ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

'ದೇವರ' ಬೆನ್ನು ಬಿದ್ದು..

Prasad

ಪ್ರಸಾದ್ ನಾಯ್ಕ್ 

ಕೆಲವೊಮ್ಮೆ ಹೀಗಾಗುವುದುಂಟು.
ಉದಾಹರಣೆಗೆ ಹಾಲಿವುಡ್ ನ ಆಲ್-ಟೈಮ್ ಬೆಸ್ಟ್ ಚಲನಚಿತ್ರಗಳಲ್ಲೊಂದಾದ ‘ಗಾಡ್ ಫಾದರ್’ ಸರಣಿಯ ಚಲನಚಿತ್ರಗಳು ಎರಡು ವರ್ಷಗಳ ಮಟ್ಟಿಗೆ ನನ್ನ ಲ್ಯಾಪ್-ಟ್ಯಾಪಿನಲ್ಲೇ ಉಳಿದುಕೊಂಡಿದ್ದವು. ಮೂರು ಘಂಟೆಗಳ ಕಾಲಾವಧಿಯನ್ನು ತೋರಿಸುತ್ತಿದ್ದುದರಿಂದಲೋ, ಅರವತ್ತರ ಶೈಲಿಯು ಹಿಡಿಸಲಿಲ್ಲವಾದ್ದರಿಂದಲೋ ಅವುಗಳು ದರ್ಶನಭಾಗ್ಯವನ್ನು ಕಾಣದೆ ಅಲ್ಲೇ ನಿದ್ದೆಹೋಗಿದ್ದವು.
ಕೊನೆಗೂ ಒಂದು ಸುಮುಹೂರ್ತದಿನವು ಬಂದೇ ಬಿಟ್ಟು ಸರಣಿಯ ಮೂರೂ ಚಿತ್ರಗಳನ್ನು ಒಂದೇ ದಿನದಲ್ಲಿ ನೋಡಿ ಮುಗಿಸಿದ್ದೆ. ಅದ್ಭುತವಾದ ಕಥಾಹಂದರ ಮತ್ತು ನಿರೂಪಣಾ ಶೈಲಿಯುಳ್ಳ ಸಿನಿಮಾವು ಸಿಕ್ಕಾಪಟ್ಟೆ ಖುಷಿಕೊಟ್ಟಿತ್ತು. ಇಷ್ಟೊಳ್ಳೆ ಸಿನಿಮಾವನ್ನು ಹಲವರ ಶಿಫಾರಸುಗಳ ನಂತರವೂ ನೋಡಲು ತಡಮಾಡಿದ್ದಕ್ಕಾಗಿ ನಂತರ ಹಳಹಳಿಸಿಕೊಂಡಿದ್ದೂ ಆಯಿತು.
devaru bookಈ ಬಾರಿ ಹೀಗೇ ಆಗಿದ್ದು ಒಂದು ಪುಸ್ತಕದ ಜೊತೆ. ಹಿರಿಯ ಲೇಖಕರಾದ ಎ. ಎನ್. ಮೂರ್ತಿರಾವ್ ರವರ ಲೇಖನಿಯಲ್ಲಿ ಮೂಡಿಬಂದ ‘ದೇವರು’ ಪುಸ್ತಕವು ಹೀಗೇ ಕಾರಣಾಂತರಗಳಿಂದ ಓದಲಾಗದೇ ಉಳಿದುಕೊಂಡು ಬಿಟ್ಟಿತ್ತು.
ದೆಹಲಿಯಿಂದ ರಿಪಬ್ಲಿಕ್ ಆಫ್ ಅಂಗೋಲಾಕ್ಕೆ ವರ್ಗಾವಣೆಯಾದಾಗ ತೆಗೆದುಕೊಂಡು ಹೋಗಿದ್ದ ಕೆಲವೇ ಕೆಲವು ಪುಸ್ತಕಗಳಲ್ಲಿ ಇದೂ ಒಂದಾಗಿದ್ದು ನನ್ನ ಅದೃಷ್ಟ. ಮುನ್ನುಡಿಯಿಂದ ಶುರುಮಾಡಿಕೊಂಡು ಒಂದೇ ಗುಕ್ಕಿನಲ್ಲಿ ಓದಿಸಿಕೊಂಡ ನಂತರವೇ ಎಂಥಾ ಅದ್ಭುತವಾದ ಪುಸ್ತಕವಿದು ಎಂಬ ಜ್ಞಾನೋದಯವಾಗಿದ್ದು.
ತಾನು ‘ದೇವರು’ ಎಂಬ ಸರ್ವಶಕ್ತ, ಸರ್ವವ್ಯಾಪಿ, ಸರ್ವಾಂತರ್ಯಾಮಿ ವ್ಯಕ್ತಿಯೊಬ್ಬ ಇದ್ದಾನೆ ಎಂಬ ವಾದವನ್ನು ಒಪ್ಪುವುದಿಲ್ಲ ಎಂದು ಹೇಳಿ ತಮ್ಮ ನಾಸ್ತಿಕತನವನ್ನು ಸ್ಪಷ್ಟಪಡಿಸುತ್ತಾರಾದರೂ, ಎಲ್ಲೂ ತನ್ನ ಅಭಿಪ್ರಾಯಗಳನ್ನು ಓದುಗನ ಮೇಲೆ ಹೇರಲು ಪ್ರಯತ್ನಿಸಿಲ್ಲ ಎಂಬುದು ಈ ಪುಸ್ತಕದ ವಿಶೇಷ.
‘ದೇವರು’ ಎಂಬ ವ್ಯಕ್ತಿ/ವಿಷಯದ ಬಗ್ಗೆ ತನ್ನ ಅನಿಸಿಕೆಗಳನ್ನು ಒಂದೊಂದಾಗಿ ತರ್ಕದ ಧಾಟಿಯಲ್ಲಿ, ಕೊಂಚ ಹಾಸ್ಯದ ಲೇಪವನ್ನು ಸೇರಿಸಿ, ಮನಸ್ಸಿಗೆ ನಾಟುವಂತೆ ಮಾಡುವ ನಿರೂಪಣೆಯೇ ಈ ಪುಸ್ತಕದ ಹೆಚ್ಚುಗಾರಿಕೆ.
ಸರ್ವಶಕ್ತ, ಸರ್ವವ್ಯಾಪಿ ಮತ್ತು ಸರ್ವಾಂತರ್ಯಾಮಿಗಳೆಂದು ಹೊಗಳಿ ದೇವರನ್ನು ಅಟ್ಟಕ್ಕೇರಿಸುವುದಲ್ಲದೆ, ಮಾನವನು ತಾನು ಸೃಷ್ಟಿಸಿದ ದೇವರುಗಳಿಗೂ ತನ್ನಂತೆಯೇ ಗುಣದೋಷಗಳನ್ನು ಕೊಡಮಾಡಿ ಮೋಜು ನೋಡುವುದನ್ನೂ ಲೇಖಕರು ಸೊಗಸಾಗಿ ಬರೆಯುತ್ತಾರೆ.
ಆಂಧ್ರದ ಸ್ಥಾನಂ ನರಸಿಂಹರಾಯರ ನಾಟಕ ಕಂಪನಿಯಿಂದ ಮೈಸೂರಿನಲ್ಲಿ ಆಡಿಸಲ್ಪಟ್ಟ ‘ಶ್ರೀಕೃಷ್ಣಪಾರಿಜಾತ’ ನಾಟಕವನ್ನು ನೆನಪಿಸುತ್ತಾ ರುಕ್ಮಿಣಿ-ಸತ್ಯಭಾಮರ ಮತ್ಸರ, ಹೆಂಡತಿ ಸತ್ಯಭಾಮೆಯ ದರ್ಪ, ಅವಳೆದುರು ಅಸಹಾಯಕನಾಗಿ ಟಿಪಿಕಲ್ ಗಂಡನಂತೆ ಕಂಡ ಶ್ರೀ ಕೃಷ್ಣ ಪರಮಾತ್ಮ ಮತ್ತು ಇವೆಲ್ಲವನ್ನೂ ಆಸ್ವಾದಿಸುತ್ತಿದ್ದ ಪ್ರೇಕ್ಷಕ ಬಳಗವನ್ನು ಲೇಖಕರು ಮೆಲುಕುಹಾಕುತ್ತಾರೆ.
ಹೀಗೆ ನಮ್ಮ ನಡುವೆ ಉಳಿದು, ಬೆಳೆದು ನಮ್ಮಂತೆಯೇ ಅರಿಷಡ್ವರ್ಗಗಳನ್ನು ತುಂಬಿಕೊಂಡ ‘ದೇವರು’ ಗಂಭೀರವಾದಗಳ ಸರಣಿಯಲ್ಲೂ ನಗೆಯುಕ್ಕಿಸುತ್ತಾನೆ.
ಇಂಥದ್ದೇ ಇನ್ನೊಂದು ವಿರೋಧಾಭಾಸಗಳ ಉದಾಹರಣೆಯಲ್ಲಿ ಲೇಖಕರು ಉಲ್ಲೇಖಿಸುವುದು ಅಜಮಿಳನ ಕಥೆ. ತನ್ನ ಜೀವಿತದುದ್ದಕ್ಕೂ ಕೆಟ್ಟ ಜೀವನವನ್ನು ನಡೆಸಿದ ಅಜಮಿಳ, ಸಾಯುವ ಸಮಯದಲ್ಲಿ `ನಾರಾಯಣ’ ಎಂಬ ಹೆಸರಿನ ತನ್ನ ಮಗನನ್ನು ಕೂಗಿ ಕರೆದು, ಆ ಹೆಸರಿನ ಬಲದಿಂದಲೇ ಮುಕ್ತಿಯನ್ನು ಪಡೆದನಂತೆ ಎನ್ನುವ ಸಾರಾಂಶದ ಕಥೆ.
a-n-murthyraoಇದನ್ನೇ ಮುಂದುವರೆಸುತ್ತಾ ದೇವರು ಸ್ತೋತ್ರಪ್ರಿಯ ಅನ್ನುವುದೇ ಭ್ರಾಂತಿ; ಯಾಂತ್ರಿಕವಾಗಿ, ಉದ್ದೇಶರಹಿತವಾಗಿ, ಬಾಯಿಯಿಂದ ಹೊರಟ ನಾಮೋಚ್ಚಾರಣೆಯಿಂದ ದೇವನು ಪ್ರೀತನಾಗುತ್ತಾನೆಂದು ಭಾವಿಸುವುದು ಇನ್ನೂ ಹೆಚ್ಚಿನ ಭ್ರಾಂತಿ ಎಂದು ಅಭಿಪ್ರಾಯ ಪಡುತ್ತಾರೆ. ಅಂತೆಯೇ ‘ತಲ್ಲಣಿಸದಿರು ಕಂಡ್ಯ ತಾಳು ಮನವೇ, ಎಲ್ಲರನು ಸಲಹುವನು ಇದಕೆ ಸಂಶಯವಿಲ್ಲ, ಕಲ್ಕೆಳಗೆ ಅಡಗಿರುವ ಕ್ರಿಮಿಕೀಟಗಳಿಗೆಲ್ಲ, ಅಲ್ಲಲ್ಲಿ ಆಹಾರವಿತ್ತವರಾರೋ’, ಎಂಬ ಕನಕದಾಸರ ಸಾಲುಗಳನ್ನು ಉದ್ಧರಿಸುತ್ತಾ ಜಪ, ಸ್ತೋತ್ರ, ನಾಮಸ್ಮರಣೆಗಳ ಹಂಗಿಲ್ಲದೆ ಬದುಕುತ್ತಿರುವ ಕ್ರಿಮಿಕೀಟಗಳನ್ನೂ ಕೂಡ ನಮ್ಮ ಕರುಣಾಮಯಿ ದೇವರು ಸಲಹುತ್ತಿದ್ದಾನೆಂಬುದು ನೆನಪಿರಲಿ ಎಂದು ಹೇಳಿ ಓದುಗನನ್ನು ಚಿಂತನೆಗೆ ಹಚ್ಚುತ್ತಾರೆ.
‘ದೇವರಿದ್ದಾನೋ ಇಲ್ಲವೋ’ ಎಂಬುದು ‘ದೆವ್ವಗಳಿದ್ದಾವೋ ಇಲ್ಲವೋ’ ಎಂಬ ಪ್ರಶ್ನೆಯಂತೆಯೇ ಉಳಿದುಬಂದಿರುವಂಥದ್ದು. ಇದಕ್ಕೆ ಖಚಿತವಾದ ಒಂದು ಉತ್ತರವನ್ನು ನೀಡುವುದು ಕಷ್ಟವೇ. ಪ್ರಸ್ತುತ ವಿಷಯವನ್ನು ಮೇಲೆ ಹೇಳಿದ ಹಾಸ್ಯದಾಚೆಗೆ ನೋಡಿದರೂ ಅದೊಂದು ಕೊನೆಮೊದಲಿಲ್ಲದ ಅನಂತದಂತೆ ಕಾಣುವುದರಲ್ಲಿ ಸಂಶಯವಿಲ್ಲ.
ಯಾಕೆಂದರೆ ದೇವರು ಮಾನವನಂತೆಯೇ ಕಾಲಕಾಲಕ್ಕೆ ಬದಲಾಗಿದ್ದಾನೆ. ದೇವರು ಕಲ್ಲಾಗಿದ್ದಾನೆ, ವಿಗ್ರಹವಾಗಿದ್ದಾನೆ, ಗಿಡ-ಮರವಾಗಿದ್ದಾನೆ, ಪ್ರಾಣಿ-ಪಕ್ಷಿಗಳಾಗಿದ್ದಾನೆ, ಸರೀಸೃಪವಾಗಿದ್ದಾನೆ ಮತ್ತು ಪಂಚಭೂತಗಳೂ ಆಗಿದ್ದಾನೆ. ನಮ್ಮ ದೇವರು ನಮ್ಮಂತೆಯೇ ಲಂಚ ಕೇಳುತ್ತಾನೆ, ರಾಕ್ಷಸರಿಗೆ ಅವಿವೇಕದ ವರಗಳನ್ನು ನೀಡುತ್ತಾನೆ, ಸೌಂದರ್ಯದ ಹಿಂದೆ ಬೀಳುತ್ತಾನೆ, ಸಲ್ಲಾಪವಾಡುತ್ತಾನೆ, ಕಪಟನಾಟಕ ಸೂತ್ರಧಾರನಾಗುತ್ತಾನೆ, ಯುದ್ಧಗಳನ್ನು ಮಾಡುತ್ತಾನೆ, ಕೊನೆಗೆ ಸತ್ತೂ ಹೋಗುತ್ತಾನೆ… ಆದರೆ ಎಲ್ಲವೂ ಲೋಕಕಲ್ಯಾಣಕ್ಕಾಗಿ!
ಅವನಿಗೂ ನಮ್ಮಂತೆ ಹಸಿವು-ಬಾಯಾರಿಕೆಗಳಿವೆ, ಆಕಾಂಕ್ಷೆ-ಅಸೂಯೆಗಳಿವೆ, ನಾಟ್ಯ-ವೈಭವಗಳ ಹುಚ್ಚಿದೆ… ಹೀಗೆ ನಮ್ಮಿಂದ ಸಾಕಷ್ಟು ಎತ್ತರದ ಮಟ್ಟಿನಲ್ಲಿದ್ದೂ, ಆತ ಒಂದು ರೀತಿಯಲ್ಲಿ ನಮ್ಮವನೇ ಆಗಿದ್ದಾನೆ. ಆದರೂ ನಮ್ಮ ನಡುವೆ ಕೆಲ ಚಿಕ್ಕಪುಟ್ಟ ಗೊಂದಲಗಳಿವೆ. ಹರಿಹರ, ಶಂಕರನಾರಾಯಣ ಇತ್ಯಾದಿಗಳ `ನಾಮ’ಬಲದ ಹಿನ್ನೆಲೆಯಿದ್ದರೂ ಶೈವರು, ಮಾಧ್ವರುಗಳೆಂಬ ಎರಡು ಗುಂಪುಗಳು ಎರಡು ದಿಕ್ಕುಗಳಲ್ಲಿ ಹಂಚಿಹೋಗಿವೆ. ಇತರ ಧರ್ಮಗಳಲ್ಲೂ, ಒಂದೇ ಧರ್ಮದ ಛತ್ರಿಯಡಿ ಬರುವ ಹೊರತಾಗಿಯೂ ಇಂತಹ ಹಲವು ಪಂಗಡಗಳನ್ನು, ಸಹಪಂಗಡಗಳನ್ನು ನಾವು ಕಾಣಬಹುದು. ತಮ್ಮ ಆಚರಣಾವಿಧಾನಗಳಲ್ಲಿ ಚಿಕ್ಕಪುಟ್ಟ ವ್ಯತ್ಯಾಸಗಳೇ ಇದ್ದಿದ್ದರೂ ನಾವು ಮೇಲು, ನೀವು ಕೀಳು ಎಂದು ಈ ಗುಂಪುಗಳು ತಮ್ಮತಮ್ಮಲ್ಲೇ ಕಚ್ಚಾಡಿಕೊಂಡಿದ್ದೂ ಇದೆ.
ನಾನು ನೋಡುವ ಭಗವಂತ ಇನ್ನೊಬ್ಬನ ಭಗವಂತನಿಗಿಂತ ವಿಭಿನ್ನನಾಗಿಯೂ ಇರಬಹುದು. ಅಣುಅಣುವಿನಲ್ಲೂ ಭಗವಂತನಿದ್ದಾನೆ ಎಂದು ನಾವು ಒಪ್ಪಿಕೊಂಡಿದ್ದೇವಲ್ಲವೇ! ಒಬ್ಬನ ದೇವರು ಚತುರ್ಭುಜನಾಗಿ ವಜ್ರವೈಢೂರ್ಯಗಳಿಂದ ಕಂಗೊಳಿಸುತ್ತಿದ್ದರೆ, ಮತ್ತೊಬ್ಬನ ದೇವರು ಅವನಂತೆಯೇ ಸಾಮಾನ್ಯನಾಗಿ ಕುರಿಮೇಯಿಸುತ್ತಲೂ ಇರಬಹುದು.
ಇಪ್ಪತ್ತರ ದಶಕದಲ್ಲಿದ್ದರೆಂದು ಪುಸ್ತಕದಲ್ಲಿ ಉಲ್ಲೇಖಿಸಲಾದ ಸುಂದರಸಿಂಗ್ ಎಂಬ ಕ್ರೈಸ್ತ ವ್ಯಕ್ತಿ ಕ್ರಿಸ್ತನನ್ನು ತಮ್ಮ ಕಣ್ಣಾರೆ ನೋಡಿದ್ದರಂತೆ. ರಾಮಕೃಷ್ಣ ಪರಮಹಂಸರು ಕಾಳಿಯೊಂದಿಗೆ ಮಾತನಾಡುತ್ತಿದ್ದರು ಎನ್ನುವ ಕಥೆಗಳೂ ಜನಜನಿತ.
god cursingಹೊಲವುಳುವ ರೈತನಿಗೆ ನೆಲವೇ ದೇವರಾಗಬಹುದು. ರಂಗಭೂಮಿಯ ನಟನೊಬ್ಬನಿಗೆ ರಂಗಮಂಚವೇ ದೇವರಾಗಬಹುದು. ಒಂದು ಚಿಕ್ಕ ಬೀಜವನ್ನು ದೈತ್ಯಮರವಾಗಿಸುವ, ಬಾನಿನಲ್ಲಿ ಕಾಮನಬಿಲ್ಲನ್ನು ಮೂಡಿಸಿ ಸಂಜೆಗಳ ರಂಗೇರಿಸುವ, ಸೋನೆ ಮಳೆಯನ್ನು ಧೋ ಎಂದು ಸುರಿಸಿ ಹಸಿರನ್ನು ಕಂಗೊಳಿಸುವ ಪ್ರಕೃತಿಯೇ ನನ್ನ ಮಟ್ಟಿಗೆ ದೇವರಾಗಬಹುದು.
ಆದರೆ ಯಾವಾಗ ನನ್ನ ‘ಪ್ರಕೃತಿ’ ದೇವರು, `ನೆಲದ’ ಅಥವಾ `ರಂಗಮಂಚದ’ ದೇವರ ಜೊತೆ ಕಾಲುಕೆರೆದು ಜಗಳಕ್ಕೆ ಬೀಳುವನೋ ಆ ದಿನ ‘ದೇವರು’ ಎಂಬ ಈ ಅತ್ಯುನ್ನತ ವಿಚಾರದ ಮಹಾಸೌಧವೇ ಕುಸಿದುಬೀಳುವುದು ಖಂಡಿತ. ಅಂತೆಯೇ ನನ್ನ ದೇವರು ‘ಸರ್ವಶಕ್ತ’ನೆಂದು ನಾನು ಊರೆಲ್ಲಾ ಈಗಾಗಲೇ ಡಂಗುರ ಸಾರಿಸಿ, ನಂತರ ಅವನ ರಕ್ಷಣೆಗಾಗಿ ಪ್ರಾಣವನ್ನೇ ಕೊಡಲು ಸಿದ್ಧನೆಂದು ಬೊಬ್ಬೆಹೊಡೆಯಹೋದರೆ ಅದು ನನ್ನದೇ ವಾದವನ್ನು ಕ್ಷೀಣಗೊಳಿಸುವುದರಲ್ಲಿ ಸಂದೇಹವಿಲ್ಲ.
ದೇವರು ದುಷ್ಟಶಿಕ್ಷಕನೂ ಹೌದು, ಶಿಷ್ಟರಕ್ಷಕನೂ ಹೌದು. ಪ್ರಹ್ಲಾದನನ್ನು ಆತ ಅಪ್ಪಿಕೊಂಡಂತೆಯೇ, ಅಜಮಿಳನಿಗೂ ಮುಕ್ತಿಯನ್ನು ದಯಪಾಲಿಸಿದ್ದಾನೆ. ‘ಕರ್ಮಣ್ಯೇ ವಾಧಿಕಾರಸ್ತೇ ಮಾಫಲೇಷು ಕದಾಚನ’ ಎಂದು ಹೇಳಿ ಕರ್ತವ್ಯದ ಅರಿವನ್ನು ಮೂಡಿಸಿ ಸ್ವಾತಂತ್ರ್ಯವನ್ನು ಕೊಟ್ಟಿದ್ದಲ್ಲದೇ, ‘ಧರ್ಮಸಂಸ್ಥಾಪನಾರ್ಥಾಯ ಸಂಭವಾಮಿ ಯುಗೇ ಯುಗೇ’ ಎಂದು ಹೇಳಿ ಎಚ್ಚರಿಕೆಯನ್ನೂ ಕೊಟ್ಟಿದ್ದಾನೆ.
ಹೀಗೆ ಭಗವಂತನ ಅನುಗ್ರಹವಿಲ್ಲದೆ ಹುಲ್ಲುಕಡ್ಡಿಯೂ ಅಲುಗಾಡುವುದಿಲ್ಲವೆಂಬ ಮಾತಿನೊಂದಿಗೇ, ಮಾಡಿದ್ದುಣ್ಣೋ ಮಹಾರಾಯ ಎಂಬ ‘ಕರ್ಮ’ ಥಿಯರಿಯ ಮಾತೂ ಇದೆ. ಇನ್ನು ದೇವರನ್ನು ರಕ್ಷಿಸುವ ಭರದಲ್ಲಿ ನಾವು ನಾವೇ ಬಡಿದು ಕಚ್ಚಾಡಿಕೊಂಡರೆ ದೇವರು ತಾನೇ ಏನು ಮಾಡಿಯಾನು? ನಮ್ಮೆಲ್ಲರನ್ನು ರಕ್ಷಿಸಿ ಪೊರೆಯುವ ದೇವರು, ತನ್ನನ್ನು ತಾನು ರಕ್ಷಿಸಿಕೊಳ್ಳಲಾರನೇ? ಅಸಲಿಗೆ ದೇವರ ರಕ್ಷಣೆಗಿಂತ ನಮ್ಮ ಸ್ವರಕ್ಷಣೆಯೇ ಈಗ ತುರ್ತಾಗಿ ಬೇಕಾಗಿರುವುದು. ಹೀಗಾಗಿ ನಮ್ಮ ಉದ್ಧಾರಕ್ಕಾಗಿ ನಾವು ದೇವರನ್ನು ಸೃಷ್ಟಿಸಿದರೆ, ಅವನನ್ನು ಅವಲಂಬಿಸಿದರೆ ಪ್ರಯೋಜನವಿಲ್ಲ, ನಾವು ನೆಚ್ಚಬೇಕಾಗಿರುವುದು ನಮ್ಮನಮ್ಮನ್ನೇ ಎಂಬ ಲೇಖಕರ ಮಾತಿಗೆ ತಲೆದೂಗಲೇಬೇಕಾಗುತ್ತದೆ.
ದೇವರಷ್ಟೇ ಅಲ್ಲದೆ ದೇವರನ್ನು ತಳುಕುಹಾಕಿಕೊಂಡಿರುವ ಬ್ರಹ್ಮ, ಸೃಷ್ಟಿ-ಸ್ಥಿತಿ-ಲಯ, ಮೂಲ, ವಿಕಾಸ, ಅನಂತತೆ, ಆಚರಣೆಗಳು, ನಂಬಿಕೆಗಳು, ಮೌಢ್ಯತೆಗಳು, ಜಪ-ತಪ, ಆವಾಹನೆ, ಭಯ-ಭಕ್ತಿ, ನೀತಿಗಳು, ಮೌಲ್ಯಗಳು, ಧರ್ಮಸಂಬಂಧಿ ದಂಗೆ-ಯುದ್ಧಗಳು ಹೀಗೆ ಬಹಳಷ್ಟು ವಿಚಾರಗಳ ಬಗ್ಗೆ ಈ ಕೃತಿಯು ಬೆಳಕು ಚೆಲ್ಲುತ್ತದೆ. ಇನ್ನು ‘ದೇವರೊಬ್ಬನೇ ಸತ್ಯ, ಉಳಿದುದೆಲ್ಲವೂ ಮಿಥ್ಯ’ ಎಂಬ ಮಾತಿನ ಬಗ್ಗೆಯೂ ಒಂದು ಆರೋಗ್ಯಕರ ಚರ್ಚೆಯಿದೆ.
shivaಒಂದರ್ಥದಲ್ಲಿ ಈ ಮಾತಿನ ಸತ್ಯಾಸತ್ಯತೆಗಳ ಬಗ್ಗೆ ಪ್ರಶ್ನೆಯೆದ್ದರೂ ತಪ್ಪೇನಿಲ್ಲ. ಜೀವನವೆಂಬುದು ನಿಜಕ್ಕೂ ಕ್ಷಣಭಂಗುರವೇ? ದೇವರೊಬ್ಬನನ್ನು ಬಿಟ್ಟು ಉಳಿದುದೆಲ್ಲವೂ ಸುಳ್ಳಾದರೆ ನಮ್ಮ ದೈನಂದಿನ ಜೀವನವೇ ಒಂದು ದೊಡ್ಡ ಭ್ರಮೆ. ಆದರೆ ನಾನು ಈ ಲೇಖನವನ್ನು ಬರೆಯುತ್ತಿರುವುದೂ ಸತ್ಯ. ನೀವಿದನ್ನು ಓದುತ್ತಿರುವುದೂ ಸತ್ಯ. ನನ್ನ ಆಫೀಸಿನ ಮೇಲಧಿಕಾರಿ ಗೊಣಗುತ್ತಿರುವುದೂ ಸತ್ಯ.
ದೈನಂದಿನ ಖರ್ಚುಗಳು ಗಗನಮುಖಿಯಾಗಿ ಸಾಗುತ್ತಿರುವುದು ಎಷ್ಟು ಸತ್ಯವೋ, ಸಿರಿಯಾದಲ್ಲಿ ಬಾಂಬುಗಳ ಮಳೆಯಾಗುತ್ತಿರುವುದೂ ಅಷ್ಟೇ ಸತ್ಯ. ಬರಲಿರುವ ನಾಳೆಯ ಬಗ್ಗೆ ಖಚಿತವಿರದಿದ್ದರೂ ಮುಂದಿನ ಶುಕ್ರವಾರದ ಸಿನಿಮಾಗೆ ಟಿಕೆಟ್ ಕಾಯ್ದಿರಿಸಿಕೊಳ್ಳುತ್ತೇವೆ. ಗುಳಿಕೆನ್ನೆಯ ಹುಡುಗಿಯು ಇಂದಲ್ಲಾ ನಾಳೆ ತನಗೆ ಒಲಿದೇ ಒಲಿಯುತ್ತಾಳೆಂಬ ನಿರೀಕ್ಷೆಯಲ್ಲಿ ತರುಣನೊಬ್ಬ ಕವಿತೆಗಳನ್ನು ಗೀಚುತ್ತಲೇ ಹೋಗುತ್ತಾನೆ.
ಎ. ಎನ್. ಮೂರ್ತಿರಾವ್ ರವರ ‘ದೇವರು’ ಎಂಬ ಈ ಹೊತ್ತಿಗೆಯು ದೇವರಿದ್ದಾನೆ ಅಥವಾ ಇಲ್ಲ ಎಂದು ತೀರ್ಪುಕೊಡಲು ಹೊರಡುವುದಿಲ್ಲ. ತನ್ನ ನಾಸ್ತಿಕವಾದವನ್ನು ಇತರರ ಮೇಲೆ ಹೇರಬಯಸುವ ಯಾವ ಆಕಾಂಕ್ಷೆಯೂ ಇಲ್ಲಿಲ್ಲ. ನಾವು ಪೂಜಿಸುತ್ತಾ, ಪ್ರೀತಿಸುತ್ತಾ, ಆರಾಧಿಸುತ್ತಾ ಬಂದಿರುವ ದೇವರನ್ನು, ನಮ್ಮ ನಂಬಿಕೆಗಳ, ಪೂಜಾವಿಧಾನಗಳ, ಪರಂಪರೆಗಳ ತಳಹದಿಯಲ್ಲೇ ಕೊಂಚ ಡೀಟೈಲ್ಡ್ ಆಗಿ ನೋಡುವ ಪ್ರಾಮಾಣಿಕ ಪ್ರಯತ್ನವಷ್ಟೇ ಇಲ್ಲಿದೆ.
ಸುಮ್ಮನೆ ಪದಗಳೊಂದಿಗೆ ಆಟವಾಡುತ್ತಾ, ವಿತಂಡವಾದವನ್ನು ಮಾಡುತ್ತಾ ಹೋಗದೆ ನಾವು ಈಗಾಗಲೇ ನೋಡಿರುವ ದೇವರನ್ನು ವೈಚಾರಿಕತೆಯ ಭೂತಗನ್ನಡಿಯಲ್ಲಿ ನೋಡುವ ಒಂದು ಸ್ಥೂಲ ಪ್ರಯತ್ನ ಅನ್ನಬಹುದು. ‘ದೇವರು ಎಂದರೆ ಮೌಲ್ಯಗಳು, ಅವುಗಳನ್ನು ಕಾರ್ಯಕ್ಷೇತ್ರದಲ್ಲಿ ಬಳಸುವುದೇ ಒಂದು ಪೂಜೆ. ಈ ಮೌಲ್ಯಗಳಿಗೆ ಅಭಿಷೇಕಗಳ ಹಂಗಿಲ್ಲ, ಸ್ತೋತ್ರಾದಿ ನೈವೇದ್ಯಗಳ ಹೇರಿಕೆಯಿಲ್ಲ. ಪೂಜೆ ಮಾಡುವುದು ಸುಲಭ ಆದರೆ ಮೌಲ್ಯಗಳಿಗನುಸಾರವಾಗಿ ಬದುಕುವುದು ಕಷ್ಟ. ಈ ನೈತಿಕ ಮೌಲ್ಯಗಳ ಅವಶ್ಯಕತೆಯಿರುವುದು ಈ ಲೋಕದಲ್ಲೇ ಹೊರತು, ಲೋಕದ ಹೊರಗಲ್ಲ’ ಎಂಬ ಮಾತು ಇಷ್ಟವಾಗುತ್ತದೆ.
ಏನೇ ಆದರೂ ಧರ್ಮ, ದೇವರುಗಳು ಭಯ, ಭಕ್ತಿ, ಮುಕ್ತಿಗಳಿಂದಾಚೆಗೂ ಮುಂದುವರಿದು ಬಹಳಷ್ಟನ್ನು ನಮ್ಮ ಮಡಿಲಿಗೆ ಸುರಿದಿವೆ ಎಂದು ಹೇಳಲೇಬೇಕಾಗುತ್ತದೆ. ಅದೆಷ್ಟು ಸಾಹಿತ್ಯ, ಸಂಗೀತಗಳು, ಸೃಜನಶೀಲತೆಯ ಖಜಾನೆಗಳು ದೇವರುಗಳ ಕಲ್ಪನೆಗಳಿಂದ ಹೊರಬಂದಿಲ್ಲ. ಹೋಮ ಹವನಗಳಲ್ಲಿ ರಾಗಬದ್ಧವಾಗಿ ಮಾಡಲಾಗುವ ಮಂತ್ರೋಚ್ಚಾರಣೆಗಳ ನಾದಮಾಧುರ್ಯಕ್ಕೆ ಮಾರಿಹೋಗದವರಾರಿದ್ದಾರೆ. ಸಿಖ್ಖರ ಗುರುದ್ವಾರಗಳಲ್ಲಿ ನುಡಿಸಲಾಗುವ ಕೀರ್ತನೆಗಳು ಅವೆಷ್ಟು ನೆಮ್ಮದಿಯನ್ನು ತರುತ್ತವೆ.
A worker at a jewellery showroom displays gold idols of Hindu elephant god Ganesh (L) and Hindu goddess Lakshmi in Kolkata August 30, 2013. REUTERS/Rupak De Chowdhuri/Files
ಶ್ರೀ ಕೃಷ್ಣನ ಸಲ್ಲಾಪ, ಶಿವನ ಸಂಯಮ, ಗಣಪನ ಬುದ್ಧಿವಂತಿಕೆ, ರಾಮನ ಪಿತೃವಾಕ್ಯಪರಿಪಾಲನೆ, ಹನುಮನ ಸ್ವಾಮಿಭಕ್ತಿ, ದುರ್ಗೆಯ ಶಕ್ತಿ, ಕಾಳಿಯ ರೌದ್ರರಮಣೀಯತೆ, ವಿಷ್ಣುವಿನ ವೈಭವ, ಏಸುವಿನ ಕ್ಷಮಾಗುಣ, ಬುದ್ಧನ ಶಾಂತಮೂರ್ತತೆ ಹೀಗೆ ಹಲವು ರೂಪಗಳನ್ನು ದೇವರುಗಳು ನಮಗೆ ಕೊಟ್ಟಾಗಿದೆ. ಅಂತೆಯೇ ಪುರಾಣಗಳಲ್ಲಿ, ಧರ್ಮಗ್ರಂಥಗಳಲ್ಲಿ ಕಾಣಬರುವ ಪಾತ್ರಗಳು ನಮ್ಮಂತೆಯೇ ಕಂಡು ನಮ್ಮಲ್ಲೊಬ್ಬರಾಗಿ ಹೋದರೂ ಅಚ್ಚರಿಯೇನಿಲ್ಲ.
ಹಾಗೆ ನೋಡಿದರೆ ಮಹಾಭಾರತವಂತೂ ನಿನ್ನೆ ಮೊನ್ನೆಯಷ್ಟೇ ನಡೆದ ನಮ್ಮದೇ ಮನೆಯ ಕಥೆಯಂತೆ ಭಾಸವಾಗುತ್ತದೆ. ಧೃತರಾಷ್ಟ್ರನ ಪುತ್ರವ್ಯಾಮೋಹ, ದುರ್ಯೋಧನನ ದುರಾಸೆ, ಶಕುನಿಯ ಕುತಂತ್ರ, ಭೀಷ್ಮನ ತ್ಯಾಗ, ಕರ್ಣನ ಸ್ನೇಹ, ಶ್ರೀ ಕೃಷ್ಣನ ವ್ಯವಹಾರಚಾತುರ್ಯ, ಅರ್ಜುನನ ಮಹಾತ್ವಾಕಾಂಕ್ಷೆ, ಅಭಿಮನ್ಯುವಿನ ಪರಾಕ್ರಮ, ದ್ರೌಪದಿಯ ಸೇಡು… ಹೀಗೆ ಎಲ್ಲವೂ ನಮ್ಮ ನಿಮ್ಮ ಕಥೆಗಳೇ ಆಗಿ ಕಾಣುತ್ತವೆ, ಕಾಡುತ್ತವೆ.
ಈ ಪುಸ್ತಕವಾಗಲೀ, ಪ್ರಸ್ತುತ ವಿಚಾರಧಾರೆಯಾಗಲೀ ಆಸ್ತಿಕರು ಹೆಚ್ಚೋ, ನಾಸ್ತಿಕರು ಮೇಲೋ ಎಂಬ ಒಣ ಹಮ್ಮಿನ ಬಗ್ಗೆ ಅಲ್ಲವೇ ಅಲ್ಲ. ಕೊನೆಗೂ ಲೇಖಕರೇ ಹೇಳಿರುವಂತೆ “ದೇವರಿಲ್ಲ” ಎಂದು ತೀರ್ಪು ಕೊಡುವುದಕ್ಕಿಂತಲೂ ಎಲ್ಲರಿಗೂ ಎರಡು ಹೊತ್ತಿನ ಅನ್ನವನ್ನು ನೀಡುವ, ಜಗದ ವಿವಿಧ ಕಷ್ಟಕೋಟಲೆಗಳಿಂದ ಪಾರುಮಾಡಬಲ್ಲಂತಹಾ, ರೋಗರುಜಿನಗಳಿಂದ, ಮೌಢ್ಯತೆ-ಭಯಗಳಿಂದ ಮುಕ್ತಿಯನ್ನು ಕೊಡುವಂತಹಾ, ತನ್ನ ಭಕ್ತರಿಂದ ಕೈಲಾಗದಿದ್ದನ್ನು ಕೇಳದಂತಹಾ, ಸರ್ವಶಕ್ತ, ಕರುಣಾಮಯಿ, ಪ್ರೇಮಸ್ವರೂಪಿಯಾದ ದೇವರು ಇಲ್ಲವಲ್ಲಾ (ಅಥವಾ ಇದ್ದರೂ ಅನುಭವವಾಗುವುದಿಲ್ಲವಲ್ಲಾ) ಎಂಬ ವಿಷಾದವುಂಟಾಗುವುದೇ ಹೆಚ್ಚು.
ಯಾವುದೇ ಪೂರ್ವಾಗ್ರಹವಿಲ್ಲದೆ ಈ ಕೃತಿಯನ್ನು ಓದಲು ಶುರುಮಾಡಿದ್ದೇ ಆದರೆ ಆಗಾಗ ನಗಿಸುತ್ತಾ, ಚಿಂತಿಸುವಂತೆ ಪ್ರೇರೇಪಿಸುತ್ತಾ, ಅದ್ಭುತವಾಗಿ ಓದಿಸಿಕೊಂಡು ಹೋಗುವ ಕೃತಿಯಿದು. ಮತ, ಧರ್ಮ, ದೇವರುಗಳ ಬಗ್ಗೆ ಮುಕ್ತವಾಗಿ ಮಾತನಾಡಲೂ ಹಿಂಜರಿಯಬೇಕಾದ ಈ ಕಾಲಘಟ್ಟದಲ್ಲಿ ಎಲ್ಲರೂ ಓದಲೇಬೇಕಾದ ಅಪರೂಪದ ಪುಸ್ತಕವಿದು.
ದೇವರು, ಧರ್ಮಗಳೆನ್ನುವುದು ಎಡಪಂಥ, ಬಲಪಂಥಗಳೆಂಬ ವಿವಿಧ ಪಂಥಗಳಲ್ಲಿ, ಬೆರಳೆಣಿಕೆಯ ಇಸಮ್ಮುಗಳಲ್ಲಿ ಹರಿದುಹೋಗುವಷ್ಟರ ಮಟ್ಟಿಗೆ ದುರ್ಬಲವಾಗಿದೆ ಅನ್ನುವುದಾದರೆ ಅಂಥಾ ದೇವರಾದರೂ, ಧರ್ಮವಾದರೂ ಯಾಕೆ ಬೇಕು? ಗೀತೆ, ಬೈಬಲ್, ಕುರಾನ್, ಗುರುಗ್ರಂಥಸಾಹಿಬ್ ಗಳು ಧರ್ಮಗಳನ್ನು ಹೆಸರಿಸುವ ಲೇಬಲ್ಲುಗಳಾಗಿ ಉಳಿಯದೆ, ಒಂದು ಜೀವನವಿಧಾನವೇ ಆಗಿಬಿಟ್ಟರೆ ಎಷ್ಟು ಚೆನ್ನ!

‍ಲೇಖಕರು Avadhi

21 July, 2016

6 Comments

  1. Sathyakama Sharma Kasaragodu

    ಉತ್ತಮವಾದ ಬರಹ. ಎಂದೋ ಓದಿದ ಪುಸ್ತಕವನ್ನು ಮೆಲುಕು ಹಾಕುವಂತೆ ಮಾಡಿತು. ಆದರೆ ‘ಮೌಢ್ಯತೆ’ ಅನ್ನುವ ಪ್ರಯೋಗ ಮಾತ್ರ ಹಿಡಿಸಲಿಲ್ಲ. ಮೌಢ್ಯ ಸಾಕು! ತೆ ಯಾಕೆ ಬೇಕು?

  2. Prasad

    Dhanyavadagalu Sathyakama sir… Padaprayogada bagge khanditavaagiyoo parisheelisuve…
    – Prasad, Republic of Angola

  3. ಆದಿವಾಲ ಗಂಗಮ್ಮ

    ಮನಸ್ಸಿಗೆ ನಾಟುವ ಬಲು ನವಿರಾದ ವಿಮರ್ಶೆ,ಸೊಗಸಾಗಿದೆ

    • Prasad

      ವಿಮಶರ್ೆ ಅನ್ನುವುದಕ್ಕಿಂತಲೂ ಅಭಿಪ್ರಾಯ ಎಂಬುದೇ ನನ್ನ ಮಟ್ಟಿಗೆ ಸರಿ. ಲೇಖನವನ್ನೋದಿ ಪ್ರತಿಕ್ರಯಿಸಿದ್ದನ್ನು ನೋಡಿ ಖುಷಿಯಾಯಿತು. ಧನ್ಯವಾದಗಳು.
      – ಪ್ರಸಾದ್, ರಿಪಬ್ಲಿಕ್ ಆಫ್ ಅಂಗೋಲಾ

  4. Praveen V Savadi

    ಚೆನ್ನಾಗಿ ಬರೆದಿದ್ದೀರಾ… ಶಬ್ದಗಳ ಉಪಯೋಗ, ವಿಮರ್ಶೆ ಎಲ್ಲವೂ ಇಷ್ಟವಾಯಿತು.. ಇನ್ನು ಮೂರ್ತಿರಾವ್ ರ “ದೇವರು” ಓದಬೇಕೆನಿಸಿದೆ. ಓದುತ್ತೇನೆ. ನೀವೇ ಹೇಳಿದಹಾಗೆ ಇಲ್ಲಿ ಬರುವ ವಿಡಂಬನೆ ಹೇಗೆ ಇದ್ದರು, ನನ್ನ ದೃಷ್ಟಿಯಲ್ಲಿ – ದೇವರು ಇದ್ದಾನೋ ಇಲ್ಲವೋ ಅನ್ನುವುದಕ್ಕಿಂತ “ದೇವರು ಬೇಕು” ಎನ್ನುವುದೇ ನನ್ನ ವಯಕ್ತಿಕ ಅಭಿಪ್ರಾಯ. ನಿಮ್ಮ ಬರಹಗಳ ನಿರೀಕ್ಷೆಯಲ್ಲಿ… ವಂದನೆಗಳು.

    • Prasad

      ಓದಿ ಪ್ರತಿಕ್ರಯಿಸಿದ್ದಕ್ಕಾಗಿ ಪ್ರವೀಣ್ ರವರಿಗೆ ವಂದನೆಗಳು. ಓದಿನ ಪಯಣವು ಹೀಗೆಯೇ ಮುಂದುವರಿಯಲಿ ಎಂಬ ಹಾರೈಕೆಯೊಂದಿಗೆ…
      – ಪ್ರಸಾದ್, ರಿಪಬ್ಲಿಕ್ ಆಫ್ ಅಂಗೋಲಾ

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading