ದೇವನೂರು ಹೇಳುತ್ತಾರೆ: ‘ದಾಹ’ ಅಂದರೆ ‘ದಹಿಸುವುದು’ ಎಂದೂ ಅರ್ಥವಂತೆ..

‘ಮೂಕ ಪೃಥ್ವಿಗೆ ಮಾತು ಕೊಟ್ಟ ಕಿಶೋರಿ ಗ್ರೇತಾ ಥನ್ ಬರ್ಗ್’ ಬಗ್ಗೆ ಖ್ಯಾತ ವಿಜ್ಞಾನ ಲೇಖಕ ನಾಗೇಶ ಹೆಗಡೆ ಅವರು ಪುಸ್ತಕ ಬರೆದಿದ್ದಾರೆ.

‘ಭೂಮಿ ಬುಕ್ಸ್’ ಪ್ರಕಟಿಸಿರುವ ಈ ಕೃತಿ ನಾಳೆ ಬೆಂಗಳೂರಿನಲ್ಲಿ ಬಿಡುಗಡೆಗೊಳ್ಳಲಿದೆ.

ಈ ಕೃತಿಗೆ ದೇವನೂರು ಮಹಾದೇವ ಅವರು ಬರೆದ ಮಾತನ್ನು ‘ಅವಧಿ’ಯ ಓದುಗರಿಗಾಗಿ ಇಲ್ಲಿ ನೀಡುತ್ತಿದ್ದೇವೆ-

ದೇವನೂರ ಮಹಾದೇವ

ಆಸೆಯೇ ದುಃಖಕ್ಕೆ ಕಾರಣ ಎಂಬ ಪ್ರಸಿದ್ಧ ಮಾತಿದೆ. ಇದು ಬುದ್ಧನ ನುಡಿ. ಪಾಳಿ ಭಾಷೆಯಲ್ಲಿ ಆಸೆ ಎನ್ನುವುದಕ್ಕೆ ‘ತನ್ಹಾ’ ಎಂದಿದೆ. ಸಂಸ್ಕೃತದಲ್ಲಿ ‘ತೃಷ್ಣೆ’ ಎಂದಿದೆ. ಇಂಗ್ಲೀಷ್‌ನಲ್ಲಿ ‘ಕ್ರೇವಿಂಗ್’ ಎಂದಿದೆ. ಇದನ್ನು ನೋಡಿದಾಗ ‘ಆಸೆ’ ಪದ ಸಾಲದು ಅನ್ನಿಸುತ್ತದೆ. ಇದಕ್ಕೆ ಹತ್ತಿರದ ಪದ ಹುಡುಕುತ್ತ ಕಂಡದ್ದು- ‘ದಾಹ’. ‘ದಾಹ’ ಅಂದರೆ ‘ದಹಿಸುವುದು’ ಎಂದೂ ಅರ್ಥವಂತೆ. ಸದ್ಯಕ್ಕೆ ದಾಹವೇ ದುಃಖಕ್ಕೆ ಕಾರಣ- ಎಂದಿಟ್ಟುಕೊಳ್ಳಬಹುದೇನೊ.

ಇದು ಭೂಮಿಯೇ ಮನುಷ್ಯನ ದಾಹಕ್ಕೆ ಸಿಲುಕಿ ದಹಿಸುತ್ತಿದೆ. ಭೂಮಿ ಬಾಯಾರಿಕೆಯನ್ನು ನೀಗಿಸಬಹುದು, ದಾಹವನ್ನಲ್ಲ. ಇಂದಿನ ಮನುಷ್ಯನ ದಾಹದಿಂದಾಗಿ ತಾಪಮಾನ ಹೆಚ್ಚಾಗಿ- ಹಿಮಗಡ್ಡೆ ಕರಗುತ್ತಿವೆ. ಸಮುದ್ರದ ಮಟ್ಟ ಏರುತ್ತಿದೆ. ಸೈಕ್ಲೋನ್‌ಗಳು ಅಪ್ಪಳಿಸುತಿವೆ. ಹುಚ್ಚು ಮಳೆ ಬರುತ್ತಿದೆ. ಭೂಮಿ ಕುಸಿಯುತ್ತಿದೆ. ಎಲ್ಲವೂ ಕೊಚ್ಚಿಹೋಗುತ್ತಿದೆ. ವಿಪರ್ಯಾಸವೆಂದರೆ ಒಂದು ಕಡೆ ಪ್ರವಾಹ. ಅದರ ಪಕ್ಕದಲ್ಲೆ ನೀರಿಲ್ಲದ ಬರ. ಬದುಕುವುದೆಂತು?

ಈಗ, ಪುಣ್ಯಕ್ಕೆ ಭೂಮಿ ತಾಯಿಯೇ ಸ್ವೀಡನ್‌ನ ಹದಿನಾರು ವರ್ಷದ ಬಾಲೆ ಗ್ರೇತಾ ಥನ್‌ಬರ್ಗ್ ಳ ಮೈಮೇಲೆ ಬಂದು ನುಡಿಸಿದಂತೆ ಗ್ರೇತಾ ನುಡಿಯುತ್ತಿದ್ದಾಳೆ. ಇಂದಿನ ಹವಾಮಾನ ಸಂಕಷ್ಟಕ್ಕೆ ಕಾರಣರಾದ ಜಗತ್ತಿನ ನಾಯಕರಿಗೆ ‘ಹೌ ಡೇರ್ ಯೂ?’ ಎಂದು ಕೇಳುತ್ತಿದ್ದಾಳೆ. ಹೀಗೆ ಕೇಳುತ್ತಾ ಮೂಕ ಪೃಥ್ವಿಗೆ ಮಾತು ಕೊಟ್ಟ ಈ ಹುಡುಗಿಗೆ ಇಡೀ ಭೂಮಿಯೇ ತನ್ನ ಮನೆ ಎಂಬ ಭಾವನೆ ಇದೆ ಎಂದು ಲೇಖಕರು ಗುರುತಿಸುತ್ತಾರೆ. ನಿಜ, ತನ್ನೊಳಗೇನೆ ಸಕಲ ಜೀವಸಂಕುಲವನ್ನು ಧರಿಸಿರುವಂತೆ ಈ ಬಾಲೆ ಕಾಣುತ್ತಾಳೆ.

ಆಶ್ಚರ್ಯವೆಂದರೆ, ಕೆನಡಾದ ಸೆವರ್ನ್ ಸುಝಕಿ ಕೂಡ “ನಮ್ಮದು ಐದು ನೂರು ಕೋಟಿ ಜನ, ಮೂರು ಕೋಟಿ ಜೀವ ಪ್ರಬೇಧಗಳ ಒಂದು ದೊಡ್ಡ ಕುಟುಂಬ. ರಾಷ್ಟ್ರದ ಗಡಿಗಳು ಎಷ್ಟೇ ಇದ್ದರೂ ಈ ಕುಟುಂಬ ಮಾತ್ರ ಒಂದೇ. ಅದನ್ನು ಬದಲಿಸಲು ಸಾಧ್ಯವಿಲ್ಲ. ಭೂಮಿಗೆ ಸಂಕಷ್ಟ ಬಂದರೆ ನಮಗೆಲ್ಲರಿಗೂ ಬಂದ ಹಾಗೇ. ನಮಗೆಲ್ಲರಿಗೂ ಒಂದೇ ಬಗೆಯ ನಾಳೆಗಳು ಕಾದಿವೆ. ನಾವೆಲ್ಲ ಒಂದಾದರೆ ಮಾತ್ರ ನಾಡಿನ ಭೂಮಿ ಜೀವಂತವಿರಲು ಸಾಧ್ಯ” ಎನ್ನುತ್ತಾಳೆ. ಭಾರತ ಮೂಲದ ಅಂಜಲಿ ಅಪ್ಪಾದುರೈ ಕೂಡ ಹೀಗೇಯೆ ಮಾತಾಡುತ್ತಿದ್ದಾಳೆ.

ಬಾಲ್ಯಕ್ಕೆ ಮಾತ್ರ ಇಂತಹ ಧಾರಣಾಶಕ್ತಿ ಇದೆಯೆ?

ಇಂದು ಗ್ರೇತಾ ನುಡಿಗಳು ನಡೆಗಳಾಗುತ್ತಿವೆ. ಅಮೆರಿಕಾದ ರೆಡ್ ಇಂಡಿಯನ್ ಮೂಲನಿವಾಸಿಗಳು ತಮ್ಮ ಸಂಪ್ರದಾಯದಂತೆ ಗ್ರೇತಾಗೆ ಹೊಸ ಹೆಸರು ಇಡುವಾಗ “ಜಗತ್ತನ್ನು ನಿದ್ದೆಯಿಂದ ಎಬ್ಬಿಸಲೆಂದೇ ಧರೆಗಿಳಿದು ಬಂದಿದ್ದೀಯಾ. ನೀನು ‘ಧರೆಗಿಳಿದ ದೇವತೆ’ ಎಂದು ಆ ಮೂಲನಿವಾಸಿಗಳ ಆಧ್ಯಾತ್ಮ ಗುರು ಅವಳಿಗೆ ತಲೆ ಬಾಗುತ್ತಾನೆ. ಭಾರತದ ಮೂಲನಿವಾಸಿ ಕಪ್ಪು ಇಂಡಿಯನ್ನಾದ ನಾನೂ ತಲೆ ಬಾಗುತ್ತೇನೆ.

ಹೀಗೆಲ್ಲಾ ನುಡಿಯಬಹುದಾದ ನಡೆಯಬಹುದಾದ ಬಾಲಕ-ಬಾಲಕಿಯರು ಇಲ್ಲೂ ಇರಬಹುದು. ಎಲ್ಲೆಲ್ಲೂ ಇರಬಹುದು. ಅವರೀಗ ಮಾತಾಡಬೇಕಾಗಿದೆ. ಯಾಕೆಂದರೆ ಅವರು ಉಳಿಯಬೇಕಾಗಿದೆ. ಇಂದು ಕತ್ತಲ ದಾರಿಯಲ್ಲಿ ನಡೆಯುತ್ತಿರುವ ನಮಗೆ ನಾಗೇಶ ಹೆಗಡೆ ಅವರ ಈ ಪುಟ್ಟ ಪುಸ್ತಕ ಕೈದೀವಿಗೆಯಂತೆ ಬೆಳಕು ಚೆಲ್ಲುತ್ತದೆ.

‍ಲೇಖಕರು avadhi

November 30, 2019

ಹದಿನಾಲ್ಕರ ಸಂಭ್ರಮದಲ್ಲಿ ‘ಅವಧಿ’

ಅವಧಿಗೆ ಇಮೇಲ್ ಮೂಲಕ ಚಂದಾದಾರರಾಗಿ

ಅವಧಿ‌ಯ ಹೊಸ ಲೇಖನಗಳನ್ನು ಇಮೇಲ್ ಮೂಲಕ ಪಡೆಯಲು ಇದು ಸುಲಭ ಮಾರ್ಗ

ಈ ಪೋಸ್ಟರ್ ಮೇಲೆ ಕ್ಲಿಕ್ ಮಾಡಿ.. ‘ಬಹುರೂಪಿ’ ಶಾಪ್ ಗೆ ಬನ್ನಿ..

ನಿಮಗೆ ಇವೂ ಇಷ್ಟವಾಗಬಹುದು…

೧ ಪ್ರತಿಕ್ರಿಯೆ

  1. Samvartha 'Sahil'

    ಬಸ್ ಸ್ಟಾಂಡ್ ಇಲ್ಲ ರೈಲ್ವೆ ನಿಲ್ದಾಣದಲ್ಲಿರುವ ಸಾರ್ವಜನಿಕ ಶೌಚಾಲಯ ಉಪಯೋಗಿಸಿದವರಿಗೆಲ್ಲರಿಗೂ ಗೊತ್ತು, ಅಲ್ಲಿ ಹೊಕ್ಕ ಯಾವನೂ “ನನ್ನ ನಂತರ ಇಲ್ಲಿ ಬರುವವರಿದ್ದಾರೆ” ಎಂಬ ಅರಿವು ಹೊಂದಿದವನಂತೆ ವರ್ತಿಸುವುದಿಲ್ಲ. ನಾನು ಆಯಿತು ನನ್ನ ಅಗತ್ಯ ಆಯಿತು, ಅಷ್ಟೇ.

    ಈ ಭೂಮಿಯನ್ನು ಪ್ರಕೃತಿಯನ್ನು ಕಾರ್ಪೊರೇಟ್ ಆದಿಯಾಗಿ ನಾವೆಲ್ಲರೂ ಬಳಸಿಕೊಂಡಿರುವುದು ಸಾರ್ವಜನಿಕ ಶೌಚಾಲಯದಂತೆಯೇ!

    ಪ್ರತಿಕ್ರಿಯೆ

ಪ್ರತಿಕ್ರಿಯೆ ಒಂದನ್ನು ಸೇರಿಸಿ

Your email address will not be published. Required fields are marked *

ಅವಧಿ‌ ಮ್ಯಾಗ್‌ಗೆ ಡಿಜಿಟಲ್ ಚಂದಾದಾರರಾಗಿ‍

ನಮ್ಮ ಮೇಲಿಂಗ್‌ ಲಿಸ್ಟ್‌ಗೆ ಚಂದಾದಾರರಾಗುವುದರಿಂದ ಅವಧಿಯ ಹೊಸ ಲೇಖನಗಳನ್ನು ಇಮೇಲ್‌ನಲ್ಲಿ ಪಡೆಯಬಹುದು. 

 

ಧನ್ಯವಾದಗಳು, ನೀವೀಗ ಅವಧಿಯ ಚಂದಾದಾರರಾಗಿದ್ದೀರಿ!

Pin It on Pinterest

Share This
%d bloggers like this: