆ.

ಹೀಗೆ ಮಹಾ ಸುಳ್ಳುಗಳು ಬೃಹತ್ ಸುಳ್ಳುಗಳಾದವು. ಇಂದು ಸುಳ್ಳನ್ನೇ ಬಿತ್ತಿ ಭ್ರಮೆಯ ಬೆಳೆ ಬೆಳೆದು ದ್ವೇಷದ ಫಲವನ್ನು ಪಡೆಯುತ್ತಿದ್ದೇವೆ. ಈ ತ್ರಿವಳಿ ನಮ್ಮ ಬದುಕನ್ನು , ನಮ್ಮ ಸ್ವಾತಂತ್ರ್ಯವನ್ನು, ಅದರ ಫಲವಾದ ಪ್ರಜಾಪ್ರಭುತ್ವವನ್ನು , ಅದಕ್ಕೆ ಆಧಾರವಾದ ಸಂವಿಧಾನವನ್ನು ನಾಶಗೊಳಿಸತೊಡಗಿದೆ. ಈ ಸಂದರ್ಭದಲ್ಲಿ ತಕ್ಷಣದಲ್ಲಿ ಬೃಹತ್ ಸುಳ್ಳು , ಬೃಹತ್ ಭ್ರಮೆ , ಬೃಹತ್ ದ್ವೇಷಗಳ ಮೇಲೆ ನಮ್ಮ ಗಮನವೆಲ್ಲಾ ಕೇಂದ್ರೀಕರಣಗೊಂಡಿದೆ. ಇವುಗಳನ್ನು ತೊಡೆಯುವುದೇ ನಮ್ಮ ತಕ್ಷಣದ ಗುರಿ . ಆದರೆ ಈ ಬೃಹತ್ ಗಳು ತಂತಾನೆ ಉದ್ಭವಿಸಿದುವಲ್ಲ . ಸ್ವಾತಂತ್ರ್ಯಾನಂತರದ 70 ವರ್ಷಗಳ ಸುಳ್ಳು, ಭ್ರಮೆಗಳ ಬೆಳೆಯ ಫಲ ಎಂಬುದನ್ನು ಮರೆಯದಿರೋಣ.

‍ಲೇಖಕರು avadhi

17 October, 2017

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading