ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೊಡ್ಡ ಸತ್ಯದ ಆವಿಷ್ಕಾರಕ್ಕಾಗಿ ಸಂವಾದ..

‘ಮಹಾತ್ಮ ಮತ್ತು ಗುರುದೇವ ಸಂವಾದ’ ಪುಸ್ತಕದ ಬಗ್ಗೆ ಡಾ. ಯು. ಆರ್. ಅನಂತಮೂರ್ತಿಯವರ ಎರಡು ಮಾತು

-ಡಾ.ಯು.ಆರ್.ಅನಂತಮೂರ್ತಿ

ಭಾರತ ತನ್ನ ಭೂತಕಾಲದ ಪುನರಾವರ್ತನೆ ಆಗಕೂಡದು ಅಥವಾ ಆ ಕಾಲದಲ್ಲಿ ಆಕರ್ಷಕವಾಗಿದ್ದ ಪಾಶ್ಚಿಮಾತ್ಯ ಸಂಸ್ಕೃತಿಯ ಅನುಕರಣೆಯೂ ಆಗಕೂಡದು- ಈ ಎರಡು ಸಂಕಲ್ಪಗಳೂ ಮಹಾತ್ಮ ಗಾಂಧಿಯವರಲ್ಲೂ ಇತ್ತು, ಟ್ಯಾಗೋರರಲ್ಲೂ ಇತ್ತು. ಆದರೆ ಈ ಸಂಕಲ್ಪಗಳಿಗೆ ಜೀವತರುವ ವಿಧಾನದಲ್ಲಿ ಈ ಇಬ್ಬರ ನಡುವೆ ಹಲವು ಭಿನ್ನಾಭಿಪ್ರಾಯಗಳಿದ್ದವು. ಈ ಭಿನ್ನಾಭಿಪ್ರಾಯಗಳು ಒಂದು ದೊಡ್ಡ ಸತ್ಯವನ್ನು ಆವಿಷ್ಕಾರ ಮಾಡಿಕೊಳ್ಳುವ ಪ್ರಯತ್ನದ ಅಂಗಾಂಗಗಳಂತೆ ಸಾಮರಸ್ಯಕ್ಕಾಗಿ ಹಾತೊರೆಯುತ್ತಿದ್ದವು. ಪ್ರಪಂಚದ ಚರಿತ್ರೆಯಲ್ಲಿ ಕೆಲವು ಸಾರ್ತಿ ಮಾತ್ರ ಎರಡು ಚೈತನ್ಯಗಳು ಒಂದಕ್ಕೊಂದು ಎದುರಾಗುವ,ಎದುರಾಗಿ ಒಂದು ಇನ್ನೊಂದನ್ನು ಒಳಗೊಳ್ಳುವ ಸಂವಾದ ನಡೆಯುತ್ತದೆ. ಅಂತಹ ಒಂದು ಸಂವಾದ ಗಾಂಧಿ ಮತ್ತು ಟ್ಯಾಗೋರರ ನಡುವೆ ನಡೆದಿದೆ.

ಈಗಲೂ ಇಬ್ಬರ ವಾದವೂ ಪ್ರಸ್ತುತವಾಗಿಯೇ ಉಳಿದಿದೆ.  ಸ್ವದೇಶಿ ಭಾವನೆಯ ಉತ್ಕಟತೆಯಲ್ಲಿ ಪಾಶ್ಚಿಮಾತ್ಯರ ಕೊಡುಗೆಯನ್ನು ನಿರಾಕರಿಸಕೂಡದೆಂದು ಗಾಂಧಿಯವರ ಮೇಲೆ ಟ್ಯಾಗೋರರು ಸತತ ಒತ್ತಡವನ್ನು ತರುತ್ತಿದ್ದರು. ಆದರೆ ಟ್ಯಾಗೋರರು ಸ್ವದೇಶಿ ಚಳುವಳಿಯ ಸಂದರ್ಭದಲ್ಲಿ ಆಡಿದ ಮಾತು ಅದರ ಹೊರಗೆ ನಿಂತಾಗ ನಮ್ಮ ಕಾಲದ ಸ್ವಂತಿಕೆಯೇ ಕಳೆದುಹೋಗಬಲ್ಲ ಅಪಾಯದ ಜಾಗತೀಕರಣವಾಗಿ ಪರಿಣಮಿಸುತ್ತದೆ. ಪ್ರಾಯಶಃ ನಮ್ಮ ಭಾಷೆಗಳು,  ಸಾಂಸ್ಕೃತಿಕ ವೈವಿಧ್ಯಗಳು, ಆಹಾರ ವೈವಿಧ್ಯತೆಗಳೆಲ್ಲವೂ ಮಾರುಕಟ್ಟೆ ಸಂಸ್ಕೃತಿಯಲ್ಲಿ ತಮ್ಮ ಅಪೂರ್ವತೆಯನ್ನು ಕಳೆದುಕೊಂಡು ಬಿಡುವ ಅಪಾಯವಿದೆ. ಜೊತೆಗೆ,  ಹೊರ ಜಗತ್ತಿಗೆ ಕಣ್ಣುತೆರೆಯದ ಗ್ರಾಮೀಣ ಬದುಕು ಅಂಧ ಶ್ರದ್ಧೆಯಲ್ಲಿ ಕುಗ್ಗಿ ಮನುಷ್ಯನ ಚೇತನಕ್ಕೆ ಖಿನ್ನತೆಯನ್ನು ತರುವ ಅಪಾಯವಿರುತ್ತದೆ. ಈ ಎರಡು ತುದಿಗಳಿಗೂ ಹೋಗದಂತೆ ಟ್ಯಾಗೋರ್ ಮತ್ತು ಗಾಂಧಿ ನಡುವೆ ನಡೆದ ಸಂವಾದ ನಮಗಿಂದು ಅತ್ಯಂತ ಅಗತ್ಯವಾದ ವಿಚಾರವಾಗಿದೆ. ಎಲ್ಲ ವಿದ್ಯಾರ್ಥಿಗಳಿಗೂ ಇದೊಂದು ಕಡ್ಡಾಯ ಪಠ್ಯವಾಗಿ ಇರಬೇಕೆಂಬುದು ನನ್ನ ಅಭಿಮತ. ಹೊಸ ವಿಚಾರಗಳನ್ನು, ಜೀವನಕ್ರಮಗಳನ್ನು ಹುಟ್ಟಿಸಬಲ್ಲಂಥ ಈ ಸಂವಾದವನ್ನು ಹಲವು ಭಾಷೆಗಳಲ್ಲಿ ಹಲವರು ಅನುವಾದಿಸಿ ಪ್ರಕಟಿಸುತ್ತಿದ್ದಾರೆ. ಶಿವಾನಂದ ಅವರು  ಕನ್ನಡದಲ್ಲಿ ಇದನ್ನು ಸಂಪಾದಿಸಿ ಪುಸ್ತಕವಾಗಿ ತರುತ್ತಿರುವುದು ಟ್ಯಾಗೋರರ ೧೫೦ನೇ ವರ್ಷದ ಹುಟ್ಟುಹಬ್ಬದ ಆಚರಣೆಗೆ ಪ್ರಸ್ತುತವಾಗಿದೆ.

ಶೀರ್ಷಿಕೆ: ಮಹಾತ್ಮ ಮತ್ತು ಗುರುದೇವ ಸಂವಾದ – ದೇಶ ಕಟ್ಟುವ ಕನಸು ಕಾಣ್ಕೆಗಳು,

ಸಂಪಾದಕರು:ಎಸ್. ಶಿವಾನಂದ

ಪುಟ:304 ಬೆಲೆ:ರೂ.225/

 

‍ಲೇಖಕರು avadhi

16 October, 2011

1 Comment

  1. D.RAVIVARMA

    dayavittu nanage ee pustike v,p,p,mulaka kalisikodi. naanu aee takshana pustike oda bekagide,plz,d,ravivarma,l,i,c of india,hospet,583201.mob;9902596614

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading