ಇದು ಕನಸುಗಳ ಬೆಂಬತ್ತಿದ ನಡಿಗೆ‍

ಅವಧಿ AVADHI

ಇದು ಕನಸುಗಳ ಬೆಂಬತ್ತಿದ ನಡಿಗೆ...

ದೇವರು ಬರೆದ ರಂಗೋಲಿ

ಗಣೇಶ ಹೊಸ್ಮನೆ

ಅದೊಂದು ಮಂಜಿನ ಹನಿಗಳ ಮುಂಜಾನೆ
ತೆರೆದ ಬಯಲಲಿ ಬೆಳೆದ ಗಿಡ ಮರ
ಸೆಳೆವ ತರುಲತೆ

ಹನಿಗಳು ಪೋಣಿಸಿದ
ಮಣಿ ಮುತ್ತುಗಳ ಮಾಲೆ
ಆ ಮರಕೂ ಈ ಮರಕೂ
ಎಳೆದ ಎಳೆಗಳ ಮೇಲೆ,
ಮುತ್ತು ಮುತ್ತುಗಳಲ್ಲೂ
ಹೊಳೆವ ಹೊಂಗಿರಣ
ಉರಿವ ಸೂರ್ಯನ ಛಾಯೆ

ಅದೆಲ್ಲೋ ಅಷ್ಟೇ ನಿದ್ದೆಯಿಂದೆಚ್ಚೆತ್ತ ಚಿಟ್ಟೆ
ಕೊರಳ ತಿರುವಿ ಮೈಗೊಡವಿ
ಬೀಸುತ ಹಗುರಾಗಿ ರೆಕ್ಕೆಗಳ
ಚಲಿಸಿ ಗಾಳಿಯಲಿ

ತೇಲುತ ಆಕಡೆ ಈಕಡೆ
ಬಣ್ಣಬಣ್ಣದ ಎಳೆಯ
ಯಾರೋ ಬೀಸಿದ ಬಲೆಯ
ನೋಡಿ ಹಾಡಿ ಹೊಗಳುತ್ತ ಬೆರಗಿನಲಿ
“ಧನ್ಯನಾದೆನು ಇಂದು
ಇಂಥ ಕನಸು ಕಂಡಿರಲಿಲ್ಲ
ಎಂದೂ ಕೇಳಿ ನೆನಪಿರಲಿಲ್ಲ
ಕಂಡೆ ನಾನಿಂದು ಬೆಳಕಿನಲಿ
ಆ ದೇವರು ಬರೆದ ರಂಗೋಲಿ!”

“ಎಂಥ ಬಗೆ ಬಗೆ ಬಣ್ಣ
ಎಸೆದ ಬಿಸಿಲಿನ ಚಿನ್ನ
ಮುಟ್ಟಲೇ ಒಮ್ಮೆ ಮುದ್ದಿಸಲೇ
ಮುತ್ತುಗಳ”

ಸ್ತುತಿಸಿ ಸುಳಿದಾಡಿ ಕೂತು ರಂಗೋಲಿಯಲಿ
ಹೊಳೆವ ಹನಿಗಳ ಹೀರಿ
ರೆಕ್ಕೆ ಬಡಿದರೆ ಚಿಟ್ಟೆಗೆ ಹಾರಲಾಗುತ್ತಿಲ್ಲ
ಮೈತುಂಬ ಹೆಣೆದ ಹಸಿವಿನ ನೂಲು
* * *
ಈಗಲೂ ಹಾಗೇ ಇದೆ
ಆ ಬಲೆ ಆ ಬಣ್ಣ ಆ ಬೆರಗು
ಕಾಣಿಸುತ್ತಿಲ್ಲ ಚಿಟ್ಟೆಯ ಕುರುಹು
ಚಿಟ್ಟೆಯೊಂದಿಗೆ ಕರಗಿಹೋದ ಸತ್ಯವೂ.

ಗಣೇಶ ಹೊಸ್ಮನೆ : ಕೃಷಿಕರು ಮತ್ತು ಕವಿ. ಗಜಲ್ ಗಳನ್ನು ಬರೆದಿರುತ್ತಾರೆ.

‍ಲೇಖಕರು Avadhi

18 October, 2020

0 Comments

Pin It on Pinterest

Share This

Discover more from ಅವಧಿ । AVADHI

Subscribe now to keep reading and get access to the full archive.

Continue reading