ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ದೋ ದೀವಾನೆ ಶಹರಮೆ…' – ರಾಘವೇಂದ್ರ ಜೋಶಿ

raghavendra joshi

ರಾಘವೇಂದ್ರ ಜೋಶಿ

ಸಾಗರದ ಮರಿ ಮೀನೊಂದು 
ಗಾಬರಿಯಾಗಿ ಓಡಿಬಂದಿದೆ;
ಅಮ್ಮನಿಗೆ
ದೊಡ್ಡ ಹೆಸರೊಂದನ್ನು
ಹೇಳಲು ಯತ್ನಿಸುತ್ತಿದೆ..

**

ಇವತ್ತೇಕೋ ಈ ಶಹರದ ಬೆಳಗು ಎಂದಿಗಿಂತ ಮೊದಲೇ ಆರಂಭವಾದಂತಿದೆ. ಬಹುಶಃ ಜಾತ್ರಾ ಸಡಗರದ ಪ್ರಭಾವವಿರಬೇಕು. ಊರಿಗೆ ಊರೇ  ಸಿಂಗಾರಗೊಂಡಿದೆ. ಆದರೆ ಕೊನೆಯ ಗಲ್ಲಿಯಲ್ಲಿರುವ ಈ ಕೊನೆಯ ಮನೆಗೆ ಏನಾಗಿದೆ? ಮನೆಯ ಮುಂದೆ ಶಾಮಿಯಾನ. ಅಲ್ಲೊಂದು ನೀರವ ಮೌನ. ಮನೆಯ ಅಂಗಳದಲ್ಲಿ ಶವವಾಗಿ ಮಲಗಿರುವವರು ಈ ಮನೆಯ ಯಜಮಾನ. ಊರಿನಲ್ಲಿ ತಕ್ಕಮಟ್ಟಿಗೆ ಶ್ರೀಮಂತ. ಅವರಿವರಿಗೆ ಸಾಲ ಕೊಟ್ಟು ಸಣ್ಣಪುಟ್ಟ ಬಡ್ಡಿ ವಸೂಲು ಮಾಡುತ್ತಿದ್ದಾತ. ಹೆಂಡತಿ ಮತ್ತು ಪುಟ್ಟ ಮಕ್ಕಳಿಗೆ ಹೊರಜಗತ್ತಿನ ನಿಯಮಗಳ ಬಗ್ಗೆ ಏನೇನೂ ಅರಿವಿಲ್ಲ. ನಿನ್ನೆಯವರೆಗೂ ದಷ್ಟಪುಷ್ಟವಾಗಿದ್ದ ಮನೆಯ ಯಜಮಾನ ಇವತ್ತಿಲ್ಲ. ನಿಧಾನವಾಗಿ ಜನ ಸೇರುತ್ತಿದ್ದಾರೆ. ಗುಜುಗುಜು ಶುರುವಾದಂತಿದೆ. ಹೆಂಡತಿಗೋ ಅಲ್ಲಿರುವವರ ಪೈಕಿ ಎಷ್ಟೋ ಜನರ ಪರಿಚಯವಿದ್ದಂತಿಲ್ಲ. ಯಾರದೋ ನಿರ್ದೇಶನಕ್ಕೆ ಒಳಪಟ್ಟವರಂತೆ ಊದುಬತ್ತಿ ಹಚ್ಚುವವರು, ಏನಾಗಿತ್ತು ಅಂತ ಕೇಳುವವರು, ಎಲ್ಲಿಂದಲೋ ಚಹಾ ತಂದವರು, ಕಾಫಿ ಇದೆಯಾ ಅಂತ ಕೇಳುತ್ತಿರುವವರು.. ಒಟ್ಟಿನಲ್ಲಿ, ಶಹರ ಒಂದು ಸ್ವಯಂಚಾಲಿತ ಆಗುಹೋಗುಗಳಿಗೆ ಸಿದ್ಧವಾಗುತ್ತಲಿದೆ.
ಇದ್ದಕ್ಕಿದ್ದಂತೆ ಅದೆಲ್ಲಿಂದಲೋ ನಾಲ್ಕು ಹೆಂಗಳೆಯರು ಉದ್ಭವಿಸಿದ್ದಾರೆ. ಅವರಲ್ಲಿ ಇಬ್ಬರು ಅಜ್ಜಿಯರು. ದೂರದಿಂದಲೇ ಯಜಮಾನನ ವರ್ಣನೆ ಮಾಡುತ್ತ ಗೊಳೋ ಅಂತ ಅಳುತ್ತ ಬರುತ್ತಿದ್ದಾರೆ. ಯಾರೋ ಪುಣ್ಯಾತ್ಮರು ದುಡ್ಡು ಕೊಟ್ಟು ಕರೆಸಿರುವರು. ಈ ಜಗತ್ತಿನಲ್ಲಿ ತಮಾಷೆಯ ನಗು, ವ್ಯಂಗ್ಯದ ನಗು, ಸಂಭ್ರಮದ ನಗು ಎಲ್ಲೆಂದರಲ್ಲಿ ಸಿಗುತ್ತದೆಯೇ ಹೊರತು ವಿನಾಕಾರಣದ ಅಳು ಸಿಗುವದು ಎಷ್ಟು ಕಷ್ಟ? ಯಜಮಾನನಿಂದ ಸಾಲ ತೆಗೆದುಕೊಂಡವರು ಮನದಲ್ಲೇ ಮಗುಮ್ಮಾಗಿದ್ದಾರೆ. ಇನ್ಯಾರೋ ತಡ ಆಯ್ತು, ತಡ ಆಯ್ತು ಅಂತ ಅವಸರಿಸಿದರೆ, ಮತ್ಯಾರೋ ಹಲಗೆ ಬಾರಿಸಲು ಸೂಚನೆ ಕೊಟ್ಟಿದ್ದಾರೆ. ಹಣ ಪಡೆದು ಭಾಡಿಗೆ ಸಂಬಂಧಕ್ಕಾಗಿ ಅಳಲು ಬಂದಂಥ ಹೆಂಗಳೆಯರಿಗೆ ಹಲಗೆಯ ಸದ್ದಿನಲ್ಲಿ ಕೊಂಚ ವಿಶ್ರಾಂತಿ ಲಭಿಸಿದಂತಿದೆ. ಇದ್ದಕ್ಕಿದ್ದಂತೆ ಸಂಚಲನ ಶುರುವಾಗಿದೆ. ಯಾರೋ ಓಡಿಹೋಗಿ ದೊಡ್ಡ ಡಬ್ಬವೊಂದನ್ನು ರಸ್ತೆಯಂಚಿನಲ್ಲಿ ಇಟ್ಟಿದ್ದಾರೆ. ಯುವಕರ ಗುಂಪೊಂದು ಲಗುಬಗೆಯಿಂದ ರಟ್ಟಿನ ಡಬ್ಬ ಹರಿಯುತ್ತಿದೆ. ಅದರೊಳಗಿಂದ ಮೇಲೆದ್ದ ದೊಡ್ಡದೊಂದು ಪಟಾಕಿ ಸರ ರಸ್ತೆಯ ತುಂಬೆಲ್ಲ ಹರಡಿಕೊಂಡಿದೆ. ವಯಸ್ಸಾದ ವ್ಯಕ್ತಿಯೊಬ್ಬರು ಗಾಂಭೀರ್ಯದೊಂದಿಗೆ ಈ ಗುಂಪನ್ನು ನಿರ್ದೇಶಿಸುತ್ತಿದ್ದಾರೆ. ಇದೇ ಗಾಂಭೀರ್ಯದ ವ್ಯಕ್ತಿಯ ಮಗನಿರಬೇಕು: ಚಟುವಟಿಕೆಯಿಂದ ಮುನ್ನುಗ್ಗಿದ್ದ ಯುವಕನೊಬ್ಬ ಪಟಾಕಿ ಹಚ್ಚಲು ಕಿಸೆಯೊಳಗಿನ ಬೆಂಕಿಪೊಟ್ಟಣ ತೆಗೆಯಲೋ ಬೇಡವೋ ಅಂತ ಯೋಚಿಸುತ್ತಿದ್ದಾನೆ. ಅಕಸ್ಮಾತ್ ಬೆಂಕಿಪೊಟ್ಟಣದೊಂದಿಗೆ ಸಿಗರೇಟೂ ಹೊರಬಂದರೆ?
2
ಅಷ್ಟರಲ್ಲಿ ಎಲ್ಲಿಂದಲೋ ಬೆಂಕಿಪೊಟ್ಟಣ ಸರಬರಾಜಾಗಿದೆ. ಪಟಾಕಿಯ ಒಂದು ಅಂಚಿನಲ್ಲಿದ್ದ ಯುವಕನ ಕೈ ಸೇರಿದೆ. ಇನ್ನೊಂದು ಅಂಚಿನಲ್ಲಿದ್ದ ಯುವಕನ ಮುಖದಲ್ಲಿ ಏನೋ ಕಳೆದುಕೊಂಡ ಭಾವ. ಮೊದಲಿನ ಯುವಕ ಬೆಂಕಿಕಡ್ಡಿ ಗೀರಿದ್ದಾನೆ. ಗಾಳಿ ಸಹಕರಿಸುತ್ತಿಲ್ಲ. ಎರಡನೇ ಕಡ್ಡಿಯೂ ಹಾಳಾಗಿದೆ. ಮೂರನೇಯದಕ್ಕೆ ಯತ್ನಿಸುತ್ತಿದ್ದಂತೆ, ಇನ್ನೊಂದು ಅಂಚಿನಲ್ಲಿದ್ದ ಯುವಕ ತನ್ನ ಪರಾಕ್ರಮವನ್ನು ಪ್ರಕಟಿಸುತ್ತಿದ್ದಾನೆ. ತಪ್ಪಿಹೋಗಿರುವ ತನ್ನ ಘಳಿಗೆಗೆ ತಾನೇ ಸಾಂತ್ವನ ನೀಡುತ್ತಿದ್ದಾನೆ. ಅಷ್ಟೊತ್ತಿಗೆ ವಯಸ್ಸಾದ ವ್ಯಕ್ತಿಯ ಗಾಂಭೀರ್ಯ ಮತ್ತಷ್ಟು ಗಡುಸಾದಂತಿದೆ. ಬಹುಶಃ ಈ ಗಡಸಿಗೆ ಬೆದರಿತೋ ಏನೋ, ಅಂತೂ ಇಂತೂ ಬೆಂಕಿಕಡ್ಡಿ ಹೊತ್ತಿ ಉರಿದಿದೆ; ಪಟಾಕಿಗೆ ಸ್ಥಳಾಂತರಗೊಂಡಿದೆ. ಅಷ್ಟೊತ್ತೂ ಆ ಮನೆ, ಮನೆಯ ಸುತ್ತಮುತ್ತ ಪಸರಿಸಿದ್ದ ಮೌನ, ಅಳು, ಮುಗುಮ್ಮತನಗಳು ಪಟಾಕಿಯ ಜೋರು ಸದ್ದಿನಲ್ಲಿ ಲೀನಗೊಳ್ಳುತ್ತಲಿವೆ. ಅಷ್ಟರಲ್ಲಿ, ಇವನ್ಯಾರೋ ಅಪ್ಪಟ ಮುಗ್ಧ ಗಿರಾಕಿ. ಪಟಾಕಿಯ ಬೆಳಕು, ಅದರ ಸದ್ದು ಮತ್ತು ಅದು ಕೊಡಮಾಡುವ ತಾತ್ಕಾಲಿಕ ಹುರುಪು ಈ ಆಸಾಮಿಯನ್ನು ಕೊಂಚ ಹೆಚ್ಚೇ ಪ್ರೇರೇಪಿಸಿದಂತಿದೆ. ಅಭ್ಯಾಸ ಬಲದಂತೆ ತನ್ನ ಎರಡೂ ಕೈ ಎತ್ತಿ ಜೋರಾಗಿ ಕಿರಿಚುತ್ತಿದ್ದವನು, ದಿಢೀರ್ ಅಂತ ಸುತ್ತಲಿನ ಪರಿಸರ ನೆನಪಾಗಿ ಅಷ್ಟೇ ವೇಗದಲ್ಲಿ ಸಂಕೋಚದಿಂದ ಕಣ್ಮರೆಯಾಗಿದ್ದಾನೆ. ಹೀಗೆ ಎಲ್ಲರ ಕಣ್ಣು, ಕಿವಿ, ಮನಗಳು ಪಟಾಕಿಯ ಸರದಲ್ಲಿ ಕೇಂದ್ರೀಕೃತಗೊಳ್ಳು ತ್ತಲಿರುವಾಗ ಅಂಗಳದಲ್ಲಿನ ಶವ ಕ್ಷಣಕಾಲ ನಿಜಕ್ಕೂ ಅನಾಥವಾಗಿಬಿಟ್ಟಿದೆ..

**

ಶಹರ ಇನ್ನೊಂದು ಬದಿಯಲ್ಲಿ ತನ್ನನ್ನು ತೆರೆದುಕೊಳ್ಳುತ್ತಿದೆ. ಬೆಳಗಿನಿಂದಲೇ ನೂರು ಜನರಿಂದ ಜಗ್ಗಿಸಿಕೊಂಡ ರಥವೀಗ ಮಧ್ಯಾಹ್ನದ ಹೊತ್ತಿಗೆ ಸುಸ್ತಾಗಿ ಮೂಲೆಯಲ್ಲಿ ನಿಂತಿದೆ. ಎದುರಿನ ಮೈದಾನದಲ್ಲಿ ಜಾತ್ರೆಯೇ ನಡೆಯುತ್ತಿದ್ದರೂ ಯಾರೂ ಈಗ ಅದರತ್ತ ನೋಡುತ್ತಿಲ್ಲ. ಹಿಂದೊಂದು ಸಂಖ್ಯೆಯಿರದಿದ್ದರೆ ಸೊನ್ನೆಗೆ ಬಲವಿಲ್ಲ. ಉತ್ಸವ ಮೂರ್ತಿ ಇರದಿದ್ದರೆ ರಥಕ್ಕೂ ಬಲವಿಲ್ಲ. ಮೈದಾನದಲ್ಲಿ ತಿರುಗುವ ಚಕ್ರಗಳು, ಮರದ ಜೋಕಾಲಿಗಳು. ಹೈದರಾಬಾದಿನ ಒರಿಜಿನಲ್ ಪ್ಲಾಸ್ಟಿಕ್ ಮುತ್ತುಗಳು, ಬೆಂಡುಬತ್ತಾಸುಗಳು. ಸುಡುಹಗಲಿನಲ್ಲಿ ಕಣ್ಣಿಗೆ ಮಾತ್ರ ತಾತ್ಕಾಲಿಕ ಕತ್ತಲು ಸೃಷ್ಟಿಸಿಕೊಟ್ಟು ಸಿನೆಮಾದ ಸ್ತಬ್ದ ಚಿತ್ರಗಳನ್ನು ತೋರಿಸುತ್ತಿರುವ ಮಾಯಾವಿಯೊಬ್ಬನ ಬಾಂಬೆಟಾಕೀಸ್. ಮಧ್ಯೆ ಮಧ್ಯೆ, ಕಳೆದುಕೊಂಡಿರುವ ಮಗುವಿನ ಬಗ್ಗೆ ಧ್ವನಿವರ್ಧಕದಲ್ಲಿ ಬರುತ್ತಲಿರುವ ವಿವರಗಳು..
ಇವರನ್ನು ನೋಡಿ: ಈಗಷ್ಟೇ ಎಲ್ಲಿಂದಲೋ ಬಂದಿರುವ ಈ ಒಂದು ಕುಟುಂಬದ ಪಾಲಿಗೆ ಸ್ವರ್ಗಕ್ಕೆ ಮೂರೇ ಗೇಣಿದ್ದಂತಿದೆ. ಅಪ್ಪ, ಅಮ್ಮ ಮತ್ತು ಇಬ್ಬರು ಮಕ್ಕಳು. ಒಂದೇ ಬಣ್ಣದ ಅಂಗಿ ಚಡ್ಡಿ ಧರಿಸಿರುವ ಇಬ್ಬರೂ ಮಕ್ಕಳಿಗೆ ದೋಸೆಯ ಮೇಲೆ ಆಸೆಯಿದೆ. ಮಕ್ಕಳ ಆಸೆಯ ಬಗ್ಗೆ ಅಮ್ಮನಿಗೆ ಕುತೂಹಲವಿದೆ. ಹೊಸ ಸೀರೆಯುಟ್ಟಿರುವ ಅಮ್ಮ ಕರೆಂಟಿಲ್ಲದ ಹೋಟೆಲಿನ ಸೆಕೆಗೆ ಬೆವತು ಹೋಗಿದ್ದರೆ, ಅಪ್ಪನ ಚೈನಾಸಿಲ್ಕ್ ಜುಬ್ಬಾದ ಗುಂಡಿಗಳು ಒಂದೊಂದಾಗಿ ಬಿಚ್ಚಿಕೊಳ್ಳುತ್ತಿವೆ. ಕಾಲ ಸರಿಯುತ್ತಿದೆ. ಮಾಣಿ ಹತ್ತಿರ ಬರುತ್ತಿಲ್ಲ. ಇವರುಗಳು ಕೂತಿರುವ ಟೇಬಲ್ ಚೌಕಟ್ಟಿನೊಳಗೆ ಕಾತರ, ಕುತೂಹಲ, ಗಾಂಭೀರ್ಯ ಒಡಮೂಡುತ್ತಿವೆ. ದೊಡ್ಡ ಗಿರಾಕಿಗಳ ಗದ್ದಲದಲ್ಲಿ ಹೋಟೆಲ್ ಮಾಣಿ ಇವರನ್ನು ತಡವಾಗಿಯಾದರೂ ಗಮನಿಸಿದ್ದಾನೆ. ಆದರೆ ಇವರತ್ತ ನೋಡಲೋ ಬೇಡವೋ ಅಂತ ಅನುಮಾನಿಸುತ್ತ ಇವರ ಟೇಬಲ್ ಬಳಿ ಬರುವದಕ್ಕೂ ಮುನ್ನವೇ ಈ ಮಕ್ಕಳ ತಂದೆ ಧೋತರ ಸರಿಪಡಿಸಿಕೊಳ್ಳುತ್ತ ಅವಸರವಸರವಾಗಿ ಎದ್ದು ನಿಂತು ಕೈಎತ್ತಿ ನಾಲ್ಕೂ ಬೆರಳು ತೋರಿಸುತ್ತ,  “ಮಸಾಲೆ.. ಮಸಾಲೆದೋಸೆ..” ಅಂತ ದೂರವಿರುವ ಮಾಣಿಗೆ ಇತ್ತ ಆರ್ಡರೂ ಅಲ್ಲದ, ಅತ್ತ ವಿನಂತಿಯೂ ಅಲ್ಲದ ಜೋರು ಅಹವಾಲನ್ನು ಬಿತ್ತರಿಸಿದ್ದಾನೆ..
ಮೂಲೆಯಲ್ಲಿರುವ ರಥ. ಯಾರೋ ಬಂದು ತನ್ನನ್ನು ಆಕ್ರಮಿಸುವದು ರಥದೊಳಗಿನ ಕುರ್ಚಿಗೆ ಇಷ್ಟವಿಲ್ಲ. ಹೀಗಾಗಿ ಅದಕ್ಕೆ ಧೂಳಿನ ಗೆಳೆತನವಿದೆ!

**

ಮೈದಾನದ ಚಕ್ರ ಮತ್ತು ಗಡಿಯಾರ ಎರಡೂ ತಿರುಗುತ್ತಲಿವೆ. ಶಹರದ ಜಾತ್ರಾಮೈದಾನದ ಪಕ್ಕದಲ್ಲೊಂದು ಅಶ್ವತ್ಥವೃಕ್ಷವಿದೆ. ಅದರ ಕೆಳಗೊಂದು ಅರಳಿಕಟ್ಟೆ. ಕಟ್ಟೆಯ ಮೇಲೊಂದು ಪ್ರೇಮದ ಜೋಡಿ. ತುಂಬುಕೆನ್ನೆಯ ಹಸಿರು ಸೀರೆಯ ನೀರೆ ಮತ್ತು ಬಿಳಿ ಜುಬ್ಬಾ ಪೈಜಾಮಾ ಧೀರ. ಎಲ್ಲಿಂದ ಓಡಿ ಬಂದವರೋ ಏನೋ, ಕೆಲದಿನಗಳಿಂದ ಊರೆಲ್ಲ ತಿರುಗಾಡುತ್ತಿದ್ದಾರೆ. ಸಂಜೆಯಾಗುತ್ತಿದ್ದಂತೆ ಇದೇ ಕಟ್ಟೆಯ ಮೇಲೆ ಇವರಿಬ್ಬರ ಪ್ರೇಮದಾಟ ಶುರುವಾಗುತ್ತದೆ. ಸುಮಾರು ವರ್ಷಗಳಿಂದ ದೇಶದ ಮೂಲೆಮೂಲೆಯಲ್ಲಿ ಇಂಥ ‘ಶೋ’ ಕೊಡುತ್ತ ಬಂದಿದ್ದಾರೆ. ಆಟದಲ್ಲಿ ಆಗೀಗ ಧೀರನು ಮಾಡುವ ತುಂಟ ಚೇಷ್ಟೆಗಳಿಗೆ ನೀರೆಯ ಕೆನ್ನೆ ಕೆಂಪೇರುತ್ತದೆ. ಶಿಳ್ಳೆ, ಚಪ್ಪಾಳೆಗಳನ್ನು ಸ್ವೀಕರಿಸುವ ಹೊತ್ತಿನಲ್ಲೇ ನೆರೆದ ಪ್ರೇಕ್ಷಕರ ಮುಂದೆ, ದೋ ದೀವಾನೆ ಶಹರಮೆ.. ಅಂತ ಹಾಡುತ್ತ ಧೀರನು ದಿಢೀರಂತ ಸೊಂಟ ಬಳಸಿದಾಗ ಗಾಬರಿಯಿಂದ ನಡುಗುತ್ತಾಳೆ. ನಟನೆಯ ಪ್ರೀತಿ ಇಬ್ಬರಿಗೂ ಸಾಕಾಗಿದೆ. ಒಂದಾದರೂ ದಿನ, ತಾನೂ ಕೂಡ ಎಲ್ಲ ಹೆಂಗಳೆಯರಂತೆ ತನ್ನ ಗಂಡನಿಗಾಗಿ ಕಾಯುತ್ತ ಮನೆಯ ಬಾಗಿಲಲ್ಲಿ ನಿಂತು ಇಣುಕಬೇಕು ಅಂತನಿಸುತ್ತದೆ. ಕಂದನಿಗೆ ಎಣ್ಣೆ ಹಾಕಿ, ತಲೆ ಬಾಚಿ, ಪೌಡರ್ ಮೆತ್ತಿದ ಕೆನ್ನೆಯ ಮೇಲೆ ದೃಷ್ಟಿಬೊಟ್ಟನ್ನಿಡಬೇಕು ಅಂತನಿಸುತ್ತದೆ. ಆದರೆ ಧೀರ ತನ್ನಿಂದ ಬೇರ್ಪಡುವದಿಲ್ಲ; ಸೇರುವದೂ ಇಲ್ಲ! ಅದೆಂಥ ಗಂಟಿದು? ಬಂಧಿಸಿದ ಸೂತ್ರ ಬಂಧನದ್ದೋ,  ಭವದ್ದೊ?
ಶೋ ನಡೆಸುವ ಮಾಲೀಕನಿಂದ ಬಿಡುಗಡೆಗೊಂಡು ಎಲ್ಲಾದರೂ ದೂರ ಹೋಗಬೇಕು. ಬಿಡುಗಡೆಯ ಸ್ವಾತಂತ್ರ್ಯ ಬೇಕು. ಹಾಗಂತ ಇಬ್ಬರಿಗೂ ಅನಿಸುತ್ತದೆ.  ಸದ್ಯಕ್ಕಂತೂ ರಾತ್ರಿಯಾಗಿದೆ. ಹೀಗಾಗಿ, ತಾತ್ಕಾಲಿಕವಾಗಿ ಸೂತ್ರ ಕಳಚಿದಂತಿದೆ. ನೀರೆ-ಧೀರರಿಬ್ಬರಿಗೂ ಕ್ಷಣಿಕ ಖುಷಿ. ಆದರೇನು, ವಿಷಾದವೋ ವಿಷಮವೋ, ಅಲ್ಲೆಲ್ಲೋ ಸಡಿಲಗೊಂಡಿರುವ ಸೂತ್ರದ ದಾರ ತೊಡಕು ಬಿದ್ದುಬಿಟ್ಟಿದೆ. ಸಿಕ್ಕಿರುವ ಎಲ್ಲ ಸ್ವಾತಂತ್ರ್ಯದ ನಡುವೆಯೂ ಒಂದಿಷ್ಟು ಅತಂತ್ರ ಉಳಿದೇ ಬಿಟ್ಟಿದೆ. ಇದೆಲ್ಲದರ ನಡುವೆ, ಈ ಅನಾಮಿಕ ಶಹರದ ಅಜ್ಞಾತ ಚಿತ್ರಗಳನ್ನು ನೋಡುತ್ತಲೇ ಕಟ್ಟೆಯ ಮೇಲಿರುವ ಈ ಜೋಡಿಯ ಮುಂದೆ ನಿಂತಿರುವ ನನಗೆ
ಸದ್ಯಕ್ಕೆ ಒಂದೇ ಚಿಂತೆ:  ಯಾರು ಮರೆತು ಹೋಗಿಹರು ಈ ಸೂತ್ರದ ಬೊಂಬೆಗಳನ್ನು?
(ಸೌಜನ್ಯ : ಮಾಯಾಲಾಂದ್ರ)

‍ಲೇಖಕರು G

21 September, 2015

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading