ದೇವರು ಡಾಕ್ಟರ್ ಯಾಕೆ ಆಗಬೇಕು?

ಅಣ್ಣನ ನೆನಪು 27

ಕೊನೆಗೂ ಇವನು ದೇವರನ್ನು ನಂಬಿಲ್ಲ

‘ಯುವಕರಾಗಿರುವಾಗ ಎಲ್ಲರೂ ಮಾರ್ಕ್ಸ್ ವಾದಿಯಾಗಿರುತ್ತಾರೆ. ಹದಿಹರೆಯ ಕಳೆದ ಮೇಲೆ ಎಲ್ಲರೂ ದೈವ ಭಕ್ತರಾಗುತ್ತಾರೆ’ ಎನ್ನುವ ಮಾತೊಂದು ಜನಜನಿತವಾಗಿದೆ. ನಾನು ಎಸ್.ಎಫ್.ಐ ಸಂಘಟನೆಯಲ್ಲಿ ಕೆಲಸ ಮಾಡುತ್ತಿರುವಾಗ ಮೌಢ್ಯ, ಕಂದಾಚಾರದ ವಿರುದ್ಧ ಹಲವು ಕಾರ್ಯಕ್ರಮಗಳನ್ನು, ಹೋರಾಟಗಳನ್ನು, ಸಂಘಟಿಸುತ್ತಿದ್ದೆ. ಮಂಗಳೂರಿನ ವಿಚಾರವಾದಿ ನರೇಂದ್ರ ನಾಯಕರ ಜೊತೆ ಉ.ಕ., ಶಿವಮೊಗ್ಗ ಜಿಲ್ಲೆಗಳಲ್ಲಿ ಪವಾಡ ಬಯಲು ಕಾರ್ಯಕ್ರಮಕ್ಕಾಗಿ ಅಲೆದಾಡಿದ್ದೆ. ಇಲ್ಲಿ ದೇವರ ಕುರಿತ ಚರ್ಚೆ ಮತ್ತೆ ಮತ್ತೆ ಎದುರಾಗುತ್ತಿತ್ತು. ಆಗೆಲ್ಲಾ ದೇವರ ಅಸ್ತಿತ್ವವನ್ನೇ ನಾವು ನಿರಾಕರಿಸುತ್ತಿದ್ದೆವು.

“ಈಗೆಲ್ಲಾ ಬಿಸಿ ರಕ್ತ; ದೇವರನ್ನು ವಿರೋಧಿಸದೆ ಇನ್ನೇನು ಮಾಡುತ್ತೀರಿ? ವಯಸ್ಸಾದಂತೆ ಬುದ್ಧಿ ನೆಟ್ಟಗಾಗುತ್ತದೆ. ಜಗತ್ತಿನ ಎಂಥೆಂಥಾ ದೊಡ್ಡ ವಿಜ್ಞಾನಿಗಳೆಲ್ಲಾ ಕೊನೆಗೆ ದೈವ ಭಕ್ತರೇ ಆಗಿದ್ದಾರೆ.” ಎಂದು ಕೆಲವು ಸುಳ್ಳು ಉದಾಹರಣೆ ನೀಡಿ, ಹೇಗೂ ಇವನು ನರಕಕ್ಕೇ ಹೋಗುವವನು ಎಂದು ತೀರ್ಮಾನಿಸಿದಂತೆ ಕರುಣೆಯಿಂದ ಬೈಯುತ್ತಿದ್ದರು. ಆಗ ನಾವೂ ನಮ್ಮ ಕೈಲಾದಷ್ಟು ಉದಾಹರಣೆ ನೀಡಿ ನಮ್ಮ ದೈವ ವಿರೋಧಿ ನಿಲುವನ್ನು ಸಮರ್ಥಿಸಿಕೊಳ್ಳುತ್ತಿದ್ದೆವು.

ಆದರೂ ಇಂತ ಪ್ರಶ್ನೆಗಳಿಗೆ ಏನು ಉತ್ತರಿಸಿಸುವುದೆಂದು ಕೆಲವು ಬಾರಿ ಗೊಂದಲಕ್ಕೊಳಗಾಗಿದ್ದೂ ಇದೆ. ಆಗೆಲ್ಲಾ ನಾವು ಮೊರೆ ಹೋಗುವುವದು ಅಣ್ಣನನ್ನೇ. ಆಗ ಆತ ಸರಳವಾಗಿ ವಿವರಿಸುತ್ತಿದ್ದ. ತೀವ್ರ ನೋವು, ಕಡುಕಷ್ಟ, ಅಸ್ಪಷ್ಟ ಆಲೋಚನೆ, ವೈಚಾರಿಕ ಗೊಂದಲ, ಸಾವಿನ ದರ್ಶನ ಇತ್ಯಾದಿಗಳ ಸಂದರ್ಭದಲ್ಲಿ ಎದುರಾಗುವ ಸಮಸ್ಯೆಯಿಂದ ಹೇಗಾದರೂ ಹೊರ ಬರಬೇಕೆನ್ನುವ ದಾವಂತದಲ್ಲಿ ಕೆಲವರು ದೇವರನ್ನು ತಾತ್ಕಾಲಿಕವಾಗಿ ಮೊರೆ ಹೋಗುತ್ತಾರೆ. ತಮ್ಮ ಗೊಂದಲದಿಂದ, ತಕ್ಷಣ ಎದುರಾಗುವ ಸಮಸ್ಯೆಯಿಂದ ಹೊರ ಬರುವ ಯಾವುದಾದರೂ ದಾರಿ ಸಿಕ್ಕರೆ ಅವರು ದೇವರ ಮೊರೆ ಹೋಗುವುದಿಲ್ಲ. ಇದಕ್ಕೆಲ್ಲಾ ಮನಸ್ಸು ದುರ್ಬಲವಾಗಿರುವುದೇ ಕಾರಣ. ಕೆಲವರ ಮನಸ್ಸು ಹಾಗೆ ವಯಸ್ಸಾದಾಗ ದುರ್ಬಲ ಆಗುತ್ತದೆ. ದುರ್ಬಲಗೊಂಡ ಮನಸ್ಸು ದೇವರಿದೆ ಎಂದು ಹೇಳಿದರೆ ದೇವರಿದ್ದಾನೆ ಎಂದು ನಾವು ತೀರ್ಮಾನಿಸಬೇಕಾಗಿಲ್ಲ. ದೇವರಿದ್ದರಬಹುದು ಎಂದು ಹೇಳುವ ಅವನ ಮನಸ್ಥಿತಿಯ ಅಧ್ಯಯನ ಮಾಡಬೇಕಷ್ಟೆ” ಎಂದು ಹೇಳುತ್ತಿದ್ದ.

ಹಲವು ವಿಚಾರವಾದಿಗಳಿಗೆ ಮಾಡೆಲ್ ಆಗಿದ್ದ ಅಣ್ಣ ಎಲ್ಲಾದರೂ ಬದಲಾಗಿಬಿಡಬಹುದೆ? ಆಗಿಬಿಟ್ಟರೆ? ಬದಲಾಗಬಾರದು, ಬದಲಾಗಲಿಕ್ಕಿಲ್ಲ ಎಂದೆಲ್ಲಾ ಮನಸ್ಸು ಯೋಚಿಸುತ್ತಿತ್ತು. ಅಣ್ಣನ ಗರಡಿಯಲ್ಲಿಯೇ ಬೆಳೆದ ಅವನ ಕೆಲವು ಶಿಷ್ಯರು, ಸ್ನೇಹಿತರು ಹೀಗೆ ಕೊನೆಯ ದಿನದಲ್ಲಿ ದೇವರು-ದಿಂಡರ ಬೆನ್ನು ಹತ್ತಿ ಹೋಗಿದ್ದನ್ನು ನಾನು ಕಂಡಾರೆ ಕಂಡಿದ್ದೆ.

ಅಣ್ಣನ ಕೊನೆಯ ದಿನದಲ್ಲಿ ನಡೆದ ಘಟನೆ ಇದು. ಹೆಚ್ಚು ಕಡಿಮೆ 2007-08ರ ಅವಧಿ. ಅವನ ಅನಾರೋಗ್ಯದ ದಿನಗಳು. ಮತ್ತೆ ಮತ್ತೆ ಆಸ್ಪತ್ರೆಗೆ ಹೋಗಬೇಕಾಗಿತ್ತು. ಆಯ್ಕೆ ಮಾಡಿಕೊಂಡಿದ್ದು ಮಣಿಪಾಲದ ಕೆ.ಎಮ್.ಸಿ. ಹೀಗೆ ಆಯ್ಕೆ ಮಾಡಿಕೊಳ್ಳಲು 2 ಕಾರಣಗಳಿದ್ದವು. ಒಂದು ಅವನನ್ನು ಪೀಡಿಸುತ್ತಿದ್ದ ಅನಾರೋಗ್ಯಕ್ಕೆ ಅಲ್ಲಿ ಸರಿಯಾದ ಔಷಧ ಸಿಗುತ್ತಿತ್ತು ಎನ್ನುವ ಕಾರಣ. ಎರಡು ಆಗ ಮಣಿಪಾಲದಲ್ಲಿ ಬಿ. ಗಣಪತಿಯ ಮನೆ ಇತ್ತು. ನಮ್ಮಲ್ಲಿ ಹಲವರು ಗಂಭೀರ ಕಾಯಿಲೆಗೆ ಮಣಿಪಾಲವನ್ನು ಆಯ್ಕೆ ಮಾಡಿಕೊಳ್ಳುವುದಕ್ಕೆ ಬಿ. ಗಣಪತಿ ಮಣಿಪಾಲದಲ್ಲಿರುವುದೂ ಕಾರಣಗಳಲ್ಲೊಂದು. ಆತ ಆಗ ‘ತರಂಗ’ ‘ರೂಪತಾರಾ’ದಲ್ಲಿ ಕೆಲಸ ಮಾಡುತ್ತಿದ್ದ, ಯಾರೇ ಅವನನ್ನು ಸಂಪರ್ಕಿಸಿದರೂ ಆಸ್ಪತ್ರೆಗೆ ಸೇರಿಸುವುದರಿಂದ ಹಿಡಿದು ಅವರನ್ನು ಡಿಸ್ಚಾರ್ಜ್ ಮಾಡುವವರೆಗೆ ಕಾಳಜಿ ವಹಿಸುತ್ತಿದ್ದ. ಹಣಕಾಸಿನ ತೊಂದರೆ ಆದರೆ ನೇರ ಆಸ್ಪತ್ರೆಯ ಆಡಳಿತ ಮಂಡಳಿಗೆ ಪೋನ್ ಮಾಡಿ ಬಿಲ್‍ನಲ್ಲಿಯೂ ರಿಯಾಯಿತಿ ಮಾಡಿಸುತ್ತಿದ್ದ.

ಅವನು ಪತ್ರಿಕೆಯಲ್ಲಿ ಇರುವುದರಿಂದ ಅಲ್ಲಿ ಅವನ ಮಾತು ನಡೆಯುತ್ತಿತ್ತು. ವೈದ್ಯರೂ ತುಂಬಾ ಕಾಳಜಿ ವಹಿಸುತ್ತಿದ್ದರು. ಹಲವರು ಅವನಿಂದ ಪ್ರಯೋಜನ ಪಡೆದವ ಈಗ ಹೇಳಿಕೊಳ್ಳದಿದ್ದರೂ ಅವನು ಅಲ್ಲಿ ಇಲ್ಲದಿದ್ದಾಗ ಸಮಸ್ಯೆ ಕಾಡಿದ್ದಂತೂ ಸತ್ಯ.
ಅಣ್ಣನನ್ನು ಆತ ತಂದೆಯಂತೆ ಆರೈಕೆ ಮಾಡಿದ್ದ. ದಿನನಿತ್ಯ ಸಂಬಂಧಿಸಿದ ವೈದ್ಯರೊಂದಿಗೆ ಮಾತನಾಡುವ ಮೂಲಕ ಅಲ್ಲಿ ಸಿಗಬಹುದಾದ ಅತ್ಯುತ್ತಮ ಟ್ರೀಟ್‍ಮೆಂಟ್ ಕೊಡಲು ಸಾಧ್ಯವಾಯಿತು. ಅವನೊಂದಿಗೆ ಅವನ ಹೆಂಡತಿ ಸುನಿತಾ ಅವರು ಕೂಡ ಅವರ ಬಿಡುವಿಲ್ಲದ ಕೆಲಸದ ಮಧ್ಯೆ ಕೂಡ ಬಿಸಿ ವಿಸಿ ಊಟ, ತಿಂಡಿ, ಹಾಲು ಇತ್ಯಾದಿಯನ್ನು ಮಾಡಿ ಕಳುಹಿಸುತ್ತಿದ್ದರು. ಹಾಗಾಗಿ ನಮಗಂತೂ ತುಂಬಾ ಅನುಕೂಲವಾಯಿತು.

2008 ಅಗಸ್ಟ್ ತಿಂಗಳಿರಬೇಕು. ಅಣ್ಣನ ಅನಾರೋಗ್ಯ ತೀವ್ರವಾಗಿ ಉಲ್ಭಣವಾಯತು. ಓದಲಾಗದಿದ್ದರೂ ಪುಸ್ತಕ ಹಿಡಿದಾದರೂ ಕುಳಿತಿರುತ್ತಿದ್ದ. ಆಹಾರ ಸೇವನೆ ಕಷ್ಟವಾಗಿ, ಉಸಿರಾಟದ ತೊಂದರೆ ತೀವ್ರವಾಗಿ ದೇಹ ಔಷಧಕ್ಕೆ ತೀವ್ರವಾಗಿ ಸ್ಪಂಧಿಸುತ್ತಿರಲಿಲ್ಲ. ಹೀಗಿರುವಾಗ ಒಂದು ದಿನ ಮುಖ್ಯ ವೈದ್ಯರು ಬಂದು ಅವನು ಲೇಖಕನೆಂದು ತಿಳಿದ ಮೇಲಂತೂ ಅವರು ಇವನನ್ನು ಗೌರವಿಸುತ್ತಿದ್ದರು ಮತ್ತು ಎಂಥಾ ಬಿಡುವಿರದ ಕೆಲಸದ ನಡುವೆ ಕೂಡ ದಿನಕ್ಕೆ 2-3 ದಿನ ಬೇಟಿ ಆಗಿ ಹೋಗುತ್ತಿದ್ದರು. ತುಂಬಾ ಸಲಿಗೆ ಕೂಡ ವೈದ್ಯರು, ಸಾಹಿತಿಗಳು.. ಇಂದು ಏನು ಓದಿದ್ರಿ? ಏನು ಬರೆದಿರಿ? ಸ್ವಲ್ಪ ನನಗೂ ಹೇಳಬೇಕಲ್ಲಾ ಅಣ್ಣ. ಬರೆಯಲು ಓದಲು ಆಗುತ್ತಿಲ್ಲ ಎನ್ನುವುದೇ ಸಮಸ್ಯೆ. ನನಗೆ ಪೂರ್ಣವಾಗಿ ಯಾವಾಗ ಗುಣ ಮಾಡುತ್ತೀರಿ? ಮನೆಗೆ ಹೋಗಬೇಕು. ಬೇಸರ ಬಂದಿದೆ. ತುಂಬಾ ಬರೆಯುವುದಿದೆ.

ವೈದ್ಯರು : ತುಂಬಾ ಕಷ್ಟ. ನನ್ನ ಕೈಲಾಗಿದ್ದು ಮಾಡಿದ್ದೇನೆ. ಇನ್ನು ಮೇಲಿನವನ ಇಚ್ಛೆ. ದೇವರಿದ್ದಾನೆ. ಹೆದರಬೇಡಿ.
ಅಣ್ಣ : (ಒಂದೆರಡು ನಿಮಿಷ ತಡೆದು) ಹಾಗಾದರೆ ನನ್ನನ್ನು ಇಂದೇ ಇಲ್ಲಿಂದ ಬಿಡುಗಡೆ ಮಾಡಿ ಹೋಗುತ್ತೇನೆ.
ವೈದ್ಯರು : ಯಾಕೆ? ಇನ್ನೂ ಔಷಧ ಮಾಡೋದಿದೆ.
ಅಣ್ಣ : ಇಲ್ಲ ಬೇಡ….. ಹೋಗುತ್ತೇನೆ.
ವೈದ್ಯರು : (ಗೊಂದಲಕ್ಕೆ ಬಿದ್ದರು.) ಯಾಕೆ ಇಷ್ಟು ಹಠ.
ಅಣ್ಣ : ನೋಡಿ, ಮನುಷ್ಯ ಏನೇ ಆದರೂ ತನ್ನ ಮೇಲೆ ವಿಶ್ವಾಸ ಇಟ್ಟುಕೊಂಡು ರೋಗವನ್ನು ಗುಣಪಡಿಸಿಕೊಳ್ಳುವ ಎಲ್ಲ ಪ್ರಯತ್ನ ಮಾಡ್ತಾನೆ. ಅದು ಆಗದಿದ್ದಾಗ ನಿಮ್ಮ ಹತ್ತಿರ ಬರ್ತಾನೆ. ನಿಮ್ಮ ಮೇಲೆ ವಿಶ್ವಾಸ ಇಟ್ಟು ಬಂದಿದ್ದೇನೆ. ಅದೇ ನಿಮಗೆ ನಿಮ್ಮ ಮೇಲೆ ವಿಶ್ವಾಸ ಇಲ್ಲದಿದ್ದರೆ ನಾನಿಲ್ಲಿದ್ದು ಪ್ರಯೋಜನ ಇಲ್ಲ.
ಯಾರ ಹತ್ತಿರವೂ ಆಗದಿದ್ದರೆ ನಾವು ದೇವರನ್ನು ತೋರಿಸಿ ಪಲಾಯನ ಮಾಡ್ತೇವೆ. ದೇವರನ್ನೇ ನಂಬುದುದಿದ್ದರೆ ನಾನ್ಯಾಕೆ ಇಲ್ಲಿ ಬರ್ತಿದ್ದೆ? ಹಾಗಾಗಿ…… ನಿಮಗೆ ಯಾಕೆ ತೊಂದರೆ ಹೋಗ್ತೇನೆ ಬಿಡಿ…

ಬಹುಶಃ ವೈದ್ಯರೂ ಇವನಿಂದ ಈ ರೀತಿಯ ಎತ್ತರ ನಿರೀಕ್ಷಿಸಿರಲಿಲ್ಲ. ಒಂದು ಕ್ಷಣ ದಂಗಾಗಿ ಹೋದರು.. ಮತ್ತೆ ಸುಧಾರಿಸಿಕೊಂಡು “ಇಲ್ಲಿ ಭಂಡಾರಿಯವರೇ, ನಾನು ನನ್ನ ಹೊಣೆ ತಪ್ಪಿಸಿಕೊಳ್ಳಲು ಹೇಳ್ತಿಲ್ಲ. ಎಲ್ಲರೂ ‘ದೇವರ ಮೇಲೆ ಭಾರ ಹಾಕಿ’ ಎಂದರೆ ಒಂದಿಷ್ಟು ಸಮಾಧಾನಗೊಳ್ತಿದ್ದರು. ಹಾಗಾಗಿ ನಿಮಗೂ ಹೇಳಿದೆ. ಈವರೆಗೆ ನಾನು ಮಾಡಿದ ಔಷಧಕ್ಕಿಂತ ನಿಮ್ಮ ಆತ್ಮವಿಶ್ವಾಸದಿಂದಲೇ ನೀವು ನಿಮ್ಮ ರೋಗ ಕಡಿಮೆ ಮಾಡ್ಕೋತಿದ್ರಿ. ನಾನಾಗೆ ನಿಮ್ಮನ್ನು ಗುಣಪಡಿಸುವ ವಿಶ್ವಾಸ ಇದೆ. ಗುಣಪಡಿಸಿಯೇ ಕಳಿಸ್ತೇನೆ.” ಎಂದು ಭರವಸೆಕೊಟ್ಟು ಹೋದರು. ಹಲವರು ಕೊನೆಯ ದಿನಗಳಲ್ಲಾದರೂ ದೇವರ ಮೇಲೆ ಭಾರ ಹಾಕ್ತಾರೆ. ಆದರೆ ನನ್ನ ಸರ್ವಿಸಿನಲ್ಲಿ ಇಂಥವರನ್ನು ನೋಡಿದ್ದು ಅಪರೂಪ ಎಂದು ಉದ್ಗಾರ ತೆಗೆದರು.
ಎಲ್ಲಾದರೂ ಈ ವೈದ್ಯರು ಬೇಸರ ಮಾಡಿಕೊಳ್ಳುತ್ತಾರೇನೋ ಅಂದುಕೊಂಡಿದ್ದೆ. ಆದರೆ ಎಂದಿಗಿಂತ ಹೆಚ್ಚು ಗೌರವ, ಪ್ರೀತಿ, ಕಾಳಜಿಯಿಂದ ಅವನನ್ನು ನೋಡಿಕೊಂಡರು.

ಅಣ್ಣ ಹಾಗೆ ಎಂದೂ ಯಾವ ದೇವರನ್ನೂ ನಂಬಿದವನಲ್ಲ. ತನ್ನ ಮೇಲೆ ತಾನು ವಿಶ್ವಾಸ ಇಟ್ಟು ಬದುಕಿದವನು. ಬದುಕನ್ನು ಸವಾಲಾಗಿ ಸ್ವೀಕರಿಸಿದವನು. ಯೌವ್ವನದಲ್ಲಿ ಮಾತ್ರ ನಾಸ್ತಿಕನಲ್ಲ. ಬದುಕಿನ ಕೊನೆಯವರೆಗೂ ನಾಸ್ತಿಕನಾಗಿಯೇ ಇದ್ದ. ತಾನು ನಂಬಿದ ತತ್ವವನ್ನು ಆತ ಬದುಕಿ ತೋರಿಸಿದ.

ಹಾಗಾಗಿ ಅಣ್ಣ ಯಾವಾಗಲೂ ನನ್ನ ಪಾಲಿಗೆ ಹೀರೊ ಆಗಿಯೇ ಇದ್ದಾನೆ.

 

‍ಲೇಖಕರು avadhi

September 29, 2018

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

3 ಪ್ರತಿಕ್ರಿಯೆಗಳು

  1. Lalitha Siddabasavaiah

    ನಂಬಿದನು ಪ್ರಹ್ಲಾದ ನಂಬದಿರ್ದನು ತಂದೆ
    ಕಂಬದಿನೊ ಬಿಂಬದಿನೊ ಪ್ರತ್ಯಕ್ಷಮವರಿಗಾಯ್ತು,,,,,,
    ನಂಬಿಯೂ ನಂಬದಿಹ ಸಿಂಬಳದಿ ನೊಣವಾಂತವರೆ ಅಧಿಕ. ಅವರ ನಡುವೆ ಅಲ್ಪಸಂಖ್ಯಾತರು ಭಂಡಾರಿಯವರು. ಆ ಧೃಡತೆಗೆ ಶರಣು.

    ಪ್ರತಿಕ್ರಿಯೆ
  2. mattihalli subbanna.

    ಆರ್.ವಿ. ಯವರಬಗೆಗೆ ಆತ್ಮೀಯವಾಗಿ ಬರೆಯುತ್ತಿದ್ದೀರಿ ಸರ್. ಅವರನ್ನು ಮತ್ತೆ ಸಜೀವಗೊಳಿಸಿ ನಮ್ಮೆಲ್ಲರ ಆತ್ಮವಿಶ್ವಾಸವನ್ನು ಹೆಚ್ಚಿಸುತ್ತಿದ್ದೀರಿ. ಆದಷ್ಟು ಶೀಘ್ರ ಪುಸ್ತಕವಾಗಿಯೂ ಬರಲಿ.

    ಪ್ರತಿಕ್ರಿಯೆ
  3. Madhavi bhandari kerekona

    ಅಣ್ಣ ಎಂದೂ ನಮ್ಮನ್ನು ತಿದ್ದಿ ಬುದ್ಧಿ ಹೇಳಲಿಲ್ಲ, ನಮ್ಮ ನಡುವಿನ ಅವನ ನಡೆಯೇ ನಮ್ಮನ್ನು ರೂಪಿಸುತ್ತಿತ್ತು. ಇಂದಿನ ನಮ್ಮ ಬದುಕು ಅಣ್ಣನ ಆದರ್ಶದ ಬಳುವಳಿ. ಆತ ನನ್ನ ಮಹಾಗುರು.

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: