ದ್ರಾಕ್ಷಿ ಕೊಟ್ಟ ದ್ರಾಕ್ಷಾಯಣಿಯ ನೆನಪು..

ನಾಗರಾಜ್ ಕಾಂಬ್ಳೆ

ನನಗೆ ನೆನಪಿರುವಂತೆ ನಾನಾಗ ಆರನೆಯ ತರಗತಿ ಓದುತ್ತಿರಬಹುದು. ನಮ್ಮ ಓಡಾಟ, ಚೆಲ್ಲಾಟ, ತುಂಟಾಟಗಳ ಭರಾಟೆಗೆ ನಿಲುಗಡೆಯೇ ಇರಲಿಲ್ಲ. ಮುಂಜಾನೆ ಬೇಗನೇ ಊಟ ಮುಗಿಸಿ ಮನೆಯಿಂದ ಹೊರಬೀಳುತ್ತಿದ್ದೇವು. ಶಾಲೆಯ ಬಾಗಿಲಿಗೆ ನಮ್ಮ ಪಾಠಿಚೀಲವನ್ನು ಒರಗಿಸಿ ಆಟಕ್ಕೆ ಅಣಿಯಾಗಿ ಮೈದಾನದಲ್ಲಿ ಅಡಿ ಇಡುತ್ತಿದ್ದೇವು. ‘ಉಸ್ ಉಸ್’ ತೇಕುತ್ತಲೇ ಪ್ರಾರ್ಥನೆಯ ಸಾಲಿಗೆ ನಮ್ಮ ದೇಹವನ್ನು ಕಂಬದಂತೆ ನಿಲ್ಲಿಸಿಬಿಡುತ್ತಿದ್ದೆವು. ಗುರುಗಳು ಹಾಜರಿ ಕೇಳುವಾಗ ‘ಎಸ್ ಸರ್’ ಎಂದು ಉಸಿರು ಬಿಗಿಹಿಡಿದು ಕೂಗುತ್ತಿದ್ದೆವು. ‘ಏ ನಿಧಾನಕ್ಕೆ ಹೇಳಿರೋ’ ಎಂದು ಗುರುಗಳು ಗದರಿಸಿದಾಗ ಬಾಯಿ ಮುಚ್ಚಿಕೊಳ್ಳುತ್ತಿದ್ದೇವು. ಗುರುಗಳು ಆ ದಿನ ನಮ್ಮ ಶಾಲೆಗೆ ಒಂದು ಹೊಸ ಹುಡುಗಿಯ ಪರಿಚಯ ಮಾಡಿಸಿದರು. ಅವಳ ಹೆಸರು ದ್ರಾಕ್ಷಾಯಣಿ. ಹೊಸದಾಗಿ ಪ್ರವೇಶ ದಾಖಲಿಸಿದ ಅವಳಿಗೆ ಕುಳಿತುಕೊಳ್ಳಲು ಹೇಳಿ, ‘ಎಲ್ಲರೂ ದ್ರಾಕ್ಷಾಯಣಿಯನ್ನು ಪರಿಚಯ ಮಾಡಿಕೊಂಡು ಆಕೆಯ ಹತ್ತಿರ ಸಹಪಾಠಿಯಂತೆ ನಡೆದುಕೊಳ್ಳಿ’ ಎಂದು ಎಚ್ಚರವಿತ್ತರು ಗುರುಗಳು. ಗುರುಗಳಿಂದ ಅಪ್ಪಣೆ ಪಡೆದ ಆಕೆ ಹಿಂದೆ ಹೋಗಿ ಹುಡುಗಿಯರ ಹತ್ತಿರ ಕುಳಿತುಕೊಂಡು ಅವರ ಜೊತೆ ಪರಿಚಯದ ಮಾತುಗಳನ್ನು ಹೇಳಲಾರಂಭಿಸಿದಳು. ಹೊಸ ಗೆಳತಿಯ ಆಗಮನ ಅವರಿಗೂ ಕುತುಹಲ ಉಂಟಾಗಿ ಎಲ್ಲರೂ ಆಕೆಯನ್ನು ಮತನಾಡಿಸಿ ತಮ್ಮ ತಮ್ಮ ಪರಿಚಯ ಹೇಳಲಾರಂಭಿಸಿದರು. ಶಾಲೆಯಲ್ಲಿ ಇದ್ದ ಹದಿನೈದು ಹುಡುಗಿಯರಲ್ಲಿರದ ಮುಗ್ದತೆ ಆಕೆಯ ಮುಖದಲ್ಲಿ ಎದ್ದು ಕಾಣುತ್ತಿತ್ತು. ಎಲ್ಲರೂ ಸೇರಿ ಆಟ ಆಡುವಾಗ ನಾನು ಅವಳ ಪರಿಚಯ ಮಾಡಿಕೊಂಡೆ. ದಿನಗಳೆದಂತೆ ಆಕೆ ಎಲ್ಲರೊಂದಿಗೆ ಬೆರೆತು ಎಲ್ಲರೊಳಗೊಂದಾದಳು.

ಒಂದು ದಿನ ನಾನು ಶಾಲೆಗೆ ತಡವಾಗಿ ಬಂದಾಗ ಎಲ್ಲರೂ ಬಾಯಲ್ಲಿ ಏನೋ ಲೊಚಗುಟ್ಟುತ್ತಿದ್ದರು. ಕುತುಹಲ ತಡೆಯದೇ ಪಕ್ಕದಲ್ಲಿ ಕುಳಿತ ಗೆಳೆಯನನ್ನು ಕೇಳಿದೆ. ಆತ ದ್ರಾಕ್ಷಾಯಣಿ ತಮ್ಮ ತೋಟದಲ್ಲಿ ಬೆಳೆದ ದ್ರಾಕ್ಷಿಯ ಗೊಂಚಲನ್ನು ಗುರುಗಳಿಗೆ ಕೊಟ್ಟಿದ್ದೂ ಮತ್ತು ಅವರು ಎಲ್ಲರಿಗೂ ಎರೆಡೆರೆಡು ಕಾಳು ಹಂಚಿ ಎಲ್ಲವನ್ನು ಖಾಲಿ ಮಾಡಿದ ಸಂಗತಿಯನ್ನು ಅರುಹಿದನು. ನನ್ನ ಬಾಯಲ್ಲಿ ತುಸು ಜಾಸ್ತಿಯೇ ನೀರು ಚಿಮ್ಮಿತು. ತಡವಾಗಿ ಬಂದದಕ್ಕೆ ನನ್ನನ್ನು ನಾನೇ ಹಳಿದುಕೊಂಡೆ. ಆಗ ಹಿಂದೆ ಕುಳಿತ ದ್ರಾಕ್ಷಾಯಣಿಯತ್ತ ನೋಡಿದೆ. ಅವಳು ನನ್ನ ನೋಡುತ್ತಲೇ ನಕ್ಕಳು. ನಾನೂ ನಕ್ಕೆ. ಅಂದಿನಿಂದ ಅವಳನ್ನು ನೋಡಿದಾಗ ನಾನು ನಗುತ್ತಿದ್ದೆ. ಅವಳೂ ನಗುತ್ತಿದ್ದಳು. ಹೀಗೆಯೇ ಶುರುವಾಯಿತು ನಮ್ಮ ನಗೆಹಬ್ಬ. ದಿನಾಲೂ ಈ ನಗೆಯ ವಿನಿಮಯ ಸಹಜವಾಗಿಯೇ ಮುಂದುವರೆಯಿತು. ಅವಳು, ದ್ರಾಕ್ಷಿ ಇಂದು ತರಬಹುದು ನಾಳೆ ತರಬಹುದು ಎಂದು ಶಾಲೆಗೆ ತಡಮಾಡದೇ ಬೇಗನೇ ಬರುತ್ತಿದ್ದೆ. ದ್ರಾಕ್ಷಿ ತಿನ್ನುವ ಚಪಲ ಎಷ್ಷು ಹೆಚ್ಚಾಗಿತ್ತೋ ಅವಳನ್ನು ನೋಡುವ ಹಂಬಲವೂ ಅಷ್ಟೇ ಹೆಚ್ಚಾಗುತ್ತ ಹೋಯಿತು. ಬರುಬರುತ್ತ ನಾನು ನನ್ನ ಜಾಗ ಬದಲಿಸಿ ಅವಳಿಗೆ ಕಾಣುವಂತೆ ಹಿಂದೇಯೇ ಕುಳಿತುಕೊಳ್ಳಲಾರಂಭಿಸಿದೆ. ಗುರುಗಳು ಪಾಠ ಮಾಡುವಾಗ ಅವರ ಮುಖ ನೋಡುತ್ತಿದ್ದೆ. ಅವರು ಬೋಡರ್್ ಮೇಲೆ ಏನಾದರು ಬರೆಯಲು ತಿರುಗಿದ್ದೇ ತಡ ನಾನು ದ್ರಾಕ್ಷಾಯಣಿಯತ್ತ ನೋಡುತ್ತಿದ್ದೆ. ಅವಳು ನನ್ನ ನೋಡಿ ನಗುತ್ತಿದ್ದಳು. ನಾನೂ ನಗುತ್ತಿದ್ದೆ. ಈ ನಗುವಿನ ಹಿಂದಿರುವ ಅಂಶ ಯಾವುದು ಎಂದು ನನಗಾಗಲಿ ಅವಳಿಗಾಗಲಿ ತಿಳಿಯದ ಮಾತು. ಆ ರೀತಿ ಅರಿತುಕೊಳ್ಳುವ ವಯಸ್ಸೂ ನಮ್ಮದಾಗಿರಲಿಲ್ಲ. ನಗು ಮಾತ್ರ ಎಂದಿಗೂ ತಪ್ಪುತ್ತಿರಲಿಲ್ಲ.
ಒಂದು ದಿನ ಸಂಜೆ ಕಬ್ಬಡ್ಡಿ ಆಡುವಾಗ ನಾನು ‘ಕಬ್ಬಡ್ಡಿ ಕಬ್ಬಡ್ಡಿ’ ಎಂದು ಧಾಳಿಗೆ ಹೊರಟೆ. ಮೈಯಲ್ಲ ಕಣ್ಣಾಗಿ ಮುನ್ನುಗ್ಗುತ್ತಿದ್ದರೂ ಹಿಂದಿನಿಂದ ಬಂದ ಗೆಳೆಯ ನನ್ನ ಕಾಲು ಗಟ್ಟಿಯಾಗಿ ಹಿಡಿದು ಎಳೆದ. ಅಷ್ಟರಲ್ಲಿ ಉಳಿದವರು ನನ್ನ ಮೇಲೆಯೇ ಬಿದ್ದರು. ‘ಪಟ್’ ಎಂದು ಸದ್ದು ಮಾಡಿತು ನನ್ನ ತಲೆ. ಎಲ್ಲರೂ ಗಾಬರಿಯಾದರು. ತಲೆಗೆ ಕಲ್ಲು ತಾಕಿ ಒಡೆದು ರಕ್ತ ಸೋರುತ್ತಿತ್ತು. ನಾನು ಚೀರಿ ಚೀರಿ ಅಳಲಾರಂಭಿಸಿದೆ. ಗುರುಗಳು ಓಡಿಬಂದು ನನ್ನ ಕರೆದು ಸಂತೈಸುತ್ತ ಪ್ರಥಮ ಚಿಕಿತ್ಸೆ ಮಾಡಿ ತಲೆಗೊಂದು ಬಿಳಿ ಪಟ್ಟಿ ಕಟ್ಟಿದರು. ತಲೆ ಜುಣು ಜುಣು ಹೊಡೆಯತ್ತಿತ್ತು. ಆಗ ದ್ರಾಕ್ಷಾಯಣಿ ಗಾಬರಿಯಾಗಿ ನನ್ನತ್ತ ನೋಡಿದಳು. ನಾನು ನಗಲಿಲ್ಲ. ಅಳು ಜೋರಾಗಿತ್ತು. ಅವಳೂ ನಗಲಿಲ್ಲ.
ಮರುದಿನ ಸಂಜೆ ಆಟಕ್ಕೆ ಹೋಗದೇ ಗೋಡೆಗೊರಗಿ ಶಾಲೆಯೊಳಗೆ ಕುಳಿತುಕೊಂಡೆ. ಶಾಲೆಯೊಳಗೆ ಯಾರೂ ಇರಲಿಲ್ಲ. ನನ್ನ ನೋಡಿದ ದ್ರಾಕ್ಷಾಯಣಿ ಒಳಗೆ ಬಂದು, ‘ತಲೆನೋವು ಹೇಗಿದೆ?’ ಎಂದಳು. ‘ಇನ್ನೂ ಸ್ವಲ್ಪ ಜುಣು ಜುಣು ಎನ್ನುತ್ತಿದೆ’ ಎಂದೆ. ಮೆಲ್ಲಗೆ ತನ್ನ ಪಾಠಿಚೀಲದೊಳಗೆ ಕೈ ಹಾಕಿ ಒಂದು ಗೊಂಚಲು ದ್ರಾಕ್ಷಿಯನ್ನು ನನ್ನ ಕೈಗೆ ಕೊಟ್ಟು ನಗುತ್ತ ಹೊರ ನಡೆದಳು. ನಾನು ನಕ್ಕೆ. ದ್ರಾಕ್ಷಿ ಗೊಂಚಲು, ಅವಳ ನಗೆ ನನ್ನ ತಲೆನೋವನ್ನು ಕೊಂದು ಬಿಟ್ಟಿದ್ದವು. ಒಂದೊಂದು ಕಾಳು ಬಾಯಿಯೊಳಗೆ ಹಿಂಡುತಿರುವಂತೆಯೇ ಅವಳ ನಗು ನೆನಪಾಗುತ್ತಿತ್ತು. ನನ್ನ ತಲೆ ನೋವು ಕಡಿಮೆಯಾಗುತ್ತ ಹೋಗುತ್ತಿತ್ತು.
ಈಗಲೂ ದ್ರಾಕ್ಷಿಯನ್ನು ಕಂಡಾಗ ದ್ರಾಕ್ಷಾಯಣಿಯ ನೆನಪು ಒತ್ತಿ ಬರುತ್ತದೆ.

‍ಲೇಖಕರು G

May 12, 2015

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: