'ದೇವರನ್ನೇ ನೆನಸ್ಕೊಂಡು ಕಸ ಬಾಚ್ತೀನಿ'

ಪೌರ ಕಾರ್ಮಿಕರ ಕಸದ ಕಥೆ

ಬಹಳಷ್ಟು ಬಾರಿ ನಮ್ಮ ಸುತ್ತಮುತ್ತ ಗಮನಹರಿಸಿದಾಗ ಕಾಣೋದು ಬೇರೆಯವರು ನಮ್ಮಂತೆ ಅನ್ನೋದನ್ನೇ ಮರೆತ ನಮ್ಮ ಮನೋಭಾವ. ನಮಗಿಂತ ಕೆಳಗಿನ ಉದ್ಯೋಗವನ್ನು ಮಾಡುತ್ತಾರೆ ಎಂಬ ಅಹಂನಿಂದ ಅತ್ಯಂತ ಕೀಳಾಗಿ ಇನ್ನೊಬ್ಬರನ್ನು ನೋಡುವ ದೃಷ್ಟಿಕೋನ ಬೇಸರ ತರಿಸುತ್ತದೆ.

ಎರಡೂವರೆ ವರುಷಗಳ ಹಿಂದೆ ಪೌರಕಾರ್ಮಿಕರ ಕುರಿತಂತೆ ಕಾರ್ಯಕ್ರಮವನ್ನು ಮಾಡಲು   ಆ ಗಲ್ಲಿಗಳಲ್ಲಿ  ಅಲ್ಲಿ ಇಲ್ಲಿ ಓಡಾಡಿದಾಗ ಕೇಳಿಬಂದ ಮಾತುಗಳು ಹೃದಯವನ್ನು ನಾಟಿದವು. ಬಹಳಷ್ಟು ಬಾರಿ ಇನ್ನೊಬ್ಬರಿಗು ಆತ್ಮಗೌರವವಿರುತ್ತದೆ ಅನ್ನೋದನ್ನು ನಾವು ಮರೆತುಬಿಟ್ಟಿರುತ್ತೇವೆ, ನಮ್ಮ ಸ್ಥಾನಮಾನ, ದುಡ್ಡಿನ ಲೆಕ್ಕಾಚಾರದಲ್ಲಿ ಇನ್ನೊಬ್ಬರ ಅಸ್ತಿತ್ತ್ವದ ಪ್ರಾಮುಖ್ಯತೆಯನ್ನು ಬದಿಗೆ ಸರಿಸಿರುತ್ತೇವೆ,

protestಆಕೆಗೆ 25 ವರ್ಷವಿರಬಹುದು. ಮನೆಯಲ್ಲಿ ಎಲ್ಲವು ಸರಿಯಾಗಿದ್ದರೆ, ಸರಿಯಾದ ಮಾರ್ಗದರ್ಶನವಿದ್ದಿದ್ರೆ ಆಕೆಯು ವೈದ್ಯೆಯೋ , ಇಂಜಿನಿಯರೋ, ಟೀಚರೋ ಏನೋ ಆಗಬಹುದಿತ್ತು. ಆದರೆ ಹಾಗಾಗಲಿಲ್ಲ.ಕಿತ್ತುತಿನ್ನೋ ಬಡತನ ಪೌರಕಾರ್ಮಿಕಳಾಗಿ ದುಡಿಯುವ ಅನಿವಾರ್ಯತೆಯನ್ನು ಸೃಷ್ಟಿಸಿತು.ಹಾಗಂತ ತಾನು ಹಾಗಾಗಿದ್ದಕ್ಕೆ ಆಕೆಗೆ ಅಳುಕಿಲ್ಲ. ಯಾಕಂದ್ರೆ ಕಳ್ಳತನ, ತಪ್ಪು ಮಾರ್ಗವನ್ನು ಆಕೆ ಹಿಡಿದಿಲ್ಲ. ಆದರೆ ತಪ್ಪು ಮಾಡಿದವರನ್ನು ಕಳ್ಳಕಾಕರನ್ನು, ಬ್ರಹ್ಮಾಂಡ ಭ್ರಷ್ಟಾಚಾರ ಮಾಡಿರುವ ವ್ಯಕ್ತಿಗಳನ್ನು ಅವರ ದುಡ್ಡಿನೆದುರು ಗೌರವ ಕೊಡುವ ಮಂದಿ ಇಂತಹ ಪೌರಕಾರ್ಮಿಕರನ್ನು ಕೀಳಾಗಿ ಕಾಣುತ್ತಾರೆ. ಅದಕ್ಕೆ ನಿಂಗಮ್ಮ ಹೇಳಿದ ಮಾತುಗಳೇ ಸಾಕ್ಷ್ಶಿ.

“  ನಮ್ಮನ್ನು ಕಂಡರೆ ಬಾರೇ ಕಸ ಎತ್ತು ಅಂತ ಕೀಳಾಗಿ ಕರೀತಾರೆ. ಇದನ್ನು ಯಾರು ತೆಗೀತಾರೆ. ಈ ಕಸ ತೆಗೆಯೋರಿಗು ಏನು ಜಂಭ”

ಇಂತಹ ಮಾತುಗಳು  ನಿಂಗಮ್ಮನಿಗೆ ಸಾಮಾನ್ಯ. ಹೀಗೆ ಮಾತಾಡಿದಾಗಲೆಲ್ಲಾ ನಮ್ಮನ್ನು ಕಂಡಾಗ ಇಂತಹ ನಿರ್ಲಕ್ಷ್ಯವೇಕೆ ಎಂಬ ಯೋಚನೆಯು ನಿಂಗಮ್ಮನಂತರನ್ನು ಕಾಡುತ್ತಲೇ ಇರುತ್ತದೆ.

ಕೆಲಸ ಯಾವುದು ಮಾಡಿದರೇನು ಅವರಿಗು ಅವರದ್ದೇ ಗೌರವವಿರುತ್ತದೆ ಹಾಗೇ ನೋವು ಕೂಡ. ಕಸ ಗುಡಿಸುವುದೆಂದರೆ ಅದು ಕೂಡ ನಿರಂತರವಾಗಿ ಅದನ್ನು ಮಾಡೋದು ಸುಲಭದ ಮಾತಲ್ಲ, ಬೆನ್ನು ಬಗ್ಗಿ ಬಗ್ಗಿ ಎತ್ತಲಾರದ ಸ್ಥಿತಿ ನಿರ್ಮಾಣವಾಗುತ್ತದೆ. 58 ವರ್ಷದ ನಾಗರತ್ನಮ್ಮ ಕೈಗಳೆರಡನ್ನು ತೋರಿಸಿ ಮಾತಾಡಿದ್ದು ನೆನಪಾಯಿತು.ಅಂಗೈ ಪೊರಕೆ ಹಿಡಿದು ಸವೆದುಹೋಗಿತ್ತು. ಸವೆತದ ಹಿಂದೆ ಬೆವರ ಕಥೆಯು ಇತ್ತು. 19 ವರ್ಷಗಳಿಂದ ಕಸ ಗುಡಿಸಿ ಜೀವನ ಸಾಗಿಸುತ್ತಿರುವ ನಾಗರತ್ನಮ್ಮ ಬೆನ್ನು ನೋವಿನಿಂದ ಬಳಲುತ್ತಿದ್ರು. ಪತಿ ತೀರಿಕೊಂಡ ಬಳಿಕ ಇವರ ಜೀವನ ದುಸ್ತರವಾಯಿತು. ಒಂದು ದಿನ ಗುಡಿಸಲ್ಲವಂದರೆ ಬರುವ ಅಲ್ಪಸ್ವಲ್ಪ ಸಂಬಳವು ಕಡಿಮೆಯಾಗುತ್ತದೆ. ಒಂದೇ ಸಲ ಎದ್ದು ನಿಲ್ಲಲಾಗದು, ಇಂತಹ ಪರಿಸ್ಥಿತಿಯಲ್ಲಿ ಇಳಿವಯಸ್ಸಿನಲ್ಲಿ ದುಡಿಯಲೇಬೇಕಾದ ಅನಿವಾರ್ಯತೆ ನಾಗರತ್ಮಮ್ಮನಂತವರದು.

ಹೀಗೆ ಪೌರಕಾರ್ಮಿಕರಾಗಿ ಕೆಲಸ ಮಾಡುವವರ ಪೈಕಿ ಹಲವು ಮಹಿಳೆಯರನ್ನು ಮಾತಾಡುತ್ತಾ ಸಾಗಿದ್ದೆ. ಪೌರಕಾರ್ಮಿಕರಲ್ಲಿ ಬಹುತೇಕ ಮಂದಿ ಮಹಿಳೆಯರೇ ಆಗಿದ್ದಾರೆ. ಅದರಲ್ಲು ಹಿಂದುಳಿದ ವರ್ಗ, ದಲಿತ ವರ್ಗಕ್ಕೆ ಸೇರಿದವರೇ ಹೆಚ್ಚು. ಇಡೀ ಸಂಸಾರದ ಹೊರೆ ಇವರ ಮೇಲಿದೆ. ಸರಿಯಾದ ಸಮಯಕ್ಕೆ ಸಿಗದ ಸಂಬಳದಿಂದಲೇ ಸಾಗಬೇಕು. ಮಾನವೀಯತೆ, ಸಮಾನತೆ ಕಾರ್ಮಿಕರ ಪರವಾದ ನಿಲುವುಗಳನ್ನು ತಾಳುವ ಅಗತ್ಯತೆ ಬಗ್ಗೆ ಮಾತಾಡಿದ್ರು, ಅದನ್ನು ಜಾರಿಗೊಳಿಸುತ್ತ ಅಥವಾ ಗಮನಹರಿಸಿರುವತ್ತ ನೋಡಿದ್ರೆ ಮಾತಿಗಷ್ಟೇ ಈ ಚಿಂತನೆಗಳು ಘೋಷಣೆಗಳು ಸೀಮಿತವೆನ್ನೋದು ಪೌರಕಾರ್ಮಿಕರನ್ನು ನೋಡಿದ್ರೆ ತಿಳಿಯುತ್ತದೆ. ಸಿಗುವ ಅಲ್ಪ ಸ್ವಲ್ಪ ಮೊತ್ತವೇ ಸರಿಯಾದ ಸಮಯಕ್ಕೆ ಕೈಗೆ ಸೇರುವುದಿಲ್ಲ. ಜ್ವರ ಖಾಯಿಲೆ ಬಂದು ಮಲಗಿದ್ರೆ ಸಿಗುವ ಅಲ್ಪ ಸ್ವಲ್ಪ ಸಂಬಳಕ್ಕು ಕತ್ತರಿ ಬೀಳುತ್ತದೆ.ಹಾಗಾಗಿ ಜ್ವರವಿದ್ರು ಕೆಲವರು ಕೆಲಸಕ್ಕೆ ಹೋಗುತ್ತಾರೆ. ಯಾಕಂದರೆ ಸಿಗುವ ಪ್ರತಿ ರೂಪಾಯಿ ಮೇಲೆ ಪ್ರತಿ ದಿನವು ನಿರ್ಧಾರವಾಗಿರುತ್ತದೆ.

70 ವರ್ಷ ತುಂಬಿರುವ ನಂಜಪ್ಪನವರು ಜ್ವರ ಬಂದ್ರು ಕೆಲಸ ಮಾಡಲೇಬೇಕು ಎಂದು ಮತ್ತೆ ಪುನರುಚ್ಚರಿಸಿದಾಗ ವಿಶ್ರಾಂತಿ ಪಡೆಯಬೇಕಾಗಿದ್ದ ದೇಹದ ಮೇಲಿನ ಕೆಲಸದ ಹೊರೆ ನೋಡಿ ಆಗಸದತ್ತ ದೃಷ್ಟಿ ನೆಟ್ಟು ಮೌನಕ್ಕೆ ಮೊರೆ ಹೋಗುವುದಷ್ಟೇ ನನ್ನ ಪಾಲಿಗಿದ್ದ ಆಯ್ಕೆಯಾಗಿತ್ತು.

protest curbಕಾರ್ಯಕ್ರಮ ಮಾಡಿ ಆಗಲೇ ಎರಡೂವರೆ ವರುಷ ಕಳೆದುಹೋಯಿತು. ಇದರ ಮಧ್ಯೆ ಕೆಲ ತಿಂಗಳ ಹಿಂದೆ ನಮ್ಮ ಮನೆಗೆ ಕಸತೆಗೆದುಕೊಂಡು ಹೋಗಲು ಬರುತ್ತಿದ್ದ ಆ ಮುಖ ಯಾಕೋ ಪರಿಚಿತವಾದಂತೆ ತೋರಿತು. ಕೆಲವೊಮ್ಮೆ ಒಳಕರೆದು ಟೀ, ತಿಂಡಿ ಕೊಡುವಾಗ ಆಕೆ ತನ್ನ ಮನೆ ಬಗ್ಗೆ ಹೇಳುತ್ತಿದ್ದಳು, ನನಗಿಂತಲು ಚಿಕ್ಕವಯಸ್ಸಿನವಳ ಹಾಗೆ ಕಾಣುವ ಆಕೆಗೆ ಕಾಲೇಜಿಗೆ ಹೋಗುವ ಮಗಳಿದ್ದಾಳೆ. ತಾಯಿ, ತಮ್ಮ, ಮಗನನ್ನು ಈ ಹೆಣ್ಣು ಮಗಳು ನೋಡಿಕೊಳ್ಳಬೇಕು. ಮೊನ್ನೆ ಗೊತ್ತಾಯಿತು. ಕೈಹಿಡಿದವನು ಜೊತೆಗಿಲ್ಲವೆನ್ನುವುದು. ನೈತಿಕವಾಗಿ ಭರವಸೆಯ ಮಾತನ್ನು ಹೇಳುತ್ತಲೇ ಆರ್ಥಿಕವಾಗಿ ನನ್ನ ಇತಿಮಿತಿಯಲ್ಲಿ ಸಹಾಯ ಮಾಡುತ್ತಲೇ ಇಂತಹ ಹಲವಾರು ಪೌರಕಾರ್ಮಿಕರ ಬದುಕು ಬವಣೆಯನ್ನು ಅರ್ಥಮಾಡಿಕೊಳ್ಳುವ ಪ್ರಯತ್ನ ಮಾಡುತ್ತಿದ್ದೇನೆ.

ತಿಂಗಳಿಗೆ ಸಿಗುವ ಏಳು ಸಾವಿರ ರೂಪಾಯಿಗಳು ಈ ಬಾರಿ ಕೈಗೆ ಸಿಕ್ಕಿ ಒಂದೂವರೆ ತಿಂಗಳಾಗಿದೆ. ಬದುಕು ಸಾಗಿಸುವುದು ಕೂಡ ಕಷ್ಟವಾಗಿದೆ. ಆಕೆಯ ಕಷ್ಚದ ಕತೆಯೇನೇ ಇದ್ದರು ಕೆಲಸವನ್ನು ಅಚ್ಚುಕಟ್ಟಾಗಿ ನಗು ನಗುತ್ತಲೇ ಮಾಡುವ ಮತ್ತು ಕೆಲಸದ ಬಗ್ಗೆ ಆಕೆಗಿರುವ ನಿಷ್ಟೆ ಬದ್ಧತೆ ಆಕೆಯನ್ನು ನನಗೆ ಇನ್ನಷ್ಟು ಹತ್ತಿರ ಮಾಡಿದೆ.ಇಂತಹ ಅದೆಷ್ಟೋ ಕತೆಗಳು ಅದೆಷ್ಟೋ ಮನೆಗಳಲ್ಲಿ ಹಾಗೆ ಕೇಳಿಸಿಕೊಳ್ಳದೆ ಅಡಗಿಕೊಂಡಿರುತ್ತದೆ. ಕೇಳಿದಾಗ ಸ್ವಲ್ಪ ನಿರಾಳತೆ ಮೂಡಬಹುದು. ನಮ್ಮಿಂದಾದಷ್ಟು ಸಹಾಯ ಮಾಡಿದಾಗ ಯಾರೋ ನಮಗಾಗಿ ಇದ್ದಾರೆ ಎಂಬ ಖುಷಿಯು ಮೂಡಬಹುದು .

ಇದನ್ನೆಲ್ಲಾ ನಾನು ಹೇಳುತ್ತಿದ್ದಂತೆ ಆ ದಿನಗಳು ನೆನಪಾದವು.

ಪೌರಕಾರ್ಮಿಕರ ಕಾರ್ಯಕ್ರಮವನ್ನು ಮತ್ತೆ ನೋಡಿದಾಗ ಆ ಮಹಿಳೆಯ ಮಾತುಗಳು ಕಿವಿಗೆ ಮತ್ತೆ ಅಪ್ಪಳಿಸಿದಂತೆ ಭಾಸವಾಯಿತು. “ ಕಸ ಬಾಚುವಾಗ ದೇವರನ್ನು ನೆನಸಿಕೊಂಡೇ ಬಾಚುತ್ತೇನೆ. ದೇವರೇ ಇದನ್ನೇ ಬಾಚಿದ್ರೆ ನಂಗೆ ಊಟ ಸಿಗುತ್ತೆ. ಅದನ್ನು ನೆನಸಿಕೊಂಡೇ ಕಸ ಬಾಚ್ತೀನಿ ಮೇಡಂ “

ಮುಂದಿನ ವಾರ ಮತ್ತೊಂದು ಕವರೇಜ್ ನ ನೆನಪಿನೊಂದಿಗೆ ವಾಪಾಸ್ ಬರ್ತೀನಿ

ಜ್ಯೋತಿ ಇರ್ವತ್ತೂರು

‍ಲೇಖಕರು Admin

December 12, 2016

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

0 ಪ್ರತಿಕ್ರಿಯೆಗಳು

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: