ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೋಸೆಯಲ್ಲಿ ಕಂಡ ಮುಖ…

ಗುರುಪ್ರಸಾದ್ ಕಂಟಲಗೆರೆ

ಈ ದಿನ ಕಾಲೇಜು ಕ್ಯಾಂಟೀನ್ ಒಂದರಲ್ಲಿ ಮಸಾಲೆ ದೋಸೆಯ ಚೀಟಿ ಪಡೆದು ದೋಸೆ ಕೊಡುವ ಮಾಣಿಯ ಕೈಗಾಗಿ ಕಾದು ನಿಂತಿದ್ದೆ. ಅದು ನೂರಾರು ವಿದ್ಯಾರ್ಥಿಗಳಿಂದಲೇ ತುಂಬಿ ತುಳುಕುತ್ತಿದ್ದ ಕ್ಯಾಂಟೀನ್.
ಬೆಳಗಿನ ತಿಂಡಿ ಸಮಯವಾದ್ದರಿಂದ ಕ್ಲಾಸ್ ಗೆ ಲೇಟ್ ಆಗುವವರು, ಆಗಿನ್ನು ಎಕ್ಸೈಜ್ ಮುಗಿಸಿ ಟ್ರಾಕ್ ಸ್ಯೂಟ್ ನಲ್ಲಿ ಇದ್ದವರು ತರಾತುರಿಯಲ್ಲಿ ಬಂದು ತಿಂಡಿಗಾಗಿ ಟೋಕನ್ ಹಿಡಿದು ಕ್ಯೂನಲ್ಲಿ ನಿಂತಿದ್ದರು. ಟೋಕನ್ ಪಡೆದಷ್ಟೆ ವೇಗವಾಗಿ ತಿನಿಸನ್ನು ತಂದು ಕೊಡಲು ಮಾಣಿಗೆ ಆಗುತ್ತಿರಲಿಲ್ಲ. ರೆಡಿ ಇದ್ದ ಪಲಾವ್, ಇಡ್ಲಿ, ಬಜ್ಜಿಯನ್ನೇನೊ ಕೊಟ್ಟುಬಿಡುತ್ತಿದ್ದರು.

ದೋಸೆ ಆರ್ಡರ್ ಮಾಡಿದವರಂತೂ ಹತ್ತಾರು ನಿಮಿಷ ಕಾಯಲೇ ಬೇಕಿತ್ತು. ಕಾದರೂ ಹೆಂಚಿನಿಂದ ಬಿಡಿಸಿಕೊಂಡು ಬರುತ್ತಿದ್ದ ದೋಸೆಗಳು ಯಾರೊ ಒಬ್ಬಿಬ್ಬರ ಪಾಲಾಗಿ ಉಳಿದವರು ಕೈ ಚಾಚುತ್ತ ಮಾಣಿಯನ್ನು ಅಣ್ಣ, ಸರ್, ಬ್ರದರ್ ಇತ್ಯಾದಿ ಸಂಬೋಧಿಸುತ್ತ ಹಾತೊರೆಯುತ್ತಿದ್ದರು. ಈ ಸರದಿಯಲ್ಲೆ ನಾನೂ ಇದ್ದೆ. ದೋಸೆಗೆ ಇಷ್ಟೊಂದು ರಷ್ ಎಂದು ಗೊತ್ತಿದ್ದರೆ ಕೌಂಟರ್ ನಲ್ಲಿ ಮೊದಲೇ ಸುಲಭದ ತಿಂಡಿಗೆ ಚೀಟಿ ಹರಿಸಿಕೊಳ್ಳುತ್ತಿದ್ದೆ.

ನಾನೂ ಅದಾಗಲೆ ಹದಿನೈದು ನಿಮಿಷದಿಂದ ಕಾದು ಸೋತಿದ್ದೆ. ಬರುವ ದೋಸೆಗಳು ಮುಂದೆ ನಿಂತಿದ್ದವರ ಪಾಲಾಗುತ್ತಿದ್ದವು. ಎರಡನೇ ಸಾಲಿನಲ್ಲಿದ್ದ ನಾನು ಶಕ್ತಿಮೀರಿ “ಸರ್ ದೋಸೆ” ಎಂದು ಕೂಗಿ ಸುಮ್ಮನಾಗುತ್ತಿದ್ದೆ. ನಾನೂ ಕ್ಲಾಸ್ ಗೆ ಹೋಗಬೇಕಿತ್ತು. ನನ್ನ ಸಮಯವೂ ಮೀರುತ್ತ ಬಂದಿತ್ತು. ನನ್ನ ಮುಂದೆಯೇ ನಿಂತಿದ್ದ ಯುವಕನೊಬ್ಬ ನನಗಿಂತಲೂ ಶಕ್ತಿಮೀರಿ ಕೂಗುತ್ತಿದ್ದ. ಅವನು ಮಾಣಿಗೆ ಹತ್ತಿರದಲ್ಲೆ ಇದ್ದ. ನನಗಿಂತ ಒಂದೆರಡು ನಿಮಿಷ ಮುಂಚೆ ಬಂದಿದ್ದನೇನೊ. ಆತನೂ ನನ್ನ ಹಾಗೆಯೇ ಬಂದ ದೋಸೆಗಳು ಬೇರೆಯವರ ಪಾಲಾದದ್ದನ್ನು ನೋಡಿ ತುಂಬಾ ಹೊತ್ತಿನಿಂದ ನಿರಾಷನಾಗಿದ್ದ.

ಈಗ ಬಂದ ದೋಸೆ ಈ ಹುಡುಗನಿಗೆ ಸಿಕ್ಕೇ ಬಿಡುತ್ತದೆಂದು ನನ್ನ ಮನಸ್ಸು ಹೇಳುತ್ತಿತ್ತು. ಆ ಮಾಣಿ ಯಾರಿಗೆ ಕೊಡುವುದೆಂದು ಗೊಂದಲಕ್ಕೆ ಬಿದ್ದನಂತೆ ಕಂಡನಾದರು ಎರಡರಲ್ಲಿ ಉಳಿದ ಒಂದನ್ನ ಹಿಂದಿನ ಸಾಲಿನಲ್ಲಿದ್ದ ನನ್ನ ಕೈಗೆ ಇಟ್ಟ.

ದೋಸೆ ಸಿಕ್ಕಿತೆಂಬ ಸಮಾಧಾನವೇನೊ ಆಕ್ಷಣ ಆಯಿತು. ನನ್ನ ದೋಸೆಯನ್ನೆ ತನಗೆ ಸಿಗಬಹುದೆಂದು ತದೇಕಚಿತ್ತದಿಂದ ನೋಡುತ್ತಿದ್ದ ಆ ಹುಡುಗನ ನಿರಾಷೆ ಕದಕಿಬಿಟ್ಟಿತು. ಸಡನ್ನಾಗಿ ಏನೂ ತೀರ್ಮಾನ ತೆಗೆದುಕೊಳ್ಳದ ನಾ, ಕುರ್ಚಿಯಲ್ಲಿ ಪ್ಲೇಟ್ ಮುಂದೆ ಕೂತು ಚಿಂತೆಗೀಡಾದೆ.

ಯಾವ ಊರಿನ ಹುಡುಗನೊ, ಎಲ್ಲಿಂದ ಕಲಿಯಲು ಬಂದಿರುವನೊ, ಅಪ್ಪ ಅಮ್ಮ ಕೊಟ್ಟು ಕಳುಹಿಸಿದ್ದ ಹಣ ಇನ್ನ‌ ಎಷ್ಟು ಉಳಿದಿತ್ತೊ, ಯಾವ ಟೀಚರ್ ಕ್ಲಾಸ್ ಗೆ ತಡವಾಗುತ್ತೆ ಎಂದು ಆಗಿನಿಂದ ಕೂಗುತ್ತಿದ್ದನೊ ಇತ್ಯಾದಿ.
ಇದೊಂದು ಬಾರಿ ಮಾಣಿ ಆ ಹುಡುಗನಿಗೇ ಕೊಟ್ಟಿದ್ದರೆ ಎಷ್ಟು ಚಂದಿತ್ತು ಎನಿಸತೊಡಗಿತು. ಈಗ ಕೊಡಲೋದರೆ ಆತ ಮುಟ್ಟಿಯಾನೆ!

ನನ್ನ ಮಸಾಲೆ ದೋಸೆಯಲ್ಲಿ ಆ ಹುಡುಗನ ಮುಖವೇ ಇತ್ತು.

‍ಲೇಖಕರು Admin

20 October, 2022

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading