ಔತಣ

ಕಾವ್ಯ ಎನ್. ಮನಮನೆ

-೧-
ಸಾಲೆಮನೆಯೆದುರಿನ ಮೂರುದಾರಿ ಕೂಡುವಲ್ಲಿ
ನುಗ್ಗೇಕಾಯಿಯಂತ ರಾಮನಾಥ ಮತ್ತು
ಕೊಟ್ಟೆಕಡುಬಿನಂತ ನಾನು ಜಟಾಪಟಿಗೆ ಬಿದ್ದೆವು
ತಿಪ್ಪರಲಾಗ ಹೊಡೆದರೂ ಈಗ
ನೆನಪಾಗಲೊಲ್ಲದ ಘನ ಕಾರಣವೊಂದಕ್ಕೆ.
ಕುತ್ತಿಗೆಗೊಂದು ಕೈಹಾಕಿ
ಮತ್ತೊಂದರಲ್ಲಿ ಸಿಕ್ಸರು ಬಾರಿಸುತಿದ್ದ
ನನ್ನ ಪುರಾತನಪಟ್ಟಿಗೆ ಮಣಿದಾತ
ಅಲ್ಲಿಂದಾಚೆ ನನ್ನ ಖಾಸಾಗೆಳೆಯನಾದ.

ಒಣಮೀನುಖಾರ ಮಜ್ಜಿಗೆಹುಳಿ ಒಟ್ಟೊಟ್ಟಿಗೆ ಕಂಡವರು
ಮುಖಸಿಂಡರಿಸದೇ ಇರುತ್ತಾರೆಯೇ
ಆತ ಮಾತ್ರ ಕಾಯುತ್ತ ಕೂತ
ಅಂಗಿಚಡ್ಡಿಯೇರಿಸಿ, ಕ್ರಾಪು ತೀಡಿ ನನ್ನ ತೇರು
ಸಾಲೆಗೆ ಹೊರಡುವವರೆಗೆ
ಅಂಗಳದ ಕೋಳಿಪಿಳ್ಳೆಗಳ ಹಿಡಿದು ಮರಿಹೇಂಟೆಯಿಂದ ಕಚ್ಚಿಸಿಕೊಂಡ
ತೋಟದವಳಿಯ ಸ್ವಚ್ಛನೀರಿನಲ್ಲಿ ಕೊಚಲಿಮೀನು ಹಿಡಿದ
ಹೊಳೆಬದಿಯ ಕಾರೇಡಿ, ಬೇಣದ ಹೆಗ್ಗಾಲಣಬೆಗಳ
ತಲಾಶಿಗೆ ಹೊರಟಾಗೆಲ್ಲ
ಬಿಡದೇ ಬೆನ್ನಿಗೆ ಬಂದ ನನ್ನೊಡನೆ


-೨-
ಪಕ್ಕ ಕುಳಿತಷ್ಟೂ ದಿನ ತಾರಲೆಯ ಘಮಲಿಗೆ ಎಂದೂ
ಸೀತಾರಾಮ ಮಾಸ್ತರರಂತೆ ಮುಖ ಸಿಂಡರಿಸಿಕೊಳ್ಳದ ಗೆಣೆಕಾರ
ಊರಮುಂದಿನ ಹೊಳೆಯಲ್ಲಿ ಲೆಕ್ಕಕ್ಕೆ ಸಿಗದಷ್ಟು ನೀರು ಹರಿದು
ಇಬ್ಬರಿಗೂ ಅಲ್ಲಲ್ಲಿ ನರೆಗೂದಲು ಮೂಡಿದಾಗೊಮ್ಮೆ ಮನೆಗೆ ಬರಹೇಳಿದ

ಹೊರಟೆ-ಬೆಟ್ಟದ ಮೇಲಿನ ಒಂಟಿಮನೆಗೆ
ಮೆಟ್ಟಿಲುಗಳೊಂದೊಂದನೇ ಹತ್ತಿ, ಜೀಕಿ
ತಂಪೆರೆಯಿತು ಅಡಿಕೆ ಚಪ್ಪರ, ಸ್ವಾಗತಿಸಿತು ತಲೆಬಾಗಿಲು
ಹೊರಜಗುಲಿಯಲ್ಲಷ್ಟು ಲೋಕಾಭಿರಾಮ ಮಾತು
ಹೆಂಡಿರು ಮಕ್ಕಳು, ತೀರಿಕೊಂಡ ಬಾಲ್ಯಸ್ನೇಹಿತರು, ಅಡಿಕೆಧಾರಣೆ, ಪಾಲಿಟಿಕ್ಸು
ನನ್ನ ಇತ್ತೀಚಿನ ಪುಸ್ತಕ, ಸಂಶೋಧನೆ, ಅಧ್ಯಾಪನ, ಸಂಬಳ, ಹೊಸಕಾರು
ಊಟಕ್ಕೆ ಕರೆಬಂತು, ಒಲ್ಲೆನೆಂದೆ
ಸರಿಮಧ್ಯಾಹ್ನ ಊಟ ಮಾಡಿಸದೇ ಕಳಿಸುವುದುಂಟೇ
ಕೈಕಾಲಿಗೆ ನೀರುಹಾಕಿ ಮುಂಬಾಗಿಲು ದಾಟಬೇಕೆನ್ನುವಷ್ಟರಲ್ಲಿ
ಒಳಮನೆಯಿಂದೊಂದು ಕೂಗು
ಪಿಸುಮಾತು ಬಿಸಿಚರ್ಚೆ ನಿಡಿದಾದ ಒಂದುಸಿರು ಮೌನ
ಗೆಳೆಯ ಹೊರಬಂದ
ಬೆನ್ನಿಗೆ ಬಾಳೆಲೆ, ಭಕ್ಷ್ಯಗಳು ತರಹೇವಾರಿ
“ ಅಡುಗೆ ಮನೆಯಲ್ಲಿ ವಿಪರೀತ ಕತ್ತಲು,ಹೊಗೆ
ಜಗುಲಿಯಲ್ಲೇ ಊಟ ಮುಗಿಸಿಬಿಡೋಣಲ್ಲ?”
ನಾನು ಗೆಳೆಯನದೇ ಮುಖ ದಿಟ್ಟಿಸಿದೆ
ಅವನು ಬೇರೆತ್ತಲೋ.

ಕಾವ್ಯ ಎನ್. ಮನಮನೆ:
ಉತ್ತರ ಕನ್ನಡ ಜಿಲ್ಲೆ ಸಿದ್ದಾಪುರ ತಾಲೂಕಿನ ಮನಮನೆ ಸ್ವಂತದ ಸ್ಥಳ. ಕರ್ನಾಟಕ ವಿಶ್ವವಿದ್ಯಾಲಯ ಧಾರವಾಡದಿಂದ ಆರ್ಥಶಾಸ್ತ್ರದಲ್ಲಿ ಸ್ನಾತಕೋತ್ತರ ಪದವಿ, ಪ್ರಸ್ತುತ ಸರಕಾರಿ ಪ್ರಥಮ ದರ್ಜೆ ಕಾಲೇಜು ಹೊನ್ನಾವರದಲ್ಲಿ ಸಹಾಯಕ ಪ್ರಾಧ್ಯಾಪಕಿಯಾಗಿ ಕಾರ್ಯನಿರ್ವಹಿಸುತ್ತಿದ್ದಾರೆ. ಸಾಹಿತ್ಯದ ಓದು, ಬರವಣಿಗೆ, ಫೋಟೊಗ್ರಫಿ ಮೆಚ್ಚಿನ ಹವ್ಯಾಸಗಳು. ಅಭಿವೃಧ್ಧಿ ಅಧ್ಯಯನ, ಲಿಂಗ ಅಧ್ಯಯನ ಮತ್ತು ಗ್ರಾಮೀಣ ಆರ್ಥಶಾಸ್ತ್ರಗಳ ಅಧ್ಯಯನ ಮತ್ತು ಅಧ್ಯಾಪನದಲ್ಲಿ ವಿಶೇಷ ಆಸಕ್ತಿ.

‍ಲೇಖಕರು Avadhi

October 18, 2020

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

ನೀನು…

ನೀನು…

ದೊರೆ..

ದೊರೆ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: