ಹಿನ್ನೀರ ಒಡಲ ದೃಶ್ಯಕಾವ್ಯ
ಎಚ್ ಕೆ ಶರತ್
ಹಿನ್ನೀರು, ದೋಣಿ, ಮೀನು, ಮನುಷ್ಯ ಮತ್ತು ನಿಸರ್ಗ ಮಾತಿಗೆ ಕೂರುವ ಜಾಗವದು. ದೇವರ ನಾಡೆಂದು ಕರೆಸಿಕೊಳ್ಳುವ ಕೇರಳ, ತನ್ನೊಡಲಲ್ಲಿ ಅಸಂಖ್ಯ ದೃಶ್ಯಕಾವ್ಯಗಳನ್ನು ಅಡಗಿಸಿಟ್ಟುಕೊಂಡಿದೆ. ನದಿಯ ಹಿನ್ನೀರಿನ ಮೇಲೆ ಸಾಗುವ ದೋಣಿಗಳು ಮತ್ತು ತೀರದಲ್ಲಿ ಮುಗಿಲಿನೊಂದಿಗೆ ಮಾತಿಗಿಳಿದಿರುವಂತೆ ನಿಂತಿರುವ ತೆಂಗಿನಮರಗಳ ಜುಗಲ್ಬಂದಿ ನೀರೆಂಬ ಕ್ಯಾನ್ವಾಸಿನ ಮೇಲೆ ರಚಿಸುತ್ತ ಹೋಗುವ ಚಿತ್ರಗಳನ್ನು ಕಣ್ತುಂಬಿಕೊಳ್ಳಲು ಪ್ರಶಸ್ತವಾದ ಸ್ಥಳ ಕೇರಳದ ಅಲೆಪ್ಪಿ.
ಅಲೆಪ್ಪಿಯೊಂದಿಗೆ ಬೆಸೆದುಕೊಂಡಿರುವ ಮತ್ತೊಂದು ಹೆಸರು ಹೌಸ್ಬೋಟ್. ಹಿನ್ನೀರಿನ ಎದೆ ಸೀಳಿಕೊಂಡು ಸಾಗುವ ಹೌಸ್ಬೋಟ್ಗಳೆಂಬ ತೇಲುವ ಮನೆಗಳ ಮೇಲೆ ಒಂದಿಡಿ ದಿನ ಕಳೆಯುವುದು ಅವಿಸ್ಮರಣೀಯ ಅನುಭವ. ಜಗದೊಂದಿಗೆ ಮಾತು ಬಿಟ್ಟು ನೀರಿನ ಸ್ವರಗಳಿಗೆ ಕಿವಿಯಾಗಬಹುದು. ಮೀನು ಮತ್ತು ಹಕ್ಕಿಯ ನಡುವೆ ನಡೆಯುವ ಸಾವು-ಬದುಕಿನ ಹೋರಾಟದಲ್ಲಿ ಕೊನೆಗೂ ಸೋತ ಮೀನು ಕಡೆಯವರೆಗೂ ತೋರುವ ಪ್ರತಿರೋಧಕ್ಕೆ ಸಾಕ್ಷಿಯಾಗಬಹುದು.
ಹೌಸ್ಬೋಟಿನ ಮೇಲೆ ಕುಳಿತು ಹಿನ್ನೀರ ಜಗದೊಳಗೆ ಸುತ್ತು ಹಾಕುವಾಗ ತೆರೆದುಕೊಳ್ಳುವ ಬದುಕಿನ ದೃಶ್ಯಗಳು ಅರಿವಿಗೆ ನಿಲುಕದ ಅದೆಷ್ಟೋ ಬದುಕಿನ ಪಾಠಗಳನ್ನು ನಮ್ಮೆದೆಗೆ ತಣ್ಣಗೆ ರವಾನಿಸುತ್ತವೆ. ತೀರದಲ್ಲಿ ಗಾಳ ಹಾಕಿ ಮೀನು ಹಿಡಿಯಲು ಕುಳಿತಿರುವವನ ಸಹನೆಯ ಒಡಲೊಳಗೊಂದು ಮೌನ ಕಾವ್ಯವಿರುವ ಅನುಮಾನ ಕಾಡದಿರದು. ಪುಟ್ಟ ದೋಣಿಯಲಿ ಹುಟ್ಟು ಹಾಕುತ್ತಾ ಬರುತ್ತಿರುವ ವಯೋವೃದ್ಧ ಮಹಿಳೆಯರಿಬ್ಬರ ಶ್ರಮ ಮತ್ತು ಶೌರ್ಯದ ಕಥೆ ಸಹಜತೆಯ ಸಾಮ್ರಾಜ್ಯದೊಳಗೆ ಸಮಾಧಿಯಾಗುವ ವಿದ್ಯಮಾನವೂ ಕಣ್ಮುಂದೆಯೇ ಜರುಗುವುದು. ದೋಣಿಯಿಂದ ಜಿಗಿದು ನೀರಿನಾಳಕ್ಕೆ ಬಲೆ ಬೀಸಿ ಮೀನು ಹಿಡಿಯುವವರ ಬೆವರಿಗೆ ಕೊನೆಯುಸಿರೆಳೆಯುವ ಮೀನುಗಳು ಗೌರವ ಸೂಚಿಸುವ ಸುಳಿವು ಸಿಕ್ಕರೂ ಸಿಗಬಹುದು.
ದಡದಲ್ಲೆಲ್ಲೋ ನಿಲ್ಲುವ ಹೌಸ್ಬೌಟ್ನಿಂದ ಕೆಳಗಿಳಿದು ‘ತೋಡಿ’ ಕುಡಿದು ಅಮಲೇರಿಸಿಕೊಳ್ಳಲೂಬಹುದು. ಆಗಷ್ಟೇ ಹಿಡಿದ ಮೀನಿನ ರುಚಿ ನೋಡಬಹುದು.
—
ಹಿನ್ನೀರಿನಿಂದ ಆವೃತವಾಗಿರುವ ಅಲೆಪ್ಪಿ, ಹೌಸ್ಬೌಟ್ಗಳಿಂದಾಗಿ ದೇಶ ವಿದೇಶಗಳ ಸಾವಿರಾರು ಪ್ರವಾಸಿಗರನ್ನು ತನ್ನೆಡೆಗೆ ಸೆಳೆಯುವ ಊರು. ಹಿನ್ನೀರಿನ ಮೇಲೆ ನಿಮರ್ಿತವಾಗಿರುವ ಹೌಸ್ಬೋಟುಗಳ ಲೋಕ ಕೇರಳದ ಪ್ರವಾಸೋದ್ಯಮಕ್ಕೆ ಹೊಸ ಆಯಾಮ ದೊರಕಿಸಿಕೊಟ್ಟಿದೆ.
ಹೌಸ್ಬೋಟ್ನಲ್ಲಿ ಒಂದು ದಿನ ತಂಗಲು ಆರು ಸಾವಿರದಿಂದ ಇಪ್ಪತ್ತೈದು ಸಾವಿರ ರೂ. ತೆರಬೇಕಾಗುತ್ತದೆ. ಸಾಮಾನ್ಯ ದರ್ಜೆ ಹೌಸ್ಬೋಟುಗಳಿಂದಿಡಿದು ಸಕಲೆಂಟು ಸೌಕರ್ಯಗಳುಳ್ಳ ಐಶಾರಾಮಿ ಹೌಸ್ಬೋಟುಗಳು ದೊರೆಯುತ್ತವೆ. ಮಧ್ಯವರ್ತಿಗಳ ಮೂಲಕ ಹೌಸ್ಬೋಟ್ ಪಡೆಯಲು ಹೋದರೆ ಜೇಬಿಗೆ ಕತ್ತರಿ ಬಿಳುವುದಂತೂ ಗ್ಯಾರಂಟಿ. ಅಲೆಪ್ಪಿಯ ಅಲೆದಾಟ ಕೊಂಚ ದುಬಾರಿ ಎನಿಸಿದರೂ ಅದು ದಯಪಾಲಿಸುವ ಅನುಭವಗಳು ನವನವೀನ. ಅಂದಹಾಗೆ ಅಲೆಪ್ಪಿ ಕೊಚ್ಚಿನ್ನಿಂದ ದಕ್ಷಿಣಕ್ಕೆ 62 ಕಿ.ಮೀ. ದೂರದಲ್ಲಿದೆ.
ಇಲ್ಲಿವೆ ಅಲೆಪ್ಪಿಯ ಕೆಲವು ಚಿತ್ರಗಳು :






ಬರಹ ಚನ್ನಾಗಿದೆ, ಅಲೆಪ್ಪಿಯ ಕುರಿತು, ಬೋಟ್ ಹೌಸ್ ಗಳ ಕುರಿತು ವಿವರ ಚನ್ನಾಗಿದೆ