
ಸತೀಶ್ ಚಪ್ಪರಿಕೆ
‘ದೇಶದ್ರೋಹಿ’ ನಾಗೇಶ ಹೆಗಡೆಗೆ ಜೈ!
ಜೂನ್ ಒಂದರಂದು ‘ಪ್ರಜಾವಾಣಿ’ಯಲ್ಲಿ ನಾಗೇಶ ಹೆಗಡೆ ಅವರು ‘ವಿಜ್ಞಾನ ವಿಶೇಷ’ ಅಂಕಣದಲ್ಲಿ ‘ಆಧುನಿಕ ಬದುಕಿನ ಪ್ರತಿಕ್ಷಣವೂ ಗೋ…ಮಯ’ ಎಂಬ ಲೇಖನ ಬರೆದ ಮರುಕ್ಷಣ ಒಬ್ಬ ಮಹಾನ್ ‘ದೇಶದ್ರೋಹಿ- ಹಿಂದೂ ವಿರೋಧಿ’ಯಾಗಿ ಹೊರಹೊಮ್ಮಿದ್ದಾರೆ! ಕಂಗ್ರ್ಯಾಜುಲೇಷನ್ ನಾಗೇಶ್ ಹೆಗಡೆ!?
ಸಾಮಾಜಿಕ ಜಾಲತಾಣದಲ್ಲಿ ನಾಗೇಶ ಹೆಗಡೆ ಅವರನ್ನು ಜಾಲಾಡುವ ದೊಡ್ಡ ‘ದೇಶಪ್ರೇಮಿ’ಗಳ ಸೈನ್ಯವೇ ಈಗ ಹುಟ್ಟಿಕೊಂಡಿದೆ. ಈ ದೇಶಪ್ರೇಮಿಗಳ ಸೈನ್ಯದಲ್ಲಿ ಪುಡಿ ರಾಜಕಾರಣಿಗಳು, ಪುಡಿ ಪತ್ರಕರ್ತರು, ಪುಡಿ ಕಟೌಟ್ ‘ಕಾಲಂ’ನಿಷ್ಟರು, ಪುಡಿ ಚಿಂತಕರು, ಪುಡಿ ಚೆಡ್ಡಿಗಳು, ಪುಡಿ ಧಾರ್ಮಿಕ ರಾಜಕಾರಣಿಗಳು… ಎಲ್ಲರೂ ಇದ್ದಾರೆ.
ಆತ್ಮೀಯ ಪುಡಿ ‘ದೇಶಪ್ರೇಮಿ’ಗಳೇ ಒಬ್ಬ ನಿಜವಾದ, ಪ್ರಾಮಾಣಿಕ, ಯಾವುದೇ ಪಂಥ-ಧರ್ಮದ ಪ್ರಭಾವಕ್ಕೆ ಒಳಗಾಗದ ಪತ್ರಕರ್ತನ ಕೆಲಸ ಏನು ಎನ್ನವುದಕ್ಕೆ ಸ್ಪಷ್ಟ ಉದಾಹರಣೆ ನಾಗೇಶ ಹೆಗಡೆ ಅವರು ಬರೆದಿರುವ ‘ಆಧುನಿಕ ಬದುಕಿನ ಪ್ರತಿಕ್ಷಣವು ಗೋ…ಮಯ’ ಲೇಖನ. ಈ ದೇಶದ ಒಬ್ಬ ಸಾಮಾನ್ಯ ಪ್ರಜೆಯಾಗಿ, ಮಾಧ್ಯಮ ಲೋಕದ ವಿದ್ಯಾರ್ಥಿಯಾಗಿ ಆ ಲೇಖನವನ್ನು ವಿಶ್ಲೇಷಣೆ ಮಾಡುವ ಸಣ್ಣ ಪ್ರಯತ್ನ ಇದು.
ಒಬ್ಬ ಪತ್ರಕರ್ತನ ಕೆಲಸ ಏನು? ಗೋಹತ್ಯೆಯಂತಹ ಸೂಕ್ಷ್ಮ ವಿಷಯ ಕುರಿತು ವಿವಾದ ಭುಗಿಲೆದ್ದಾಗ ತಮ್ಮನ್ನು ತಾವೇ ಯಾವುದೋ ಒಂದು ಪಂಥ-ಧರ್ಮಕ್ಕೆ ಒಡ್ಡಿಕೊಂಡು ರಾಜಕಾರಣಿಗಳು-ಉದ್ಯಮಿಗಳು-ಮಠಾಧೀಶರಿಗೆ ಸೆರಗು ಹಾಸುವುದಲ್ಲ. ಕೈಯಲ್ಲಿ ಲೇಖನಿ ಇದೆ ಅಥವಾ ಕಣ್ಣ ಮುಂದೆ ಕ್ಯಾಮರಾ ಇದೆ ಎಂದಕ್ಷಣ ಹುಚ್ಚು ಹಿಡಿದ ಬಾಣಭಟ್ಟರಾಗುವುದಲ್ಲ ಅಥವಾ ಭೌ-ಭೌ ಸ್ವಾಮಿಗಳಾಗಿ ಅರಚುವುದಲ್ಲ. ಸಮಸ್ಯೆಯ ಸೂಕ್ಷ್ಮವನ್ನು ಅರಿತು ವೈಜ್ಞಾನಿಕ ನೆಲೆಯಲ್ಲಿ ಅದನ್ನು ವಿಶ್ಲೇಷಿಸಿ ಸತ್ಯವನ್ನು ಓದುಗರು ಅಥವಾ ನೋಡುಗರ ಮುಂದಿಡುವುದು. ಪತ್ರಕರ್ತರುಯಾವುದೇ ಪ್ರಕರಣದ ತೀರ್ಪು ನೀಡಲು ಕೂತ ನ್ಯಾಯಾಧೀಶರಲ್ಲ. ಸತ್ಯದ ಪರಿಚಾರಕರು. ಪತ್ರಿಕೆಯ ಪುಟ ಅಥವಾ ಟೆಲಿವಿಷನ್ ಸ್ಟುಡಿಯೋ ನ್ಯಾಯಾಲಯವಲ್ಲ. ಪ್ರತಿಯೊಂದು ಮಾಧ್ಯಮ ಮನೆ ಸತ್ಯದ ಆಲಯ. ಇದನ್ನು ಅರ್ಥ ಮಾಡಿಕೊಂಡು, ಪತ್ರಕರ್ತನಾದವ ಯಾವುದೇ ವಿಷಯಕ್ಕೆ ಸಂಬಂಧಿಸಿದಂತೆ ತೀರ್ಪುಕೊಡುವ ಯತ್ನ ಮಾಡಬಾರದು. ಓದುಗ-ನೋಡುಗರ ಮುಂದೆ ಸತ್ಯ ಹೇಳಬೇಕು. ಅಷ್ಟೆ.
ನಾಗೇಶ ಹೆಗಡೆ ಅವರ ಪ್ರಸ್ತುತ ಲೇಖನವನ್ನೇ ತೆಗೆದುಕೊಳ್ಳಿ. ಅವರೆಲ್ಲಿಯೂ ಗೋಹತ್ಯೆಯ ಕುರಿತಾಗಲೀ, ಆ ಸೂಕ್ಷ್ಮ ವಿಷಯಕ್ಕೆ ಸಂಬಂಧಿಸಿದ ಯಾವುದೇ ಸಂಬಂಧಿಸಿದ ವಿಷಯಗಳ ಬಗ್ಗಾಗಲಿ ತೀರ್ಪುಕೊಡುವ ಯತ್ನ ಮಾಡಲಿಲ್ಲ. ಬದಲಾಗಿ ಗೋ ಮಾರುಕಟ್ಟೆಯ ವಿವಿಧ ಆಯಾಮಗಳನ್ನು ಓದುಗರ ಮುಂದೆ ತೆರೆದಿಟ್ಟಿದ್ದಾರೆ. ಆ ಲೇಖನವನ್ನು ಒಮ್ಮೆಓದಿದ ಮೇಲೆ, ‘ದೇಶಪ್ರೇಮಿಗಳು’ ಮತ್ತು ‘ದೇಶದ್ರೋಹಿಗಳು’… ಎಲ್ಲರೂ ಒಂದಲ್ಲಾ ಒಂದು ರೀತಿಯಲ್ಲಿ ಗೋ ಮಾರುಕಟ್ಟೆಯನ್ನು ಅವಲಂಬಿಸಿಯೇ ಜೀವನ ಸಾಗಿಸುತ್ತಿದ್ದಾರೆ ಎನ್ನುವುದು ಸ್ಪಷ್ಟವಾಗುತ್ತದೆ.
ನಾಗೇಶ್ ಅವರು ಸಕ್ಕರೆಯಿಂದ ಹಿಡಿದು ಗ್ಲಿಸರಿನ್ವರೆಗೆ ಗೋ ಅಂಗಾಂಗಗಳು ಹೇಗೆ ಬಳಕೆಯಾಗುತ್ತವೆ ಎನ್ನುವುದನ್ನು ವೈಜ್ಞಾನಿಕ ಹಿನ್ನಲೆಯಲ್ಲಿ ವಿಶ್ಲೇಷಿಸಿ ವಿವರ ನೀಡಿದ್ದಾರೆ. ಆ ಇಡೀ ಲೇಖನದಲ್ಲಿ ಸತ್ಯವನ್ನು ಬಿಟ್ಟರೆ ಬೇರೇನೂ ಇಲ್ಲ. ದುರಂತವೆಂದರೆ ಕಟೌಟ್ ‘ಕಾಲಂ’ನಿಷ್ಟರು, ಬಾಣಭಟ್ಟರು, ಭೌ-ಭೌ ಸ್ವಾಮಿಗಳ ಈ ಮಾಧ್ಯಮ ಯುಗದಲ್ಲಿ ಸತ್ಯ ಹೇಳುವ ನಾಗೇಶ ಹೆಗಡೆ ‘ದೇಶದ್ರೋಹಿ’ಯಾಗಿ ಬಿಡುತ್ತಾರೆ. ಬಕ್ಕೆಮನೆಯಒಬ್ಬ ನಿಜವಾದ ಸ್ವಾತಂತ್ರ್ಯ ಹೋರಾಟಗಾರರ ಪುತ್ರ, ಬರವಣಿಗೆ- ಪತ್ರಿಕಾ ವ್ಯವಸಾಯಕ್ಕಾಗಿ ಸಕಲೈಶ್ವರ್ಯವನ್ನೂ ತ್ಯಾಗ ಮಾಡಿದವ, ತನ್ನ ಬರವಣಿಗೆಯ ಶಕ್ತಿಯಿಂದಲೇ ಮೇಲೆ ಬಂದವ, ಕನ್ನಡ ಮಾಧ್ಯಮ ಲೋಕದಲ್ಲಿ ವಿಜ್ಞಾನ ಲೋಕವನ್ನು ಪುನರ್ಸೃಷ್ಟಿಸಿದ ಒಬ್ಬ ಅಪ್ಪಟ ಪರ್ತಕರ್ತ ‘ದೇಶದ್ರೋಹಿ.’ ಗೋ ಅಂಗಾಗಳನ್ನು ನಿತ್ಯ ಸವಿಯುವ, ಸೆರಗೊಡ್ಡಿರುವ ಅವರೆಲ್ಲ ಗೋರಕ್ಷಕರು ಮತ್ತು ಅಪ್ಪಟ ‘ದೇಶಪ್ರೇಮಿ’ಗಳು.
ಈ ರೋಗ ಕೇವಲ ಕರ್ನಾಟಕದ ಮಾಧ್ಯಮಕ್ಕೆ ಅಂಟಿಕೊಂಡಿಲ್ಲ. ಪ್ರಸ್ತುತ ಸನ್ನಿವೇಶದಲ್ಲಿ ಭಾರತೀಯ ಮಾಧ್ಯಮ ಲೋಕಕ್ಕೆ ಅಂಟಿಕೊಂಡ ಬಹುದೊಡ್ಡ ಶಾಪ ಇದಾಗಿದೆ. ಬಹುತೇಕ ಪತ್ರಕರ್ತರು ಮತ್ತು ಮಾಧ್ಯಮ ಮನೆಗಳು ರಾಜಕಾರಣಿಗಳು, ಉದ್ಯಮಿಗಳು, ಬಣ್ಣದ ಲೋಕದ ತಾರೆಗಳು ಮತ್ತು ಧಾರ್ಮಿಕ ನಾಯಕರ ಮುಂದೆ ಸೆರಗೊಡ್ಡಿಯಾಗಿದೆ. ಒಮ್ಮೆ ಯಾವುದಾದರೂ ಪತ್ರಕರ್ತಅಥವಾ ಮಾಧ್ಯಮ ಮನೆ ಹೀಗೆ ಸೆರಗೊಡ್ಡಿಕೊಂಡ ಮೇಲೆ ಅವರಿಂದ ಸತ್ಯವನ್ನು ನಿರೀಕ್ಷಿಸುವುದೇ ‘ದೇಶದ್ರೋಹ.’ ಅಂತಹ ಸೆರಗೊಡ್ಡಿಕೊಂಡವರ ಮಧ್ಯೆ ಸತ್ಯ ಹೇಳಲು ಹೊರಟವ ‘ದೇಶದ್ರೋಹಿ.’ ಹಾಗೆಂದುಕೊಂಡು ಸತ್ಯ ಹೇಳುವುದನ್ನು ನಿಲ್ಲಿಸಬೇಕೇ?
ಆತ್ಮೀಯ ‘ದೇಶಪ್ರೇಮಿ’ಗಳೇ ಗೋ ರಕ್ಷಣೆಯ ಕುರಿತು, ನಿಮಗೊಂದು ಸತ್ಯಕಥೆ ಹೇಳುತ್ತೇನೆ ಕೇಳಿ.
ಬೆಂಗಳೂರಿನ ಒಂದು ಪೊಲೀಸ್ಠಾಣೆ. ಬೆಳಗಿನ ಜಾವ ಎರಡು ಗಂಟೆಗೆ ಕಂಟ್ರೋಲ್ ರೂಮ್ನಿಂದ “ಕನಕಪುರ ರಸ್ತೆಯಲ್ಲಿ ಒಂದಿಷ್ಟು ಮಂದಿ ಒಂದು ಟೆಂಪೋ ತಡೆದು ಗಲಾಟೆ ಮಾಡುತ್ತಿದ್ದಾರೆ. ತಕ್ಷಣ ಹೋಗಿ ಗಲಾಟೆ ನಿಯಂತ್ರಣಕ್ಕೆ ತನ್ನಿ” ಎಂಬ ಸಂದೇಶ ಬರುತ್ತದೆ.
ಡ್ಯೂಟಿಯಲ್ಲಿದ್ದ ಹೆಡ್ಕಾನ್ಸ್ಟೆಬಲ್ ಒಬ್ಬರು, ತನ್ನಿಬ್ಬರು ಸಹೋದ್ಯೋಗಿಗಳ ಜೊತೆ ತಕ್ಷಣ ಸ್ಥಳಕ್ಕೆ ಧಾವಿಸುತ್ತಾರೆ. ಅಲ್ಲಿಗೆ ಹೋದ ಮೇಲೆ ಗೊತ್ತಾಗುತ್ತದೆ, ಗೋರಕ್ಷಕರು ಗೋವುಗಳನ್ನು ಸಾಗಿಸುತ್ತಿದ್ದ ಟೆಂಪೋವೊಂದನ್ನು ತಡೆದು ಗಲಾಟೆ ಮಾಡುತ್ತಿದ್ದಾರೆ ಎಂದು. ಗೋರಕ್ಷಕರು ಮತ್ತು ಸ್ಥಳೀಯರ ಪೈಕಿ ಕೆಲವರು ಒಂದಾಗಿ ಟೆಂಪೋ ಡ್ರೈವರ್ ಮತ್ತು ಕ್ಲೀನರ್ ಇಬ್ಬರನ್ನೂ ಹಿಡಿದು ಹಿಗ್ಗಾಮುಗ್ಗಾ ತಳಿಸುತ್ತಿದ್ದರು. ಆರು ಜನರಿದ್ದ ಪೊಲೀಸರ ತಂಡ ಆ ಗಲಾಟೆಯನ್ನು ನಿಯಂತ್ರಣಕ್ಕೆ ತೆಗೆದುಕೊಳ್ಳುವ ಮೊದಲೇ ಡ್ರೈವರ್-ಕ್ಲೀನರ್ ತಪ್ಪಿಸಿಕೊಂಡು ಪರಾರಿಯಾಗುತ್ತಾರೆ. ಮರುಕ್ಷಣ ಗೋರಕ್ಷರ ಪಡೆ ಕೂಡ ಕಣ್ಮರೆಯಾಗಿ ಬಿಡುತ್ತದೆ. ಸ್ಥಳೀಯರು ಕೂಡ ಕೆಲವು ನಿಮಿಷದಲ್ಲಿ ನಮಗ್ಯಾಕೆ ಉಸಾಬರಿ ಎಂದುಕೊಂಡು ಜಾಗ ಕಾಲಿ ಮಾಡಿಬಿಡುತ್ತಾರೆ.
ಉಳಿದಿದ್ದು, ಹಳೆಯ ಟೆಂಪೋ. ಅದರೊಳಗೆ ಆರು ದನಗಳು. ಎದುರು ಲಾಟಿ ಹಿಡಿದ ಆರು ಪೊಲೀಸರು. ಪೊಲೀಸರು ಟೆಂಪೋ ಮತ್ತು ದನಗಳನ್ನು ಠಾಣೆಗೆ ತಂದ ಮೇಲೆ ಪರದಾಟ ಶುರುವಾಗುತ್ತದೆ. ಆ ಠಾಣೆಯ ಹಿರಿಯ ಅಧಿಕಾರಿಗಳು ಕೋರಮಂಗಲ ಬಳಿಯಿರುವ ಒಂದು ಪ್ರಾಣಿ ದಯಾ ಸಂಸ್ಥೆಯನ್ನು ಸಂಪರ್ಕಿಸಿ ಆ ಅನಾಥ ಗೋವುಗಳಿಗೆ ರಕ್ಷಣೆ ನೀಡುವಂತೆ ಮನವಿ ಮಾಡಿಕೊಳ್ಳುತ್ತಾರೆ. “ನಮ್ಮಲ್ಲಿ ಸದ್ಯ ಸ್ಥಳಾವಕಾಶ ಇಲ್ಲ” ಎಂಬ ಉತ್ತರ ಸಿಗುತ್ತದೆ. ಗೋವುಗಳ
ರಕ್ಷಣೆಗಾಗಿಯೇ ಉದ್ಭವಿಸಿ ದೇಶದಾದ್ಯಂತ ಮನೆಮಾತಾಗಿರುವ ಕರ್ನಾಟಕದ ಒಂದು ಮಠವನ್ನು ಪೊಲೀಸರು ಸಂಪರ್ಕಿಸುತ್ತಾರೆ. “ನಮ್ಮ ಮಠದ ಗೋಶಾಲೆಗೆ ಸೇರಿಸಿಕೊಳ್ಳುವ ಪ್ರತಿಯೊಂದು ಗೋವಿನ ಆರೋಗ್ಯ ತಪಾಸಣೆಯಾಗಬೇಕು. ಆ ಆರೋಗ್ಯ ತಪಾಸಣೆ ಮಾಡುವ ವ್ಯಕ್ತಿ ಒಂದು ವಾರದ ಮಟ್ಟಿಗೆ ರಜಾ ಹಾಕಿದ್ದಾರೆ. ಅವರು ವಾಪಸು ಬರುವವರೆಗೆ ನಿಮ್ಮಠಾಣೆಯಲ್ಲಿರುವ ಗೋವುಗಳು ಅಲ್ಲಿಯೇ ಇರಲಿ” ಎಂಬ ಸಲಹೆ ಸಿಗುತ್ತದೆ.
ಸುಮಾರು ಒಂದು ವಾರಗಳ ಕಾಲ ಆ ಠಾಣೆಯಲ್ಲಿಯೇ ಆ ಅನಾಥ ದನಗಳನ್ನು ಪೊಲೀಸರೇ ಮುತುವರ್ಜಿಯಿಂದ ನೋಡಿಕೊಳ್ಳುತ್ತಾರೆ. ತಮ್ಮ ಸ್ವಂತ ಹಣದಿಂದ ಹುಲ್ಲು-ನೀರಿನ ವ್ಯವಸ್ಥೆ ಮಾಡುತ್ತಾರೆ. ಮತ್ತೆ ಮಠವನ್ನು ಸಂಪರ್ಕಿಸುತ್ತಾರೆ. “ಇನ್ನೂ ಒಂದು ವಾರ” ಎಂಬ ಉತ್ತರ ಬರುತ್ತದೆ. ಒಂದು ತಿಂಗಳು ಆ ಪೊಲೀಸ್ ಠಾಣೆ ದನದ ಕೊಟ್ಟಿಗೆಯಾಗಿ ಕಾರ್ಯ ನಿರ್ವಹಿಸುತ್ತದೆ. ಕೊನೆಗೊಂದು ದಿನ ಆ ದನಗಳು ಕಣ್ಮರೆಯಾಗಿ ಬಿಡುತ್ತವೆ!
ಇದು ಸತ್ಯಕಥೆ ಮತ್ತು ವಾಸ್ತವಕ್ಕೆ ಹಿಡಿದ ಕೈಗನ್ನಡಿ.
ಕಥೆ ಕೇಳಿಯಾಯಿತಲ್ಲ. ‘ದೇಶಪ್ರೇಮಿ’ಗಳಲ್ಲಿ ಕೊನೆಯದಾಗಿ ಒಂದೇ ಒಂದು ಮನವಿ. ನೀವು ಎಲ್ಲೇ ಇರಿ, ಪ್ರತಿಯೊಬ್ಬರೂ ಹಾಲು ಕೊಡದ ಒಂದೊಂದು ದನವನ್ನು ದತ್ತು ತೆಗೆದುಕೊಳ್ಳಿ. ಅವನ್ನು ನಿಮ್ಮ ಮನೆಯಲ್ಲಿ ಕಟ್ಟಿ ಹಾಕಿಕೊಂಡು, ಸಹಜವಾಗಿ ಸಾಯುವವರೆಗೆ ನಿಮ್ಮ ಸ್ವಂತ ತಾಯಿಯಂತೆ ಸಾಕಿ-ಸಲಹಿ. ‘ದೇಶದ್ರೋಹಿ’ಗಳಿಗೆ ಆ ಮೂಲಕ ತಕ್ಕ ಪಾಠ ಕಲಿಸಿ. ಆದರ್ಶ ಪ್ರಜೆಗಳಾಗಿ ಗೋಮಾತೆಯಂದಿರನ್ನು ಸಂರಕ್ಷಿಸಿ. ರಾಮ ರಾಜ್ಯದ ಜೊತೆಗೆ ಕೃಷ್ಣ ರಾಜ್ಯವನ್ನೂ ಸ್ಥಾಪಿಸಿ.





ಪ್ರತಿಯೊಬ್ಬರೂ ಹಾಲು ಕೊಡದ ಒಂದೊಂದು ದನವನ್ನು ದತ್ತು ತೆಗೆದುಕೊಳ್ಳಿ. ಅವನ್ನು ನಿಮ್ಮ ಮನೆಯಲ್ಲಿ ಕಟ್ಟಿ ಹಾಕಿಕೊಂಡು, ಸಹಜವಾಗಿ ಸಾಯುವವರೆಗೆ ನಿಮ್ಮ ಸ್ವಂತ ತಾಯಿಯಂತೆ ಸಾಕಿ-ಸಲಹಿ. ‘ದೇಶದ್ರೋಹಿ’ಗಳಿಗೆ ಆ ಮೂಲಕ ತಕ್ಕ ಪಾಠ ಕಲಿಸಿ. ಆದರ್ಶ ಪ್ರಜೆಗಳಾಗಿ ಗೋಮಾತೆಯಂದಿರನ್ನು ಸಂರಕ್ಷಿಸಿ. ರಾಮ ರಾಜ್ಯದ ಜೊತೆಗೆ ಕೃಷ್ಣ ರಾಜ್ಯವನ್ನೂ ಸ್ಥಾಪಿಸಿ.
Perfect !! Makes sense
ಎಂಥಾ ಮಾತು..
Always Nagesh Hegde Sir is values based reality and principles. One should understands this. . . .
ನಾನೂ ಅದೇ ಹೇಳೋಣಾಂತಿದ್ದೆ ಶಮಾ. ನಾಗೇಶ ಹೆಗಡೆಯವರ ಬರವಣಿಗೆ ಮೋದಿಯೂ ಒಪ್ಪುವಂತಿದೆ.
ಮೋದಿ ಒಪ್ಪುವುದು ಬಿಡುವುದು ದೊಡ್ಡ ವಿಚಾರವಲ್ಲ. ಏಕೆಂದರೆ ವಿರೋಧಿಸುತ್ತಿರುವ ಬುದ್ಧಿಹೀನ ತುಣುಕಗಳನ್ನು ಸೃಷ್ಟಿದಾತ ಮೋದಿಯೆ. ದೇಶ ಪ್ರಜಾರಾಜ್ಯವಾಗದೆ ಜಂಗಲ್ ರಾಜ್ಯವಾಗುತ್ತಿದೆ.
Dear Satish, your analysis is equally great.
All are desh drohi….
Sathish nimma analysis chennagide. nimma article na koneyalli helidnathe ellaru mansu madali, avaga Nijavagi Govige GOWRAWA nididanthe agauthade alva???
ಪರ ವಿರೋಧದ ನಡುವೆ ಮತ್ತು ಹೊರತುಪಡಿಸಿ ವಾಸ್ತವದ ಸಂಗತಿಗಳನ್ನೂ ವೈಜ್ಞಾನಿಕವಾಗಿ ವಿಶ್ಲೇಷಿಸಲೂಬಾರದೆಂದರೆ ಕಷ್ಟ ಕಷ್ಟ…….
Interesting analysis.
ನಾಗೇಶ್ ಹೆಗಡೆ ಅಂತಹವರಿಗೂ ಈ ಜನ ಹೀಗೆಲ್ಲಾ ಮಾಡುವುದು ಸಂಕಟವನ್ನು ಉಂಟು ಮಾಡುತ್ತದೆ.
ವಾಸ್ತವಿಕ ತಳಹದಿಯ ಲೇಖನ ನಾಗೇಶ್ ಹೆಗಡೆ ಸರ್ ಅವರದು.
ಈ ಲೇಖನ ಕೂಡಾ ವೈಯಕ್ತಿಕ ಬೆಂಬಲಕ್ಕಿಂತ ಸೈನ್ಸ್ ಮತ್ತು ಮಾಧ್ಯಮಗಳ ಸಾಮಾಜಿಕ ಬಾಧ್ಯತೆ ಗಳ ಕುರಿತು ಒತ್ತಿ ಹೇಳಿದೆ.
ದೇಶಪ್ರೇಮಿಗಳ ಮೆದುಳಿಗೆ ಅರ್ಥವಾಗಲಿ ಎಂದು ಹಾರೈಸಬಹುದಷ್ಟೇ.
ಹೆಗಡೆ ಸರ್ ರವರಂತವರಿಗೇ ಬೆರಳು ತೋರಿಸುವವರ ನೆನೆದು ಕೋಪದ ಬದಲು ನಗೆಯು ಬರುತಿದೆ, ಅಥವಾ ಇಂತವರಿಗೆ ಕಾಮಧೇನು ತುಸು common sense ದಯಪಾಲಿಸಲಿ ಎಂದು ಪ್ರಾರ್ಥಿಸಬೇಕೆನಿಸುತ್ತಿದೆ
ಪ್ರಿಯರೆ: ನಾನು ಫೇಸ್ಬುಕ್, ಟ್ವಿಟರ್, ಇತ್ಯಾದಿ ಸಾಮಾಜಿಕ ಜಾಲತಾಣಗಳನ್ನು ಉಪಯೋಗಿಸುವುದಿಲ್ಲವಾದುದರಿಂದ ಈ ಲೇಖನವನ್ನು ಓದಿ ದಿಗ್ಭ್ರಮೆಯಾಗುತ್ತಿದೆ. ಶ್ರೀ ನಾಗೇಶ ಹೆಗ್ಡೆ ಅವರಂತಹ ವಿದ್ವಾಂಸರು ಬಹು ಅಪರೂಪ; ಅವರ ಪ್ರತಿಯೊಂದು ಲೇಖನವೂ ಸಮಚಿತ್ತದ ವಿಜ್ಞಾನದ ಒಂದು ಪಾಠ. ನನಗೂ ಅವರು ಪಾಠ ಹೇಳಿದ್ದಾರೆ. ಅವರ ’ಗೋ-ಮಯ’ ಲೇಖನವನ್ನು ಓದಿ ಆಶ್ಚರ್ಯಪಟ್ಟಿದ್ದೆ, ಅವರನ್ನು ಅಭಿನಂದಿಸಿದ್ದೆ. ಅಂತಹ ವಿದ್ವಾಂಸರು ’ದೇಶದ್ರೋಹಿ’ಗಳಾದರೆ, ದೇವರ ದಯೆಯಿಂದ ಇಡೀ ದೇಶ ’ದೇಶದ್ರೋಹಿ’ಗಳಿಂದಲೇ ತುಂಬಲಿ.
ಸಿ. ಎನ್. ರಾಮಚಂದ್ರನ್
ಸಾಕಲಾಗದವರು ಆರ್ಥಿಕ ಸಹಾಯವನ್ನು ಸಾಕುವವರಿಗೆ ಮಾಡಿ. ಒಟ್ಟಿನಲ್ಲಿ ಗೋ ರಕ್ಷಣೆಯತ್ತ ಮುನ್ನುಗ್ಗಿ.
ಸತೀಶ್, ಎಷ್ಟು ಚೆನ್ನಾಗಿ ಬರೆದಿದ್ದೀರಿ !
ವಿಜ್ಞಾನವನ್ನು ಓದದ ಕಲಾ ವಿದ್ಯಾರ್ಥಿಯಾದ ನನ್ನಂತಹ ಸಾವಿರಾರು ಮಂದಿಗೆ ವಿಜ್ಞಾನದ ಬಗ್ಗೆ ಅಲ್ಪ ಸ್ವಲ್ಪ ಜ್ಞಾನ ಇದ್ದರೆ ವಿಜ್ಞಾನದ ವಿಷಯವನ್ನು ಸರಳಗನ್ನಡದಲ್ಲಿ ವಿವರಿಸುವ ನಾಗೇಶ್ ಹೆಗಡೆಯವರು ಕಾರಣ.ಅವರನ್ನು ವಿರೋಧಿಸುವವರು ವಿಷಯ ಜ್ಞಾನ ಇಲ್ಲದ ದಡ್ಡ ಮುಂಡೇವು ಬಿಡಿ.
ಗೋವಿನಿಂದ ಎಲ್ಲವನ್ನು ಹೀರಿಕೊಂಡೂ ಗೋರಕ್ಷಕರೆಂದು ಬೀಗುವುದಕ್ಕಿಂತ…. ವಾಸ್ತವತೆಯನ್ನು ಪ್ರತಿಪಾದಿಸಿ ದೇಶದ್ರೋಹಿಗಳಾಗುವುದೇ ಲೇಸು… ಅನ್ನಿಸುತ್ತಿದೆ….
ನಿಮ್ಮ ಸತ್ಯ ಕಥೆಯ ಮೂಲಕ ಗೋಪಾಲಕರಿಗೆ ನಿಮ್ಮ ಸಲಹೆ ಚೆನ್ನಾಗಿದೆ.